ಬೆಂಗಳೂರು: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
ವಸ್ತ್ರಸಂಹಿತೆ ಪಾಲನೆಗಾಗಿ ಅಧಿಕಾರಿಗಳನ್ನು ನೇಮಕ ಮಾಡಿದ್ದರೂ ಈ ಘಟನೆ ಸಂಭವಿಸಿರುವುದು ಗಂಭೀರವಾಗಿ ಪರಿಗಣಿಸಲಾಗಿದೆ. ವಿದ್ಯಾರ್ಥಿಗಳ ಜನಿವಾರ ತೆಗೆಸಬಾರದೆಂದು ಮುಂಚಿತವಾಗಿ ಸ್ಪಷ್ಟ ಸೂಚನೆ ನೀಡಲಾಗಿದ್ದರೂ, ಕೆಲವರಿಗೆ ಅದನ್ನು ತೆಗೆಸಿದ ಘಟನೆ ಉದ್ದೇಶಪೂರ್ವಕವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
2026ರ ಸಿಇಟಿ ಪರೀಕ್ಷೆಯ ವೇಳೆ ಏಪ್ರಿಲ್ 23ರಂದು ನಡೆದ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳಿಗೆ ಜನಿವಾರ ತೆಗೆಸುವಂತೆ ಸಿಬ್ಬಂದಿ ಸೂಚಿಸಿ, ಬಳಿಕ ಪರೀಕ್ಷೆಗೆ ಅವಕಾಶ ನೀಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸೂಕ್ಷ್ಮ ವಿಚಾರವಾಗಿರುವುದರಿಂದ KEA ಸ್ಪಷ್ಟನೆ ನೀಡಿದೆ.
ಕಳೆದ ವರ್ಷ ನಡೆದ ಇಂತಹ ಘಟನೆಗಳನ್ನು ಉಲ್ಲೇಖಿಸಿ, ಜನಿವಾರ, ಲಿಂಗ ಸೇರಿದಂತೆ ಧಾರ್ಮಿಕ ಚಿಹ್ನೆಗಳನ್ನು ತೆಗೆಸಬಾರದು ಎಂದು ತರಬೇತಿಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೂ ಘಟನೆ ನಡೆದಿರುವುದು ಗಂಭೀರವಾಗಿದ್ದು, ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು KEA ಸೂಚಿಸಿದೆ. ಈ ಕುರಿತು ಸಂಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರದ ಮೂಲಕ KEA ಆಗ್ರಹಿಸಿದೆ.



