Home Blog Page 141

ಜನರ ಬದುಕು ಬದಲಿಸಿದ ಗ್ಯಾರಂಟಿ ಯೋಜನೆಗಳು: ಸಚಿವ ಸಂತೋಷ ಲಾಡ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಂಚಗ್ಯಾರಂಟಿಗಳ ಸಮರ್ಥ ಜಾರಿಯಿಂದ ಸರ್ಕಾರ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಸಾಮಾನ್ಯ ಜನರ ಬದುಕಿನಲ್ಲಿ ನೇರ ಬದಲಾವಣೆ ತರುವ ಉದ್ದೇಶದಿಂದ ಜಾರಿಗೊಂಡ ಈ ಯೋಜನೆಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲೂ ವ್ಯಾಪಕ ಪರಿಣಾಮ ಬೀರಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಅವರು ಶುಕ್ರವಾರ ಬೆಳಿಗ್ಗೆ ಕಲಘಟಗಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕ್ಷೇತ್ರ ಪ್ರಚಾರದ ಎಲ್‌ಇಡಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರ ಪ್ರಚಾರ ವಾಹನವು ಧಾರವಾಡ ಜಿಲ್ಲೆಯಾದ್ಯಂತ ಒಟ್ಟು 20 ಹಳ್ಳಿಗಳಲ್ಲಿ ಸಂಚರಿಸಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸಲಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿಯೂ ಯೋಜನೆಗಳ ಲಾಭಗಳ ಕುರಿತು ವಿವರಿಸಲಾಗುತ್ತದೆ ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ತಲುಪಬೇಕು. ಕ್ಷೇತ್ರ ಪ್ರಚಾರ ವಾಹನದ ಮೂಲಕ ಮನೆಮನೆಗೆ ತೆರಳಿ ಎಲ್ಲ ಜನರಿಗೂ ಮನಮುಟ್ಟುವಂತೆ ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ರೂಪುಗೊಂಡ ಕಲಾತಂಡಗಳೊಂದಿಗೆ ಸಚಿವರು ಸ್ವತಃ ಗೀತೆಗಳನ್ನು ಹಾಡಿ, ತಾಳ ಬಾರಿಸಿ ಕಲಾವಿದರನ್ನು ಪ್ರೋತ್ಸಾಹಿಸಿದರು. ಅವರ ಈ ಸರಳ ಹಾಗೂ ಸ್ನೇಹಪೂರ್ಣ ನಡೆ ಜನಮನ ಗೆದ್ದಿತು. ಕಲೆಯ ಮೂಲಕ ಯೋಜನೆಗಳ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಸಚಿವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ಕಲಾವಿದರ ಪ್ರತಿಭೆಯನ್ನು ಮೆಚ್ಚಿದರು. ಈ ಮೂಲಕ ಸಾರ್ವಜನಿಕರಲ್ಲಿ ಉತ್ಸಾಹ ಮೂಡಿಸಿ, ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಅರಿವು ಹಾಗೂ ಭಾಗವಹಿಸುವ ಮನೋಭಾವವನ್ನು ಹೆಚ್ಚಿಸಿದರು.

ಧಾರವಾಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಾನಪ್ಪಗೌಡ ಪಾಟೀಲ ಮಾತನಾಡಿದರು. ವಾರ್ತಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾ ಇಲಾಖೆಯ ಮನೋಜ ಮಸನಿ ವಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಕಲಘಟಗಿ ತಹಸೀಲ್ದಾರ ಬಸವರಾಜ ಹೊಂಕಣನವರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ವಾಯ್. ಸಾವಂತ, ಕಲಘಟಗಿ ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ, ಸಿಪಿಐ ಶ್ರೀಶೈಲ ಕೌಜಲಗಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಕ್ಷೇತ್ರ ಪ್ರಚಾರ ವಾಹನದೊಂದಿಗೆ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಜಾನಪದ ಕಲಾತಂಡದ ನಾಯಕರಾದ ದಾವಲಸಾಬ ದೊಡ್ಡಮನಿ ಅವರ ನೇತೃತ್ವದಲ್ಲಿ ಪ್ರಕಾಶ ಮಡಿವಾಳರ, ರಮೇಶ ಸಜ್ಜಗಾರ, ಗೂಳಪ್ಪ ದುರ್ಗಣ್ಣವರ, ನೌಶಾದ ಬೆಂತೂರ ಅವರು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತು ಜನಪದ ಹಾಡುಗಳು ಹಾಗೂ ಬೀದಿ ನಾಟಕಗಳ ಮುಖಾಂತರ ಜನರಲ್ಲಿ ಜಾಗೃತಿ ಕಾರ್ಯಕ್ರಮವನ್ನು ನೀಡಿದರು.

ಕಾಂಗ್ರೆಸ್ ಸರ್ಕಾರ ಬಡವರ ಲೂಟಿ ಮಾಡುತ್ತಿದೆ: ರಾಜು ಕುರುಡಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ಸರ್ಕಾರ ಜಿಲ್ಲಾ ಆಸ್ಪತ್ರೆಗಳಲ್ಲಿ ನಿಯಮಗಳನ್ನು ಕಠಿಣಗೊಳಿಸಿ ಬಡವರಿಗೆ ಸೂಕ್ತ ಸಮಯದಲ್ಲಿ ಸೇವೆ ದೊರೆಯದಂತೆ ಮಾಡಿದ್ದು, ಇದು ಘೋರ ಅನ್ಯಾಯ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನಿಂಗ್ ಮತ್ತು ಎಂಆರ್‌ಐ ಸೇವೆ ಒದಗಿಸಲಾಗುತ್ತಿದೆ. ಆದರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಬಡವರಿಗೆ ಸರಿಯಾಗಿ ಸೌಲಭ್ಯ ಸಿಗುತ್ತಿಲ್ಲ. ಖಾಸಗಿ ಲ್ಯಾಬ್‌ಗಳಲ್ಲಿ ದುಬಾರಿ ಶುಲ್ಕ ಪಾವತಿಸಲಾಗದೆ ರೋಗಿಗಳು ಪರದಾಡುತ್ತಿದ್ದಾರೆ. ಬಡವರು ಜಿಲ್ಲಾಸ್ಪತ್ರೆಗಳಲ್ಲಿ ಸೌಲಭ್ಯವಿಲ್ಲದ ಕಾರಣ ಬೇರೆ ನಗರಗಳಿಗೆ ಅಲೆಯುವಂತಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಪ್ರತಿನಿತ್ಯ 35ರಿಂದ 80 ಎಂಆರ್‌ಐ ಸ್ಕ್ಯಾನಿಂಗ್ ನಡೆಯುತ್ತಿದ್ದವು. ಈಗ 3ರಿಂದ 13 ಸ್ಕ್ಯಾನಿಂಗ್ ಮಾತ್ರ ಸಾಧ್ಯವಾಗುತ್ತಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಡಯಾಗ್ನೋಸ್ಟಿಕ್ ಸೇವೆ ಒದಗಿಸಲು ಪಿಪಿಪಿ ಮಾದರಿ ಜಾರಿಗೊಳಿಸಿ ಗುತ್ತಿಗೆ ನೀಡಲಾಗಿದೆ. ಹಿಂದೆ ತಜ್ಞ ವೈದ್ಯರು ಸೂಚಿಸಿದರೆ ಸ್ಕ್ಯಾನಿಂಗ್ ನಡೆಯುತ್ತಿತ್ತು. ಆದರೆ ಕಳೆದ ಡಿಸೆಂಬರ್‌ನಲ್ಲಿ ಎಸ್‌ಎಎಸ್‌ಟಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದ ಬಳಿಕ ಸಮಸ್ಯೆ ಸೃಷ್ಟಿಯಾಗಿದೆ. ವಿವರಗಳನ್ನು ನಿಗದಿತ ತಂತ್ರಾಂಶದಲ್ಲಿ ಟ್ರಸ್ಟ್‌ಗೆ ರವಾನಿಸಿ ಅನುಮತಿ ಪಡೆಯಲು ರೋಗಿಗಳ ರೇಷನ್ ಮತ್ತು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಅಪಘಾತದ ಸಂದರ್ಭದಲ್ಲಿ ಮತ್ತು ಆಧಾರ್ ಕಾರ್ಡ್ ಇಲ್ಲದೆ ಬೇರೆ ಜಿಲ್ಲೆ, ಹೊರ ರಾಜ್ಯಗಳಿಂದ ಬಂದವರು ನರಳಾಡುವ ಸ್ಥಿತಿ ಎದುರಾಗಿದೆ.

ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವುದು ಬಡಜನರ ಸೇವೆ ಮಾಡಲು. ಆದರೆ ಸೇವೆ ಮಾಡುವುದನ್ನು ಬಿಟ್ಟು ಲೂಟಿ ಹೊಡೆಯುತ್ತಾ ಅಡ್ಡಾಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮುಂದೆ ಬರುವ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ (ರಾಜು) ಕುರುಡಗಿ ಚಾಟಿ ಬೀಸಿದ್ದಾರೆ.

ಬೆಂಗಳೂರು| 437 ಕೋಟಿ ರೂ. ಆಸ್ತಿ ತೆರಿಗೆ ಬಾಕಿ; ಹರಾಜು ಪ್ರಕ್ರಿಯೆ ಆರಂಭಿಸಿದ ಜಿಬಿಎ!

0

ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ 7,020 ಆಸ್ತಿಗಳಲ್ಲಿ 437.55 ಕೋಟಿ ರೂ. ಆಸ್ತಿ ತೆರಿಗೆ ಬಾಕಿಯಾಗಿ ಉಳಿದಿರುವ ಹಿನ್ನೆಲೆಯಲ್ಲಿ ಇಂದು ಆಸ್ತಿ ಹರಾಜು ಪ್ರಕ್ರಿಯೆ ಆರಂಭವಾಗಿದೆ.

ನಗರ ಪಾಲಿಕೆಗಳ ಜಂಟಿ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಹರಾಜು ನಡೆಯುತ್ತಿದೆ. SMS, IVRS ಕರೆಗಳು ಮತ್ತು ಸ್ಥಳೀಯ ಫಾಲೋ-ಅಪ್ ಮಾಡಿದರೂ ಹಲವರು ಪಾವತಿಸಿಲ್ಲ. 60 ದಿನಗಳಿಗಿಂತ ಹೆಚ್ಚು ಕಾಲ ಪಾವತಿ ಆಗದ ಕಾರಣ, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ಅನ್ವಯ ಆಸ್ತಿಗಳನ್ನು ಹರಾಜಿಗೆ ಇಡಲಾಗಿದೆ. ಹರಾಜು ಆರಂಭಕ್ಕೂ ಮುನ್ನ ಬಾಕಿದಾರರಿಗೆ ಬಾಕಿ ಪಾವತಿಸಲು ಅವಕಾಶವಿದ್ದು, ಪಾವತಿಸಿದಲ್ಲಿ ಹರಾಜು ರದ್ದುಪಡಿಸಲಾಗುತ್ತದೆ.

ಹರಾಜು ಪ್ರಾರಂಭವನ್ನು ಹೆಚ್ಚು ಬಾಕಿ ಇರುವ ಪಾಲಿಕೆಗಳಿಂದ ಮಾಡಲಾಗಿದೆ. ಇಂದಿನ ಹರಾಜಿನಲ್ಲಿ ಮಾರಾಟವಾದ ಆಸ್ತಿಗಳು ಉತ್ತರ ನಗರ ಪಾಲಿಕೆ – 2, ಪೂರ್ವ ನಗರ ಪಾಲಿಕೆ – 5.
ಪಾಲಿಕೆವಾರು ಬಾಕಿ ತೆರಿಗೆ ವಿವರ ಪ್ರಕಾರ, ಪೂರ್ವ ನಗರ ಪಾಲಿಕೆಗೆ 1,615 ಆಸ್ತಿಗಳಿಂದ 119.90 ಕೋಟಿ, ಪಶ್ಚಿಮಕ್ಕೆ 1,504 ಆಸ್ತಿಗಳಿಂದ 84.23 ಕೋಟಿ, ಕೇಂದ್ರಕ್ಕೆ 1,398 ಆಸ್ತಿಗಳಿಂದ 81.26 ಕೋಟಿ, ಉತ್ತರಕ್ಕೆ 1,156 ಆಸ್ತಿಗಳಿಂದ 79.83 ಕೋಟಿ ಮತ್ತು ದಕ್ಷಿಣಕ್ಕೆ 1,347 ಆಸ್ತಿಗಳಿಂದ 72.30 ಕೋಟಿ ಬಾಕಿ ಉಳಿದಿದೆ.

ಜಿಬಿಎ ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ಸೂಚಿಸಿದ್ದು, ಹರಾಜು ನೋಟಿಸ್ ಪಡೆದ ಎಲ್ಲಾ ಬಾಕಿದಾರರು ತಕ್ಷಣ ತಮ್ಮ ಬಾಕಿ ತೆರಿಗೆ ಪಾವತಿಸಬೇಕು. ಹರಾಜು ಮುಂದಿನ ದಿನಗಳಲ್ಲಿ ನಿಯಮಿತವಾಗಿ ನಡೆಯಲಿದೆ ಎಂದಿದ್ದಾರೆ.

ಮೈಸೂರು| ಶಾರ್ಟ್ ಸಕ್ರ್ಯೂಟ್‍ನಿಂದ ಹೊತ್ತಿ ಉರಿದ ನರ್ಸಿಂಗ್ ಕಾಲೇಜ್!

0

ಮೈಸೂರು:- ನರ್ಸಿಂಗ್ ಕಾಲೇಜ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಇಡೀ ಕಟ್ಟಡ ಹೊತ್ತಿ ಉರಿದಿರುವ ಘಟನೆ ನಗರದ ದೇವೇಗೌಡ ಸರ್ಕಲ್‍ನಲ್ಲಿ ಜರುಗಿದೆ.

ಶಾಸಕ ಡಾ. ಚಂದ್ರು ಲಮಾಣಿ ಮೇಲೆ ‘ಲೋಕಾ’ ದಾಳಿ ಬೆನ್ನಲ್ಲೇ ಹೈಡ್ರಾಮಾ; ಆಸ್ಪತ್ರೆ ಎದುರು ಬಿಜೆಪಿ ಕಾರ್ಯಕರ್ತರ ಆಕ್ರೋಶ, ಖಾಕಿ ಬಂದೋಬಸ್ತ್!

ಕಾಲೇಜು ಕಟ್ಟಡದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಇಡೀ ಕಟ್ಟಡ ಧಗಧಗನೆ ಹೊತ್ತಿ ಉರಿದಿದೆ. ಶಾರ್ಟ್ ಸಕ್ರ್ಯೂಟ್‍ನಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಸಕ ಡಾ. ಚಂದ್ರು ಲಮಾಣಿ ಮೇಲೆ ‘ಲೋಕಾ’ ದಾಳಿ ಬೆನ್ನಲ್ಲೇ ಹೈಡ್ರಾಮಾ; ಆಸ್ಪತ್ರೆ ಎದುರು ಬಿಜೆಪಿ ಕಾರ್ಯಕರ್ತರ ಆಕ್ರೋಶ, ಖಾಕಿ ಬಂದೋಬಸ್ತ್!

0

ಗದಗ:-ಕಮಿಷನ್ ಆರೋಪಕ್ಕೆ ಸಂಬಂಧಪಟ್ಟ ಹಾಗೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಭಾರೀ ಹೈಡ್ರಾಮಾವೇ ನಡೆದಿದೆ.

ಎಸ್, ಲೋಕಾ ದಾಳಿ ಹಿನ್ನೆಲೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಆಸ್ಪತ್ರೆ ಎದುರು ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಆಕ್ರೋಶ ಹೊರ ಹಾಕಿದ್ದಾರೆ. ಪರಿಣಾಮ ಪರಿಸ್ಥಿತಿ ಉದ್ವಿಗ್ನವಾಗಿದೆ. ಅಲ್ಲದೇ ರಾಜ್ಯ ಸರ್ಕಾರದ ವಿರುದ್ದ ಇದೇ ವೇಳೆ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಗದಗ: ಕಮಿಷನ್ ಆರೋಪದ ಮೇಲೆ ಶಾಸಕರ ವಿರುದ್ಧ ಲೋಕಾಯುಕ್ತ ದಾಳಿ – ಮೂವರು ರೆಡ್ ಹ್ಯಾಂಡ್ ಬಂಧನ

ಶಾಸಕರ ಮೇಲೆ ಲೋಕಾಯುಕ್ತ ದಾಳಿ ಮಾಡಲು ಸಚಿವ ಎಚ್ ಕೆ ಪಾಟೀಲ್ ಅವರ ಕುತಂತ್ರ ಕಾರಣ ಎಂದು ಈ ವೇಳೆ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು. “ನಮ್ಮನ್ನು ತಳ್ಳಬೇಡಿ” ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರೆ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಕಾರ್ಯಕರ್ತರು “ದಲಿತ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದರು. ಘಟನೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ತಿಳಿದು ಬಂದಿದೆ.

ಗದಗ: ಕಮಿಷನ್ ಆರೋಪದ ಮೇಲೆ ಶಾಸಕರ ವಿರುದ್ಧ ಲೋಕಾಯುಕ್ತ ದಾಳಿ – ಮೂವರು ರೆಡ್ ಹ್ಯಾಂಡ್ ಬಂಧನ

0

ಗದಗ: ಕಮಿಷನ್ ನೀಡದಿದ್ದರೆ ಕಾಮಗಾರಿ ರದ್ದು ಮಾಡುವುದಾಗಿ ಹಾಗೂ ರೌಡಿಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಮೂವರನ್ನು ರೆಡ್ ಹ್ಯಾಂಡ್ ಬಂಧಿಸಿದ್ದಾರೆ.

ಗದಗ ತಾಲೂಕಿನ ಚಿಂಚಲಿ ಗ್ರಾಮದ ಗುತ್ತಿಗೆದಾರ ವಿಜಯರಾಜ ಎಸ್. ಪೂಜಾರ ಅವರು 18-02-2026ರಂದು ಗದಗ ಲೋಕಾಯುಕ್ತ ಠಾಣೆಗೆ ದೂರು ಸಲ್ಲಿಸಿದ್ದರು. 2025ರ ಜುಲೈನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಎರಡು ಕಾಮಗಾರಿಗಳ ಆದೇಶ ಲಭಿಸಿದ್ದು, ಲಕ್ಷ್ಮೇಶ್ವರ ತಾಲೂಕು ಸಂಕದಾಳ ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕಾಮಗಾರಿಗಳಲ್ಲಿ 12% ಕಮಿಷನ್ ನೀಡುವಂತೆ ಒತ್ತಾಯಿಸಿದ್ದು, ಒಟ್ಟು 11 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಕಮಿಷನ್ ನೀಡದಿದ್ದರೆ ಟೆಂಡರ್ ರದ್ದು ಮಾಡುವುದಾಗಿ ಹಾಗೂ ರೌಡಿಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು 21-02-2026ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ದಾಳಿ ನಡೆಸಿದರು. 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಶಾಸಕ ಚಂದ್ರು ಲಮಾಣಿ, ಅವರ ಪಿ.ಎ ಮಂಜುನಾಥ ವಾಲ್ಮೀಕಿ ಹಾಗೂ ಸಂಬಂಧಿ ಗುರು ಲಮಾಣಿ ಅವರನ್ನು ರೆಡ್ ಹ್ಯಾಂಡ್ ಬಂಧಿಸಲಾಯಿತು.

ಗದಗ ಹಾಗೂ ಧಾರವಾಡ ಲೋಕಾಯುಕ್ತ ಅಧಿಕಾರಿಗಳ ತಂಡ ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಭೀಕರ ಅಪಘಾತ| ವ್ಯಾನ್‌ಗೆ ಬಸ್ ಡಿಕ್ಕಿ ಹೊಡೆದು ಐವರು ಸಾವು, ಆರು ಮಂದಿ ಗಂಭೀರ!

0

ಭೋಪಾಲ್:- ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವ್ಯಾನ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಜರುಗಿದೆ.

ಘಟನೆಯಲ್ಲಿ ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದ ಮೂಲಕ ಗಾಯಾಳುಗಳನ್ನು ತಕ್ಷಣ ಗೋಹದ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಕೆಲವರನ್ನು ವೈದ್ಯರ ಸೂಚನೆ ಮೇರೆಗೆ ಗ್ವಾಲಿಯರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಡಿಕ್ಕಿ ರಭಸಕ್ಕೆ ವ್ಯಾನ್ ಸಂಪೂರ್ಣವಾಗಿ ಛಿದ್ರಗೊಂಡಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಗೆ ತೆರಳಿದ್ದ ಬಸ್ ಜನರನ್ನು ಇಳಿಸಿ ಭಿಂಡ್‌ನಿಂದ ಗ್ವಾಲಿಯರ್‌ಗೆ ಹೋಗುತ್ತಿತ್ತು. ಈ ಬಸ್ ಗಿಲ್ ಧಾಬಾ ಬಳಿ ಬರುತ್ತಿದ್ದಂತೆ, ಗ್ವಾಲಿಯರ್‌ನಿಂದ ಭಿಂಡ್‌ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ವ್ಯಾನ್‌ನಲ್ಲಿದ್ದ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳೀಯರ ಸಹಾಯದ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮೃತರನ್ನು ಭರತ್ ಶರ್ಮಾ, ಅತುಲ್ ಶಿವಾರೆ, ಜಗದೀಶ್ ಭದೌರಿಯಾ, ಪ್ರದೀಪ್ ಪ್ರಜಾಪತಿ ಮತ್ತು ಆನಂದ್ ಭದೌರಿಯಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಕೇತು ಶರ್ಮಾ (10), ಸಂತೋಷ್ ಶರ್ಮಾ (37), ಮೇವರಂ ಭದೌರಿಯಾ (61), ರಾಮ್ಲಖಾನ್ (59), ಮೀರಾ (30), ಮತ್ತು ಸುಖವೀರ್ ಶರ್ಮಾ (50) ಗ್ವಾಲಿಯರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯದಲ್ಲಿ ಪ್ರೇಮ ವಿವಾದ: ಯುವಕನ ಮನೆಗೆ ಬೆಂಕಿ

0

ಮಂಡ್ಯ: ಪ್ರೇಮ ಸಂಬಂಧದ ವಿವಾದ ತೀವ್ರ ಸ್ವರೂಪ ಪಡೆದುಕೊಂಡು ಯುವಕನ ಮನೆಯೇ ಹೊತ್ತಿ ಉರಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ?

ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ಗ್ರಾಮದ ವಿನೋದ ಹಾಗೂ ಕಾವ್ಯ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಕಾವ್ಯಗೆ 18 ವರ್ಷ ತುಂಬಿದ ಬಳಿಕ ಇಬ್ಬರೂ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಷಯ ಕಾವ್ಯ ಕುಟುಂಬಸ್ಥರಿಗೆ ತಿಳಿಯುತ್ತಿದ್ದಂತೆ ರೋಷೋದ್ರಿಕ್ತಗೊಂಡ ಅವರು ವಿನೋದನ ಮನೆಗೆ ಬೆಂಕಿ ಹಚ್ಚಿದ ಆರೋಪ ಕೇಳಿಬಂದಿದೆ.

ಮನೆ ಮುಕ್ಕಾಲು ಭಾಗ ಸುಟ್ಟು ಹಾನಿ

ಬೆಂಕಿ ಅವಘಡದಿಂದ ಯುವಕ ವಿನೋದನ ಮನೆ ಮುಕ್ಕಾಲು ಭಾಗ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ವಿನೋದನ ಕುಟುಂಬಕ್ಕೆ ದೊಡ್ಡ ನಷ್ಟ ಉಂಟಾಗಿದೆ.

ಪೊಲೀಸ್ ಪರಿಶೀಲನೆ:

ಘಟನೆಯ ಮಾಹಿತಿ ತಿಳಿದ ತಕ್ಷಣ ಮದ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ದೇವನಹಳ್ಳಿಯಲ್ಲಿ ಭೀಕರ ಬೈಕ್ ಅಪಘಾತ; ಓರ್ವ ಸಾವು!

0

ದೇವನಹಳ್ಳಿ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಡಿಯೋ ಹಾಗೂ ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಎರಡು ಬೈಕ್‌ಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಈ ದುರ್ಘಟನೆಯಲ್ಲಿ ನರಸಿಂಹಪ್ಪ ಎಂಬುವವರು ಸಾವನ್ನಪ್ಪಿದ್ದಾರೆ.

ಮೃತ ನರಸಿಂಹಪ್ಪ ಅವರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ, ದೇವನಹಳ್ಳಿಯ ಚಪ್ಪರದಕಲ್ಲು ಸಮೀಪ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ದೃಶ್ಯ ರಾಷ್ಟ್ರೀಯ ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

CET ಅರ್ಜಿ ಸಲ್ಲಿಸಲು ಮತ್ತೊಮ್ಮೆ ದಿನಾಂಕ ವಿಸ್ತರಣೆ: ಅರ್ಜಿ ಸಲ್ಲಿಸಲು ಫೆ.27 ಕೊನೆ ದಿನ

0

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದ್ದು, ಇದಕ್ಕೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಮತ್ತೊಮ್ಮೆ ಫೆಬ್ರುವರಿ 27ರವರೆಗೆ ವಿಸ್ತರಿಸಲಾಗಿದೆ.

ಇದು ಕೊನೆಯ ಅವಕಾಶವಾಗಿದ್ದು, ಈ ಅವಧಿ ನಂತರ ಪುನಃ ದಿನಾಂಕ ವಿಸ್ತರಣೆ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದುವರೆಗೂ 3.18 ಲಕ್ಷ ಮಂದಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದು, ಇನ್ನೂ ಅನೇಕರು ಫೆ.22ರ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದಾರೆ, ಆ ಪ್ರಕಾರ ಅರ್ಜಿ ಸಲ್ಲಿಸಲು ಫೆ.27 ಹಾಗೂ ಶುಲ್ಕ ಪಾವತಿಗೆ ಮಾರ್ಚ್ 3ರವರೆಗೆ ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಿರುವವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಸ್ಯಾಟ್ಸ್ ಮೂಲಕ ಆನ್‌ಲೈನ್ ನಲ್ಲಿ ಆಗಿದೆ. ಕಾಲೇಜು ಹಂತದಲ್ಲಿ 1.08 ಲಕ್ಷ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

error: Content is protected !!