ಬೆಂಗಳೂರು: ರಾಜ್ಯದ ಜನತೆಗೆ ಒಂದಾದ ಮೇಲೊಂದು ಬೆಲೆ ಏರಿಕೆಯ ಬಿಸಿ ತಟ್ಟುತ್ತಿದ್ದು, ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಹಾಲಿನ ದರ 8 ರೂಪಾಯಿ ಹೆಚ್ಚಳ ಹಾಗೂ ಸರ್ಕಾರಿ ಬಸ್ಗಳ ಟಿಕೆಟ್ ದರ ಪರಿಷ್ಕರಣೆಯ ವರದಿಗಳ ಬೆನ್ನಲ್ಲೇ, ಇದೀಗ ಅಕ್ಕಿ ದರವೂ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಸತತ 4ನೇ ಬಾರಿಗೆ ಅಕ್ಕಿ ದರ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
- ಕೋಲಂ ಅಕ್ಕಿ: ಹಿಂದೆ ₹75 ಇದ್ದ ದರ ಇದೀಗ ₹110 ಕ್ಕೆ ಏರಿಕೆಯಾಗಿದೆ.
- ಬಾಸುಮತಿ ಅಕ್ಕಿ: ಹಿಂದೆ ₹105 ಇದ್ದ ದರ ₹120 ತಲುಪಿದೆ.
- ಜೀರಾ ರೈಸ್: ಹಿಂದೆ ₹115 ಇದ್ದ ದರ ₹125 ಕ್ಕೆ ಹೆಚ್ಚಳವಾಗಿದೆ.
- ರಾಜಮುಡಿ ಅಕ್ಕಿ: ಹಿಂದೆ ₹125 ಇದ್ದ ದರ ₹150 ಕ್ಕೆ ಜಿಗಿದಿದೆ.
- ಸ್ಟೀಮ್ ಅಕ್ಕಿ: ಹಿಂದೆ ₹60 ಇದ್ದ ದರ ಇದೀಗ ₹88 ಆಗಿದೆ.
ಅತ್ಯಂತ ಹೆಚ್ಚಾಗಿ ಬಳಕೆಯಾಗುವ ಸೋನಾ ಮಸೂರಿ ಅಕ್ಕಿ ಬೆಲೆಯು ಕೆ.ಜಿ.ಗೆ ₹100ರ ಗಡಿಗೆ ಹತ್ತಿರವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹90 ಕ್ಕೆ ಮಾರಾಟವಾಗುತ್ತಿದೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 25 ಕೆ.ಜಿ. ಚೀಲದ ದರವು ₹1,430 ರಿಂದ ₹1,820 ಕ್ಕೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲೇ ಸೋನಾ ಮಸೂರಿ ಚೀಲದ ಬೆಲೆಯಲ್ಲಿ ₹390 ರಿಂದ ₹400 ರಷ್ಟು ಹೆಚ್ಚಳವಾಗಿದೆ. ಸತತ ಬೆಲೆ ಏರಿಕೆಯಿಂದಾಗಿ ಗ್ರಾಹಕರು ದರ ಕೇಳಿ ಅಕ್ಕಿ ಕೊಳ್ಳದೆ ಹಿಂದಿರುಗುವಂತಾಗಿದೆ.
ಸತತ ಬೆಲೆ ಏರಿಕೆಗೆ ಕಾರಣವೇನು?:
ಮುಂಗಾರು ಅಭಾವ: ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಕಾರಣ ರಾಯಚೂರು, ಸಿಂಧನೂರು, ಸಿರಗುಪ್ಪ ಹಾಗೂ ಭದ್ರಾವತಿ ಭಾಗಗಳಲ್ಲಿ ಭತ್ತದ ಉತ್ಪಾದನೆ ತೀವ್ರವಾಗಿ ಕುಸಿದಿದೆ. ನೆರೆ ರಾಜ್ಯಗಳಲ್ಲೂ ಇಳುವರಿ ಕುಸಿತ: ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಕೇವಲ ಶೇ. 50 ರಷ್ಟು ಮಾತ್ರ ಅಕ್ಕಿ ಇಳುವರಿ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಮುಂಬರುವ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.



