Home Blog Page 27

ಅಡ್ಡ ಮತದಾನ ಮಾಡಿದ ದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ: ಬಿ.ವೈ. ವಿಜಯೇಂದ್ರ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸುವ ಮೂಲಕ ಪಕ್ಷ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ದ್ರೋಹ ಎಸಗಿದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯ ಫಲಿತಾಂಶ ಪಕ್ಷಕ್ಕೆ ಆಘಾತಕಾರಿಯಾಗಿದೆ ಎಂದು ಹೇಳಿದರು. ಜೆಡಿಎಸ್‌ನಿಂದ ಸುಮಾರು ಆರೇಳು ಶಾಸಕರು ಹಾಗೂ ಬಿಜೆಪಿಯಿಂದ ನಾಲ್ಕೈದು ಶಾಸಕರು ಅಡ್ಡ ಮತದಾನ ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.

“ಈ ರೀತಿಯ ಘಟನೆ ನಡೆಯಬಾರದಿತ್ತು. ಆದರೆ ದುರದೃಷ್ಟವಶಾತ್ ಅದು ನಡೆದಿದೆ. ಪಕ್ಷದ ಬೆನ್ನಿಗೆ ಇರಿದು ರಾಜಕೀಯ ಆಟ ಆಡಿದವರು ಯಾರು ಎಂಬುದರ ಬಗ್ಗೆ ಸಾಕಷ್ಟು ಮಾಹಿತಿ ನಮ್ಮ ಬಳಿ ಇದೆ. ಇವತ್ತು ಅಥವಾ ನಾಳೆಯೊಳಗೆ ಸಂಪೂರ್ಣ ಚಿತ್ರಣ ದೊರೆಯಲಿದೆ,” ಎಂದು ವಿಜಯೇಂದ್ರ ಹೇಳಿದರು.

ಈ ಕ್ರಾಸ್ ವೋಟಿಂಗ್‌ನಿಂದ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತೀವ್ರ ಬೇಸರವಾಗಿದೆ. ಬಿಜೆಪಿಗೂ ಇದೇ ಮಟ್ಟದ ನೋವಾಗಿದೆ. ಈ ರಾಜಕೀಯ ದ್ರೋಹವನ್ನು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ ಎಂದು ಅವರು ತಿಳಿಸಿದರು.

ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಈಗಾಗಲೇ ಸಮಯ ಕೋರಿದ್ದು, ಇವತ್ತು ಅಥವಾ ಸೋಮವಾರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲಿದ್ದೇನೆ. ಪಕ್ಷದಲ್ಲೇ ಇದ್ದುಕೊಂಡು ದ್ರೋಹ ಎಸಗಿರುವ ‘ಮೀರ್ ಸಾದಿಕ್’ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ವರಿಷ್ಠರಿಗೆ ನೀಡಲಿದ್ದೇನೆ ಎಂದು ವಿಜಯೇಂದ್ರ ಹೇಳಿದರು.

ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ, ದ್ರೋಹ ಎಸಗಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.

ಐಟಿಐ ವಿದ್ಯಾರ್ಥಿಗಳಿಗೆ ಜಾಬ್ ಅಲರ್ಟ್: ಮಂಗಳೂರಿನಲ್ಲಿ ಜೂನ್ 22ರಂದು ಮೆಗಾ ಉದ್ಯೋಗ ಮೇಳ

0

ಮಂಗಳೂರು: ಐಟಿಐ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಅರಸುತ್ತಿರುವ ಯುವಕರಿಗೆ ಮಹತ್ವದ ಅವಕಾಶ ಒದಗಿಸುವ ನಿಟ್ಟಿನಲ್ಲಿ ಜೂನ್ 22ರಂದು ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮತ್ತು ಅಪ್ರೆಂಟಿಸ್‌ಶಿಪ್ ಮೇಳ ನಡೆಯಲಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಮಾರ್ಗದರ್ಶನದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಮಂಗಳೂರು ಈ ಮೇಳವನ್ನು ಆಯೋಜಿಸಿದ್ದು, ಕಾರ್ಯಕ್ರಮವು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಪ್ರಮುಖ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ಅಪ್ರೆಂಟಿಸ್ ತರಬೇತಿಗಾಗಿ ಅಭ್ಯರ್ಥಿಗಳ ಆಯ್ಕೆ ನಡೆಸಲಿವೆ.

ಐಟಿಐ ಉತ್ತೀರ್ಣ ಅಭ್ಯರ್ಥಿಗಳು, ಅಂತಿಮ ವರ್ಷದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಜಿದಾರರು ತಮ್ಮ ಮೂಲ ದಾಖಲಾತಿಗಳು, ಪ್ರಮಾಣಪತ್ರಗಳು, ರೆಸ್ಯೂಮ್ ಹಾಗೂ ಜೆರಾಕ್ಸ್ ಪ್ರತಿಗಳೊಂದಿಗೆ ಮೇಳಕ್ಕೆ ಹಾಜರಾಗಬೇಕು.

ಸ್ಥಳೀಯ ಯುವಜನತೆಗೆ ಉದ್ಯೋಗ ಮತ್ತು ಕೈಗಾರಿಕಾ ತರಬೇತಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಮೇಳದ ಪ್ರಯೋಜನವನ್ನು ಅರ್ಹ ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಮತ್ತೊಂದು ಮಾಸ್ಟರ್ ಸ್ಟ್ರೋಕ್: ಹ್ಯಾಟ್ರಿಕ್ ಹೀರೋ ನರ್ನೆ ನಿತಿನ್ ಜೊತೆ ಹೊಸ ತೆಲುಗು ಸಿನಿಮಾ ಘೋಷಣೆ

ಹೈದರಾಬಾದ್: ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ತನ್ನ ತೆಲುಗು ಸಿನಿ ಪಯಣವನ್ನು ಮತ್ತಷ್ಟು ವಿಸ್ತರಿಸಿದ್ದು, ಯುವ ನಟ ನರ್ನೆ ನಿತಿನ್ ಅಭಿನಯದ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದೆ.

‘ಮ್ಯಾಡ್’, ‘ಆಯ್’ ಮತ್ತು ‘ಮ್ಯಾಡ್ ಸ್ಕ್ವೇರ್’ ಚಿತ್ರಗಳ ಯಶಸ್ಸಿನ ಬಳಿಕ ಭರವಸೆಯ ನಟನಾಗಿ ಹೊರಹೊಮ್ಮಿರುವ ನರ್ನೆ ನಿತಿನ್, ಇದೀಗ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಜೊತೆ ಕೈಜೋಡಿಸಿದ್ದಾರೆ. ‘ಜೂನಿಯರ್’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ರಾಧಾಕೃಷ್ಣ ರೆಡ್ಡಿ ಈ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ನರ್ನೆ ನಿತಿನ್ ಜನ್ಮದಿನದ ಪ್ರಯುಕ್ತ ಬಿಡುಗಡೆಗೊಂಡ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದ ಪೋಸ್ಟ್ ಮಾದರಿಯಲ್ಲಿ ರೂಪುಗೊಂಡಿರುವ ಪೋಸ್ಟರ್‌ನಲ್ಲಿ ‘ಆಕಾಶದಲ್ಲಿರುತ್ತೆ ಮೂನ್.. ನೀವೇ ನನ್ನ ಲೈಫ್‌ಗೆ ಕ್ವೀನ್’ ಎಂಬ ಟ್ಯಾಗ್‌ಲೈನ್ ಬಳಸಲಾಗಿದೆ. ಚಿತ್ರದ ಕಥೆ ಪ್ರೇಮಕಥೆ ಆಧಾರಿತವಾಗಿರುವ ಸಾಧ್ಯತೆ ಹೆಚ್ಚಿದೆ.

ಇದೇ ವೇಳೆ ಪೋಸ್ಟರ್‌ನಲ್ಲಿ ಜೂನಿಯರ್ ಎನ್‌ಟಿಆರ್ ಲೈಕ್ ಮಾಡಿರುವ ವಿನ್ಯಾಸವನ್ನು ಸೇರಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಚಿತ್ರದ ತಾಂತ್ರಿಕ ತಂಡದಲ್ಲಿ ರಾಮ ಮಾರುತಿ ಎಂ (ಛಾಯಾಗ್ರಹಣ), ನಿರಂಜನ್ ದೇವರಮನೆ (ಸಂಕಲನ) ಮತ್ತು ಶಿವ ಕಮೇಶ್ ಡಿ. (ಕಲಾ ನಿರ್ದೇಶನ) ಕಾರ್ಯನಿರ್ವಹಿಸಲಿದ್ದಾರೆ.

ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಟಾಕ್ಸಿಕ್’, ‘ಜನ ನಾಯಗನ್’, ‘ಬೇಲ್’, ಚಿರಂಜೀವಿ ಅಭಿನಯದ ಹೊಸ ಸಿನಿಮಾ ಹಾಗೂ ಅಕ್ಷಯ್ ಕುಮಾರ್ ನಟನೆಯ ‘ಹೈವಾನ್’ ಸೇರಿದಂತೆ ಹಲವು ದೊಡ್ಡ ಪ್ರಾಜೆಕ್ಟ್‌ಗಳು ವಿವಿಧ ಹಂತಗಳಲ್ಲಿ ಸಾಗುತ್ತಿವೆ. ಈ ಸಾಲಿಗೆ ಈಗ ನರ್ನೆ ನಿತಿನ್ ಅಭಿನಯದ ಹೊಸ ತೆಲುಗು ಸಿನಿಮಾ ಸೇರ್ಪಡೆಯಾಗಿರುವುದು ಸಂಸ್ಥೆಯ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

NEET-UG ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂ ತಾತ್ಕಾಲಿಕ ನಿಷೇಧ: ಕೇಂದ್ರ ಸರ್ಕಾರದ ಕ್ರಮಕ್ಕೆ ದೆಹಲಿ ಹೈಕೋರ್ಟ್ ಬೆಂಬಲ

0

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) 2026ರ ಮರುಪರೀಕ್ಷೆ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಂ ಆ್ಯಪ್‌ ಮೇಲೆ ವಿಧಿಸಲಾಗಿರುವ ತಾತ್ಕಾಲಿಕ ನಿರ್ಬಂಧವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮ ನ್ಯಾಯಸಮ್ಮತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಂ ಸಂಸ್ಥೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಏಕಸದಸ್ಯ ಪೀಠ ಜೂನ್ 18ರಂದು ನಡೆಸಿತ್ತು. ಬಳಿಕ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿದೆ.

ವಿಚಾರಣೆ ವೇಳೆ ನ್ಯಾಯಾಲಯ, ಸರ್ಕಾರದ ಕ್ರಮವು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾದ ಕನಿಷ್ಠ ಮಟ್ಟದ ನಿರ್ಬಂಧವಾಗಿದೆ. ಹೀಗಾಗಿ ಈ ಆದೇಶವನ್ನು ಅಸಮಾನ ಅಥವಾ ಅಸಮಂಜಸ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಜೂನ್ 21ರಂದು ನಡೆಯಲಿರುವ NEET-UG ಮರುಪರೀಕ್ಷೆಗೆ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಭಾರತದಲ್ಲಿ ಜೂನ್ 22ರವರೆಗೆ ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ, ಈಗಾಗಲೇ ಪೋಸ್ಟ್ ಮಾಡಿರುವ ಸಂದೇಶಗಳನ್ನು ಜೂನ್ 30ರವರೆಗೆ ಎಡಿಟ್ ಮಾಡುವ ಸೌಲಭ್ಯವನ್ನು ಸ್ಥಗಿತಗೊಳಿಸುವಂತೆ ಟೆಲಿಗ್ರಾಂಗೆ ಸೂಚಿಸಲಾಗಿದೆ.

ಮೇ 3ರಂದು ನಡೆದಿದ್ದ NEET-UG 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ನಂತರ ಮರುಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ಮುಂದುವರಿಸಿದೆ.

ಈ ಬೆಳವಣಿಗೆಗಳ ನಡುವೆ ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಟೆಲಿಗ್ರಾಂ ಮೇಲಿನ ತಾತ್ಕಾಲಿಕ ನಿರ್ಬಂಧಕ್ಕೆ ದೆಹಲಿ ಹೈಕೋರ್ಟ್ ಬೆಂಬಲ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಕುಟುಂಬ ಸಮೇತರಾಗಿ ತಿರುಪತಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್: ಬೆಳ್ಳಂಬೆಳಗ್ಗೆ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ

ಬೆಂಗಳೂರು: ದೇವರ ಮೇಲಿನ ಅಪಾರ ಭಕ್ತಿ ಮತ್ತು ನಂಬಿಕೆಗೆ ಹೆಸರಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಬಳಿಕ ಪತ್ನಿ ಉಷಾ ಅವರೊಂದಿಗೆ ತಿರುಪತಿ ತಿರುಮಲಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಶುಕ್ರವಾರ ಮುಂಜಾನೆ ತಿರುಮಲ ದೇವಸ್ಥಾನಕ್ಕೆ ತೆರಳಿದ ಸಿಎಂ ದಂಪತಿ ವಿಶೇಷ ಪೂಜೆ ಸಲ್ಲಿಸಿ, ರಾಜ್ಯದ ಜನರ ಸುಖ-ಶಾಂತಿ, ಸಮೃದ್ಧಿ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ದೇವರ ದರ್ಶನದ ಬಳಿಕ ದೇವಸ್ಥಾನದಲ್ಲಿ ಸೆರೆಹಿಡಿದಿರುವ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅವರು,

“ಓಂ ನಮೋ ವೆಂಕಟೇಶಾಯ
ಕಾಮಿತಾರ್ಥ ಪ್ರದಾಯಿನೇ
ಪ್ರಣತಃ ಕ್ಲೇಶ ನಾಶಾಯ
ಗೋವಿಂದಾಯ ನಮೋ ನಮಃ”

ಎಂಬ ಶ್ಲೋಕವನ್ನು ಉಲ್ಲೇಖಿಸಿ, “ಧರ್ಮಪತ್ನಿಯೊಂದಿಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ ದಿವ್ಯ ದರ್ಶನ ಪಡೆದಿದ್ದೇನೆ. ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದು, ಜಗದೋದ್ಧಾರಕ ಶ್ರೀನಿವಾಸನ ಅನುಗ್ರಹ ಪ್ರತಿಯೊಬ್ಬರ ಮೇಲೂ ಇರಲಿ. ರಾಜ್ಯ ಸುಭಿಕ್ಷವಾಗಿ ಬೆಳೆಯಲಿ” ಎಂದು ಆಶಿಸಿದ್ದಾರೆ.

ಇತ್ತೀಚೆಗಷ್ಟೇ ನಗರದ ಅಧಿದೇವತೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದ ಸಿಎಂ, ಇದೀಗ ತಿರುಮಲ ಶ್ರೀನಿವಾಸನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮತ್ತೊಮ್ಮೆ ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸಿದ್ದಾರೆ.

ಚಿನ್ನದ ಬೆಲೆಯಲ್ಲಿ ಕುಸಿತ! ಇಂದು ಒಂದೇ ದಿನ 3650 ರೂ. ಇಳಿಕೆ! 1 ಗ್ರಾಂ ಗೋಲ್ಡ್ ರೇಟ್‌ ಎಷ್ಟು ಗೊತ್ತಾ?

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿರುವ ಚಿನ್ನದ ಬೆಲೆ, ಶುಕ್ರವಾರ (ಜೂನ್ 19, 2026) ಮತ್ತೊಮ್ಮೆ ಗಮನಾರ್ಹ ಪ್ರಮಾಣದಲ್ಲಿ ಕುಸಿದಿದೆ. ಒಂದೇ ದಿನದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ₹3,650 ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲೂ ₹10,000 ಇಳಿಕೆಯಾಗಿದೆ.

ತಜ್ಞರ ಪ್ರಕಾರ, ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಗಿಂತ ಈಕ್ವಿಟಿ ಮಾರುಕಟ್ಟೆಯತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಅಮೂಲ್ಯ ಲೋಹಗಳ ಬೇಡಿಕೆಗೆ ಹೊಡೆತ ನೀಡಿದ್ದು, ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.

ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹365 ಇಳಿಕೆಯಾಗಿ ₹14,586ಕ್ಕೆ ತಲುಪಿದೆ. ಅದೇ ರೀತಿ, 10 ಗ್ರಾಂ ಚಿನ್ನದ ಬೆಲೆ ₹3,650 ಇಳಿಕೆಯಾಗಿದ್ದು, ₹1,45,860ಕ್ಕೆ ದಾಖಲಾಗಿದೆ.

22 ಕ್ಯಾರೆಟ್ ಚಿನ್ನದ ದರದಲ್ಲೂ ಇಳಿಕೆ ಕಂಡುಬಂದಿದೆ. 1 ಗ್ರಾಂ ಚಿನ್ನದ ಬೆಲೆ ₹335 ಇಳಿಕೆಯಾಗಿ ₹13,370 ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ₹3,350 ಕಡಿಮೆಯಾಗಿ ₹1,33,700ಕ್ಕೆ ತಲುಪಿದೆ.

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಕುಸಿತ ದಾಖಲಾಗಿದೆ. ಇಂದು ಬೆಳ್ಳಿ ದರದಲ್ಲಿ ₹10,000 ಇಳಿಕೆಯಾಗಿದ್ದು, ಪ್ರತಿ ಕೆ.ಜಿ. ಬೆಲೆ ₹2,50,000ಕ್ಕೆ ತಲುಪಿದೆ. ಅಂದರೆ, ಪ್ರತಿ ಗ್ರಾಂ ಬೆಳ್ಳಿ ದರ ₹250 ಆಗಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸತತವಾಗಿ ಇಳಿಕೆ ಕಂಡುಬರುತ್ತಿರುವುದರಿಂದ, ಆಭರಣ ಖರೀದಿಸಲು ಹಾಗೂ ಹೂಡಿಕೆ ಮಾಡಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವೆಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೃದಯಾಘಾತದಿಂದ ಕಾಲೇಜು ಕ್ಯಾಂಪಸ್‌ನಲ್ಲೇ ಕುಸಿದುಬಿದ್ದು ವಿದ್ಯಾರ್ಥಿ ಸಾವು

0

ಮೈಸೂರು/ಶಿವಮೊಗ್ಗ: ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಈಗ ವಯಸ್ಸಿನ ಮಿತಿಯನ್ನು ಮೀರಿ ಮಕ್ಕಳ ಹಾಗೂ ಯುವಕರ ಜೀವವನ್ನೇ ಕಸಿಯುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರು ಹಾಗೂ ಶಿವಮೊಗ್ಗದಲ್ಲಿ ಮೊದಲನೇ ತರಗತಿ ಬಾಲಕನೊಬ್ಬರು ಹಠಾತ್ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ.

ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿ ಮಾದೇಶ್ ಕಾಲೇಜು ಆವರಣದಲ್ಲೇ ಏಕಾಏಕಿ ಹೃದಯಾಘಾತಕ್ಕೊಳಗಾಗಿ ಕುಸಿದುಬಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಾದೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಆರು ವರ್ಷದ ತ್ರಿಲೋಕ್ ಜೈನ್ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿದ್ದಾನೆ. ಶಿಕ್ಷಕರು ಮತ್ತು ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಬಾಲಕ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ.

ವೈದ್ಯರ ಪ್ರಾಥಮಿಕ ಅಂದಾಜಿನ ಪ್ರಕಾರ ಎರಡೂ ಪ್ರಕರಣಗಳಲ್ಲಿ ಹೃದಯಾಘಾತದ ಸಾಧ್ಯತೆ ಕುರಿತು ಶಂಕೆ ವ್ಯಕ್ತವಾಗಿದ್ದು, ಅಂತಿಮ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. ಕಿರಿಯ ವಯಸ್ಸಿನವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿರುವುದು ವೈದ್ಯಕೀಯ ವಲಯ ಹಾಗೂ ಪೋಷಕರಲ್ಲಿ ತೀವ್ರ ಕಳವಳ ಮೂಡಿಸಿದೆ.

ಮೈಸೂರಿನ ದೇವರಾಜ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಜಿಲ್ಲೆಯ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಮತ್ತು ವೈದ್ಯಕೀಯ ತನಿಖೆ ಪ್ರಗತಿಯಲ್ಲಿದೆ.

ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಖದೀಮನ ದುರಂತ ಅಂತ್ಯ: ಫುಟ್‌ಪಾತ್‌ನಲ್ಲೇ ಕುಸಿದು ಬಿದ್ದು ಸಾವು

0

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಖದೀಮನೊಬ್ಬ ಫುಟ್‌ಪಾತ್ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ವಿಚಿತ್ರ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತನನ್ನು ಜುನೈದ್ ಎಂದು ಗುರುತಿಸಲಾಗಿದೆ. ಜೂನ್ 16ರಂದು ಕಬ್ಬನ್‌ಪೇಟೆಯ 14ನೇ ಕ್ರಾಸ್ ಬಳಿ ಪಾದಚಾರಿಯೊಬ್ಬರ ಮೊಬೈಲ್ ಕಸಿದುಕೊಂಡು ಸಹಚರನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಸಂತ್ರಸ್ತ ಯುವಕ ಕಳ್ಳ ಕಳ್ಳ ಎಂದು ಕೂಗಿಕೊಂಡಿದ್ದಾನೆ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಕಾರ್ಮಿಕನೊಬ್ಬ ಸಮಯಪ್ರಜ್ಞೆ ಮೆರೆದು ಕಳ್ಳರನ್ನು ತಡೆಯಲು ಯತ್ನಿಸಿದ ಪರಿಣಾಮ, ಆರೋಪಿಗಳು ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ.

ಬೈಕ್‌ನಿಂದ ಬಿದ್ದ ಬಳಿಕ ಕಳ್ಳರು ಕದ್ದ ಮೊಬೈಲ್‌ನ್ನು ಬಿಟ್ಟು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಜುನೈದ್ ಫುಟ್‌ಪಾತ್ ಮೇಲೆಯೇ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ನೆರವಿಗೆ ಧಾವಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.

ಪ್ರಾಥಮಿಕ ಮಾಹಿತಿಯಂತೆ ಜುನೈದ್ ಈ ಹಿಂದೆಯೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಪರಾರಿಯಾಗುವ ವೇಳೆ ಹೃದಯಾಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನೊಬ್ಬ ಆರೋಪಿ ಅರ್ಬಾಜ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

‘ನಾಲ್ವರು ನಮಗೆ ದ್ರೋಹ ಮಾಡಿದ್ದಾರೆ, ಯಾರು ಅಂತ ಗೊತ್ತಿದೆ’: ಜಿ.ಟಿ.ಡಿ ವಿರುದ್ಧ ಕುಮಾರಸ್ವಾಮಿ ಗರಂ

0

ಮೈಸೂರು: ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಜೆಡಿಎಸ್ ಒಳಗಿನ ಅಸಮಾಧಾನ ಸ್ಫೋಟಗೊಂಡಿದ್ದು, ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಪಕ್ಷದ ನಾಲ್ವರು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಪಕ್ಷ ತೊರೆಯುವ ಚರ್ಚೆಯನ್ನೂ ನಡೆಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಅಡ್ಡ ಮತದಾನ ಮಾಡಿದವರ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಅವರು ಯಾವ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂಬುದೂ ಗೊತ್ತಿದೆ. ಇದು ನನಗೆ ಆಘಾತವಲ್ಲ, ಮೊದಲೇ ನಿರೀಕ್ಷಿಸಿದ್ದ ಬೆಳವಣಿಗೆ ಎಂದು ಹೇಳಿದರು.

ಪಕ್ಷದೊಳಗಿನ ನಿಷ್ಠಾವಂತರನ್ನು ಹಾಗೂ ಹಿತಶತ್ರುಗಳನ್ನು ಗುರುತಿಸುವ ಉದ್ದೇಶದಿಂದಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆವು. ನಿನ್ನೆ ಬಂದ ಫಲಿತಾಂಶ ಮತ್ತೊಂದು ಅನುಭವ ನೀಡಿದೆ. ಕೆಲವರ ಮೇಲೆ ಅತಿಯಾದ ನಂಬಿಕೆ ಇಡಬಾರದು ಎಂಬ ಪಾಠವನ್ನು ಈ ಚುನಾವಣೆ ಕಲಿಸಿದೆ ಎಂದು ಅವರು ಕಿಡಿಕಾರಿದರು.

ಪಕ್ಷ ತೊರೆಯುವವರು ಹೋಗಲಿ. ಜೆಡಿಎಸ್ ಅನ್ನು ಯುವಕರ ಕೈಯಲ್ಲಿ ಪುನರ್‌ನಿರ್ಮಿಸುತ್ತೇನೆ. ಮುಂದಿನ ದಿನಗಳಲ್ಲಿ ಹೊಸ ಮುಖಗಳಿಗೆ ಆದ್ಯತೆ ಸಿಗಲಿದೆ ಎಂದು ಘೋಷಿಸಿದರು.

ಜಿ.ಟಿ ದೇವೇಗೌಡ ಕುರಿತು ಪ್ರಶ್ನೆ ಕೇಳುತ್ತಿದ್ದಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಅವರ ವಿಚಾರ ಮುಗಿದ ಅಧ್ಯಾಯ. ಅವರು ಒಂದು ಕಾಲಲ್ಲ, ಎರಡು ಕಾಲುಗಳನ್ನೂ ಪಕ್ಷದ ಹೊರಗೆ ಇಟ್ಟಿದ್ದಾರೆ. ಈ ಬಾರಿ ಟಿಕೆಟ್ ನೀಡುವ ವಿಚಾರದಲ್ಲಿ ಅಂತಿಮ ನಿರ್ಧಾರ ನನ್ನದೇ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ದೊಡ್ಡ ಗೌಡರಿಗೆ ಜಿ.ಟಿ.ಡಿ ಮೇಲೆ ಪ್ರೀತಿ ಇರಬಹುದು. ಆದರೆ ಆ ಭಾವನೆಯನ್ನು ದುರುಪಯೋಗಪಡಿಸಿಕೊಳ್ಳಲು ನಾನು ಅವಕಾಶ ನೀಡುವುದಿಲ್ಲ” ಎಂದು ಹೇಳುವ ಮೂಲಕ ಪಕ್ಷದೊಳಗಿನ ಭಿನ್ನಮತಕ್ಕೆ ತೆರೆ ಎಳೆಯುವ ಸಂದೇಶ ರವಾನಿಸಿದರು.

ಭಾರತ ಮಹಿಳಾ ತಂಡಕ್ಕೆ ಶಾಕ್: ಟಿ20 ವಿಶ್ವಕಪ್ʼನಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್!

0

ಮುಂಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿರುವ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಗಾಯದ ಕಾರಣದಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಾದಕ್ಕೆ ಗಾಯವಾಗಿರುವ ಶ್ರೇಯಾಂಕಾ ಅವರಿಗೆ ಸಂಪೂರ್ಣ ಚೇತರಿಕೆಗೆ ಹೆಚ್ಚಿನ ಸಮಯ ಅಗತ್ಯವಿರುವುದರಿಂದ, ವಿಶ್ವಕಪ್‌ನ ಉಳಿದ ಪಂದ್ಯಗಳಲ್ಲಿ ಅವರು ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬುಧವಾರ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಈ ಘಟನೆ ಸಂಭವಿಸಿತ್ತು. ಎದುರಾಳಿ ತಂಡದ ಇನ್ನಿಂಗ್ಸ್‌ನ 6ನೇ ಓವರ್‌ನ ಮೊದಲ ಎಸೆತದ ವೇಳೆ ಮಿಡ್‌ವಿಕೆಟ್ ಪ್ರದೇಶದತ್ತ ತೆರಳುತ್ತಿದ್ದ ಚೆಂಡನ್ನು ತಡೆಯಲು ಪ್ರಯತ್ನಿಸಿದ ಶ್ರೇಯಾಂಕಾ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಬಳಿಕ ಅವರು ಮೈದಾನ ತೊರೆಯಬೇಕಾಯಿತು.

ಶ್ರೇಯಾಂಕಾ ಅವರ ಸ್ಥಾನಕ್ಕೆ ಯುವ ಆಟಗಾರ್ತಿ ಪ್ರೇಮಾ ರಾವತ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಬದಲಾವಣೆಗೆ ಐಸಿಸಿ ಮಹಿಳಾ ಟಿ20 ವಿಶ್ವಕಪ್ ತಾಂತ್ರಿಕ ಸಮಿತಿಯು ಅಧಿಕೃತ ಅನುಮೋದನೆ ನೀಡಿದೆ. ಟೂರ್ನಿಯ ನಿಯಮಗಳ ಪ್ರಕಾರ, ಗಾಯಗೊಂಡ ಆಟಗಾರ್ತಿಯ ಬದಲಿಗೆ ಹೊಸ ಆಟಗಾರ್ತಿಯನ್ನು ಸೇರಿಸಲು ತಾಂತ್ರಿಕ ಸಮಿತಿಯ ಅನುಮತಿ ಕಡ್ಡಾಯವಾಗಿದೆ.

24 ವರ್ಷದ ಪ್ರೇಮಾ ರಾವತ್ ಇತ್ತೀಚಿನ ದಿನಗಳಲ್ಲಿ ತಮ್ಮ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಭಾರತ ‘ಎ’ ತಂಡದ ಪರ ಆಡಿದ್ದ ಅವರು 9.62ರ ಸರಾಸರಿಯಲ್ಲಿ 8 ವಿಕೆಟ್ ಪಡೆದು ಮಿಂಚಿದ್ದರು.

ಇದರ ಜೊತೆಗೆ, ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿರುವ ಪ್ರೇಮಾ, ಕಳೆದ ಎರಡು ಆವೃತ್ತಿಗಳಲ್ಲಿ ಒಟ್ಟು ಆರು ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್ ಕಬಳಿಸಿದ್ದಾರೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದ ಶ್ರೇಯಾಂಕಾ ಅವರಿಗೆ ಇದು ಮತ್ತೊಂದು ಹಿನ್ನಡೆಯಾಗಿದೆ. ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಮೂರು ಓವರ್‌ಗಳಲ್ಲಿ ಕೇವಲ 17 ರನ್ ನೀಡಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು.

ಭಾರತ ತಂಡ ಈಗಾಗಲೇ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ, ಶ್ರೇಯಾಂಕಾ ಅವರ ಅನುಪಸ್ಥಿತಿ ಮುಂದಿನ ಪಂದ್ಯಗಳಲ್ಲಿ ತಂಡಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

error: Content is protected !!