Home Blog Page 23

KPSC ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪ್ರಶ್ನೆಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಪರಿಶೀಲಿಸುತ್ತಿದ್ದೆ ಎಂದ ಐಎಎಸ್ ಅಧಿಕಾರಿ

0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಸಿಐಡಿ ಮುಂದೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ನೀಡಿರುವ ಹೇಳಿಕೆಗಳು ಇದೀಗ ಮಹತ್ವ ಪಡೆದುಕೊಂಡಿವೆ. ಪ್ರಶ್ನೆಪತ್ರಿಕೆ ಸಿದ್ಧತೆ ಹಾಗೂ ಪರಿಶೀಲನೆಗೆ ಸಂಬಂಧಿಸಿದಂತೆ ಗ್ಯಾನೇಂದ್ರ ಹಲವು ಮಹತ್ವದ ಮಾಹಿತಿಗಳನ್ನು ತನಿಖಾಧಿಕಾರಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಸಿಐಡಿ ವಿಚಾರಣೆ ವೇಳೆ, 6 ಮಾದರಿ ಪ್ರಶ್ನೆಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸುತ್ತಿದ್ದುದಾಗಿ ಗ್ಯಾನೇಂದ್ರ ಹೇಳಿಕೆ ನೀಡಿದ್ದಾರೆ. ಪ್ರಶ್ನೆಪತ್ರಿಕೆಗಳು ಮುದ್ರಣಗೊಳ್ಳುವ ಮುನ್ನವೇ ಅವುಗಳನ್ನು ಮನೆಯಲ್ಲಿ ಪರಿಶೀಲಿಸುತ್ತಿದ್ದುದು ಕರ್ತವ್ಯ ಲೋಪಕ್ಕೆ ಕಾರಣವಾಗಿದೆ ಎಂದು ಅವರು ಒಪ್ಪಿಕೊಂಡಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.

ಆದರೆ ಇದೇ ವಿಚಾರದಲ್ಲಿ ಗ್ಯಾನೇಂದ್ರ ನೀಡಿರುವ ಮತ್ತೊಂದು ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರಶ್ನೆಪತ್ರಿಕೆ ಪರಿಶೀಲನೆಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಬಸವರಾಜ್ ಪದೇಪದೇ ಮನೆಗೆ ಬರುತ್ತಿದ್ದನೆಂದೂ, ತಮಗೆ ಅರಿವಿಲ್ಲದಂತೆಯೇ ಬಸವರಾಜ್ ಪ್ರಶ್ನೆಪತ್ರಿಕೆಯಲ್ಲಿದ್ದ ಮಾಹಿತಿ ಬರೆದುಕೊಂಡು ಹೋಗಿದ್ದಾನೆಂದೂ ಗ್ಯಾನೇಂದ್ರ ಹೇಳಿದ್ದಾರೆ. ಈ ಬಗ್ಗೆ ತಾವು ಸರಿಯಾಗಿ ಗಮನ ಹರಿಸಿರಲಿಲ್ಲ ಎಂದ ಅವರು, ಯಾವುದೇ ಲೋಪ ಆಗಿದ್ದರೂ ಅದಕ್ಕೆ ಬಸವರಾಜ್ ಕಾರಣ ಎಂದೂ, ಆತ ಪ್ರಶ್ನೆಪತ್ರಿಕೆ ಕದ್ದಿರುವುದು ಈಗ ಗೊತ್ತಾಗಿದೆ ಎಂದೂ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಮನೆಯಲ್ಲೇ ಪರಿಶೀಲಿಸಿದ ವಿಚಾರವೂ ತನಿಖೆಯ ಪ್ರಮುಖ ಅಂಶವಾಗಿ ಪರಿಣಮಿಸಿದೆ. ಪ್ರಶ್ನೆಪತ್ರಿಕೆ ಸಂಬಂಧಿತ ವಿಚಾರಣೆ ಮುಂದುವರಿಸಿರುವ ಸಿಐಡಿ ಅಧಿಕಾರಿಗಳು, ಇಂದು ಗ್ಯಾನೇಂದ್ರ ಅವರನ್ನು ಅವರ ಮನೆಗೆ ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಮಹಮದ್ ಸುಹೇಲ್ ಬಳಿಕ ಇನ್ನೂ 7 ಅಭ್ಯರ್ಥಿಗಳು ಸಿಐಡಿ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಂಧನದ ಭಯದಿಂದ ಅಭ್ಯರ್ಥಿಗಳು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿಗಳ ವಿಚಾರಣೆಯಲ್ಲಿ, ಅಕ್ರಮ ನೇಮಕಾತಿಗೆ ಒಬ್ಬೊಬ್ಬ ಅಭ್ಯರ್ಥಿಯಿಂದ ವಿಭಿನ್ನ ಮೊತ್ತದ ಹಣ ಪಡೆಯಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಕೆಲವು ಅಭ್ಯರ್ಥಿಗಳು 80 ಲಕ್ಷ ರೂಪಾಯಿವರೆಗೆ, ಇನ್ನೂ ಕೆಲವರು ಸುಮಾರು 40 ಲಕ್ಷ ರೂಪಾಯಿವರೆಗೆ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಇವರಲ್ಲಿ ಕೆಲವರು ಮುಂಗಡ ಹಣ ನೀಡಿದ್ದರೆ, ಮತ್ತಷ್ಟು ಅಭ್ಯರ್ಥಿಗಳು ಸಂಪೂರ್ಣ ಹಣ ಪಾವತಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಮದ್ ಸುಹೇಲ್ ಬಳಿಕ 7 ಅಭ್ಯರ್ಥಿಗಳಿಂದ ಬಂದಿದೆ ಎನ್ನಲಾದ ಈ ಹೇಳಿಕೆಗಳು ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಮತ್ತಷ್ಟು ಮಹತ್ವದ ಸುಳಿವು ನೀಡಿವೆ.

ಉತ್ತರಾಖಂಡದಲ್ಲಿ ಮಳೆ ಅವಾಂತರ: 24 ಗಂಟೆಯಲ್ಲಿ 8 ಸಾವು, ರುದ್ರಪ್ರಯಾಗದಲ್ಲಿ ಭೂಕುಸಿತಕ್ಕೆ ಇಬ್ಬರು ಬಲಿ

0

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. ಭಾರಿ ಮಳೆಯಿಂದ ಭೂಕುಸಿತ, ಮನೆ ಕುಸಿತ, ಹಠಾತ್ ಪ್ರವಾಹ ಸೇರಿದಂತೆ ಹಲವು ಅವಘಡಗಳು ಸಂಭವಿಸಿದ್ದು, ರುದ್ರಪ್ರಯಾಗ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಮಣ್ಣಿನ ಸವಕಳಿಯಿಂದ ಮನೆಗಳು, ರಸ್ತೆಗಳು ಮತ್ತು ಕೃಷಿ ಜಮೀನುಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧಾರ್ ಕಿ ಟುನಿ ಪ್ರದೇಶದಲ್ಲಿ ಗುಡ್ಡದ ಮೇಲಿನಿಂದ ಭಾರಿ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ಕುಸಿದು ಟಿನ್ ಶೆಡ್‌ವೊಂದರ ಗೋಡೆ ಕುಸಿದ ಪರಿಣಾಮ, ಅದರೊಳಗೆ ಮಲಗಿದ್ದ ಇಬ್ಬರು ನೇಪಾಳಿ ಕಾರ್ಮಿಕರು ಮೃತಪಟ್ಟಿದ್ದಾರೆ. ನಿರಂತರ ಮಳೆಯಿಂದ ಗುಡ್ಡದ ಮೇಲಿನ ಮಣ್ಣು ಮತ್ತು ಅವಶೇಷಗಳು ಸಡಿಲಗೊಂಡು ಶೆಡ್ ಮೇಲೆ ಬಿದ್ದಿದ್ದು, ಶೆಡ್ ಕುಸಿದ ಪರಿಣಾಮ ಒಳಗಿದ್ದ ಕಾರ್ಮಿಕರು ಸಿಲುಕಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿನೀತ್ ಪಾಲ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸೋಮೇಶ್ವರ ಬ್ಲಾಕ್‌ನ ವದ್ಯೂರಾ ಗ್ರಾಮದಲ್ಲಿ ಮನೆಯೊಂದರ ಮೇಲೆ ಮಣ್ಣು ಮತ್ತು ಅವಶೇಷಗಳು ಕುಸಿದು ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದರು. ಜಿಲ್ಲಾಧಿಕಾರಿ ಅಂಶುಲ್ ಸಿಂಗ್ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

ಅಲ್ಮೋರಾದಲ್ಲಿ ಹಲವು ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ಮಣ್ಣು ಮತ್ತು ಅವಶೇಷಗಳು ನುಗ್ಗಿದ್ದು, ಹಲವು ರಸ್ತೆಗಳು ಬಂದ್ ಆಗಿವೆ. ಇದರಿಂದ ಸಂಚಾರ ಹಾಗೂ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆ ಹಾಗೂ ಅಸ್ಥಿರವಾಗಿರುವ ಗುಡ್ಡ ಪ್ರದೇಶಗಳು ರಕ್ಷಣಾ ಮತ್ತು ರಸ್ತೆ ತೆರವು ಕಾರ್ಯಕ್ಕೆ ಸವಾಲಾಗಿ ಪರಿಣಮಿಸಿವೆ.

ವೈಭವ್ ಅಬ್ಬರ, ಶಮಿ-ಮುಕೇಶ್ ಬೌಲಿಂಗ್ ದಾಳಿ; ಕೇಂದ್ರ ವಲಯವನ್ನು ಮಣಿಸಿ ಫೈನಲ್ʼಗೆ ಲಗ್ಗೆ ಇಟ್ಟ ಪೂರ್ವ ವಲಯ

0

ಚೆನ್ನೈ: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪೂರ್ವ ವಲಯ ತಂಡ ಬರೋಬ್ಬರಿ 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದೆ. ಮಂಗಳವಾರ ಮುಕ್ತಾಯಗೊಂಡ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೇಂದ್ರ ವಲಯ ತಂಡವನ್ನು 4 ವಿಕೆಟ್‌ಗಳಿಂದ ಮಣಿಸುವ ಮೂಲಕ ಪೂರ್ವ ವಲಯ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಪೂರ್ವ ವಲಯ ತಂಡ ಕೊನೆಯ ಬಾರಿ 2012-13ರ ಆವೃತ್ತಿಯಲ್ಲಿ ದುಲೀಪ್ ಟ್ರೋಫಿ ಚಾಂಪಿಯನ್ ಆಗಿತ್ತು. ಆ ಬಳಿಕ ತಂಡಕ್ಕೆ ಫೈನಲ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಇದೀಗ ನಾಯಕ ಇಶಾನ್ ಕಿಶನ್ ಅವರ ನೇತೃತ್ವದಲ್ಲಿ ತಂಡ ಮತ್ತೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, 14 ವರ್ಷಗಳ ಕಾಯುವಿಕೆಗೆ ತೆರೆ ಎಳೆದಿದೆ.

ತಂಡದ ಯಶಸ್ಸಿನಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಆಟದ ಜೊತೆಗೆ ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಮುಕೇಶ್ ಕುಮಾರ್ ಅವರ ಬೌಲಿಂಗ್ ಪ್ರಮುಖ ಪಾತ್ರ ವಹಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ರಜತ್ ಪಾಟೀದಾರ್ ನಾಯಕತ್ವದ ಕೇಂದ್ರ ವಲಯ 266 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಪೂರ್ವ ವಲಯವೂ 266 ರನ್‌ಗಳಿಗೆ ಸರ್ವಪತನ ಕಂಡಿದ್ದರಿಂದ ಎರಡೂ ತಂಡಗಳ ಮೊದಲ ಇನ್ನಿಂಗ್ಸ್ ಸ್ಕೋರ್ ಸಮಬಲಗೊಂಡಿತ್ತು.

ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಪೂರ್ವ ವಲಯದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಕೇಂದ್ರ ವಲಯದ ಬ್ಯಾಟಿಂಗ್ ಪಡೆಯನ್ನು ಕೇವಲ 158 ರನ್‌ಗಳಿಗೆ ಕಟ್ಟಿಹಾಕಿದರು. ಅಮನ್ ಮೋಖಡೆ 41, ಅರ್ಶದ್ ಖಾನ್ 25 ಹಾಗೂ ರಿಂಕು ಸಿಂಗ್ 20 ರನ್ ಗಳಿಸಿದರು. ಪೂರ್ವ ವಲಯದ ಪರ ಮುಕೇಶ್ ಕುಮಾರ್ 4 ವಿಕೆಟ್ ಹಾಗೂ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರು.

ಗೆಲುವಿಗೆ 159 ರನ್‌ಗಳ ಗುರಿ ಪಡೆದ ಪೂರ್ವ ವಲಯಕ್ಕೆ ಮತ್ತೊಮ್ಮೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಹಾಗೂ ನಾಯಕ ಇಶಾನ್ ಕಿಶನ್ ಆಸರೆಯಾದರು. ವೈಭವ್ 43 ಎಸೆತಗಳಲ್ಲಿ 40 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರೆ, ಇಶಾನ್ ಕಿಶನ್ 41 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೇಂದ್ರ ವಲಯದ ಪರ ಹರ್ಷ್ ದುಬೆ 4 ವಿಕೆಟ್ ಕಬಳಿಸಿದರೂ ತಂಡದ ಗೆಲುವಿಗೆ ಅದು ಸಾಕಾಗಲಿಲ್ಲ. ಅಂತಿಮವಾಗಿ ಪೂರ್ವ ವಲಯ 6 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ 4 ವಿಕೆಟ್‌ಗಳ ಗೆಲುವು ಸಾಧಿಸಿತು.

ಪಂದ್ಯದ ಸ್ಕೋರ್:

ಕೇಂದ್ರ ವಲಯ: 266/10 & 158/10
ಪೂರ್ವ ವಲಯ: 266/10 & 162/6

ಕೇಂದ್ರ ವಲಯ ಪರ: ಅಮನ್ ಮೋಖಡೆ 41, ಅರ್ಶದ್ ಖಾನ್ 25, ಮುಕೇಶ್ ಕುಮಾರ್ 4/44, ಮೊಹಮ್ಮದ್ ಶಮಿ 3/56

ಪೂರ್ವ ವಲಯ ಪರ: ವೈಭವ್ ಸೂರ್ಯವಂಶಿ 40, ಇಶಾನ್ ಕಿಶನ್ ಅಜೇಯ 39

ಕೇಂದ್ರ ವಲಯ ಪರ: ಹರ್ಷ್ ದುಬೆ 4/53

ಸುದೀಪ್‌ಗೆ ಬರ್ತಡೇಗೆ ಮತ್ತೊಂದು ಬಿಗ್‌ ಸರ್ಪ್ರೈಸ್: ‘ದೇವರಾಯ’ ಚಿತ್ರದಲ್ಲಿ ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ

ಬೆಂಗಳೂರು: ಕಿಚ್ಚ ಸುದೀಪ್ ಅವರ 53ನೇ ಹುಟ್ಟುಹಬ್ಬ ಕನ್ನಡ ಚಿತ್ರರಂಗಕ್ಕೆ ಒಂದರ ಹಿಂದೊಂದರಂತೆ ದೊಡ್ಡ ಸಿನಿಮಾ ಘೋಷಣೆಗಳನ್ನು ನೀಡುತ್ತಿದೆ. ‘ಬಿಲ್ಲಾ ರಂಗ ಭಾಷಾ’ ಬಳಿಕ ಇದೀಗ ಸುದೀಪ್ ಮತ್ತೊಂದು ಬೃಹತ್ ಪ್ರಾಜೆಕ್ಟ್ ಘೋಷಿಸಿದ್ದು, ಈ ಬಾರಿ ವಿಜಯನಗರ ಸಾಮ್ರಾಜ್ಯದ ಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ದೇವರಾಯ’ ಎಂಬ ಶೀರ್ಷಿಕೆ ಅಂತಿಮಗೊಂಡಿದೆ.

ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ಕಾನ್ಸೆಪ್ಟ್ ವೀಡಿಯೋ ಸಿನಿಮಾದ ಪ್ರಮಾಣದ ಬಗ್ಗೆ ಸುಳಿವು ನೀಡಿದೆ. ವಿಜಯನಗರ ಸಾಮ್ರಾಜ್ಯದ ಭವ್ಯತೆ, ಗಗನಚುಂಬಿ ದೇವಸ್ಥಾನಗಳ ಗೋಪುರಗಳು, ಆನೆ ಪಡೆಗಳು, ಯುದ್ಧದ ಸನ್ನಿವೇಶಗಳು ಹಾಗೂ ರಾಜನ ಗಾಂಭೀರ್ಯವನ್ನು ಬಿಂಬಿಸುವ ದೃಶ್ಯಗಳ ನಡುವೆ ಸುದೀಪ್ ಅವರ ಕೃಷ್ಣದೇವರಾಯನ ಲುಕ್ ಅನಾವರಣಗೊಂಡಿದೆ.

ಸುದೀಪ್ ಈ ಪಾತ್ರವನ್ನು ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಐತಿಹಾಸಿಕ ರಾಜನ ಪರಂಪರೆಯನ್ನು ಹಂಚಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಬಿಡುಗಡೆಯಾಗಿರುವ ಕಾನ್ಸೆಪ್ಟ್ ವೀಡಿಯೋ ಸಂಪೂರ್ಣವಾಗಿ ಎಐ ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾಗಿದೆ.

ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ದೊರೆಗಳಲ್ಲಿ ಒಬ್ಬರು. ಯುದ್ಧ ಕೌಶಲ, ಸಮರ್ಥ ಆಡಳಿತ ಮತ್ತು ಸಾಹಿತ್ಯದ ಮೇಲಿನ ಆಸಕ್ತಿಗೆ ಹೆಸರುವಾಸಿಯಾಗಿದ್ದ ಅವರ ಜೀವನವನ್ನು ಆಧರಿಸಿ ಸಿನಿಮಾ ರೂಪಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ‘ದೇವರಾಯ’ ಆ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಚಿತ್ರವಾಗಿ ಮೂಡಿಬರುವ ನಿರೀಕ್ಷೆ ಮೂಡಿಸಿದೆ.

ಈ ಹಿಂದೆ ಡಾ. ರಾಜ್‌ಕುಮಾರ್ ಅವರು ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ದಶಕಗಳ ಬಳಿಕ ಅದೇ ಐತಿಹಾಸಿಕ ಪಾತ್ರವನ್ನು ಸುದೀಪ್ ನಿರ್ವಹಿಸಲಿದ್ದು, ಈ ಸಿನಿಮಾ ಅವರ ವೃತ್ತಿಬದುಕಿನಲ್ಲೇ ಪ್ರಮುಖ ಮೈಲಿಗಲ್ಲಾಗುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಪ್ರಿಯಾ ಸುದೀಪ್ ಅವರ ಅರ್ಪಣೆಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಕ್ಕೆ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಹಣ ಹೂಡುತ್ತಿದ್ದಾರೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ‘ದೇವರಾಯ’ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಜ್ಜೆ ಇಡುತ್ತಿದೆ.

ಚಿತ್ರದ ನಿರ್ದೇಶಕರ ಹೆಸರನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ಐತಿಹಾಸಿಕ ಕಥೆಗೆ ಅಗತ್ಯವಿರುವ ಭವ್ಯ ಸೆಟ್‌ಗಳು ಮತ್ತು ವಿಎಫ್‌ಎಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ 2027ರ ಡಿಸೆಂಬರ್‌ನಲ್ಲಿ ‘ದೇವರಾಯ’ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದೆ.

ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಬಸ್ ಸುರಕ್ಷತೆಗೆ ಕಠಿಣ ನಿಯಮ; ಪ್ಯಾನಿಕ್ ಬಟನ್, ಪರದೆ ನಿಷೇಧ ಕಡ್ಡಾಯ

0

ನವದೆಹಲಿ: ಅಪ್ರಾಪ್ತ ಬಾಲಕಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣದ ಬೆನ್ನಲ್ಲೇ ದೆಹಲಿ ಸರ್ಕಾರ ಬಸ್‌ಗಳ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ.

ದೆಹಲಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ವಾಹನ ಟ್ರ್ಯಾಕಿಂಗ್ ಸಾಧನಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು ಎಂದು ಸಾರಿಗೆ ಇಲಾಖೆ ಹೊಸ ನಿರ್ದೇಶನ ಹೊರಡಿಸಿದೆ. ಬಸ್‌ಗಳ ಕಿಟಕಿಗಳಿಗೆ ಪರದೆ ಹಾಕುವುದನ್ನು ನಿಷೇಧಿಸಲಾಗಿದ್ದು, ಒಳಗೆ ಮತ್ತು ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುವಂತೆ ಕಿಟಕಿ ಹಾಗೂ ಗಾಜಿನ ಪಾರದರ್ಶಕತೆ ಕಾಪಾಡಬೇಕು ಎಂದು ಸೂಚಿಸಲಾಗಿದೆ.

ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಸ್ ಚಾಲಕ ಮತ್ತು ಕಂಡಕ್ಟರ್ ಕೃತ್ಯ ಎಸಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಬಾಲಕಿ ಪ್ರಯಾಣಿಸುತ್ತಿದ್ದ ವೇಳೆ ಬಸ್ ಕಿಟಕಿಗಳಿಗೆ ಪರದೆ ಹಾಕಲಾಗಿದ್ದು, ಇದರಿಂದ ಒಳಗಿನ ಚಟುವಟಿಕೆ ಹೊರಗಿನಿಂದ ಕಾಣದಂತಾಗಿತ್ತು ಎನ್ನಲಾಗಿದೆ. ಕಾನೂನಿನ ಪ್ರಕಾರ ಇರಬೇಕಾದ ಸಿಸಿಟಿವಿ ವ್ಯವಸ್ಥೆಯೂ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ವರದಿಯಾಗಿದೆ.

ಆಗಸ್ಟ್ 4ರ ರಾತ್ರಿ ಈ ಘಟನೆ ನಡೆದಿದ್ದು, ಕೃತ್ಯದ ಬಳಿಕ ಚಾಲಕ ಮತ್ತು ಕಂಡಕ್ಟರ್ ಬಾಲಕಿಯನ್ನು ಕಾಶ್ಮೀರಿ ಗೇಟ್ ಬಳಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಗ್ರೇಟರ್ ನೋಯ್ಡಾದಿಂದ ಬಸ್ ಹತ್ತಿದ್ದು, ಅಲ್ಲಿಂದ 40 ಕಿ.ಮೀ.ಗೂ ಹೆಚ್ಚು ದೂರದ ಕಾಶ್ಮೀರಿ ಗೇಟ್ ಬಳಿ ಆಕೆಯನ್ನು ಬಿಟ್ಟು ಹೋಗಲಾಗಿತ್ತು ಎನ್ನಲಾಗಿದೆ.

ದೆಹಲಿ ಸಾರಿಗೆ ಇಲಾಖೆ ಹೊರಡಿಸಿರುವ ಈ ಹೊಸ ನಿರ್ದೇಶನಗಳು ದೆಹಲಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಿಗೆ ಅನ್ವಯಿಸಲಿದ್ದು, ಇತರ ರಾಜ್ಯಗಳ ಬಸ್‌ಗಳಿಗೂ ಇವು ಅನ್ವಯವಾಗಲಿವೆ. ಪ್ರತಿ ಬಸ್‌ನಲ್ಲಿರುವ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಹಾಗೂ ಪ್ಯಾನಿಕ್ ಬಟನ್‌ಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು ಮತ್ತು ಪ್ಯಾನಿಕ್ ಬಟನ್ ಪ್ರಯಾಣಿಕರಿಗೆ ಸುಲಭವಾಗಿ ಸಿಗುವಂತಿರಬೇಕು ಎಂದು ಸೂಚಿಸಲಾಗಿದೆ.

ಪ್ರತಿ ಬಸ್‌ನಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ಸಾಧನ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಕಡ್ಡಾಯವಾಗಿ ಇರಬೇಕು. ರಾತ್ರಿ ವೇಳೆ ಅಥವಾ ಸಂಚಾರದಲ್ಲಿಲ್ಲದ ಸಮಯದಲ್ಲಿ ವಾಹನಗಳನ್ನು ಸುರಕ್ಷಿತ, ಅಧಿಕೃತ ಹಾಗೂ ಸೂಕ್ತ ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲೇ ನಿಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

ಸಾರಿಗೆ ಸಚಿವ ಡಾ. ಪಂಕಜ್ ಕುಮಾರ್ ಸಿಂಗ್ ಮಾತನಾಡಿ, ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು. ದೆಹಲಿಯಲ್ಲಿ ಸಂಚರಿಸುವ ಪ್ರತಿಯೊಂದು ಬಸ್ ಕೂಡ ನಿಗದಿತ ಸುರಕ್ಷತಾ ಮತ್ತು ಕಾರ್ಯಾಚರಣಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.

ಮೋದಿ ಸಾರ್ವಜನಿಕ ಜೀವನಕ್ಕೆ 25 ವರ್ಷ: ‘ಸೇವಾ ಸಂಕಲ್ಪ’ ಅಭಿಯಾನಕ್ಕೆ ಬಿಜೆಪಿ ಸಿದ್ಧತೆ, ಇಂದು ಪ್ರಮುಖರ ಸಭೆ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನಕ್ಕೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ‘ಸೇವಾ ಸಂಕಲ್ಪ’ ಹೆಸರಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಪಕ್ಷ ಮುಂದಾಗಿದೆ.

ಅಭಿಯಾನದ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಇಂದು ನವದೆಹಲಿಯಲ್ಲಿ ಬಿಜೆಪಿ ಪ್ರಮುಖರ ಮಹತ್ವದ ಸಭೆ ನಡೆಯಲಿದೆ. ಬಿಜೆಪಿ ಹಾಗೂ ಎನ್‌ಡಿಎ ಆಡಳಿತದ ರಾಜ್ಯಗಳ ಆಯ್ದ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿವಾಸದಲ್ಲಿ ನಡೆಯಲಿರುವ ತರಬೇತಿ ಕಾರ್ಯಾಗಾರದಲ್ಲಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸುಮಾರು 25 ಮುಖ್ಯಮಂತ್ರಿಗಳು ಹಾಗೂ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ಸಾಧನೆಗಳು ಹಾಗೂ ವಿವಿಧ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರದಲ್ಲಿ ತಂತ್ರಗಾರಿಕೆ ರೂಪಿಸಲಾಗುವುದು. ಅಭಿಯಾನವನ್ನು ದೇಶಾದ್ಯಂತ ಪರಿಣಾಮಕಾರಿಯಾಗಿ ನಡೆಸುವ ಕುರಿತು ನಾಯಕರು ಚರ್ಚೆ ನಡೆಸಲಿದ್ದಾರೆ. ಕಾರ್ಯಾಗಾರ ಮುಗಿದ ಬಳಿಕ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ.

ಮೋದಿ ಅವರ ಸಾರ್ವಜನಿಕ ಜೀವನದ 25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಒಟ್ಟು 17 ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಸೇವೆ, ಅಭಿವೃದ್ಧಿ ಹಾಗೂ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದೇ ಈ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಇಂದು ಮಹತ್ವದ ದಿನ: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆಗಳಿಗೆ ವೇದಿಕೆ ಸಿದ್ಧವಾಗಿದೆ. ಆರೋಪಿ ದರ್ಶನ್‌ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಹೈಕೋರ್ಟ್‌ ಆದೇಶದ ನಿರೀಕ್ಷೆಯ ನಡುವೆಯೇ, ಪ್ರದೋಷ್‌ ಅವರ ಮಾಫಿ ಸಾಕ್ಷಿ ಹೇಳಿಕೆ ಕೂಡ ದಾಖಲಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಕೊಲೆ ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಪ್ರದೋಷ್‌ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಈ ಹಿಂದೆ ಅಂಗೀಕರಿಸಿತ್ತು. ಬಳಿಕ ಸೆಪ್ಟೆಂಬರ್ 2ರಂದು ಸಾಕ್ಷಿ ಹೇಳಿಕೆ ದಾಖಲಿಸಲು ವಿಟ್ನೆಸ್‌ ಸಮನ್ಸ್‌ ಜಾರಿಗೊಳಿಸಲಾಗಿತ್ತು.

ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ನುಡಿಯುವಂತೆ ಜೈಲಾಧಿಕಾರಿಗಳ ಮೂಲಕ ಪ್ರದೋಷ್‌ಗೆ ಸಮನ್ಸ್‌ ಜಾರಿ ಮಾಡಲು ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಸೂಚಿಸಿದ್ದರು. ಹೀಗಾಗಿ ಇಂದು ಮಧ್ಯಾಹ್ನ ಪ್ರದೋಷ್‌ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆಯೇ ಎಂಬುದೇ ಸದ್ಯದ ಪ್ರಮುಖ ಪ್ರಶ್ನೆಯಾಗಿದೆ.

ಇದರ ನಡುವೆ, ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಸೆಷನ್ಸ್‌ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ದರ್ಶನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್‌ ಪರ ವಕೀಲರು ಸಲ್ಲಿಸಿರುವ ಅರ್ಜಿ ಹೈಕೋರ್ಟ್‌ ಕಾಸ್‌ ಲಿಸ್ಟ್‌ನಲ್ಲಿ 49ನೇ ಮ್ಯಾಟರ್‌ ಆಗಿದೆ.

ಇಂದು ಬೆಳಗ್ಗೆ 11.30ರ ಸುಮಾರಿಗೆ ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಮಧ್ಯಾಹ್ನ 12ರ ವೇಳೆಗೆ ಪ್ರದೋಷ್‌ ಹೇಳಿಕೆ ದಾಖಲಿಸಲು ಕೋರ್ಟ್‌ ಸಿದ್ಧತೆ ನಡೆಸಿದೆ. ಹೈಕೋರ್ಟ್‌ ಆದೇಶ ಹಾಗೂ ಪ್ರದೋಷ್‌ ಸಾಕ್ಷಿ ಹೇಳಿಕೆ—ಎರಡೂ ಬೆಳವಣಿಗೆಗಳು ಒಂದೇ ದಿನ ನಡೆಯುವ ಸಾಧ್ಯತೆಯಿಂದ ಪ್ರಕರಣ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿದೆ.

ಓವರ್‌ಟೇಕ್ ವಿಚಾರಕ್ಕೆ ಗಲಾಟೆ: ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ಅಪಹರಣ, ಹಲ್ಲೆ ಆರೋಪ- ದೂರು ದಾಖಲು

ಬೆಂಗಳೂರು: ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಆರಂಭವಾದ ಗಲಾಟೆ ಇದೀಗ ಅಪಹರಣ ಮತ್ತು ಹಲ್ಲೆ ಆರೋಪದವರೆಗೆ ತಲುಪಿದೆ. ನಟ ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ತನ್ನ ಸಹಪಾಠಿ ಮನೀಶ್ ಗೌಡನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಗೊಂಡಿರುವ ಮನೀಶ್ ಗೌಡ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಸಂಜೆ ರಾಜರಾಜೇಶ್ವರಿನಗರದಲ್ಲಿ ಘಟನೆಗೆ ಮುನ್ನ ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸಾಮ್ರಾಟ್ ಹಾಗೂ ಆತನ ಸ್ನೇಹಿತರು ಜಿಪ್ಸಿ ಕಾರಿನಲ್ಲಿ ತೆರಳುತ್ತಿದ್ದಾಗ, ಮನೀಶ್ ಗೌಡ ಮತ್ತು ಆತನ ಸ್ನೇಹಿತರು ಐ20 ಕಾರಿನಲ್ಲಿ ಬಂದು ಸಾಮ್ರಾಟ್ ಚಲಾಯಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿದ್ದರು. ಇದರಿಂದಾಗಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಂದು ಮಧ್ಯಾಹ್ನ ಮೈಸೂರು ರಸ್ತೆಯ ಆರ್‌ವಿ ಯೂನಿವರ್ಸಿಟಿ ಹೊರಭಾಗದಲ್ಲಿದ್ದ ಮನೀಶ್ ಗೌಡನನ್ನು ಸಾಮ್ರಾಟ್ ಹಾಗೂ ಆತನ ಕಡೆಯವರು ಸಫಾರಿ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಮನೀಶ್ ಗೌಡ ಮತ್ತು ಸಾಮ್ರಾಟ್ ಇಬ್ಬರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಪ್ರಕರಣದ ಕುರಿತು ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನೀಶ್ ಪರ ವಕೀಲ ಮಂಜುನಾಥ್ ಮಾತನಾಡಿ, ಸಾಮ್ರಾಟ್ ವಿಜಯ್ ಅವರನ್ನು ಎ-1 ಆರೋಪಿಯನ್ನಾಗಿ ಹೆಸರಿಸಿ ಒಟ್ಟು ಆರು ಜನರ ವಿರುದ್ಧ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ. ಸಣ್ಣ ವಿಚಾರಕ್ಕೆ ನಡೆದಿದ್ದ ಹಿಂದಿನ ದಿನದ ಗಲಾಟೆಯ ಬಳಿಕ ಸಾಮ್ರಾಟ್ ಹಾಗೂ ಆತನ ತಂಡ ಸಫಾರಿ ಕಾರಿನಲ್ಲಿ ಬಂದು ಮನೀಶ್‌ನನ್ನು ಅಪಹರಿಸಿ ಹಲ್ಲೆ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

“ನಿನ್ನೆ ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಗಲಾಟೆ ನಡೆದಿತ್ತು. ಇಂದು ಸಾಮ್ರಾಟ್ ಹಾಗೂ ಆತನ ಕಡೆಯವರು ಸಫಾರಿ ಕಾರಿನಲ್ಲಿ ಬಂದು ಮನೀಶ್‌ನನ್ನು ಕರೆದೊಯ್ದು, ಆರು ಜನರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ” ಎಂದು ವಕೀಲ ಮಂಜುನಾಥ್ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ಕೆಲ ಗೊಂದಲಗಳಿವೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ.

53ನೇ ಬರ್ತ್‌ಡೇಗೆ ಕಿಚ್ಚ ಸುದೀಪ್ ಮಾಸ್ ಗಿಫ್ಟ್: ‘ಬಿಲ್ಲ ರಂಗ ಬಾಷಾ’ ಫ್ಯೂಚರಿಸ್ಟಿಕ್ ಲುಕ್ ವೈರಲ್

ಬೆಂಗಳೂರು: ಕಿಚ್ಚ ಸುದೀಪ್ ಅವರ 53ನೇ ಜನ್ಮದಿನದ ಸಂಭ್ರಮಕ್ಕೆ ‘ಬಿಲ್ಲ ರಂಗ ಬಾಷಾ’ ಚಿತ್ರತಂಡ ಸರ್ಪ್ರೈಸ್ ಗಿಫ್ಟ್ ನೀಡಿದೆ. ಹಿಮಾಚ್ಛಾದಿತ ಪ್ರದೇಶದಲ್ಲಿ ಬೈಕ್ ಮೇಲೆ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಪೋಸ್ಟರ್‌ನಲ್ಲಿ ಸುದೀಪ್ ಗಾಗಲ್ಸ್ ಧರಿಸಿ, ವಿಭಿನ್ನ ವಿನ್ಯಾಸದ ಕೋಟ್‌ನಲ್ಲಿ ಬೈಕ್ ರೈಡ್ ಮಾಡುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ಹಿಮದ ನಡುವೆ ಬೈಕ್ ವೇಗವಾಗಿ ಸಾಗುತ್ತಿದ್ದರೆ, ಆಕಾಶದಲ್ಲಿ ಹೆಲಿಕಾಪ್ಟರ್ ಹಾರುತ್ತಿರುವುದು ಕಾಣಿಸುತ್ತದೆ. ಇದರ ಜೊತೆಗೆ ವಿಮಾನ ಹಾಗೂ ರೈಲು ಪಲ್ಟಿಯಾಗುತ್ತಿರುವ ದೃಶ್ಯಗಳು ಚಿತ್ರದ ಆ್ಯಕ್ಷನ್ ಪ್ರಮಾಣದ ಬಗ್ಗೆ ಕುತೂಹಲ ಮೂಡಿಸಿವೆ.

ಸುದೀಪ್ ಅವರ ಈ ಲುಕ್ ಅಭಿಮಾನಿಗಳಿಗೆ ಸಂಪೂರ್ಣ ಹೊಸ ಅನುಭವ ನೀಡಿದೆ. ಸಾಮಾನ್ಯ ಮಾಸ್ ಲುಕ್‌ಗಿಂತ ಭಿನ್ನವಾಗಿ ಫ್ಯೂಚರಿಸ್ಟಿಕ್ ಹಾಗೂ ರಗಡ್ ಶೈಲಿಯಲ್ಲಿ ಕಾಣಿಸಿಕೊಂಡಿರುವ ನಟನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.

‘ವಿಕ್ರಾಂತ್ ರೋಣ’ ಮೂಲಕ ಯಶಸ್ಸು ಕಂಡ ಸುದೀಪ್-ಅನೂಪ್ ಭಂಡಾರಿ ಜೋಡಿ ಮತ್ತೆ ಒಂದಾಗಿರುವುದು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ. ‘ಬಿಲ್ಲ ರಂಗ ಬಾಷಾ’ ಇವರ ಕಾಂಬಿನೇಷನ್‌ನ ಎರಡನೇ ಸಿನಿಮಾ ಆಗಿದೆ.

ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾ ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿದೆ. ಚಿತ್ರವು ಆ್ಯಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ.

ಕಾರಣಾಂತರಗಳಿಂದ ಶೂಟಿಂಗ್ ವಿಳಂಬಗೊಂಡಿದ್ದ ಸಿನಿಮಾ, ಜೂನ್‌ನಲ್ಲಿ ಮತ್ತೆ ಚಿತ್ರೀಕರಣಕ್ಕೆ ಚಾಲನೆ ಪಡೆದುಕೊಂಡಿದೆ. ಇದೀಗ ಫಸ್ಟ್ ಲುಕ್ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಚರ್ಚೆ ಜೋರಾಗಿದೆ. ‘ಬಿಲ್ಲ ರಂಗ ಬಾಷಾ’ 2027ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಾಯಿಯ ಎದೆಹಾಲು ಸಿಗದ ಶಿಶುಗಳಿಗೆ ವರದಾನ; ಮಂಡ್ಯ ಮಿಮ್ಸ್‌ನಲ್ಲಿ ಮಿಲ್ಕ್ ಬ್ಯಾಂಕ್‌ ಸ್ಥಾಪನೆ!

0

ಮಂಡ್ಯ: ಹುಟ್ಟುತ್ತಲೇ ತಾಯಿಯ ಎದೆಹಾಲಿನಿಂದ ವಂಚಿತವಾಗುವ ನವಜಾತ ಶಿಶುಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಂಡ್ಯ ಮಿಮ್ಸ್‌ ಆಸ್ಪತ್ರೆಯಲ್ಲಿ ಎದೆಹಾಲು ಶೇಖರಣಾ ಘಟಕ ಸ್ಥಾಪಿಸಲಾಗಿದೆ.

ಜಾಗೃತಿ ಕಾರ್ಯಕ್ರಮಗಳಿಗಾಗಿ ಪೋಸ್ಟರ್‌ಗಳಿಗೆ ಖರ್ಚಾಗುತ್ತಿದ್ದ ಹಣವನ್ನು ನವಜಾತ ಶಿಶುಗಳ ಆರೋಗ್ಯಕ್ಕಾಗಿ ಬಳಸಿರುವ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಮಿಮ್ಸ್‌ನಲ್ಲಿ ಎದೆಹಾಲು ಶೇಖರಣಾ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲಾ ಪಂಚಾಯತ್‌ ಸಿಇಒ ಕೆ.ಆರ್. ನಂದಿನಿ ಮುಂದಾಗಿದ್ದಾರೆ. ವೈದ್ಯರ ಸಹಕಾರದೊಂದಿಗೆ ಆಸ್ಪತ್ರೆಯಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಕೊಠಡಿಯನ್ನೇ ಸ್ವಚ್ಛಗೊಳಿಸಿ, ಸುಮಾರು ₹24.50 ಲಕ್ಷ ವೆಚ್ಚದಲ್ಲಿ ಮಿಲ್ಕ್ ಬ್ಯಾಂಕ್‌ ಸಿದ್ಧಪಡಿಸಲಾಗಿದೆ.

ತಿಂಗಳಿಗೆ 250ಕ್ಕೂ ಹೆಚ್ಚು ನವಜಾತ ಶಿಶುಗಳ ದಾಖಲು:

ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ಪ್ರತಿ ತಿಂಗಳು ಸುಮಾರು 250ಕ್ಕೂ ಹೆಚ್ಚು ನವಜಾತ ಶಿಶುಗಳು ದಾಖಲಾಗುತ್ತವೆ. ಈ ಪೈಕಿ ಕನಿಷ್ಠ 50ರಿಂದ 60 ಶಿಶುಗಳಿಗೆ ತಾಯಿಯ ಎದೆಹಾಲು ಲಭ್ಯವಾಗದ ಪರಿಸ್ಥಿತಿ ಎದುರಾಗುತ್ತಿತ್ತು.

ಈ ಸಮಸ್ಯೆಯನ್ನು ಮನಗಂಡು ಮಿಲ್ಕ್ ಬ್ಯಾಂಕ್‌ ಸ್ಥಾಪಿಸಲಾಗಿದ್ದು, ತಾಯಿಯ ಎದೆಹಾಲು ಸಿಗದ ಶಿಶುಗಳಿಗೆ ದಾನಿ ತಾಯಂದಿರಿಂದ ಸಂಗ್ರಹಿಸಿದ ಎದೆಹಾಲು ಒದಗಿಸುವ ವ್ಯವಸ್ಥೆ ಮಾಡಲು ಮುಂದಾಗಿದೆ.

ಈ ಸತ್ಕಾರ್ಯಕ್ಕೆ ಜಿಲ್ಲೆಯ ಶಾಸಕರು ಕೂಡ ₹10.50 ಲಕ್ಷ ಅನುದಾನ ನೀಡಿ ಬೆಂಬಲ ನೀಡಿದ್ದಾರೆ. ಇದರೊಂದಿಗೆ ಮಂಡ್ಯದಲ್ಲಿ ಸ್ಥಾಪನೆಯಾಗುತ್ತಿರುವ ಈ ಮಿಲ್ಕ್ ಬ್ಯಾಂಕ್‌ ರಾಜ್ಯದಲ್ಲೇ ಸ್ಥಾಪನೆಯಾಗುತ್ತಿರುವ 5ನೇ ಎದೆಹಾಲು ಶೇಖರಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಿಮ್ಸ್‌ ಆಸ್ಪತ್ರೆಯಲ್ಲಿ ಮಿಲ್ಕ್ ಬ್ಯಾಂಕ್‌ಗಾಗಿ ಕೊಠಡಿ ಸಿದ್ಧವಾಗಿದ್ದು, ಸಿಬ್ಬಂದಿಯನ್ನೂ ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಎದೆಹಾಲನ್ನು ಸುರಕ್ಷಿತವಾಗಿ ಸಂಗ್ರಹಿಸಿ ಸಂರಕ್ಷಿಸಲು ಅಗತ್ಯವಿರುವ ಮೂರು ಪ್ರಮುಖ ಯಂತ್ರಗಳು ಇನ್ನೂ ಅಳವಡಿಕೆಯಾಗಬೇಕಿದೆ.

ಪಾಶ್ಚರೈಸರ್, ವರ್ಟಿಕಲ್ ಲ್ಯಾಮಿನಾರ್ ಮತ್ತು ಡೀಪ್ ಫ್ರೀಜರ್ ಯಂತ್ರಗಳನ್ನು ಅಳವಡಿಸಲು ಸುಮಾರು ₹36 ಲಕ್ಷ ಅನುದಾನದ ಅಗತ್ಯವಿದೆ.

ಈ ಯಂತ್ರಗಳು ಅಳವಡಿಕೆಯಾದ ಬಳಿಕ ದಾನಿ ತಾಯಂದಿರಿಂದ ಸಂಗ್ರಹಿಸುವ ಎದೆಹಾಲನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಅಗತ್ಯವಿರುವ ನವಜಾತ ಶಿಶುಗಳಿಗೆ ನೀಡಲು ಸಾಧ್ಯವಾಗಲಿದೆ. ಸಂಗ್ರಹಿಸಿದ ಎದೆಹಾಲನ್ನು ಸುಮಾರು 6 ತಿಂಗಳವರೆಗೆ ಸಂರಕ್ಷಿಸಿಡಲು ಸಾಧ್ಯವಾಗಲಿದೆ ಎಂದು ತಿಳಿಸಲಾಗಿದೆ.

ತಾಯಿಯ ಎದೆಹಾಲಿನಿಂದ ವಂಚಿತವಾಗುವ ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ಈ ಮಿಲ್ಕ್ ಬ್ಯಾಂಕ್‌ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.