Home Blog Page 29

ಸಾಮಾಜಿಕ ಕಾಳಜಿಯ ‘ದೇವಿ’ ಈ ವಾರ ಬಿಡುಗಡೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸೂರ್ಯ ವಿಷನ್ ಬೆಂಗಳೂರು ನಿರ್ಮಾಣದ ‘ದೇವಿ’ ಕನ್ನಡ ಚಲನಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಮಕ್ಕಳ ಕನಸುಗಳು, ಪೋಷಕರ ಮಹತ್ವಾಕಾಂಕ್ಷೆ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಸೂಕ್ಷ್ಮ ವಿಷಯಗಳನ್ನು ತೆರೆ ಮೇಲೆ ಕಟ್ಟಿಕೊಡಲಿದೆ.

ಬಡತನದಲ್ಲಿ ಬದುಕುತ್ತಿರುವ ತಾಯಿ ರೇಣುಕಾ ತನ್ನ ಮಗಳು ಗೌರಿ ಚಿತ್ರರಂಗದಲ್ಲಿ ದೊಡ್ಡ ನಾಯಕಿಯಾಗಿ ಹೆಸರು, ಹಣ ಮತ್ತು ಗೌರವ ಗಳಿಸಬೇಕು ಎಂಬ ಕನಸು ಕಾಣುತ್ತಾಳೆ. ಆದರೆ ಗೌರಿ ವೈದ್ಯೆಯಾಗಿ ಸಮಾಜಸೇವೆ ಮಾಡುವ ಕನಸು ಹೊಂದಿರುತ್ತಾಳೆ. ಮಗಳ ಇಚ್ಛೆ ಮತ್ತು ತಾಯಿಯ ಮಹತ್ವಾಕಾಂಕ್ಷೆಯ ನಡುವಿನ ಸಂಘರ್ಷ, ಸ್ಲಿಮ್ ಆಗುವ ಒತ್ತಡ, ಹಾರ್ಮೋನುಗಳ ಬದಲಾವಣೆ, ಮಾನಸಿಕ ತಲ್ಲಣ ಹಾಗೂ ಅದರ ಪರಿಣಾಮಗಳು ಕಥೆಗೆ ತಿರುವು ನೀಡುತ್ತವೆ.

ಪೋಷಕರ ಅತಿಯಾದ ನಿರೀಕ್ಷೆ, ಅಂಧಭಕ್ತಿ, ಬಡತನ ಮತ್ತು ಬಾಲ್ಯದ ಹಕ್ಕುಗಳ ನಡುವಿನ ಸಂಘರ್ಷವನ್ನು ಚಿತ್ರ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದು, “ಮಕ್ಕಳ ಕನಸುಗಳನ್ನು ಹಾಳು ಮಾಡಬಾರದು; ಮಾಡಿದರೆ ಅದರ ಪರಿಣಾಮ ಭೀಕರವಾಗಬಹುದು” ಎಂಬ ಸಂದೇಶವನ್ನು ಸಾರುತ್ತದೆ.

ಚಿತ್ರದಲ್ಲಿ ಛಾಯಾರಾಣಿ, ಧನಲಕ್ಷ್ಮಿ, ರಂಗನಾಥ ನಂಜನಗೂಡು, ಮಣಿಕಂಠ ಸೂರ್ಯ, ಸುಕುಮಾರ, ಪ್ರೀತಿ ಎಸ್. ಬಾಬು, ಕಾವೇರಿ ಶ್ರೀಧರ್, ವೀರೇಂದ್ರ ಬೆಳ್ಳಿಚುಕ್ಕಿ ಹಾಗೂ ಕಾಳಿಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿನಾಯಕ ರೇವಡಿ ಅವರ ಛಾಯಾಗ್ರಹಣ, ಶಿವಸತ್ಯ ಸಂಗೀತ, ಕೃಷ್ಣಪ್ರಸಾದ ಹಳೇಬೀಡು ಸಂಭಾಷಣೆ, ಪೂರ್ಣೇಶ ಸಾಗರ ಚಿತ್ರಕಥೆ, ವೀರೇಂದ್ರ ಬೆಳ್ಳಿಚುಕ್ಕಿ ವಸ್ತ್ರ ವಿನ್ಯಾಸ, ಮುತ್ತುರಾಜ ಟಿ. ಸಂಕಲನ, ಸಚಿನ್ ಕಲರ್ ಗ್ರೇಡಿಂಗ್ ನಿರ್ವಹಿಸಿದ್ದಾರೆ. ಕಾಳಿಪ್ರಸಾದ್ ಕಥೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದು, ಮಾರುತಿ ಎಂ. ಸಹ ನಿರ್ಮಾಪಕರಾಗಿ, ವೀಣಾ ಎಂ. ನಿರ್ಮಾಪಕರಾಗಿ ಚಿತ್ರವನ್ನು ನಿರ್ಮಿಸಿದ್ದಾರೆ.

ಕುಟುಂಬ ಸಮೇತ ವೀಕ್ಷಿಸಬಹುದಾದ ಈ ಚಿತ್ರ ಮಕ್ಕಳ ಭಾವನೆ, ಬಾಲ್ಯದ ಸ್ವಾಯತ್ತತೆ ಹಾಗೂ ಪೋಷಕರ ಜವಾಬ್ದಾರಿಯ ಕುರಿತು ಸಮಾಜದಲ್ಲಿ ಚಿಂತನೆ ಮೂಡಿಸುವ ಪ್ರಯತ್ನ ಮಾಡಿದೆ.

ಅಣ್ಣಿಗೇರಿ ರೈಲ್ವೆ ನಿಲ್ದಾಣಕ್ಕೆ ‘ಆದಿಕವಿ ಪಂಪ’ ಹೆಸರಿಡಿ

0

ವಿಜಯಸಾಕ್ಷಿ ಸುದ್ದಿ, ಅಣ್ಣಿಗೇರಿ: ಕನ್ನಡದ ಆದಿಕವಿ ಪಂಪನ ಜನ್ಮಸ್ಥಳವಾದ ಅಣ್ಣಿಗೇರಿಯ ರೈಲ್ವೆ ನಿಲ್ದಾಣಕ್ಕೆ ‘ಆದಿಕವಿ ಪಂಪ ರೈಲ್ವೆ ನಿಲ್ದಾಣ’ ಎಂದು ನಾಮಕರಣ ಮಾಡಬೇಕೆಂಬ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಈ ಸಂಬಂಧ ಅಕಾಡೆಮಿ ಫಾರ್ ಕ್ರಿಯೇಟಿವ್ ಲರ್ನಿಂಗ್ ವತಿಯಿಂದ ನಡೆಸಲಾಗುತ್ತಿರುವ ನಿರಂತರ ಹೋರಾಟ ಮತ್ತು ಪ್ರಯತ್ನಗಳ ಸಮಗ್ರ ದಾಖಲೆ ಪುಸ್ತಕವನ್ನು ಧಾರವಾಡ ಜಿಲ್ಲಾಧಿಕಾರಿಗಳು ಹಾಗೂ ನೈರುತ್ಯ ರೈಲ್ವೆಯ ಮಹಾಪ್ರಬಂಧಕರಿಗೆ ಅಧಿಕೃತವಾಗಿ ಸಲ್ಲಿಸಲಾಯಿತು.

ಜತೆಗೆ, ಈ ಬೇಡಿಕೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ತುರ್ತಾಗಿ ಶಿಫಾರಸು ಮಾಡುವಂತೆ ಮನವಿ ಪತ್ರವನ್ನೂ ಸಲ್ಲಿಸಲಾಯಿತು.

ಕನ್ನಡ ಸಾಹಿತ್ಯದ ಆದಿಕವಿ ಪಂಪ ಅವರ ಕೊಡುಗೆ ಅಪಾರವಾಗಿದ್ದು, ಅವರ ಜನ್ಮಭೂಮಿಯಾದ ಅಣ್ಣಿಗೇರಿಯ ರೈಲ್ವೆ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡುವುದು ಕನ್ನಡ ನಾಡು, ಸಾಹಿತ್ಯ ಮತ್ತು ಇತಿಹಾಸಕ್ಕೆ ಸಲ್ಲಿಸುವ ಸೂಕ್ತ ಗೌರವವಾಗಲಿದೆ ಎಂದು ಅಕಾಡೆಮಿ ಅಭಿಪ್ರಾಯಪಟ್ಟಿದೆ.

ಈ ಸಂದರ್ಭದಲ್ಲಿ ಅಕಾಡೆಮಿ ಫಾರ್ ಕ್ರಿಯೇಟಿವ್ ಲರ್ನಿಂಗ್ ಸಂಸ್ಥೆಯ ಅಧ್ಯಕ್ಷ ಡಾ. ಮಹಮ್ಮದ್ ಸಾದಿಕ್ ಸೈಯದ್, ನಿರ್ದೇಶಕರಾದ ಶಿವಾನಂದ ಚವಡಿ, ವಿಠ್ಠಲ ರಾಮಣ್ಣವರ ಹಾಗೂ ಶಿವಾನಂದ ಕಪ್ಪತ್ತನವರ ಉಪಸ್ಥಿತರಿದ್ದರು.

ರಾತ್ರೋರಾತ್ರಿ 3 ಟನ್ ದ್ರಾಕ್ಷಿ ಕಳ್ಳತನ: ರೈತನಿಗೆ 3 ಲಕ್ಷ ರೂ. ನಷ್ಟ!

ಚಿಕ್ಕಬಳ್ಳಾಪುರ: ಚಿನ್ನ, ಬೆಳ್ಳಿ, ನಗದು ಕಳ್ಳತನ ಸಾಮಾನ್ಯ. ಆದರೆ ಇದೀಗ ಕಳ್ಳರ ಕಣ್ಣು ರೈತರ ತೋಟಗಳ ಮೇಲೆ ಬಿದ್ದಿದೆ.

ಟೊಮೆಟೊ, ದಾಳಿಂಬೆ ಬಳಿಕ ಇದೀಗ ದ್ರಾಕ್ಷಿ ತೋಟಕ್ಕೆ ನುಗ್ಗಿದ ಕಳ್ಳರು, ರಾತ್ರೋರಾತ್ರಿ ಲಕ್ಷಾಂತರ ರೂ. ಮೌಲ್ಯದ ದ್ರಾಕ್ಷಿಯನ್ನು ಕದ್ದೊಯ್ದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಬಸವರಾಜ್ ಎಂಬುವವರಿಗೆ ಸೇರಿದ ತೋಟದಲ್ಲಿ ಕಳ್ಳತನ ನಡೆದಿದೆ. ಬಸವರಾಜ್ ತಮ್ಮ ತೋಟದಲ್ಲಿ ರೆಡ್ ಗ್ಲೋಬ್ ತಳಿಯ ದ್ರಾಕ್ಷಿ ಬೆಳೆದಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು 150 ರೂ. ಬೆಲೆ ಹಾಗೂ ಭಾರೀ ಬೇಡಿಕೆ ಇದೆ.

ದ್ರಾಕ್ಷಿ ಗೊಂಚಲುಗಳು ಒಂದೂವರೆಯಿಂದ ಎರಡೂವರೆ ಕೆಜಿಯಷ್ಟು ತೂಕ ಬರುವಂತೆ ಬೆಳೆದಿದ್ದು, ವರ್ತಕರು ತೋಟದಲ್ಲೇ ಖರೀದಿಸಿ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಆದರೆ, ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು ಮೂರು ಟನ್ ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.

3 ಲಕ್ಷ ರೂ. ಮೌಲ್ಯದ ದ್ರಾಕ್ಷಿ ಕಳವು:

ಕಳುವಾದ ದ್ರಾಕ್ಷಿಯ ಒಟ್ಟು ಮೌಲ್ಯ ಸುಮಾರು 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತೋಟದ ಹಿಂಭಾಗದಲ್ಲಿರುವ ಕೆರೆಯ ಬಳಿ ವಾಹನ ನಿಲ್ಲಿಸಿ, ಅಲ್ಲಿಂದ ದ್ರಾಕ್ಷಿಯನ್ನು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಹಿಂದೆ ಟೊಮೆಟೊ ಹಾಗೂ ದಾಳಿಂಬೆ ಬೆಲೆ ಏರಿಕೆಯಾದ ಸಂದರ್ಭದಲ್ಲೂ ತೋಟಗಳಿಗೆ ನುಗ್ಗಿ ಬೆಳೆ ಕಳವು ಮಾಡಿದ್ದ ಪ್ರಕರಣಗಳು ವರದಿಯಾಗಿದ್ದವು. ಆದರೆ ದ್ರಾಕ್ಷಿ ತೋಟದಲ್ಲಿ ಇಂತಹ ಕಳ್ಳತನ ನಡೆದಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.

ಒಂದೇ ರಾತ್ರಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ದ್ರಾಕ್ಷಿ ಕಳುವಾಗಿರುವುದು ಜಿಲ್ಲೆಯ ರೈತರನ್ನು ಬೆಚ್ಚಿಬೀಳಿಸಿದೆ. ತೋಟಗಾರಿಕಾ ಬೆಳೆಗಳ ಮೇಲೆ ಕಳ್ಳರ ಕಣ್ಣು ಬೀಳುತ್ತಿರುವ ಹಿನ್ನೆಲೆಯಲ್ಲಿ ತೋಟಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಸ್ಥಳೀಯ ರೈತರು ಪೊಲೀಸರನ್ನು ಒತ್ತಾಯಿಸಿದ್ದಾರೆ.

SIR Form Deadline: ಕರ್ನಾಟಕದಲ್ಲಿ ಮತದಾರರ ನಮೂನೆ ಸಲ್ಲಿಕೆ ಅವಧಿ ವಿಸ್ತರಣೆ, ಆಗಸ್ಟ್ 8 ಕೊನೆ ದಿನ!

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಮೂನೆಗಳನ್ನು ಹಿಂದಿರುಗಿಸುವ ಅವಧಿಯನ್ನು ಚುನಾವಣಾ ಆಯೋಗ ವಿಸ್ತರಿಸಿದೆ.

ಈ ಮೊದಲು ಜುಲೈ ಅಂತ್ಯದವರೆಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ನಮೂನೆ ಸಂಗ್ರಹಿಸಲು ಅವಕಾಶ ನೀಡಲಾಗಿತ್ತು. ಇದೀಗ ಈ ಅವಧಿಯನ್ನು ಆಗಸ್ಟ್‌ 8ರವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಅದರಂತೆ BLOಗಳು ಮನೆ ಮನೆಗೆ ತೆರಳಿ ಮತದಾರರಿಂದ ನಮೂನೆಗಳನ್ನು ಸಂಗ್ರಹಿಸಬಹುದಾಗಿದೆ.

ಈ ಕುರಿತು ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 5.27 ಕೋಟಿಗೂ ಹೆಚ್ಚು ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, 13 ಜಿಲ್ಲೆಗಳಲ್ಲಿ ಶೇ.100ರಷ್ಟು ಫಾರ್ಮ್ ವಿತರಣೆ ಪೂರ್ಣಗೊಂಡಿದೆ. ಇದುವರೆಗೆ 1 ಕೋಟಿ 99 ಲಕ್ಷ 51 ಸಾವಿರ 635 ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಸುಮಾರು ಶೇ.40ರಷ್ಟು ಡಿಜಿಟಲೀಕರಣ ಕಾರ್ಯ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ.

ಯಾದಗಿರಿ, ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಹಾವೇರಿ, ವಿಜಯನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಶೇ.100ರಷ್ಟು ಫಾರ್ಮ್ ವಿತರಣೆ ಪೂರ್ಣಗೊಂಡಿದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 1 ಕೋಟಿ 3 ಲಕ್ಷ 88 ಸಾವಿರ 363 ಮತದಾರರ ಪೈಕಿ 81 ಲಕ್ಷ 30 ಸಾವಿರ 826 ಮಂದಿಗೆ ಎನ್ಯೂಮರೇಷನ್ ಫಾರ್ಮ್ ವಿತರಿಸಲಾಗಿದೆ ಎಂದು ತಿಳಿಸಿದರು.

ವಾರಾಂತ್ಯದಲ್ಲಿ ವಿಶೇಷ ಅಭಿಯಾನ

ಉದ್ಯೋಗ ಹಾಗೂ ವ್ಯಾಪಾರದ ಕಾರಣಗಳಿಂದ ವಾರದ ದಿನಗಳಲ್ಲಿ ಮನೆಗಳಲ್ಲಿ ಲಭ್ಯವಿರದ ಮತದಾರರ ಅನುಕೂಲಕ್ಕಾಗಿ ಶನಿವಾರ ಮತ್ತು ಭಾನುವಾರ ರಾಜ್ಯಾದ್ಯಂತ ವಿಶೇಷ ಅಭಿಯಾನ ನಡೆಸಲಾಗುವುದು. ನಗರ ಪ್ರದೇಶಗಳಲ್ಲೂ ಇದೇ ಮಾದರಿಯಲ್ಲಿ ಅಭಿಯಾನ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು ಪಬ್‌ನಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಹೈಡ್ರಾಮಾ; ಕುಡಿದ ಮತ್ತಿನಲ್ಲಿ ರಾದ್ಧಾಂತ!

ಬೆಂಗಳೂರು: ನಗರದ ಜೆ.ಪಿ.ನಗರದ ಪಬ್‌ವೊಂದರಲ್ಲಿ ಕುಡಿದ ಮತ್ತಿನಲ್ಲಿ ಅಬಕಾರಿ ಇನ್‌ಸ್ಪೆಕ್ಟರ್‌ರೊಬ್ಬರು ಗಲಾಟೆ ನಡೆಸಿದ ಘಟನೆ ನಡೆದಿದೆ.

ಸಬ್ ಡಿವಿಷನ್-11ರಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಲಪ್ಪ ಎಸ್. ಕುಂದಗೋಳ ಎಂಬ ಅಬಕಾರಿ ಇನ್‌ಸ್ಪೆಕ್ಟರ್, ಸರ್ಕಾರಿ ಗುರುತಿನ ಚೀಟಿ ಹಾಕಿಕೊಂಡೇ ಪಬ್‌ಗೆ ತೆರಳಿದ್ದರು ಎನ್ನಲಾಗಿದೆ. ಬಳಿಕ ಕಂಠಪೂರ್ತಿ ಮದ್ಯ ಸೇವಿಸಿ ಅಲ್ಲಿದ್ದವರಿಗೆ ಅವಾಜ್ ಹಾಕಿ ರಾದ್ಧಾಂತ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಜತೆಗೂ ಇನ್‌ಸ್ಪೆಕ್ಟರ್ ಕಿರಿಕ್ ಮಾಡಿಕೊಂಡಿದ್ದು, ಇದನ್ನು ಪ್ರಶ್ನಿಸಿದ ಮ್ಯಾನೇಜರ್‌ಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇನ್‌ಸ್ಪೆಕ್ಟರ್ ಗಲಾಟೆ ನಡೆಸಿದ ದೃಶ್ಯಗಳು ಪಬ್‌ನಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದೀಗ ವೀಡಿಯೋ ವೈರಲ್ ಆಗಿದೆ. ಪಬ್‌ನಲ್ಲಿ ಜನರು ಗುಂಪುಗೂಡುತ್ತಿದ್ದಂತೆ ಅಧಿಕಾರಿ ಸ್ಥಳದಿಂದ ತೆರಳಿದ್ದಾರೆ.

ಸರ್ಕಾರಿ ಗುರುತಿನ ಚೀಟಿ ತೆಗೆಯದೇ ಮದ್ಯದ ಅಮಲಿನಲ್ಲಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಘಟನೆ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Job Scam: ಬೆಂಗಳೂರಿನಲ್ಲಿ ಫೇಕ್ ಕಂಪನಿ ತೆರೆದು ಯುವಕರಿಗೆ ಮೋಸ, ಪ್ರಮುಖ ಆರೋಪಿ ಅರೆಸ್ಟ್

ಬೆಂಗಳೂರು: ಪ್ರತಿಷ್ಠಿತ ಎಂಎನ್‌ಸಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿ ಯುವಕ-ಯುವತಿಯರಿಂದ ಹಣ ಪಡೆದು ವಂಚಿಸುತ್ತಿದ್ದ ನಕಲಿ ಉದ್ಯೋಗ ಜಾಲವನ್ನು ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಭೇದಿಸಿದ್ದಾರೆ.

“ಕೈತುಂಬಾ ಸಂಬಳ, ಪ್ರತಿ ವರ್ಷ ಭರ್ಜರಿ ಹೈಕ್” ಎಂಬ ಆಕರ್ಷಕ ಜಾಹೀರಾತುಗಳ ಮೂಲಕ ಉದ್ಯೋಗ ಆಕಾಂಕ್ಷಿಗಳನ್ನು ಸೆಳೆಯುತ್ತಿದ್ದ ವಂಚಕರು, ವೈಟ್‌ಫೀಲ್ಡ್‌ನಲ್ಲಿ ನಕಲಿ ಕಂಪನಿ ಕಚೇರಿ ತೆರೆದು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಪ್ರಚಾರ ನಡೆಸುತ್ತಿದ್ದರು.

ದೇಶದ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದ್ದರು. ಬಳಿಕ ಪ್ರವೇಶ ಶುಲ್ಕದ ಹೆಸರಿನಲ್ಲಿ ಪ್ರತಿ ಅಭ್ಯರ್ಥಿಯಿಂದ 2 ಸಾವಿರದಿಂದ 3 ಸಾವಿರ ರೂ.ವರೆಗೆ ಹಣ ವಸೂಲಿ ಮಾಡುತ್ತಿದ್ದರು. ಒಂದೇ ಹಾಲ್‌ನಲ್ಲಿ 30ರಿಂದ 40 ಜನರಿಗೆ ಪರೀಕ್ಷೆ ಬರೆಸುತ್ತಿದ್ದ ವಂಚಕರು, ಫಲಿತಾಂಶದ ಬಳಿಕ ಕರೆ ಮಾಡುವುದಾಗಿ ಹೇಳಿ ಕಳುಹಿಸುತ್ತಿದ್ದರು.

ಆದರೆ ವಾರಗಳು ಕಳೆದರೂ ಯಾವುದೇ ಮಾಹಿತಿ ನೀಡದೇ, ಅಭ್ಯರ್ಥಿಗಳು ಕರೆ ಮಾಡಿದಾಗ “ಪರೀಕ್ಷೆಯಲ್ಲಿ ಆಯ್ಕೆಯಾಗಿಲ್ಲ” ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಕೆಲವರು ಕಡಿಮೆ ಮೊತ್ತದ ಹಣ ಎಂದು ಭಾವಿಸಿ ದೂರು ನೀಡದೇ ಸುಮ್ಮನಾಗಿದ್ದರು. ಇದೇ ರೀತಿಯಲ್ಲಿ ಹಲವು ವರ್ಷಗಳಿಂದ ಲಕ್ಷಾಂತರ ರೂ. ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪರೀಕ್ಷಾ ಪತ್ರಿಕೆ ಕೇಳಿದಾಗ ಬಯಲಾದ ವಂಚನೆ

ಇತ್ತೀಚೆಗೆ ಕೆಲ ಅಭ್ಯರ್ಥಿಗಳು ತಾವು ಬರೆದ ಪರೀಕ್ಷಾ ಪತ್ರಿಕೆಗಳನ್ನು ತೋರಿಸುವಂತೆ ಒತ್ತಾಯಿಸಿದ್ದು, ಕಚೇರಿ ಸಿಬ್ಬಂದಿ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಅನುಮಾನಗೊಂಡು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತನಿಖೆ ನಡೆಸಿದ ಪೊಲೀಸರು ಇದು ಸಂಪೂರ್ಣ ನಕಲಿ ಕಂಪನಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪವನ್ ಗೋಪಾಲ್ ಎಂಬಾತನನ್ನು ಬಂಧಿಸಲಾಗಿದೆ. ಈ ವಂಚನೆ ಜಾಲದ ಹಿಂದೆ ದೊಡ್ಡ ಗ್ಯಾಂಗ್ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದೆ.

 

60 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಕಾರ್ಮಿಕನನ್ನು ಜೀವಂತವಾಗಿ ರಕ್ಷಿಸಿದ ಸಿಬ್ಬಂದಿ!

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕವಡೆಕಟ್ಟೆ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ದುರಂತ ಘಟನೆ ನಡೆದಿದೆ.

ಶಾಲಾ ಆವರಣದಲ್ಲಿದ್ದ ಕೊಳವೆ ಬಾವಿಯ ಮೇಲ್ಭಾಗವನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ವಿಶ್ವನಾಥ್ ಎಂಬ ಕಾರ್ಮಿಕ ಆಕಸ್ಮಿಕವಾಗಿ ಸುಮಾರು 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ತಕ್ಷಣ ಕಾರ್ಯಾಚರಣೆ ನಡೆಸಿ ಕಾರ್ಮಿಕನನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದಿದ್ದಾರೆ. ಬಾವಿಗೆ ಬಿದ್ದ ಪರಿಣಾಮ ವಿಶ್ವನಾಥ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಕೊಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಕಾರ್ಮಿಕನ ಜೀವ ಉಳಿದಿದೆ.

ಎಲ್ಲಾ ಅಡೆತಡೆಗಳಿಗೆ ಅಂತ್ಯ! ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ಘೋಷಣೆ; ಜುಲೈ 23ಕ್ಕೆ ವಿಶ್ವಾದ್ಯಂತ ಅಬ್ಬರ

ಚೆನ್ನೈ: ತಿಂಗಳುಗಳ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದೆ. ಸೆನ್ಸಾರ್ ವಿವಾದ, ನ್ಯಾಯಾಲಯದ ಹೋರಾಟ ಹಾಗೂ ಆನ್‌ಲೈನ್ ಲೀಕ್‌ಗಳಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾ ಇದೀಗ ಜುಲೈ 23ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಕಾಲಿವುಡ್ ಸೂಪರ್‌ಸ್ಟಾರ್ ವಿಜಯ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿ ರಿಲೀಸ್ ಡೇಟ್ ಖಚಿತಪಡಿಸಿದ್ದಾರೆ. ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘A’ ಸರ್ಟಿಫಿಕೇಟ್ ಪಡೆದಿರುವ ಸಿನಿಮಾ ಇದೀಗ ಪ್ರದರ್ಶನಕ್ಕೆ ಸಜ್ಜಾಗಿದೆ.

ಈ ಚಿತ್ರವನ್ನು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಬಿಡುಗಡೆ ಘೋಷಣೆಯೊಂದಿಗೆ ಭಾವನಾತ್ಮಕ ಸಂದೇಶವನ್ನೂ ಹಂಚಿಕೊಂಡಿದೆ. “ಬೆಂಕಿಯಲ್ಲಿ ತಯಾರಾಗಿ, ಸಮಯದಲ್ಲಿ ರೂಪುಗೊಂಡ ಈ ಸಿನಿಮಾ ಇತಿಹಾಸ ಬರೆಯಲು ಸಜ್ಜಾಗಿದೆ” ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜನವರಿ 9ರಂದು ಬಿಡುಗಡೆಯಾಗಬೇಕಿದ್ದ ಚಿತ್ರವು ಕಾನೂನು ವಿವಾದಗಳು, ಸೆನ್ಸಾರ್ ಪ್ರಕ್ರಿಯೆ ಮತ್ತು ದೃಶ್ಯ ಸೋರಿಕೆ ಪ್ರಕರಣಗಳಿಂದ ಏಳು ತಿಂಗಳು ವಿಳಂಬವಾಗಿತ್ತು. ಇದೀಗ ಎಲ್ಲಾ ಅಡೆತಡೆಗಳನ್ನು ದಾಟಿ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವುದು ಅಭಿಮಾನಿಗಳಲ್ಲಿ ಭಾರಿ ಸಂಭ್ರಮ ಮೂಡಿಸಿದೆ.

ಇದು ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಚಿತ್ರದ ಮೇಲಿನ ನಿರೀಕ್ಷೆ ಗರಿಗೆದರಿದೆ. ಎಚ್. ವಿನೋದ್ ನಿರ್ದೇಶಿಸಿರುವ ಈ ರಾಜಕೀಯ ಆ್ಯಕ್ಷನ್ ಎಂಟರ್‌ಟೈನರ್‌ನಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದು, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಮಮಿತಾ ಬೈಜು ಹಾಗೂ ನರೇನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

CWRCಯಿಂದ ಕುಡಿಯುವ ನೀರಿಗೆ ಮಾತ್ರ ಆದೇಶ, ತಮಿಳುನಾಡಿಗೆ ನೀರು ಬಿಡುವ ಸೂಚನೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮಾತ್ರ ನಿರ್ದೇಶನ ನೀಡಿದ್ದು, ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಯಾವುದೇ ಆದೇಶ ನೀಡಿಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೆಹಲಿಯಲ್ಲಿ ನಡೆದ CWRC ಸಭೆಯಲ್ಲಿ ಕರ್ನಾಟಕದ ಜಲ ಪರಿಸ್ಥಿತಿಯನ್ನು ರಾಜ್ಯದ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಿತಿಯ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದರು.

ತಮಿಳುನಾಡು ಕಾವೇರಿ ನೀರು ಬಿಡುಗಡೆ ಮಾಡುವಂತೆ ಸಭೆಯಲ್ಲಿ ಒತ್ತಾಯ ಮಾಡಿತ್ತು. ಆದರೆ, ಸಮಿತಿಯು ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡುವಂತೆ ಮಾತ್ರ ಸೂಚನೆ ನೀಡಿದೆ. ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

“ತಮಿಳುನಾಡಿಗೆ ತಕ್ಷಣ ನೀರು ಬಿಡುವುದಿಲ್ಲ. ನೀರು ಬಿಡುವಂತೆ ಆದೇಶವೇ ಬಂದಿಲ್ಲ. ಯಾರು ಬೇಕಾದರೂ ಆರೋಪ ಮಾಡಬಹುದು. ಆದರೆ, ಎಷ್ಟು ನೀರು ಬಿಡುಗಡೆ ಮಾಡಲಾಗಿದೆ ಎಂಬುದು ಬಿಳಿಗುಂಡ್ಲು ಮಾಪನ ಕೇಂದ್ರದಲ್ಲೇ ಸ್ಪಷ್ಟವಾಗುತ್ತದೆ. ಸದ್ಯಕ್ಕೆ ತಮಿಳುನಾಡಿಗೆ 3 ಟಿಎಂಸಿ ನೀರು ಮಾತ್ರ ಹರಿದಿದ್ದು, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ನಮ್ಮ ಬಳಿ ಲಭ್ಯತೆ ಇಲ್ಲ” ಎಂದು ಸಚಿವರು ಹೇಳಿದರು.

ಮಂಡ್ಯ ಜಿಲ್ಲೆಯ ರೈತರಿಗೆ ನೀರು ಪೂರೈಕೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, CWRC ಕುಡಿಯುವ ನೀರಿನ ವಿಚಾರವನ್ನು ಮಾತ್ರ ಪ್ರಸ್ತಾಪಿಸಿದೆ. ರೈತರಿಗೆ ನೀರು ಪೂರೈಕೆ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ಬಳಿಕ ಸರ್ಕಾರದ ಮುಂದಿನ ನಿರ್ಧಾರವನ್ನು ತಿಳಿಸಲಾಗುವುದು ಎಂದು ಹೇಳಿದರು.

ಗ್ರಾಮದ ಮಧ್ಯೆ ತಲೆಬುರುಡೆ, ಮೂಳೆ, ಕುಂಕುಮ-ನಿಂಬೆ! ಅಮಾವಾಸ್ಯೆ ರಾತ್ರಿ ವಾಮಾಚಾರ ಶಂಕೆ; ಗೋಳೂರಿನಲ್ಲಿ ಭೀತಿ

0

ಮೈಸೂರು: ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ಅಮಾವಾಸ್ಯೆ ರಾತ್ರಿ ನಡೆದಿರುವ ಶಂಕಿತ ವಾಮಾಚಾರ ಪ್ರಕರಣ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಗ್ರಾಮದ ಮುಖ್ಯ ರಸ್ತೆಯಲ್ಲೇ ರಂಗೋಲೆ ಹಾಕಿ ಅದರ ಮಧ್ಯದಲ್ಲಿ ಮಾನವನ ತಲೆಬುರುಡೆ, ಹಸ್ತದ ಮೂಳೆ, ಕುಂಕುಮ ಹಾಗೂ ನಿಂಬೆಹಣ್ಣು ಇಡಲಾಗಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಸ್ಥಳೀಯರು ರಸ್ತೆ ಮಧ್ಯೆ ಈ ದೃಶ್ಯ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ ಅಮಾವಾಸ್ಯೆ ಇದ್ದ ಹಿನ್ನೆಲೆ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇಂತಹ ಕೃತ್ಯಗಳಿಂದ ಮಹಿಳೆಯರು ಹಾಗೂ ಮಕ್ಕಳು ಭಯಭೀತರಾಗಿದ್ದು, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮಸ್ಥ ಮುದ್ದುಮಾದಶೆಟ್ಟಿ, “ಇದು ನಮ್ಮ ಗ್ರಾಮದ ಮಧ್ಯಭಾಗದಲ್ಲೇ ನಡೆದಿರುವ ಗಂಭೀರ ಘಟನೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಆಡಳಿತ ಎಚ್ಚರಿಕೆ ವಹಿಸಬೇಕು” ಎಂದು ಒತ್ತಾಯಿಸಿದರು.

ಮಾಹಿತಿ ಪಡೆದ ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಹಿಂದಿನ ಉದ್ದೇಶ ಹಾಗೂ ಕೃತ್ಯ ಎಸಗಿದವರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಗಮನಾರ್ಹವಾಗಿ, ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಸಿವಿಲ್ ಪ್ರಕರಣ ತನ್ನ ಪರವಾಗಿ ತೀರ್ಪು ಬರಬೇಕೆಂಬ ಉದ್ದೇಶದಿಂದ ನ್ಯಾಯಾಧೀಶರ ಆಸನದ ಮೇಲೆ ಸಾಸಿವೆ ಚೆಲ್ಲಿ ಮಾಟಮಂತ್ರದ ಪ್ರಯತ್ನ ನಡೆಸಿದ ಆರೋಪದಲ್ಲಿ 65 ವರ್ಷದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದ ಘಟನೆ ಕೂಡ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.