Home Blog Page 35

ಜು. 12ರಿಂದ ಜಿಲ್ಲಾದ್ಯಂತ ಹಸಿರು ಅಭಿಯಾನ

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಹಸಿರು ಪರಂಪರೆಯನ್ನು ಉಳಿಸುವ ಉದ್ದೇಶದಿಂದ ರೋಟರಿ ಜಿಲ್ಲಾ 3170 ವತಿಯಿಂದ ಜುಲೈ 12ರಿಂದ 19ರವರೆಗೆ ಜಿಲ್ಲಾದ್ಯಂತ ಬೃಹತ್ ವೃಕ್ಷಾರೋಪಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ತಿಳಿಸಿದರು.

ನಗರದ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಕೇವಲ ಗಿಡ ನೆಡುವ ಕಾರ್ಯಕ್ರಮವಲ್ಲ; ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿಸುವ ಹಾಗೂ ಮುಂದಿನ ಪೀಳಿಗೆಗೆ ಹಸಿರು ಪರಂಪರೆಯನ್ನು ಉಳಿಸುವ ಮಹತ್ವದ ಅಭಿಯಾನವಾಗಿದೆ ಎಂದರು.

“ಒಬ್ಬ ರೋಟೇರಿಯನ್ – ಒಂದು ಮರ – ಒಂದು ಶಾಶ್ವತ ಪರಂಪರೆ” ಎಂಬ ಧ್ಯೇಯದಡಿ ಪ್ರತಿಯೊಬ್ಬ ರೋಟೇರಿಯನ್ ಕನಿಷ್ಠ ಒಂದು ಗಿಡ ನೆಟ್ಟು ಅದರ ಸಂರಕ್ಷಣೆಯ ಹೊಣೆ ಹೊರುವ ಸಂಕಲ್ಪ ಕೈಗೊಂಡಿದ್ದಾರೆ. ಸ್ಥಳೀಯ ಪರಿಸರಕ್ಕೆ ಹೊಂದುವ ದೇಶೀ ಜಾತಿಯ ಸಸಿಗಳಿಗೆ ಆದ್ಯತೆ ನೀಡಲಾಗಿದ್ದು, ಶಾಲೆಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೃಕ್ಷಾರೋಪಣ ನಡೆಯಲಿದೆ ಎಂದು ಹೇಳಿದರು.

ಗಿಡ ನೆಡುವುದರ ಜೊತೆಗೆ ಅವುಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ನಿಯಮಿತವಾಗಿ ನೀರುಣಿಸುವುದು, ಬೇಲಿ ಅಳವಡಿಸುವುದು ಹಾಗೂ ನಿರಂತರ ಮೇಲ್ವಿಚಾರಣೆ ನಡೆಸಲಾಗುವುದು. ಪರಿಸರ ಸಂರಕ್ಷಣೆಗಾಗಿ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಈ ಅಭಿಯಾನದಲ್ಲಿ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

ಅಭಿಯಾನದಲ್ಲಿ ರೋಟರಾಕ್ಟ್ ಹಾಗೂ ಇಂಟರಾಕ್ಟ್ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸರ್ಕಾರಿ ಇಲಾಖೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಪರಿಸರ ಪ್ರೇಮಿಗಳು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದು, ಜೀವ ವೈವಿಧ್ಯತೆ ವೃದ್ಧಿ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶೈಲೇಂದ್ರ ಬಿರಾದಾರ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಡಾ. ಆನಂದ ನರಸಣ್ಣವರ, ಎಸ್.ಪಿ. ಹಿರೇಮಠ, ಷಣ್ಮುಖಪ್ಪ ಕವಲೂರ ಉಪಸ್ಥಿತರಿದ್ದರು. ಸುರೇಶ ಕುಂಬಾರ ಉಪನ್ಯಾಸ ನೀಡಿದರು. ಕ್ಲಬ್ ಕಾರ್ಯದರ್ಶಿ ಅಕ್ಷಯ ಶೆಟ್ಟಿ ಸ್ವಾಗತಿಸಿ ವಂದಿಸಿದರು.

“ಗಿಡ ನೆಡುವುದಷ್ಟೇ ಸಾಲದು; ಅದನ್ನು ಮರವಾಗಿ ಬೆಳೆಸುವ ಹೊಣೆಗಾರಿಕೆಯೇ ನಿಜವಾದ ಪರಿಸರ ಸೇವೆ.”

— ಡಾ. ಪ್ರದೀಪ ಉಗಲಾಟ

ಜಗತ್ತಿನ ಎಲ್ಲ ಸಮಸ್ಯೆಗಳಿಗೆ ವಚನಸಾಹಿತ್ಯದಲ್ಲೇ ಪರಿಹಾರ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನ ಪ್ರತಿಯೊಂದು ಸಮಸ್ಯೆಗೆ ವಚನಸಾಹಿತ್ಯದಲ್ಲಿಯೇ ಪರಿಹಾರ ಅಡಗಿದ್ದು, ಬಸವಾದಿ ಶಿವಶರಣರ ಕಾಯಕ, ಸಮಾನತೆ ಮತ್ತು ದಾಸೋಹ ತತ್ವಗಳು ವಿಶ್ವಶಾಂತಿಯ ದಾರಿದೀಪವಾಗಿವೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ನಗರದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ ಆಯೋಜಿಸಿದ್ದ 2805ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಸವಾದಿ ಶಿವಶರಣರ ವಚನಗಳು ಜಾತಿ, ಮತ, ಪಂಥ, ಮೌಢ್ಯತೆ ಹಾಗೂ ಭೇದಭಾವಗಳನ್ನು ತೊಡೆದುಹಾಕಿ ಮಾನವಕುಲ ಒಂದೇ ಎಂಬ ಸಂದೇಶ ಸಾರುತ್ತವೆ. ಸಹಕಾರ, ಸಹಬಾಳ್ವೆ ಮತ್ತು ಶಾಂತಿಯ ಬದುಕಿಗೆ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕೆಸಿಸಿ ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳಾದ ಎಸ್.ವಿ. ಪಾಟೀಲ (ಮುಂಡರಗಿ) ಅವರು, ಸಹಕಾರ ಚಳುವಳಿಯ ವಿಶ್ವಮಟ್ಟದ ಬೆಳವಣಿಗೆ, ಭಾರತದಲ್ಲಿ ಅದರ ವಿಸ್ತರಣೆ ಹಾಗೂ ಕರ್ನಾಟಕದ ಇಂದಿನ ಸಹಕಾರ ಕ್ಷೇತ್ರದ ಸ್ಥಿತಿಗತಿಗಳ ಕುರಿತು ವಿವರಿಸಿದರು.

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಸಂಗಮ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ, ಸಹಕಾರ ಎನ್ನುವುದು ಸಮಾಜಕ್ಕಷ್ಟೇ ಅಲ್ಲ, ಮಾನವ ದೇಹದ ಪ್ರತಿಯೊಂದು ಅಂಗದ ಕಾರ್ಯನಿರ್ವಹಣೆಯಲ್ಲೂ ಅಡಗಿದೆ. ಪರಸ್ಪರ ಸಹಕಾರವಿಲ್ಲದಿದ್ದರೆ ಯಾವುದೇ ವ್ಯವಸ್ಥೆ ಸುಗಮವಾಗಿ ಸಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್. ಚೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆಗೈದ ಸ್ವಾತಿ ಕರಮುಡಿ, ವಿರೂಪಾಕ್ಷಪ್ಪ ನವಲಗುಂದ, ಪೂಜಾ ಗುಗ್ಗರಿ ಹಾಗೂ ರೋಹನ್ ಜೋಗಿನ ಅವರನ್ನು ಪ್ರತಿಭಾ ಸನ್ಮಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಚನ ಸಂಗೀತವನ್ನು ಸಾಯಿಪ್ರಸಾದ ಬಡಿಗೇರ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಖುಷಿ ಕಟ್ಟೆಕಾರ, ವಚನ ಚಿಂತನವನ್ನು ಕೋಮಲ ಮುಗಳಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಡಾ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಕುಟುಂಬ ಹಾಗೂ ಕೊಟ್ರೇಶ ದಾನಪ್ಪ ಮೆಣಸಿನಕಾಯಿ ಕುಟುಂಬ ವಹಿಸಿಕೊಂಡಿದ್ದರು.

ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಅಧ್ಯಕ್ಷ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

“ಬಸವಾದಿ ಶಿವಶರಣರ ವಚನಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸಿ, ಶಾಂತಿ ಮತ್ತು ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿವೆ.”

— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಗದಗಕ್ಕೆ ಸಮಾಜಸೇವಕಿ ವಿರಾಜ್ ಕೋಟಕ್ ಭೇಟಿ

ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿಯ 53ನೇ ಸೇವಾ ದೀಕ್ಷಾ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಹಾವೇರಿಯ ಸಮಾಜಸೇವಕಿ ಹಾಗೂ ಇನ್ನರ್‌ವೀಲ್ ಜಿಲ್ಲಾ ನಾಯಕಿ ಶ್ರೀಮತಿ ವಿರಾಜ್ ಕೋಟಕ್ ಅವರು ಇಂದು ನಗರಕ್ಕೆ ಆಗಮಿಸಲಿದ್ದಾರೆ.

ಶ್ರೀಮತಿ ವಿರಾಜ್ ಕೋಟಕ್ ಅವರು 1996ರಲ್ಲಿ ಇನ್ನರ್‌ವೀಲ್ ಕ್ಲಬ್ ಆಫ್ ಹಾವೇರಿಗೆ ಸೇರ್ಪಡೆಯಾಗಿ, ಅಧ್ಯಕ್ಷೆ, ಜಿಲ್ಲಾ ಸಂಪಾದಕಿ, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಖಜಾಂಚಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. “ದಿಶಾ”, “ಮೈತ್ರಿ” ಸೇರಿದಂತೆ ಹಲವು ಸಮಾಜಮುಖಿ ಯೋಜನೆಗಳ ಮೂಲಕ ಸಾವಿರಾರು ಮಕ್ಕಳಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ನೆರವು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಹಾವೇರಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ, ಮಹಿಳಾ ಸಬಲೀಕರಣ, ಕಿಶೋರಿಯರ ಆರೋಗ್ಯ ಜಾಗೃತಿ ಸೇರಿದಂತೆ ಅನೇಕ ಸೇವಾ ಕಾರ್ಯಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಜ್ಯೋತಿ ಮಹಿಳಾ ಮಂಡಳದ ಸಂಸ್ಥಾಪಕ ಅಧ್ಯಕ್ಷೆ, ಪ್ರಿಯದರ್ಶಿನಿ ಮಹಿಳಾ ಬ್ಯಾಂಕ್‌ನ ಪ್ರವರ್ತಕ ನಿರ್ದೇಶಕಿ ಹಾಗೂ ಜಾಗೃತಿ ಲೇಡೀಸ್ ಅಸೋಸಿಯೇಷನ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಸದಸ್ಯೆಯೂ ಆಗಿರುವ ವಿರಾಜ್ ಕೋಟಕ್ ಅವರು, ವಿವಿಧ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಇನ್ನರ್‌ವೀಲ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘಟನಾ ಕೌಶಲ್ಯಕ್ಕೆ ಮೆಚ್ಚುಗೆ ಪಡೆದಿದ್ದಾರೆ.

ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಆಯೋಜಿಸಿರುವ ಪದಗ್ರಹಣ ಸಮಾರಂಭದಲ್ಲಿ ಅವರು ಇನ್‌ಸ್ಟಾಲಿಂಗ್ ಆಫೀಸರ್ ಆಗಿ ಭಾಗವಹಿಸಲಿದ್ದು, ಗದಗ ಜಿಲ್ಲೆಗೆ ಆಗಮಿಸುತ್ತಿರುವ ಅವರನ್ನು ಕ್ಲಬ್ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಗಿದೆ.

ಜಯಘೋಷದ ನಡುವೆ ದುರ್ಗಾದೇವಿ ಮಹಾರಥೋತ್ಸವ ವೈಭವ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಂಗಾಪೂರಪೇಟೆಯ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಅದ್ಧೂರಿ ಹಾಗೂ ಭಕ್ತಿಭಾವದಿಂದ ನೆರವೇರಿತು.

ಸಂಜೆ 6.12 ಗಂಟೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದ ಬಳಿಕ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗಂಗಾಪೂರಪೇಟೆಯಿಂದ ಹೊರಟ ಮಹಾರಥವು ಹೊಂಬಳನಾಕಾ ಪಾದಗಟ್ಟೆಯವರೆಗೆ ಸಂಚರಿಸಿತು. ರಥ ಸಾಗುವ ಮಾರ್ಗದುದ್ದಕ್ಕೂ ನೆರೆದಿದ್ದ ಭಕ್ತರು ಜೈ ದುರ್ಗಾದೇವಿ ಎಂಬ ಜಯಘೋಷ ಮೊಳಗಿಸುತ್ತಾ ಉತ್ತತ್ತಿ ಮತ್ತು ಬಾಳೆಹಣ್ಣುಗಳನ್ನು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವದ ಅಂಗವಾಗಿ ಜೂನ್ 28ರಿಂದಲೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಮಹಾರಥೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನದಿಂದಲೇ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಹರಕೆ ತೀರಿಸಿದರು.

ಇಂದಿನ ಕಾರ್ಯಕ್ರಮಗಳು

ಜಾತ್ರಾ ಮಹೋತ್ಸವದ ಅಂಗವಾಗಿ ಜುಲೈ 9ರಂದು ಲಘು ರಥೋತ್ಸವ, ಜುಲೈ 10ರಂದು ಸಾಮೂಹಿಕ ವಿವಾಹ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ಹೋಮ-ಹವನ, ಧಾರ್ಮಿಕ ಉಪನ್ಯಾಸಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸಿದ್ದಪ್ಪ ಪಲ್ಲೇದ ತಿಳಿಸಿದ್ದಾರೆ.

ಶಿಕ್ಷಕಿ ಬೈದರೆಂದು ಮನನೊಂದು 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ಬೆಂಗಳೂರು: ಶಿಕ್ಷಕಿ ಬೈದರು ಎಂಬ ವಿಚಾರಕ್ಕೆ ಮನನೊಂದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಮರಸೂರು ಮಡಿವಾಳದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಮಧುಶ್ರೀ ಎಂದು ಗುರುತಿಸಲಾಗಿದೆ. ಆಕೆ ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಮಾಹಿತಿ ಪ್ರಕಾರ, ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗ್ಗೆ ಪೋಷಕರು ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ವಿದ್ಯಾರ್ಥಿನಿ ಬರೆದಿದ್ದ ಡೆತ್‌ನೋಟ್‌ ಕೂಡ ಪತ್ತೆಯಾಗಿದೆ.

ಡೆತ್‌ನೋಟ್‌ನಲ್ಲಿ ಶಾಲೆಯಲ್ಲಿ ನಡೆದ ಘಟನೆಯಿಂದ ತೀವ್ರ ನೋವಾಗಿದೆ ಎಂದು ವಿದ್ಯಾರ್ಥಿನಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ, ಈ ಅವಮಾನವನ್ನು ಸಹಿಸಿಕೊಂಡು ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾಳೆ ಎಂದು ತಿಳಿದುಬಂದಿದೆ.

ಅಲ್ಲದೆ, ಅಮ್ಮ, ಅಕ್ಕ, ತಂಗಿ ಹಾಗೂ ತಮ್ಮನದ್ದು ಯಾವುದೇ ತಪ್ಪಿಲ್ಲ. ಯಾರೂ ತನ್ನ ತಾಯಿಯನ್ನು ಬೈಯಬಾರದು, ಎಲ್ಲರೂ ತನ್ನನ್ನು ಕ್ಷಮಿಸಬೇಕು ಎಂದು ವಿದ್ಯಾರ್ಥಿನಿ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‌ನೋಟ್‌ ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇನ್ನರ್‌ವೀಲ್‌ಗೆ ಹೊಸ ಸಾರಥಿಗಳ ಪದಗ್ರಹಣ

ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು ಸಂಸ್ಥೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ.

ಅಧ್ಯಕ್ಷೆ- ಮಂಜುಳಾ ಅಕ್ಕಿ

ಲಕ್ಷ್ಮೇಶ್ವರ ಮೂಲದ ಶ್ರೀಮತಿ ಮಂಜುಳಾ ಎಫ್. ಅಕ್ಕಿ ಅವರು ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಬಿ.ಎ., ಬಿ.ಎಡ್. ಹಾಗೂ ಎಂ.ಎ. ಪದವೀಧರರಾಗಿರುವ ಅವರು 2014ರಿಂದ ಇನ್ನರ್‌ವೀಲ್ ಕ್ಲಬ್‌ನ ಸಕ್ರಿಯ ಸದಸ್ಯೆಯಾಗಿದ್ದು, ಐಎಸ್‌ಒ, ಜಂಟಿ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷೆ ಸೇರಿದಂತೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಕಾರ್ಯದರ್ಶಿ – ಪೂಜಾ ಭೂಮಾ

ಶ್ರೀಮತಿ ಪೂಜಾ ಕಿರಣ್ ಭೂಮಾ ಅವರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಬಿ.ಕಾಂ. ಹಾಗೂ ಎಂ.ಕಾಂ. ಪದವೀಧರರಾಗಿರುವ ಅವರು ಗದುಗಿನ ಉದ್ಯಮಿಗಳಾದ ಕಿರಣ್ ಭೂಮಾ ಅವರ ಧರ್ಮಪತ್ನಿಯಾಗಿದ್ದು, ಶುಭಂ ಜುವೆಲರ್ಸ್ ಸಂಸ್ಥೆಯ ಪ್ರೊಪ್ರೈಟರ್‌ ಆಗಿದ್ದಾರೆ. ಕ್ಲಬ್‌ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು ಓದು ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದಾರೆ.

ಖಜಾಂಚಿ – ವೀಣಾ ಕಾವೇರಿ

ಶ್ರೀಮತಿ ವೀಣಾ ಕಾವೇರಿ ಅವರು ಖಜಾಂಚಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎಂ.ಎಸ್‌ಸಿ., ಬಿ.ಎಡ್. ಪದವೀಧರರಾಗಿರುವ ಅವರು ಶಿಕ್ಷಕಿಯಾಗಿ ಹಾಗೂ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕ್ಲಬ್‌ನ ಸಕ್ರಿಯ ಸದಸ್ಯೆಯಾಗಿದ್ದು, ಕಳೆದ ಸಾಲಿನಲ್ಲಿ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದರು.

ಐಎಸ್‌ಒ – ವಿದ್ಯಾ ಶಿವನಗುತ್ತಿ

ಶ್ರೀಮತಿ ವಿದ್ಯಾ ಶಿವನಗುತ್ತಿ ಅವರು ಐಎಸ್‌ಒ ಆಗಿ ಸೇವೆ ಸಲ್ಲಿಸಲಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ್ದ ಅವರು ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. “ಅಕ್ಕನ ಬಳಗ”ದ ಸಕ್ರಿಯ ಸದಸ್ಯೆಯಾಗಿರುವ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಂಪಾದಕಿ – ಮೀನಾಕ್ಷಿ ಕೊರವನವರ

ಶ್ರೀಮತಿ ಮೀನಾಕ್ಷಿ ಕೊರವನವರ ಅವರು ಸಂಸ್ಥೆಯ ಸಂಪಾದಕಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿರುವ ಅವರು ಇನ್ನರ್‌ವೀಲ್ ಕ್ಲಬ್ ಹಾಗೂ ಕದಳಿ ವೇದಿಕೆಯ ಸಕ್ರಿಯ ಸದಸ್ಯೆಯಾಗಿದ್ದು, ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತೋಟಗಾರಿಕೆ ಮತ್ತು ಚಿತ್ರಕಲೆ ಅವರ ಹವ್ಯಾಸಗಳಾಗಿವೆ.

ನೂತನ ಪದಾಧಿಕಾರಿಗಳ ತಂಡದ ನೇತೃತ್ವದಲ್ಲಿ ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿ ಮತ್ತಷ್ಟು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ.

ಅರ್ಧಕ್ಕೆ ನಿಂತ ಸೇತುವೆ ಕಾಮಗಾರಿ..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಗ್ಲಿ–ದೊಡ್ಡೂರ ರಸ್ತೆಯ ಮಧ್ಯೆ ನಿರ್ಮಾಣವಾಗುತ್ತಿರುವ ಕಿರು ಸೇತುವೆ ಕಾಮಗಾರಿ ವಿಳಂಬವಾಗಿರುವ ಪರಿಣಾಮ ಸಾರ್ವಜನಿಕರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿಗಾಗಿ ನಿರ್ಮಿಸಿರುವ ತಾತ್ಕಾಲಿಕ ಕಚ್ಚಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರತಿದಿನ ವಾಹನ ಸವಾರರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಲಕ್ಷ್ಮೇಶ್ವರದಿಂದ ಶಿಗ್ಲಿ, ಸೂರಣಗಿ, ಬಾಳೆಹೊಸೂರು ಮಾರ್ಗವಾಗಿ ಅನ್ಯ ಜಿಲ್ಲೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ಪಿಡಬ್ಲ್ಯುಡಿ ರಸ್ತೆ ಪ್ರಮುಖ ಸಂಚಾರ ಮಾರ್ಗವಾಗಿದೆ. ಲಕ್ಷ್ಮೇಶ್ವರ–ದೊಡ್ಡೂರ ರಸ್ತೆ ಹಾಳಾಗಿರುವ ಕಾರಣ ಹೆಚ್ಚಿನ ವಾಹನಗಳು ಇದೇ ಮಾರ್ಗವನ್ನು ಅವಲಂಬಿಸಿವೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸರಕು ಸಾಗಣೆ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ.

ಸೇತುವೆ ಕಾಮಗಾರಿಗಾಗಿ ನಿರ್ಮಿಸಿರುವ ಪರ್ಯಾಯ ಕಚ್ಚಾ ರಸ್ತೆಯಲ್ಲಿ ಮರಳು, ಖಡಿ, ಎಂ-ಸ್ಯಾಂಡ್ ಮತ್ತು ಮಣ್ಣನ್ನು ಹೊತ್ತ ಓವರ್‌ಲೋಡ್ ಲಾರಿಗಳ ನಿರಂತರ ಓಡಾಟದಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಪರಿಣಾಮ ವಾಹನಗಳು ಗುಂಡಿ-ಗುಂಡಿಗಳಲ್ಲಿ ಎದ್ದುಬಿದ್ದು ಸಾಗುತ್ತಿವೆ. ಮಳೆ ಬಂದರೆ ರಸ್ತೆ ಕೆಸರುಮಯವಾಗಿ ವಾಹನಗಳು ಸಿಲುಕಿಕೊಳ್ಳುತ್ತಿದ್ದು, ಕೆಲವೊಮ್ಮೆ ಗಂಟೆಗಟ್ಟಲೆ ಸಂಚಾರ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ.

ಇತ್ತೀಚೆಗೆ ಇದೇ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂದಕಕ್ಕೆ ಜಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇಷ್ಟೊಂದು ಗಂಭೀರ ಅಪಘಾತ ನಡೆದಿದ್ದರೂ ಗುತ್ತಿಗೆದಾರರು, ಪಿಡಬ್ಲ್ಯುಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಸುಮಾರು ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಿರು ಸೇತುವೆ ಕಾಮಗಾರಿಗೆ ಮಾರ್ಚ್ ತಿಂಗಳಲ್ಲೇ ಕಾರ್ಯಾದೇಶ ನೀಡಲಾಗಿತ್ತು. ಇಲಾಖೆಯು ಆರು ತಿಂಗಳ ಕಾಲಾವಕಾಶ ನೀಡಿರುವುದರಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಸೇತುವೆ ನಿರ್ಮಾಣದ ಜೊತೆಗೆ ಪರ್ಯಾಯ ರಸ್ತೆಯನ್ನೂ ಸುಗಮವಾಗಿ ನಿರ್ವಹಿಸಬೇಕಿದ್ದರೂ ನಿರ್ಲಕ್ಷ್ಯ ವಹಿಸಿರುವುದರಿಂದ ಸಾರ್ವಜನಿಕರ ಪರದಾಟ ಹೆಚ್ಚಾಗಿದೆ.

ಸೂರಣಗಿ ಗ್ರಾಮದ ಮಾಜಿ ತಾಪಂ ಸದಸ್ಯ ಕೋಟೆಪ್ಪ ವರ್ದಿ ಹಾಗೂ ಬಾಳೆಹೊಸೂರಿನ ಫಕ್ಕಿರೇಶ ಮ್ಯಾಟಣ್ಣವರ ಮಾತನಾಡಿ, ಮತ್ತೊಂದು ಅಪಘಾತ ಸಂಭವಿಸುವ ಮೊದಲು ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ ಹೊಸಬಾವಿ, “ಕಿರು ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೇತುವೆ ಮೇಲಿನ ರಸ್ತೆ ನಿರ್ಮಾಣ ಮಾತ್ರ ಬಾಕಿಯಿದ್ದು, ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚಿಸಲಾಗುವುದು” ಎಂದು ತಿಳಿಸಿದ್ದಾರೆ.

“ಪರ್ಯಾಯ ಕಚ್ಚಾ ರಸ್ತೆ ಸಂಪೂರ್ಣ ಹಾಳಾಗಿದ್ದು, ಶಾಲಾ ಮಕ್ಕಳು, ರೈತರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.”

– ಫಕ್ಕಿರೇಶ ಮ್ಯಾಟಣ್ಣವರ, ಬಾಳೆಹೊಸೂರು

ಭಗವಂತನಿತ್ತ ಸಂಪತ್ತೇ ಬದುಕಿನ ನಿಜವಾದ ಐಶ್ವರ್ಯ: ರಂಭಾಪುರಿ ಶ್ರೀ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು: ದೇಶ ಮತ್ತು ಧರ್ಮವು ಮನುಷ್ಯನ ಎರಡು ಕಣ್ಣುಗಳಾಗಿದ್ದು, ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ ನಾಶವಾಗಬಾರದು. ಭಗವಂತನಿತ್ತ ಸಂಪತ್ತೇ ಬದುಕಿನ ನಿಜವಾದ ಅಮೂಲ್ಯ ಸಂಪತ್ತು ಎಂಬುದನ್ನು ಯಾರೂ ಮರೆಯಬಾರದು ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಚಿಕ್ಕಮಗಳೂರು ನಗರದ ವೀರಶೈವ ಲಿಂಗಾಯತ ಸಮುದಾಯ ಭವನದ ಆವರಣದಲ್ಲಿ ನಿರ್ಮಿಸಲಾದ ಶ್ರೀ ಈಶ್ವರ ದೇವಸ್ಥಾನದ ಉದ್ಘಾಟನೆ, ಲಿಂಗ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಅಂಗವಾಗಿ ನಡೆದ ಧರ್ಮಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ದೇವರು ಮತ್ತು ಧರ್ಮವನ್ನು ಮರೆಯದ ಬದುಕೇ ಶಾಶ್ವತ ನೆಮ್ಮದಿಯ ಬದುಕು ಎಂದರು.

ದೇವರ ಮೇಲಿನ ನಂಬಿಕೆ ಮನುಷ್ಯನ ಬದುಕಿಗೆ ನಂದಾದೀಪವಾಗಿದ್ದು, ದೇವರು ಎಲ್ಲರಲ್ಲೂ ಇದ್ದರೂ ದೇವರಲ್ಲಿ ಎಲ್ಲರೂ ಇರುವುದಿಲ್ಲ. ಮಾನವ ಪರಿಪೂರ್ಣತೆಯತ್ತ ಸಾಗುವುದೇ ನಿಜವಾದ ಧರ್ಮ ಎಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗುವುದಿಲ್ಲ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ತಿಳಿಸಿದರು.

ನಗರದಲ್ಲಿ ನಿರ್ಮಾಣಗೊಂಡಿರುವ ಶ್ರೀಮತಿ ಮೈತ್ರಾದೇವಿ–ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಭವನ ಸಮಾಜದ ಐಕ್ಯತೆಯ ಪ್ರತೀಕವಾಗಿದೆ. ಇದರ ನಿರ್ಮಾಣಕ್ಕೆ ಸಹಕರಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಎಲ್ಲ ಸಮಾಜಬಾಂಧವರ ಸೇವೆ ಶ್ಲಾಘನೀಯ ಎಂದು ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಪರಿಪಕ್ವ ಸಮಾಜ ನಿರ್ಮಾಣವೇ ನಿಜವಾದ ಧರ್ಮ. ಸಮಾಜದ ಸಂಘಟಿತ ಪ್ರಯತ್ನದಿಂದ ನಿರ್ಮಾಣಗೊಂಡ ಈ ಭವನ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ನಗರಕ್ಕೆ ಈ ಭವ್ಯ ಭವನ ಮತ್ತು ದೇವಸ್ಥಾನ ಹೊಸ ಕಳಸವಿಟ್ಟಂತಾಗಿದೆ. ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಧಾರ್ಮಿಕ ಕೇಂದ್ರಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಹಾಗೂ ದೇವಸ್ಥಾನದ ದಾನಿಗಳಾದ ಸಂಗೀತಾ–ಎಸ್.ಬಿ. ತಿಪ್ಪಾರೆಡ್ಡಿ ಕುಟುಂಬವನ್ನು ಸನ್ಮಾನಿಸಲಾಯಿತು. ವಿವಿಧ ಮಠಾಧೀಶರು, ಸಮಾಜದ ಮುಖಂಡರು ಹಾಗೂ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

“ದೇವರ ಮೇಲಿನ ನಂಬಿಕೆ ಬದುಕಿನ ಶಾಶ್ವತ ನಂದಾದೀಪ; ಭಗವಂತನಿತ್ತ ಸಂಪತ್ತೇ ನಿಜವಾದ ಐಶ್ವರ್ಯ.”

– ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯರು

“ಧರೆಗೆ ಇಳಿದು ಬಾ ಮಳೆರಾಯ” ಎಂದು ಪ್ರಾರ್ಥಿಸಿದ ರೈತ ಮಹಿಳೆಯರು: ಜಕ್ಕಲಿಯಲ್ಲಿ ವಿಶೇಷ ಪೂಜೆ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮುಂಗಾರು ಕೈಕೊಟ್ಟು ಹೊಲಗಳಲ್ಲಿ ಬೆಳೆಗಳು ಒಣಗಲಾರಂಭಿಸಿರುವ ಹಿನ್ನೆಲೆಯಲ್ಲಿ ಸಮೀಪದ ಜಕ್ಕಲಿ ಗ್ರಾಮದ ರೈತ ಮಹಿಳೆಯರು ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, “ಧರೆಗೆ ಇಳಿದು ಬೇಗ ಬಾ ಮಳೆರಾಯ” ಎಂದು ವರುಣ ದೇವರಲ್ಲಿ ಪ್ರಾರ್ಥಿಸಿದರು.

ಹೆಸರು, ಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮಾಡಿದ ರೈತರು ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ, ಮಹಿಳೆಯರು ಶ್ರೀ ಕಲ್ಮೇಶ್ವರ ಹಾಗೂ ಉಕ್ಕಿ ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಸಂಕಲ್ಪ ಮಾಡಿದರು. ಕಳೆದ ಹತ್ತು ವರ್ಷಗಳಿಂದ ಈ ಸಂಪ್ರದಾಯವನ್ನು ಗ್ರಾಮದಲ್ಲಿ ನಿರಂತರವಾಗಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಮಳೆ ಭವಿಷ್ಯ ತಿಳಿಯುವ ಪಾರಂಪರಿಕ ಆಚರಣೆಗಳಾದ ಸೆಗಣಿಯ ಬೂದಪ್ಪ ಹಾಗೂ ಜೋಳದ ದಂಟುಗಳ ಮೂಲಕ ಮಳೆ ಅಂದಾಜಿಸುವ ಪದ್ಧತಿ ನಡೆಸಲಾಯಿತು. ಬಳಿಕ ಹೂಗಳಿಂದ ಅಲಂಕರಿಸಿದ ತುಂಬಿದ ಕೊಡವನ್ನು ಮಹಿಳೆಯರು ಮತ್ತು ಮಕ್ಕಳು ಸೇರಿ ತಿರುಗಿಸುವ ಮೂಲಕ ಮಳೆಯ ಭವಿಷ್ಯ ತಿಳಿಯುವ ಸಂಪ್ರದಾಯಕ್ಕೂ ಜೀವ ತುಂಬಿದರು.

ಈ ವೇಳೆ ಸುಮ್ಮವ್ವ ಹೂಗಾರ ಅವರು ಉತ್ತಮ ಮಳೆಯಾಗಿ ರೈತರ ಬದುಕು ಸಮೃದ್ಧಿಯಾಗಲಿ ಎಂದು ದೇವರ ಸನ್ನಿಧಿಯಲ್ಲಿ ಐದು ಸುತ್ತು ದೀರ್ಘ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದ್ದು ಭಕ್ತರ ಗಮನ ಸೆಳೆಯಿತು.

ಮಹಿಳೆಯರು ಮಡಿ ಬಟ್ಟೆ ಧರಿಸಿ ಕೊಡಗಳಲ್ಲಿ ನೀರು ತುಂಬಿಕೊಂಡು “ಓಂ ನಮಃ ಶಿವಾಯ” ಜಪಿಸುತ್ತಾ ಜಲಾಭಿಷೇಕ ನೆರವೇರಿಸಿದರು. ಬಸವಣ್ಣನವರ ವಚನಗಳು, ಭಕ್ತಿಪದಗಳು ಹಾಗೂ ಜನಪದ ಗೀತೆಗಳ ಗಾಯನದೊಂದಿಗೆ ದೇವಸ್ಥಾನದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಯಿತು. ಬಳಿಕ ಶಿರಾ ಹಾಗೂ ಸಂಗಟಿ-ಸಾರು ಅನ್ನಸಂತರ್ಪಣೆ ನಡೆಯಿತು.

ಇದೇ ಸಂದರ್ಭದಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹುರ್ರಾ ಟಾಪ್ ಶಿಖರ ಏರಿ ಸಾಧನೆ ಮಾಡಿದ ಜಕ್ಕಲಿ ಗ್ರಾಮದ ಪ್ರತಿಭಾವಂತ ಯುವತಿ ಸೃಷ್ಟಿ ಉಮೇಶ ಮೇಟಿ ಅವರನ್ನು ಶ್ರೀ ಕಲ್ಮೇಶ್ವರ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಮೇಟಿ ಹಾಗೂ ಡಾ. ಎ.ವಿ. ನರೇಗಲ್ಲ, ಸೃಷ್ಟಿ ಮೇಟಿ ಅವರ ಸಾಧನೆ ಗ್ರಾಮೀಣ ಯುವಜನತೆಗೆ ಸ್ಫೂರ್ತಿಯಾಗಿದ್ದು, ಹಳ್ಳಿಯ ಪ್ರತಿಭೆಗಳು ರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಬಹುದೆಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಶ್ಲಾಘಿಸಿದರು.

ಗುರುಲಿಂಗಮೂರ್ತಿ ಮಂಟಯ್ಯನವರಮಠ, ಅಶೋಕಪ್ಪ ಯಾವಗಲ್ಲ, ಪ್ರಭು ರೇಣುಕಮಠ, ಸಂಗಮೇಶ ಮೆಣಸಗಿ, ಶೇಖರ ಯಾವಗಲ್ಲ, ಸುಭಾಷ ಪಲ್ಲೇದ, ಶಿವಪುತ್ರಯ್ಯ ಸರಗಣಾಚಾರಿ, ಮುನಿಯಪ್ಪ ಪಲ್ಲೇದ, ಚನ್ನಬಸವ ಅರಹುಣಸಿ, ಉಮೇಶ ಮೇಟಿ, ಮಂಜುನಾಥ ಪಲ್ಲೇದ, ಕುಬೇರಪ್ಪ ಪಲ್ಲೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನೀಲಾಂಬಿಕೆ ಮೇಟಿ ಹಾಗೂ ಮಹೇಶಮ್ಮ ಹೈತಾಪೂರ ಅವರ ನೇತೃತ್ವದಲ್ಲಿ ನೂರಾರು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಳೆಗಾಗಿ “ಕೊಡ ತಿರುಗಿಸುವ” ವಿಶಿಷ್ಟ ಸಂಪ್ರದಾಯ

ಜಕ್ಕಲಿ ಗ್ರಾಮದಲ್ಲಿ ಮಳೆಗಾಗಿ ಪಾರಂಪರಿಕ “ಕೊಡ ತಿರುಗಿಸುವ” ಆಚರಣೆ ವಿಶೇಷ ಆಕರ್ಷಣೆಯಾಗಿತ್ತು. ಹೂಗಳಿಂದ ಅಲಂಕರಿಸಿದ ನೀರು ತುಂಬಿದ ಕೊಡದ ಕೆಳಗೆ ಜೋಳ ಹಾಕಿ, ಮಕ್ಕಳು ಹಾಗೂ ಸುಮಂಗಲಿ ಮಹಿಳೆಯರು ಸೇರಿ ಕೊಡ ತಿರುಗಿಸಿದರು. ಗ್ರಾಮಸ್ಥರ ನಂಬಿಕೆಯಂತೆ ಕೊಡ ವೇಗವಾಗಿ ತಿರುಗಿದರೆ ಉತ್ತಮ ಮಳೆಯಾಗುತ್ತದೆ, ನಿಧಾನವಾಗಿ ತಿರುಗಿದರೆ ಕಡಿಮೆ ಮಳೆಯಾಗುತ್ತದೆ. ಕೊಡದಿಂದ ನೀರು ಹೊರಗೆ ಚೆಲ್ಲಿದರೆ ಶೀಘ್ರದಲ್ಲೇ ಮಳೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಗ್ರಾಮೀಣ ಸಂಪ್ರದಾಯ ಮತ್ತು ರೈತರ ಪ್ರಕೃತಿ ನಂಬಿಕೆಗೆ ಈ ಆಚರಣೆ ಸಾಕ್ಷಿಯಾಯಿತು.

‘ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ’ ಹೋರಾಟದ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ಸರ್ಕಾರದ ಒಳಮೀಸಲಾತಿ ನೀತಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದ್ದು, ಇದನ್ನು ಖಂಡಿಸಿ ಹಾಗೂ ತಾಂಡಾಗಳಲ್ಲಿ ಜಾಗೃತಿ ಮೂಡಿಸಲು ಶೀಘ್ರದಲ್ಲೇ ‘ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ’ ಆಂದೋಲನ ಆರಂಭಿಸಲಾಗುವುದು ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮೋಹನ್ ದಾಸ್ ವರದಿಯಲ್ಲಿನ ದತ್ತಾಂಶಗಳ ಆಧಾರದ ಮೇಲೆ ಜಾರಿಯಾದ ಒಳಮೀಸಲಾತಿಯಿಂದ ಬಂಜಾರ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಸಚಿವ ಸಂಪುಟದ ಉಪಸಮಿತಿ ನ್ಯಾಯಯುತವಾಗಿ ಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಆ ವ್ಯವಸ್ಥೆಯನ್ನು ಹಾಳುಮಾಡಿದ್ದು, ತಕ್ಷಣ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಹೂವಿನಹಡಗಲಿ ಶಾಸಕ ಪ್ರಭು ಚವ್ಹಾಣ ಮಾತನಾಡಿ, ಒಳಮೀಸಲಾತಿಯಿಂದ ಬಂಜಾರ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವಸತಿ ನಿಲಯಗಳ ಪ್ರವೇಶದಲ್ಲಿ ಅನ್ಯಾಯವಾಗುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬಸ್-ರೈಲು ತಡೆ ಹಾಗೂ ಮುಖ್ಯಮಂತ್ರಿ ಮತ್ತು ಸಚಿವರ ಮುತ್ತಿಗೆ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಬಂಜಾರ ಸಮಾಜವನ್ನು ಪರಿಶಿಷ್ಟ ಜಾತಿ ಮೀಸಲಾತಿಯಿಂದ ಬಿಜೆಪಿ ಹೊರಗಿಡಲಿದೆ ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ನಡೆಸಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಸರ್ಕಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ನಾಗಮೋಹನ್ ದಾಸ್ ವರದಿಯಡಿ ಮೀಸಲಾತಿ ಹಂಚಿಕೆಯಿಂದ ಬಂಜಾರ ಸೇರಿದಂತೆ ಹಲವು ಸಮುದಾಯಗಳಿಗೆ ಹಿನ್ನಡೆಯಾಗಿದ್ದು, ಮುಂಬರುವ ಜಂಟಿ ಅಧಿವೇಶನದಲ್ಲಿ ಈ ಲೋಪ ಸರಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ, ಭೀಮಸಿಂಗ್ ರಾಥೋಡ್, ಬಸವರಾಜ ನಾಯಕ, ಮಣಿಕಂಠ ರಾಥೋಡ್, ಎಸ್.ಪಿ. ಲಿಂಬ್ಯನಾಯಕ್, ಮಂಜಾನಾಯಕ್ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು.

“ನಾಗಮೋಹನ್ ದಾಸ್ ವರದಿಯಡಿ ಮೀಸಲಾತಿ ಹಂಚಿಕೆಯಿಂದ ಬಂಜಾರ ಸೇರಿದಂತೆ ಹಲವು ಸಮುದಾಯಗಳಿಗೆ ಹಿನ್ನಡೆಯಾಗಿದೆ. ಮುಂಬರುವ ಜಂಟಿ ಅಧಿವೇಶನದಲ್ಲಿ ಈ ಲೋಪ ಸರಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ.”

– ಡಾ. ಚಂದ್ರು ಲಮಾಣಿ, ಶಾಸಕ