ಆರೋಗ್ಯಕರ ಜೀವನಶೈಲಿಗೆ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಎಷ್ಟು ಅಗತ್ಯವೋ, ಅಷ್ಟೇ ಮಹತ್ವ ಉತ್ತಮ ಗುಣಮಟ್ಟದ ನಿದ್ರೆಗೂ ಇದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ನಿದ್ರೆಯನ್ನು ಐಷಾರಾಮಿ ವಿಷಯವಾಗಿ ಪರಿಗಣಿಸದೆ, ದೇಹದ ಮೂಲಭೂತ ಅಗತ್ಯಗಳಲ್ಲಿ ಒಂದಾಗಿ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆ, ಒತ್ತಡದ ಜೀವನಶೈಲಿ ಹಾಗೂ ರಾತ್ರಿ ತಡವಾಗಿ ಮಲಗುವ ಅಭ್ಯಾಸದಿಂದ ಅನೇಕರು ಸಮರ್ಪಕ ನಿದ್ರೆಯಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ದೇಹದ ಜೈವಿಕ ಗಡಿಯಾರ (Biological Clock) ಅಸ್ತವ್ಯಸ್ತಗೊಂಡು ಹಾರ್ಮೋನುಗಳ ಸಮತೋಲನಕ್ಕೂ ಧಕ್ಕೆಯಾಗುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ವೈದ್ಯರ ಪ್ರಕಾರ, ದಿನಕ್ಕೆ ಐದು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಅಭ್ಯಾಸವು ಕೇವಲ ಒಂದು ವಾರದಲ್ಲೇ ದೇಹದಲ್ಲಿ ಹಲವು ನಕಾರಾತ್ಮಕ ಬದಲಾವಣೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ.
ಸಾಕಷ್ಟು ನಿದ್ರೆ ಇಲ್ಲದಿದ್ದರೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟ ಕಡಿಮೆಯಾಗುವ ಅಪಾಯವಿದ್ದು, ಇದರಿಂದ ದೈಹಿಕ ಶಕ್ತಿ, ಸ್ನಾಯುಗಳ ಬೆಳವಣಿಗೆ ಹಾಗೂ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀಳಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಅಲ್ಲದೆ, ವ್ಯಾಯಾಮದ ಬಳಿಕ ಸ್ನಾಯುಗಳು ಸಹಜ ಸ್ಥಿತಿಗೆ ಮರಳುವ ಪ್ರಕ್ರಿಯೆಯೂ ನಿಧಾನಗೊಳ್ಳುತ್ತದೆ. ಹೀಗಾಗಿ ಜಿಮ್‌ನಲ್ಲಿ ಎಷ್ಟೇ ವ್ಯಾಯಾಮ ಮಾಡಿದರೂ ಸಮರ್ಪಕ ನಿದ್ರೆ ಇಲ್ಲದಿದ್ದರೆ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.
ನಿದ್ರೆಯ ಕೊರತೆಯು ಇನ್ಸುಲಿನ್ ಸಂವೇದನೆ ಕಡಿಮೆಯಾಗಲು ಕಾರಣವಾಗಬಹುದು. ಇದರ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿ ಉಳಿಯುವ ಸಾಧ್ಯತೆ ಇದ್ದು, ದೀರ್ಘಾವಧಿಯಲ್ಲಿ ಮಧುಮೇಹದ ಅಪಾಯ ಹೆಚ್ಚಾಗಬಹುದು. ಜೊತೆಗೆ ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳಲ್ಲಿ ವ್ಯತ್ಯಾಸ ಉಂಟಾಗಿ, ಹೆಚ್ಚುವರಿ ಕ್ಯಾಲೊರಿ ಸೇವನೆ ಹಾಗೂ ತೂಕ ಹೆಚ್ಚಳಕ್ಕೂ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ತಜ್ಞರ ಸಲಹೆಯಂತೆ, ದೇಹವು ತನ್ನನ್ನು ತಾನು ದುರಸ್ತಿ ಮಾಡಿಕೊಳ್ಳಲು ಮತ್ತು ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಪ್ರತಿದಿನ 7 ರಿಂದ 8 ಗಂಟೆಗಳ ಗುಣಮಟ್ಟದ ನಿದ್ರೆ ಅತ್ಯಗತ್ಯ. ರಾತ್ರಿ ಮಲಗುವ ಮುನ್ನ ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಕಡಿಮೆ ಮಾಡಿ, ನಿಯಮಿತ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿಕೊಳ್ಳುವುದು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.



