Home Blog Page 27

ಹೆಸರಿಗೆ ಜೀವ ತುಂಬಿದ ರೋಹಿಣಿ ಮಳೆ!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರೋಹಿಣಿ ಮಳೆ ಈಗಾಗಲೇ ಬಿತ್ತನೆಯಾಗಿದ್ದ ಹೆಸರು ಹಾಗೂ ಅಲಸಂದೆ ಬೆಳೆಗೆ ಹೊಸ ಜೀವ ತುಂಬಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

ರೋಹಿಣಿ ಮಳೆ ಆರಂಭವಾದ ಬೆನ್ನಲ್ಲೇ ಅಲ್ಪ ತೇವಾಂಶದಲ್ಲೇ ರೈತರು ಹೆಸರು ಮತ್ತು ಅಲಸಂದೆ ಬಿತ್ತನೆ ಮಾಡಿದ್ದರು. ಆದರೆ ಕೆಲ ದಿನ ಮಳೆ ಕೈಕೊಟ್ಟ ಪರಿಣಾಮ ಬೆಳೆ ಒಣಗುವ ಆತಂಕ ರೈತರನ್ನು ಕಾಡುತ್ತಿತ್ತು. ಇದೀಗ ಮಂಗಳವಾರ ಸಂಜೆ ಹಾಗೂ ಬುಧವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆ ರೈತಾಪಿ ವರ್ಗಕ್ಕೆ ಹೊಸ ಭರವಸೆ ನೀಡಿದೆ.

ನರೇಗಲ್ಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ತೊಂಡಿಹಾಳ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಕಂಡು ಬಂದಿದೆ. ಮಳೆಯಿಂದ ನರೇಗಲ್ಲದ ಗಡ್ಡಿ ಹಳ್ಳ ತುಂಬಿ ರಭಸದಿಂದ ಹರಿಯುತ್ತಿದ್ದು, ಹಳ್ಳದ ಈ ದೃಶ್ಯವನ್ನು ಕಂಡು ಜನತೆ ಹರ್ಷ ವ್ಯಕ್ತಪಡಿಸಿದರು.

“ಇತ್ತೀಚಿನ ವರ್ಷಗಳಲ್ಲಿ ಗಡ್ಡಿ ಹಳ್ಳ ಇಷ್ಟು ರಭಸವಾಗಿ ಹರಿದದ್ದು ನೋಡಿಲ್ಲ” ಎಂದು ರೈತರು ಸಂತಸ ಹಂಚಿಕೊಂಡರು.

ಜೋಡು ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ

ಇದೇ ವೇಳೆ ಪಟ್ಟಣದ ಕೃಷಿ ಕೇಂದ್ರದ ಬಳಿಯ ಜೋಡು ರಸ್ತೆಯಲ್ಲಿ ಮಳೆ ನೀರು ಜಮಾವಣೆಗೊಂಡು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಜೋಡು ರಸ್ತೆಯ ಆರಂಭದಲ್ಲಿರುವ ದೊಡ್ಡ ತಗ್ಗು ಮಳೆ ನೀರಿನಿಂದ ಮುಚ್ಚಿಹೋಗಿರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಬೇಕು ಹಾಗೂ ತಗ್ಗನ್ನು ಮುಚ್ಚಬೇಕು. ಇಲ್ಲವಾದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ಗೆ 6 ಹೊಸ ನ್ಯಾಯಾಧೀಶರ ನೇಮಕಕ್ಕೆ ಸುಪ್ರೀಂ ಮಹತ್ವದ ಆದೇಶ

ನವದೆಹಲಿ/ಬೆಂಗಳೂರು: ಕರ್ನಾಟಕ ಹೈಕೋರ್ಟ್‌ಗೆ ಆರು ವಕೀಲರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆ ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಹಾಗೂ ಇಬ್ಬರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಜೂನ್ 2ರಂದು ನಡೆದ ಸಭೆಯಲ್ಲಿ ಈ ಶಿಫಾರಸು ಮಾಡಿದೆ. ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಾಧೀಶರಾಗಿ ರಾಘವೇಂದ್ರ ಸೀತಾರಾಮ್ ಶ್ರೀವತ್ಸ, ಹೇಮಾ ಕುಲಕರ್ಣಿ, ಸುಬ್ರಹ್ಮಣ್ಯ ರಂಗರಾವ್, ತಡಗವಾಡಿ ಪ್ರಕಾಶ ವಿವೇಕಾನಂದ, ಬಕ್ಕೇಶ್ವರ ಪ್ರಮೋದ್ ಹಾಗೂ ಹೊಂಬೆ ಗೌಡ ಶಾಂತಿಭೂಷಣ್ ಅವರ ಹೆಸರುಗಳನ್ನು ಅನುಮೋದಿಸಲಾಗಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂವು ನ್ಯಾಯಾಂಗ ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಪ್ರಮುಖ ಪಾತ್ರವಹಿಸುವ ಅತ್ಯುನ್ನತ ಸಮಿತಿಯಾಗಿದೆ. ಈ ಸಮಿತಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದ ಹೆಸರುಗಳನ್ನು ಪರಿಶೀಲಿಸಿ ಶಿಫಾರಸು ಮಾಡುತ್ತದೆ.

ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಕೇಂದ್ರ ಕಾನೂನು ಸಚಿವಾಲಯದ ಮೂಲಕ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತದೆ. ಸರ್ಕಾರ ಪರಿಶೀಲನೆ ನಡೆಸಿದ ಬಳಿಕ ರಾಷ್ಟ್ರಪತಿಗಳ ಅಂಕಿತದೊಂದಿಗೆ ನೇಮಕಾತಿ ಪ್ರಕ್ರಿಯೆ ಅಂತಿಮಗೊಳ್ಳುತ್ತದೆ.

ಒಮ್ಮೆ ಸರ್ಕಾರ ಶಿಫಾರಸನ್ನು ಮರುಪರಿಶೀಲನೆಗೆ ವಾಪಸ್ ಕಳುಹಿಸಬಹುದಾದರೂ, ಕೊಲಿಜಿಯಂ ಅದೇ ಹೆಸರುಗಳನ್ನು ಮತ್ತೆ ಶಿಫಾರಸು ಮಾಡಿದರೆ ಸರ್ಕಾರ ಅವುಗಳನ್ನು ಅಂಗೀಕರಿಸುವುದು ಕಡ್ಡಾಯವಾಗುತ್ತದೆ ಎಂದು ಪ್ರಕ್ರಿಯೆಯ ವಿವರ ನೀಡಲಾಗಿದೆ.

ಡಿಕೆಶಿ ಸಿಎಂ- ಮುಕ್ತಿಮಂದಿರದಲ್ಲಿ ವಿಶೇಷ ಪೂಜೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಲಿಂ. ವೀರಗಂಗಾಧರ ಜಗದ್ಗುರುಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಪೋಭೂಮಿ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಾಚರಣೆ ನಡೆಸಿದರು.

ಲಿಂ. ಜಗದ್ಗುರುಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ಹಾಗೂ ರಾಮಣ್ಣ ಲಮಾಣಿ, “ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ ಡಿ.ಕೆ. ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆತಿರುವುದು ಸಂತಸದ ಸಂಗತಿ. ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಸುಭದ್ರ ಆಡಳಿತ ನಡೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ ಅವರು ಪಕ್ಷದ ಸಂಕಷ್ಟದ ಸಮಯದಲ್ಲಿ ಬಂಡೆಯಂತೆ ನಿಂತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅನೇಕ ರಾಜಕೀಯ ಸವಾಲುಗಳ ನಡುವೆಯೂ ಪಕ್ಷ ನಿಷ್ಠೆ ಮೆರೆದಿರುವುದು ಶ್ಲಾಘನೀಯ ಎಂದು ಹೇಳಿದರು.

ಲಿಂ. ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರುಗಳ ಮೇಲೆ ಡಿ.ಕೆ.ಶಿ. ಅವರಿಗೆ ಅಪಾರ ಭಕ್ತಿ ಹಾಗೂ ನಂಬಿಕೆ ಇತ್ತು. ಇತ್ತೀಚೆಗೆ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿ, ಪ್ರಸ್ತುತ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಅದೇ ಆಶೀರ್ವಾದದ ಫಲವಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ನಗರ ಅಧ್ಯಕ್ಷ ಅಮರೇಶ ತೆಂಬದಮನಿ, ಜಯಕ್ಕ ಕಳ್ಳಿ, ಶರಣು ಗೋಡಿ, ಮುತ್ತಣ್ಣ ಗಡೆಪ್ಪನವರ, ಸುಭಾಸ ಓದುನವರ, ಸೋಮನಗೌಡ್ರ ಪಾಟೀಲ (ಎಲಿಬಳ್ಳಿ), ಬಸವರಾಜ ಓದುನವರ, ಪರಮೇಶ ಲಮಾಣಿ, ನಾಗರಾಜ ಚಿಂಚಲಿ, ಕಿರಣ ನವಲೆ, ಮೌನೇಶ ಬಾಲೇಹೊಸೂರು, ಬಸವರೆಡ್ಡಿ ಹನುಮರೆಡ್ಡಿ, ಜಯಣ್ಣ ಕಲಕೋಟಿ, ರಾಮಣ್ಣ ರಿತ್ತಿ, ಛಾಯಪ್ಪ ಬಸಾಪೂರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

“ಲಿಂ. ಜಗದ್ಗುರುಗಳ ಆಶೀರ್ವಾದ ಮತ್ತು ಪಕ್ಷ ನಿಷ್ಠೆಯ ಫಲವಾಗಿ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.”

ಜಿ.ಎಸ್. ಗಡ್ಡದೇವರಮಠ

ಮಾಜಿ ಶಾಸಕ

ಲಿಂಕ್ ಗೊಬ್ಬರ ದಂಧೆ ಬಂದ್ ಮಾಡ್ರಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಕೆಲ ಗೊಬ್ಬರ ಅಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಪಾದಗಟ್ಟಿ ಸಮೀಪ ಬಜಾರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಹಾಗೂ ತಾಲೂಕು ಅಧ್ಯಕ್ಷ ಲೋಕೇಶ ಸುತಾರ, “ಡಿ.ಎ.ಪಿ. ಗೊಬ್ಬರ ದಾಸ್ತಾನು ಇದ್ದರೂ ಇಲ್ಲವೆಂದು ಹೇಳಿ ರೈತರಿಗೆ ವಿತರಣೆ ಮಾಡುತ್ತಿಲ್ಲ. ಕೆಲ ಅಂಗಡಿ ಮಾಲೀಕರು ಡಿ.ಎ.ಪಿ. ಜೊತೆ ಇತರೆ ಗೊಬ್ಬರಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಕೆಲ ವ್ಯಾಪಾರಿಗಳು ಗೊಬ್ಬರವನ್ನು ಬೇರೆ ಬೇರೆ ಸ್ಥಳಗಳಲ್ಲಿ ಸಂಗ್ರಹಿಸಿಟ್ಟಿದ್ದು, ಇದು ನಿಯಮ ಉಲ್ಲಂಘನೆಯಾಗಿದೆ. ಗೊಬ್ಬರ ಅಂಗಡಿಗಳ ಮುಂಭಾಗದಲ್ಲಿ ಸರ್ಕಾರ ನಿಗದಿಪಡಿಸಿದ ದರಪಟ್ಟಿ ಪ್ರದರ್ಶಿಸಬೇಕು. ನಕಲಿ ಬಿಲ್ ನೀಡುತ್ತಿರುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆ ವೇಳೆ ಶಿರಹಟ್ಟಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಅವರನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. “ಇಷ್ಟು ದಿನಗಳಿಂದ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಅಕ್ರಮದಲ್ಲಿ ಕೆಲ ಅಧಿಕಾರಿಗಳ ಕೈವಾಡವೂ ಇದೆ” ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಕೃಷಿ ಅಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ, ಪಿಎಸ್‌ಐ ನಾಗರಾಜ ಗಡದ ಹಾಗೂ ಕ್ರೈಂ ಪಿಎಸ್‌ಐ ಟಿ.ಕೆ. ರಾಠೋಡ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.

ಪ್ರತಿಭಟನೆಯಲ್ಲಿ ತಾಲೂಕು ಗೌರವಾಧ್ಯಕ್ಷ ಪ್ರವೀಣ ಗಾಣಗೇರ, ಬಸವರಾಜ ಮಲ್ಲೂರ, ಅರುಣ ಮೆಕ್ಕಿ, ಗಂಗಾಧರ ಕರ್ಜಕಣ್ಣವರ, ಗಂಗಾಧರ ಕೊಂಚಿಗೇರಿಮಠ, ಮಂಜುನಾಥ ಕೊಡಳ್ಳಿ, ಫಕ್ಕೀರೇಶ ಅಣ್ಣಿಗೇರಿ, ಚನ್ನಬಸಯ್ಯ ಗಡ್ಡದೇವರಮಠ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಅತ್ತಿಗೇರಿ, ಹುಲಿಗೆಮ್ಮ ಮೇವುಂಡಿ, ಜಯಮ್ಮ ತುಪ್ಪದ, ಲಕ್ಷ್ಮಕ್ಕ ಪಶುಪತಿಹಾಳ, ರೇಷ್ಮಾ ಜಾದವ, ಸಾವಕ್ಕ ಮಳ್ಳೋಳ್ಳಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

“ರೈತರಿಗೆ ಬೇಕಾದ ಗೊಬ್ಬರವನ್ನು ಕೃತಕವಾಗಿ ತಡೆದು ಹೆಚ್ಚುವರಿ ದರಕ್ಕೆ ಮಾರಾಟ ಮಾಡುವುದು ರೈತರ ಮೇಲಿನ ದೌರ್ಜನ್ಯ. ಕೂಡಲೇ ಅಕ್ರಮ ತಡೆಗಟ್ಟಬೇಕು.”
ಬಸವರಾಜ ಹೊಗೆಸೊಪ್ಪಿನ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ: ಜಗದೀಶ ಪೂಜಾರ

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಮಕ್ಕಳಿಗೆ ಕೇವಲ ಸೌಕರ್ಯಗಳಿಗಿಂತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದು ರತ್ನಾಕರವಾಣಿ ದಿನಪತ್ರಿಕೆಯ ಸಂಪಾದಕರಾದ ಜಗದೀಶ ಪೂಜಾರ ಹೇಳಿದರು.

ನಗರದ ಗಂಗಾಪೂರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಿದ್ದ ಶಾಲಾ ಆರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೆನ್ಸಿಲ್ ಹಾಗೂ ಸಿಹಿ ವಿತರಿಸಿ ಮಾತನಾಡಿದ ಅವರು, “ಇಂದು ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿಂದ ದುಶ್ಚಟಗಳು ಹೆಚ್ಚುತ್ತಿವೆ. ಗುರು-ಹಿರಿಯರಿಗೆ ಗೌರವ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ” ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಶಿಕ್ಷಣ ಹಾಗೂ ಸಂಸ್ಕಾರವನ್ನು ಶ್ಲಾಘಿಸಿದ ಅವರು, “ಪ್ರತಿ ಮನೆ ಮತ್ತು ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಸಂಸ್ಕಾರ ನೀಡಬೇಕು” ಎಂದು ಕರೆ ನೀಡಿದರು.

ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಕೆಲಸವಲ್ಲ. ಒಂದು ಸಂಸ್ಥೆ ಯಶಸ್ವಿಯಾಗಿ ಬೆಳೆಯಬೇಕಾದರೆ ಶಿಕ್ಷಕರು ಹಾಗೂ ಪೋಷಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಂಸ್ಥೆ ತನ್ನದೇ ಸ್ವಂತ ಕಟ್ಟಡ ನಿರ್ಮಿಸಿ ಬಡ ಮಕ್ಕಳಿಗೆ ಪದವಿ ಮಟ್ಟದವರೆಗೆ ಶಿಕ್ಷಣ ಸೇವೆ ನೀಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಇಮರಾಪೂರ, ಕಾರ್ಯದರ್ಶಿ ಕವಿತಾ ಇಮರಾಪೂರ, ನಿರ್ದೇಶಕ ಮೋಹನ ಇಮರಾಪೂರ, ಸಲಹಾ ಸಮಿತಿ ಸದಸ್ಯರಾದ ಮುತ್ತು ಜಡಿ ಹಾಗೂ ಚನ್ನಬಸಮ್ಮ ಹಾಳಕೇರಿ, ಆಡಳಿತಾಧಿಕಾರಿ ಸಾವಿತ್ರಿ ಕವಡಕಿ, ಮುಖ್ಯೋಪಾಧ್ಯಾಯಿನಿ ಎಚ್.ಎಂ. ನದಾಫ್, ಶಿಕ್ಷಕಿಯರಾದ ಮಂಜುಳಾ ಹಿಡ್ಕಿಮಠ, ರೇಖಾ ಅಂಗಡಿ, ಸುಧಾ ತಿರಕಣ್ಣವರ, ವಂದನಾ ಕಲ್ಮನಿ, ಶೋಭಾ ಸಂಬರಗಿಮಠ, ಸಿಬ್ಬಂದಿ ಲಕ್ಷ್ಮೀ ಕಮಡೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಶಾಲಾ ಮಕ್ಕಳಿಗೆ ಗುಲಾಬಿ ಹೂ ನೀಡಿ, ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಹಾಗೂ ಸಿಹಿ ಹಂಚುವ ಮೂಲಕ ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳಲಾಯಿತು.

“ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದಾಗ ಮಾತ್ರ ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸಲು ಸಾಧ್ಯ.”

ಜಗದೀಶ ಪೂಜಾರ

ಸಂಪಾದಕರು, ರತ್ನಾಕರವಾಣಿ ದಿನಪತ್ರಿಕೆ

ಮಳೆ ಹಾನಿ ಪರಿಹಾರದಲ್ಲಿ ವಿಳಂಬ ಬೇಡ: ಡಿಸಿ ಶ್ರೀಧರ್

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ಕುಡಿಯುವ ನೀರಿನ ಪೂರೈಕೆ, ಮಳೆ ಹಾನಿ ಪರಿಹಾರ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೀಜ ಮತ್ತು ರಸಗೊಬ್ಬರಗಳ ಲಭ್ಯತೆ ಕುರಿತು ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್‌ನಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಮಳೆಯಿಂದ ಉಂಟಾಗುವ ಹಾನಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ, ನಿರ್ಲಕ್ಷ್ಯ ಅಥವಾ ನಿಷ್ಕಾಳಜಿಯನ್ನು ಜಿಲ್ಲಾಡಳಿತ ಸಹಿಸುವುದಿಲ್ಲ” ಎಂದು ಎಚ್ಚರಿಸಿದರು.
ಸಭೆಯಲ್ಲಿ ಮನೆ ಹಾನಿ, ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಅಪೂರ್ಣ ಅಥವಾ ಸುಳ್ಳು ಮಾಹಿತಿ ನೀಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.
ತಾಲ್ಲೂಕುವಾರು ಮಳೆಯಿಂದ ಹಾನಿಗೀಡಾದ ಮನೆಗಳು, ಬೆಳೆಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಮಾಹಿತಿ ಪಡೆದು ಅರ್ಹ ಫಲಾನುಭವಿಗಳಿಗೆ ತ್ವರಿತ ಪರಿಹಾರ ವಿತರಣೆ ಮಾಡಬೇಕು ಎಂದು ಸೂಚಿಸಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯತ್ಯಯವಾಗದಂತೆ ಅಧಿಕಾರಿಗಳು ನಿರಂತರ ನಿಗಾವಹಿಸಬೇಕು. ಪ್ರವಾಹ ಸಾಧ್ಯತೆ ಇರುವ ತಗ್ಗು ಪ್ರದೇಶಗಳ ಕುಟುಂಬಗಳನ್ನು ಮುಂಚಿತವಾಗಿ ಗುರುತಿಸಿ ಅಗತ್ಯವಿದ್ದರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ನಿರ್ದೇಶನ ನೀಡಿದರು.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ 23 ಕೆರೆಗಳ ನಿರ್ವಹಣೆ, ನೀರು ಸಂಗ್ರಹ ಸಾಮರ್ಥ್ಯ ವೃದ್ಧಿ ಹಾಗೂ ಅಗತ್ಯ ಕಾಮಗಾರಿಗಳ ಕುರಿತು ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ಸರ್ಕಾರಕ್ಕೆ ಅಗತ್ಯ ಅನುದಾನ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಪ್ರವಾಹ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಗಳಿಗೆ ಅಗ್ನಿಶಾಮಕ ಇಲಾಖೆಗೆ ಅಗತ್ಯ ಬೋಟ್‌ಗಳ ಖರೀದಿಗಾಗಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಮೇ 18ರಂದು ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಗದಗ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳಲ್ಲಿ ತಲಾ ಒಬ್ಬರಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ವಿತರಿಸಲಾಗಿದೆ.
ಮಳೆಯಿಂದ ಮೃತಪಟ್ಟ 31 ಸಣ್ಣ ಸಾಕು ಪ್ರಾಣಿಗಳ ಮಾಲೀಕರಿಗೆ ₹1.52 ಲಕ್ಷ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ 14 ಮನೆಗಳು ಭಾಗಶಃ ಹಾನಿಗೀಡಾಗಿದ್ದು ₹91 ಸಾವಿರ ಪರಿಹಾರ ವಿತರಿಸಲಾಗಿದೆ. 96 ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ₹4.80 ಲಕ್ಷ ಪರಿಹಾರ ನೀಡಲಾಗಿದೆ.
ಮಳೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ 907 ವಿದ್ಯುತ್ ಕಂಬಗಳು ಹಾಗೂ 10 ಶಾಲಾ ಕೊಠಡಿಗಳು ಹಾನಿಗೀಡಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಮಾನದಂಡಗಳ ಪ್ರಕಾರ ₹69.35 ಲಕ್ಷ ನಷ್ಟ ಅಂದಾಜಿಸಲಾಗಿದೆ.
ಜಿಲ್ಲೆಯ 92 ರೈತರಿಗೆ ಸೇರಿದ 34.58 ಎಕರೆ ತೋಟಗಾರಿಕೆ ಪ್ರದೇಶ ಹಾನಿಗೀಡಾಗಿದ್ದು, ₹6.70 ಲಕ್ಷ ನಷ್ಟ ಅಂದಾಜಿಸಲಾಗಿದೆ.
ಜಿಲ್ಲೆಯ ಕುಡಿಯುವ ನೀರಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ನವಿಲುತೀರ್ಥ ಜಲಾಶಯದಲ್ಲಿ 5.905 ಟಿಎಂಸಿ, ಭದ್ರಾ ಜಲಾಶಯದಲ್ಲಿ 16.497 ಟಿಎಂಸಿ ಹಾಗೂ ಹಮ್ಮಿಗಿ ಬ್ಯಾರೇಜ್‌ನಲ್ಲಿ 1.978 ಟಿಎಂಸಿ ನೀರು ಸಂಗ್ರಹವಿದ್ದು, ಮುಂದಿನ 90 ದಿನಗಳವರೆಗೆ ಕುಡಿಯುವ ನೀರು ಪೂರೈಸಲು ಸಾಧ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್. ದುರಗೇಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಡಿಡಿಪಿಐ ಆರ್.ಎಸ್. ಬುರಡಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣನವರ, ಪೌರಾಯುಕ್ತ ರಾಜಾರಾಮ್ ಪವಾರ, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
“ಮಳೆ ಹಾನಿ ಪರಿಹಾರ ವಿತರಣೆಯಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.”
 ಸಿ.ಎನ್. ಶ್ರೀಧರ, ಜಿಲ್ಲಾಧಿಕಾರಿ
ಗೈರಾದ ಅಧಿಕಾರಿಗೆ ಶೋಕಾಸ್ ನೋಟಿಸ್
ಸಭೆಗೆ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿಗಳು ಗೈರಾಗಿದ್ದಲ್ಲದೇ ಅಗತ್ಯ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸದಿರುವುದನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದರು. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ಸೂಚನೆ ನೀಡಿದರು.
ರೈತರಿಗೆ ಗೊಬ್ಬರಕ್ಕಾಗಿ ಬಲವಂತ ಬೇಡ!
ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ರೈತರಿಗೆ ಅಗತ್ಯ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಯೂರಿಯಾ ವಿತರಣೆಯ ವೇಳೆ ರೈತರಿಗೆ ಅನಗತ್ಯವಾಗಿ ಇತರೆ ಗೊಬ್ಬರ ಖರೀದಿಸಲು ಒತ್ತಾಯಿಸಿದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಜೂ.12ರಿಂದ ಮಕ್ಕಳ ರಕ್ಷಣೆಗೆ ಅಭಿಯಾನ

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆಯನ್ನು ಜೂನ್ 12ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಹಾಗೂ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಷ್ಟಾಚಾರದಂತೆ ಆಮಂತ್ರಣ ಮುದ್ರಣ, ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಡಂಗುರ ಸಾರುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸರ್ಕಾರಿ ಕಚೇರಿಗಳಲ್ಲಿ ಬಾಲಕಾರ್ಮಿಕ ವಿರೋಧಿ ಪ್ರಮಾಣ ವಚನ ಸ್ವೀಕಾರ, ಶಾಲಾ-ಕಾಲೇಜುಗಳಲ್ಲಿ ಜಾಥಾ ಕಾರ್ಯಕ್ರಮ, ಪ್ರಬಂಧ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯಾದ್ಯಂತ ಜೂನ್ 13ರಿಂದ 30ರವರೆಗೆ ಬಾಲ ಮತ್ತು ಕಿಶೋರ ಕಾರ್ಮಿಕರ ರಕ್ಷಣಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಬಾಲಕಾರ್ಮಿಕ ವಿರೋಧಿ ಸಂದೇಶ ಸಾರುವ ಧ್ವನಿ ಮುದ್ರಿಕೆಗಳನ್ನು ಜಿಲ್ಲೆಯಾದ್ಯಂತ ಪ್ರಸಾರ ಮಾಡಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಸಭೆಯಲ್ಲಿ ವೇದಿಕೆ ವ್ಯವಸ್ಥೆ, ಅಲಂಕಾರ ಹಾಗೂ ಸ್ಪರ್ಧೆಗಳ ಆಯೋಜನೆ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಎಸ್. ಸೋಮನಕಟ್ಟಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧ ಮಣ್ಣೂರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯಶ್ರೀ ತೊಟಗೇರ, ನಗರಾಭಿವೃದ್ಧಿ ಯೋಜನೆ ನಿರ್ದೇಶಕ ಬಸವರಾಜ ಕೊಟೂರು, ಯೋಜನೆ ನಿರ್ದೇಶಕ ಸಂದೇಶ ಪಾಟೀಲ್, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ, ಸ್ಪಂದನ ಸಂಸ್ಥೆಯ ಎನ್‌ಜಿಒ ಅಶ್ವಿನಿ ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

“ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.” 

ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಮಳೆಗಾಲದಲ್ಲಿ ಸ್ವಚ್ಛತೆ ನಿರ್ಲಕ್ಷ್ಯ ಬೇಡ: ಚಂದ್ರಶೇಖರ ಬಿ. ಕಂದಕೂರ

ವಿಜಯಸಾಕ್ಷಿ ಸುದ್ದಿ, ರೋಣ: ಮಳೆಗಾಲದ ಸಂದರ್ಭದಲ್ಲಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ರೋಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಹೊಳೆಆಲೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.

ಹೊಳೆಆಲೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಚರಂಡಿಗಳಲ್ಲಿ ನೀರು ನಿಲ್ಲುವುದು, ಕಸ ಸಂಗ್ರಹವಾಗುವುದು ಹಾಗೂ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಗ್ರಾಮಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಗ್ರಾಮದ ಮುಖ್ಯ ರಸ್ತೆ, ಬೀದಿಗಳು, ಚರಂಡಿಗಳು, ಸಾರ್ವಜನಿಕ ಸ್ಥಳಗಳು ಹಾಗೂ ಕುಡಿಯುವ ನೀರಿನ ಮೂಲಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಮೂಲಕ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಬಹುದು ಎಂದು ಹೇಳಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸ್ವಚ್ಛತಾಗಾರರು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸ್ವಚ್ಛ ಮತ್ತು ಆರೋಗ್ಯಕರ ಗ್ರಾಮ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸ್ವಚ್ಛತಾಗಾರರ ಸುರಕ್ಷತೆಯ ಬಗ್ಗೆ ವಿಶೇಷ ಒತ್ತು ನೀಡಿದ ಅವರು, ಸ್ವಚ್ಛತಾ ಕಾರ್ಯಗಳಲ್ಲಿ ತೊಡಗುವ ಸಿಬ್ಬಂದಿ ಕಡ್ಡಾಯವಾಗಿ ಗ್ಲೌಸ್, ಬೂಟು, ಮಾಸ್ಕ್ ಹಾಗೂ ಸುರಕ್ಷತಾ ಜಾಕೆಟ್ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಸುರಕ್ಷತಾ ಕ್ರಮ ಪಾಲಿಸುವುದರಿಂದ ಸೋಂಕು ಹಾಗೂ ಅಪಘಾತಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಕಸ ವಿಂಗಡಣೆ, ಚರಂಡಿಗಳ ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಗಿರಿತಮ್ಮನ್ನವರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಸ್ವಚ್ಛತಾಗಾರರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಗ್ರಾಮದಲ್ಲಿ ನಿಯಮಿತ ಸ್ವಚ್ಛತಾ ಕಾರ್ಯ ನಡೆಸುವುದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮಳೆಗಾಲದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸ್ವಚ್ಛತಾಗಾರರು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

“ಗ್ರಾಮದ ರಸ್ತೆ, ಚರಂಡಿ, ಸಾರ್ವಜನಿಕ ಸ್ಥಳಗಳು ಹಾಗೂ ಕುಡಿಯುವ ನೀರಿನ ಮೂಲಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿದರೆ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು.” 

ಚಂದ್ರಶೇಖರ ಬಿ. ಕಂದಕೂರ, ಸಿಇಒ-ರೋಣ

ಡಿಕೆ ಸಿಎಂ: ಶಿರಹಟ್ಟಿಯಲ್ಲಿ ವಿಜಯೋತ್ಸವ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಡಿ.ಕೆ. ಶಿವಕುಮಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶಿರಹಟ್ಟಿಯಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ದಶಮನಿ, “ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಅವರ ಆಡಳಿತದಲ್ಲಿ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಲಿದೆ” ಎಂದು ಹೇಳಿದರು.

ಅಶ್ರಫ್ ಅಲಿ ಢಾಲಾಯತ, ಬಸವರಾಜ ಕಂಬಳಿ, ಈರಣ್ಣ ಕೋಟಿ, ಮಾಬುಸಾಬ ಟಪಾಲ, ಶೌಕತ್ ಅಲಿ ಮನಿಯಾರ, ಸಮದ ಢಾಲಾಯತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಲ ಮರುಪಾವತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ

ವಿಜಯಸಾಕ್ಷಿ ಸುದ್ದಿ, ಗದಗ: ರೈತರ ಬೆಳೆ ಸಾಲ, ಕಿರು ವ್ಯಾಪಾರ ಸಾಲ ಸೇರಿದಂತೆ ವಿವಿಧ ಯೋಜನೆಗಳಡಿ ನೀಡಿದ ಸಾಲಗಳ ಮರುಪಾವತಿಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಬಳಗಾನೂರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ಸಿಬ್ಬಂದಿಯನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಗ್ರಾಹಕರು ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿ ಬ್ಯಾಂಕ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರ ಜೊತೆಗೆ, ಶಾಖಾ ವ್ಯವಸ್ಥಾಪಕ ಅಶೋಕ ಬಾರಕೇರ ಹಾಗೂ ಸಿಬ್ಬಂದಿಯ ಕರ್ತವ್ಯನಿಷ್ಠೆ, ಸಮಯಪಾಲನೆ ಮತ್ತು ಗ್ರಾಹಕ ಸ್ನೇಹಿ ಸೇವೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್. ಕಲ್ಮನಿ ಮಾತನಾಡಿ, “ಗ್ರಾಮೀಣ ಭಾಗದ ಜನರಿಗೆ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಬಳಗಾನೂರು ಶಾಖೆ ಜಿಲ್ಲೆಯಲ್ಲೇ ಮಾದರಿಯಾಗಿದೆ” ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶೇಖರಯ್ಯ ನನ್ನಯ್ಯನಮಠ, ಪ್ರೊ. ವಿ.ಬಿ. ಕರಮುಡಿ, ಎಂ.ಎ. ಪಾಟೀಲ, ಸಂಗಪ್ಪ ಗೂಳರಡ್ಡಿ, ಅರ್ಜುನ್ ಸಾಲಿ, ನಿಂಗಪ್ಪ ಮಡಿವಾಳರ, ರಾಜು ಪಡೇಸೂರ, ಶರಣಪ್ಪ ಹೊಂಬಳ ಸೇರಿದಂತೆ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ಸಿದ್ದಪ್ಪ ವಗ್ಗನವರ ಸ್ವಾಗತಿಸಿದರು. ಎಂ.ಆರ್. ಪಡೇಸೂರ ವಂದಿಸಿದರು.
error: Content is protected !!