Home Blog Page 332

ಕೆ.ಜೆ.ವಿ.ಎಸ್ ಜಿಲ್ಲಾ ಕಾರ್ಯದರ್ಶಿಯಾಗಿ ಎ.ಕೆ. ಮುಲ್ಲಾನವರ ಆಯ್ಕೆ

0

ಮುಂಡರಗಿ: ಅನೇಕ ವರ್ಷಗಳಿಂದ ಮಕ್ಕಳ ಶೈಕ್ಷಣಿಕ ಸುಧಾರಣೆ, ಮಕ್ಕಳಲ್ಲಿ ವಿಜ್ಞಾನ ಮನೋಭಾವನೆ ಬೆಳೆಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳ ಮೂಲಕ ಸಮಾಜಸೇವೆ ಮಾಡುತ್ತಿರುವ ಎ.ಕೆ. ಮುಲ್ಲಾನವರ ಅವರನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಗದಗ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಮಿತಿಯ ಕಾರ್ಯದರ್ಶಿ ಈ. ಬಸವರಾಜು ತಿಳಿಸಿದ್ದಾರೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯದಾದ್ಯಂತ ವಿವಿಧ ಜಿಲ್ಲೆ ಹಾಗೂ ತಾಲೂಕು ಘಟಕಗಳ ಮೂಲಕ ಶಿಕ್ಷಕರು ಮತ್ತು ಮಕ್ಕಳಿಗಾಗಿ ಶಿಬಿರಗಳನ್ನು ಆಯೋಜಿಸಿ, ವಿಜ್ಞಾನ ಚಿಂತನೆ ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಅಡಗಿರುವ ಮೂಢನಂಬಿಕೆಗಳನ್ನು ದೂರ ಮಾಡುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ. ರಾಜ್ಯ ಸಮಿತಿಯಲ್ಲಿ ವಿಜ್ಞಾನಿಗಳು, ವೈದ್ಯರು, ಉಪನ್ಯಾಸಕರು, ಚಿಂತಕರು ಹಾಗೂ ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡುತ್ತಾ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿ ವಾರ ಆನ್‌ಲೈನ್ ಸಭೆಗಳ ಮೂಲಕ ವಿವಿಧ ವಿಷಯಗಳ ಕುರಿತು ಅನುಭವಿಗಳಿಂದ ಮಾಹಿತಿ ಹಂಚಿಕೊಳ್ಳಲಾಗುತ್ತಿದ್ದು, ಈ ಕಾರ್ಯ ಕ್ರಮಬದ್ಧವಾಗಿ ಮುಂದುವರಿದಿದೆ ಎಂದು ಈ. ಬಸವರಾಜು ತಿಳಿಸಿದರು.

ಗದಗ ಜಿಲ್ಲೆಗೆ ಒಬ್ಬ ಉತ್ತಮ ಚಿಂತಕ ಹಾಗೂ ಸಂಘಟಕರಾದ ಎ.ಕೆ. ಮುಲ್ಲಾನವರರನ್ನು ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದು ಸಂತಸದ ವಿಚಾರ. ಅವರ ಸೇವೆ ಜಿಲ್ಲೆಯ ಮಕ್ಕಳಿಗೆ ಹಾಗೂ ಸಮಾಜಕ್ಕೆ ಲಾಭಕಾರಿಯಾಗಲಿ, ಸಮಿತಿಯ ಮೂಲಕ ಜನರಿಗೆ ಹಾಗೂ ಮಕ್ಕಳಿಗೆ ಉತ್ತಮ ಕಾರ್ಯಕ್ರಮಗಳು ದೊರೆಯಲಿ ಎಂದು ಅವರು ಅಭಿಪ್ರಾಯಪಟ್ಟರು.

SSLC ಫಲಿತಾಂಶ ಪ್ರಕಟ: 7 ಮಂದಿ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್! ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಫಲಿತಾಂಶ ಪ್ರಕಟವಾದ ನಂತರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರಗಳನ್ನು ಹಂಚಿಕೊಂಡರು.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ದಾಖಲೆಯ ಫಲಿತಾಂಶ ದಾಖಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು,

625ರಲ್ಲಿ 625 ಅಂಕಗಳನ್ನು ಗಳಿಸಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ ಹಾಗೂ ರಾಯಚೂರಿನ ಸುಖದೇವ್ ಈ ಸಾಧನೆ ಮಾಡಿದ್ದಾರೆ.

ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

ಉಳಿದಂತೆ ಮಂಡ್ಯ 5ನೇ ಸ್ಥಾನ (ಶೇ 97.45), ಶಿರಸಿ 6ನೇ ಸ್ಥಾನ (ಶೇ 97.21), ಹಾವೇರಿ 7ನೇ ಸ್ಥಾನ (ಶೇ 96.87), ಕೊಡಗು 8ನೇ ಸ್ಥಾನ (ಶೇ 96.70), ಶಿವಮೊಗ್ಗ 9ನೇ ಸ್ಥಾನ (ಶೇ 96.56), ವಿಜಯನಗರ 10ನೇ ಸ್ಥಾನ (ಶೇ 96.39), ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ (ಶೇ 95.84), ಧಾರವಾಡ 12ನೇ ಸ್ಥಾನ (ಶೇ 95.59), ಕೋಲಾರ 13ನೇ ಸ್ಥಾನ (ಶೇ 95.50) ಗಳಿಸಿವೆ.

  • ಬಾಗಲಕೋಟೆ 14ನೇ ಸ್ಥಾನ – 95.42%
  • ಬೆಂ.ಉತ್ತರ 15ನೇ ಸ್ಥಾನ – 95.34%
  • ಗದಗ 16ನೇ ಸ್ಥಾನ – 95.24%
  • ಚಿಕ್ಕಮಗಳೂರು 17ನೇ ಸ್ಥಾನ – 94.99%
  • ಬೆಳಗಾವಿ 18ನೇ ಸ್ಥಾನ – 94.75%
  • ದಾವಣಗೆರೆ 19ನೇ ಸ್ಥಾನ – 94.64%
  • ಮೈಸೂರು 20ನೇ ಸ್ಥಾನ – 94.50%
  • ರಾಯಚೂರು 21ನೇ ಸ್ಥಾನ – 94.41%

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕ ವೀಕ್ಷಿಸಬಹುದಾಗಿದೆ. ಜೊತೆಗೆ ‘KarnatakaOne’ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಪರಿಶೀಲಿಸಬಹುದು. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮತ್ತು ವಾಟ್ಸಾಪ್ ಮೂಲಕ ಫಲಿತಾಂಶದ ವಿವರಗಳನ್ನು ಮಂಡಳಿ ನೇರವಾಗಿ ಕಳುಹಿಸುತ್ತಿದೆ.

BREAKING: SSLC ಫಲಿತಾಂಶ ಪ್ರಕಟ: ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ

ಬೆಂಗಳೂರು: 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಬುಧವಾರ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ಫಲಿತಾಂಶ ಪ್ರಕಟವಾದ ನಂತರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರಗಳನ್ನು ಹಂಚಿಕೊಂಡರು.

ಈ ಬಾರಿ SSLC ಪರೀಕ್ಷೆಯಲ್ಲಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮೂವರು ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ), ಉತ್ಸವ ಪಾಟೀಲ (ಹಾಸನ) 625ರಲ್ಲಿ 625 ಅಂಕ ಪಡೆದವರಾಗಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕ ವೀಕ್ಷಿಸಬಹುದು. ಜೊತೆಗೆ ‘KarnatakaOne’ ಮೊಬೈಲ್ ಆ್ಯಪ್ನಲ್ಲಿಯೂ ಫಲಿತಾಂಶ ಲಭ್ಯವಿದೆ.

ಇದಲ್ಲದೆ, ವಿದ್ಯಾರ್ಥಿಗಳು ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಫಲಿತಾಂಶದ ವಿವರಗಳನ್ನು ಮಂಡಳಿ ನೇರವಾಗಿ ಎಸ್ಎಂಎಸ್ ಹಾಗೂ ವಾಟ್ಸಾಪ್ ಮೂಲಕ ಕಳುಹಿಸುತ್ತಿದೆ.

ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್‌ಮೇಲ್: 1.5 ಕೋಟಿ ಬೇಡಿಕೆ, ಯುವತಿ ವಿರುದ್ಧ ಎಫ್‌ಐಆರ್

ಬೆಂಗಳೂರು: ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಬಳಸಿ ಕ್ಲಿನಿಕ್ ಮಾಲೀಕರನ್ನು ಬ್ಲ್ಯಾಕ್‌ಮೇಲ್ ಮಾಡಿ ಕೋಟಿ ರೂ.ಗಳ ಬೇಡಿಕೆ ಇಟ್ಟಿರುವ ಘಟನೆ ಜಯನಗರದಲ್ಲಿ ನಡೆದಿದೆ

ನಗರದ ಬೆಂಗಳೂರು ಜಯನಗರ ಪ್ರದೇಶದಲ್ಲಿ ನಡೆದ ಈ ಪ್ರಕರಣದಲ್ಲಿ, ಮೇಕಪ್ ಕ್ಲಿನಿಕ್ ಮಾಲೀಕ ಕಾರ್ತಿಕ್ ಪುತಾ ಅವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ದೂರು ನೀಡಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರಿನ ಪ್ರಕಾರ, ಕ್ಲಿನಿಕ್ ಪ್ರಚಾರದ ಉದ್ದೇಶದಿಂದ ಕಾರ್ತಿಕ್ ಪುತಾ ಅವರು ಸಾಧನಾ ಶೆಟ್ಟಿಯನ್ನು ಸಂಪರ್ಕಿಸಿದ್ದರು. ನಂತರ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಖಾಸಗಿ ಫೋಟೋ ಮತ್ತು ವಿಡಿಯೋಗಳು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಈ ವಿಷಯವನ್ನು ಆಧಾರವಾಗಿಸಿಕೊಂಡು, 1.5 ಕೋಟಿ ರೂ. ನೀಡದಿದ್ದರೆ ಕುಟುಂಬಕ್ಕೆ ಮಾಹಿತಿ ಬಹಿರಂಗ ಮಾಡುವುದಾಗಿ ಸಾಧನಾ ಶೆಟ್ಟಿ ಬೆದರಿಕೆ ಹಾಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಭಯಗೊಂಡ ಕಾರ್ತಿಕ್, ಆನ್‌ಲೈನ್ ಮೂಲಕ 5 ಲಕ್ಷ ರೂ. ಹಾಗೂ ನಗದು ರೂಪದಲ್ಲಿ ಇನ್ನೂ 5 ಲಕ್ಷ ರೂ. ನೀಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ, ಒಂದು ಐಫೋನ್ ಕೂಡ ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೆಲ್ಲಾ ಆದರೂ ಮತ್ತೆ ಹೆಚ್ಚಿನ ಮೊತ್ತದ ಬೇಡಿಕೆ ಮುಂದುವರಿದಿದ್ದು, ಹಣ ನೀಡಲು ನಿರಾಕರಿಸಿದ ಬಳಿಕ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಕಾರ್ತಿಕ್ ಅವರ ಪತ್ನಿಗೆ ವಾಟ್ಸಾಪ್ ಮೂಲಕ ಕಳುಹಿಸಿರುವುದಾಗಿ ಆರೋಪಿಸಲಾಗಿದೆ. ಇದರಿಂದ ಕುಟುಂಬದಲ್ಲಿ ಕಲಹ ಉಂಟಾದ ಹಿನ್ನೆಲೆಯಲ್ಲಿ, ಕಾರ್ತಿಕ್ ಕೊನೆಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ದೂರು ಆಧರಿಸಿ ಪೊಲೀಸರು ಸಾಧನಾ ಶೆಟ್ಟಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ವಿಚಾರಣೆ ವೇಳೆ ತಮ್ಮ ಬಳಿ ಯಾವುದೇ ವಿಡಿಯೋ ಇಲ್ಲ ಎಂದು ಸಾಧನಾ ಶೆಟ್ಟಿ ಸ್ಪಷ್ಟಪಡಿಸಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನಕಲಿ ತೆರಿಗೆ ರಸೀದಿಗಳ ಮೂಲಕ ₹410 ಕೋಟಿ ವಂಚನೆ: ಆರೋಪಿ ಬಂಧನ

0

ಬೆಂಗಳೂರು: ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ನಕಲಿ ತೆರಿಗೆ ರಸೀದಿಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸುತ್ತಿದ್ದ ದೊಡ್ಡ ಜಾಲವನ್ನು ದಕ್ಷಿಣ ವಲಯ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತೌಕೀರ್ ಅಲಿಯಾಸ್ ಮೊಹಮ್ಮದ್ (42) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ತನಿಖೆಯಲ್ಲಿ, ಆರೋಪಿ ಇತರೆ ಸಹಚರರೊಂದಿಗೆ ಸೇರಿ ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ, ನಕಲಿ ತೆರಿಗೆ ರಸೀದಿಗಳನ್ನು ಸೃಷ್ಟಿಸುವ ಮೂಲಕ ವಂಚನೆ ನಡೆಸುತ್ತಿದ್ದುದಾಗಿ ಬಹಿರಂಗವಾಗಿದೆ. ಜಾಲವು ಒಟ್ಟು ಸುಮಾರು 410 ಕೋಟಿ ರೂಪಾಯಿ ವಂಚನೆ ನಡೆಸಿರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ಮೂರು ರಾಜ್ಯಗಳಲ್ಲಿ ಹತ್ತಾರು ನಕಲಿ ವ್ಯಾಪಾರ ಸಂಸ್ಥೆಗಳನ್ನು ತೆರೆಯಲಾಗಿದ್ದು, ಯಾವುದೇ ವಸ್ತುಗಳ ಸರಬರಾಜು ಮಾಡದೇ ಕೇವಲ ನಕಲಿ ಬಿಲ್ಗಳನ್ನು ಸೃಷ್ಟಿಸಿ, ಗುತ್ತಿಗೆದಾರರು ಹಾಗೂ ವ್ಯಾಪಾರಿಗಳಿಗೆ ನೀಡುತ್ತಿದ್ದರು. ಇದರ ಮೂಲಕ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಲಾಗುತ್ತಿತ್ತು.

ಬಂಧಿತನ ವಿಚಾರಣೆಯಲ್ಲಿ 410 ಕೋಟಿ ರೂಪಾಯಿ ವಂಚನೆಯ ಪೈಕಿ ಸುಮಾರು 102.5 ಕೋಟಿ ರೂಪಾಯಿ ನಕಲಿ ಇನ್ಪುಟ್ ತೆರಿಗೆ ಕ್ರೆಡಿಟ್ (ITC) ಆಗಿರುವುದು ಪತ್ತೆಯಾಗಿದೆ.

ಶಿರಸಿಯಲ್ಲಿ 500 ರೂ.ಗಾಗಿ ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ!

ಉತ್ತರ ಕನ್ನಡ: ಜಿಲ್ಲೆಯ ಶಿರಸಿಯಲ್ಲಿ ಕೇವಲ 500 ರೂಪಾಯಿ ಕೂಲಿ ಹಣದ ಬಾಕಿ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪ್ರಕರಣದ ಅಪರಾಧಿಗೆ ಶಿರಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಂಜುನಾಥ ಚೆನ್ನಯ್ಯ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾರೆ.

ಶಿರಸಿ ತಾಲೂಕಿನ ಸೋಂದಾ ಸಮೀಪದ ಕಮಟಗೇರಿ ಗ್ರಾಮದ ರವೀಶ್ ಚೆನ್ನಯ್ಯ ತೋಟ ಮತ್ತು ಗದ್ದೆ ಕೆಲಸಗಳ ಗುತ್ತಿಗೆ ಪಡೆಯುವ ಶೇರುಗಾರರಾಗಿದ್ದರು. ಅದೇ ಗ್ರಾಮದ ಮಂಜುನಾಥ ಚೆನ್ನಯ್ಯ ಅವರ ಬಳಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಕೂಲಿ ಹಣದ ಬಾಕಿ ವಿಚಾರವಾಗಿ ಇವರಿಬ್ಬರ ನಡುವೆ ಆಗಾಗ್ಗೆ ವಾಗ್ವಾದಗಳು ನಡೆಯುತ್ತಿದ್ದವು.

2025ರ ಆಗಸ್ಟ್ 8ರಂದು ಹಣದ ವಿಚಾರವಾಗಿ ಗಲಾಟೆ ಉಂಟಾದಾಗ, ರವೀಶ್ ಅವರು ಎರಡು ದಿನಗಳಲ್ಲಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆಗಸ್ಟ್ 14ರಂದು ಮತ್ತೆ ಕೆಲಸಕ್ಕೆ ಕರೆದ ಸಂದರ್ಭದಲ್ಲೇ ಹಳೆಯ ಬಾಕಿ ಹಣ ನೀಡದಿದ್ದುದಕ್ಕೆ ಕೋಪಗೊಂಡ ಮಂಜುನಾಥ, ರಾತ್ರಿ ವೇಳೆ ಕಬ್ಬಿಣದ ಗುದ್ದಲಿಯಿಂದ ರವೀಶ್ ಅವರ ತಲೆಗೆ ಬಲವಾಗಿ ಹೊಡೆದಿದ್ದ. ಪರಿಣಾಮವಾಗಿ ತೀವ್ರ ರಕ್ತಸ್ರಾವ ಉಂಟಾಗಿ ರವೀಶ್ ಸ್ಥಳದಲ್ಲೇ ಮೃತಪಟ್ಟಿದ್ದರು.

ತನಿಖೆ ವೇಳೆ ಆರೋಪಿಯ ಹಿಂದಿನ ಅಪರಾಧ ಚರಿತ್ರೆಯೂ ಬೆಳಕಿಗೆ ಬಂದಿದೆ. ಮಂಜುನಾಥ  ಈ ಹಿಂದೆ ತನ್ನ ಮಾವನನ್ನು ಕೊಲೆ ಮಾಡಿದ ಪ್ರಕರಣದಲ್ಲಿ 14 ವರ್ಷಗಳ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ನಂತರವೂ ಕ್ರಿಮಿನಲ್ ಪ್ರವೃತ್ತಿ ಬದಲಾಗಿಲ್ಲ ಎಂಬುದು ಈ ಘಟನೆಯಿಂದ ತಿಳಿದುಬಂದಿದೆ.

ಮೃತರ ಪತ್ನಿ ಚೇತನಾ ಚೆನ್ನಯ್ಯ ನೀಡಿದ ದೂರಿನ ಮೇರೆಗೆ ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರ ಮಹತ್ವದ ತೀರ್ಪು ನೀಡಿದ್ದಾರೆ.

ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆಯೊಂದಿಗೆ 25,000 ರೂಪಾಯಿ ದಂಡ ವಿಧಿಸಲಾಗಿದ್ದು, ಜೊತೆಗೆ ಮೃತರ ಪತ್ನಿಗೆ 50,000 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಕೇವಲ 500 ರೂಪಾಯಿ ವಿಚಾರವಾಗಿ ನಡೆದ ಈ ಹತ್ಯೆ ಪ್ರಕರಣಕ್ಕೆ ವಿಧಿಸಿದ ಕಠಿಣ ಶಿಕ್ಷೆ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ.

ಯೂರಿಯಾ ದುರುಪಯೋಗಕ್ಕೆ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ!

ಬೆಂಗಳೂರು: ಮಧ್ಯಪ್ರಾಚ್ಯದ ಉದ್ವಿಗ್ನತೆ ಹಿನ್ನೆಲೆ ರಸಗೊಬ್ಬರ ಕಚ್ಚಾ ವಸ್ತುಗಳ ಕೊರತೆಯ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಿರುವುದರಿಂದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ರೈತರು ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರ ಖರೀದಿಸಲು ಫಾರ್ಮರ್ಸ್ ಗುರುತು ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಕೃಷಿ ಇಲಾಖೆ ಈಗಾಗಲೇ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಪ್ರತಿಯೊಬ್ಬ ರೈತರೂ ಗುರುತು ಸಂಖ್ಯೆ ಪಡೆಯಬೇಕಾಗಿದೆ.

ಗೊಬ್ಬರ ತಯಾರಿಕೆಗೆ ಅಗತ್ಯವಿರುವ ನೈಸರ್ಗಿಕ ಅನಿಲ ಹಾಗೂ ಇತರೆ ಕಚ್ಚಾ ವಸ್ತುಗಳು ಕತಾರ್, ಸೌದಿ ಅರೇಬಿಯಾ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳಿಂದ ಬರುತ್ತವೆ. ಇವುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ರಾಜ್ಯದಲ್ಲಿ ಗೊಬ್ಬರ ಕೊರತೆ ಎದುರಾಗುವ ಸಾಧ್ಯತೆ ಇದೆ.

ಇದೇ ವೇಳೆ ರೈತರು ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಬಳಕೆ ಮಾಡುತ್ತಿರುವುದು ಹಾಗೂ ಕೆಲವು ಕೈಗಾರಿಕೆಗಳಲ್ಲಿ ಅಕ್ರಮ ಬಳಕೆ ನಡೆಯುತ್ತಿರುವುದು ಕಂಡುಬಂದಿದೆ. ಜೊತೆಗೆ ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿ ಕೃತಕ ಅಭಾವ ಸೃಷ್ಟಿಸುವ ಪ್ರವೃತ್ತಿಯೂ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಗುರುತು ಸಂಖ್ಯೆಯ ಮೂಲಕ ರೈತರ ಜಮೀನಿನ ಪ್ರಮಾಣಕ್ಕೆ ಅನುಗುಣವಾಗಿ ಎಷ್ಟು ಗೊಬ್ಬರ ಬೇಕು ಎಂಬುದನ್ನು ಲೆಕ್ಕ ಹಾಕಿ ಅಷ್ಟೇ ಪ್ರಮಾಣದಲ್ಲಿ ವಿತರಣೆ ಮಾಡಲು ಕೃಷಿ ಇಲಾಖೆ ಮುಂದಾಗಿದೆ.

ರಾಜ್ಯಕ್ಕೆ ಈ ವರ್ಷ ಸುಮಾರು 30 ಲಕ್ಷ ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಅದರಲ್ಲಿ ಯೂರಿಯಾ ಪ್ರಮುಖ ಪಾಲು ಹೊಂದಿದ್ದು, ಸದ್ಯಕ್ಕೆ ಅಗತ್ಯ ಪ್ರಮಾಣದ ದಾಸ್ತಾನು ಇರುವುದಾಗಿ ಮೂಲಗಳು ತಿಳಿಸಿವೆ.

 

ಇಂದು ಮಧ್ಯಾಹ್ನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 8 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಇಂದೇ ನಿರ್ಧಾರ!

ಬೆಂಗಳೂರು: ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಳ್ಳಲಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.

ಸುದ್ದಿಗೋಷ್ಠಿ ಬಳಿಕ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣಗಳಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಹೈಕೋರ್ಟ್ ಆದೇಶದ ಹಿನ್ನೆಲೆ ಈ ಬಾರಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಬದಲಾಗಿ ಅಂಕ ನೀಡಲಾಗಿದೆ. ಇದರ ಪರಿಣಾಮವಾಗಿ 525 ಅಂಕಗಳ ಬದಲಿಗೆ 625 ಅಂಕಗಳಿಗೆ ಫಲಿತಾಂಶ ಪ್ರಕಟಿಸಲಾಗುತ್ತಿದೆ.

ಈ ವರ್ಷ ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ರಾಜ್ಯಾದ್ಯಂತ 2,871 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಈ ಬಾರಿ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿ ಡಿಜಿಟಲ್ ರೂಪದಲ್ಲಿಯೂ ಲಭ್ಯವಾಗಲಿದೆ. ಮಧ್ಯಾಹ್ನ 12 ಗಂಟೆಯ ನಂತರ ಡಿಜಿಲಾಕರ್ ಜಾಲತಾಣ ಹಾಗೂ ಇತರೆ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹಾಗೇ ಕರ್ನಾಟಕ ಒನ್ ಮೊಬೈಲ್ ಅನ್ವಯಿಕದಲ್ಲೂ ಫಲಿತಾಂಶ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಲಕ್ಷಾಂತರ ವಿದ್ಯಾರ್ಥಿಗಳ ನಿರೀಕ್ಷೆಗೆ ಇಂದು ತೆರೆ ಬೀಳಲಿದೆ.

ತೆಕ್ಕಲಕೋಟೆಯಲ್ಲಿ ಸಿಲಿಂಡರ್ ಸ್ಫೋಟ, ಹೋಟೆಲ್ ಭಸ್ಮ: ಬಾಲಕನಿಗೆ ಗಂಭೀರ ಗಾಯ!

ಬಳ್ಳಾರಿ: ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದಲ್ಲಿ ತಡರಾತ್ರಿ ಅನಿಲ ಸಿಲಿಂಡರ್ ಸ್ಫೋಟದಿಂದ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಈರಣ್ಣ ಅವರಿಗೆ ಸೇರಿದ ಹೋಟೆಲ್‌ನಲ್ಲಿ ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಎರಡು ಅನಿಲ ಸಿಲಿಂಡರ್‌ಗಳು ಏಕಾಏಕಿ ಸ್ಫೋಟಗೊಂಡ ಪರಿಣಾಮ ಹೋಟೆಲ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.

ಘಟನೆಯ ವೇಳೆ ಹೋಟೆಲ್‌ನಲ್ಲಿ ಈರಣ್ಣನ ಕುಟುಂಬದ 9 ಮಂದಿ ಮಲಗಿದ್ದರೆಂದು ತಿಳಿದುಬಂದಿದ್ದು, ಅದೃಷ್ಟವಶಾತ್ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ 10 ವರ್ಷದ ಬಾಲಕ ಶ್ರೀನಿವಾಸ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನಿಗೆ ಬೆನ್ನು, ಕೈ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ತಕ್ಷಣ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಗ್ನಿ ಅವಘಡದ ತೀವ್ರತೆಗೆ ಹೋಟೆಲ್‌ನಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದು, ಹೋಟೆಲ್ ಮಾಲೀಕರ ಜೀವನೋಪಾಯಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೆ ಸಹ ವ್ಯಾಪಿಸಿ, ಎರಡು–ಮೂರು ಅಂಗಡಿಗಳೊಂದಿಗೆ ಟೈಯರ್ ಅಂಗಡಿಯೂ ಹೊತ್ತಿ ಉರಿದಿದೆ.

ಘಟನೆ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.

ಫೇಸ್‌ಬುಕ್‌ನಲ್ಲಿ ಕರವೇ ಅಧ್ಯಕ್ಷರ ವಿರುದ್ಧ ನಿಂದನೆ ಪೋಸ್ಟ್: ಮೂವರ ಮೇಲೆ ಪ್ರಕರಣ ದಾಖಲು

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಪದ ಬಳಸಿ ನಿಂದನೆ ಮಾಡಿ, ಬೆದರಿಕೆ ಹಾಕಿದ ಆರೋಪದ ಮೇರೆಗೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕರವೇ ಬೆಂಗಳೂರು ಘಟಕದ ಉಪಾಧ್ಯಕ್ಷ ಪಿ.ಎನ್. ಕಾರ್ತಿಕ್ ನೀಡಿದ ದೂರಿನ ಆಧಾರದ ಮೇಲೆ ಮಹೇಶ್ ವಿಕ್ರಮ್ ಹೆಗ್ಡೆ, ಕೆ.ಬಿ. ಮುರುಳಿಧರ ಮತ್ತು ಸುಭಾಷ್ ಮಾಳಿ ಸೇರಿದಂತೆ ಕೆಲವರ ವಿರುದ್ಧ ಏಪ್ರಿಲ್ 18ರಂದು ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ನಾರಾಯಣಗೌಡ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವಕ್ಕೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.

ಇನ್ನೊಂದೆಡೆ ಕರವೇ ಮಹಿಳಾ ಕಾರ್ಯಕರ್ತೆ ಸಂಗೀತಾ ಶೆಟ್ಟಿ ನೀಡಿದ ಮತ್ತೊಂದು ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಫೇಸ್‌ಬುಕ್ ಖಾತೆಯೊಂದರಲ್ಲಿ ನಾರಾಯಣಗೌಡ ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದಾಗಿ ಆರೋಪಿಸಲಾಗಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳ ದುರುಪಯೋಗದ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಅಗತ್ಯವೆಂಬ ಮಾತುಗಳು ಕೇಳಿಬರುತ್ತಿವೆ.