ವಿಜಯಸಾಕ್ಷಿ ಸುದ್ದಿ, ಗದಗ: ಗದಗದ ನಿಜವಾದ ಸಂಪತ್ತು ಇಲ್ಲಿನ ಜನರು. ಉದ್ಯಮಶೀಲತೆ, ಕೃಷಿ, ಕೌಶಲ್ಯ ಹಾಗೂ ಸಂಪನ್ಮೂಲಗಳಿರುವ ಗದಗ ಜಿಲ್ಲೆಯನ್ನು ಸ್ಥಳೀಯ ಮಾರುಕಟ್ಟೆಗೆ ಸೀಮಿತಗೊಳಿಸದೆ ರಫ್ತು ಆಧಾರಿತ ಅಗ್ರಿಟೆಕ್ ಹಬ್ ಆಗಿ ರೂಪಿಸಿ ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ಸಂಕಲ್ಪ ಮಾಡಬೇಕು ಎಂದು ವಿಜಯನಗರದ ಜೆಎಸ್‌ಡಬ್ಲ್ಯು ಸ್ಟೀಲ್‌ನ ಉಪಾಧ್ಯಕ್ಷ ಹಾಗೂ ಹಿರಿಯ ಉದ್ಯಮಿ ಸಂಜಯ್ ಆಲಮೇಲಕರ್ ಕರೆ ನೀಡಿದರು.
ನಗರದ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಆ.14ರಿಂದ 18ರವರೆಗೆ ನಡೆಯುತ್ತಿರುವ ‘ಗದಗ ಉತ್ಸವ-2026’ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗದಗದ ಸಾಮರ್ಥ್ಯವನ್ನು ಸ್ಥಳೀಯ ಮಾರುಕಟ್ಟೆಗೆ ಸೀಮಿತಗೊಳಿಸಬಾರದು. ‘ಲೋಕಲ್ ಟು ಗ್ಲೋಬಲ್’ ಪರಿಕಲ್ಪನೆಯೊಂದಿಗೆ ಜಿಲ್ಲೆಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಸಬೇಕು ಎಂದರು.
ಗುಜರಾತ್, ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳ ಹೂಡಿಕೆದಾರರನ್ನು ಗದಗಕ್ಕೆ ಕರೆತಂದು ಅಗತ್ಯ ಕಚ್ಚಾ ವಸ್ತು, ತಂತ್ರಜ್ಞಾನ ಹಾಗೂ ಸಹಕಾರ ಒದಗಿಸಲು ಸಿದ್ಧವಿರುವುದಾಗಿ ಆಲಮೇಲಕರ್ ತಿಳಿಸಿದರು.
ಜೆಎಸ್‌ಡಬ್ಲ್ಯು ವತಿಯಿಂದ ಸ್ಥಳೀಯ ಉದ್ಯಮಿಗಳಿಗೆ ತಾಂತ್ರಿಕ, ಮೆಟೀರಿಯಲ್ ಹಾಗೂ ಮಾರುಕಟ್ಟೆ ನೆರವು ನೀಡುವ ಸಾಧ್ಯತೆಗಳನ್ನೂ ಅವರು ಪ್ರಸ್ತಾಪಿಸಿದರು.
ದೇಶದ ಜಿಡಿಪಿಗೆ ಶೇ.30 ಹಾಗೂ ರಫ್ತಿಗೆ ಶೇ.45ರಷ್ಟು ಕೊಡುಗೆ ನೀಡುತ್ತಿರುವುದು ಎಂಎಸ್‌ಎಂಇ ವಲಯ. ಕರ್ನಾಟಕದಲ್ಲಿ 26 ಲಕ್ಷಕ್ಕೂ ಅಧಿಕ ಎಂಎಸ್‌ಎಂಇಗಳಿದ್ದು, ಸ್ಥಳೀಯವಾಗಿ ನೋಂದಣಿಯಾಗುವ ಎಂಎಸ್‌ಎಂಇಗಳಿಗೆ ಕಂಪನಿ ವತಿಯಿಂದ ₹45 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹ ನೀಡುವ ಯೋಜನೆ ಜಾರಿಯಲ್ಲಿದೆ ಎಂದರು.
ಒಂದು ಕಾಲದಲ್ಲಿ ಹತ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಗದಗದಲ್ಲಿ ಹತ್ತಿ ಉದ್ಯಮವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ರೈಲ್ವೆ ಬೋಗಿಗಳ ಬಿಡಿಭಾಗಗಳನ್ನು ಪಶ್ಚಿಮ ಬಂಗಾಳದಿಂದ ತರಿಸುವ ಬದಲು ಗದಗದಲ್ಲೇ ಉತ್ಪಾದಿಸಲು ಅಪಾರ ಅವಕಾಶವಿದೆ. ಈ ಕುರಿತು ನೈಋತ್ಯ ರೈಲ್ವೆ ಮಹಾಪ್ರಬಂಧಕರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಅಗ್ರಿಟೆಕ್ ಹಬ್‌ಗೆ ಪಂಚಸೂತ್ರ
ಆಲಮೇಲಕರ್ ಸೂಚಿಸಿದ ಪಂಚಸೂತ್ರಗಳಲ್ಲಿ ಅಗ್ರಿಟೆಕ್ ಹಬ್, ಸೀಡ್ ಇನ್ನೋವೇಶನ್ ಸೆಂಟರ್, ಫುಡ್ ಪ್ರೊಸೆಸಿಂಗ್ ಡೆಸ್ಟಿನೇಷನ್, ಸ್ಟೀಲ್-ಇಂಜಿನಿಯರಿಂಗ್ ಕ್ಲಸ್ಟರ್ ಹಾಗೂ ರಫ್ತು ಆಧಾರಿತ ಜಿಲ್ಲೆ ಪ್ರಮುಖವಾಗಿವೆ.
ಯುವಕರು ಉದ್ಯೋಗ ಬೇಡುವವರಾಗದೆ ಉದ್ಯೋಗ ನೀಡುವವರಾಗಬೇಕು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಿ, ಉತ್ಸವದ ಎಲ್ಲ ಮಳಿಗೆಗಳಿಗೆ ಅವರನ್ನು ಕರೆತರಬೇಕು. ಗದಗದಲ್ಲಿ ಸ್ಟಾರ್ಟ್‌ಅಪ್ ಫೆಸಿಲಿಟೇಶನ್ ಸೆಂಟರ್, ಎಂಎಸ್‌ಎಂಇ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಯಾಗಬೇಕು. ಉದ್ಯಮ-ಶಿಕ್ಷಣ ಸಂಸ್ಥೆಗಳ ನಡುವೆ ಕೊಂಡಿ ಬೆಸೆಯಲು ಹಾಗೂ ಉತ್ತರ ಕರ್ನಾಟಕಕ್ಕೆ ಸಿಎಸ್‌ಆರ್ ನಿಧಿ ತರಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಮೈಂಡ್‌ಸೆಟ್ ಕೋಚ್ ಹಾಗೂ ಕಾರ್ಪೊರೇಟ್ ಟ್ರೇನರ್ ಮಹೇಶ ಮಾಶ್ಯಾಳ ಮಾತನಾಡಿ, 2030-32ರ ವೇಳೆಗೆ ತಂತ್ರಜ್ಞಾನದಿಂದ ಜಗತ್ತಿನಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಎಐ ಸೇರಿದಂತೆ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಎಚ್ಚರಿಸಿದರು. ಆನ್‌ಲೈನ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಮನಸ್ಥಿತಿಯೂ ಬದಲಾಗಿದೆ ಎಂದರು.
ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ಯುವಕರ ವಲಸೆ ತಡೆಯಲು ಅಲ್ಲಿಯೇ ಉದ್ಯೋಗ ಸೃಷ್ಟಿಸಬೇಕು. ಕೈಗಾರಿಕೆಗಳ ವಿಕೇಂದ್ರೀಕರಣದಿಂದ ಮಾತ್ರ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂದರು.
ಆಝಾದ್ ಬ್ಯಾಂಕ್ ಅಧ್ಯಕ್ಷ ಸರ್ಫರಾಜ ಉಮಚಗಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಮಧುಸೂಧನ ಪುಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅಧ್ಯಕ್ಷತೆ ವಹಿಸಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಬಬರ್ಚಿ, ಚೇಂಬರ್ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ್ಷಿತಿ ಅಶ್ವಥ್ ಸುಲಾಖೆ ಪ್ರಾರ್ಥಿಸಿದರು. ಶಿವಬಸಯ್ಯ ಗಡ್ಡದಮಠ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಚಂದ್ರು ಬಾಳಿಹಳ್ಳಿಮಠ ಹಾಗೂ ಮುರುಗೇಶ ಬಡ್ನಿ ನಿರೂಪಿಸಿದರು. ಚೇಂಬರ್ ಕಾರ್ಯದರ್ಶಿ ಚನ್ನವೀರಪ್ಪ ಹುಣಶಿಕಟ್ಟಿ ವಂದಿಸಿದರು.
“ಗದಗದ ಸಾಮರ್ಥ್ಯವನ್ನು ಸ್ಥಳೀಯ ಮಾರುಕಟ್ಟೆಗೆ ಸೀಮಿತಗೊಳಿಸಬಾರದು. ‘ಲೋಕಲ್ ಟು ಗ್ಲೋಬಲ್’ ಪರಿಕಲ್ಪನೆಯೊಂದಿಗೆ ಜಿಲ್ಲೆಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಸಬೇಕು.”
— ಸಂಜಯ್ ಆಲಮೇಲಕರ್, ಹಿರಿಯ ಉದ್ಯಮಿ ಹಾಗೂ ಜೆಎಸ್‌ಡಬ್ಲ್ಯು ಸ್ಟೀಲ್ ಉಪಾಧ್ಯಕ್ಷ



