Home Blog Page 26

ಜಿಬಿಎ ಚುನಾವಣೆಗೆ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ!

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ವಾರ್ಡ್ ಪುನರ್ ವಿಂಗಡನೆ ಹಾಗೂ ಮೀಸಲಾತಿ ಪ್ರಕ್ರಿಯೆಗಳು ಪೂರ್ಣಗೊಂಡಿರುವುದಾಗಿ ಸರ್ಕಾರ ಕೋರ್ಟ್‌ಗೆ ಮಾಹಿತಿ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಜೂನ್ 30ರ ಗಡುವು ವಿಧಿಸಿತ್ತು.

ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಅಗತ್ಯವಾದ ಎಲ್ಲ ಪೂರ್ವ ಪ್ರಕ್ರಿಯೆಗಳನ್ನು ಸರ್ಕಾರ ಪೂರ್ಣಗೊಳಿಸಿದ್ದು, ಇದೀಗ ಚುನಾವಣಾ ದಿನಾಂಕದ ಬಗ್ಗೆ ಅಂತಿಮ ನಿರ್ಧಾರವನ್ನು ಚುನಾವಣಾ ಆಯೋಗ ತೆಗೆದುಕೊಳ್ಳಲಿದೆ.

ಇದಕ್ಕೂ ಮುನ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಕೊನೆಯ ಬಾರಿ 2015ರ ಆಗಸ್ಟ್‌ನಲ್ಲಿ ಚುನಾವಣೆ ನಡೆದಿತ್ತು. ಅದರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿತ್ತು.

ಟರ್ಕಿ ಶಾಲೆಯಲ್ಲಿ ಗುಂಡಿನ ದಾಳಿ: 4 ಮಂದಿ ಸಾವು, 20 ಜನರಿಗೆ ಗಾಯ!

0

ನವದೆಹಲಿ: ಟರ್ಕಿಯ ಕಹ್ರಮನ್‌ಮರಾಸ್ ಪ್ರಾಂತ್ಯದ ಆಯ್ಸರ್ ಕ್ಯಾಲಿಕ್ ಮಾಧ್ಯಮಿಕ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಶಸ್ತ್ರಸಜ್ಜಿತ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಗನ್ ಅನ್ನು ಬ್ಯಾಗ್‌ನಲ್ಲಿ ಶಾಲೆಗೆ ತಂದು ಗುಂಡು ಹಾರಿಸಿದ್ದಾನೆ. ಈ ದಾಳಿಯಲ್ಲಿ ಒಬ್ಬ ಶಿಕ್ಷಕ ಹಾಗೂ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ದಾಳಿಯ ಬಳಿಕ ಆರೋಪಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಸ್ಥಳಕ್ಕೆ ಭದ್ರತಾ ಪಡೆಗಳು ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಮುಸ್ಲಿಂ ಯುವಕನನ್ನು ಪ್ರೀತಿ ಮಾಡ್ತಿದ್ದ ಹಿಂದೂ ಯುವತಿ ಮನೆಯಲ್ಲೇ ನೇಣಿಗೆ ಶರಣು!

0

ಬಾಗಲಕೋಟೆ: ಬಾಗಲಕೋಟೆ ಸೆಕ್ಟರ್ ನಂಬರ್ 48ರಲ್ಲಿ ಯುವತಿಯೊಬ್ಬಳು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತಳನ್ನು 19 ವರ್ಷದ ಭೂಮಿಕಾ ತಿಪ್ಪಣ್ಣವರ್ ಎಂದು ಗುರುತಿಸಲಾಗಿದೆ. ಭೂಮಿಕಾ ಟಯರ್ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಮಾಹಿತಿಯ ಪ್ರಕಾರ, ಕಳೆದ ಎರಡು ವರ್ಷಗಳಿಂದ ಭೂಮಿಕಾ ಮತ್ತು ಟಾಂಟಾಂ ಚಾಲಕ ಡೊಂಗ್ರಿಸಾಬ್ ನದಾಫ್ ನಡುವೆ ಪ್ರೇಮ ಸಂಬಂಧ ಇತ್ತು ಎನ್ನಲಾಗಿದೆ. ಈ ಸಂಬಂಧಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದು, ನದಾಫ್‌ಗೆ ಮನೆಗೆ ಬಂದು ಮಾತನಾಡಬಾರದು ಎಂದು ಹಲವು ಬಾರಿ ಎಚ್ಚರಿಕೆ ನೀಡಿದ್ದರು.

ಇಂದು ಭೂಮಿಕಾ ಮನೆಯ ಮೇಲ್ಛಾವಣಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಬಳಿಕ ಕುಟುಂಬಸ್ಥರು ಡೊಂಗ್ರಿಸಾಬ್ ನದಾಫ್ ವಿರುದ್ಧ ಆರೋಪ ಮಾಡಿದ್ದಾರೆ. ಘಟನೆಯ ಸಂಬಂಧ
ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಸ್‌ಪಿ ಸಿದ್ದಾರ್ಥ ಗೋಯೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Crime News: ಬಹುಮಹಡಿ ಕಟ್ಟಡದಿಂದ ತಳ್ಳಿ ಹೆತ್ತ ತಾಯಿಯನ್ನೇ ಕೊಲೆಗೈದ ಮಗ!

0

ಬೆಂಗಳೂರು: ನಗರದ ಆರ್‌ಆರ್ ನಗರ ಬೆಮಲ್ ಲೇಔಟ್‌ನಲ್ಲಿ ಬಹುಮಹಡಿ ಕಟ್ಟಡದಿಂದ ತಳ್ಳಿ ಹೆತ್ತ ತಾಯಿಯನ್ನು ಮಗನೇ ಕೊಲೆ ಮಾಡಿರುವ ಘಟನೆ ಜರುಗಿದೆ.

72 ವರ್ಷದ ಸಾವಿತ್ರಮ್ಮ ಕೊಲೆಯಾದ ದುರ್ದೈವಿ. ಮಗ ವೆಂಕಟೇಶ್ ವೃದ್ಧ ತಾಯಿಯನ್ನ ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ್ದಾನೆ. ಸ್ಟ್ರೋಕ್ ಹೊಡೆದ ಕಾರಣ ಸಾವಿತ್ರಮ್ಮ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ತಾಯಿ ಅವಸ್ಥೆಯಿಂದ ನೊಂದಿದ್ದ ಮಗ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾನೆ.

ಇನ್ನೂ ಘಟನಾ ಸ್ಥಳಕ್ಕೆ ಆರ್‌ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಗ ವೆಂಕಟೇಶ್‌ನನ್ನ ಆರ್‌ಆರ್ ನಗರ ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಾಸನ: 6 ಸಾಕಾನೆಗಳ ಬಲೆ ತಪ್ಪಿಸಿ ಪರಾರಿಯಾದ ಒಂಟಿ ಸಲಗ!

ಹಾಸನ: ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ರೈತನೊಬ್ಬನನ್ನು ಬಲಿ ಪಡೆದಿದ್ದ ಕಾಡಾನೆಯನ್ನು 6 ಸಾಕಾನೆಗಳ ನೆರವಿನಿಂದ ಸೆರೆ ಹಿಡಿದಿದ್ದರೂ, ಬಳಿಕ ಅದು ತಪ್ಪಿಸಿಕೊಂಡ ಘಟನೆ ನಡೆದಿದೆ.

ಕೆರಗೋಡು ಗ್ರಾಮದ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ದೈತ್ಯಾಕಾರದ ಒಂಟಿ ಸಲಗವನ್ನು ಪತ್ತೆಹಚ್ಚಲಾಗಿತ್ತು. ನಂತರ ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಕುಸಿಯುವಂತೆ ಮಾಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸುಗ್ರೀವ, ಧನಂಜಯ, ಅಯ್ಯಪ್ಪ, ಏಕಲವ್ಯ, ಶ್ರೀರಾಮ ಸೇರಿದಂತೆ ಆರು ಸಾಕಾನೆಗಳನ್ನು ಬಳಸಲಾಗಿತ್ತು.

ಆದರೆ ಆನೆ ಎಚ್ಚರವಾದ ನಂತರ ಕಾಲಿಗೆ ಹಾಗೂ ಕತ್ತಿಗೆ ಕಟ್ಟಿದ್ದ ಹಗ್ಗಗಳನ್ನು ಕಿತ್ತೆಸೆದು ಹಠಾತ್ ತಪ್ಪಿಸಿಕೊಂಡು ಕಾಡಿನತ್ತ ಓಡಿ ಹೋಗಿದೆ. ಈ ವೇಳೆ ಅರಣ್ಯ ಸಿಬ್ಬಂದಿ ಆತಂಕಕ್ಕೀಡಾಗಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಕಾಡಾನೆ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸಾಕಾನೆಗಳ ತಂಡವನ್ನು ಕ್ಯಾಂಪ್‌ಗೆ ವಾಪಸ್ ಕರೆತರಲಾಗಿದೆ.

ಈ ಕಾಡಾನೆ ಏಪ್ರಿಲ್ 12ರಂದು ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ರೈತ ರಾಜಶೆಟ್ಟಿಯವರನ್ನು ದಾಳಿ ಮಾಡಿ ಬಲಿ ಪಡೆದಿತ್ತು. ಬಳಿಕ ಗ್ರಾಮಸ್ಥರು ಆನೆಯನ್ನು ಶೀಘ್ರ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.

ಲಂಚ ಪ್ರಕರಣದಲ್ಲಿ ಕಠಿಣ ತೀರ್ಪು: ಪಿಡಿಓಗೆ 7 ವರ್ಷ ಜೈಲು!

ರಾಯಚೂರು: ರೈತನಿಂದ ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆ ಲಿಂಗಸುಗೂರು ತಾಲೂಕಿನ ಗೋರೆಬಾಳ ಗ್ರಾಮ ಪಂಚಾಯತಿ ಪಿಡಿಓಗೆ ಜಿಲ್ಲಾ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

2017ರಲ್ಲಿ ಲಿಂಗಸುಗೂರು ತಾಲೂಕಿನ ಗೊರೇಬಾಳ ತಾಂಡಾದ ಚೇತನ ಎಂಬವರು ಸಹಾಯಧನದ ಶೆಡ್ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದ ವೇಳೆ, ಗ್ರಾಮ ಪಂಚಾಯತಿ ಪಿಡಿಓ ಮಹ್ಮದ ಖಾಜಾ ಅವರು 15 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಎಸಿಬಿ ಪೊಲೀಸರು ದಾಳಿ ನಡೆಸಿ ಪಿಡಿಓ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಕರಣದ ವಿಚಾರಣೆ ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ.

ಇನ್ನೊಂದೆಡೆ, ಪ್ರಕರಣದ ಪಿರ್ಯಾದಿದಾರ ಚೇತನ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷ್ಯ ನೀಡಿದ ಹಿನ್ನೆಲೆಯಲ್ಲಿ, ಅವರ ವಿರುದ್ಧವೂ ಸುಳ್ಳು ಸಾಕ್ಷಿ ನೀಡಿದ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಶಿರಸ್ತೇದಾರರಿಗೆ ಆದೇಶಿಸಿದೆ.

ಭಾರತ ರಫ್ತು ಹೊಸ ದಾಖಲೆ: 860 ಬಿಲಿಯನ್ ಡಾಲರ್ ದಾಟಿದ ಸಾಧನೆ

ನವದೆಹಲಿ: 2025-26ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ರಫ್ತು 860.09 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ದೇಶದ ಇತಿಹಾಸದಲ್ಲೇ ಅತ್ಯಧಿಕ ಮಟ್ಟವಾಗಿದೆ.

2024-25ರಲ್ಲಿ 825.26 ಬಿಲಿಯನ್ ಡಾಲರ್ ಇದ್ದ ರಫ್ತು, ಈ ಬಾರಿ ಶೇ. 4.22ರಷ್ಟು ಹೆಚ್ಚಳ ಕಂಡಿದೆ.

ಕೇಂದ್ರ ವಾಣಿಜ್ಯ ಇಲಾಖೆಯ ಮಾಹಿತಿ ಪ್ರಕಾರ, ಸರಕು ಮತ್ತು ಸೇವೆಗಳನ್ನು ಒಳಗೊಂಡ ಒಟ್ಟು ರಫ್ತು ಹೊಸ ದಾಖಲೆ ನಿರ್ಮಿಸಿದೆ. ಜಾಗತಿಕ ವ್ಯಾಪಾರದಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲಗೊಂಡಿದೆ ಎಂದು ಇಲಾಖೆ ತಿಳಿಸಿದೆ.

2025-26ರಲ್ಲಿ ಭಾರತದ ಸರಕು ರಫ್ತು 441.78 ಬಿಲಿಯನ್ ಡಾಲರ್ ಆಗಿದ್ದು, ಹಿಂದಿನ ವರ್ಷ 437.70 ಬಿಲಿಯನ್ ಡಾಲರ್‌ನಿಂದ ಶೇ. 0.93ರಷ್ಟು ಏರಿಕೆಯಾಗಿದೆ. ಪೆಟ್ರೋಲಿಯ ಉತ್ಪನ್ನಗಳು, ಎಂಜಿನಿಯರಿಂಗ್ ಸರಕುಗಳು, ಕಲ್ಲಿದ್ದಲು, ಖನಿಜಗಳು ಹಾಗೂ ಕರಕುಶಲ ವಸ್ತುಗಳು ಪ್ರಮುಖ ರಫ್ತು ವಸ್ತುಗಳಾಗಿವೆ.

ಮಾರ್ಚ್ ತಿಂಗಳಲ್ಲಿ ಭಾರತದ ಸರಕು ವ್ಯಾಪಾರ ಅಂತರ 20.98 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ. ಫೆಬ್ರುವರಿಯಲ್ಲಿ 36.61 ಬಿಲಿಯನ್ ಡಾಲರ್ ಇದ್ದ ರಫ್ತು, ಮಾರ್ಚ್‌ನಲ್ಲಿ 38.92 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದೇ ವೇಳೆ, ಆಮದು 63.71 ಬಿಲಿಯನ್ ಡಾಲರ್‌ನಿಂದ 59.9 ಬಿಲಿಯನ್ ಡಾಲರ್‌ಗೆ ಕುಸಿತ ಕಂಡಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಭಾರತ ಉತ್ತಮ ವಾಣಿಜ್ಯ ಸಾಧನೆ ಮಾಡಿರುವುದು ಗಮನಾರ್ಹ. ಆದರೆ, ಬಿಕ್ಕಟ್ಟು ಮುಂದುವರಿದರೆ ಮುಂದಿನ ದಿನಗಳಲ್ಲಿ ಇದೇ ಮಟ್ಟದ ವಹಿವಾಟು ಕಾಯ್ದುಕೊಳ್ಳುವುದು ಸವಾಲಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊಲೆ ಕೇಸಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ! 19 ಮಂದಿ CBI ವಶಕ್ಕೆ – ಏನಿದು ಪ್ರಕರಣ..?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟವಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಆರೋಪಿಗಳ ವಿರುದ್ಧ ತೀರ್ಪು ನೀಡಿದೆ.

ಒಟ್ಟು 21 ಆರೋಪಿಗಳ ಪೈಕಿ 17 ಮಂದಿಯನ್ನು ದೋಷಿಗಳೆಂದು ಕೋರ್ಟ್ ಘೋಷಿಸಿದೆ. ಇನ್ನು ಇಬ್ಬರು ಮಾಫಿ ಸಾಕ್ಷಿಗಳಾಗಿದ್ದು, ಉಳಿದ ಕೆಲವರಿಗೆ ವಿನಾಯಿತಿ ನೀಡಲಾಗಿದೆ. ಈ ತೀರ್ಪಿನೊಂದಿಗೆ ವಿನಯ್ ಕುಲಕರ್ಣಿ ಮತ್ತೆ ಜೈಲು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ. ನಾಳೆ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ-ವಿವಾದ ನಡೆಯಲಿದ್ದು, ಬಳಿಕ ಕೋರ್ಟ್ ಅಂತಿಮ ಶಿಕ್ಷೆಯನ್ನು ಪ್ರಕಟಿಸಲಿದೆ.

ವಿನಯ್ ಕುಲಕರ್ಣಿಯನ್ನು ಪ್ರಕರಣ ದೋಷಿ ಎಂದಿರುವ ಕೋರ್ಟ್ ನಾಳೆ ಎಲ್ಲ ಆರೋಪಿಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಿದೆ. ತೀರ್ಪು ಹೊರ ಬಂದಿದ್ದೆ ತಡ, ಸಿಬಿಐ ಅಧಿಕಾರಿಗಳು ಎಲ್ಲ ಅರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಾಳೆ ಮತ್ತೆ ಕೋರ್ಟ್ ಹಾಜರಾಗಲಿದ್ದಾರೆ. ಮೂರನೇ ಭಾರಿಗೆ ವಿನಯ್ ಕುಲಕರ್ಣಿ ಜೈಲು ಸೇರಿದ್ದಾರೆ.

ಪ್ರಕರಣದಲ್ಲಿ ಎ1 ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, ಎ17 ಶಿವಾನಂದ ವಿರುದ್ಧ ಸಿಬಿಐ ಮತ್ತೆ ಆರೋಪಿಯನ್ನಾಗಿ ಪರಿಗಣಿಸುವಂತೆ ಅರ್ಜಿ ಸಲ್ಲಿಸಿದೆ. ಅಲ್ಲದೇ ಎ20 ವಾಸುದೇವ ನಿಲೇಕಣಿ ಮತ್ತು ಎ21 ಸೋಮಶೇಖರರನ್ನು ಕೋರ್ಟ್ ಬಿಡುಗಡೆಗೊಳಿಸಿದೆ.

ಪ್ರಕರಣದ ಹಿನ್ನೆಲೆ:
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್‌ನಲ್ಲಿ ಯೋಗೇಶ್ ಗೌಡರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿ ಕೆಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು.

ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಹತ್ಯೆ ಎಂಬ ಅಂಶ ಹೊರಬಂದಿದ್ದು, 2020ರಲ್ಲಿ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಬಳಿಕ ಅವರ ವಿರುದ್ಧ ಸೇರಿದಂತೆ 21 ಮಂದಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದ ವಿನಯ್ ಕುಲಕರ್ಣಿಗೆ ಇದೀಗ ಮತ್ತೆ ಕಾನೂನು ಸವಾಲು ಎದುರಾಗಿದೆ.

ಧಾರವಾಡದಲ್ಲಿ ಪೊಲೀಸ್ ಬಿಗಿ ಭದ್ರತೆ

ತೀರ್ಪಿನ ಬಳಿಕ ಅಹಿಕರ ಘಟನೆ ನಡೆದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸುತ್ತಿದೆ. ಮುಂಜಾಗೃತಾ ಕ್ರಮವಾಗಿ ಧಾರವಾಡದ ವಿಜಯ್ ಕುಲಕರ್ಣಿ ಮನೆ ಹಾಗೂ ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ. ಯಾವುದೇ ಅಹಿಕರ ಘಟನೆಗಳು ಜರುಗಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಯೋಗೀಶ್ ಗೌಡ ಕೊಲೆ ಕೇಸ್: ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಜನ ದೋಷಿ

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಈ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಒಟ್ಟು 21 ಆರೋಪಿಗಳಲ್ಲಿ 19 ಮಂದಿಯನ್ನು ದೋಷಿಗಳೆಂದು ಘೋಷಿಸಿದೆ. ಆರೋಪಿಗಳಾದ 20 ಮತ್ತು 21ನೇ ವ್ಯಕ್ತಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ನ್ಯಾಯಾಲಯವು ಎಲ್ಲಾ ದೋಷಿಗಳನ್ನು ತಕ್ಷಣ ಕಸ್ಟಡಿಗೆ ಪಡೆಯುವಂತೆ ಸಿಬಿಐಗೆ ನಿರ್ದೇಶನ ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

2016ರಲ್ಲಿ ನಡೆದಿದ್ದ ಈ ಕೊಲೆ ಪ್ರಕರಣ ರಾಜ್ಯದ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಜೈಲಿನಲ್ಲಿ ಇದ್ದುಕೊಂಡೇ ಯೋಗೇಶ್ ಗೌಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಪ್ರಕರಣ ಮತ್ತಷ್ಟು ಸಂಚಲನ ಮೂಡಿಸಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ, ತನ್ನ ಚಾರ್ಜ್‌ಶೀಟ್‌ನಲ್ಲಿ ವಿನಯ್ ಕುಲಕರ್ಣಿಯನ್ನು 15ನೇ ಆರೋಪಿಯಾಗಿ ಉಲ್ಲೇಖಿಸಿತ್ತು.

ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ: ನನ್ನನ್ನು ಉಚ್ಚಾಟನೆ ಮಾಡಿರುವುದು ಅರ್ಥವಿಲ್ಲದ ನಿರ್ಧಾರ- ಆಫ್ರೀನ್ ಖಾನ್

ಬೆಂಗಳೂರು: ಯುವ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಆಫ್ರೀನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದಂತೆ ರಿಜ್ವಾನ್ ಅರ್ಷದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರು ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ.

ಉಚ್ಚಾಟನೆಗೆ ಪ್ರತಿಕ್ರಿಯಿಸಿದ ಆಫ್ರೀನ್ ಖಾನ್, “ನಾನು ಏಪ್ರಿಲ್ 4ರಂದೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಈಗ ನನ್ನನ್ನು ಉಚ್ಚಾಟನೆ ಮಾಡಿರುವುದು ಅರ್ಥವಿಲ್ಲದ ನಿರ್ಧಾರ” ಎಂದು ಕಿಡಿಕಾರಿದ್ದಾರೆ.

ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ಅವರು, “ಮುಸ್ಲಿಂ ನಾಯಕರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. 2028ರ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಕಾಂಗ್ರೆಸ್ ವಿರುದ್ಧ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಅವರು, ಪಕ್ಷದ ಹೈಕಮಾಂಡ್ ಮುಸ್ಲಿಂ ನಾಯಕರನ್ನು ಪರಸ್ಪರ ಎದುರುಮಾಡುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಜಮೀರ್ ಅಹ್ಮದ್ ಖಾನ್ ಅವರ ಪ್ರಭಾವ ಕಡಿಮೆ ಮಾಡಲು ಇತರ ನಾಯಕರನ್ನು ಮುಂದಕ್ಕೆ ತರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

error: Content is protected !!