Home Blog Page 27

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಶ್ವಾರಾಧ್ಯರ ಭವ್ಯ ರಥೋತ್ಸವ: ಅಬ್ಬೆತುಮಕೂರಿನಲ್ಲಿ ಭಕ್ತಿ ಸಾಗರ

0

ಯಾದಗಿರಿ: ಜಿಲ್ಲೆ ಮತ್ತೊಮ್ಮೆ ಭಕ್ತಿಭಾವದಲ್ಲಿ ತೇಲಿತು. ಕಲ್ಯಾಣ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಅಬ್ಬೆತುಮಕೂರುನಲ್ಲಿ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭವ್ಯವಾಗಿ ನೆರವೇರಿತು.

ಬೆಳಿಗ್ಗೆ ರಥಾಂಗ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಾ. ಗಂಗಾಧರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದವು. ನಂತರ ನಂದಿಕೋಲು ನೃತ್ಯ ಹಾಗೂ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಜಾತ್ರೆಗೆ ವಿಶೇಷ ಮೆರುಗು ತಂದವು.

ಸಂಜೆ ನಡೆದ ರಥೋತ್ಸವದಲ್ಲಿ ಭಕ್ತರ ಜಯಘೋಷ ಗಗನಮುಟ್ಟಿತು. ಭಕ್ತರು ಕಾರಿಕಾ, ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ಅರ್ಪಿಸಿ ತಮ್ಮ ಭಕ್ತಿ ವ್ಯಕ್ತಪಡಿಸಿದರು.

ಜಾತ್ರೆಯಲ್ಲಿ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪುರ, ರಾಮಲಿಂಗಾರೆಡ್ಡಿ, ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದಲೂ ಅಪಾರ ಭಕ್ತರು ಆಗಮಿಸಿದ್ದು, ಅಬ್ಬೆತುಮಕೂರು ಕ್ಷೇತ್ರ ಭಕ್ತ ಸಾಗರವಾಗಿ ಮಾರ್ಪಟ್ಟಿತ್ತು.

ಹುಲಿ ದಾಳಿ ಬಳಿಕ ಸ್ಥಗಿತಗೊಂಡಿದ್ದ ಸಫಾರಿ ಮತ್ತೆ ಚಾಲು: ಬಂಡೀಪುರದಲ್ಲಿ ಬಿಗಿ ಬಂದೋಬಸ್ತ್

0

ಚಾಮರಾಜನಗರ: ಹುಲಿಗಳ ದಾಳಿಗೆ ಮೂವರು ರೈತರು ಬಲಿಯಾದ ಘಟನೆಗಳ ಬಳಿಕ ಸ್ಥಗಿತಗೊಂಡಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಫಾರಿ ಸೇವೆ ಇದೀಗ ಪುನರಾರಂಭಗೊಂಡಿದೆ. ರೈತ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಆರಂಭಿಸಲಾಗಿದೆ.

ಸಫಾರಿ ಅವಧಿಯನ್ನು ಎಂಟು ಗಂಟೆಯಿಂದ ಐದು ಗಂಟೆಗೆ ಇಳಿಸಲಾಗಿದೆ. ಬೆಳಿಗ್ಗೆ 6:30–9 ಮತ್ತು ಸಂಜೆ 3:30–6ರವರೆಗೆ ಮಾತ್ರ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ವಾಹನಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿ 50% ಮಾತ್ರ ಕಾರ್ಯನಿರ್ವಹಣೆಗೆ ಇಡಲಾಗಿದೆ.

ಮೇಲುಕಾಮನಹಳ್ಳಿ ಕೇಂದ್ರದಿಂದ ಅರಣ್ಯ ಪ್ರವೇಶ ದ್ವಾರದವರೆಗೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೂ ಹುಲಿ ದಾಳಿ ಪ್ರಕರಣಗಳು ನಡೆದ ಹಿನ್ನೆಲೆ ಮಾನವ-ವನ್ಯಜೀವಿ ಸಂಘರ್ಷ ಮತ್ತೆ ಚರ್ಚೆಗೆ ಕಾರಣವಾಗಿದೆ.

ಚಾಮರಾಜನಗರದಲ್ಲಿ ರೈತ ಸಂಘಟನೆಗಳು ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ. ಸಫಾರಿ ಪುನಾರಂಭದಿಂದ ಸಂಘರ್ಷ ಹೆಚ್ಚಾಗಲಿದೆ ಎಂದು ಆರೋಪಿಸಿರುವ ರೈತರು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಫೆಬ್ರವರಿ 25ರಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ಪ್ರವಾಸೋದ್ಯಮ ಚಟುವಟಿಕೆ ಪುನಶ್ಚೇತನ, ಇನ್ನೊಂದೆಡೆ ರೈತರ ಜೀವಭದ್ರತೆ — ಈ ಎರಡರ ನಡುವೆ ಸಮತೋಲನ ಸಾಧಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಶಾಸಕ ಸ್ಥಾನದಿಂದ ಅಮಾನತುಗೊಳಿಸಿ: ಡಾ. ಚಂದ್ರು ಲಮಾಣಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

0

ಗದಗ: ಶಾಸಕ ಡಾ. ಚಂದ್ರು ಲಮಾಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಹಟ್ಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕ‌ ಡಾ.ಚಂದ್ರು ಲಮಾಣಿ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಡಾ. ಚಂದ್ರು ಲಮಾಣಿಗೆ ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಗಿದ್ದು,

ಶಿರಹಟ್ಟಿ ಪೇಟೆ ಆಂಜನೇಯ ದೇವಸ್ಥಾನದಿಂದ ತಹಶಿಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕರುಗಳಾದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರಕರಣದ ಹಿನ್ನೆಲೆ

ಶಾಸಕ ಚಂದ್ರು ಲಮಾಣಿ, 1 ಕೋಟಿ ರೂಪಾಯಿ ಮೌಲ್ಯದ ಕಾಂಟ್ರಾಕ್ಟ್​ಗಾಗಿ ಗುತ್ತಿಗೆದಾರರಿಂದ 11 ಲಕ್ಷ ರೂಪಾಯಿ ಕಮಿಷನ್ ಕೇಳಿದ್ದರು. ಈ ಸಂಬಂಧ ಶಾಸಕ ಚಂದ್ರು ಲಮಾಣಿ, ಆಪ್ತ ಸಹಾಯಕರಾದ ಗುರು ಮತ್ತು ಮಂಜುನಾಥ್ ಅವರನ್ನು ಕೂಡ ಹಣ ಸ್ವೀಕರಿಸಿದ್ದಕ್ಕಾಗಿ ವಶಕ್ಕೆ ಪಡೆಯಲಾಗಿತ್ತು.

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ವಿಜಯ ಪೂಜಾರ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿರುವ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಲಂಚ ಪಡೆಯುತ್ತಿರುವಾಗಲೇ ದಾಳಿ ನಡೆದಿತ್ತು.

ಕಮಿಷನ್​ಗೆ ಬೇಡಿಕೆ ಇಟ್ಟ ಬಗ್ಗೆ ಗುತ್ತಿಗೆದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಕಾರ್ಯಾಚರಣೆ ನಡೆದಿದ್ದು, ಪ್ಲಾನ್​ ಪ್ರಕಾರ ಪೂಜಾರ ಕಮಿಷನ್ ಕೊಡಲು ಒಪ್ಪಿಕೊಂಡಿದ್ದರು. ಅದರಂತೆ, ಆಸ್ಪತ್ರೆಯಲ್ಲಿ ಶಾಸಕರ ಪಿಎಗಳಿಗೆ ಮೊದಲ ಕಂತಿನ 5 ಲಕ್ಷ ರೂ.ಗಳನ್ನು ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು.

ಗದಗ ಜಿಲ್ಲೆಯ ಸಂಕದಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ 1% ಕಮಿಷನ್ (ಲಂಚ) ಬೇಡಿಕೆ ಇಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

ವೈರಲ್ ವಿಡಿಯೋ ಬಯಲು ಮಾಡಿದ ಏರ್ ಫೈರ್ ಪ್ರಕರಣ: ಯಲಬುರ್ಗಾದ ಅಡ್ಡಪಲ್ಲಕ್ಕಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ ಜೈಲು ಪಾಲು

0

ಕೊಪ್ಪಳ: ಜಿಲ್ಲೆಯ ಯಲಬುರ್ಗಾದಲ್ಲಿ ನಡೆದ ಅಡ್ಡಪಲ್ಲಕ್ಕಿ ಮೆರವಣಿಗೆ ಸಂಭ್ರಮ ಇದೀಗ ಕಾನೂನು ಗಂಭೀರತೆಯತ್ತ ತಿರುಗಿದೆ. ಗಾಳಿಯಲ್ಲಿ ಪಿಸ್ತೂಲು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂದಗಿ ಮೂಲದ ಬಸನಗೌಡ ಪಾಟೀಲ್ ಅವರನ್ನು ಬಂಧಿಸಲಾಗಿದೆ.

ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆ್ಯಕ್ಟ್ ಅಡಿ ಕೇಸ್ ದಾಖಲಿಸಲಾಗಿದೆ.

ಈ ಕುರಿತು ಮಾತನಾಡಿದ ಕೊಪ್ಪಳ ಎಸ್‌ಪಿ ರಾಮ್ ಎಲ್ ಅರಸಿದ್ದಿ, “ನಾವು ಸೋಶಿಯಲ್ ಮೀಡಿಯಾವನ್ನು ಸತತವಾಗಿ ಮಾನಿಟರಿಂಗ್ ಮಾಡುತ್ತೇವೆ. ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸುವುದು ಕಾನೂನುಬಾಹಿರ” ಎಂದು ಎಚ್ಚರಿಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ

ಜನವರಿ 28ರಂದು ಯಲಬುರ್ಗಾದ ಪ್ರಸಿದ್ಧ **ಶ್ರೀಧರ ಮುರಡಿ ಮಠ**ದಿಂದ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುತ್ತಿತ್ತು. ಈ ವೇಳೆ ಸಂಭ್ರಮದ ಭರದಲ್ಲಿ ಬಸನಗೌಡ ಪಾಟೀಲ್ ಪಿಸ್ತೂಲು ತೆಗೆಯುವ ಮೂಲಕ ಎರಡು ಸುತ್ತು ಏರ್ ಫೈರ್ ಮಾಡಿದ್ದಾರೆ.

ವೆಪನ್ ಲೈಸೆನ್ಸ್ ವಿಜಯಪುರ ಜಿಲ್ಲೆಗೆ ಮಾತ್ರ ಮಾನ್ಯವಾಗಿದ್ದರೂ, ಕೊಪ್ಪಳದಲ್ಲಿ ಬಳಸಿರುವುದು ಕಾನೂನು ಉಲ್ಲಂಘನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಸ್ತೂಲು ಹಾಗೂ ಜೀವಂತ ಬುಲೆಟ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ: ತಿರುಪತಿ ದೇವಸ್ಥಾನದಿಂದ ರಾಯರಿಗೆ ಶೇಷವಸ್ತ್ರ ಸಮರ್ಪಣೆ, HDK ದಂಪತಿ ಭಾಗಿ

0

ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮದಿಂದ ನಡೆಯಿತು. ತಿರುಮಲ ತಿರುಪತಿ ದೇವಸ್ಥಾನದಿಂದ ಮಂತ್ರಾಲಯಕ್ಕೆ ತರಲಾದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರ ಬೃಂದಾವನಕ್ಕೆ ಭಕ್ತಿಭಾವದಿಂದ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಭಾಗವಹಿಸಿದ್ದರು.

ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳನ್ನು ರಾಯರ ಮಠದ ಆಡಳಿತ ಮಂಡಳಿ ಸಾಂಪ್ರದಾಯಿಕವಾಗಿ ಸ್ವಾಗತಿಸಿತು. ಬಳಿಕ ಮೆರವಣಿಗೆಯ ಮೂಲಕ ಶೇಷವಸ್ತ್ರವನ್ನು ಮಠಕ್ಕೆ ತರಲಾಗಿದ್ದು, ರಾಯರ ಮೂಲ ಬೃಂದಾವನದಲ್ಲಿ ಸಮರ್ಪಣೆ ನೆರವೇರಿಸಲಾಯಿತು.

ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಶೇಷವಸ್ತ್ರವನ್ನು ಸಮರ್ಪಿಸಿದರು. ಈ ವೇಳೆ ಅನೇಕ ಭಕ್ತರು ಉಪಸ್ಥಿತರಿದ್ದು, ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನೆರವೇರಿತು.

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

0

ಚಿಕ್ಕಬಳ್ಳಾಪುರ: ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದು ದೇಶಾದ್ಯಂತ ‘ಮನರೇಗಾ ವನ್ನು ಉಳಿ’ ಅಭಿಯಾನ ಪ್ರಾರಂಭಿಸಲಾಗಿದೆ. ಚಳಿಗಾಲದ ಅಧಿವೇಶನ್ಲದಲಿ ಕೇಂದ್ರ ಭಾಜಪ ಸರ್ಕಾರ ಮನರೆಗಾ ವನ್ನು ರದ್ದುಪಡಿಸಿ, ವಿಬಿಜಿರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದೆ. ಮನರೇಗಾದ ರದ್ದು ಅಗತ್ಯವಿರಲಿಲ್ಲ. ಕೂಲಿಕಾರರು, ಆದಿವಾಸಿಗಳು, ಸಣ್ಣರೈತರಿಗೆ, ಮಹಿಳೆಯರಿಗೆ ಉದ್ಯೋಗದ ಅನುಕೂಲ ಕಲ್ಪಿಸುವ ದಿಸೆಯಲ್ಲಿ 2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ,

ನಾಯಕಿ ಸೋನಿಯಾ ಗಾಂಧಿಅವರ ನೇತೃತ್ವದಲ್ಲಿ ಈ ಕಾಯ್ದೆ ಜಾರಿಯಾಯಿತು. ಇದೇ ಕಾಯ್ದೆಯಲ್ಲದೇ, ಶಿಕ್ಷಣ, ಆಹಾರ, ಮಾಹಿತಿ ಹಕ್ಕು ಸೇರಿದಂತೆ ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದರು.ಆದರೆ ಈ ಎಲ್ಲ ಜನಪರ ಕಾಯ್ದೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮೋದಿಯವರ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದರು.

ಮನರೇಗಾ ಅಡಿ 12.16 ಕೋಟಿ ಜನರಿಗೆ ಉದ್ಯೋಗ:

ಸದನದಲ್ಲಿ ಕೇವಲ 8 ಗಂಟೆಗಳ ಕಾಲ ಚರ್ಚೆ ಮಾಡಿದ ಕೇಂದ್ರ ಸರ್ಕಾರ, ನಂತರ ಹೊಸ ಕಾಯ್ದೆಯನ್ನು ಜಾರಿಗೆ ತಂದರು. ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಜೀವಿಕ ಮಿಷನ್ ಗ್ರಾಮೀಣ ಕಾಯ್ದೆ , 12.16 ಕೋಟಿ ಜನರು ಕೆಲಸ ಪಡೆಯುತ್ತಿದ್ದರು. ಇದರಲ್ಲಿ ಸುಮಾರು 53 % ಉದ್ಯೋಗ ಪಡೆಯುತ್ತಿದ್ದರು. ಅಲ್ಲದೇ ಪರಿಶಿಷ್ಟ ಜಾತಿಯ 17% ಮತ್ತು ಪರಿಶಿಷ್ಟ ವರ್ಗದ 11 % ಜನರು ಉದ್ಯೋಗ ಪಡೆಯುತ್ತಿದ್ದರು. ಈ ಎಲ್ಲ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದರು.

ಮನರೇಗಾ ಕಾಯ್ದೆಗೆ ಗ್ರಾಮೀಣಾಭಿವೃದ್ಧಿಯ ಕನಸು ಕಂಡಿದ್ದ ಮಹಾತ್ಮಾಗಾಂಧಿಯವರ ಹೆಸರನ್ನು ಇಡಲಾಗಿತ್ತು. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮನರೇಗಾ ಶಕ್ತಿ ತುಂಬಿತ್ತು. 100 ದಿನಗಳ ಉದ್ಯೋಗದ ಖಾತ್ರಿ ನೀಡುತ್ತಿದ್ದ ಮನರೇಗಾ ಕಾಯ್ದೆಯಡಿ, ಕೂಲಿಕಾರರು ತಮ್ಮ ಸ್ಥಳೀಯ ಮಟ್ಟದಲ್ಲಿಯೇ ಕೆಲಸ ಮಾಡಬಹುದಿತ್ತು. ಗ್ರಾಮಪಂಚಾಯತಿ ಮತ್ತು ಗ್ರಾಮಸಭೆಗಳು ನಿರ್ಧರಿಸುವ ಅಧಿಕಾರವಿತ್ತು. ಆದರೀಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಲಿದೆ. ಕೇಂದ್ರದ ಅನುದಾನ ,

ಅನುಮತಿ ಇಲ್ಲದೇ , ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕೆಲಸವಾಗಲು ಸಾಧ್ಯ. ಆದ್ದರಿಂದ ಮನರೇಗಾ ವನ್ನು ಮುಂದುವರೆಸಬೇಕೆಂಬುದು ಕಾಂಗ್ರೆಸ್ ಸರ್ಕಾರದ ಒತ್ತಾಯವಾಗಿದೆ. ಮನರೇಗಾ ದಲ್ಲಿ 100 ದಿನ ಭತ್ಯೆಯನ್ನು ತಪ್ಪದೇ ಕೊಡಲಾಗುತ್ತಿತ್ತು. ಹೊಸ ಕಾಯ್ದೆಯಂತೆ ಕೇಂದ್ರ 60% ಅನುದಾನ ಮತ್ತು ರಾಜ್ಯಗಳು 40% ಅನುದಾನ ಕೊಡಬೇಕಾಗಿದೆ. ರಾಜ್ಯದ ಹಿತವನ್ನು ಕಾಪಾಡುವಲ್ಲಿ ಕೇಂದ್ರ ಸೋತಿದೆ. ಅದ್ದರಿಂದ ವಿಬಿಜಿರಾಮ್ ಜಿ ರದ್ದುಪಡಿಸಿ, ಮನರೇಗಾ ವನ್ನು ಮರುಸ್ಥಾಪಿಸಲು ದೇಶಾದ್ಯಂತ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ ಎಂದರು.

ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ ಯುವಕ: ಸಾವು-ಬದುಕಿನ ನಡುವೆ ಯುವತಿ ಹೋರಾಟ

0

ಗುರುಗ್ರಾಮ: ಲಿವ್-ಇನ್ ಸಂಬಂಧದ ಹೆಸರಿನಲ್ಲಿ ಮದುವೆಯ ಆಮಿಷವೊಡ್ಡಿ ಯುವತಿಯನ್ನು ಅಮಾನವೀಯವಾಗಿ ಹಿಂಸಿಸಿದ ಅಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮ್‌ ನಲ್ಲಿ ಬೆಳಕಿಗೆ ಬಂದಿದೆ. 19 ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ತ್ರಿಪುರಾ ಮೂಲದ ವಿದ್ಯಾರ್ಥಿನಿ ಗುರುಗ್ರಾಮದ ಸೆಕ್ಟರ್ 69ರ ಪಿಜಿಯಲ್ಲಿ ವಾಸವಿದ್ದು, ಬಯೋಟೆಕ್ನಾಲಜಿ ಅಭ್ಯಾಸ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಆ್ಯಪ್ ಮೂಲಕ ದೆಹಲಿಯ ನರೇಲಾ ಮೂಲದ ಶಿವಂ ಎಂಬಾತನ ಪರಿಚಯವಾಗಿತ್ತು. ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಬಳಿಕ ಫ್ಲಾಟ್‌ನಲ್ಲಿ ಲಿವ್-ಇನ್ ಸಂಬಂಧ ಆರಂಭಿಸಿದ್ದನು.

ಇಬ್ಬರ ನಡುವೆ ಹೊಂದಾಣಿಕೆ ಸಮಸ್ಯೆ, ಸಂದೇಹಗಳು ಹೆಚ್ಚಾಗುತ್ತಿದ್ದಂತೆ ಶಿವಂ ಯುವತಿಯ ಮೇಲೆ ಸತತ ದೈಹಿಕ ದೌರ್ಜನ್ಯ ಎಸಗುತ್ತಿದ್ದನು ಎನ್ನಲಾಗಿದೆ. ಫೆಬ್ರವರಿ 16ರಂದು ಕ್ರೌರ್ಯ ಮಿತಿಮೀರಿದ್ದು, ಯುವತಿಯ ತಲೆಯನ್ನು ಗೋಡೆಗೆ ಜಜ್ಜಿ, ಸ್ಟೀಲ್ ಬಾಟಲಿ ಹಾಗೂ ಮಣ್ಣಿನ ಮಡಕೆಯಿಂದ ಹಲ್ಲೆ ನಡೆಸಿದ್ದಾನೆ.

ಅಷ್ಟೇ ಅಲ್ಲದೆ, ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ಭೀಕರ ಹಲ್ಲೆಯ ವಿಡಿಯೋವನ್ನು ಸಹ ಆರೋಪಿ ಚಿತ್ರೀಕರಿಸಿದ್ದಾನೆ. ಕಾಲುಗಳಿಗೆ ಚಾಕುವಿನಿಂದ ಇರಿದು, “ಇನ್ನು ಮುಂದೆ ತಾಯಿಯಾಗಲು ಅಥವಾ ನಡೆಯಲು ಸಾಧ್ಯವಾಗದಂತೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಎರಡು ದಿನಗಳ ಕಾಲ ಚಿತ್ರಹಿಂಸೆ ಅನುಭವಿಸಿದ ಯುವತಿ, ಫೆಬ್ರವರಿ 18ರಂದು ಆರೋಪಿಯ ಫೋನಿನಿಂದಲೇ ತಾಯಿಗೆ ಸ್ಥಳೀಯ ಭಾಷೆಯಲ್ಲಿ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದ ತಾಯಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿದ್ದಾರೆ.

ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ದಲಿತ ಸಿಎಂ ಚರ್ಚೆ: ಅಂತಿಮ ನಿರ್ಧಾರ ಹೈಕಮಾಂಡ್‌ʼಗೆ – ಸತೀಶ್ ಜಾರಕಿಹೊಳಿ

0

ಕಾರವಾರ: ದಲಿತ ಸಿಎಂ ಕುರಿತ ಚರ್ಚೆ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಸಿಎಂ ಆಯ್ಕೆ ಕುರಿತು ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

“ಸಿಎಂ ಆಯ್ಕೆ ಐದು ವರ್ಷಗಳ ಅವಧಿಗೆ ಆಗಿದೆ. ಕೇವಲ ಚರ್ಚೆ ನಡೆದ ತಕ್ಷಣ ಸಿಎಂ ಮಾಡುವುದು ಸಾಧ್ಯವಿಲ್ಲ. ಸಿಎಂ ಆಕಾಂಕ್ಷಿಗಳು ಹಲವರು ಇದ್ದಾರೆ. ನಾವ್ಯಾರೂ ಸಿಎಂ ರೇಸ್‌ನಲ್ಲಿ ಇಲ್ಲ” ಎಂದು ಹೇಳಿದರು.

ಪಕ್ಷದೊಳಗಿನ ಗೊಂದಲವನ್ನು ಒಪ್ಪಿಕೊಂಡ ಜಾರಕಿಹೊಳಿ, “ಗೊಂದಲ ನಿವಾರಣೆ ಅಂದರೆ ಸ್ಥಾನ ಬದಲಾವಣೆ ಎಂದಲ್ಲ. ಕಾರ್ಯಕರ್ತರು, ನಾಯಕರು ಸೇರಿದಂತೆ ಪಕ್ಷದೊಳಗೆ ಕೆಲವು ಗೊಂದಲಗಳಿವೆ. ಅವು ಬಗೆಹರಿಯಬೇಕು. ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ. ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಈಗ ಸಿಎಂ ಇದ್ದಾರೆ. ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದೆ” ಎಂದು ತಿಳಿಸಿದ್ದಾರೆ.

ಸಿಎಂ ಮಾಡಿದ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, “ಟ್ವೀಟ್ ಬಗ್ಗೆ ಅವರೇ ಹೇಳಬೇಕು. ಪಕ್ಷದಲ್ಲಿ ಕೆಲವು ಸಮಸ್ಯೆಗಳಿವೆ. ಅವು ಸರಿಯಾಗುತ್ತವೆ” ಎಂದರು. ಇದೇ ವೇಳೆ ಬಿಜೆಪಿಯ ಭ್ರಷ್ಟಾಚಾರ ಆರೋಪಗಳಿಗೆ ತಿರುಗೇಟು ನೀಡಿದ ಅವರು, “ಬಿಜೆಪಿ ನಾಯಕರು ಇತರರ ಮೇಲೆ ಆರೋಪ ಮಾಡುತ್ತಾರೆ. ಆದರೆ ಅವರದೇ ಎಂಎಲ್ಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಮ್ಮ ಭ್ರಷ್ಟಾಚಾರದ ಬಗ್ಗೆ ಅವರೇ ಸಾಕ್ಷಿ ನೀಡಿದ್ದಾರೆ” ಎಂದು ಕಟುವಾಗಿ ಪ್ರತಿಕ್ರಿಯಿಸಿದರು.

ಟ್ರಿಬಲ್ ಹಣದ ಆಮಿಷ, ಅಧಿಕಾರಿಗಳ ನಕಲಿ ವೇಷ! 24 ಲಕ್ಷ ದೋಚಿದ ಗ್ಯಾಂಗ್ ಬಯಲು

0

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿನಿಮಾವನ್ನೇ ಮೀರಿಸುವ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಹೆಸರಿನಲ್ಲಿ ಅಧಿಕಾರಿಗಳಂತೆ ನಟಿಸಿ 24 ಲಕ್ಷ ರೂ. ಹಣ ದೋಚಲಾಗಿದೆ.

ಈ ಪ್ರಕರಣದಲ್ಲಿ ಕೃಷ್ಣಕುಮಾರ್ ನೇತೃತ್ವದ 12 ಮಂದಿಯ ಗ್ಯಾಂಗ್ ಭಾಗಿಯಾಗಿದ್ದು, ಇದುವರೆಗೆ 9 ಆರೋಪಿಗಳನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ದೋಚಿದ ಹಣ ವಶಪಡಿಸಿಕೊಳ್ಳಲಾಗಿದೆ.

ಶಂಕರಪ್ಪ ಎಂಬುವರಿಗೆ ಹಣವನ್ನು ಮೂರರಷ್ಟು ಮಾಡಿಕೊಡುವುದಾಗಿ ಹೇಳಿ ಕರೆಸಿಕೊಂಡ ಆರೋಪಿಗಳು, ಖಾಸಗಿ ಕಾರಿನಲ್ಲಿ ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿಕೊಟ್ಟು ಹಣ ಕಸಿದುಕೊಂಡಿದ್ದಾರೆ.

ಆಘಾತಕಾರಿ ಸಂಗತಿ ಏನೆಂದರೆ, ದರೋಡೆ ಬಳಿಕ ಎ1 ಆರೋಪಿ ಕೃಷ್ಣಕುಮಾರ್ ತಾನೇ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ. ಆದರೆ ಪೊಲೀಸರ ಕಠಿಣ ವಿಚಾರಣೆಯಲ್ಲಿ ಅವನೇ ಸಂಚಿನ ಸೂತ್ರಧಾರ ಎಂಬುದು ಬಹಿರಂಗವಾಗಿದೆ.

ಜೈಲಿನಲ್ಲೇ ಇರುವ ದರ್ಶನ್‌ಗೆ ಕೋರ್ಟ್ ರಿಲೀಫ್: ಲೈಸೆನ್ಸ್ ಅಮಾನತು ಕ್ರಮಕ್ಕೆ ತಾತ್ಕಾಲಿಕ ತಡೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರಿಗೆ ಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಜಾಮೀನು ರದ್ದಾದ ಬಳಿಕ ಅವರ ಗನ್ ಲೈಸೆನ್ಸ್ ಅನ್ನು ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ಪೀಠ ಅಮಾನತು ಕ್ರಮಕ್ಕೆ ಮಾರ್ಚ್ 6ರವರೆಗೆ ಮಧ್ಯಂತರ ತಡೆ ನೀಡಿದ್ದು, ಇದರಿಂದ ದರ್ಶನ್‌ಗೆ ಸಣ್ಣ ಮಟ್ಟಿನ ಕಾನೂನು ಬಲ ದೊರಕಿದೆ. ಆದರೂ ಅವರು ಇನ್ನೂ ಜೈಲಿನಲ್ಲೇ ಇದ್ದು, ಪ್ರಕರಣದ ವಿಚಾರಣೆ ಮುಂದುವರಿಯುತ್ತಿದೆ.

ಅಭಿಮಾನಿಗಳು ದರ್ಶನ್ ಬಿಡುಗಡೆಗಾಗಿ ಕಾಯುತ್ತಿದ್ದರೂ, ಸದ್ಯಕ್ಕೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಪ್ರಕರಣದ ಮುಂದಿನ ಹಂತಗಳತ್ತ ಎಲ್ಲರ ಗಮನ ನೆಟ್ಟಿದೆ.

error: Content is protected !!