ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಉರ್ದು ಮಾಧ್ಯಮ ಶಾಲೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿರುವ ಶಿಕ್ಷಕರ ಹಾಗೂ ಅಗತ್ಯ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಗದಗದಲ್ಲಿ ನಡೆದ ಮಹಾಸಭಾದ ವಿಶೇಷ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ, ಉರ್ದು ಮಾಧ್ಯಮದಲ್ಲಿ ಬಿ.ಎಡ್., ಟಿ.ಸಿ.ಎಚ್. ಸೇರಿದಂತೆ ಅಗತ್ಯ ವಿದ್ಯಾರ್ಹತೆ ಪಡೆದಿರುವ ಸಾವಿರಾರು ಅಭ್ಯರ್ಥಿಗಳು ನೇಮಕಾತಿಗಾಗಿ ಕಾಯುತ್ತಿದ್ದಾರೆ. ಹಲವು ವರ್ಷಗಳಿಂದ ಉರ್ದು ಶಾಲೆಗಳಲ್ಲಿ ಸಮರ್ಪಕ ನೇಮಕಾತಿ ನಡೆಯದಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣದ ಜತೆಗೆ ಅರ್ಹ ಶಿಕ್ಷಕ ಅಭ್ಯರ್ಥಿಗಳ ಭವಿಷ್ಯವೂ ಅತಂತ್ರವಾಗಿದೆ ಎಂದರು.
ಉರ್ದು ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಸಂಪೂರ್ಣ ವಿವರ ಪಡೆದು ಶೀಘ್ರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಅಭ್ಯರ್ಥಿಗಳ ಆತಂಕ ನಿವಾರಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಜಾಫರ ಡಾಲಾಯತ, ಮಹಬೂಬ್ ಬಾದಷಾ ಖಾಜಿ, ನಗರ ಅಧ್ಯಕ್ಷ ತಾಜುದ್ದೀನ್ ಪಾಪಣ್ಣವರ, ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ದೊಡ್ಡಮನಿ, ಕುತುಬುದ್ದೀನ್ ಶೇಖ, ನಾಸೀರ ನರೇಗಲ್, ರಫೀಕ್ ಈಟಿ, ಯಾಸಿನ್ ಮುಲ್ಲಾ, ಅಫ್ಜಲ್ ಮನಿಯಾರ್, ಮೀರಾಸಾಬ ಇರಕಲ್, ನಿಜಾಮುದ್ದೀನ್ ಕಾಟಾಪುರ, ರಹೀಂಸಾಬ್ ದೊಡ್ಡಮನಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.



