Home Blog Page 11

ಪ್ರೀತಿಸಿ ಮದುವೆಯಾದ ಪತ್ನಿಯನ್ನು ನಡುರಸ್ತೆಯಲ್ಲಿ ಕಲ್ಲಿನಿಂದ ಕೊಂದ ಪತಿ

0

ಬೆಳಗಾವಿ: ಪತ್ನಿಯ ಮೇಲಿನ ಶೀಲ ಶಂಕೆ ಮತ್ತು ಕುಟುಂಬದ ಕಲಹದಿಂದ ಕೋಪಗೊಂಡ ಪತಿ, ಆಕೆಯನ್ನು ಮಲಗಿರುವಾಗಲೇ ಎಳೆದುಕೊಂಡು ಹೋಗಿ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಜೋಡಳ್ಳಿ ತನ್ನ ಪತ್ನಿ ಶಿವಕ್ಕ ಜೋಡಳ್ಳಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯ ನಂತರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಶಿವಕ್ಕ ಜೋಡಳ್ಳಿ ಮೊದಲ ಗಂಡನ ಮರಣದ ಬಳಿಕ ಬಸವರಾಜ ಜೋಡಳ್ಳಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ದಾಂಪತ್ಯ ಜೀವನದಲ್ಲಿ ಉಂಟಾದ ಸಮಸ್ಯೆಗಳ ಕಾರಣ ಅವರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಘಟನೆಯ ದಿನ ಬೆಳಗ್ಗೆ ಸುಮಾರು 7:30ರ ಸುಮಾರಿಗೆ ಪತ್ನಿಯನ್ನು ಮೊದಲು ಹಲ್ಲೆ ಮಾಡಿ, ಬಳಿಕ ಚಾಕುವಿನಿಂದ ಇರಿದು, ಕೊನೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೊಬೈಲ್ ಪಾಸ್‌ ವರ್ಡ್ ಕೊಡೋ ಮುನ್ನ ಎಚ್ಚರ: ಸ್ನೇಹಿತನಿಂದಲೇ 4.5 ಲಕ್ಷ ದೋಖಾ!

0

ಬೆಂಗಳೂರು: ಸ್ನೇಹಿತನ ಮೇಲೆ ನಂಬಿಕೆ ಇಟ್ಟು ಮೊಬೈಲ್ ಪಾಸ್ವರ್ಡ್ ನೀಡಿದ ಪರಿಣಾಮ, ಆತನಿಂದಲೇ ಲಕ್ಷಾಂತರ ರೂಪಾಯಿ ಮೋಸವಾಗಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

ಚಿಂತನ್ ಆರೋರಾ ಮೊಬೈಲ್ ಬಳಸಿಕೊಂಡು ನವೀನ್ ವೆಮುಲ ಸುಮಾರು 4.45 ಲಕ್ಷ ರೂ. ಮೌಲ್ಯದ ಆನ್‌ಲೈನ್ ಶಾಪಿಂಗ್ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಇಬ್ಬರು ಸ್ನೇಹಿತರು ಕೋರಮಂಗಲದ ಕೆಎಚ್‌ಬಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆತ್ಮೀಯ ಸ್ನೇಹಿತರಾಗಿದ್ದರಿಂದ ಪರಸ್ಪರ ಮೊಬೈಲ್ ಪಾಸ್ವರ್ಡ್‌ಗಳನ್ನು ಹಂಚಿಕೊಂಡಿದ್ದರು. ಮಾರ್ಚ್ 6ರಂದು ಇಬ್ಬರೂ ತಡರಾತ್ರಿ ತನಕ ಪಾರ್ಟಿ ಮಾಡಿದ್ದರು. ಈ ವೇಳೆ ಮಲಗುವ ಮುನ್ನ ಚಿಂತನ್ ತಮ್ಮ ಮೊಬೈಲ್ ಪಾಸ್ವರ್ಡ್ ಅನ್ನು ನವೀನ್‌ಗೆ ತಿಳಿಸಿದ್ದರು.

ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ನವೀನ್ ಕಾಣೆಯಾಗಿದ್ದನು. ಮೊಬೈಲ್ ಪರಿಶೀಲಿಸಿದಾಗ 4,45,870 ರೂ. ಮೌಲ್ಯದ ಐಷಾರಾಮಿ ವಸ್ತುಗಳನ್ನು ಆರ್ಡರ್ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಉಳಿದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ನೇಹಿತನ ದ್ರೋಹದಿಂದ ಬೆಚ್ಚಿಬಿದ್ದ ಚಿಂತನ್ ಆರೋರಾ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ಬಾಗಲಕೋಟೆ ಉಪಚುನಾವಣೆ: ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ

0

ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮಾರ್ಚ್ 23 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪುರ, ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯನಮಠ ಮತ್ತು ಅತಿಥಿ ಮುಖಂಡರು ಉಮೇಶ್ ಮೇಟಿ ಜೊತೆಗೆ ನಾಮಪತ್ರ ಸಲ್ಲಿಕೆಗೆ ಹಾಜರಾದರು.

ಉಮೇಶ್ ಮೇಟಿ ಮೊದಲಿಗೆ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ನಂತರ ರಾಘವೇಂದ್ರ ರಾಯರ ಮಠದಲ್ಲಿ ದರ್ಶನ ಪಡೆದು ಬಳಿಕ ದಿವಂಗತ ತಂದೆ ಹೆಚ್.ವೈ ಮೇಟಿ ಅವರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದರು.

ಸಚಿವ ಆರ್.ಬಿ ತಿಮ್ಮಾಪುರ್, “ಬಾಗಲಕೋಟೆ ನಾಡಿನ ಪುರಾತನ ಧಾರ್ಮಿಕ ಪರಂಪರೆ ಹಾಗೂ ಹಿಂದುತ್ವ ನಮ್ಮ ಚುನಾವಣಾ ತತ್ವಗಳಲ್ಲಿದೆ. ಉಮೇಶ್ ಮೇಟಿ ಹಿಂದೂ ಹೀಗಾಗಿ ಮತದಾರರು ಅವರನ್ನು ಬೆಂಬಲಿಸುತ್ತಾರೆ. ಸರ್ಕಾರ ಎಲ್ಲಾ ವರ್ಗದವರಿಗೆ ಸಮಾನ ಸೌಲಭ್ಯ ನೀಡುತ್ತಿದೆ. ಸರಕಾರದ ಹಿತದृष्टಿಯಿಂದ ಬಾಗಲಕೋಟೆ ಶಾಂತಿಯ ತೋಟವಾಗಿದೆ” ಎಂದಿದ್ದಾರೆ.

ಹೆಚ್‌ವೈ ಮೇಟಿ ನಿಧನದ ಬಳಿಕ ಖಾಲಿಯಾದ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಚಿನ್ನ ಖರೀದಿದಾರರಿಗೆ ಗುಡ್‌ ನ್ಯೂಸ್: 10 ಗ್ರಾಂ ಬಂಗಾರದ ಬೆಲೆ 5,950 ಇಳಿಕೆ! ಬೆಳ್ಳಿ ಬೆಲೆ ಎಷ್ಟಿದೆ ತಿಳಿಯೋಣ?

ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಈ ಎರಡೂ ಅಮೂಲ್ಯ ಲೋಹಗಳ ಬೆಲೆ ಕುಸಿದಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಇಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ಸುಮಾರು ₹1,37,790ರ ಆಸುಪಾಸಿನಲ್ಲಿ ವಹಿವಾಟಾಗುತ್ತಿದ್ದು, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ ₹1,26,215ಕ್ಕೆ ಇಳಿಕೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,37,820 ಆಗಿದ್ದರೆ, ಮುಂಬೈನಲ್ಲಿ ₹1,38,095 ದಾಖಲಾಗಿದೆ. ದಕ್ಷಿಣ ಭಾರತದ ಪ್ರಮುಖ ನಗರ ಚೆನ್ನೈಯಲ್ಲಿ ಚಿನ್ನದ ಬೆಲೆ ಇತರ ನಗರಗಳಿಗಿಂತ ತುಸು ಹೆಚ್ಚಾಗಿ ₹1,39,038ರ ಮಟ್ಟದಲ್ಲಿದೆ.

ಇನ್ನೊಂದೆಡೆ, ಬೆಳ್ಳಿಯ ದರದಲ್ಲೂ ಗಮನಾರ್ಹ ಕುಸಿತ ಕಂಡುಬಂದಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ₹2,14,196ಕ್ಕೆ ತಲುಪಿದ್ದರೆ, ದೆಹಲಿ ಮತ್ತು ಮುಂಬೈಗಳಲ್ಲಿ ಕ್ರಮವಾಗಿ ₹2,13,911 ಹಾಗೂ ₹2,14,432 ದಾಖಲಾಗಿದೆ. ಚೆನ್ನೈನಲ್ಲಿ ಬೆಳ್ಳಿಯ ಬೆಲೆ ₹2,16,299ರ ಆಸುಪಾಸಿನಲ್ಲಿ ವಹಿವಾಟಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಡಾಲರ್ ಮೌಲ್ಯದ ಏರಿಳಿತ ಹಾಗೂ ಕೇಂದ್ರ ಬ್ಯಾಂಕುಗಳ ಬಡ್ಡಿದರ ನೀತಿಗಳ ಪರಿಣಾಮದಿಂದ ಈ ಬೆಲೆ ಇಳಿಕೆ ಸಂಭವಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಜೊತೆಗೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹೂಡಿಕೆದಾರರ ಮನಸ್ಥಿತಿಯ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆ ಮೇಲೆ ನೇರ ಪ್ರಭಾವ ಉಂಟುಮಾಡಿದೆ.

ಕೂಲಿಗೆ ಹೋದ ವಿದ್ಯಾರ್ಥಿನಿಯನ್ನು ಕರೆತಂದು ಪರೀಕ್ಷೆ ಬರೆಸಿದ ಅಧಿಕಾರಿಗಳು!

0

ಗದಗ: ಕಡು ಬಡತನದ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು ಹುಡುಕಿ ಕರೆತಂದು ಪರೀಕ್ಷೆ ಬರೆಸಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪಲ್ಲವಿ ಹಳ್ಳಿಕೇರಿ, ಬರದೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಜ್ಞಾನ ವಿಷಯದ ಪರೀಕ್ಷೆ ನಡೆಯುತ್ತಿದ್ದ ವೇಳೆ, ಮನೆಯ ಆರ್ಥಿಕ ಸಂಕಷ್ಟದಿಂದಾಗಿ ಆಕೆ ಪರೀಕ್ಷೆಗೆ ಹಾಜರಾಗದೆ ದ್ರಾಕ್ಷಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದಳು.

ವಿದ್ಯಾರ್ಥಿನಿ ಪರೀಕ್ಷೆಗೆ ಗೈರಾಗಿರುವ ಮಾಹಿತಿ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ತಕ್ಷಣ ಕ್ರಮ ಕೈಗೊಂಡರು. ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ದ್ರಾಕ್ಷಿ ತೋಟಕ್ಕೆ ತೆರಳಿ, ವಿದ್ಯಾರ್ಥಿನಿಯನ್ನು ಮನವೊಲಿಸಿ ಪರೀಕ್ಷೆಯ ಮಹತ್ವ ತಿಳಿಸಿದರು.

ನಂತರ ಮುಂಡರಗಿ ಪಟ್ಟಣದ ವಿಜಿ ಲಿಂಬಿಕಾಯಿ ಶಿಕ್ಷಣ ಸಂಸ್ಥೆಯಲ್ಲಿ ಇರುವ ಪರೀಕ್ಷಾ ಕೇಂದ್ರಕ್ಕೆ ಕರೆತಂದು, ಪಲ್ಲವಿಯಿಂದ ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆಯನ್ನು ಬರೆಯುವಂತೆ ಮಾಡಿದರು.

ಗ್ರಾಮೀಣ ಭಾಗಗಳಲ್ಲಿ ಬಡತನದ ಕಾರಣದಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸುವ ಘಟನೆಗಳು ಸಾಮಾನ್ಯವಾಗಿವೆ. ಇಂತಹ ಸಂದರ್ಭಗಳಲ್ಲಿ ಶಿಕ್ಷಣ ಇಲಾಖೆ ತಕ್ಷಣ ಸ್ಪಂದಿಸಿ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವುದು ಅಗತ್ಯವಾಗಿದೆ.

ಅಧಿಕಾರಿಗಳ ಈ ಮಾನವೀಯ ಹಾಗೂ ಹೊಣೆಗಾರಿಕೆಯ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ಈ ಘಟನೆ ಕೇವಲ ಒಂದು ಸುದ್ದಿಯಲ್ಲ, ಬಡತನದ ನಡುವೆಯೂ ಶಿಕ್ಷಣವನ್ನು ಉಳಿಸಿಕೊಳ್ಳಬಹುದೆಂಬ ನಂಬಿಕೆಗೆ ಜೀವ ತುಂಬಿದ ಉದಾಹರಣೆಯಾಗಿದೆ. ಶಿಕ್ಷಣದ ಮಹತ್ವವನ್ನು ಮತ್ತೊಮ್ಮೆ ಸಮಾಜಕ್ಕೆ ನೆನಪಿಸಿದ ಘಟನೆಯಾಗಿದೆ.

ವಿದ್ಯಾರ್ಥಿನಿಯ ಭವಿಷ್ಯ ನಮ್ಮ ಮುಂದಿತ್ತು. ಬಡತನದಿಂದ ಅವಳು ಶಿಕ್ಷಣವನ್ನು ಕೈಬಿಡಬಾರದು ಎಂಬ ಉದ್ದೇಶದಿಂದ ತಕ್ಷಣ ಕ್ರಮ ಕೈಗೊಂಡೆವು. ಶಿಕ್ಷಣವೇ ಜೀವನ ಬದಲಾಯಿಸುತ್ತದೆ ಎಂದು ಗಂಗಾಧರ ಅಣ್ಣಿಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಬಡತನಕ್ಕೂ ಮೀರಿದ ಶಿಕ್ಷಣದ ಸಂಕಲ್ಪ ಬಡತನದ ಒತ್ತಡದಿಂದ ಕೂಲಿ ಕೆಲಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಕರೆತಂದು, ಶಿಕ್ಷಣ ಇಲಾಖೆ ಅಧಿಕಾರಿಗಳು ಒಂದು ವಿದ್ಯಾರ್ಥಿನಿಯ ಭವಿಷ್ಯವನ್ನು ಉಳಿಸಿದ ಘಟನೆ ಇದಾಗಿದೆ.

ಮೂಡಬಿದಿರೆ ಲೈಂಗಿಕ ದೌರ್ಜನ್ಯ ಪ್ರಕರಣ ಸಿಐಡಿಗೆ ವರ್ಗಾವಣೆ: ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಮೂಡಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸಂತ್ರಸ್ತೆಯನ್ನು ಭೇಟಿ ಮಾಡಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಆರೋಪ ಹೊರಬಿದ್ದ ತಕ್ಷಣವೇ ಅವರನ್ನು ಅಮಾನತು ಮಾಡುವ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಸೂಚಿಸಲಾಗಿದ್ದು, ಮುಂದಿನ ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದರು.

ತನಿಖೆ ಮುಂದುವರಿದಂತೆ ಇನ್ನಷ್ಟು ಸಂತ್ರಸ್ತರು ಇರುವ ಸಾಧ್ಯತೆಯೂ ಹೊರಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಬಾಗಲಕೋಟೆ ಉಪಚುನಾವಣೆ: ‘ಕೈ’ ಅಭ್ಯರ್ಥಿಯಾಗಿ ಹೆಚ್.ವೈ ಮೇಟಿ ಪುತ್ರ ಉಮೇಶ್ ನಾಮಪತ್ರ ಸಲ್ಲಿಕೆ

ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಇಂದು ನಾಮಪತ್ರ ಸಲ್ಲಿಸಿದರು.

ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಸೇರಿದಂತೆ ಹಲವು ಮುಖಂಡರ ಸಾಥ್‌ನಲ್ಲಿ, ಬಾಗಲಕೋಟೆ ಎಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ನಡೆಯಿತು.

ನಾಮಪತ್ರ ಸಲ್ಲಿಕೆಗೂ ಮುನ್ನ ಉಮೇಶ್ ಮೇಟಿ ಅವರು ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ರಾಘವೇಂದ್ರ ರಾಯರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಆನಂತರ ದಿವಂಗತ ತಂದೆ ಹೆಚ್.ವೈ. ಮೇಟಿ ಅವರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದರು.

ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

ದಾವಣಗೆರೆ ಟಿಕೆಟ್ ವಿಚಾರ: ಅಲ್ಪಸಂಖ್ಯಾತರನ್ನು ಮನವೊಲಿಸುತ್ತೇವೆ – ಸಿಎಂ ಸಿದ್ದರಾಮಯ್ಯ

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ಅಲ್ಪಸಂಖ್ಯಾತರಲ್ಲಿ ಉಂಟಾಗಿರುವ ಅಸಮಾಧಾನವನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಮನವೊಲಿಸಿ, ಸಮಾಧಾನಪಡಿಸಲಾಗುತ್ತದೆ. ಅವರಿಗೆ ಪರ್ಯಾಯ ಅವಕಾಶಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಉಪಚುನಾವಣೆ ಕುರಿತು ಮಾತನಾಡಿದ ಸಿಎಂ, ಎರಡೂ ಕ್ಷೇತ್ರಗಳಲ್ಲಿ ಶೇ.100 ಗೆಲುವು ಸಾಧಿಸುವ ವಿಶ್ವಾಸವಿದೆ. ಬಿಜೆಪಿಯವರು ಹಿಂದೆಯೂ ಇದೇ ರೀತಿಯ ಭರವಸೆ ನೀಡಿದ್ದರು. ಬಸವರಾಜ್ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಪುತ್ರ ಗೆಲ್ಲುತ್ತಾರೆ ಎಂದು ಹೇಳಿದ್ದರು, ಆದರೆ ಸೋಲು ಕಂಡರು ಎಂದು ಟೀಕಿಸಿದರು.

ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಜನರಿಗೆ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಬೈಎಲೆಕ್ಷನ್ ಗೆದ್ದು ಅದನ್ನು ಸಾಬೀತುಪಡಿಸಿದ್ದೇವೆ ಎಂದರು.

ಬಡವರು, ಅಲ್ಪಸಂಖ್ಯಾತರು ಹಾಗೂ ರಾಜ್ಯದ ಜನರು ನಮ್ಮ ಪರವಾಗಿದ್ದಾರೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ನಾವು ಅಧಿಕಾರದಲ್ಲಿದ್ದೇವೆ, ಸಂಪೂರ್ಣ ಗೆಲುವಿನ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಪಂಚರಾಜ್ಯ ಚುನಾವಣೆಯಲ್ಲಿಯೂ ಬಿಜೆಪಿ ಎಲ್ಲಾ ಕಡೆ ಸೋಲು ಕಾಣಲಿದೆ ಎಂದು ಹೇಳಿದರು.

ದಾವಣಗೆರೆ ಉಪಚುನಾವಣೆ: BJP ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಮೆರವಣಿಗೆಯಲ್ಲಿ BSY ಭಾಗಿ

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ ಕಣ ದಿನೇದಿನೇ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಇಂದು ನಾಮಪತ್ರ ಸಲ್ಲಿಸಿದರು.

ಮೆರವಣಿಗೆಗೂ ಮುನ್ನ ಪತ್ನಿ ಹಾಗೂ ಬಿಜೆಪಿ ಮುಖಂಡರೊಂದಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದರು. ಬಳಿಕ ದುರ್ಗಾಂಬಿಕಾ ದೇವಸ್ಥಾನದಿಂದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರು ಭಾಗವಹಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಶ್ರೀನಿವಾಸ್ ಕರಿಯಪ್ಪ, ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬದಲಾವಣೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಹಮಾಲಿ ಕಾರ್ಮಿಕನ ಮಗನೂ ವಿಧಾನಸಭೆಗೆ ಪ್ರವೇಶ ಮಾಡುವ ಕಾಲ ಬಂದಿದೆಎಂದು ಹೇಳಿದರು.

ತಮ್ಮ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷವನ್ನೇ ಗುರುತಿಸಿದ ಅವರು, ಬಿಜೆಪಿ ಬಾರಿ ಗೆಲುವು ಸಾಧಿಸಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು. ಬಿಜೆಪಿಗೆ ಮತದಾನ ಮಾಡಲು ಕಾರ್ಯಕರ್ತರು ಮತ್ತು ಸಾರ್ವಜನಿಕರು ಉತ್ಸುಕರಾಗಿದ್ದಾರೆ ಎಂದು ಹೇಳಿದ ಅವರು, ಕಾಂಗ್ರೆಸ್ ಒಳಜಗಳದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: 10,000 ಕಮರ್ಷಿಯಲ್ ಸಿಲಿಂಡರ್ ಪೂರೈಕೆ – ಕೆ.ಹೆಚ್. ಮುನಿಯಪ್ಪ

ಬೆಂಗಳೂರು: ರಾಜ್ಯದ ಹೋಟೆಲ್ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ ಸಿಕ್ಕಿದೆ. ಹೆಚ್ಚುವರಿಯಾಗಿ 1,000 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಇಂದು ಗ್ಯಾಸ್ ಕಂಪನಿಗಳು ಹಾಗೂ ಹೋಟೆಲ್ ಸಂಘದ ಜೊತೆ ಸಭೆ ನಡೆಸಿದ ಸಚಿವರು, ರಾಜ್ಯದಲ್ಲಿ ಈಗಾಗಲೇ ಪೂರೈಕೆ ಆಗುತ್ತಿರುವ ಸಿಲಿಂಡರ್‌ಗಳಿಗೆ ಹೆಚ್ಚುವರಿಯಾಗಿ 1,000 ಸಿಲಿಂಡರ್ ಸೇರಿಸಿ ಒಟ್ಟು 10,000 ಸಿಲಿಂಡರ್ ಪೂರೈಕೆ ಮಾಡುವುದಾಗಿ ಹೇಳಿದರು.

ಕಮರ್ಷಿಯಲ್ ಗ್ಯಾಸ್ ಬಳಕೆದಾರರಿಗೆ ನೋಂದಣಿ ಕಡ್ಡಾಯ ಮಾಡಲಾಗಿದೆ. ಗೇಲ್ ಕಂಪನಿಯಲ್ಲಿ ಒಂದು ವಾರದೊಳಗೆ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸದಿದ್ದರೆ ಗ್ಯಾಸ್ ಪೂರೈಕೆ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಕ್ರಮ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ 10,000 ಸಿಲಿಂಡರ್‌ಗಳನ್ನು ಹೋಟೆಲ್, ಡಾಬಾ, ಹಾಸ್ಟೆಲ್, ಇಂದಿರಾ ಕ್ಯಾಂಟೀನ್, ಪಿಜಿ ಸೇರಿದಂತೆ ವಿವಿಧ ವಲಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಕಳೆದ ವಾರ 1,000 ಸಿಲಿಂಡರ್‌ಗಳನ್ನು ಮಾತ್ರ ಹೋಟೆಲ್‌ಗಳಿಗೆ ನೀಡಲಾಗುತ್ತಿತ್ತು ಎಂದು ಮಾಹಿತಿ ನೀಡಿದರು.

ಮುಂದಿನ ಸೋಮವಾರ ಮತ್ತೆ ಹೋಟೆಲ್ ಮಾಲೀಕರ ಜೊತೆ ಸಭೆ ನಡೆಸಲಾಗುವುದು ಎಂದೂ ಹೇಳಿದರು. ಇನ್ನು ಹೋಟೆಲ್ ಮಾಲೀಕರ ವಿದ್ಯುತ್ ಬಿಲ್ ಕಡಿತದ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದ್ದು, ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಪ್ರತಿ ಯೂನಿಟ್‌ಗೆ 2 ರೂ. ಕಡಿಮೆ ಮಾಡುವಂತೆ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ.

error: Content is protected !!