Home Blog Page 26

ನೀಟ್‌–ಎನ್‌ಟಿಎ ರದ್ದತಿಗೆ ವಿಧಾನಸಭೆಯಲ್ಲಿ ನಿರ್ಣಯಕ್ಕೆ ಆಗ್ರಹ!

0

ವಿಜಯಸಾಕ್ಷಿ ಸುದ್ದಿ, ಗದಗ/ಹುಬ್ಬಳ್ಳಿ: ನೀಟ್‌ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯಲ್ಲಿನ ಗೊಂದಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನೀಟ್‌ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಕರ್ನಾಟಕ ನಾಗರಿಕ ಸಮಾಜ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿರುವ ನಾಗರಿಕ ಸಮಾಜದ ಗಣ್ಯರು, ವೈದ್ಯಕೀಯ ಪ್ರವೇಶದ ನೀತಿ ಮತ್ತು ಪ್ರಕ್ರಿಯೆಯನ್ನು ರಾಜ್ಯಗಳಿಗೆ ಮರಳಿ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾಹಿತಿ ಹಾಗೂ ಪ್ರಕಾಶಕ ಬಸವರಾಜ ಸೂಳಿಭಾವಿ ಅವರು ಪತ್ರಿಕೆಯ ಪ್ರಕಟಣೆಗಾಗಿ ಮನವಿಯ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ.

ಮನವಿಯಲ್ಲಿ, ನೀಟ್‌ ಕಡ್ಡಾಯಗೊಳಿಸಿರುವುದರಿಂದ ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಲಾಗಿದೆ. ವಿಭಿನ್ನ ಪಠ್ಯಕ್ರಮ, ಭಾಷೆ, ಗ್ರಾಮೀಣ–ನಗರ ಅಸಮಾನತೆ ಹಾಗೂ ಸಾಮಾಜಿಕ–ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಒಂದೇ ಪರೀಕ್ಷೆಯ ಮೂಲಕ ಅಳೆಯುವುದು ವಾಸ್ತವ ಸಮಾನತೆಯನ್ನು ಸಾಧಿಸುವುದಿಲ್ಲ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳ ಎರಡು ವರ್ಷಗಳ ಶಾಲಾ ಶಿಕ್ಷಣ, ನಿರಂತರ ಕಲಿಕೆ ಮತ್ತು ಪರಿಶ್ರಮವನ್ನು ಒಂದೇ ದಿನದ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆಗೆ ಸೀಮಿತಗೊಳಿಸುವುದರಿಂದ ಶಾಲಾ ಶಿಕ್ಷಣದ ಮಹತ್ವ ಕುಗ್ಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ದುಬಾರಿ ಕೋಚಿಂಗ್ ಪಡೆಯುವ ಸಾಮರ್ಥ್ಯ ಹೊಂದಿರುವ ನಗರ ಪ್ರದೇಶದ ಹಾಗೂ ಆರ್ಥಿಕವಾಗಿ ಸಬಲ ಕುಟುಂಬಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಸರ್ಕಾರಿ ಶಾಲೆ, ಗ್ರಾಮೀಣ ಪ್ರದೇಶ, ಕನ್ನಡ ಮಾಧ್ಯಮ ಹಾಗೂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಅಸಮಾನ ಸ್ಪರ್ಧೆ ಎದುರಾಗುತ್ತಿದೆ ಎಂದು ನಾಗರಿಕ ಸಮಾಜದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ಲೋಪ ಹಾಗೂ ಅಂಕಗಳ ವಿಶ್ವಾಸಾರ್ಹತೆ ಕುರಿತು ಪದೇಪದೇ ವಿವಾದಗಳು ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಮರುಪರಿಶೀಲಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ದ್ವಿತೀಯ ಪಿಯುಸಿ ಅಥವಾ +2ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ, ವೈಜ್ಞಾನಿಕ ನಾರ್ಮಲೈಸೇಶನ್ ಹಾಗೂ ಸಂವಿಧಾನಬದ್ಧ ಮೀಸಲಾತಿ ನಿಯಮಗಳನ್ನು ಪಾಲಿಸಿ ಪ್ರವೇಶ ನೀಡುವ ರಾಜ್ಯ ನೀತಿ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.

ತಮಿಳುನಾಡು ವಿಧಾನಸಭೆ ಈಗಾಗಲೇ ನೀಟ್‌ನಿಂದ ರಾಜ್ಯಕ್ಕೆ ವಿನಾಯಿತಿ ಪಡೆಯುವ ನಿಟ್ಟಿನಲ್ಲಿ ನಿರ್ಣಯ ಹಾಗೂ ಶಾಸನಾತ್ಮಕ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿರುವ ನಾಗರಿಕ ಸಮಾಜ, ಕರ್ನಾಟಕವೂ ಇದೇ ಮಾದರಿಯಲ್ಲಿ ರಾಜ್ಯದ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.

ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ನೀಟ್‌ ರದ್ದತಿಗೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯ ಅಂಗೀಕರಿಸುವುದು, ಎನ್‌ಟಿಎ ರದ್ದುಗೊಳಿಸಿ ಕೇಂದ್ರೀಕೃತ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸುವುದು, ಪಿಯುಸಿ ಅಂಕ ಆಧಾರಿತ ವೈದ್ಯಕೀಯ ಪ್ರವೇಶ ನೀತಿ ರೂಪಿಸುವುದು ಸೇರಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ಮುಂದಿಡಲಾಗಿದೆ.

ಇದರ ಜತೆಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ತಜ್ಞರು, ವೈದ್ಯಕೀಯ ಶಿಕ್ಷಣ ಪರಿಣತರು ಹಾಗೂ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ನೀಟ್‌ ವಿರೋಧಿ ನಿಲುವು ಹೊಂದಿರುವ ಇತರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ರಾಜ್ಯಗಳ ಶೈಕ್ಷಣಿಕ ಹಕ್ಕು ಹಾಗೂ ಒಕ್ಕೂಟ ವ್ಯವಸ್ಥೆಯ ರಕ್ಷಣೆಗೆ ರಾಷ್ಟ್ರಮಟ್ಟದ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಮನವಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾ. ಗೋಪಾಲಗೌಡ, ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ., ಸಾಹಿತಿ ಬಸವರಾಜ ಸೂಳಿಭಾವಿ, ಪತ್ರಕರ್ತ ರಾಜಾರಾಮ ತಲ್ಲೂರು, ಸಾಹಿತಿ ಡಾ. ಎಚ್.ಎಸ್. ಅನುಪಮಾ, ವಿಶ್ರಾಂತ ಉಪಕುಲಪತಿ ಡಾ. ಸಬಿಹಾ ಭೂಮಿಗೌಡ, ಸಾಹಿತಿಗಳಾದ ಮೂಡ್ನಾಕೂಡ ಚಿನ್ನಸ್ವಾಮಿ, ಕೆ. ನೀಲಾ, ರಹಮತ್ ತರೀಕೆರೆ, ಪ್ರೊ. ಅಶೋಕ ಶೆಟ್ಟರ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳ 117 ಗಣ್ಯರು ಸಹಿ ಹಾಕಿದ್ದಾರೆ.

ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಈ ಕುರಿತು ತಕ್ಷಣ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಸಮಾಜದ ಪ್ರತಿನಿಧಿಗಳು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ನಾಗರಿಕ ಸಮಾಜದ ಪ್ರಮುಖ ಆಗ್ರಹಗಳು

  • ನೀಟ್‌ ಪರೀಕ್ಷೆ ರದ್ದುಪಡಿಸಿ, ವೈದ್ಯಕೀಯ ಪ್ರವೇಶದ ಅಧಿಕಾರವನ್ನು ರಾಜ್ಯಗಳಿಗೆ ಮರಳಿಸಬೇಕು.
  • ಎನ್‌ಟಿಎ ರದ್ದುಗೊಳಿಸಿ, ಕೇಂದ್ರೀಕೃತ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು.
  • ದ್ವಿತೀಯ ಪಿಯುಸಿ/+2 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶಕ್ಕೆ ರಾಜ್ಯ ನೀತಿ ರೂಪಿಸಬೇಕು.
  • ಸಂವಿಧಾನದ ಅನುಚ್ಛೇದ 254(2)ರಡಿ ಪ್ರತ್ಯೇಕ ಮಸೂದೆ ರೂಪಿಸಿ ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸಬೇಕು.
  • ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರೊಂದಿಗೆ ಸಾರ್ವಜನಿಕ ಸಮಾಲೋಚನೆ ನಡೆಸಬೇಕು.
  • ನೀಟ್‌ ವಿರೋಧಿ ನಿಲುವಿನ ಇತರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಬೇಕು.

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಅಶ್ಲೀಲ ವಿಡಿಯೋಗಳಿಲ್ಲ; ಡಿಸಿಪಿ ಸ್ಪಷ್ಟನೆ

0

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹೈಸೆಕ್ಯೂರಿಟಿ ಬ್ಯಾರಕ್‌ನಲ್ಲಿ ಪತ್ತೆಯಾದ ಪೆನ್‌ಡ್ರೈವ್‌ನಲ್ಲಿ ಅಶ್ಲೀಲ ವಿಡಿಯೋಗಳಿವೆ ಎಂಬ ವರದಿಯನ್ನು ಪೊಲೀಸರು ಅಲ್ಲಗಳೆದಿದ್ದಾರೆ.

ಪೆನ್‌ಡ್ರೈವ್‌ನಲ್ಲಿ ಯಾವುದೇ ವಿಡಿಯೋಗಳು ಇಲ್ಲ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 11ರಂದು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದ ವೇಳೆ ಹೈಸೆಕ್ಯೂರಿಟಿ ಸೆಲ್‌ನಿಂದ ರೆಡ್ಮಿ ಮೊಬೈಲ್, ಚಾರ್ಜರ್, ಸಿಮ್ ಕಾರ್ಡ್, ಪೆನ್‌ಡ್ರೈವ್ ಹಾಗೂ ಡೈರಿ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿಪಿ ಎಂ. ನಾರಾಯಣ ಅವರ ಪ್ರಕಾರ, ಜಪ್ತಿ ಮಾಡಿದ ಎಲ್ಲಾ ವಸ್ತುಗಳನ್ನು ಸೀಜ್ ಮಾಡಿ ಸೀಲ್ ಹಾಕಿ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಪತ್ತೆಯಾದ ಮೊಬೈಲ್‌ನ ಪಾಸ್‌ವರ್ಡ್ ಇನ್ನೂ ಲಭ್ಯವಾಗಿಲ್ಲ. ಫೋನ್ ಯಾರ ಬಳಕೆಯಲ್ಲಿತ್ತು ಹಾಗೂ ಜೈಲಿನೊಳಗೆ ಹೇಗೆ ತಲುಪಿತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಜಪ್ತಿ ಮಾಡಿದ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ತಾಂತ್ರಿಕ ಸಾಕ್ಷ್ಯಗಳು ಬಂದ ಬಳಿಕ ಪ್ರಜ್ವಲ್ ರೇವಣ್ಣ ಹಾಗೂ ಮತ್ತೋರ್ವ ಆರೋಪಿ ಪ್ರತಾಪ್ ರೈ ಅವರನ್ನು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲಿನಲ್ಲಿ ಜಾಮರ್ ಅಳವಡಿಸಿದ್ದರೂ 2G ಹಾಗೂ 3G ನೆಟ್‌ವರ್ಕ್ ಸಿಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಕುರಿತು ರೆಡ್ಮಿ ಕಂಪನಿಗೂ ಪತ್ರ ಬರೆಯಲು ಪೊಲೀಸರು ನಿರ್ಧರಿಸಿದ್ದಾರೆ. ಈ ಹಿಂದೆ ಜೈಲಿನಲ್ಲಿ ಪತ್ತೆಯಾದ ಸಿಮ್ ಕಾರ್ಡ್‌ಗಳೂ ನಕಲಿ ಗುರುತಿನ ದಾಖಲೆಗಳ ಮೂಲಕ ಪಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಇದೇ ವೇಳೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದಾರೆ.

AI ವಿಡಿಯೋ ನಂಬಿ 22 ಲಕ್ಷ ರೂ. ಕಳೆದುಕೊಂಡ ಹಾವೇರಿ ವ್ಯಕ್ತಿ!

0

ಹಾವೇರಿ: ಸಾಮಾಜಿಕ ಜಾಲತಾಣಗಳಲ್ಲಿ AI ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋಗಳ ಮೂಲಕ ಜನರನ್ನು ವಂಚಿಸುವ ಜಾಲ ಸಕ್ರಿಯವಾಗಿದ್ದು, ಹಾವೇರಿಯ ವ್ಯಕ್ತಿಯೊಬ್ಬರು ಇಂತಹ ವಂಚನೆಗೆ ಬಲಿಯಾಗಿ 22 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ಈ ಸಂಬಂಧ ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಬರ್ ವಂಚಕರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಹೆಸರಿನಲ್ಲಿ ಎಐ ವಿಡಿಯೋಗಳನ್ನು ಸೃಷ್ಟಿಸಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿದ್ದಾರೆ. ‘BXB ಮಾರ್ಕೆಟ್’ ಹೆಸರಿನ ಜಾಹೀರಾತಿನಲ್ಲಿ ಕೇವಲ 22 ಸಾವಿರ ರೂ. ಹೂಡಿಕೆ ಮಾಡಿದರೆ ಎರಡು ಪಟ್ಟು, ಮೂರು ಪಟ್ಟು ಲಾಭದೊಂದಿಗೆ 25 ಲಕ್ಷ ರೂ.ವರೆಗೆ ಗಳಿಸಬಹುದು ಎಂದು ನಂಬಿಸಲಾಗಿತ್ತು.

ಇದನ್ನು ನಂಬಿದ ಸಂತ್ರಸ್ತರು ವಿಡಿಯೋದಲ್ಲಿದ್ದ ಟೆಲಿಗ್ರಾಮ್ ಲಿಂಕ್ ಬಳಸಿ ಆರ್‌ಟಿಜಿಎಸ್ ಮತ್ತು ಐಎಂಪಿಎಸ್ ಮೂಲಕ ಹಂತ ಹಂತವಾಗಿ 22 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿದ್ದಾರೆ. ಆದರೆ ಯಾವುದೇ ಲಾಭ ಸಿಗದೇ ಸಂಪೂರ್ಣ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಮೊಬೈಲ್‌ಗೆ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು, ಒಟಿಪಿ ಸೇರಿದಂತೆ ಬ್ಯಾಂಕ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಹಾಗೂ ಪರಿಶೀಲಿಸದ ಹೂಡಿಕೆ ಯೋಜನೆಗಳಿಗೆ ಹಣ ವರ್ಗಾಯಿಸಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯರು ಕೂಡ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಗಣ್ಯರ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಸೈಬರ್ ವಂಚನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

IPL 2027ಕ್ಕೂ ಮುನ್ನ RCB-SRH ನಡುವೆ ಬಿಗ್ ಟ್ರೇಡ್? ಜಿತೇಶ್ ಬದಲಿಗೆ ಇಶಾನ್ ಕಿಶನ್ ಕೇಳಿದ ಬೆಂಗಳೂರು?

0

2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೆ ಇನ್ನೂ ಸಾಕಷ್ಟು ಸಮಯವಿದ್ದರೂ, ಫ್ರಾಂಚೈಸಿಗಳು ಈಗಾಗಲೇ ತಮ್ಮ ತಂಡಗಳನ್ನು ಬಲಪಡಿಸುವ ಕೆಲಸ ಆರಂಭಿಸಿವೆ.

ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ಮಹತ್ವದ ಆಟಗಾರರ ವಿನಿಮಯದ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ಗಮನ ಸೆಳೆದಿವೆ.

ಐಪಿಎಲ್ 2026ರಲ್ಲಿ ಪ್ಲೇಆಫ್‌ವರೆಗೆ ತಲುಪಿದ್ದ ಸನ್‌ರೈಸರ್ಸ್ ಹೈದರಾಬಾದ್, ಎಲಿಮಿನೇಟರ್‌ನಲ್ಲಿ ಸೋತು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿತ್ತು. ಮುಂದಿನ ಸೀಸನ್‌ನಲ್ಲಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಸ್‌ಆರ್‌ಎಚ್ ಮ್ಯಾನೇಜ್‌ಮೆಂಟ್ ಯೋಜನೆ ರೂಪಿಸುತ್ತಿದೆ.

ಜಿತೇಶ್ ಶರ್ಮಾ ಮೇಲೆ ಎಸ್‌ಆರ್‌ಎಚ್ ಕಣ್ಣು:

ತಂಡದ ಕೆಳ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸಬಲ್ಲ ಭಾರತೀಯ ಫಿನಿಷರ್ ಕೊರತೆಯನ್ನು ನೀಗಿಸಲು ಎಸ್‌ಆರ್‌ಎಚ್, ಆರ್‌ಸಿಬಿಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹಾಗೂ ಉಪನಾಯಕ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿದೆ ಎನ್ನಲಾಗಿದೆ.

ಆರ್‌ಸಿಬಿಯ ಪ್ರತಿಬೇಡಿಕೆ ಏನು?

ವರದಿಗಳ ಪ್ರಕಾರ, ಜಿತೇಶ್ ಶರ್ಮಾ ಅವರನ್ನು ಬಿಟ್ಟುಕೊಡಲು ಸಿದ್ಧವಿರುವ ಆರ್‌ಸಿಬಿ, ಬದಲಿಗೆ ಎಸ್‌ಆರ್‌ಎಚ್‌ನ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ನೀಡುವಂತೆ ಕೇಳಿದೆ. ಈ ಬೇಡಿಕೆ ಹೈದರಾಬಾದ್ ಮ್ಯಾನೇಜ್‌ಮೆಂಟ್‌ಗೆ ಅಚ್ಚರಿ ಮೂಡಿಸಿದ್ದು, ಎರಡೂ ಫ್ರಾಂಚೈಸಿಗಳ ನಡುವೆ ಮಾತುಕತೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.

ಫಾರ್ಮ್‌ನಲ್ಲಿರುವ ಇಶಾನ್ ಕಿಶನ್‌ರನ್ನು ಬಿಟ್ಟುಕೊಡುವುದು ಎಸ್‌ಆರ್‌ಎಚ್‌ಗೆ ದೊಡ್ಡ ಹೊಡೆತವಾಗಬಹುದು. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಇಶಾನ್, ಭವಿಷ್ಯದ ನಾಯಕತ್ವದ ಪ್ರಮುಖ ಆಯ್ಕೆಯಾಗಿ ಪರಿಗಣಿಸಲ್ಪಡುತ್ತಿದ್ದಾರೆ. ಜೊತೆಗೆ, ಮುಂದಿನ ಸೀಸನ್‌ನಲ್ಲಿ ಕಮ್ಮಿನ್ಸ್ ಲಭ್ಯತೆ ಕುರಿತು ಅನಿಶ್ಚಿತತೆ ಇರುವುದರಿಂದ ಇಶಾನ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ ಎಂದು ವರದಿಗಳು ಸೂಚಿಸುತ್ತಿವೆ.

ಸದ್ಯ ಈ ಟ್ರೇಡ್ ಕುರಿತಂತೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಈ ಮಾತುಕತೆ ಐಪಿಎಲ್ 2027ರ ಮುನ್ನ ಕುತೂಹಲ ಕೆರಳಿಸಿದೆ.

ಮಳೆಗಾಲದಲ್ಲಿ ಗರ್ಭಿಣಿಯರೇ ಎಚ್ಚರ! ತಾಯಿ-ಮಗುವಿನ ಆರೋಗ್ಯಕ್ಕೆ ಈ 10 ಮುನ್ನೆಚ್ಚರಿಕೆ ಪಾಲಿಸಿ

0

ಮಳೆಗಾಲವು ಬೇಸಿಗೆಯ ಬಿಸಿಯಿಂದ ನೆಮ್ಮದಿಯನ್ನು ನೀಡಿದರೂ, ಸೋಂಕುಗಳು, ಸೊಳ್ಳೆಗಳಿಂದ ಹರಡುವ ರೋಗಗಳು, ಆಹಾರ ಮಾಲಿನ್ಯ ಹಾಗೂ ಹಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಆಗುವ ಬದಲಾವಣೆಗಳಿಂದ ಗರ್ಭಿಣಿಯರು ಈ ಸೋಂಕುಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆ ಇರುತ್ತದೆ. ಆದರೆ ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ಮಳೆಗಾಲದಲ್ಲಿಯೂ ಸುರಕ್ಷಿತ ಮತ್ತು ಆರೋಗ್ಯಕರ ಗರ್ಭಧಾರಣೆಯನ್ನು ಕಾಪಾಡಿಕೊಳ್ಳಬಹುದು.

ಮಳೆಗಾಲದಲ್ಲಿ ಗರ್ಭಿಣಿಯರು ಪಾಲಿಸಬೇಕಾದ 10 ಮುಖ್ಯ ಸಲಹೆಗಳು:

1. ತಾಜಾ ಮತ್ತು ಸುರಕ್ಷಿತ ಆಹಾರ ಸೇವಿಸಿ:

ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳವಣಿಗೆ ಹೆಚ್ಚಾಗುವುದರಿಂದ ಆಹಾರಜನ್ಯ ಸೋಂಕಿನ ಅಪಾಯವೂ ಹೆಚ್ಚಿರುತ್ತದೆ. ಆದ್ದರಿಂದ ತಾಜಾ ಮತ್ತು ಚೆನ್ನಾಗಿ ಬೇಯಿಸಿದ ಆಹಾರ ಸೇವಿಸಿ. ಹಳಸಿದ, ಮರುಬಿಸಿ ಮಾಡಿದ ಆಹಾರ, ರಸ್ತೆಬದಿಯ ತಿಂಡಿ, ಬೇಯಿಸದ ಸಲಾಡ್ ಹಾಗೂ ಹೊರಗೆ ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ಸೇವಿಸಬೇಡಿ.

2. ಶುದ್ಧ ನೀರು ಮಾತ್ರ ಕುಡಿಯಿರಿ:

ಕಲುಷಿತ ನೀರು ಹೊಟ್ಟೆ ಮತ್ತು ಕರುಳಿನ ಸೋಂಕಿಗೆ ಕಾರಣವಾಗಬಹುದು. ಕುದಿಸಿದ, ಫಿಲ್ಟರ್ ಮಾಡಿದ ಅಥವಾ ಶುದ್ಧೀಕರಿಸಿದ ನೀರನ್ನು ಮಾತ್ರ ಕುಡಿಯಿರಿ. ದಿನಕ್ಕೆ 2 ರಿಂದ 3 ಲೀಟರ್ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಸಮತೋಲನ ಕಾಪಾಡಬಹುದು.

3. ಸೊಳ್ಳೆಗಳಿಂದ ರಕ್ಷಿಸಿಕೊಳ್ಳಿ:

ಡೆಂಗ್ಯೂ ಮತ್ತು ಮಲೇರಿಯಾ ಮಳೆಗಾಲದಲ್ಲಿ ಹೆಚ್ಚಾಗುವ ಪ್ರಮುಖ ರೋಗಗಳು. ಪೂರ್ಣ ತೋಳಿನ ಬಟ್ಟೆ ಧರಿಸಿ, ಸೊಳ್ಳೆ ಪರದೆ ಬಳಸಿ ಹಾಗೂ ವೈದ್ಯರ ಸಲಹೆಯಂತೆ ಸುರಕ್ಷಿತ ಸೊಳ್ಳೆ ನಿವಾರಕಗಳನ್ನು ಬಳಸಬಹುದು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.

4. ವೈಯಕ್ತಿಕ ಸ್ವಚ್ಛತೆ ಕಾಪಾಡಿ:

ಸಾಬೂನು ಮತ್ತು ನೀರಿನಿಂದ ಆಗಾಗ ಕೈ ತೊಳೆಯಿರಿ. ಮಳೆಯಲ್ಲಿ ನೆನೆದ ಬಟ್ಟೆ ಮತ್ತು ಪಾದರಕ್ಷೆಗಳನ್ನು ತಕ್ಷಣ ಬದಲಾಯಿಸಿ. ಪಾದಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳುವುದು ಸೋಂಕು ತಡೆಯಲು ಸಹಕಾರಿ.

5. ಜಾರಿ ಬೀಳದಂತೆ ಎಚ್ಚರಿಕೆ ವಹಿಸಿ:

ಜಾರದ ತಳವಿರುವ ಆರಾಮದಾಯಕ ಪಾದರಕ್ಷೆ ಧರಿಸಿ. ನೀರು ತುಂಬಿರುವ ಅಥವಾ ಅಸಮತಟ್ಟಾದ ರಸ್ತೆಗಳಲ್ಲಿ ನಡೆಯುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

6. ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಿ:

ಪ್ರೋಟೀನ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ವಿಟಮಿನ್ ಹಾಗೂ ಆಂಟಿಆಕ್ಸಿಡೆಂಟ್ ಸಮೃದ್ಧ ಆಹಾರ ಸೇವಿಸುವುದು ತಾಯಿಯ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಗೆ ಅಗತ್ಯ.

7. ಸೋಂಕಿನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:

ಜ್ವರ, ನಿರಂತರ ವಾಂತಿ, ಅತಿಸಾರ, ಮೂತ್ರ ವಿಸರ್ಜನೆ ವೇಳೆ ಉರಿ, ಕೆಮ್ಮು, ಉಸಿರಾಟದ ತೊಂದರೆ ಅಥವಾ ಚರ್ಮದ ಮೇಲೆ ದದ್ದು ಕಾಣಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

8. ನಿಯಮಿತ ತಪಾಸಣೆ ಮಾಡಿಸಿಕೊಳ್ಳಿ:

ವೈದ್ಯರು ಸೂಚಿಸಿದ ಗರ್ಭಧಾರಣೆಯ ಎಲ್ಲಾ ತಪಾಸಣೆಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಸಿಕೊಳ್ಳುವುದು ಮುಖ್ಯ.

9. ಲಘು ವ್ಯಾಯಾಮ ಮುಂದುವರಿಸಿ:

ವೈದ್ಯರ ಸಲಹೆಯಂತೆ ಮನೆಯೊಳಗೆ ನಡೆ, ಲಘು ವ್ಯಾಯಾಮ ಅಥವಾ ಗರ್ಭಿಣಿಯರಿಗೆ ಸೂಕ್ತವಾದ ಯೋಗಾಭ್ಯಾಸ ಮಾಡಬಹುದು. ಭಾರೀ ಮಳೆಯ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸಿ.

10. ಸಾಕಷ್ಟು ವಿಶ್ರಾಂತಿ ಪಡೆಯಿರಿ:

ಸಾಕಷ್ಟು ನಿದ್ರೆ ಮತ್ತು ನಿಯಮಿತ ವಿಶ್ರಾಂತಿ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು ನೆರವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಮಳೆಗಾಲದಲ್ಲಿ ಸ್ವಲ್ಪ ಹೆಚ್ಚುವರಿ ಕಾಳಜಿ ವಹಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುರಕ್ಷಿತವಾಗಿಡಬಹುದು. ಸಮಯಕ್ಕೆ ಸರಿಯಾದ ಆಹಾರ, ಸ್ವಚ್ಛತೆ, ನೀರು ಮತ್ತು ವೈದ್ಯಕೀಯ ತಪಾಸಣೆಗೆ ಆದ್ಯತೆ ನೀಡುವುದು ಆರೋಗ್ಯಕರ ಗರ್ಭಧಾರಣೆಗೆ ಭದ್ರ ಅಡಿಪಾಯವಾಗುತ್ತದೆ.

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪ; ನಟಿಯ ಸಹೋದರಿ ದೂರು, ಆರೋಪಿ ಅರೆಸ್ಟ್

0

ಬೆಂಗಳೂರು: ಸ್ಯಾಂಡಲ್‌ವುಡ್ ನಟಿಯ ಸಹೋದರಿಯೊಬ್ಬರು ನೀಡಿದ ಅತ್ಯಾಚಾರ ಆರೋಪದ ದೂರಿನ ಆಧಾರದ ಮೇಲೆ ಚಂದ್ರಾಲೇಔಟ್ ಪೊಲೀಸರು ರಾಘವೇಂದ್ರ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತಮ್ಮ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ದೂರುದಾರ ಯುವತಿ ಹಾಗೂ ರಾಘವೇಂದ್ರ ಇಬ್ಬರೂ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಿಚಯವಾಗಿದ್ದರು ಎನ್ನಲಾಗಿದೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತ್ತು. ಈ ವೇಳೆ ರಾಘವೇಂದ್ರ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದೇ ವೇಳೆ, ರಾಘವೇಂದ್ರ ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಸಾಲ ಪಡೆದಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ರಾಘವೇಂದ್ರನ ವೈಯಕ್ತಿಕ ವಿಚಾರಗಳನ್ನು ಪರಿಶೀಲಿಸಿದಾಗ ಆತ ಈಗಾಗಲೇ ಮದುವೆಯಾಗಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ರಾಘವೇಂದ್ರನನ್ನು ಪ್ರಶ್ನಿಸಿದಾಗ, ಯುವತಿಯ ಖಾಸಗಿ ಫೋಟೊಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ತನ್ನ ಮಾತು ಕೇಳದಿದ್ದರೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಈ ಹಿಂದೆಯೂ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಲಾಗಿತ್ತು ಎನ್ನಲಾಗಿದೆ. ಆಗ ಪೊಲೀಸರು ರಾಘವೇಂದ್ರನನ್ನು ಠಾಣೆಗೆ ಕರೆಸಿ, ಯುವತಿಯ ಖಾಸಗಿ ಫೋಟೊಗಳನ್ನು ಅಳಿಸುವಂತೆ ಸೂಚಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಆದರೆ ಕೆಲ ದಿನಗಳ ಬಳಿಕ ರಾಘವೇಂದ್ರ ಕೈ ಕೊಯ್ದುಕೊಂಡಿರುವ ಫೋಟೊ ಹಾಗೂ ಯುವತಿಯ ಖಾಸಗಿ ಫೋಟೊಗಳನ್ನು ಆಕೆಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ತಾನು ಸೂಚಿಸಿದ ಸ್ಥಳಕ್ಕೆ ಬರುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ಬೆಳವಣಿಗೆಗಳ ಬಳಿಕ ಯುವತಿ ಮತ್ತೊಮ್ಮೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಚಂದ್ರಾಲೇಔಟ್ ಪೊಲೀಸರು ರಾಘವೇಂದ್ರನನ್ನು ಬಂಧಿಸಿದ್ದಾರೆ.

ಇದರ ನಡುವೆ ರಾಘವೇಂದ್ರ ಕೂಡ ನಟಿಯ ಸಹೋದರಿ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದಾರೆ. ತಮಗೆ ಹಾಗೂ ತಮ್ಮ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸಂಬಂಧ ತಲಘಟ್ಟಪುರ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ವಿಚಾರಣೆಗೆ ನಟಿಯ ಸಹೋದರಿ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಎರಡೂ ಕಡೆಯಿಂದ ಬಂದಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.

ಮೊಬೈಲ್ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದೇ ತಪ್ಪಯ್ತಾ.? ವಿಷ ಸೇವಿಸಿ ವಿದ್ಯಾರ್ಥಿನಿ ಸಾವು

0

ಧಾರವಾಡ: ಹೆಚ್ಚು ಮೊಬೈಲ್ ಬಳಕೆ ಮಾಡಬೇಡ, ರೀಲ್ಸ್ ನೋಡುವುದನ್ನು ಕಡಿಮೆ ಮಾಡು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಕೊಟಬಾಗಿ ಗ್ರಾಮದ ಮೇಘಾ ಗುಬ್ಬಣ್ಣವರ್ (20) ಎಂದು ಗುರುತಿಸಲಾಗಿದೆ. ಮೇಘಾ ಧಾರವಾಡದ ಖಾಸಗಿ ಕಾಲೇಜಿನಲ್ಲಿ ಡಿ.ಇಡಿ ವ್ಯಾಸಂಗ ಮಾಡುತ್ತಿದ್ದಳು.

ಮೇಘಾ ಹೆಚ್ಚು ಸಮಯ ಮೊಬೈಲ್ ಬಳಸುತ್ತಿದ್ದಳು ಹಾಗೂ ರೀಲ್ಸ್ ನೋಡುತ್ತಿದ್ದಳು ಎನ್ನಲಾಗಿದ್ದು, ಈ ವಿಚಾರವಾಗಿ ಆಕೆಯ ತಾಯಿ ಬುದ್ಧಿವಾದ ಹೇಳಿ ಬೈದಿದ್ದರು. ಇದರಿಂದ ಮನನೊಂದ ಮೇಘಾ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ.

ವಿಷ ಸೇವಿಸಿದ್ದ ಮೇಘಾಳನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

‘ಹರ್ ಘರ್ ತಿರಂಗಾ’ ಅಭಿಯಾನಕ್ಕೂ ಮುನ್ನ RSS ಇತಿಹಾಸ ವಿವರಿಸಲಿ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

0

ಬೆಂಗಳೂರು: ದೇಶಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನ ನಡೆಸಲು ಬಿಜೆಪಿ ಮುಂದಾಗಿರುವ ಹಿನ್ನೆಲೆಯಲ್ಲಿ, ಬಿಜೆಪಿ ತನ್ನ ವೈಚಾರಿಕ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಹಿಂದಿನ ನಿಲುವಿನ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯಾನಂತರ ಹಲವು ದಶಕಗಳ ಕಾಲ ನಾಗಪುರದಲ್ಲಿರುವ ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲಿಲ್ಲ ಎಂಬ ಐತಿಹಾಸಿಕ ಉಲ್ಲೇಖಗಳನ್ನು ಪ್ರಸ್ತಾಪಿಸಿದರು.

1947ರ ಆಗಸ್ಟ್ 15ರಂದು ಹಾಗೂ 1950ರ ಜನವರಿ 26ರಂದು ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿತ್ತು. ಬಳಿಕ 52 ವರ್ಷಗಳ ನಂತರ, 2002ರ ಜನವರಿ 26ರಂದು ನಾಗಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿ ಮತ್ತೆ ರಾಷ್ಟ್ರಧ್ವಜ ಹಾರಿಸಲಾಯಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

“ಪ್ರತಿಯೊಬ್ಬ ಭಾರತೀಯನಿಗೂ ದೇಶಭಕ್ತಿಯ ಪಾಠ ಹೇಳುವ ಮೊದಲು ಬಿಜೆಪಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ತ್ರಿವರ್ಣ ಧ್ವಜದ ಬದಲಿಗೆ ಭಗವಾ ಧ್ವಜಕ್ಕೆ ಏಕೆ ಆದ್ಯತೆ ನೀಡಲಾಗಿತ್ತು? ಸ್ವಾತಂತ್ರ್ಯಾನಂತರ ಇಷ್ಟು ದೀರ್ಘಕಾಲ ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಏಕೆ ಕಾಣಿಸಲಿಲ್ಲ?” ಎಂದು ಅವರು ಪ್ರಶ್ನಿಸಿದ್ದಾರೆ.

ರಾಷ್ಟ್ರಧ್ವಜವು ದೇಶದ ಸಾರ್ವಭೌಮತೆ, ಏಕತೆ ಮತ್ತು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಗಿದೆ. ಹೀಗಾಗಿ ರಾಷ್ಟ್ರಧ್ವಜದ ಬಗ್ಗೆ ದೇಶಭಕ್ತಿಯ ಮಾತುಗಳನ್ನು ಹೇಳುವವರು ತಮ್ಮ ಸಂಘಟನೆಯ ಹಿಂದಿನ ನಿಲುವು ಮತ್ತು ಆಚರಣೆಯ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.

ಪೂರ್ಣ ಸಮವಸ್ತ್ರದಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಿಡಿದು ಸಾಗುವ ಆರ್‌ಎಸ್‌ಎಸ್ ಪಥಸಂಚಲನಗಳ ಬಗ್ಗೆ ಪ್ರಶ್ನಿಸಿರುವ ಅವರು, ದೇಶಭಕ್ತಿಯ ಪ್ರಮಾಣಪತ್ರಗಳನ್ನು ಇತರರಿಗೆ ನೀಡುವ ಮೊದಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ತಮ್ಮದೇ ಇತಿಹಾಸವನ್ನು ಜನರಿಗೆ ವಿವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೇಶಭಕ್ತಿ ಕೇವಲ ಘೋಷಣೆ ಅಥವಾ ಪ್ರಚಾರದ ವಿಷಯವಲ್ಲ. ಸಂವಿಧಾನ, ರಾಷ್ಟ್ರಧ್ವಜ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಗೌರವ ನೀಡುವುದರಲ್ಲೂ ಅದು ವ್ಯಕ್ತವಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆಗಸ್ಟ್ 16ರಂದು ಕೊಡಗು ಜಿಲ್ಲೆಗೆ ಡಿಕೆ ಶಿವಕುಮಾರ್ ಭೇಟಿ: ಭಾಗಮಂಡಲ, ತಲಕಾವೇರಿಯಲ್ಲಿ ವಿಶೇಷ ಪೂಜೆ

0

ಮಡಿಕೇರಿ: ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 16ರಂದು ಕೊಡಗು ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿ, ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಆಗಸ್ಟ್ 16ರಂದು ಬೆಳಗ್ಗೆ 11 ಗಂಟೆಗೆ ಡಿ.ಕೆ. ಶಿವಕುಮಾರ್ ಅವರು ಭಾಗಮಂಡಲ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ನಂತರ ತಲಕಾವೇರಿಗೆ ತೆರಳಲಿರುವ ಮುಖ್ಯಮಂತ್ರಿ, ಕಾವೇರಿ ತಾಯಿಗೆ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು ಕೊಡಗು ಜಿಲ್ಲೆಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಈ ಕುರಿತು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷದ ಮಾರ್ಚ್ 21ರಂದು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ತಲಕಾವೇರಿಗೆ ಭೇಟಿ ನೀಡಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಅಲ್ಲಿಂದ ಪವಿತ್ರ ಕಾವೇರಿ ತೀರ್ಥವನ್ನು ಬೆಂಗಳೂರಿಗೆ ಕೊಂಡೊಯ್ದು ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಬಳಸಲಾಗಿತ್ತು.

ಮೇಕೆದಾಟು ಯೋಜನೆ ವಿಳಂಬಕ್ಕೆ ಅವಕಾಶವಿಲ್ಲ, ಅನುಮತಿ ಪ್ರಕ್ರಿಯೆಗೆ ವೇಗ ನೀಡಿ: ಅಧಿಕಾರಿಗಳಿಗೆ ಚಲುವರಾಯಸ್ವಾಮಿ ಸೂಚನೆ

0

ಬೆಂಗಳೂರು: ನೂತನ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಎನ್. ಚಲುವರಾಯಸ್ವಾಮಿ ಅವರು ಮಹತ್ವದ ಮೇಕೆದಾಟು ಕುಡಿಯುವ ನೀರಿನ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಯೋಜನೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಮುಂದಿನ ಕಾರ್ಯಯೋಜನೆ ಬಗ್ಗೆ ಮಾಹಿತಿ ಪಡೆದರು.

ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಸಚಿವರು ಸಮಗ್ರವಾಗಿ ಚರ್ಚಿಸಿದರು. ಯೋಜನೆಯ ವಿಸ್ತೃತ ಯೋಜನಾ ವರದಿ (DPR), ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯಬೇಕಿರುವ ಅನುಮತಿಗಳು, ಪರಿಸರ ಮತ್ತು ಅರಣ್ಯ ಸಂಬಂಧಿತ ವಿಚಾರಗಳು, ಭೂಸ್ವಾಧೀನ, ಪುನರ್ವಸತಿ ಹಾಗೂ ತಾಂತ್ರಿಕ ಅಂಶಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಭವಿಷ್ಯದಲ್ಲಿ ಸಮರ್ಪಕ ಹಾಗೂ ಶಾಶ್ವತ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ಮೇಕೆದಾಟು ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯಲ್ಲಿ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಮೇಕೆದಾಟು ಯೋಜನೆ ಕೇವಲ ನೀರಾವರಿ ಯೋಜನೆಯಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಪ್ರದೇಶಗಳ ಭವಿಷ್ಯದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ಪ್ರಮುಖ ಯೋಜನೆಯಾಗಿದೆ ಎಂದು ಸಚಿವರು ತಿಳಿಸಿದರು.

ಯೋಜನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಕಾನೂನುಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಮುಂದುವರಿಸಬೇಕು. ಕರ್ನಾಟಕದ ಜನರ ಕುಡಿಯುವ ನೀರಿನ ಹಕ್ಕು ಹಾಗೂ ರಾಜ್ಯದ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

ಯೋಜನೆಯ ಪ್ರತಿಯೊಂದು ಹಂತದಲ್ಲೂ ಕಾನೂನು ಮತ್ತು ತಾಂತ್ರಿಕ ನಿಯಮಗಳನ್ನು ಪಾಲಿಸುವ ಜೊತೆಗೆ, ಅಗತ್ಯ ಅನುಮತಿಗಳನ್ನು ಪಡೆಯುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.