ಸಾಹಿತ್ಯವೆಂದರೆ ಕೇವಲ ಪದಗಳ ಜೋಡಣೆಯಲ್ಲ, ಅದು ಬದುಕಿನ ಅನುಭವಗಳ ಅಭಿವ್ಯಕ್ತಿ, ಸಮಾಜದ ನೋವು–ನಲಿವುಗಳ ಪ್ರತಿಬಿಂಬ ಹಾಗೂ ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆ. ಇಂತಹ ಸಾರ್ಥಕ ಸಾಹಿತ್ಯದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಸಾಹಿತಿ ಆಯ್ಕೆ ಕಮ್ಮಾರ ಅವರ ಬದುಕು–ಬರಹ ಗಮನಾರ್ಹವಾಗಿದೆ.
ಆಯ್ಕೆ ಕಮ್ಮಾರ ಅವರ ಸಾಹಿತ್ಯಯಾನವು ಬದುಕಿನ ನೆಲಮೂಲದ ಅನುಭವಗಳಿಂದ ರೂಪುಗೊಂಡಿದೆ. ಸುತ್ತಲಿನ ಸಮಾಜ, ಜನಜೀವನ, ಸಂಬಂಧಗಳ ಸೂಕ್ಷ್ಮತೆ, ಗ್ರಾಮೀಣ ಬದುಕಿನ ಸೊಗಡು, ಸಾಮಾಜಿಕ ಬದಲಾವಣೆಗಳು ಹಾಗೂ ಮಾನವೀಯ ಮೌಲ್ಯಗಳು ಅವರ ಬರಹಗಳಿಗೆ ಜೀವಂತಿಕೆಯನ್ನು ನೀಡಿವೆ. ಸಾಮಾನ್ಯರ ಬದುಕಿನ ಅಸಾಮಾನ್ಯ ಸಂಗತಿಗಳನ್ನು ಗುರುತಿಸಿ ಅವುಗಳಿಗೆ ಅಕ್ಷರರೂಪ ನೀಡುವ ಗುಣ ಅವರ ಸಾಹಿತ್ಯದ ವಿಶೇಷತೆಯಾಗಿದೆ.
ಸಾಹಿತಿಯೊಬ್ಬನಿಗೆ ಸಮಾಜದ ಬಗ್ಗೆ ಕಾಳಜಿ ಇರಬೇಕು. ಜನರ ಬದುಕಿನ ನೋವು–ನಲಿವುಗಳನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮ ಮನಸ್ಸು ಇರಬೇಕು. ಈ ಗುಣಗಳು ಆಯ್ಕೆ ಕಮ್ಮಾರ ಅವರ ಬರಹಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಅವರ ಬರಹಗಳು ಓದುಗರನ್ನು ಕೇವಲ ಮನರಂಜಿಸುವುದಷ್ಟೇ ಅಲ್ಲದೆ ಚಿಂತನೆಗೆ ಹಚ್ಚುತ್ತವೆ ಹಾಗೂ ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಪ್ರೇರೇಪಿಸುತ್ತವೆ.
ಅವರ ಸಾಹಿತ್ಯದಲ್ಲಿ ಭಾಷೆಯ ಸರಳತೆ ಮತ್ತು ಭಾವದ ಗಾಢತೆ ವಿಶೇಷವಾಗಿ ಗಮನ ಸೆಳೆಯುತ್ತದೆ. ಅಲಂಕಾರಿಕ ಭಾಷೆಯ ಹಿಂದೆ ಓಡದೆ, ಓದುಗರ ಮನಸ್ಸಿಗೆ ನೇರವಾಗಿ ತಲುಪುವ ರೀತಿಯಲ್ಲಿ ವಿಚಾರಗಳನ್ನು ಕಟ್ಟಿಕೊಡುವುದು ಅವರ ಬರಹದ ವೈಶಿಷ್ಟ್ಯವಾಗಿದೆ. ಸ್ಥಳೀಯ ಬದುಕಿನ ಭಾಷೆ, ಜನಪದೀಯ ಸಂವೇದನೆ ಹಾಗೂ ನಿತ್ಯಜೀವನದ ಅನುಭವಗಳು ಅವರ ಸಾಹಿತ್ಯಕ್ಕೆ ಸಹಜವಾದ ಸೊಗಡನ್ನು ನೀಡಿವೆ.
ನಾಲ್ಕು ದಶಕಗಳ ನಿಸ್ವಾರ್ಥ ಶಿಕ್ಷಣ ಸೇವೆ
ಆಯ್ಕೆ ಕಮ್ಮಾರ ಅವರ ಬದುಕು ಅವರ ಬರಹದಷ್ಟೇ ಪ್ರೇರಣಾದಾಯಕವಾಗಿದೆ. ಸಾಹಿತ್ಯದ ಮೇಲಿನ ಆಸಕ್ತಿ, ನಿರಂತರ ಓದು, ಸಮಾಜದ ಬಗ್ಗೆ ಇರುವ ಕಾಳಜಿ ಹಾಗೂ ಬರವಣಿಗೆಯ ಮೇಲಿನ ಶ್ರದ್ಧೆ ಅವರನ್ನು ಒಬ್ಬ ಸೃಜನಶೀಲ ಸಾಹಿತಿಯಾಗಿ ರೂಪಿಸಿವೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಪ್ರತಿಭೆಯ ಜೊತೆಗೆ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಅಧ್ಯಯನ ಅಗತ್ಯ. ಈ ಗುಣಗಳೇ ಅವರ ಸಾಹಿತ್ಯಿಕ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.
ಸಾಹಿತ್ಯದ ಜೊತೆಗೆ ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ಗೃಹಪಾಠ ಶಿಕ್ಷಕರಾಗಿ ೪೦ ವರ್ಷಗಳ ಕಾಲ ಬಡ ಮಕ್ಕಳಿಗೆ ಉಚಿತವಾಗಿ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯಗಳನ್ನು ಬೋಧಿಸಿರುವುದು ಅವರ ಬದುಕಿನ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ.
ಸೌಹಾರ್ದದ ಸಂದೇಶ ಸಾರಿದ ಬಹುಮುಖ ಪ್ರತಿಭೆ
ಭಾವೈಕ್ಯತೆಯನ್ನೇ ಪ್ರೀತಿಸುವ ಆಯ್ಕೆ ಕಮ್ಮಾರ ಅವರು ಮಣಕವಾಡದ ಮಹಿಮಾ ಪುರುಷ ಶ್ರೀ ಗುರುಮೃತ್ಯುಂಜಯ ಅವರ ಹೆಸರಿನಲ್ಲಿ ‘ಸೌಹಾರ್ದ ಮಹಾಮನೆ ವೇದಿಕೆ’ಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ನಿರಂತರವಾಗಿ ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
ಅನೇಕ ನಾಟಕಗಳನ್ನು ರಚಿಸಿರುವ ಅವರು ನಟ ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಣಕವಾಡದ ಶ್ರೀ ಗುರುಮೃತ್ಯುಂಜಯ ಮಹಾಸ್ವಾಮಿಗಳನ್ನು ತಮ್ಮ ಆರಾಧ್ಯ ದೈವವಾಗಿಸಿಕೊಂಡಿರುವ ಅವರು, ಅವರ ಕುರಿತು ‘ಮಣಕವಾಡದ ಮಾಣಿಕ್ಯ’, ‘ಮಣಕವಾಡದ ಸಿರಿ’ ಹಾಗೂ ‘ಮೃತ್ಯುಂಜಯ ಮಹಾತ್ಮೆ’ ಎಂಬ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ, ಮಣಕವಾಡದ ಮೃತ್ಯುಂಜಯ ಅಜ್ಜನ ಕುರಿತು ಭಾಮಿನಿ ಷಟ್ಪದಿ ಪುರಾಣ ರಚಿಸುವ ಸಿದ್ಧತೆಯಲ್ಲಿದ್ದಾರೆ.
ಪುಟ್ಟರಾಜ ಗುರುವರ್ಯರ ಕುರಿತು ‘ಭೂಲೋಕದ ಭಗವಂತ’, ‘ಮರೆಯಾದ ಧ್ರುವತಾರೆ’ ಹಾಗೂ ‘ಕೃತಪುರ ರತ್ನ’ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕೇನಕೊಪ್ಪದ ಚನ್ನವೀರಶರಣರ ಕುರಿತು ‘ಪರಂಜ್ಯೋತಿ’, ಸಿದ್ಧಗಂಗಾಶ್ರೀಗಳ ಕುರಿತು ‘ಮೇರುಪರ್ವತ’ ಸೇರಿದಂತೆ ೨೭ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಹೆಗ್ಗಳಿಕೆ ಅವರದ್ದಾಗಿದೆ.
ಪ್ರಶಸ್ತಿಗಳ ಬೆನ್ನತ್ತಿದ ಸಾಹಿತ್ಯ ಸಾಧನೆ
ಸಾಹಿತ್ಯ, ಶಿಕ್ಷಣ, ರಂಗಭೂಮಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಸಂತಕವಿ, ಸಾಮರಸ ಕವಿ, ಸದ್ಭಾವನಾ ಪ್ರಶಸ್ತಿ, ಬಂಗಾರಚುಕ್ಕಿ ಪ್ರಶಸ್ತಿ ಹಾಗೂ ಭಾವೈಕ್ಯ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.
ಸಾಹಿತ್ಯವು ಸಮಾಜಕ್ಕೆ ಕನ್ನಡಿ ಮಾತ್ರವಲ್ಲ, ದಾರಿದೀಪವೂ ಹೌದು. ಸಮಾಜದಲ್ಲಿನ ಅಸಮಾನತೆ, ಅಜ್ಞಾನ, ಮೌಢ್ಯ ಹಾಗೂ ಅನ್ಯಾಯಗಳ ಕುರಿತು ಚಿಂತಿಸುವಂತೆ ಮಾಡುವ ಶಕ್ತಿ ಸಾಹಿತ್ಯಕ್ಕಿದೆ. ಮಾನವೀಯತೆ, ಸಹಬಾಳ್ವೆ, ಪ್ರೀತಿ, ಸಹಾನುಭೂತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಬೆಳೆಸುವಲ್ಲಿ ಸಾಹಿತಿಯ ಪಾತ್ರ ಮಹತ್ವದ್ದಾಗಿದೆ. ಆಯ್ಕೆ ಕಮ್ಮಾರ ಅವರ ಬರಹಗಳು ಈ ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿಯೇ ಅರ್ಥಪೂರ್ಣವಾಗುತ್ತವೆ.
ವೇಗದ ತಂತ್ರಜ್ಞಾನ ಯುಗದಲ್ಲಿಯೂ ಹೊಸ ತಲೆಮಾರಿನ ಓದುಗರನ್ನು ಸಾಹಿತ್ಯದತ್ತ ಸೆಳೆಯುವುದು ಇಂದಿನ ಸಾಹಿತಿಗಳ ಮುಂದಿರುವ ದೊಡ್ಡ ಸವಾಲಾಗಿದೆ. ಓದುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ಬದುಕಿನ ವಾಸ್ತವತೆಗಳನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಬರಹಗಳು ಈ ಕಾರ್ಯಕ್ಕೆ ನೆರವಾಗುತ್ತವೆ. ಈ ದೃಷ್ಟಿಯಿಂದ ಆಯ್ಕೆ ಕಮ್ಮಾರ ಅವರ ಸಾಹಿತ್ಯಿಕ ಪ್ರಯತ್ನಗಳು ವಿಶೇಷ ಮಹತ್ವ ಪಡೆದುಕೊಳ್ಳುತ್ತವೆ.
ಒಟ್ಟಿನಲ್ಲಿ, ಆಯ್ಕೆ ಕಮ್ಮಾರ ಅವರ ಬದುಕು ಮತ್ತು ಬರಹಗಳು ಸಾಹಿತ್ಯವೆಂಬುದು ಬದುಕಿನಿಂದ ಹುಟ್ಟಿ ಮತ್ತೆ ಬದುಕನ್ನೇ ಶ್ರೀಮಂತಗೊಳಿಸುವ ಪ್ರಕ್ರಿಯೆ ಎಂಬುದನ್ನು ಸಾರುತ್ತವೆ. ಅವರ ಸಾಹಿತ್ಯಸೇವೆ ಇನ್ನಷ್ಟು ವಿಸ್ತಾರವಾಗಲಿ, ಹೊಸ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ದೊರೆಯಲಿ ಹಾಗೂ ಅವರ ಬರಹಗಳು ಮುಂದಿನ ಪೀಳಿಗೆಗೂ ಮೌಲ್ಯಯುತ ಸಂದೇಶ ನೀಡಲಿ ಎಂಬುದು ಸಾಹಿತ್ಯಾಸಕ್ತರ ಆಶಯವಾಗಿದೆ.
ಸೆಪ್ಟೆಂಬರ್ ೫ರಂದು ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಆಯ್ಕೆ ಕಮ್ಮಾರ ಅವರ ಕುರಿತು ಆಯೋಜಿಸಿರುವ ‘ಬದುಕು–ಬರಹ’ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹವಾಗಿದೆ. ಸಾಹಿತ್ಯದ ಪಯಣದಲ್ಲಿ ಅವರು ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಲಿ, ಕನ್ನಡ ನಾಡು–ನುಡಿಯ ಸೇವೆಯಲ್ಲಿ ಅವರ ಲೇಖನಿ ನಿರಂತರವಾಗಿ ಸಾಗಲಿ ಎಂದು ಹಾರೈಸೋಣ.
ಪ್ರೊ. ಶ್ರೀಶೈಲ ಬಡಿಗೇರ



