ವಿಜಯಸಾಕ್ಷಿ ಸುದ್ದಿ, ಗದಗ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಚುರುಕುಗೊಂಡಿದ್ದು, ಈಗಾಗಲೇ ಶೇ.94.14ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಐ.ಆರ್ ಕುರಿತು ರಾಜ್ಯಾದ್ಯಂತ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆ ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಜೂನ್ 30ರಿಂದ ಮನೆ-ಮನೆ ಸಮೀಕ್ಷೆ
ಕಳೆದ ಆರು ತಿಂಗಳಿಂದ ಎಸ್.ಐ.ಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಿದ್ಧತೆ ನಡೆಸಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವನ್ನಾಗಿ ಮಾಡಿಕೊಂಡು, ಪ್ರಸ್ತುತ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಈಗಾಗಲೇ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯ ಒಟ್ಟು 9,04,994 ಮತದಾರರಲ್ಲಿ 8,51,991 ಮತದಾರರನ್ನು ಗುರುತಿಸಿ ಕುಟುಂಬ ಲಿಂಕೇಜ್‌ನೊಂದಿಗೆ ಮ್ಯಾಪಿಂಗ್ ಮಾಡಲಾಗಿದೆ ಎಂದರು.
ಜೂನ್ 20ರಿಂದ 29ರವರೆಗೆ ಪೂರ್ವಸಿದ್ಧತೆ, ತರಬೇತಿ ಹಾಗೂ ಮುದ್ರಣ ಕಾರ್ಯ ನಡೆಯಲಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದರು.
ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಇನ್ನೂ ಪತ್ತೆಯಾಗದ 53,004 ಮತದಾರರ ಕುರಿತು ವಿಶೇಷ ಪರಿಶೀಲನೆ ಕೈಗೊಳ್ಳಲಾಗುತ್ತಿದೆ. ಕೆಲವರು ಮೃತಪಟ್ಟಿರಬಹುದು, ವಲಸೆ ಹೋಗಿರಬಹುದು ಅಥವಾ ಹೆಸರು ಎರಡು ಬಾರಿ ಸೇರ್ಪಡೆಯಾಗಿರಬಹುದು. ಆದರೆ ಯಾರ ಹೆಸರನ್ನೂ ಏಕಾಏಕಿ ತೆಗೆದುಹಾಕುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಪತ್ತೆಯಾಗದ ಮತದಾರರಿಗೆ ನೋಟಿಸ್ ನೀಡಿ ಪರಿಶೀಲನೆ ನಡೆಸಲಾಗುವುದು. ವಿಶೇಷ ಕಾರ್ಯಾಚರಣೆಯ ಮೂಲಕ ಪ್ರತಿಯೊಬ್ಬರನ್ನೂ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮುಂದಿನ ಹಂತದಲ್ಲಿ ಪ್ರತಿಯೊಬ್ಬ ಮತದಾರರ ಮನೆಗೆ ಬಿಎಲ್‌ಒಗಳು ಅರ್ಧದಷ್ಟು ಮಾಹಿತಿ ಭರ್ತಿಯಾಗಿರುವ ಗಣತಿ ನಮೂನೆ ತಲುಪಿಸಲಿದ್ದಾರೆ. ಅದರಲ್ಲಿ ಮತದಾರರ ಹೆಸರು, ಎಪಿಕ್ ಸಂಖ್ಯೆ, ಸಂಬಂಧಿಕರ ವಿವರ ಹಾಗೂ ವಿಧಾನಸಭಾ ಕ್ಷೇತ್ರದ ಮಾಹಿತಿ ನಮೂದಿರುತ್ತದೆ.
ಬಿಎಲ್‌ಒಗಳು ಕನಿಷ್ಠ ಮೂರು ಬಾರಿ ಮನೆಗಳಿಗೆ ಭೇಟಿ ನೀಡಿ ನಮೂನೆ ವಿತರಿಸಲಿದ್ದು, ಮತದಾರರು ಮಾಹಿತಿಯನ್ನು ಪರಿಶೀಲಿಸಿ ಸಹಿ ಮಾಡಿ ಕಡ್ಡಾಯವಾಗಿ ಮರಳಿ ನೀಡಬೇಕು. ಇಲ್ಲದಿದ್ದರೆ ಹೆಸರು ಕೈಬಿಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ರಾಜಕೀಯ ಪಕ್ಷಗಳು ಕೂಡ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿ ಎಸ್.ಐ.ಆರ್ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಕೋರಿದರು.
2002ರ ಮತದಾರರ ಪಟ್ಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಇದ್ದರೆ, ಕುಟುಂಬದ ಇತರ ಸದಸ್ಯರ ಸೇರ್ಪಡೆ ಸುಲಭವಾಗಲಿದೆ. ಮದುವೆ ಅಥವಾ ವಲಸೆ ಕಾರಣದಿಂದ ಹೊಸದಾಗಿ ನೆಲೆಸಿರುವವರಿಗೆ ಕುಟುಂಬ ಲಿಂಕೇಜ್ ಇಲ್ಲದಿದ್ದರೆ ಅಗತ್ಯ ದಾಖಲೆಗಳ ಆಧಾರದಲ್ಲಿ ಹೆಸರು ಸೇರ್ಪಡೆ ಮಾಡಲಾಗುತ್ತದೆ ಎಂದರು.
ಗುರುತಿನ ಚೀಟಿ, ಪಿಂಚಣಿ ಆದೇಶ, ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ, ಶಾಶ್ವತ ನಿವಾಸ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಕುಟುಂಬ ನೋಂದಣಿ, ಭೂಮಿ ಅಥವಾ ಮನೆ ಹಂಚಿಕೆ ದಾಖಲೆ ಸೇರಿದಂತೆ ವಿವಿಧ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಚುನಾವಣೆ ಆಯೋಗದ ನಿಯಮಾವಳಿಯಂತೆ ಒಂದು ಮತಗಟ್ಟೆಗೆ ಗರಿಷ್ಠ 1,200 ಮತದಾರರ ಮಿತಿ ನಿಗದಿಯಾಗಿದ್ದು, ಹೆಚ್ಚಿನ ಮತದಾರರಿರುವ ಪ್ರದೇಶಗಳಲ್ಲಿ ಹೊಸ ಮತಗಟ್ಟೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜುಲೈ 29ರೊಳಗೆ ಮರುಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಚುನಾವಣಾ ಶಾಖೆಯ ತಹಶೀಲ್ದಾರ್ ಸಂತೋಷಕುಮಾರ ಹಿರೇಮಠ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
“ಅರ್ಹ ಯಾವೊಬ್ಬ ಮತದಾರನೂ ಮತಪಟ್ಟಿಯಿಂದ ಹೊರಗುಳಿಯಬಾರದು. ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು ಎಂಬುದು ನಮ್ಮ ಪ್ರಮುಖ ಉದ್ದೇಶ”
ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ
ಅಕ್ಟೋಬರ್ 7ಕ್ಕೆ ಅಂತಿಮ ಮತಪಟ್ಟಿ
ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅಕ್ಟೋಬರ್ 3ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಆಕ್ಷೇಪಣೆಗಳ ಪರಿಶೀಲನೆ ಬಳಿಕ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.