ವರ್ಗಾವಣೆ ದಂಧೆಯಾಗಿ ಬದಲಾಗಿದೆ: ಸಚಿವ ಬಸವರಾಜ ರಾಯರೆಡ್ಡಿ
ಲಕ್ಷ್ಮೇಶ್ವರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರ ಸಂಭ್ರಮ, ಸಡಗರ ಹಾಗೂ ದೇಶಭಕ್ತಿ ಭಾವನೆಯೊಂದಿಗೆ ಆಚರಿಸಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ. ಪ್ರಕಾಶ ಹೊಸಮನಿ, ದೇವಣ್ಣ ಬಳಿಗಾರ, ಮಾದೇವಪ್ಪ ಅಣ್ಣಿಗೇರಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಆಡಳಿತಾಧಿಕಾರಿ ಹಾಗೂ ಇಒ ಮಂಜುಳಾ ಹಕಾರಿ ಧ್ವಜಾರೋಹಣ ನೆರವೇರಿಸಿದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ, ಕೃಷ್ಣಪ್ಪ ಧರ್ಮರ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.
ನ್ಯಾಯಾಲಯದ ಆವರಣದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಭರತಯೋಗೀಶ ಕರಗುದರಿ ಧ್ವಜಾರೋಹಣ ನೆರವೇರಿಸಿದರು. ನ್ಯಾಯವಾದಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನಗರ ಭೂ-ಮಾಪನ ಕಚೇರಿಯಲ್ಲಿ ಭೂ-ಮಾಪನ ಅಧಿಕಾರಿ ವಿದ್ಯಾ ತಳೇಕರ ಹಾಗೂ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿ.ಎಸ್. ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಕಚೇರಿ ಸಿಬ್ಬಂದಿ ಹಾಗೂ ಮಾಜಿ ಸೈನಿಕರು ಭಾಗವಹಿಸಿದ್ದರು.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ನಾಗರಾಜ ಗಡದ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಶ್ರೀಕಾಂತ ಕಾಟೇವಾಲೆ ಹಾಗೂ ಪಟ್ಟಣದ ಗಾಂಧಿ ಮಂದಿರದಲ್ಲಿ ಹಿರಿಯ ವರ್ತಕ ಭರತರಾಜ ಬರಿಗಾಲಿ ಧ್ವಜಾರೋಹಣ ನೆರವೇರಿಸಿದರು.
ಶಾಲೆಯ ಹಳೆಯ ವಿದ್ಯಾರ್ಥಿಯಿಂದ ಧ್ವಜಾರೋಹಣ
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಲೋಕಾಯುಕ್ತ ನ್ಯಾಯಾಧೀಶ ರಮಾಕಾಂತ ಚವ್ಹಾಣ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಹಳೆಯ ವಿದ್ಯಾರ್ಥಿಯೊಬ್ಬರು ರಾಷ್ಟ್ರೀಯ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಎಲ್ಲ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಹಾಗೂ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ, ದೇಶಭಕ್ತಿ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿಯೂ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
“ಏ ಎಕ್ಕಾ… ಅತ್ತಿ ರೊಟ್ಟಿ ತಗೊಂಡು ಬಂದೀನಿ, ತಗೋರಿ!”
ವಿಜಯಸಾಕ್ಷಿ ಸುದ್ದಿ, ನರೇಗಲ್ಲ: “ಏ ಎಕ್ಕಾ… ಅತ್ತಿ ರೊಟ್ಟಿ ತಗೊಂಡು ಬಂದೀನಿ, ತಗೋರಿ…” — ಹಬ್ಬದ ದಿನ ಮನೆ ಬಾಗಿಲಿಗೆ ಬಂದು ಆತ್ಮೀಯತೆಯಿಂದ ರೊಟ್ಟಿ ನೀಡುವ ಈ ಮಾತುಗಳು ನರೇಗಲ್ಲ ಪಟ್ಟಣ ಸೇರಿದಂತೆ ಹೋಬಳಿಯ ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ಕೇಳಿಬಂದವು. ಕೈಯಲ್ಲಿ ರೊಟ್ಟಿ-ಪಲ್ಯದ ಬುತ್ತಿ ಹಿಡಿದು ಮನೆ ಮನೆಗೆ ತೆರಳಿದ ಮಹಿಳೆಯರು, ಮಕ್ಕಳು ಪರಸ್ಪರ ರೊಟ್ಟಿ ವಿನಿಮಯ ಮಾಡಿಕೊಂಡು ರೊಟ್ಟಿ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಉತ್ತರ ಕರ್ನಾಟಕದ ಮಹಿಳೆಯರ ಅಚ್ಚುಮೆಚ್ಚಿನ ಹಬ್ಬವಾದ ರೊಟ್ಟಿ ಪಂಚಮಿ, ಆಧುನಿಕ ಜೀವನಶೈಲಿಯ ನಡುವೆಯೂ ತನ್ನ ಮಣ್ಣಿನ ಸೊಗಡನ್ನು ಕಳೆದುಕೊಂಡಿಲ್ಲ. ಕಳೆದ ಒಂದು ವಾರದಿಂದಲೇ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದ ಮಹಿಳೆಯರು ಶುಕ್ರವಾರ ಮುಂಜಾನೆಯಿಂದಲೇ ವಿವಿಧ ಬಗೆಯ ರೊಟ್ಟಿ, ಚಪಾತಿ, ಪಲ್ಯ ಹಾಗೂ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ಧಪಡಿಸಿ ಬಂಧು-ಬಳಗ ಹಾಗೂ ನೆರೆಹೊರೆಯವರ ಮನೆಗಳಿಗೆ ಕೊಂಡೊಯ್ದು ಹಂಚಿದರು.
ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಎಳ್ಳು ರೊಟ್ಟಿ, ಚಪಾತಿ, ಉಂಡಿ ಸೇರಿದಂತೆ ಹಲವು ಬಗೆಯ ತಿನಿಸುಗಳೊಂದಿಗೆ ಹೆಸರುಕಾಳು, ಮಡಿಕೆಕಾಳು, ಬದನೆಕಾಯಿ, ಹಿಟ್ಟಿನ ಪಲ್ಯ, ಮೆಂತೆಪಲ್ಯ, ಮೂಲಂಗಿ ಸೊಪ್ಪು, ಹಕ್ಕರಕಿ, ಸವತೆಕಾಯಿ, ಗಜ್ಜರಿ ಸೇರಿದಂತೆ ವಿವಿಧ ತರಕಾರಿ ಹಾಗೂ ಸೊಪ್ಪಿನ ಖಾದ್ಯಗಳು ಮನೆಗಳಲ್ಲಿ ಸಿದ್ಧಗೊಂಡಿದ್ದವು. ಮನೆಯ ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ರೊಟ್ಟಿ-ಪಲ್ಯಗಳನ್ನು ತಟ್ಟೆಗಳಲ್ಲಿ ಸಿಂಗರಿಸಿ ಹಂಚಲಾಯಿತು.
ತವರು ಮನೆಯಲ್ಲೇ ಹೆಚ್ಚಿದ ಸಂಭ್ರಮ
ರೊಟ್ಟಿ ಪಂಚಮಿ ಎಂದರೆ ಕೇವಲ ರೊಟ್ಟಿ ಹಂಚುವ ಹಬ್ಬವಲ್ಲ. ಮದುವೆಯಾಗಿ ತವರು ಮನೆಗೆ ಬಂದ ಹೆಣ್ಣುಮಕ್ಕಳು ಸಹೋದರಿಯರು, ಅತ್ತೆ-ಸೊಸೆಯರು ಹಾಗೂ ಬಂಧುಗಳೊಂದಿಗೆ ಸೇರಿ ಅಡುಗೆ ತಯಾರಿಸಿ, ಪರಸ್ಪರ ಮನೆಗಳಿಗೆ ತೆರಳಿ ರೊಟ್ಟಿ ಹಂಚುವುದು ಈ ಹಬ್ಬದ ವಿಶೇಷತೆ.
ಸಮೀಪದ ಜಕ್ಕಲಿ ಗ್ರಾಮದಲ್ಲಿಯೂ ಮಹಿಳೆಯರು ಹಾಗೂ ಮಕ್ಕಳು ಹೊಸ ಉಡುಪು ಧರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಕೈಯಲ್ಲಿ ರೊಟ್ಟಿ-ಪಲ್ಯದ ಬುತ್ತಿ ಹಿಡಿದು ಮುಂಜಾನೆಯಿಂದಲೇ ಮನೆ ಮನೆಗೆ ತೆರಳಿದ ಮಹಿಳೆಯರ ದೃಶ್ಯ ಗ್ರಾಮೀಣ ಬದುಕಿನ ಆತ್ಮೀಯತೆಯನ್ನು ಬಿಂಬಿಸಿತು.
ಒಂದು ತಟ್ಟೆ ರೊಟ್ಟಿ… ಹಲವು ಮನೆಗಳ ಬಾಗಿಲು!
ಮೊಬೈಲ್, ಸಾಮಾಜಿಕ ಜಾಲತಾಣ ಹಾಗೂ ವೇಗದ ಜೀವನದ ನಡುವೆ ನೆರೆಹೊರೆಯವರೊಂದಿಗೆ ನೇರವಾಗಿ ಬೆರೆಯುವ ಸಂದರ್ಭಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ರೊಟ್ಟಿ ಪಂಚಮಿ ಜನರನ್ನು ಮತ್ತೆ ಮನೆಗಳಿಂದ ಹೊರಗೆ ಕರೆತರುತ್ತಿದೆ. ಒಂದು ತಟ್ಟೆ ರೊಟ್ಟಿಯ ನೆಪದಲ್ಲಿ ಹಲವು ಮನೆಗಳ ಬಾಗಿಲು ತಟ್ಟುವ ಮೂಲಕ ಹಳೆಯ ಪರಿಚಯಗಳು ಗಟ್ಟಿಯಾಗುತ್ತಿವೆ; ಹೊಸ ಸಂಬಂಧಗಳೂ ಬೆಸೆಯುತ್ತಿವೆ.
ಮಕ್ಕಳಿಗೆ ಸಂಸ್ಕೃತಿಯ ಪಾಠ
ರೊಟ್ಟಿ ಪಂಚಮಿ ಕೇವಲ ಆಹಾರ ಹಂಚಿಕೆಯ ಆಚರಣೆಯಲ್ಲ; ಇದು ಉತ್ತರ ಕರ್ನಾಟಕದ ಆಹಾರ ಪದ್ಧತಿ, ಸಂಸ್ಕೃತಿ ಹಾಗೂ ಗ್ರಾಮೀಣ ಬದುಕಿನ ಸೊಗಡನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸೇತುವೆಯಾಗಿದೆ. ಅಜ್ಜ-ಅಜ್ಜಿಯರು ಹಾಗೂ ತಾಯಿ-ತಂದೆಯರು ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ಮಕ್ಕಳು ಕಣ್ಣಾರೆ ನೋಡಿ ಅದರ ಮಹತ್ವ ಅರಿಯುವ ಅವಕಾಶವೂ ಇದರಿಂದ ದೊರೆಯುತ್ತದೆ.
ಗ್ರಾಮದ ಮೆಣಸಗಿಯವರ ಓಣಿಯಲ್ಲಿ ಕೀರ್ತಿ ಮೆಣಸಗಿ, ವೈಷ್ಣವಿ ಹೂಗಾರ, ಲಕ್ಷ್ಮೀ ಮಡಿವಾಳರ, ಸಿದ್ದಲಿಂಗವ್ವ ಅಂಗಡಿ ಸೇರಿದಂತೆ ಅನೇಕ ಮಹಿಳೆಯರು ಹಾಗೂ ಮಕ್ಕಳು ರೊಟ್ಟಿ ಪಂಚಮಿ ಸಂಭ್ರಮದಲ್ಲಿ ಪಾಲ್ಗೊಂಡು, ಪರಸ್ಪರ ರೊಟ್ಟಿ, ಪಲ್ಯ ಹಾಗೂ ವಿವಿಧ ಖಾದ್ಯಗಳನ್ನು ಹಂಚಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
“ರೊಟ್ಟಿ ಕೊಟ್ಟರೆ ಸಂಬಂಧ ಬೆಳೆಯುತ್ತದೆ; ಮನೆಯಿಂದ ಮನೆಗೆ ಹೋದರೆ ಮನಸ್ಸುಗಳು ಹತ್ತಿರವಾಗುತ್ತವೆ” ಎಂಬ ಸರಳ ಗ್ರಾಮೀಣ ಬದುಕಿನ ಸಂದೇಶವನ್ನು ಸಾರಿದ ರೊಟ್ಟಿ ಪಂಚಮಿ, ಆಧುನಿಕತೆಯ ನಡುವೆಯೂ ಉತ್ತರ ಕರ್ನಾಟಕದ ಮಣ್ಣಿನ ಸೊಗಡು, ಆತ್ಮೀಯತೆ ಹಾಗೂ ಸಂಬಂಧಗಳ ಬೆಸುಗೆಯನ್ನು ಜೀವಂತವಾಗಿರಿಸಿತು.
“ಹಿಂದಿನ ಕಾಲದಲ್ಲಿ ರೊಟ್ಟಿ ಪಂಚಮಿ ಎಂದರೆ ಇಡೀ ಊರಿನ ಮನೆ ಮನೆಗೂ ಹೋಗಿ ರೊಟ್ಟಿ ಹಂಚಿಕೊಂಡು ಬರುವ ಸಂಭ್ರಮ ಇತ್ತು. ಕಾಲ ಬದಲಾಗಿದ್ದರೂ ಈ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಾವು ಹಬ್ಬ ಆಚರಿಸುತ್ತಿದ್ದೇವೆ.”
— ಹಿರಿಯ ಮಹಿಳೆಯರು
ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರ ಸಂಭ್ರಮ ಹಾಗೂ ದೇಶಭಕ್ತಿ ಭಾವನೆಯೊಂದಿಗೆ ಆಚರಿಸಲಾಯಿತು.
ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಗ್ರಂಥಾಲಯದಲ್ಲಿ ಪಟ್ಟಣ ಪಂಚಾಯಿತಿಯ ಕಿರಿಯ ಅಭಿಯಂತರ ಜಡೆಪ್ಪ ನಾಡಿಗರ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸಿ, ದೇಶದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಶಿಸ್ತು, ಸಂಯಮ ಹಾಗೂ ಶಾಂತಿಯಿಂದ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇಶದ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಎಂ.ಎಚ್. ಸೀತಿಮನಿ, ರಮೇಶ ಹಲಗಿ, ಶಂಕ್ರಪ್ಪ ದೊಡ್ಡಣ್ಣವರ, ಮಂಜುನಾಥ ಕೊಂಡಗುರಿ, ನೀಲಪ್ಪ ಚಳ್ಳಮರದ, ರಕ್ಷಿತ ಎಲ್., ಆರೀಫಬೇಗ ಮಿರ್ಜಾ, ನಾಜೀಮಾ ಬೇಲೆರಿ, ಎ.ಎಸ್. ಮೆಣಸಗಿ, ನೀರು ಸರಬರಾಜು ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ಉಪ ತಹಶೀಲ್ದಾರ್ ನಾಡ ಕಚೇರಿ, ಗ್ರಂಥಾಲಯ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿಯೂ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಅಂಗನವಾಡಿ ಕಾರ್ಯಕರ್ತರು, ಮಕ್ಕಳು, ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕರು, ಪೊಲೀಸ್ ಸಿಬ್ಬಂದಿ ಮತ್ತು ಪಟ್ಟಣದ ಗ್ರಾಮಸ್ಥರು ಭಾಗವಹಿಸಿದ್ದರು.
ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ: ತಹಸೀಲ್ದಾರ್ ರಾಘವೇಂದ್ರ
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಜಾತಿ, ಧರ್ಮ, ಭಾಷೆಗಳನ್ನು ಮೀರಿ ಸುಖ, ಶಾಂತಿ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವು ಕರೆ ನೀಡಿದರು.
ಶನಿವಾರ ಶಿರಹಟ್ಟಿಯ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ಯುವಶಕ್ತಿ ಹಾಗೂ ವಿದ್ಯಾರ್ಥಿಗಳು ದೇಶಭಕ್ತಿ, ನಿಷ್ಠೆ, ಶಿಸ್ತು, ಪ್ರಜ್ಞೆ, ವಿಶ್ವಾಸ ಮತ್ತು ಸ್ವಾವಲಂಬನೆಯಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಹಸ್ರಾರು ವರ್ಷಗಳ ಗುಲಾಮಗಿರಿಯಿಂದ ಹೊರಬಂದು, ಲಕ್ಷಾಂತರ ಜನರ ತ್ಯಾಗ ಮತ್ತು ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ರಕ್ಷಿಸಿ, ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಆ.15ರ ಸ್ವಾತಂತ್ರ್ಯ ದಿನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಹಾಗೂ ಸಂಭ್ರಮದ ದಿನವಾಗಿದೆ. ಬ್ರಿಟಿಷರ ಆಳ್ವಿಕೆಯಿಂದ ದೇಶವನ್ನು ಮುಕ್ತಗೊಳಿಸಲು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರನ್ನು ಸ್ಮರಿಸುವ ಸುದಿನ ಇದಾಗಿದೆ. ಅನೇಕರು ಕುಟುಂಬ, ಆಸ್ತಿ, ಸುಖ-ಸಂತೋಷಗಳನ್ನು ತ್ಯಜಿಸಿ ಹೋರಾಟ ನಡೆಸಿದರೆ, ಕೆಲವರು ಸೆರೆವಾಸ ಅನುಭವಿಸಿದರು. ಇನ್ನು ಕೆಲವರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದರು. ಅವರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮದ ಫಲವಾಗಿ ಇಂದು ನಾವು ಸ್ವತಂತ್ರ ರಾಷ್ಟ್ರದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಕೇವಲ ಧ್ವಜಾರೋಹಣ ಹಾಗೂ ಸಿಹಿ ವಿತರಿಸುವ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಮಹತ್ವವನ್ನು ಯುವಜನರಿಗೆ ತಿಳಿಸುವುದು, ದೇಶದ ಏಕತೆ, ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಕಾಪಾಡುವ ಸಂಕಲ್ಪ ಮಾಡುವುದು ಈ ದಿನದ ನಿಜವಾದ ಆಶಯವಾಗಬೇಕು. ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕ ಭೇದಗಳನ್ನು ಬದಿಗೊತ್ತಿ ದೇಶದ ಹಿತವೇ ಮುಖ್ಯ ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬರೂ ಮುನ್ನಡೆಯಬೇಕು. ಮಹನೀಯರು ಕಂಡ ಕನಸಿನ ಭಾರತ ನಿರ್ಮಿಸುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ ಎಂದರು.
ನಂತರ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಾಸಕ ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಬಿ.ವಿ. ನ್ಯಾಮಗೌಡ, ಬಿಇಒ ಶಿವರಾಜ ಸಿಮಿಕೇರಿ, ತಾಪಂ ಇಒ ರಾಮಣ್ಣ ದೊಡ್ಡಮನಿ, ಪಪಂ ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ, ವಿ.ಎ. ಮುಳಗುಂದಮಠ, ಬಸವರಾಜ ಕಾತರಾಳ, ಸಂತೋಷ ಅಸ್ಕಿ, ಎಚ್.ಜೆ. ಬಾವಿಕಟ್ಟಿ, ವೀರಯ್ಯ ಮಠಪತಿ, ಗಿರಿಜಾ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇಶಪ್ರೇಮದೊಂದಿಗೆ ಸಾಮರಸ್ಯದಿಂದ ಬಾಳೋಣ: ಸುರೇಶ ಹಳ್ಳಿಕೇರಿ
ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹಿರಿಯರನ್ನು ಸ್ಮರಿಸುವ ದಿನವೇ ಆಗಸ್ಟ್ 15. ದೇಶಕ್ಕಾಗಿ ಹೋರಾಡಿದ ಮಹನೀಯರ ದೇಶಪ್ರೇಮವನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು, ಈ ದಿನ ಭಾರತೀಯರಿಗೆ ಸುದಿನವಾಗಿದೆ ಎಂದು ಗೃಹರಕ್ಷಕ ದಳದ ನರೇಗಲ್ಲ ಘಟಕದ ಅಧಿಕಾರಿ ಸುರೇಶ ಹಳ್ಳಿಕೇರಿ ಹೇಳಿದರು.
ನರೇಗಲ್ಲದ ಗೃಹರಕ್ಷಕ ದಳದ ಕಾರ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಿಡಗುಂದಿ ಅನ್ನದಾನೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಬಿ. ಕೊಪ್ಪದ ಮಾತನಾಡಿ, ಸೇವೆ ಮಾಡುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಆದರೆ ವೃತ್ತಿಯ ಕರ್ತವ್ಯದ ಜೊತೆಗೆ ದೇಶಸೇವೆಯನ್ನೂ ಮಾಡುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಯ ಸೇವೆ ಶ್ಲಾಘನೀಯ. ದೇಶದ ಶಾಂತಿ, ಸುರಕ್ಷತೆ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳದ ಸೇವೆ ಮಹತ್ವದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸದಸ್ಯರು ಸಮಾನತೆ, ಸಹೋದರತ್ವ ಹಾಗೂ ಸಾಮರಸ್ಯದೊಂದಿಗೆ ಬಾಳುವುದರ ಜೊತೆಗೆ ದೇಶದ ಪ್ರಗತಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಎಂ.ಬಿ. ಗೋಡಿ, ಪಿ.ಎಸ್. ಸಾಬಳೆ, ಜೆ.ಡಿ. ಬಂಡೀವಡ್ಡರ, ವಿ.ವಿ. ಇಟಗಿ, ಕೆ.ವಿ. ಹಾಳಕೇರಿ, ಎಸ್.ವೈ. ಕುಂಬಾರ, ಎಂ.ಬಿ. ಕಡೆತೋಟದ, ಎಸ್.ವಿ. ಮುಸಿಗೇರಿ, ಬಿ.ಬಿ. ನೆಲ್ಲೂರ, ಎ.ಬಿ. ಕುರುಡಗಿ, ವಿರೂಪಾಕ್ಷ ಇಟಗಿ, ಎಂ.ಕೆ. ಅರಮನಿ, ಎಸ್.ಬಿ. ಸವಡಿ ಸೇರಿದಂತೆ ಹಲವಾರು ಗೃಹರಕ್ಷಕ ದಳದ ಸಿಬ್ಬಂದಿ ಉಪಸ್ಥಿತರಿದ್ದರು.
ವಚನಕಾರ್ತಿಯರ ನುಡಿಯಲ್ಲಿ ಸಮಾನತೆಯ ದೀವಿ; ಡಾ. ನೀಲಮ್ಮತಾಯಿ ಅಸುಂಡಿ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಚನ ಸಾಹಿತ್ಯ ಕೇವಲ ಸಾಹಿತ್ಯದ ಪ್ರಕಾರವಲ್ಲ, ಅದು ಸಾಮಾಜಿಕ ಪರಿವರ್ತನೆಯ ಶಕ್ತಿಶಾಲಿ ಮಾಧ್ಯಮ. ವಚನಕಾರ್ತಿಯರು ತಮ್ಮ ಅಂತರಂಗದ ಅನುಭವ, ಆತ್ಮಾಭಿಮಾನ ಹಾಗೂ ವೈಚಾರಿಕ ಪ್ರಜ್ಞೆಯ ಮೂಲಕ ಅಸಮಾನತೆ, ಕಂದಾಚಾರ ಮತ್ತು ತಾರತಮ್ಯಗಳನ್ನು ಪ್ರಶ್ನಿಸಿ, ಸಮಾನತೆ ಹಾಗೂ ಮಾನವೀಯತೆಯ ದೀವಿಗೆಯನ್ನು ಬೆಳಗಿಸಿದ್ದಾರೆ ಎಂದು ಪೂಜ್ಯ ಶಿವಶರಣೆ ಡಾ. ನೀಲಮ್ಮತಾಯಿ ಅಸುಂಡಿ ಹೇಳಿದರು.
ಲಕ್ಷ್ಮೇಶ್ವರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ‘ಶ್ರಾವಣ ಸಂಜೆ’ ಕಾರ್ಯಕ್ರಮದಲ್ಲಿ ಶ್ರೀಮತಿ ಲಲಿತಾ ಕೆರಿಮನಿ ಹಾಗೂ ಶ್ರೀಮತಿ ಮೇಘಾ ಹುಕ್ಕೇರಿ ಸಂಪಾದಿಸಿರುವ ‘ಸಮಾನತೆ ಸಾರಿದ ವಚನಕಾರ್ತಿಯರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಚನಕಾರ್ತಿಯರ ನುಡಿಗಳು ಅಂದಿನ ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಲ್ಲದೆ, ಮಹಿಳೆಯ ಅಸ್ತಿತ್ವ, ಸ್ವಾಭಿಮಾನ ಹಾಗೂ ಆತ್ಮಗೌರವದ ಪ್ರತೀಕವಾಗಿವೆ. ತಮ್ಮ ಅನುಭವದ ನೆಲೆಯಲ್ಲಿ ಕಟ್ಟಿಕೊಟ್ಟ ವಿಚಾರಗಳನ್ನು ಕಾಲದ ಗಡಿಯನ್ನು ದಾಟಿಸಿ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿಸಿದ್ದಾರೆ. ಮಹಿಳೆಯರಿಗೆ ಸಮಾನ ಅವಕಾಶ, ಗೌರವ ಹಾಗೂ ಸ್ವಾತಂತ್ರ್ಯ ದೊರೆಯಬೇಕೆಂಬ ಆಶಯವನ್ನು ಅವರು ಶತಮಾನಗಳ ಹಿಂದೆಯೇ ಪ್ರತಿಪಾದಿಸಿದ್ದರು ಎಂದರು.
‘ಶ್ರಾವಣ ಸಂಜೆ’ ಕಾರ್ಯಕ್ರಮ ಎರಡು ದಶಕಗಳನ್ನು ಪೂರೈಸಿರುವ ಸವಿನೆನಪಿನಲ್ಲಿ ‘ಸಮಾನತೆ ಸಾರಿದ ವಚನಕಾರ್ತಿಯರು’ ಕೃತಿ ಹೊರತಂದಿರುವುದು ಅರ್ಥಪೂರ್ಣ ಹಾಗೂ ಅಭಿನಂದನೀಯ ಕಾರ್ಯವಾಗಿದೆ. ವಚನಕಾರ್ತಿಯರ ಚಿಂತನೆಗಳನ್ನು ಒಂದೆಡೆ ದಾಖಲಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಕೃತಿಯ ಸಂಪಾದಕರು ಸಾಹಿತ್ಯಿಕ ಹಾಗೂ ಸಾಮಾಜಿಕ ಹೊಣೆಗಾರಿಕೆ ಮೆರೆದಿದ್ದಾರೆ ಎಂದು ಡಾ. ನೀಲಮ್ಮತಾಯಿ ಅಸುಂಡಿ ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಮಾ ಮಹಾಜನಶೆಟ್ಟರ ಮಾತನಾಡಿ, ವಚನಕಾರ್ತಿಯರ ಸಾಹಿತ್ಯದಲ್ಲಿರುವ ವೈಚಾರಿಕತೆ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಕೃತಿ ಬಿಡುಗಡೆ ಸಮಾರಂಭದಲ್ಲಿ ಶಕುಂತಲಾ ತಟ್ಟಿ, ಕುಸುಮಾ ಮಲ್ಲಾಡದ, ನೀಲಕ್ಕ ಬೂದಿಹಾಳ, ಕಾಂಚನಮಾಲಾ ಹಸರೆಡ್ಡಿ, ಲತಾ ಎಸ್. ತಟ್ಟಿ, ಅರುಂಧತಿ ಬಿಂಕದಕಟ್ಟಿ, ನಿರ್ಮಲಾ ಅರಳಿ, ಶಾಂತಾ ಗುಳಗಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಚನಗಳ ವೈಚಾರಿಕ ಪರಂಪರೆ, ಮಹಿಳಾ ಸಮಾನತೆಯ ಆಶಯ ಹಾಗೂ ಸಾಮಾಜಿಕ ನ್ಯಾಯದ ಸಂದೇಶಗಳ ಕುರಿತು ಚಿಂತನ-ಮಂಥನ ನಡೆಯಿತು. ವಚನಕಾರ್ತಿಯರ ವಿಚಾರಧಾರೆ ಇಂದಿನ ಸಮಾಜದಲ್ಲಿ ಮತ್ತಷ್ಟು ಪ್ರಸ್ತುತವಾಗಿದ್ದು, ಅವರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಗಣ್ಯರು ಪ್ರತಿಪಾದಿಸಿದರು.
ಪೂಜ್ಯ ಶ್ರೀ ಸಿದ್ದೇಶ್ವರ ಸತ್ಸಂಗ ಬಳಗ, ಗದಗ ಜಿಲ್ಲಾ ಹಾಗೂ ಲಕ್ಷ್ಮೇಶ್ವರ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ರಾಜ-ರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಅಕ್ಕಮಹಾದೇವಿ ಬಳಗ, ಪ್ರೇಮಕ್ಕಾ ಅಭಿಮಾನ ಬಳಗ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಮಹಿಳಾ ಸಾಹಿತ್ಯವನ್ನು ಕೇವಲ ಮಹಿಳೆಯರ ಸಾಹಿತ್ಯವೆಂದು ಸೀಮಿತಗೊಳಿಸದೆ, ಅದು ಸಮಾಜದ ಸಮಗ್ರ ಚಿಂತನೆಯ ಭಾಗ ಎಂಬ ಅರಿವು ಮೂಡಿಸಬೇಕು.
— ಪ್ರತಿಮಾ ಮಹಾಜನಶೆಟ್ಟರ
ಕಾಂಗ್ರೆಸ್ ಸಂಪುಟದಲ್ಲಿ ‘ಭ್ರಷ್ಟರ ದರ್ಬಾರ್’: ವಿಜಯಕುಮಾರ ಗಡ್ಡಿ
ವಿಜಯಸಾಕ್ಷಿ ಸುದ್ದಿ, ಗದಗ: ಹಲವು ಸುತ್ತಿನ ಕಸರತ್ತು, ಚರ್ಚೆಗಳ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಹೊಸ ಸಂಪುಟದಲ್ಲಿ ಭ್ರಷ್ಟಾಚಾರ ಹಾಗೂ ಅಸಮರ್ಥತೆಯ ಆರೋಪ ಎದುರಿಸುತ್ತಿರುವವರಿಗೇ ಮಣೆ ಹಾಕಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಉದ್ಯಮಿದಾರ ವಿಜಯಕುಮಾರ ಗಡ್ಡಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ₹187 ಕೋಟಿ ಅಕ್ರಮದ ಆರೋಪ ಎದುರಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು ಕಾಂಗ್ರೆಸ್ ಸರ್ಕಾರದ ನಾಚಿಕೆಗೇಡಿತನಕ್ಕೆ ಸಾಕ್ಷಿ ಎಂದು ಟೀಕಿಸಿದ್ದಾರೆ.
“ಇಡೀ ರಾಜ್ಯದ ಜನರು ಛೀಮಾರಿ ಹಾಕಿದರೂ ಆರೋಪ ಎದುರಿಸುತ್ತಿರುವವರನ್ನೇ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ನಡೆ ಎಷ್ಟು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ.”
— ವಿಜಯಕುಮಾರ ಗಡ್ಡಿ, ಬಿಜೆಪಿ ಮುಖಂಡ ಹಾಗೂ ಉದ್ಯಮಿದಾರ
ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿ ದುರುಪಯೋಗ ಹಾಗೂ ಹೆಲ್ತ್ ಕಿಟ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿಬಂದಿದ್ದರೂ ಸಂತೋಷ್ ಲಾಡ್ ಅವರನ್ನು ಮತ್ತೆ ಕಾರ್ಮಿಕ ಸಚಿವರನ್ನಾಗಿ ನೇಮಕ ಮಾಡಿರುವುದು ರಾಜ್ಯದ ಜನರ ದೌರ್ಭಾಗ್ಯ ಎಂದು ಅವರು ಟೀಕಿಸಿದ್ದಾರೆ.
ದುಡ್ಡು ನೀಡಿದವರಿಗೆ ಮಾತ್ರ ಮನೆ ಎಂಬ ರೀತಿಯಲ್ಲಿ ‘ಮನಿ ಇದ್ದರೆ ಮಾತ್ರ ಮನೆ’ ಎಂಬ ಆರೋಪಕ್ಕೆ ಗುರಿಯಾಗಿದ್ದ ಜಮೀರ್ ಅಹ್ಮದ್ ಖಾನ್ ಅವರಿಗೆ ಮತ್ತೆ ವಸತಿ ಖಾತೆ ನೀಡಿರುವುದನ್ನು ಪ್ರಶ್ನಿಸಿರುವ ಗಡ್ಡಿ, ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಆತ್ಮಗೌರವವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪೂರ್ವಭಾವಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಕುರಿತು ಟೀಕೆಗಳು ಕೇಳಿಬಂದಿದ್ದರೂ ಎಸ್.ಎಸ್. ಮಧು ಬಂಗಾರಪ್ಪ ಅವರಿಗೆ ಮತ್ತೆ ಶಿಕ್ಷಣ ಖಾತೆ ನೀಡಿರುವುದು ರಾಜ್ಯದ ಸುಶಿಕ್ಷಿತರಿಗೆ ತಲೆತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಸಚಿವ ಸಂಪುಟದ ಬೆಳವಣಿಗೆಗಳನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಈ ಸರ್ಕಾರವನ್ನು ಕಿತ್ತೊಗೆಯಲು ಜನರು ಉತ್ಸುಕರಾಗಿದ್ದಾರೆ ಎಂದು ವಿಜಯಕುಮಾರ ಗಡ್ಡಿ ತಿಳಿಸಿದ್ದಾರೆ.

