HomeIndia Newsಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣದ ವದಂತಿಗೆ ಅಧಿಕೃತ ತೆರೆ: ₹3,300 ಕೋಟಿ ಹಣಕಾಸಿನ ಲೆಕ್ಕಪತ್ರ...

ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣದ ವದಂತಿಗೆ ಅಧಿಕೃತ ತೆರೆ: ₹3,300 ಕೋಟಿ ಹಣಕಾಸಿನ ಲೆಕ್ಕಪತ್ರ ಸಂಪೂರ್ಣ ಪಕ್ಕಾ ಎಂದ ಟ್ರಸ್ಟ್!

For Dai;y Updates Join Our whatsapp Group

ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ₹3,300 ಕೋಟಿ ದೇಣಿಗೆ ಹಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಕ್ರಮ ಅಥವಾ ಹಗರಣ ನಡೆದಿದೆ ಎಂಬ ಆರೋಪಗಳು ಆಧಾರರಹಿತವಾಗಿವೆ ಎಂದು ಸರ್ಕಾರಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಭಕ್ತರು ನೀಡಿರುವ ₹3,300 ಕೋಟಿ ದೇಣಿಗೆಯ ಪ್ರತಿಯೊಂದು ರೂಪಾಯಿಯೂ ಸುರಕ್ಷಿತವಾಗಿದ್ದು, ಸಂಪೂರ್ಣ ಲೆಕ್ಕಪರಿಶೋಧನೆಗೆ ಒಳಪಟ್ಟಿದೆ. ಟ್ರಸ್ಟ್‌ನ ಆಡಳಿತದಲ್ಲಿ ಯಾವುದೇ ರೀತಿಯ ಹಣಕಾಸು ಅಕ್ರಮ ನಡೆದಿಲ್ಲ. ಇತ್ತೀಚೆಗೆ ಬೆಳಕಿಗೆ ಬಂದಿರುವುದು ಹುಂಡಿಯಲ್ಲಿನ ನಗದು ಎಣಿಕೆ ವೇಳೆ ನಡೆದ ಪ್ರತ್ಯೇಕ ಕಳ್ಳತನದ ಪ್ರಕರಣ ಮಾತ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಾರ್ವಜನಿಕರಿಂದ ಬಂದಿರುವ ₹3,300 ಕೋಟಿ ದೇಣಿಗೆಯನ್ನು ಸ್ವತಂತ್ರ ಬಾಹ್ಯ ಲೆಕ್ಕಪರಿಶೋಧನಾ ಸಂಸ್ಥೆಯಾದ ‘ವಿ. ಶಂಕರ್ ಅಯ್ಯರ್ ಆ್ಯಂಡ್ ಕಂಪನಿ’ ಪರಿಶೀಲಿಸಿದೆ.

ಟ್ರಸ್ಟ್‌ ಮಾಹಿತಿ ಪ್ರಕಾರ, ರಾಮ ಮಂದಿರ ನಿರ್ಮಾಣಕ್ಕಾಗಿ ಸುಮಾರು ₹1,800 ಕೋಟಿ ಹಾಗೂ ಭೂ ಖರೀದಿಗೆ ಸುಮಾರು ₹400 ಕೋಟಿ ವೆಚ್ಚ ಮಾಡಲಾಗಿದೆ. ಎಲ್ಲಾ ಹಣಕಾಸು ವ್ಯವಹಾರಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ನಡೆಸಲಾಗಿದ್ದು, ಯಾವುದೇ ನಗದು ವಹಿವಾಟು ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಂಡಿಯಿಂದ ಸಂಗ್ರಹಿಸಿದ ಹಣವನ್ನು ಯಂತ್ರಗಳ ಮೂಲಕ ಎಣಿಕೆ ಮಾಡುವ ಮೊದಲು ಕೈಯಿಂದ ಬೇರ್ಪಡಿಸುವ ಪ್ರಕ್ರಿಯೆ ವೇಳೆ ಕಳ್ಳತನ ನಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಮಿಸಿದ್ದ ‘ಸೈನಿಕ್ ಸೆಕ್ಯುರಿಟಿ ಸರ್ವೀಸಸ್’ (SSS) ಸಂಸ್ಥೆಯ ಆರು ಹೊರಗುತ್ತಿಗೆ ಸಿಬ್ಬಂದಿ ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪತ್ತೆಯಾಗಿದೆ.

ಆರೋಪಿಗಳನ್ನು ತಕ್ಷಣವೇ ಬಂಧಿಸಲಾಗಿದ್ದು, ಬಂಧಿತರಲ್ಲಿ ಯಾರೂ ರಾಮ ಮಂದಿರ ಟ್ರಸ್ಟ್ ಅಥವಾ ದೇವಸ್ಥಾನದ ಆಡಳಿತದ ನೇರ ಸಿಬ್ಬಂದಿಯಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಕಳ್ಳತನದ ಪ್ರಕರಣದ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ದೇವಸ್ಥಾನದ ಸುತ್ತಮುತ್ತಲಿನ ಭೂ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನೂ ಸರ್ಕಾರ ತಳ್ಳಿಹಾಕಿದೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ಭೂಮಿಯ ಬೆಲೆ ಗಣನೀಯವಾಗಿ ಏರಿಕೆಯಾದ ಕಾರಣ ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಪರಿಹಾರ ನೀಡಬೇಕಾದ ಹಿನ್ನೆಲೆಯಲ್ಲಿ ವೆಚ್ಚ ಹೆಚ್ಚಾಗಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳ್ಳತನದ ಘಟನೆ ಬಹಿರಂಗವಾದ ಬಳಿಕವೂ ಅಯೋಧ್ಯೆ ರಾಮ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹಾಗೂ ದೇಣಿಗೆಯ ಪ್ರಮಾಣದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ.

2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಹುಂಡಿ ದೇಣಿಗೆಯ ಮೂಲಕವೇ ಪ್ರತಿ ತಿಂಗಳು ಸರಾಸರಿ ₹5 ಕೋಟಿ ನಗದು ಸಂಗ್ರಹವಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

ಇಂತಹ ಘಟನೆಗಳು ಮರುಕಳಿಸದಂತೆ ಹುಂಡಿ ಹಣ ಎಣಿಕೆ ಕೇಂದ್ರಗಳಲ್ಲಿ ಡಿಜಿಟಲ್ ಸ್ಕ್ಯಾನಿಂಗ್ ವ್ಯವಸ್ಥೆ ಹಾಗೂ ಹೆಚ್ಚುವರಿ ಬಯೋಮೆಟ್ರಿಕ್ ಭದ್ರತಾ ಕ್ರಮಗಳನ್ನು ಜಾರಿಗೆ ತರಲು ಎಸ್‌ಬಿಐ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಂಟಿಯಾಗಿ ನಿರ್ಧರಿಸಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img