Home Blog Page 26

ನ್ಯಾಯಬೆಲೆ ಅಂಗಡಿಗಳಲ್ಲಿ ಮಾಹಿತಿ ಫಲಕ ಕಡ್ಡಾಯ: ಎಸ್.ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದ ದರ, ವಿತರಿಸಲಾಗುವ ಸಾಮಗ್ರಿಗಳು ಹಾಗೂ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯುಳ್ಳ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸುವ ಅಂಗಡಿಗಳಲ್ಲಿ ಮುಖ್ಯಮಂತ್ರಿ ಅವರ ಭಾವಚಿತ್ರ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಮಾಹಿತಿ ಹಾಗೂ ದರಪಟ್ಟಿ ಒಳಗೊಂಡ ಫಲಕ ಅಳವಡಿಸಬೇಕು. ಯಾವುದೇ ಅಂಗಡಿಯಲ್ಲಿ ಫಲಕ ಅಥವಾ ದರಪಟ್ಟಿ ಇಲ್ಲದಿದ್ದರೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಎಲ್ಲ ಅಂಗಡಿಗಳಲ್ಲೂ ಅಗತ್ಯ ಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಾಮಗಾರಿ ಕೈಗೊಳ್ಳುವಾಗ ಲೈನ್‌ಮನ್‌ಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ವಿದ್ಯುತ್ ಕಂಬ, ಲೈನ್ ದುರಸ್ತಿ ಸೇರಿದಂತೆ ಅಪಾಯಕಾರಿ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಬಳಸಿಕೊಳ್ಳಬಾರದು. ತರಬೇತಿ ಪಡೆದ ಲೈನ್‌ಮನ್‌ಗಳೇ ಕಾಮಗಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಹಿಂದೆ ಕೆಇಬಿ ಕಾಮಗಾರಿ ವೇಳೆ ಲೈನ್‌ಮನ್‌ಗಳ ನಿರ್ಲಕ್ಷ್ಯದಿಂದ ಮೂವರು ಸಾರ್ವಜನಿಕರು ಮೃತಪಟ್ಟಿರುವ ಘಟನೆಗಳು ನಡೆದಿವೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿ ಸಂಬಂಧಿಸಿದ ಲೈನ್‌ಮನ್ ಹಾಜರಿದ್ದು ಸಂಪೂರ್ಣ ಜವಾಬ್ದಾರಿ ವಹಿಸಬೇಕು ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ನಗರ ವಾರ್ಡ್‌ಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಆರು ಸದಸ್ಯರ ಸಮಿತಿ ರಚಿಸಿ ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದರು. ಯುವನಿಧಿ ಫಲಾನುಭವಿಗಳಿಗೆ ಮೂರು ತಿಂಗಳ ತರಬೇತಿ ನೀಡಲು ವೇಳಾಪಟ್ಟಿ ಸಿದ್ಧಪಡಿಸುವಂತೆ ತಿಳಿಸಿದರು. ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿ, ಬಸ್‌ಗಳನ್ನು ಮಾಸಿಕ ಡೀಪ್ ಕ್ಲೀನ್ ಮಾಡುವುದರ ಜೊತೆಗೆ ಸುತ್ತಮುತ್ತ ತಂಬಾಕು ಮುಕ್ತ ಪ್ರದೇಶವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸುಧೀರ ಎಸ್. ಬೋಳಾರ, ಮುರಗಯ್ಯಾ ವಿರಕ್ತಮಠ, ರತ್ನಾ ತೇಗೂರಮಠ, ರೇಹನ್ ರಝಾ ಐನಾಪೂರಿ, ಶಾಂತಪ್ಪ ಎಸ್. ಅಕ್ಕಿ, ಸದಸ್ಯರಾದ ಅರವಿಂದ ಏಗನಗೌಡರ, ಬಸಪ್ಪ ಮಹಾಬಲೇಶ್ವರ ಬಾವಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯುತ್ ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರನ್ನು ಬಳಸಿಕೊಳ್ಳುವುದರಿಂದ ಅವರ ಜೀವಕ್ಕೆ ಅಪಾಯ ಉಂಟಾಗಬಹುದು. ಪ್ರತಿಯೊಂದು ಕಾಮಗಾರಿಯನ್ನೂ ತರಬೇತಿ ಪಡೆದ ಲೈನ್‌ಮನ್‌ಗಳೇ ನಿರ್ವಹಿಸುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು.

— ಎಸ್.ಆರ್. ಪಾಟೀಲ, ಅಧ್ಯಕ್ಷ, ಜಿಲ್ಲಾ ಅನುಷ್ಠಾನ ಪ್ರಾಧಿಕಾರ

ಪಂಚ ಗ್ಯಾರಂಟಿಗಳ ಪ್ರಗತಿ

ಯುವನಿಧಿ: 13,215 ಅರ್ಜಿಗಳು ಸ್ವೀಕೃತಿ; 11,886 ಫಲಾನುಭವಿಗಳಿಗೆ ₹36.66 ಕೋಟಿ ಡಿಬಿಟಿ ಮೂಲಕ ಜಮೆ

ಶಕ್ತಿ: 43.78 ಕೋಟಿ ಮಹಿಳೆಯರಿಂದ ಉಚಿತ ಪ್ರಯಾಣ; ₹966.57 ಕೋಟಿ ಸರ್ಕಾರದಿಂದ ಬಿಡುಗಡೆ

ಗೃಹಜ್ಯೋತಿ: 5,73,052 ಫಲಾನುಭವಿಗಳು; ₹825.27 ಕೋಟಿ ಬಿಡುಗಡೆ

ಗೃಹಲಕ್ಷ್ಮಿ: 3,77,301 ಫಲಾನುಭವಿಗಳಿಗೆ ₹2,345.74 ಕೋಟಿ ಬಿಡುಗಡೆ

ಅನ್ನಭಾಗ್ಯ: 3,75,996 ಫಲಾನುಭವಿಗಳು

18 ವರ್ಷ ತುಂಬಿದ ಯುವಕರೇ, ಮತದಾರರ ಪಟ್ಟಿಗೆ ಬನ್ನಿ: ಮುಕುಲ್ ಜೈನ್

0

ವಿಜಯಸಾಕ್ಷಿ ಸುದ್ದಿ, ಗದಗ: 18 ವರ್ಷ ಪೂರ್ಣಗೊಂಡಿರುವ ಹಾಗೂ ಶೀಘ್ರದಲ್ಲೇ 18 ವರ್ಷ ಪೂರೈಸಲಿರುವ ಎಲ್ಲ ಅರ್ಹ ಯುವಕರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR)-2026 ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಹಾಗೂ ಅರ್ಹ ನಾಗರಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರೇರೇಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸೆ.19 ಹಾಗೂ 20ರಂದು ‘ಯಾವುದೇ ಅರ್ಹ ಮತದಾರ ಮತದಾನದಿಂದ ಹೊರಗುಳಿಯಬಾರದು’ ಎಂಬ ಧ್ಯೇಯವಾಕ್ಯದೊಂದಿಗೆ ವಿಶೇಷ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ವೇಳೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದ ಅರ್ಹ ನಾಗರಿಕರನ್ನು ಗುರುತಿಸಿ, ನೋಂದಣಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪದವಿ, ಐಟಿಐ, ಪಾಲಿಟೆಕ್ನಿಕ್ ಹಾಗೂ ವಿಶ್ವವಿದ್ಯಾಲಯಗಳ ಪ್ರವೇಶ ನೋಂದಣಿ ಆಧರಿಸಿ 18 ವರ್ಷ ಪೂರ್ಣಗೊಂಡ ಹಾಗೂ ಶೀಘ್ರದಲ್ಲೇ 18 ವರ್ಷ ಪೂರೈಸಲಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಬೇಕು. ಹೆಸರು, ವಯಸ್ಸು, ಜನ್ಮ ದಿನಾಂಕ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅರ್ಹರನ್ನು ಗುರುತಿಸುವಂತೆ ಸೂಚಿಸಿದರು.

ಕಾಲೇಜುಗಳಲ್ಲಿನ ಮತದಾರರ ಸಾಕ್ಷರತಾ ಕ್ಲಬ್‌ಗಳ (ELC) ಸದಸ್ಯರು ಹಾಗೂ ನೋಡಲ್ ಅಧಿಕಾರಿಗಳು ನೋಂದಣಿ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಅರ್ಹತೆ ಮತ್ತು ಮತದಾನದ ಹಕ್ಕಿನ ಕುರಿತು ವಿದ್ಯಾರ್ಥಿಗಳಿಗೆ ನಿರಂತರ ಜಾಗೃತಿ ಮೂಡಿಸಬೇಕು. ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಪಡೆದು ಚುನಾವಣಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದರು.

ಎನ್‌ಎಸ್‌ಎಸ್, ಎನ್‌ಸಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವಕರ ಸಹಯೋಗದಲ್ಲಿ ಸೈಕಲ್, ಬೈಕ್ ರ‍್ಯಾಲಿ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್‌ನ ಡಿಜಿಟಲ್ ಹಾಗೂ ಭೌತಿಕ ಹೋಲ್ಡಿಂಗ್‌ಗಳ ಮೂಲಕವೂ ಮತದಾರರ ನೋಂದಣಿ ಮತ್ತು ಮತದಾನದ ಮಹತ್ವದ ಸಂದೇಶ ತಲುಪಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಅರ್ಹ ಪ್ರತಿಯೊಬ್ಬ ಯುವ ಮತದಾರನ ಹೆಸರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಅಭಿಯಾನದ ಪ್ರಮುಖ ಉದ್ದೇಶ. ಯುವಜನರು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.

— ಮುಕುಲ್ ಜೈನ್, ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ

ರಂಭಾಪುರಿ ನಗರದ ಮೂಲಸೌಲಭ್ಯ ಕಲ್ಪಿಸಿ : ಪುರಸಭೆಗೆ ನಿವಾಸಿಗಳ ಮನವಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ರಂಭಾಪುರಿ ನಗರದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ಮಂಗಳವಾರ ಪುರಸಭೆ ಕಚೇರಿಗೆ ತೆರಳಿ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ನಿವಾಸಿಗಳಾದ ಗೋವಿಂದಪ್ಪ ಅರಳಿಕಟ್ಟಿ ಹಾಗೂ ಸುನೀಲ ಸರ್ವದೆ ಮಾತನಾಡಿ, ಹಲವು ವರ್ಷಗಳಿಂದ ಮೂಲಸೌಲಭ್ಯಗಳ ಕೊರತೆಯಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನಗರದಲ್ಲಿ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಸಂಚರಿಸಲು ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.

ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟೆಗಳು ಬೆಳೆದು ಸಂಚಾರಕ್ಕೂ ತೊಂದರೆಯಾಗುತ್ತಿದೆ. ಕುಡುಕರು ಹಾಗೂ ಕಳ್ಳರ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದ ಅಗತ್ಯ ಸ್ಥಳಗಳಲ್ಲಿ ಕಸದ ಡಬ್ಬಿಗಳನ್ನು ಅಳವಡಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಕಸ ಸಂಗ್ರಹಿಸುವ ವಾಹನ ಪ್ರತಿದಿನ ರಂಭಾಪುರಿ ನಗರಕ್ಕೆ ಆಗಮಿಸುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸ್ವಚ್ಛತೆ ಹಾಗೂ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಮೇಶ ದುರಗಣ್ಣವರ, ಅಕ್ಷಯ ಅಚಲಕರ, ಸೋಮಶೇಖರ ಕೊರದಾಳ, ಬಸವೇಣೆಪ್ಪ ದೂಮಖಾತಿ, ಮುತ್ತು ದುರಗಣ್ಣವರ, ಪ್ರಜ್ವಲ ಅಂಗಡಿ, ಫಕೀರಪ್ಪ ಸೊರಟೂರ, ಪವನಶಿಂಗ ಕಿಲ್ಲೇದಾರ, ಬಸವರಾಜ ಕುಂದ್ರಳ್ಳಿ, ಸಿದ್ದಪ್ಪ ಶೇರಸೂರಿ, ಸುಷ್ಮಾ ಸರ್ವದೆ, ಮುಕ್ತಾ ಪೂಜಾರ, ಲಕ್ಷ್ಮಿ ಕಡಬಿ, ರತ್ನವ್ವ ಮಾಳದಕರ, ಶಾರದಾ ಭಜಂತ್ರಿ, ಮಹಾದೇವಿ ಸೊರಟೂರ, ಕಮಲಾ ಮೋಡೆರ ಸೇರಿದಂತೆ ಅನೇಕ ನಿವಾಸಿಗಳು ಉಪಸ್ಥಿತರಿದ್ದರು.

ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳವನ್ನು ಶುದ್ಧೀಕರಣ ಮಾಡಿರುವುದನ್ನು ಖಂಡಿಸಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು.

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳವನ್ನು ಶುದ್ಧೀಕರಣ ಮಾಡಿರುವುದನ್ನು ರಾಹುಲ್ ಗಾಂಧಿ ಖಂಡಿಸಿದ್ದರು. ಇದನ್ನು ಆಧರಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ರಾಜಕೀಯ ದ್ವೇಷದ ಕ್ರಮ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು, ಎಫ್‌ಐಆರ್‌ ಅನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ನಗರದ ಟಿಪ್ಪು ಸುಲ್ತಾನ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ 500ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೆದರಿಕೆಗಳಿಗೆ ಕಾಂಗ್ರೆಸ್ ಜಗ್ಗದು

ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪರವಾಗಿ ಧ್ವನಿ ಎತ್ತುವ ನಾಯಕರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ರಾಜಕೀಯ ದ್ವೇಷದ ಕ್ರಮವಾಗಿದೆ. ಸತ್ಯ ಮತ್ತು ಸಂವಿಧಾನದ ಪರವಾಗಿ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದರು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವುದು ಅತ್ಯಂತ ಖಂಡನೀಯ. ಇಂತಹ ಘಟನೆಗಳು ದೇಶದ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಮನಸ್ಥಿತಿಯನ್ನು ತೋರಿಸುತ್ತವೆ. ಇಂತಹ ಕೃತ್ಯಗಳಿಂದ ಕಾಂಗ್ರೆಸ್‌ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಮುಖಂಡ ಅಕ್ಷಯ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಾಸಪ್ಪ ಕುರುಡಗಿ, ಬಸವರಾಜ ಕಡೇಮನಿ ಸೇರಿದಂತೆ ಹಲವು ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳು ಹಾಗೂ ಆರ್‌ಎಸ್‌ಎಸ್‌ನ ಕಾರ್ಯವೈಖರಿಯನ್ನು ಟೀಕಿಸಿದರು. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಆಶಯಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ದಲಿತರು, ಅಲ್ಪಸಂಖ್ಯಾತರು ಹಾಗೂ ವಿರೋಧ ಪಕ್ಷಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಧೋರಣೆಯನ್ನು ಟೀಕಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಸುಜಾತ ದೊಡ್ಡಮನಿ, ಅಶೋಕ ಮಂದಾಲಿ, ಪ್ರಭು ಬುರಬುರೆ, ನೀಲಮ್ಮ ಬೊಳನವರ, ಉಮರ್ ಫಾರೂಕ್ ಹುಬ್ಬಳ್ಳಿ, ಮಹ್ಮದ ಶಾಲಗಾರ, ಬಸವರಾಜ ಸುಂಕಾಪೂರ ಸೇರಿದಂತೆ ಅನೇಕ ಹಿರಿಯ ಕಾಂಗ್ರೆಸ್ ಮುಖಂಡರು, ಯುವ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಘಟಕಗಳ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪರವಾಗಿ ಧ್ವನಿ ಎತ್ತುವ ನಾಯಕರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ರಾಜಕೀಯ ದ್ವೇಷದ ಕ್ರಮ. ಸತ್ಯ ಮತ್ತು ಸಂವಿಧಾನದ ಪರವಾಗಿ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ.

— ಕೃಷ್ಣಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ

ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಿಸಿ: ಗಜಾನನೋತ್ಸವ ಮಹಾಮಂಡಳಿ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಪ್ರತಿವರ್ಷ ತಾತ್ಕಾಲಿಕ ಹೊಂಡ ನಿರ್ಮಿಸುವ ಬದಲು ಪಟ್ಟಣದಲ್ಲಿ 2ರಿಂದ 3 ಕಡೆ ಶಾಶ್ವತ, ಬೃಹತ್ ಹಾಗೂ ವೈಜ್ಞಾನಿಕ ವಿಸರ್ಜನಾ ಹೊಂಡಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ಹಾಗೂ ಹಿಂದೂ ಮುಖಂಡರಾದ ಮಂಜುನಾಥ ಮಾಗಡಿ, ಗಂಗಾಧರ ಮೆಣಸಿನಕಾಯಿ ಒತ್ತಾಯಿಸಿದರು.

ಮಂಗಳವಾರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು.

ಪ್ರತಿವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಮಣ್ಣಿನ ಹೊಂಡ ನಿರ್ಮಿಸಿ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಉತ್ಸವ ಮುಗಿದ ಬಳಿಕ ಹೊಂಡ ಮುಚ್ಚಲಾಗುತ್ತಿದ್ದು, ಮುಂದಿನ ವರ್ಷ ಮತ್ತೆ ಹೊಸದಾಗಿ ಹೊಂಡ ನಿರ್ಮಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೂ ನೋವುಂಟಾಗುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸಲು ಸೂಕ್ತ ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ವಿಸರ್ಜನಾ ಹೊಂಡ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ 18ರಿಂದ 20 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಹೆಚ್ಚಿನ ಜನಸಂದಣಿ ಉಂಟಾಗುವುದರಿಂದ ಅಗತ್ಯ ಸುರಕ್ಷತಾ ಕ್ರಮ ಹಾಗೂ ಮೂಲಸೌಲಭ್ಯ ಕಲ್ಪಿಸಬೇಕು. ವಿಸರ್ಜನಾ ಹೊಂಡಗಳ ಸುತ್ತಮುತ್ತ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಮತ್ತು ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಮೆರವಣಿಗೆ ಮಾರ್ಗ ಸರಿಪಡಿಸಿ

ಗಣೇಶ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ಮಾರ್ಗದಲ್ಲಿರುವ ವಿದ್ಯುತ್ ತಂತಿ, ಕೇಬಲ್‌ಗಳು ಹಾಗೂ ಇತರ ಅಡೆತಡೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತೆರವುಗೊಳಿಸಬೇಕು. ಉತ್ಸವದ ವೇಳೆ ಯಾವುದೇ ತೊಂದರೆಯಾಗದಂತೆ ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಜಯ ಕುಂಬಾರ, ಪ್ರವೀಣ ಬೋಮಲೆ, ನವೀನ ಹಿರೇಮಠ, ಅಮಿತ ಗುಡಗೇರಿ, ಅಭಿಷೇಕ ಉಮಚಗಿ, ಪ್ರಶಾಂತ ಗಾಂಜಿ, ಶರಣು ಗಾಂಜಿ, ಗಂಗಾಧರ ಸವಣೂರ, ಹನುಮಂತಪ್ಪ ಶೆರಸೂರಿ, ಸಂತೋಷ ಅಳಗುಂಡಿ, ಆದೇಶ ಸವಣೂರ, ವಿನಾಯಕ ಸಪಡ್ಲ, ಸಾಗರ ಮೆಹರವಾಡೆ, ಅಕ್ಷಯ ಅಚಲಕರ, ಯಶವಂತ ಶಿರಹಟ್ಟಿ, ಗುದ್ನೇಪ್ಪ ಸೊಪ್ಪಿನ ಸೇರಿದಂತೆ ವಿವಿಧ ಗಣೇಶ ಮಂಡಳಿಗಳ ಪದಾಧಿಕಾರಿಗಳು ಹಾಗೂ ಹಿಂದೂ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

ಜನವನದಲ್ಲಿ ಗುರುವಂದನಾ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಗ್ರಾಮೀಣ ವಿಶ್ವವಿದ್ಯಾಲಯದ ಜನವನದಲ್ಲಿ ಎಲ್‌ಐಸಿ ವಿಮಾ ಪ್ರತಿನಿಧಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ವಿಶೇಷವೆಂದರೆ, ಎಲ್‌ಐಸಿ ವಿಮಾ ಪ್ರತಿನಿಧಿಗಳು ತಮ್ಮ ಗುರು ಹಾಗೂ ಮಾರ್ಗದರ್ಶಕರಾದ ಬಿ.ಬಿ. ದೇಶಪಾಂಡೆ ಅವರಿಗೆ ಪ್ರಕೃತಿಯ ಮಡಿಲಿನಲ್ಲಿ ಸರಳವಾಗಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಿದರು.

ಬಿ.ಬಿ. ದೇಶಪಾಂಡೆ ಅವರು ಸುಮಾರು ನಾಲ್ಕು ದಶಕಗಳ ಕಾಲ ಎಲ್‌ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಹಲವು ವಿಮಾ ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಶಿಷ್ಯ ಬಳಗವೇ ಒಗ್ಗೂಡಿ ಈ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಬಿ. ದೇಶಪಾಂಡೆ ಹಾಗೂ ಅವರ ಪತ್ನಿ ಭಾರತಿ ದೇಶಪಾಂಡೆ, ಪ್ರತಿಯೊಬ್ಬರೂ ತಮ್ಮ ತಾಯಿ ಹೆಸರಿನಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಜನವನವು ಉತ್ತಮ ಪರಿಸರ ತಾಣವಾಗಿದ್ದು, ಇಲ್ಲಿ ಸಾರ್ವಜನಿಕರು ಹುಟ್ಟುಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರಕೃತಿಯ ನಡುವೆ ಆಚರಿಸಬಹುದು ಎಂದು ಅಭಿಪ್ರಾಯಪಟ್ಟರು. ತಾವು ಕೂಡ ಶೀಘ್ರದಲ್ಲೇ ಜನವನಕ್ಕೆ ಹಲವು ಹಣ್ಣಿನ ಸಸಿಗಳನ್ನು ನೀಡುವುದಾಗಿ ತಿಳಿಸಿದರು.

ಮೌನೇಶ ಭಜಂತ್ರಿ ಮಾತನಾಡಿ, ದೇಶಪಾಂಡೆ ಅವರ ಬಳಿ ಹಲವು ಜನರು ಕಲಿತು ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಅವರು ಪ್ರಕೃತಿ ಪ್ರಿಯರಾಗಿರುವುದರಿಂದ ಈ ಗುರುವಂದನಾ ಕಾರ್ಯಕ್ರಮವನ್ನು ಜನವನದಲ್ಲಿ ಆಯೋಜಿಸಲಾಗಿದೆ. ದುಂದು ವೆಚ್ಚ ಮಾಡುವುದು ಬೇಡ ಎಂಬುದು ದೇಶಪಾಂಡೆ ಅವರ ಆಶಯ. ಹೀಗಾಗಿ ಕೇಕ್, ಉಡುಗೊರೆ ಸೇರಿದಂತೆ ದುಂದು ವೆಚ್ಚದ ಆಚರಣೆಗಳನ್ನು ಬದಿಗಿಟ್ಟು, ಪ್ರಕೃತಿಯ ಮಧ್ಯೆ ಸರಳ ರೀತಿಯಲ್ಲಿ ಅವರಿಗೆ ಸನ್ಮಾನ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಮೇಶ ಅಣ್ಣಿಗೇರಿ, ವಿನಯ ಶಲವಡಿ, ಸಿದ್ದು ಬಣಗಾರ, ಮಂಜುನಾಥ ಸೊಪ್ಪಿಮಠ, ಶರೀಫಸಾಬ್ ನದಾಫ್, ನಾಮದೇವ ಲಮಾಣಿ, ವಿರೂಪಾಕ್ಷ ಮಳ್ಳಿ, ಪ್ರದೀಪ ಅಂಗಡಿ, ನಿರ್ಮಲಾ ಕದಡಿ, ಕವಿತಾ ಉಪವಾಸಿ, ರೇಖಾ ಕುರಿ, ರೇಖಾ ಸಾತಣ್ಣವರ, ಲಕ್ಷ್ಮೀ ಸೋಮಣ್ಣವರ, ಶ್ರೀದೇವಿ ಕಮ್ಮಾರ, ಸಿಂಧು ಹಡಪದ, ಶೀಲಾ ಚಳ್ಳಮರದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಾಸಾಬಿ ಮಿರ್ಜಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಣವಿ ಗ್ರಾಮದ ಸರ್ಕಾರಿ ಹಿರಿಯ ಉರ್ದು ಗಂಡು ಮಕ್ಕಳ ಶಾಲೆಯ ಶಿಕ್ಷಕಿ ಶ್ರೀಮತಿ ಮಾಸಾಬಿ ಗುಡುಸಾಬ ಮಿರ್ಜಿಯವರಿಗೆ 2026ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸೆಪ್ಟೆಂಬರ್ 5ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾಸಾಬಿ ಮಿರ್ಜಿಯವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಕರ್ತವ್ಯನಿಷ್ಠೆಯನ್ನು ಪರಿಗಣಿಸಿ ಅವರಿಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಡಿಡಿಪಿಐ ಬುರಡಿ, ಬಿಇಒ ನಡುವಿನಮನಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗದಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ವನ್ಯಜೀವಿಗಳ ಸುರಕ್ಷತೆಗೆ ಅರಣ್ಯ ಇಲಾಖೆ ಕ್ರಮ; ಬಂಡೀಪುರ ಸಫಾರಿ ವಾಹನಗಳಿಗೆ GPS ಕಣ್ಗಾವಲು!

ಚಾಮರಾಜನಗರ: ವನ್ಯಜೀವಿಗಳ ಸಹಜ ಚಲನವಲನಕ್ಕೆ ತೊಂದರೆಯಾಗದಂತೆ ಹಾಗೂ ಪ್ರವಾಸಿಗರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ವಾಹನಗಳಿಗೆ ಜಿಪಿಎಸ್ ಹಾಗೂ ಡ್ಯಾಶ್‌ ಕ್ಯಾಮೆರಾ ಅಳವಡಿಸಲಾಗಿದೆ.

ಬಂಡೀಪುರ ಸಫಾರಿ ವಲಯದಲ್ಲಿ ಸಂಚರಿಸುವ 18 ವಾಹನಗಳಿಗೆ ಜಿಪಿಎಸ್ ಮತ್ತು ಡ್ಯಾಶ್‌ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಸಫಾರಿ ವೇಳೆ ವಾಹನಗಳ ಚಲನವಲನದ ಮೇಲೆ ನಿಗಾ ಇಡಲು ಇದರಿಂದ ಸಾಧ್ಯವಾಗಲಿದೆ.

ಸಫಾರಿ ವೇಳೆ ಹುಲಿ, ಚಿರತೆ ಸೇರಿದಂತೆ ವನ್ಯಜೀವಿಗಳು ಕಾಣಿಸಿಕೊಂಡಾಗ ಚಾಲಕರು ಇತರೆ ಸಫಾರಿ ವಾಹನಗಳಿಗೆ ಮಾಹಿತಿ ನೀಡುತ್ತಿದ್ದರು. ಇದರಿಂದ ಒಂದೇ ಸಮಯದಲ್ಲಿ ಹಲವು ವಾಹನಗಳು ಪ್ರಾಣಿಗಳು ಇರುವ ಸ್ಥಳಕ್ಕೆ ತೆರಳಿ ಜಮಾಯಿಸುತ್ತಿದ್ದವು.

ಹಲವು ವಾಹನಗಳು ಒಂದೇ ಕಡೆ ಸೇರುವುದರಿಂದ ವನ್ಯಜೀವಿಗಳ ಸಹಜ ಸಂಚಾರ ಹಾಗೂ ಬೇಟೆ ಚಟುವಟಿಕೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇತ್ತು. ಇದನ್ನು ತಡೆಯಲು ಜಿಪಿಎಸ್ ಹಾಗೂ ಡ್ಯಾಶ್‌ ಕ್ಯಾಮೆರಾ ವ್ಯವಸ್ಥೆ ಅಳವಡಿಸಲಾಗಿದೆ.

ಸಫಾರಿ ವಲಯದ ಹೊರಗಿನ ನಿರ್ಬಂಧಿತ ಪ್ರದೇಶಗಳಿಗೂ ಕೆಲವರು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೂರುಗಳು ಕೇಳಿಬಂದಿದ್ದವು. ಇಂತಹ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವುದನ್ನು ತಡೆಯಲು ಹಾಗೂ ವಾಹನಗಳ ಸಂಚಾರದ ಮೇಲೆ ನಿಗಾ ವಹಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ.

ಈ ಹಿಂದೆ ನಿರ್ಬಂಧಿತ ಪ್ರದೇಶಗಳಲ್ಲಿ ಪ್ರವಾಸಿಗರು ತೆರಳಿದ ಸಂದರ್ಭದಲ್ಲಿ ವನ್ಯಜೀವಿಗಳಿಂದ ದಾಳಿಗೆ ಒಳಗಾದ ಘಟನೆಗಳೂ ನಡೆದಿದ್ದವು. ಹೀಗಾಗಿ ಪ್ರವಾಸಿಗರು ಹಾಗೂ ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ಈ ಕುರಿತು ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯಾಧಿಕಾರಿ ಕೆ.ಪಿ. ಸತೀಶ್ ಕುಮಾರ್ ಮಾತನಾಡಿ, ಜಿಪಿಎಸ್ ಹಾಗೂ ಡ್ಯಾಶ್‌ ಕ್ಯಾಮೆರಾ ಅಳವಡಿಕೆಯಿಂದ ಸಫಾರಿ ವಾಹನಗಳು ಸಂಚರಿಸುವ ಮಾರ್ಗ, ವೇಗ ಹಾಗೂ ಸಫಾರಿ ವೇಳೆ ನಡೆಯುವ ಚಟುವಟಿಕೆಗಳ ಕುರಿತು ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಸಫಾರಿ ವೇಳೆ ನಡೆಯುವ ಘಟನೆಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಲಿದ್ದು, ವನ್ಯಜೀವಿಗಳು ಹಾಗೂ ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ತಂತ್ರಜ್ಞಾನ ಅಳವಡಿಕೆ ಹೆಚ್ಚು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಅಮರೇಶ್ ಮಲ್ಲಣ್ಣವರಿಗೆ ಗೌರವ ಡಾಕ್ಟರೇಟ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಶಿಕ್ಷಣ ತಜ್ಞ, ಸಾಹಿತಿ ಹಾಗೂ ಸಮಾಜ ಸೇವಕ ಅಮರೇಶ್ ಮಲ್ಲಣ್ಣವರ ಅವರಿಗೆ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಸುಧಾರಣೆಗೆ ಒತ್ತು ನೀಡುವುದರ ಜತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಅಮರೇಶ್ ಮಲ್ಲಣ್ಣವರ ಅವರ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಅವರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಕಾರ್ಯಗಳು ಪ್ರಶಸ್ತಿಗೆ ಪ್ರಮುಖ ಕಾರಣವಾಗಿವೆ.

ಇದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿರುವ ಅವರು, ಸಾಮಾಜಿಕ ಕಾಳಜಿ ಹಾಗೂ ಶಿಕ್ಷಣದ ಮಹತ್ವವನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಗ್ರಾಮೀಣ ಹಿನ್ನೆಲೆಯಿಂದ ಬೆಳೆದು ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ಅಮರೇಶ್ ಮಲ್ಲಣ್ಣವರಿಗೆ ಗೌರವ ಡಾಕ್ಟರೇಟ್ ಲಭಿಸಿರುವುದು ಸವಡಿ ಗ್ರಾಮ ಸೇರಿದಂತೆ ರೋಣ ತಾಲೂಕಿನ ಜನರಲ್ಲಿ ಸಂತಸ ಮೂಡಿಸಿದೆ.

ಅವರ ಸಾಧನೆಗೆ ವಿವಿಧ ಗಣ್ಯರು, ಶಿಕ್ಷಣ ಪ್ರೇಮಿಗಳು, ಸಾಹಿತಿಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿಯೂ ಶಿಕ್ಷಣ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ಇನ್ನಷ್ಟು ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದ್ದಾರೆ.

ಜಿಲ್ಲಾ ಉತ್ತಮ ಶಿಕ್ಷಕಿ ಭಾರತಿ ಕುಲಕರ್ಣಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಸದಾ ಅಧ್ಯಯನಶೀಲರಾಗಿರಬೇಕು. ಮುಗ್ಧ ಮಕ್ಕಳ ಮನಸ್ಸಿನಲ್ಲಿ ಅಕ್ಷರದ ಬೀಜ ಬಿತ್ತುವ ಕಾರ್ಯದಲ್ಲಿ ನಿರಂತರ ತೊಡಗಿ, ಅವರ ಭವ್ಯ ಭವಿಷ್ಯಕ್ಕೆ ಸಕಲ ರೀತಿಯಲ್ಲಿ ಸಿದ್ಧಗೊಳಿಸುವ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ಗದುಗಿನ ಸರ್ಕಾರಿ ಮಾದರಿ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶ್ರೀಮತಿ ಭಾರತಿ ಕುಲಕರ್ಣಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ವ್ಯಕ್ತಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರಲ್ಲಿ ಅಕ್ಷರದ ಅರಿವು ಮೂಡಿಸಿ, ಅವರನ್ನು ಉನ್ನತ ವ್ಯಕ್ತಿಗಳನ್ನಾಗಿ ರೂಪಿಸಲು ಅಗತ್ಯವಾದ ಅಡಿಪಾಯವನ್ನು ಪ್ರಾಥಮಿಕ ಹಂತದಲ್ಲಿಯೇ ಗಟ್ಟಿಗೊಳಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳ ಭವಿಷ್ಯದ ನಿಜವಾದ ರೂವಾರಿಗಳು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಬಿ.ವಿ. ಕುಲಕರ್ಣಿ, ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ‘ನನ್ನತನ’ದ ಜತೆಗೆ ಸಾಮಾಜಿಕ ಅರಿವನ್ನೂ ಮೂಡಿಸುತ್ತವೆ. ಶಿಕ್ಷಕರು ಪರಿಶ್ರಮದಿಂದ ಕಲಿಸುವಿಕೆಯಲ್ಲಿ ತೊಡಗಿಸಿಕೊಂಡಾಗ ಮಕ್ಕಳು ಕಲಿಕೆಯಲ್ಲಿ ಯಶಸ್ಸು ಸಾಧಿಸುತ್ತಾರೆ. ತಮ್ಮ ಪರಿಶ್ರಮವನ್ನು ಸಮುದಾಯ ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.

ಅಕ್ಕಮಹಾದೇವಿಯ ಕದಳಿಶ್ರೀ ಮಹಿಳಾ ವೇದಿಕೆ ವತಿಯಿಂದ ಭಾರತಿ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಿ, ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿಯರಾದ ವಿ.ಎಸ್. ಜಕರಡ್ಡಿ ಹಾಗೂ ಎಚ್.ಎಲ್. ಆಸಂಗಿ, ಶಿಕ್ಷಕಿಯರಾದ ವಿ.ಎ. ಕುಂಟೋಜಿ, ಸರ್ವಮಂಗಳಾ ಗುಜಮಾಗಡಿ, ಮಂಜುಳಾ ಕೊಳ್ಳಿ, ರೇಣುಕಾ ಹೊಸಮನಿ, ಎಫ್.ಎಸ್. ಹಿರೇಮಠ, ಶೋಭಾ ವಗ್ಗಿ, ಶ್ರೇಯಾ ಬಾರಾಟಕ್ಕೆ ಸೇರಿದಂತೆ ಶಾಲಾ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.