xವಿಜಯಸಾಕ್ಷಿ ಸುದ್ದಿ, ಗದಗ: ಬದುಕಿನುದ್ದಕ್ಕೂ ಸೇವಾ ಮನೋಭಾವ ಮೆರೆದಿದ್ದ ಸಹಕಾರಿ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಗುರಪ್ಪ ಬಸವಣ್ಣೆಪ್ಪ ಅಂಗಡಿ (78) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸೆ. 2ರಂದು ನಿಧನರಾದ ಅವರ ಸ್ವಇಚ್ಛೆಯಂತೆ ಕುಟುಂಬದವರು ನೇತ್ರದಾನ ಹಾಗೂ ದೇಹದಾನ ಮಾಡುವ ಮೂಲಕ ಮಾನವೀಯ ಮೌಲ್ಯಕ್ಕೆ ಮಾದರಿಯಾಗಿದ್ದಾರೆ.
ಗದುಗಿನ ಹಾತಲಗೇರಿ ನಾಕಾ ಸಮೀಪದ ನಿವಾಸಿಯಾಗಿದ್ದ ಅಂಗಡಿ ಅವರ ನಿಧನದ ಬಳಿಕ ಕುಟುಂಬದವರ ಒಪ್ಪಿಗೆಯೊಂದಿಗೆ ತಜ್ಞ ವೈದ್ಯರ ತಂಡ ನೇತ್ರದಾನದ ಪ್ರಕ್ರಿಯೆ ನೆರವೇರಿಸಿತು. ಬಳಿಕ ಸೆ. 3ರಂದು ಅವರ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಂಗರಚನಾ ಶಾಸ್ತ್ರ ಅಧ್ಯಯನಕ್ಕಾಗಿ ಗದಗಿನ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನ ಮಾಡಲಾಯಿತು.
ನಮ್ಮ ಬದುಕು ಮುಗಿದರೂ ಮತ್ತೊಬ್ಬರ ಬದುಕಿಗೆ ನೆರವಾಗಲಿ ಎಂಬ ಮಾನವೀಯ ಸಂದೇಶ ಸಾರುವಂತೆ ಅಂಗಡಿ ಕುಟುಂಬದ ಈ ನಿರ್ಧಾರ ಗಮನ ಸೆಳೆದಿದೆ. ಮೃತರ ಕೊನೆಯ ಇಚ್ಛೆಯನ್ನು ಗೌರವಿಸಿ ಕುಟುಂಬದವರು ಕೈಗೊಂಡ ನೇತ್ರದಾನ ಹಾಗೂ ದೇಹದಾನವು ಸಮಾಜಕ್ಕೆ ಸೇವಾ ಮನೋಭಾವ, ದಾನಧರ್ಮ ಮತ್ತು ಮಾನವೀಯತೆಯ ಮಹತ್ವವನ್ನು ಸಾರಿದೆ.
ಮರಣದ ಬಳಿಕವೂ ಅಂಗಾಂಗಗಳು ಮತ್ತೊಬ್ಬರಿಗೆ ದೃಷ್ಟಿ ನೀಡಲು ಹಾಗೂ ದೇಹ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಉಪಯೋಗವಾಗುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ನೇತ್ರದಾನ ಮತ್ತು ದೇಹದಾನದ ಕುರಿತು ಜಾಗೃತಿ ಬೆಳೆಸಿಕೊಳ್ಳಬೇಕು ಎಂಬ ಸಂದೇಶವೂ ಮೂಡಿಬಂದಿದೆ.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರೊಂದಿಗೆ ಡಾ. ಪ್ರೀತ್ ಖೋನಾ, ಚೇತನ ಅಂಗಡಿ, ಗದಗ–ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ದತ್ತಣ್ಣ ಬೇವಿನಕಟ್ಟಿ, ಶ್ರೀನಿವಾಸ ಬಾಕಳೆ ಸೇರಿದಂತೆ ಬಂಧು–ಬಳಗದವರು ಉಪಸ್ಥಿತರಿದ್ದರು.



