ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ.
ಕರ್ನಾಟಕದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ದರ ಪರಿಷ್ಕರಣೆಯ ನಿರ್ಧಾರವನ್ನು ಸಾರಿಗೆ ಸಚಿವ ಭೈರತಿ ಸುರೇಶ್ ಖಚಿತಪಡಿಸಿದ್ದಾರೆ.
ನವೆಂಬರ್ 4ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪ್ರಯಾಣ ದರ ಏರಿಕೆಯ ಪ್ರಮಾಣವನ್ನು ಅಂತಿಮಗೊಳಿಸಲಾಗುತ್ತದೆ. ಬಳಿಕ ಅಧಿಕೃತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಾರಿಗೆ ನಿಗಮಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವೇ ಪ್ರಮುಖ ಕಾರಣ ಎಂದು ಸಚಿವರು ಹೇಳಿದ್ದಾರೆ. ಕೇಂದ್ರ ಸರ್ಕಾರ ಕಳೆದ ಒಂಬತ್ತು ತಿಂಗಳಲ್ಲಿ ಬಲ್ಕ್ ಡೀಸೆಲ್ ದರವನ್ನು ಐದು ಬಾರಿ ಹೆಚ್ಚಿಸಿದೆ. ಇದರಿಂದ ಸಾರಿಗೆ ಸಂಸ್ಥೆಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ ಎಂದು ವಿವರಿಸಿದ್ದಾರೆ.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಒಟ್ಟಾಗಿ ಸುಮಾರು ₹9,000 ಕೋಟಿ ಸಂಚಿತ ನಷ್ಟದಲ್ಲಿವೆ. ಪ್ರತಿ ವರ್ಷ ಅಂದಾಜು ₹2,000 ಕೋಟಿ ನಷ್ಟವಾಗುತ್ತಿದ್ದು, ನೌಕರರ ವೇತನ ಪಾವತಿ ಹಾಗೂ ದೈನಂದಿನ ಡೀಸೆಲ್ ಖರೀದಿಗೂ ಆರ್ಥಿಕ ಸಮಸ್ಯೆ ಎದುರಾಗಿದೆ. ಇತ್ತೀಚೆಗೆ ಡೀಸೆಲ್ ಖರೀದಿಗಾಗಿ ಮುಖ್ಯಮಂತ್ರಿ ₹200 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡ ಸಚಿವರು, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಕಡಿಮೆ ಇದೆ ಎಂದಿದ್ದಾರೆ. 2015ರ ಬಳಿಕ ಅಂದರೆ ಕಳೆದ 11 ವರ್ಷಗಳಿಂದ ಪ್ರಯಾಣ ದರ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಸಾರಿಗೆ ನಿಗಮಗಳ ನಿರ್ವಹಣೆಗೆ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ನವೆಂಬರ್ 4ರ ಸಭೆಯ ಬಳಿಕ ದರ ಏರಿಕೆಯ ಪ್ರಮಾಣದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದ್ದು, ರಾಜ್ಯದ ಬಸ್ ಪ್ರಯಾಣಿಕರ ಮೇಲೆ ಎಷ್ಟು ಹೆಚ್ಚುವರಿ ಹೊರೆ ಬೀಳಲಿದೆ ಎಂಬುದು ತಿಳಿಯಲಿದೆ.









