Home Blog Page 14

ದುರಾಡಳಿತದಿಂದ ಇಡೀ ದೇಶದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಬೆಂಗಳೂರಿನ ಜನರು ನಲುಗಿ ಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು. ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಏನನ್ನೂ ಮಾಡುತ್ತಿಲ್ಲ. ಬದಲಿಗೆ ಯೋಜನೆಗಳ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿದೆ. ಮಳೆ ಬಂದರೆ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಲ್ಲುತ್ತಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸರ್ಕಾರದ ಬಳಿ ಹಣ ಇಲ್ಲವಂತೆ, ಆದರೆ ದೋಚುವುದಕ್ಕೆ ಯೋಜನೆಗಳ ಮೇಲೆ ಯೋಜನೆಗಳನ್ನು ರೂಪಿಸಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಸಚಿವರು ದೂರಿದರು.

ಈ ಸರ್ಕಾರದ ಯೋಗ್ಯತೆಗೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವುದಕ್ಕೆ ಆಗುತ್ತಿಲ್ಲ. ಬೀದಿ ಬೀದಿಯಲ್ಲಿ ರಾಶಿಗಟ್ಟಲೆ ಕಸ ಬಿದ್ದಿದೆ. ಕೆಟ್ಟ ಮತ್ತು ದುರಾಡಳಿತದಿಂದ ಇಡೀ ದೇಶದಲ್ಲಿ ಕರ್ನಾಟಕಕ್ಕೆ ಅತ್ಯಂತ ಕೆಟ್ಟ ಹೆಸರು ಬಂದಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಡ ಜನರಿಗೆ ಒಳ್ಳೆಯದು ಮಾಡುವ ಉದ್ದೇಶ ಈ ಸರ್ಕಾರಕ್ಕೆ ಇಲ್ಲ. ಗ್ಯಾರೆಂಟಿಗಳನ್ನು ಕೊಟ್ಟಹಾಗೆ ಕೊಟ್ಟು ಇದೀಗ ಅದರಲ್ಲಿ ಮುಕ್ಕಾಲು ಪಾಲು ಜನರನ್ನು ಕಿತ್ತು ಹಾಕುವ ಸಂಚು ನಡೆಸಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ಎಂದು ₹10,000 ನೀಡುವ ಯೋಜನೆ ರೂಪಿಸಿದ್ದೆ. ನನ್ನ ಸರ್ಕಾರ ಹೋದ ಮೇಲೆ ಆ ಯೋಜನೆಯನ್ನು ಕೈ ಬಿಡಲಾಯಿತು.

ಬಡ ವ್ಯಾಪಾರಿಗಳು ಎಷ್ಟೇ ಗೋಗರಿದರೂ ಆ ಯೋಜನೆಯನ್ನು ಪುನಾ ಜಾರಿಗೆ ತರಲಿಲ್ಲ. ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಎಂಬ ಯೋಜನೆಯ ಹೆಸರಿನಲ್ಲಿ ಇಂತಹದೇ ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಆ ಮೂಲಕ ಬಡ ವ್ಯಾಪಾರಿಗಳಿಗೆ ₹50,000 ಸಾಲ ನೀಡುತ್ತಿದೆ ಎಂದು ಸಚಿವರು ಹೇಳಿದರು.

ನನಗೊಂದು ಅವಕಾಶ ಕೊಡಿ. ಇದೆಲ್ಲವನ್ನು ಸರಿ ಮಾಡುವ ಕೆಲಸ ಮಾಡುತ್ತೇನೆ. ಬಡವರಿಗೆ ನಿವೇಶನ ಕೊಟ್ಟು ಎಷ್ಟೋ ಕಾಲವಾಯಿತು. ರಸ್ತೆಗಳ ಗುಂಡಿಗಳನ್ನು ದಿನವೂ ಜನರು ನೋಡಿ ಕಷ್ಟಕಾರ್ಪಣ್ಯ ಅನುಭವಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಪಾಲಿಕೆ ಸದಸ್ಯರು ಇಲ್ಲವಾಗಿ ಎಷ್ಟೋ ವರ್ಷ ಆಯಿತು. ಕೊನೆ ಪಕ್ಷ ಪಾಲಿಕೆ ಸದಸ್ಯರಾದರು ಇದ್ದಿದ್ದರೆ ಅವರ ಮನೆಗೆ ಹೋಗಿ ಕಷ್ಟ ಹೇಳಿಕೊಳ್ಳುತ್ತಿದ್ದರು. ಗ್ರೇಟರ್ ಬೆಂಗಳೂರು ಮಾಡಿದ್ದಾರೆ, ಆದರೆ ಚುನಾವಣೆ ನಡೆಸುವ ಧೈರ್ಯ ಈ ಸರ್ಕಾರಕ್ಕೆ ಇಲ್ಲ. ಏನಾದರೂ ಮಾಡಿ ಮುಂದಕ್ಕೆ ಹಾಕಿಸುವ ಹುನ್ನಾರ ಮಾಡುತ್ತಲೇ ಇದ್ದಾರೆ. ಹೀಗಾದರೆ ಬೆಂಗಳೂರಿನ ಪರಿಸ್ಥಿತಿ ಎಲ್ಲಿಗೆ ಬರುತ್ತದೆ ಎಂಬುದನ್ನು ಜನತೆ ಯೋಚಿಸಬೇಕು ಎಂದು ಸಚಿವರು ಹೇಳಿದರು.

ಅಖಂಡ ಮನೆಗೆ ವಾಪಸ್ ಬಂದಿದ್ದಾರೆ;

ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡ ಸಚಿವ ಕುಮಾರಸ್ವಾಮಿ ಅವರು, ಅಖಂಡ ಶ್ರೀನಿವಾಸಮೂರ್ತಿ ಅವರು ತಮ್ಮ ಸ್ವಂತ ಮನೆಗೆ ವಾಪಸ್ಸಾಗಿದ್ದಾರೆ. ಅವರನ್ನು ಹೃದಯಪೂರ್ವಕವಾಗಿ ಪಕ್ಷಕ್ಕೆ ಬರಮಾಡಿಕೊಡಿದ್ದೇನೆ. ಮುಂದಿನ ದಿನಗಳಲ್ಲಿ ಅವರು ಬೆಂಗಳೂರು ಸೇರಿ ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಕೆಲಸ ಮಾಡುತ್ತಾರೆ ಎಂದರು.

ಅಖಂಡ ಶ್ರೀನಿವಾಸ್ ಮೂರ್ತಿ ಅವರನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಏನೆಲ್ಲಾ ಕಹಿ ಘಟನೆಗಳು ನಡೆದವು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಈ ಬಹಿರಂಗ ಸಭೆಯಲ್ಲಿ ನಾನು ಚರ್ಚೆ ಮಾಡಲು ಬಯಸುವುದಿಲ್ಲ. ಅವರ ಮನೆಗೆ ಬೆಂಕಿ ಹಾಕಲಾಯಿತು. ಆದರೂ ಅವರು ಎದೆಗುಂದದೆ ತನ್ನನ್ನು ನಂಬಿದ ಕಾರ್ಯಕರ್ತರ ಜೊತೆ ನಿಂತರು. ಕೆಲವರು ಪರಿಸ್ಥಿತಿಯ ದುರ್ಲಾಭ ಪಡೆಯಲು ಪ್ರಯತ್ನಿಸಿದರು ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಪುಲಕೇಶಿ ನಗರ ವಿಶಿಷ್ಟವಾದ ಕ್ಷೇತ್ರ. ಈ ಕ್ಷೇತ್ರಕ್ಕೂ ನನಗೂ ಅವಿನ ಭಾವ ಸಂಬಂಧ ಇದೆ. ಕಾರ್ಯಕ್ರಮ ನಡೆಯುತ್ತಿರುವ ಪಿಳ್ಳಣ್ಣ ಗಾರ್ಡನ್ ನ ಈ ಕ್ರೀಡಾಂಗಣ ನನಗೆ ಚಿರಪರಿಚಿತ. ಎಷ್ಟೋ ಸಂದರ್ಭದಲ್ಲಿ ಇಲ್ಲಿನ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಜನರನ್ನು ಭೇಟಿಯಾಗಿದ್ದೇನೆ. ಹೀಗಾಗಿ ಪಕ್ಷವನ್ನು ಸಂಘಟಿಸುವುದು ಸವಾಲಿನ ಕೆಲಸವಲ್ಲ. ಅಖಂಡ ಶ್ರೀನಿವಾಸ ಮೂರ್ತಿ ಸಮರ್ಥವಾಗಿ ಕಾರ್ಯಕರ್ತರನ್ನು ಸಂಘಟಿಸಲಿದ್ದಾರೆ ಎಂದು ಸಚಿವರು ಹೇಳಿದರು.

ನಾನು ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ರಾಷ್ಟ್ರಕವಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ತತ್ವದ ಅಡಿಯಲ್ಲಿ ರಾಜಕಾರಣ ಮಾಡುವವನು. ಎಲ್ಲರನ್ನೂ ಒಳಗೊಂಡು ಉತ್ತಮ ಸಮಾಜಕ್ಕಾಗಿ ದುಡಿಮೆ ಮಾಡುವ ಉದ್ದೇಶ ನನ್ನದು. ನನ್ನ ಇಡೀ ಜೀವಮಾನದ ಉದ್ದಕ್ಕೂ ಇದನ್ನೇ ಮಾಡಿಕೊಂಡು ಬಂದಿದ್ದೇನೆ ಎಂದರು ಕೇಂದ್ರ ಸಚಿವರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ ಅವರು, ಜೆಡಿಎಸ್ ಪಕ್ಷಕ್ಕೆ ನಾನು ಹೊರಗಿನವನಲ್ಲ. ಯಾರದೋ ಮಾತು ಕೇಳಿ ಹೊರಕ್ಕೆ ಹೋಗಬೇಕಾಯಿತು. ಅದರಿಂದ ಉಂಟಾದ ಕಷ್ಟಗಳೇನು ಎಂಬುದು ನನಗೆ ಅರಿವಾಗಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ನನ್ನ ನಾಯಕರು. ಅವರಲ್ಲಿ ವಿಶ್ವಾಸವಿರಿಸಿ ಜೆಡಿಎಸ್ ಸೇರಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಮಾಜಿ ಶಾಸಕರು ಹಾಗೂ ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್ಎಂ ರಮೇಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೊತೆಗೆ ಕ್ಷೇತ್ರದ ಹಿರಿಯ ಮುಖಂಡರು ಹಾಗೂ ಅಸಂಖ್ಯಾತ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಸಂಖ್ಯಾತ ಬೆಂಬಲಿಗರು ಜೆಡಿಎಸ್ ಪಕ್ಷವನ್ನು ಸೇರಿದರು.

ರಾಜ್ಯದಲ್ಲಿ ಈ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ಆರಂಭ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಪ್ರಸಕ್ತ ವರ್ಷದಿಂದಲೇ ಪುನರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ನಾಯಕತ್ವವನ್ನು ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿ ಚುನಾವಣೆಗಳನ್ನು ಮತ್ತೆ ಆರಂಭಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿ ತಾವು ಅಧಿಕಾರ ಸ್ವೀಕರಿಸಿದ ಸಂದರ್ಭವನ್ನು ಡಿ.ಕೆ. ಶಿವಕುಮಾರ್ ಸ್ಮರಿಸಿದರು.

2020ರ ಮಾರ್ಚ್ 10ರಂದು ಸೋನಿಯಾ ಗಾಂಧಿ ಅವರು ನನಗೆ ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿ ನೀಡಿದ್ದರು. ಆದರೆ ಕೋವಿಡ್ ಕಾರಣದಿಂದ ಅದ್ದೂರಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಜೂಮ್ ಸಭೆಯ ಮೂಲಕವೇ ನಾನು ಅಧಿಕಾರ ಸ್ವೀಕರಿಸಿದ್ದೆ. ನಿಮ್ಮೆಲ್ಲರ ವಿಶ್ವಾಸ ಮತ್ತು ಸಹಕಾರದಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ನಾನು ಮನುಷ್ಯನಾಗಿರುವುದರಿಂದ ನನ್ನಿಂದಲೂ ಕೆಲವು ತಪ್ಪುಗಳು ಆಗಿರಬಹುದು ಎಂದು ಹೇಳಿದರು.

ಕೋವಿಡ್ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಲಾಗಿತ್ತು. ಅಂದು ತಾವು ಮತ್ತು ಸಿದ್ದರಾಮಯ್ಯ ಸೇರಿ ಪಕ್ಷವನ್ನು ಬಲಪಡಿಸುವ ಸಂಕಲ್ಪ ಮಾಡಿದ್ದೆವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಪಕ್ಷದ ಸಂಘಟನೆಗೆ ಶಕ್ತಿ ತುಂಬಲು ಸಾಧ್ಯವಾಯಿತು ಎಂದು ಹೇಳಿದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ಕಾಂಗ್ರೆಸ್ ಪಕ್ಷ ನಿಂತಿತ್ತು. ಲಕ್ಷಾಂತರ ಆಹಾರ ಕಿಟ್‌ಗಳನ್ನು ವಿತರಿಸಲಾಗಿತ್ತು. ಯಾದಗಿರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಜನರು ಸುರಕ್ಷಿತವಾಗಿ ತಲುಪಲು ಬಸ್ ಹಾಗೂ ರೈಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಪಿಸಿಸಿ ವತಿಯಿಂದ ₹1 ಕೋಟಿ ನೆರವು ನೀಡಲಾಗಿತ್ತು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಯೋಗವು ಆರೋಗ್ಯಕರ ಮತ್ತು ಸಮತೋಲಿತ ಜೀವನಕ್ಕೆ ಅತ್ಯಂತ ವಿಶ್ವಾಸಾರ್ಹ ಸಾಧನ: ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು: “ಭಾರತದ ಸಾವಿರಾರು ವರ್ಷಗಳಷ್ಟು ಹಳೆಯದಾದ ಯೋಗ ಪರಂಪರೆಗೆ ಜಾಗತಿಕ ಮನ್ನಣೆ ತಂದುಕೊಟ್ಟಿರುವ ಅಂತರರಾಷ್ಟ್ರೀಯ ಯೋಗ ದಿನವು ಇಂದು ವಿಶ್ವದ ಅತಿದೊಡ್ಡ ಆರೋಗ್ಯ ಮತ್ತು ಕ್ಷೇಮ ಅಭಿಯಾನಗಳಲ್ಲಿ ಒಂದಾಗಿ ರೂಪುಗೊಂಡಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಆಯುಷ್ ಇಲಾಖೆಯ ವತಿಯಿಂದ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ–2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದ ಅವರು, ಬಳಿಕ ಮಾತನಾಡಿದರು.

“ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾದ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅತ್ಯಂತ ವಿಶ್ವಾಸಾರ್ಹ ಸಾಧನವಾಗಿದೆ. ಯೋಗವು ಮನಸ್ಸು ಮತ್ತು ದೇಹದ ಏಕತೆ, ಆಲೋಚನೆ ಮತ್ತು ಕ್ರಿಯೆಯ ಸಮನ್ವಯ, ಸಂಯಮ ಮತ್ತು ತೃಪ್ತಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಹಾಗೂ ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ,” ಎಂದು ರಾಜ್ಯಪಾಲರು ತಿಳಿಸಿದರು.

“ಇಂದಿನ ಸ್ಪರ್ಧಾತ್ಮಕ ಮತ್ತು ಒತ್ತಡದ ಜೀವನಶೈಲಿಯು ಅನೇಕ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಸೃಷ್ಟಿಸಿದ್ದು, ಅಂತಹ ಸಂದರ್ಭದಲ್ಲಿ ಯೋಗವು ಆರೋಗ್ಯಕರ ದೇಹ, ಶಾಂತ ಮನಸ್ಸು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಒದಗಿಸುತ್ತದೆ” ಎಂದು ಅವರು ಹೇಳಿದರು.

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2014ರಲ್ಲಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿರುವುದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ವಿಷಯವಾಗಿದೆ. ಇಂದು 190ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಯೋಗವನ್ನು ಅಭ್ಯಾಸ ಮಾಡುತ್ತಿದ್ದು, ಇದು ಭಾರತದ ಜ್ಞಾನ, ಸಂಸ್ಕೃತಿ ಮತ್ತು “ವಸುಧೈವ ಕುಟುಂಬಕಂ” ಎಂಬ ಮನೋಭಾವಕ್ಕೆ ದೊರೆತ ಜಾಗತಿಕ ಮಾನ್ಯತೆಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.

“ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ಆರೋಗ್ಯವಂತ, ಶಕ್ತಿಯುತ ಹಾಗೂ ಮಾನಸಿಕವಾಗಿ ಸದೃಢ ಯುವಜನತೆ ಅಗತ್ಯವಾಗಿದ್ದು, ಈ ದಿಕ್ಕಿನಲ್ಲಿ ಯೋಗವು ಪರಿಣಾಮಕಾರಿ ಸಾಧನವಾಗಿದೆ. ಯುವಕರು ಪ್ರತಿದಿನ ಸ್ವಲ್ಪ ಸಮಯವನ್ನು ಯೋಗಕ್ಕೆ ಮೀಸಲಿಟ್ಟರೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು” ಎಂದು ರಾಜ್ಯಪಾಲರು ಕರೆ ನೀಡಿದರು.

“ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯವಾದ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ವಯೋವೃದ್ಧರನ್ನು ದೈಹಿಕವಾಗಿ ಸಕ್ರಿಯರಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿ ಮತ್ತು ಸ್ವಾವಲಂಬಿಗಳಾಗಿ ರೂಪಿಸುವಲ್ಲಿ ಯೋಗದ ಮಹತ್ವವನ್ನು ಪ್ರತಿಪಾದಿಸುತ್ತದೆ ಎಂದು ಅವರು ತಿಳಿಸಿದರು. “ನಾನು ಸ್ವತಃ ಯೋಗ ಮತ್ತು ಪ್ರಾಣಾಯಾಮವನ್ನು ಅಳವಡಿಸಿಕೊಂಡಿದ್ದೇನೆ ಮತ್ತು ಅದರ ಪರಿಣಾಮವಾಗಿ ಆರೋಗ್ಯವಾಗಿದ್ದೇನೆ” ಎಂದು ರಾಜ್ಯಪಾಲರು ಹೇಳಿದರು.

ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕಾದ ಅಗತ್ಯವಿದ್ದು, ಪ್ರತಿದಿನ ಕೆಲವೇ ನಿಮಿಷಗಳ ಯೋಗಾಭ್ಯಾಸವು ಅನೇಕ ರೋಗಗಳಿಂದ ರಕ್ಷಿಸಿ ಜೀವನದಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ ಎಂದು ಅವರು ಹೇಳಿದರು.

ಯೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅದರ ಪ್ರಚಾರಕ್ಕೆ ಕರ್ನಾಟಕ ಸರ್ಕಾರ ಕೈಗೊಂಡಿರುವ ವಿವಿಧ ನವೀನ ಕಾರ್ಯಕ್ರಮಗಳನ್ನು ಶ್ಲಾಘಿಸಿದ ರಾಜ್ಯಪಾಲರು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು, ಯೋಗ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಹಾಗೂ ಯೋಗ ಸಾಧಕರನ್ನು ಅಭಿನಂದಿಸಿದರು.

“ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ” ಎಂಬ ಸಂದೇಶದೊಂದಿಗೆ ರಾಜ್ಯಪಾಲರು ರಾಜ್ಯದ ಜನತೆಗೆ ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಸಚಿವರಾದ ಯು.ಟಿ. ಖಾದರ್, ನಟಿ ಸುಧಾರಾಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ಯಾಲೆಸ್ ಗ್ರೌಂಡ್ಸ್ʼನಲ್ಲಿ KPCC ಪದಗ್ರಹಣ ಸಮಾರಂಭ: ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮಾಜಿ ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರವನ್ನು ಹಸ್ತಾಂತರಿಸಿದರು.

ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡುವ ಉದ್ದೇಶದಿಂದ ಮೂರು ಚರಕಗಳ ಮೂಲಕ ನೂಲು ನೇಯುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಳಿಕ ಅಧಿಕಾರ ಹಸ್ತಾಂತರದ ದಾಖಲೆಗಳಿಗೆ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಸಹಿ ಹಾಕುವ ಮೂಲಕ ಪದಗ್ರಹಣ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಂಡಿತು.

ಈ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿ.ಕೆ. ಸುರೇಶ್ ಸೇರಿದಂತೆ ರಾಜ್ಯದ ಹಲವು ಸಚಿವರು, ಶಾಸಕರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಸಚಿವರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಹೆಚ್.ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ, ಚೆಲುವರಾಯಸ್ವಾಮಿ, ಎಂ.ಬಿ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಝಮೀರ್ ಅಹಮದ್ ಖಾನ್, ಕೆ.ಜೆ. ಜಾರ್ಜ್, ಹೆಚ್.ಸಿ. ಮಹದೇವಪ್ಪ, ತನ್ವೀರ್ ಸೇಠ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಯೋಗಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೊಲೆ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಸಹ-ಆರೋಪಿಗಳು ಯೋಗಾಭ್ಯಾಸದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಕಾರಾಗೃಹದಲ್ಲಿರುವ ಎಲ್ಲಾ ಕೈದಿಗಳಿಗಾಗಿ ಸಾಮೂಹಿಕ ಯೋಗಾಭ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ತಮಗೆ ತೀವ್ರ ಬೆನ್ನುನೋವಿನ ಸಮಸ್ಯೆ ಇರುವುದಾಗಿ ತಿಳಿಸಿದ ನಟ ದರ್ಶನ್, ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದರು.

ಈ ವಿಷಯ ತಿಳಿದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ (ಡಿಜಿ) ಅಲೋಕ್ ಕುಮಾರ್ ಅವರು ದರ್ಶನ್ ಅವರನ್ನು ಕರೆಸಿ ಮಾತುಕತೆ ನಡೆಸಿದರು. “ಬೆನ್ನುನೋವಿನ ಸಮಸ್ಯೆಗೆ ಯೋಗ ಸಹಕಾರಿ. ಆರೋಗ್ಯ ಸುಧಾರಣೆಗೆ ಯೋಗಾಭ್ಯಾಸ ಅತ್ಯಂತ ಉಪಯುಕ್ತ” ಎಂದು ಮನವರಿಕೆ ಮಾಡಿ ಯೋಗದಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

ಡಿಜಿ ಅವರ ಸಲಹೆಯ ಬಳಿಕ ದರ್ಶನ್ ಯೋಗಾಭ್ಯಾಸಕ್ಕೆ ಒಪ್ಪಿಗೆ ಸೂಚಿಸಿದರು. ಆದರೆ ಜೈಲಿನ ಮುಖ್ಯ ಮೈದಾನದಲ್ಲಿ ನಡೆದ ಸಾಮೂಹಿಕ ಯೋಗದಲ್ಲಿ ಪಾಲ್ಗೊಳ್ಳದೆ, ತಮ್ಮ ಬ್ಯಾರಕ್‌ನ ಕಾರಿಡಾರ್‌ನಲ್ಲೇ ಸಹ-ಆರೋಪಿಗಳೊಂದಿಗೆ ಸುಮಾರು ಒಂದು ಗಂಟೆ ಯೋಗಾಭ್ಯಾಸ ನಡೆಸಿದರು.

ಈ ವೇಳೆ ದರ್ಶನ್ ಪ್ರಾಣಾಯಾಮ, ದೀರ್ಘದಂಡ ನಮಸ್ಕಾರ ಹಾಗೂ ಶವಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿದರು. ಯೋಗಾಭ್ಯಾಸ ಪೂರ್ಣಗೊಂಡ ಬಳಿಕ ದರ್ಶನ್ ಹಾಗೂ ಸಹ-ಆರೋಪಿಗಳು ತಮ್ಮ ಬ್ಯಾರಕ್‌ಗಳಿಗೆ ಮರಳಿದರು.

ಇದೇ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರು ಮಹಿಳಾ ಕೈದಿಗಳ ವಿಭಾಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಇತರ ಮಹಿಳಾ ಕೈದಿಗಳೊಂದಿಗೆ ಸಾಲಿನಲ್ಲಿ ಕುಳಿತು ಯೋಗ ಮತ್ತು ಧ್ಯಾನ ನಡೆಸಿದರು.

ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ: ತಕ್ಷಣವೇ ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ಸಿಬ್ಬಂದಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗಸಂದ್ರ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಸಣ್ಣ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸ್ಪಷ್ಟಪಡಿಸಿದೆ.

ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯ ಪ್ರಕಾರ, ಮಧ್ಯಾಹ್ನ ಸುಮಾರು 1.30 ಗಂಟೆ ವೇಳೆಗೆ ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ (Emergency Exit) ಪ್ರದೇಶದ ಸಮೀಪ ಅಳವಡಿಸಲಾಗಿದ್ದ ಸೂಚನಾ ಫಲಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಮಾಹಿತಿ ದೊರೆಯುತ್ತಿದ್ದಂತೆಯೇ ಮೆಟ್ರೋ ಕಾರ್ಯಾಚರಣೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಕೆಲವೇ ಕ್ಷಣಗಳಲ್ಲಿ ನಂದಿಸಿದ್ದಾರೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಗ್ನಿ ಅವಘಡದ ಪರಿಣಾಮ ನಮ್ಮ ಮೆಟ್ರೋ ರೈಲು ಸಂಚಾರ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಸಿರು ಮಾರ್ಗದ ಮಾದಾವರ–ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗ ಸೇರಿದಂತೆ ಎಲ್ಲಾ ಮೆಟ್ರೋ ಸೇವೆಗಳು ಎಂದಿನಂತೆ ಸುಗಮವಾಗಿ ಸಂಚರಿಸುತ್ತಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

30 ಕೋಟಿ ಕಾಂಟ್ರಾಕ್ಟ್ ಆಮಿಷ; ಉದ್ಯಮಿಗೆ ₹2.66 ಕೋಟಿ ವಂಚನೆ ಮಾಡಿದ ಆ್ಯಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

0

ನೆಲಮಂಗಲ: ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವಾನ್ವಿತ ಹುದ್ದೆ ಇದ್ದರೂ ದುರಾಸೆಗೆ ಬಿದ್ದು ಉದ್ಯಮಿಯೊಬ್ಬರಿಗೆ ₹2.66 ಕೋಟಿ ವಂಚನೆ ಮಾಡಿದ ಆ್ಯಕ್ಸಿಸ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸೇರಿ ಮೂವರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೆಂಗಳೂರಿನ ಬಾಗಲಗುಂಟೆಯ ಆ್ಯಕ್ಸಿಸ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ವಿನೋದ್ ಕುಮಾರ್, ಅರುಣ್ ಕುಮಾರ್ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ.

ತನಿಖೆ ಪ್ರಕಾರ, ಪ್ರಮುಖ ಆರೋಪಿ ವಿನೋದ್ ಕುಮಾರ್ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯಲ್ಲೇ ದೊಡ್ಡ ಪ್ರಮಾಣದ ವಹಿವಾಟು ನಡೆಸುತ್ತಿದ್ದ ಸುಬ್ರಮಣಿ ಎಂಬ ಉದ್ಯಮಿಯನ್ನು ಗುರಿಯಾಗಿಸಿಕೊಂಡಿದ್ದ. ಟ್ರಾನ್ಸ್‌ಪೋರ್ಟ್ ಹಾಗೂ ಮ್ಯಾನ್‌ಪವರ್ ಏಜೆನ್ಸಿ ನಡೆಸುತ್ತಿದ್ದ ಸುಬ್ರಮಣಿ ಅವರ ಖಾತೆಯಲ್ಲಿ ತಿಂಗಳಿಗೆ ₹10 ಕೋಟಿಗೂ ಅಧಿಕ ವಹಿವಾಟು ನಡೆಯುತ್ತಿತ್ತು. ಇದನ್ನೇ ಗಮನಿಸಿ ಆರೋಪಿ ವಂಚನೆಗೆ ಸಂಚು ರೂಪಿಸಿದ್ದಾನೆ.

ವಿನೋದ್ ಕುಮಾರ್ ಬೇರೆಯವರ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಪಡೆದು, ಇಬ್ಬರು ಅಮಾಯಕ ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾನೆ ಎನ್ನಲಾಗಿದೆ. ಬಳಿಕ ಉದ್ಯಮಿ ಸುಬ್ರಮಣಿ ಅವರಿಗೆ ವಾಟ್ಸಾಪ್ ಕರೆ ಮಾಡಿ, ತನ್ನ ಪ್ರಭಾವ ಬಳಸಿ ಸುಮಾರು ₹30 ಕೋಟಿ ಮೌಲ್ಯದ ಬಿಸಿನೆಸ್ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿದ್ದಾನೆ.

ಇದಕ್ಕೆ ಪ್ರತಿಯಾಗಿ ಒಪ್ಪಂದದ ಮೊತ್ತದಲ್ಲಿ ಶೇ.10ರಷ್ಟು ಕಮಿಷನ್ ನೀಡುವಂತೆ ಬೇಡಿಕೆ ಇಟ್ಟು, ಮುಂಗಡವಾಗಿ ₹2 ಕೋಟಿ 66 ಲಕ್ಷ ಹಣವನ್ನು ಆರ್‌ಟಿಜಿಎಸ್ (RTGS) ಮೂಲಕ ತಾನು ಸೃಷ್ಟಿಸಿದ್ದ ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ.

ಹಣ ಖಾತೆಗೆ ಜಮೆಯಾಗುತ್ತಿದ್ದಂತೆ ವಿನೋದ್ ಕುಮಾರ್ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಅನುಮಾನಗೊಂಡ ಉದ್ಯಮಿ ಸುಬ್ರಮಣಿ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಮ್ಯಾನೇಜರ್‌ನಿಂದ ಸಮರ್ಪಕ ಉತ್ತರ ದೊರೆಯಲಿಲ್ಲ. ಇದರಿಂದ ತಮಗೆ ವಂಚನೆಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಕೇವಲ ಎರಡು ದಿನಗಳಲ್ಲೇ ಪ್ರಮುಖ ಆರೋಪಿ ವಿನೋದ್ ಕುಮಾರ್ ಹಾಗೂ ಆತನ ಸಹಚರರಾದ ಅರುಣ್ ಕುಮಾರ್ ಮತ್ತು ಕಿರಣ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಕಿರಣ್ ಪಿಗ್ಮಿ ಕಲೆಕ್ಟರ್ ಆಗಿದ್ದು, ವಂಚನೆಯ ಹಣವನ್ನು ನಗದು ರೂಪಕ್ಕೆ ಪರಿವರ್ತಿಸಲು ಸಹಕಾರ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ವಂಚನೆ ಜಾಲದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.

ಬೆಂಗಳೂರು ಶಾಲೆಗಳಲ್ಲಿ ಹೊಸ ನಿಯಮ ಜಾರಿ: ವಿದ್ಯಾರ್ಥಿಗಳಿಗೆ ಆನ್ ಲೈನ್ ಫುಡ್ ಡೆಲಿವರಿ ನಿಷೇಧ

ಬೆಂಗಳೂರು: ನಗರದ ಹಲವು ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಆಹಾರ ವಿತರಣೆಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ವಿವಿಧ ಫುಡ್ ಡೆಲಿವರಿ ಆ್ಯಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಿ ಪೋಷಕರಿಗೆ ಸೂಚನೆ ನೀಡಲಾಗುತ್ತಿದೆ.

ಇತ್ತೀಚೆಗೆ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ಈ ಕುರಿತು ಪೋಷಕರಿಗೆ ಸುತ್ತೋಲೆ ಹೊರಡಿಸಿದ್ದು, ಇದೇ ಮಾದರಿಯ ನಿಯಮವನ್ನು ನಗರದ ಇನ್ನೂ ಹಲವು ಪ್ರಮುಖ ಶಾಲೆಗಳು ಜಾರಿಗೆ ತರಲು ಮುಂದಾಗಿವೆ.

ಶಾಲಾ ಆಡಳಿತ ಮಂಡಳಿಗಳ ಪ್ರಕಾರ, ಹೊರಗಿನಿಂದ ತರಿಸುವ ಜಂಕ್ ಫುಡ್‌ಗಳಲ್ಲಿ ಅತಿಯಾದ ಎಣ್ಣೆ, ಉಪ್ಪು ಹಾಗೂ ಸಂರಕ್ಷಕ ಪದಾರ್ಥಗಳು (ಪ್ರಿಸರ್ವೇಟಿವ್ಸ್) ಬಳಸಲಾಗುತ್ತದೆ. ಇಂತಹ ಆಹಾರ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದ್ದು, ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದಲ್ಲದೆ, ಒಬ್ಬ ವಿದ್ಯಾರ್ಥಿ ಮನೆಯಿಂದ ತಂದಿರುವ ಸಾಮಾನ್ಯ ಆಹಾರ ಸೇವಿಸುತ್ತಿರುವಾಗ, ಮತ್ತೊಬ್ಬ ವಿದ್ಯಾರ್ಥಿ ಪಿಜ್ಜಾ ಅಥವಾ ಬರ್ಗರ್‌ನಂತಹ ಆಹಾರವನ್ನು ಆನ್‌ಲೈನ್ ಮೂಲಕ ತರಿಸಿಕೊಂಡು ಸೇವಿಸಿದರೆ ಮಕ್ಕಳಲ್ಲಿ ಅನಗತ್ಯ ಹೋಲಿಕೆ, ಆಕರ್ಷಣೆ ಹಾಗೂ ತಾರತಮ್ಯದ ಭಾವನೆ ಮೂಡಬಹುದು. ಇದರಿಂದ ಪೋಷಕರ ಮೇಲೂ ಹೆಚ್ಚುವರಿ ಒತ್ತಡ ಉಂಟಾಗುತ್ತದೆ ಎಂದು ಶಾಲಾ ಆಡಳಿತಗಳು ಅಭಿಪ್ರಾಯಪಟ್ಟಿವೆ.

ಭದ್ರತೆಯ ದೃಷ್ಟಿಯಿಂದಲೂ ಈ ಕ್ರಮ ಮಹತ್ವದ್ದಾಗಿದೆ ಎಂದು ಶಾಲೆಗಳು ತಿಳಿಸಿವೆ. ಅಪರಿಚಿತ ಡೆಲಿವರಿ ಸಿಬ್ಬಂದಿ ಪದೇ ಪದೇ ಶಾಲಾ ಆವರಣಕ್ಕೆ ಪ್ರವೇಶಿಸುವುದು ಸುರಕ್ಷತಾ ದೃಷ್ಟಿಯಿಂದ ಸೂಕ್ತವಲ್ಲ. ಜೊತೆಗೆ ಪ್ರತಿನಿತ್ಯ ಹಲವು ಆಹಾರ ಪಾರ್ಸೆಲ್‌ಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಕ್ರಿಯೆ ಶಾಲೆಯ ಶಿಸ್ತು ಹಾಗೂ ಕಲಿಕಾ ವಾತಾವರಣಕ್ಕೂ ಅಡ್ಡಿಯಾಗುತ್ತದೆ ಎಂದು ಹೇಳಲಾಗಿದೆ.

ಅನಿವಾರ್ಯ ಸಂದರ್ಭಗಳಲ್ಲಿ ಪೋಷಕರು ಮನೆಯಲ್ಲಿ ಆಹಾರ ತಯಾರಿಸಲು ಸಾಧ್ಯವಾಗದಿದ್ದರೆ, ಹೊರಗಿನಿಂದ ತರಿಸುವ ಆರೋಗ್ಯಕರ ಆಹಾರವನ್ನು ಸಾಮಾನ್ಯ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಮಕ್ಕಳಿಗೆ ಕಳುಹಿಸುವಂತೆ ಶಾಲೆಗಳು ಮನವಿ ಮಾಡಿವೆ.

ವಿದ್ಯಾರ್ಥಿಗಳಿಗೆ ಮಾದರಿಯಾಗುವ ಉದ್ದೇಶದಿಂದ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗೂ ಆನ್‌ಲೈನ್ ಮೂಲಕ ಆಹಾರ ಆರ್ಡರ್ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದು ಆರಂಭ ಮಾತ್ರ, ಮುಂದೆ ದೊಡ್ಡ ಹೋರಾಟ: ಟೌನ್ ಶಿಪ್ ವಿರುದ್ಧ ಸರ್ಕಾರಕ್ಕೆ ನಿಖಿಲ್ ಎಚ್ಚರಿಕೆ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ನೇತೃತ್ವದಲ್ಲಿ ಆಯೋಜಿಸಿರುವ ಬೃಹತ್ ಪಾದಯಾತ್ರೆಯಲ್ಲಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಇದು ಕೇವಲ ಆರಂಭ ಮಾತ್ರ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ನೇತೃತ್ವದಲ್ಲಿ ಆರಂಭವಾದ ಈ ಪಾದಯಾತ್ರೆ ಯೋಜನೆ ವ್ಯಾಪ್ತಿಯ ಎಂಟು ಗ್ರಾಮಗಳಲ್ಲಿ ಸುಮಾರು 11 ಕಿಲೋಮೀಟರ್ ಸಂಚರಿಸಿತು. ಬೆಳಗ್ಗೆ ಅಂಚಿಪುರ ಗ್ರಾಮದ ದಂಡಿನ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಿದರು.

ಪಾದಯಾತ್ರೆಯು ಅಂಚಿಪುರ, ಅಂಚಿಪುರ ಕಾಲೋನಿ, ಬನ್ನಿಗಿರಿ, ಮೆರೆವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಹಾಗೂ ಹೊಸೂರು ಗ್ರಾಮಗಳ ಮೂಲಕ ಸಾಗಿತು. ಸಾವಿರಾರು ರೈತರು, ಜೆಡಿಎಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದು, ಎಂಎಲ್ಸಿ ಜವರಾಯಿಗೌಡ ಮತ್ತು ಮಾಜಿ ಎಂಎಲ್ಸಿ ಶ್ರೀಕಂಠೇಗೌಡ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ಇದು ರಾಜಕೀಯ ಲಾಭ-ನಷ್ಟಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ. ರೈತರ ಬದುಕು, ಕೃಷಿ ಭೂಮಿ ಮತ್ತು ಅವರ ಹಕ್ಕುಗಳನ್ನು ಉಳಿಸುವ ಉದ್ದೇಶದಿಂದ ಈ ಪಾದಯಾತ್ರೆ ನಡೆಸಲಾಗುತ್ತಿದೆ” ಎಂದು ಹೇಳಿದರು.

“ಇದು ಒಂದು ದಿನದ ಹೋರಾಟವಲ್ಲ. ಕೇವಲ ಭಾಷಣಕ್ಕೆ ಸೀಮಿತವಾಗುವ ಕಾರ್ಯಕ್ರಮವೂ ಅಲ್ಲ. ಇದು ಆರಂಭ ಮಾತ್ರ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದರು.

ಟೌನ್‌ಶಿಪ್ ಯೋಜನೆಗೆ ಒಪ್ಪಿಗೆ ಪಡೆಯಲು ರೈತರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ ನಿಖಿಲ್, “ಕೃಷಿ ಭೂಮಿ ಕಳೆದುಕೊಂಡರೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಈ ಯೋಜನೆಯಿಂದ ಸಣ್ಣ ರೈತರಿಗೆ ಹೆಚ್ಚಿನ ಅನ್ಯಾಯವಾಗಲಿದೆ. ರೈತರ ಭೂಮಿ ಕಬಳಿಸಲು ದಲ್ಲಾಳಿಗಳನ್ನು ಬಳಸಲಾಗುತ್ತಿದ್ದು, ರೈತರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ” ಎಂದು ಸರ್ಕಾರದ ವಿರುದ್ಧ ಆರೋಪಿಸಿದರು.

ಅಡ್ಡ ಮತದಾನ ಆರೋಪ: ತನಿಖೆಗೆ ಸಿದ್ಧ, ಸಾಬೀತಾದರೆ ರಾಜೀನಾಮೆ – ಡಾ. ಚಂದ್ರು ಲಮಾಣಿ

0

ಗದಗ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನಿರ್ದೇಶನದಂತೆ ಎನ್‌ಡಿಎ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ. ಆದರೂ ನನ್ನ ಹೆಸರನ್ನು ಅನಗತ್ಯವಾಗಿ ಈ ವಿವಾದಕ್ಕೆ ಎಳೆದು ತಳಕು ಹಾಕಲಾಗುತ್ತಿದೆ. ಇದರಿಂದ ನನಗೆ ಹಾಗೂ ನನ್ನ ಕ್ಷೇತ್ರದ ಜನತೆಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

“ನಾನು ಯಾವುದೇ ರೀತಿಯ ತನಿಖೆಗೆ ಸಿದ್ಧನಿದ್ದೇನೆ. ಧರ್ಮಸ್ಥಳ ಮಾತ್ರವಲ್ಲ, ಯಾವುದೇ ದೇವಸ್ಥಾನದಲ್ಲಿ ಆಣೆ-ಪ್ರಮಾಣ ಮಾಡಲು ಸಿದ್ಧ. ಅಡ್ಡ ಮತದಾನ ಮಾಡಿರುವುದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಷ್ಟೇ ಅಲ್ಲ, ರಾಜಕೀಯ ಜೀವನದಿಂದಲೇ ನಿವೃತ್ತಿಯಾಗಲು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದರು.

ತಮ್ಮ ವಿರುದ್ಧ ಉದ್ದೇಶಪೂರ್ವಕ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, “ಕಳೆದ ಒಂದು ವರ್ಷದಿಂದ ನನ್ನ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಇದರಲ್ಲಿ ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ನಮ್ಮ ಪಕ್ಷದ ಕೆಲ ಮುಖಂಡರ ಕೈವಾಡವೂ ಇದೆ” ಎಂದು ಗಂಭೀರ ಆರೋಪ ಮಾಡಿದರು.

ಅಡ್ಡ ಮತದಾನ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿರುವ ನಡುವೆ ಡಾ. ಲಮಾಣಿ ನೀಡಿರುವ ಈ ಹೇಳಿಕೆ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

error: Content is protected !!