Home Blog Page 167

ಮೈಸೂರಿನಲ್ಲಿ ಇತಿಹಾಸ ನಿರ್ಮಾಣ! AI ಮೂಲಕ ಕನ್ನಡಕ್ಕೆ ಬಂದ ಮೊದಲ ದೊಡ್ಡ ಇತಿಹಾಸ ಕೃತಿ ಬಿಡುಗಡೆಗೆ ಸಜ್ಜು

0

ಮೈಸೂರು: ಇದೀಗ ಸಂಸ್ಕೃತಿ ಮತ್ತು ಕೃತಕ ಬುದ್ಧಿಮತ್ತೆಯ ಹೊಸ ಯುಗಕ್ಕೆ ವೇದಿಕೆಯಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಎಐ ತಂತ್ರಜ್ಞಾನ ಬಳಸಿ ಕನ್ನಡಕ್ಕೆ ಅನುವಾದಗೊಂಡಿರುವ ಐತಿಹಾಸಿಕ ಕೃತಿ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.

ಖ್ಯಾತ ಇತಿಹಾಸಕಾರ ವಿಕ್ರಮ್ ಸಂಪತ್ ಬರೆದಿರುವ ‘My Name Is Gauhar Jaan: The Life and Times of a Musician’ ಪುಸ್ತಕವನ್ನು ‘TransLit’ ಎಂಬ ಎಐ ತಂತ್ರಜ್ಞಾನ ಬಳಸಿ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಕೃತಿಯನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ.

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನ ಕೇವಲ ಕೆಲವೇ ವಾರಗಳಲ್ಲಿ ಅನುವಾದ ಕಾರ್ಯ ಪೂರ್ಣಗೊಳಿಸಿದೆ. ಶೇಕಡಾ 80ರಷ್ಟು ನಿಖರತೆಯೊಂದಿಗೆ ಎಐ ಅನುವಾದ ಮಾಡಿದ್ದು, ಬಳಿಕ ಮಾನವ ಸಂಪಾದಕರು ಅಂತಿಮ ತಿದ್ದುಪಡಿ ನಡೆಸಿದ್ದಾರೆ.

ಗೌಹರ್ ಜಾನ್ ಭಾರತೀಯ ಸಂಗೀತ ಇತಿಹಾಸದ ಅಪರೂಪದ ಹೆಸರು. 1902ರಲ್ಲಿ ಗ್ರಾಮೊಫೋನ್‌ನಲ್ಲಿ ಧ್ವನಿ ಮುದ್ರಿಸಿದ ಭಾರತದ ಮೊದಲ ಮಹಿಳಾ ಕಲಾವಿದೆ ಎಂಬ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಜೀವನದ ಕೊನೆಯ ಹಂತದಲ್ಲಿ ಮೈಸೂರು ಮಹಾರಾಜರ ಆಶ್ರಯ ಪಡೆದಿದ್ದ ಅವರು, 1930ರಲ್ಲಿ ಮೈಸೂರಿನಲ್ಲೇ ಕೊನೆಯುಸಿರೆಳೆದಿದ್ದರು.

ಇದೀಗ ಅವರ ಜೀವನ ಚರಿತ್ರೆ ಆಧುನಿಕ ಎಐ ತಂತ್ರಜ್ಞಾನದ ನೆರವಿನಿಂದ ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಭಾರತೀಯ ಪ್ರಕಾಶನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ.

ರಾಜೀನಾಮೆಗೂ ಮುನ್ನವೇ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ಬೆನ್ನಲ್ಲೇ ಆಡಳಿತ ವಲಯದಲ್ಲಿ ಮಹತ್ವದ ಅಧಿಕಾರಿಗಳ ವರ್ಗಾವಣೆ ನಡೆದಿದೆ. ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸುವ ಸಾಧ್ಯತೆ ನಡುವೆಯೇ ಸಿದ್ದರಾಮಯ್ಯ ಅವರ ಆಪ್ತ ಅಧಿಕಾರಿಗಳನ್ನು ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಸಿಎಂ ಆಪ್ತ ಕಾರ್ಯದರ್ಶಿಯಾಗಿದ್ದ ಕೆಎಎಸ್ ಅಧಿಕಾರಿ ಡಾ. ವೆಂಕಟೇಶಯ್ಯ ಅವರನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾಗಿ ನಿಯೋಜಿಸಲಾಗಿದೆ. ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ರಮೇಶ್ ಪಿ. ಕೋನರೆಡ್ಡಿ ಅವರನ್ನು ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

ಇದೇ ವೇಳೆ ಸಿಎಂ ಜಂಟಿ ಕಾರ್ಯದರ್ಶಿಯಾಗಿದ್ದ ಟಿ.ಎನ್. ಕೃಷ್ಣಮೂರ್ತಿ ಅವರನ್ನು ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ-2 ಹುದ್ದೆಗೆ ನೇಮಿಸಲಾಗಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಬಿ. ಶಿವಸ್ವಾಮಿ ಅವರನ್ನು ಕ್ರೈಸ್ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

2023ರಲ್ಲಿ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ತಮ್ಮ ಆಡಳಿತ ತಂಡವನ್ನು ಬಲಪಡಿಸುವ ಉದ್ದೇಶದಿಂದ ಆಪ್ತ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿದ್ದರು. ಆ ಸಂದರ್ಭದಲ್ಲಿ ಡಾ. ವೆಂಕಟೇಶಯ್ಯ ಅವರನ್ನು ಗುತ್ತಿಗೆ ಆಧಾರದ ಮೇಲೆ ಸಿಎಂ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಜೊತೆಗೆ ಹಿರಿಯ ಕೆಎಎಸ್ ಅಧಿಕಾರಿ ರಮೇಶ್ ಪಿ. ಕೋನರೆಡ್ಡಿ ಅವರಿಗೆ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಜವಾಬ್ದಾರಿ ನೀಡಲಾಗಿತ್ತು.

ಸಾಮಾನ್ಯವಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಮುಖ ಆಡಳಿತಾತ್ಮಕ ಬದಲಾವಣೆಗಳು ನಡೆಯುವುದು ರೂಢಿಯಾಗಿದೆ. ಆದರೆ, ಸಿದ್ದರಾಮಯ್ಯ ರಾಜೀನಾಮೆ ನೀಡುವ ಮುನ್ನವೇ ಅವರ ಆಪ್ತ ಅಧಿಕಾರಿಗಳ ವರ್ಗಾವಣೆ ನಡೆದಿರುವುದು ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Santhosh Lad Cry: ಕಣ್ಣೀರು ಹಾಕುತ್ತಲೇ ಕಾವೇರಿ ನಿವಾಸದಿಂದ ತೆರಳಿದ ಸಚಿವ ಲಾಡ್! |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಘೋಷಿಸಿದ ವೇಳೆ ಸಚಿವ ಸಂಪುಟದ ಆಪ್ತ ಸದಸ್ಯರು ಭಾವುಕರಾದ ಘಟನೆ ನಡೆದಿದೆ. ಸಚಿವ ಸಂತೋಷ್ ಲಾಡ್ ಸೇರಿದಂತೆ ಕೆಲ ಸಚಿವರು ಸಭೆಯಲ್ಲೇ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ಘೋಷಣೆಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಆಪ್ತ ಸಚಿವರು ಹಾಗೂ ಶಾಸಕರೊಂದಿಗೆ ಬ್ರೇಕ್‌ಫಾಸ್ಟ್ ಸಭೆ ನಡೆಸಿದರು. ಈ ವೇಳೆ ತಮ್ಮ ರಾಜೀನಾಮೆ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಮುಖ್ಯಮಂತ್ರಿ ಆಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿ, ಅವರಿಗೆ ಎಲ್ಲರೂ ಸಹಕಾರ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ರಾಜೀನಾಮೆ ಘೋಷಣೆ ಕೇಳುತ್ತಿದ್ದಂತೆಯೇ ಸಭೆಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದ್ದು, ಸಚಿವ ಸಂತೋಷ್ ಲಾಡ್ ಸೇರಿದಂತೆ ಹಲವು ಆಪ್ತರು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯ ಬಳಿಕ ಸಚಿವರು ಒಬ್ಬೊಬ್ಬರಾಗಿ ಹೊರಬಂದಾಗ ಅವರ ಮುಖದಲ್ಲಿ ಬೇಸರದ ಭಾವ ಸ್ಪಷ್ಟವಾಗಿ ಕಂಡುಬಂತು. ಆದರೆ ಮಾಧ್ಯಮಗಳು ಪ್ರಶ್ನೆ ಕೇಳಿದರೂ ಯಾವುದೇ ಸಚಿವರು ಸಿಎಂ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ.

ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ: ನಾಯಕತ್ವ ಬದಲಾವಣೆ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಚರ್ಚೆ ತೀವ್ರಗೊಂಡಿರುವ ನಡುವೆಯೇ ಕರ್ನಾಟಕ ಕಾಂಗ್ರೆಸ್ ಪಕ್ಷ ಒಗ್ಗಟ್ಟೇ ನಮ್ಮ ಶಕ್ತಿ’ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿದೆ.

ಸಿಎಂ ವಿದಾಯದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರಸ್ಪರ ಅಪ್ಪಿಕೊಂಡಿರುವುದು ಮತ್ತು ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿರುವ ಫೋಟೋಗಳನ್ನು ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದೆ.

ಫೋಟೋಗಳೊಂದಿಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಂದು, ಇಂದು, ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ. ಸಾರ್ವಜನಿಕರ ಸೇವೆಯೇ ನಮ್ಮ ಗುರಿ ಎಂದು ಉಲ್ಲೇಖಿಸಿದೆ.

ಇದರ ನಡುವೆ, ವಿದಾಯದ ಉಪಹಾರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನನಗೆ ಯಾವುದೇ ನೋವಿಲ್ಲ. ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಹೇಳುವುದನ್ನು ಪಾಲಿಸುವುದು ನನ್ನ ಕರ್ತವ್ಯ ಎಂದು ತಿಳಿಸಿದ್ದಾರೆ. ಈ ಹಿಂದೆ ನಡೆದಿದ್ದ ಒಪ್ಪಂದದ ಸೂತ್ರವನ್ನು ಸಹ ಸಿದ್ದರಾಮಯ್ಯ ಸಭೆಯಲ್ಲಿ ಬಹಿರಂಗಪಡಿಸಿದ್ದು, ಸಂಪುಟದ ಸಹೋದ್ಯೋಗಿಗಳ ಎದುರೇ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ರಾಜೀನಾಮೆಯಿಂದ ರಾಜ್ಯದ ಚುನಾವಣಾ ರಾಜಕಾರಣದ ಮೇಲೆ ಪರಿಣಾಮ: ಬೊಮ್ಮಾಯಿ

ಬೆಂಗಳೂರು: ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದು ಕಾಂಗ್ರೆಸ್ ಪಕ್ಷದ ಮೇಲೆ ಹಾಗೂ ಕರ್ನಾಟಕದ ಚುನಾವಣಾ ರಾಜಕಾರಣದ ಮೇಲೆ ಪರಿಣಾಮ‌ ಬೀರಲಿದೆ. ಕಾಂಗ್ರೆಸ್ ನಿಂದ ಹಿಂದುಳಿದವರಿಗೆ ನಂಬಿಕೆ ದ್ರೋಹವಾಗಿದ್ದು, ಹಿಂದುಳಿದ ವರ್ಗ ಕಾಂಗ್ರೆಸ್ ವಿರುದ್ದ ತಿರುಗಿ ಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಖಾಸಗಿ ಸುದ್ದಿ ಸಂಸ್ಥೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಹಿಂದುಳಿದವರಿಗೆ ನಂಬಿಕೆ ದ್ರೋಹ ಮಾಡಿದಂತಾಗಿದೆ. ವಿಶೇಷವಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಒಬಿಸಿ ಪರವಾಗಿ ಪ್ರಚಾರ ಮಾಡುತ್ತಾರೆ. ಆದರೆ, ಒಬಿಸಿ ಮುಖ್ಯಮಂತ್ರಿಯನ್ನು ಕಿತ್ತು ಹಾಕಿದ್ದಾರೆ.

ಹಿಂದುಳಿದ ವರ್ಗಗಳ ಬಗ್ಗೆ ಅವರು ಮೊಸಳೆ ಕಣ್ಣೀರು ಸುರಿಸುವುದು ಈಗ ಬಹಿರಂಗವಾಗಿದೆ. ಇದರಿಂದ ಹಿಂದುಳಿದ ವರ್ಗದವರು ಬೇಸರಗೊಂಡಿದ್ದು, ಅವರು 2028 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುವುದಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಡಳಿತ ಪಕ್ಷವನ್ನು ಅಶಕ್ತಗೊಳಿಸಿದ್ದು, ಬಿಜೆಪಿ ಇನ್ನಷ್ಟು ಬಲಿಷ್ಠವಾಗಿ ನಮ್ಮದೇ ಆದ ಶಕ್ತಿಯೊಂದಿಗೆ 2028 ಕ್ಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಪಕ್ಷ ಸಂಘಟನೆಗೆ ಸೂಚನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ರಾಜ್ಯ ನಾಯಕರಿಗೆ ನೀಡಿರುವ ಸೂಚನೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಅಧ್ಯಕ್ಷರು ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಂಘಟಿಸಲು ಸೂಚಿಸಿದ್ದಾರೆ.

ಅಲ್ಲದೆ ಎಸ್ ಐಆರ್ ಪ್ರಕ್ರಿಯೆಯಲ್ಲಿ ಪಕ್ಷದ ಬಿಎಲ್ ಎ ಮತ್ತು ಬಿಎಲ್ ಎ 2 ಹೇಗೆ ಕೆಲಸ ನಿರ್ವಹಿಸಬೇಕೆನ್ನುವುದನ್ನು ಗಂಭೀರವಾಗಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಅವರು ಕರ್ನಾಟಕಕ್ಕೆ ಮೇಲಿಂದ ಮೇಲೆ ಭೇಟಿ ನೀಡಲಿದ್ದು, 2028 ಕ್ಕೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಅವರ ಗುರಿಯಾಗಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಬಕ್ರೀದ್ ಸಂಭ್ರಮ; ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸೇರಿದಂತೆ ಗಣ್ಯರಿಂದ ಶುಭಾಶಯ

ನವದೆಹಲಿ: ದೇಶಾದ್ಯಂತ ಮುಸ್ಲಿಂ ಸಮುದಾಯದಲ್ಲಿ ಈದ್ ಉಲ್-ಅಧಾ (ಬಕ್ರೀದ್) ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಅನೇಕ ಗಣ್ಯರು ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸಹೋದರತ್ವ, ತ್ಯಾಗ ಮತ್ತು ಮಾನವೀಯತೆ ಸೇವೆಯ ಸಂದೇಶವನ್ನು ಈ ಹಬ್ಬ ಸಾರುತ್ತದೆ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಶುಭಾಶಯ ಸಂದೇಶ ಹಂಚಿಕೊಂಡಿದ್ದಾರೆ. “ಈದ್ ಉಲ್-ಅಧಾ ಶುಭಾಶಯಗಳು. ಈ ಪವಿತ್ರ ಹಬ್ಬವು ಸಮಾಜದಲ್ಲಿ ಸಂತೋಷ, ಸಹೋದರತ್ವ ಮತ್ತು ಏಕತೆಯ ಮನೋಭಾವವನ್ನು ಮತ್ತಷ್ಟು ಬಲಪಡಿಸಲಿ. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಯಶಸ್ಸು ದೊರಕಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ಬರೆದಿದ್ದಾರೆ.

ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. “ಈದ್ ಅಲ್-ಅಧಾ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ, ವಿಶೇಷವಾಗಿ ಮುಸ್ಲಿಂ ಸಹೋದರ-ಸಹೋದರಿಯರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಹಬ್ಬವು ತ್ಯಾಗ, ಭಕ್ತಿ ಮತ್ತು ಸ್ವಯಂ ಸಮರ್ಪಣೆಯ ಸಂಕೇತವಾಗಿದೆ. ಮಾನವೀಯತೆ ಮತ್ತು ವಂಚಿತ ವರ್ಗಗಳ ಸೇವೆಗೆ ಇದು ನಮಗೆ ಸ್ಫೂರ್ತಿ ನೀಡುತ್ತದೆ” ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.

ಬಕ್ರೀದ್ ಹಬ್ಬದ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿ ವಿಶೇಷ ಪ್ರಾರ್ಥನೆಗಳು, ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳು ನಡೆಯುತ್ತಿವೆ. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಮಾಡೆಲ್ ತ್ವಿಶಾ ಶರ್ಮಾ ಸಾವು: ಅತ್ತೆ ಗಿರಿಬಾಲಾ ಸಿಂಗ್ ನಿರೀಕ್ಷಣಾ ಜಾಮೀನು ರದ್ದು

ಮಧ್ಯಪ್ರದೇಶ: ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಅತ್ತೆ ಮತ್ತು ಮಾಜಿ ಜಿಲ್ಲಾ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ.

ಕೆಳ ಹಂತದ ನ್ಯಾಯಾಲಯವು ಪ್ರಕರಣದ ಗಂಭೀರತೆಯನ್ನು ಸಮರ್ಪಕವಾಗಿ ಪರಿಶೀಲಿಸದೇ ತರಾತುರಿಯಲ್ಲಿ ಜಾಮೀನು ಮಂಜೂರು ಮಾಡಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿರುವ ಗಿರಿಬಾಲಾ ಸಿಂಗ್ ಹಾಗೂ ಅವರ ಪುತ್ರ ಸಮರ್ಥ್ ಸಿಂಗ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಪರಿಗಣಿಸಿದ್ದ ಸೆಷನ್ಸ್ ಕೋರ್ಟ್ ಮೇ 15ರಂದು ಜಾಮೀನು ಮಂಜೂರು ಮಾಡಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಜಾಮೀನು ರದ್ದುಪಡಿಸಿದೆ. ಈ ಕುರಿತು ಆದೇಶ ನೀಡಿದ ಹೈಕೋರ್ಟ್ ರಜಾಪೀಠದ ನ್ಯಾಯಮೂರ್ತಿ ದೇವನಾರಾಯಣ್ ಮಿಶ್ರಾ, ಪ್ರಕರಣದಲ್ಲಿನ ಸಾಕ್ಷ್ಯಾಧಾರಗಳನ್ನು ವಿಚಾರಣಾ ನ್ಯಾಯಾಲಯ ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದು ಹೇಳಿದ್ದಾರೆ.

ಪ್ರಕರಣದ ವಾಸ್ತವಾಂಶಗಳು ಹಾಗೂ ಆರೋಪಿಗಳ ವಿರುದ್ಧ ಇರುವ ಗಂಭೀರ ಆರೋಪಗಳನ್ನು ಪರಿಗಣಿಸಿದಾಗ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ ನಿರೀಕ್ಷಣಾ ಜಾಮೀನು ಆದೇಶ ಸಮಂಜಸವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಮೇ 12ರಂದು ತ್ವಿಶಾ ಶರ್ಮಾ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ಗಂಭೀರತೆಯನ್ನು ಗಮನಿಸಿ ಕಳೆದ ಸೋಮವಾರದಿಂದ ಸಿಬಿಐ ತನಿಖೆ ಆರಂಭಿಸಿದೆ. ಇದೇ ವೇಳೆ ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ಮರು ಎಫ್‌ಐಆರ್ ಕೂಡ ದಾಖಲಾಗಿದೆ.

ಇನ್ನೊಂದೆಡೆ, ಗಿರಿಬಾಲಾ ಸಿಂಗ್ ಅವರ ಜಾಮೀನು ರದ್ದಾದ ಬಳಿಕ ಪ್ರತಿಕ್ರಿಯೆ ನೀಡಿದ ಸಂತ್ರಸ್ತ ಕುಟುಂಬದ ಪರ ವಕೀಲ ಅನುರಾಗ್ ಶ್ರೀವಾಸ್ತವ, “ತ್ವಿಶಾ ಪ್ರಕರಣದಲ್ಲಿ ಕೊನೆಗೂ ನ್ಯಾಯ ದೊರಕಿದೆ. 36 ವರ್ಷಗಳ ಕಾಲ ನ್ಯಾಯಾಂಗ ಸೇವೆಯಲ್ಲಿ ಇದ್ದ ಗಿರಿಬಾಲಾ ಸಿಂಗ್ ಕಾನೂನಿಗೆ ಗೌರವ ನೀಡಬೇಕಾಗಿದೆ. ಅವರು ಸಿಬಿಐಗೆ ಶರಣಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು” ಎಂದು ಹೇಳಿದ್ದಾರೆ.

ಸಿದ್ದರಾಮಯ್ಯರನ್ನು ಕಾಂಗ್ರೆಸ್ ಹೈಕಮಾಂಡ್ ಅಗೌರವದಿಂದ ನಡೆಸಿಕೊಂಡಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಗೌರವದಿಂದ ನಡೆಸಿಕೊಂಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಅವಮಾನಕರವಾಗಿ ನಡೆಸಿಕೊಂಡಿದೆ. ಆದರೆ ತಮ್ಮ ಹಿರಿತನದ ಗೌರವಕ್ಕೆ ಧಕ್ಕೆ ಬಾರದಿರಲಿ ಎಂಬ ಕಾರಣಕ್ಕೆ ಸಿದ್ದರಾಮಯ್ಯ ತಮ್ಮ ನೋವನ್ನು ಹೊರಹಾಕುತ್ತಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ಇದೇ. ಇದು ಬಂಡವಾಳಶಾಹಿಗಳಿಗೆ ಮಣೆ ಹಾಕುವ ಪಕ್ಷವಾಗಿದೆ. ಮಾನವೀಯತೆಯಿಂದ ಹೈಕಮಾಂಡ್ ನಡೆದುಕೊಳ್ಳಬೇಕಿತ್ತು. ಆದರೆ ಆ ರೀತಿಯ ವರ್ತನೆ ಕಾಣಿಸಲಿಲ್ಲ ಎಂದು ಕಿಡಿಕಾರಿದರು.

ಮುಂದುವರಿದು, ಮೊದಲು ಹೈಕಮಾಂಡ್ ‘ಸಿದ್ದರಾಮಯ್ಯ ಜೀ’ ಎಂದು ಕರೆಯುತ್ತಿತ್ತು. ಈಗ ‘ಸಿದ್ದರಾಮಯ್ಯ ಯು ಮಸ್ಟ್ ರಿಸೈನ್’ ಎಂದು ಹೇಳುತ್ತಿದೆ. ನನ್ನನ್ನು ಹೈಕಮಾಂಡ್ ಗೌರವಿಸಿಲ್ಲ ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲು ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ ಹೈಕಮಾಂಡ್ ಒಂದು ದಿನವೂ ಸಮಯ ನೀಡದೇ ತಕ್ಷಣ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಬಿಹಾರದ ಗಂಗಾ ನದಿಯಲ್ಲಿ ದೋಣಿ ದುರಂತ; ಇಬ್ಬರು ಸಾವು, ಐವರು ನಾಪತ್ತೆ

ಪಾಟ್ನಾ: 14 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗಂಗಾ ನದಿಯಲ್ಲಿ ಮುಳುಗಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ಐವರು ನಾಪತ್ತೆಯಾಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಪ್ರವಾಹದಿಂದ ತತ್ತರಿಸಿರುವ ಪಾಟ್ನಾದ ಉಮಾನಾಥ್ ಗಂಗಾ ಘಾಟ್ ಸಮೀಪ ಈ ದುರಂತ ಸಂಭವಿಸಿದೆ. ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದಲ್ಲದೆ, ಬಲವಾದ ಗಾಳಿಯೂ ಬೀಸುತ್ತಿದ್ದ ಹಿನ್ನೆಲೆ ದೋಣಿ ನಿಯಂತ್ರಣ ತಪ್ಪಿ ಮುಳುಗಿದೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಎಸ್ಡಿಆರ್‌ಎಫ್ ತಂಡ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ದೋಣಿಯಲ್ಲಿದ್ದ ಏಳು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಇಬ್ಬರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.

ಮೃತರನ್ನು ನೀಲಂ ಕುಮಾರಿ (30) ಹಾಗೂ ಕಾಶಿ ಕುಮಾರ್ (15) ಎಂದು ಗುರುತಿಸಲಾಗಿದೆ. ಇನ್ನೂ ಐವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕರೆದೊಯ್ಯಲಾಗಿತ್ತು. ಅಲ್ಲದೆ ಪ್ರಯಾಣಿಕರಿಗೆ ಯಾವುದೇ ಸುರಕ್ಷತಾ ಕವಚಗಳನ್ನು ಒದಗಿಸದಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರತಿಕೂಲ ಹವಾಮಾನ ಮತ್ತು ನದಿಯ ಅಪಾಯಕಾರಿ ಪರಿಸ್ಥಿತಿಗಳ ನಡುವೆಯೂ ಮುಳುಗು ತಜ್ಞರು ಹಾಗೂ ರಕ್ಷಣಾ ಸಿಬ್ಬಂದಿ ನದಿಯ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬೆಳಗಾವಿಯಲ್ಲಿ SDRF CPI ಆತ್ಮಹತ್ಯೆ! ಮನೆಯಲ್ಲಿ ನೇಣಿಗೆ ಶರಣಾದ ಅಧಿಕಾರಿ

ಬೆಳಗಾವಿ: SDRF ವಿಭಾಗದ ಸಿಪಿಐ ಅಧಿಕಾರಿಯೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಮೃತರನ್ನು ಸಿಪಿಐ ಶ್ರೀಶೈಲ ಚೌಗಲೆ (37) ಎಂದು ಗುರುತಿಸಲಾಗಿದೆ. ಅವರು ಬೆಳಗಾವಿಯ ಚನ್ನಮ್ಮ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾಹಿತಿಯ ಪ್ರಕಾರ, ಶ್ರೀಶೈಲ ಚೌಗಲೆ ಅವರು ಮನೆಯ ಕೋಣೆಯ ಬಾಗಿಲು ಹಾಕಿಕೊಂಡು ನೇಣುಬಿಗಿದುಕೊಂಡಿದ್ದಾರೆ. ಅನುಮಾನಗೊಂಡ ಪತ್ನಿ ಈ ಕುರಿತು ಎಸ್ಡಿಆರ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕೋಣೆಯ ಬಾಗಿಲು ಮುರಿದು ಅವರನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದು ತಿಳಿದುಬಂದಿದೆ.

ಶ್ರೀಶೈಲ ಚೌಗಲೆ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತದೇಹವನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಪ್ರಕರಣ ಸಂಬಂಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.