ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಕೈಗಾರಿಕಾ ಜಡತ್ವಕ್ಕೆ ಸರ್ಕಾರವನ್ನು ದೂರುತ್ತಾ ಕೂರುವುದರಿಂದ ಪ್ರಯೋಜನವಿಲ್ಲ. ಸ್ಥಳೀಯ ನಾಯಕತ್ವ ಮತ್ತು ವಾಣಿಜ್ಯೋದ್ಯಮಿಗಳು ದೂರದೃಷ್ಟಿಯಿಂದ ಪ್ರಸ್ತಾವನೆ ಸಿದ್ಧಪಡಿಸಿ, ಸರ್ಕಾರದ ಬೆನ್ನತ್ತಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಆಯೋಜಿಸಿರುವ ‘ಗದಗ ಉತ್ಸವ’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ತೆರಳುವ ಮುನ್ನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಗದಗದ ವಾಣಿಜ್ಯೋದ್ಯಮ ಬೆಳೆಯಬೇಕಾದಷ್ಟು ಬೆಳೆದಿಲ್ಲ. ಹಲವು ವರ್ಷಗಳಿಂದ ಚೇಂಬರ್‌ನ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಸಿಗದ ಕಾರಣ ಸಮಸ್ಯೆಗಳು ಗುಡ್ಡೆಯಾಗಿ ಉಳಿದಿವೆ. ಗದಗ-ರಾಯಚೂರು ಭಾಗದಲ್ಲಿ ಹತ್ತಿ ಬೆಳೆಯುತ್ತಿದ್ದರೂ ಅದನ್ನು ಕೊಯಮತ್ತೂರಿಗೆ ಕಳುಹಿಸುವ ಪರಿಸ್ಥಿತಿ ಇದೆ. ರಾಯಚೂರಿನಲ್ಲಿ ಲಾಂಗ್ ಸ್ಟೇಪಲ್ ಹತ್ತಿ ಲಭ್ಯವಿದ್ದರೂ ಮಿಲ್‌ಗಳು ಉಳಿಯಲಿಲ್ಲ. ತಂತ್ರಜ್ಞಾನ ಬದಲಾವಣೆಗೆ ಹೊಂದಿಕೊಳ್ಳದಿರುವುದು ಹಾಗೂ ಆರ್ಥಿಕ ವ್ಯವಸ್ಥೆಯ ಕೊರತೆ ಇದಕ್ಕೆ ಕಾರಣ ಎಂದು ಹೇಳಿದರು.
ವೈಯಕ್ತಿಕ ಪ್ರಯತ್ನದಿಂದ ಕೈಗಾರಿಕೀಕರಣ ಸಾಧ್ಯವಿಲ್ಲ. ಸರ್ಕಾರ ಕೈಗಾರಿಕಾ ಪಾರ್ಕ್‌ಗೆ ಜಾಗ ಮೀಸಲಿಟ್ಟು ರಿಯಾಯಿತಿ ನೀಡಬೇಕು. ಪಾರ್ಕ್‌ನಲ್ಲಿ ಒಂದು ಅಥವಾ ಎರಡು ದೊಡ್ಡ ಆಂಕರ್ ಕೈಗಾರಿಕೆಗಳು ಬಂದರೆ, ಅವುಗಳ ಸುತ್ತ ಸಣ್ಣ ಮತ್ತು ಸ್ವತಂತ್ರ ಕೈಗಾರಿಕೆಗಳು, ಸಾರಿಗೆ, ಲಾಜಿಸ್ಟಿಕ್ಸ್, ವಸತಿ ಹಾಗೂ ಸ್ಥಳೀಯ ವ್ಯಾಪಾರ-ವಹಿವಾಟು ಸೇರಿದಂತೆ ಇಡೀ ಕೈಗಾರಿಕಾ ವ್ಯವಸ್ಥೆ ಬೆಳೆಯಲಿದೆ ಎಂದರು.
ಗದಗ ಮತ್ತು ಹಾವೇರಿ ಜಿಲ್ಲೆಗಳ ಅಭಿವೃದ್ಧಿಗೆ ಎರಡು ಮಹತ್ವದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಹಾವೇರಿ ಜಿಲ್ಲೆಯಲ್ಲಿ ಟೆಕ್ಸಟೈಲ್ ಪಾರ್ಕ್ ಹಾಗೂ ನೇಕಾರರಿಗೆ ನೆರವು ಒಳಗೊಂಡ ಹ್ಯಾಂಡ್ಲೂಮ್ ಯೋಜನೆ ರೂಪಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಗದಗದಲ್ಲೂ ಬೃಹತ್ ಟೆಕ್ಸಟೈಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಈ ಸಂಬಂಧ ಗದಗ ಜಿಲ್ಲಾಧಿಕಾರಿಗಳಿಗೆ ೫೦ರಿಂದ ೧೦೦ ಎಕರೆ ಜಮೀನು ಗುರುತಿಸಲು ಸೂಚಿಸಲಾಗಿದೆ. ಜಾಗ ದೊರೆತರೆ ೫ರಿಂದ ೧೦ ಸಾವಿರ ಜನರಿಗೆ ನೇರ ಉದ್ಯೋಗ ಕಲ್ಪಿಸುವ ಪಾರ್ಕ್ ನಿರ್ಮಿಸಲು ಸಾಧ್ಯವಾಗಲಿದೆ. ರಾಜ್ಯ ಸರ್ಕಾರ ಶೀಘ್ರ ಜಾಗ ಮಂಜೂರು ಮಾಡಿದರೆ, ಡಿಸೆಂಬರ್ ಒಳಗೆ ಕೇಂದ್ರದ ಮಂಜೂರಾತಿ ಪಡೆಯುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಗದಗ ಭಾಗದಲ್ಲಿ ಕಾಳು-ಕಡಿ ಬೆಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಫುಡ್ ಪ್ರೊಸೆಸಿಂಗ್ ಪಾರ್ಕ್‌ಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಕ್ಸಟೈಲ್ ಪಾರ್ಕ್ ಪ್ರಸ್ತಾವನೆ ಮುಂದುವರಿದಿದ್ದು, ಫುಡ್ ಪ್ರೊಸೆಸಿಂಗ್ ಪಾರ್ಕ್ ಪ್ರಕ್ರಿಯೆ ನಿಧಾನವಾಗಿದೆ. ಎರಡೂ ಯೋಜನೆಗಳನ್ನು ಗಂಭೀರವಾಗಿ ಮುಂದುವರಿಸುವುದಾಗಿ ತಿಳಿಸಿದರು.
ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರು ವ್ಯಾಪಾರಸ್ಥರ ಸಮಸ್ಯೆಗಳು ಹಾಗೂ ಚೇಂಬರ್‌ನ ಬೇಡಿಕೆಗಳನ್ನು ಸಂಸದರಿಗೆ ಸಲ್ಲಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬೊಮ್ಮಾಯಿ, ಚೇಂಬರ್‌ಗೆ ಶಾಶ್ವತ ಎಕ್ಸಿಬಿಷನ್ ಸೆಂಟರ್ ನಿರ್ಮಿಸಲು ಎರಡು ಎಕರೆ ಜಮೀನು ಕೊಡಿಸುವುದಾಗಿ ಭರವಸೆ ನೀಡಿದರು. ಜಾಗ ಹುಡುಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಎಕ್ಸಿಬಿಷನ್ ಸೆಂಟರ್‌ನಲ್ಲಿ ವರ್ಷಕ್ಕೆ ಎರಡು-ಮೂರು ಬಾರಿ ಟೆಕ್ಸಟೈಲ್, ಹ್ಯಾಂಡ್ಲೂಮ್, ಫರ್ನಿಚರ್ ಸೇರಿದಂತೆ ವಿವಿಧ ವಲಯಗಳ ವಸ್ತು ಪ್ರದರ್ಶನ ಆಯೋಜಿಸಿದರೆ ಸ್ಥಳೀಯ ಉದ್ಯಮಗಳ ಬೆಳವಣಿಗೆಗೆ ನೆರವಾಗಲಿದೆ ಎಂದರು.
ಈ ಎಲ್ಲ ಯೋಜನೆಗಳ ಕುರಿತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮುಖ್ಯಮಂತ್ರಿ ಹಾಗೂ ಸ್ಥಳೀಯ ನಾಯಕ ಎಚ್.ಕೆ. ಪಾಟೀಲ ಅವರೊಂದಿಗೆ ಚರ್ಚಿಸಿ, ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳೋಣ. ಇದಕ್ಕೆ ವಾಣಿಜ್ಯೋದ್ಯಮಿಗಳ ಸಹಕಾರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಅತ್ಯಗತ್ಯ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಮಧುಸೂಧನ ಪುಣೇಕರ, ಚೇಂಬರ್ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ ಸೇರಿದಂತೆ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
“ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತಾ ಕೂರುವ ಬದಲು, ‘ನಮಗೆ ಇದನ್ನು ಮಾಡಿಕೊಡಿ, ನಾವು ಇದನ್ನು ಮಾಡುತ್ತೇವೆ’ ಎಂಬ ಪ್ರಸ್ತಾವನೆ ತೆಗೆದುಕೊಂಡು ಸರ್ಕಾರದ ಮುಂದೆ ಹೋಗಬೇಕು.”
— ಬಸವರಾಜ ಬೊಮ್ಮಾಯಿ, ಸಂಸದ



