Home Blog Page 38

ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಾರ್ವಜನಿಕ ಗಣೇಶೋತ್ಸವವನ್ನು ಶಾಂತಿ, ಸೌಹಾರ್ದ ಹಾಗೂ ಶಿಸ್ತುಬದ್ಧವಾಗಿ ಆಚರಿಸುವ ನಿಟ್ಟಿನಲ್ಲಿ ಈ ಬಾರಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಠಾಣೆ ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ನಡೆದ ಗಣೇಶೋತ್ಸವದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಡಿಜೆ ಬಳಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವೃದ್ಧರು, ಮಕ್ಕಳು, ರೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಧ್ವನಿವರ್ಧಕ ಬಳಕೆಯಲ್ಲಿಯೂ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ವಿಸರ್ಜನಾ ಮೆರವಣಿಗೆಯನ್ನು ಅನಗತ್ಯವಾಗಿ ವಿಳಂಬ ಮಾಡದೆ ರಾತ್ರಿ 10 ಗಂಟೆಯೊಳಗೆ ವಿಸರ್ಜನೆ ಪೂರ್ಣಗೊಳಿಸುವುದು ಕಡ್ಡಾಯ. ತಡರಾತ್ರಿವರೆಗೆ ಮೆರವಣಿಗೆ ನಡೆಸುವುದು, ಅತಿಯಾದ ಧ್ವನಿವರ್ಧಕ ಬಳಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳಿಗೆ ಅವಕಾಶವಿಲ್ಲ. ಮೆರವಣಿಗೆಯನ್ನು ನಿಗದಿತ ಮಾರ್ಗದಲ್ಲಿಯೇ ನಡೆಸಬೇಕು. ಸಂಚಾರಕ್ಕೆ ಅಡ್ಡಿಯಾಗದಂತೆ ಸ್ವಯಂಸೇವಕರನ್ನು ನಿಯೋಜಿಸಿ ಪೊಲೀಸ್ ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘ–ಸಂಸ್ಥೆಗಳು ಹಾಗೂ ಯುವಕ ಮಂಡಳಿಗಳು ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯಬೇಕು. ವಿದ್ಯುತ್ ಸಂಪರ್ಕ, ಪಟ್ಟಣ ಪಂಚಾಯಿತಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅನುಮತಿಯೂ ಕಡ್ಡಾಯವಾಗಿದೆ. ಪೆಂಡಾಲ್ ಹಾಗೂ ಬ್ಯಾನರ್ ಅಳವಡಿಸುವಾಗ ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು. ವಿದ್ಯುತ್ ದೀಪಾಲಂಕಾರದಲ್ಲಿ ಕಳಪೆ ತಂತಿ ಹಾಗೂ ಅಸುರಕ್ಷಿತ ಸಂಪರ್ಕ ಬಳಸಬಾರದು ಎಂದರು.

ರಘುನಾಥ ಕೊಂಡಿ ಮಾತನಾಡಿ, ಗಣೇಶೋತ್ಸವವು ಭಕ್ತಿ, ಸಂಸ್ಕೃತಿ ಹಾಗೂ ಸಾಮರಸ್ಯದ ಹಬ್ಬವಾಗಬೇಕು. ಯಾವುದೇ ಧರ್ಮ, ಸಮುದಾಯ ಅಥವಾ ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆ ತರುವ ಘೋಷಣೆ, ಹಾಡು, ಭಾಷಣ ಹಾಗೂ ಪ್ರಚೋದನಕಾರಿ ವರ್ತನೆಗೆ ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ, ವಿಡಿಯೊ ಹಾಗೂ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಯುವಕರು ಎಚ್ಚರ ವಹಿಸಬೇಕು ಎಂದರು.

ಮುಖಂಡ ಮಂಜುನಾಥ ಹೆಗಡೆ ಮಾತನಾಡಿ, ಗಣೇಶೋತ್ಸವ ಅಬ್ಬರದ ಮೆರವಣಿಗೆ ಹಾಗೂ ಕಿವಿಗಡಚಿಕ್ಕುವ ಸಂಗೀತಕ್ಕೆ ಸೀಮಿತವಾಗದೆ ಪರಿಸರ ಸ್ನೇಹಿ ಆಚರಣೆ, ಭಜನೆ, ದೇಶಭಕ್ತಿ ಗೀತೆ, ಮಕ್ಕಳ ಸ್ಪರ್ಧೆಗಳು, ಆರೋಗ್ಯ ಹಾಗೂ ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ವೇದಿಕೆಯಾಗಬೇಕು ಎಂದರು.

ಮುಖಂಡ ಸಂತೋಷ್ ಮಣ್ಣೋಡ್ಡರ್, ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ ಮಾತನಾಡಿದರು. ಮಂಜುನಾಥ ಬಿ.ಎಸ್.ಎಸ್. ಮಣ್ಣೋಡ್ಡರ್, ರುದ್ರೇಶ್ ಕೋಟಗಿ, ನಿಂಗರಾಜ ಕೆಂಗಾರ, ಬಸಪ್ಪ, ಎಸ್.ಸಿ. ಸಂಗನಾಳಮಠ, ಬಸವರಾಜ ವಂಕಲಕುಂಟಿ, ವೀರಣ್ಣ ಗುಜಮಾಗಡಿ, ಶ್ರೀಕಾಂತ ಹೊಸಮನಿ, ಮುತ್ತುರಾಜ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು. ನಿಯಮ ಉಲ್ಲಂಘಿಸಿ ಡಿಜೆ ಬಳಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

— ಐಶ್ವರ್ಯ ನಾಗರಾಳ, ಪಿಎಸ್‌ಐ, ನರೇಗಲ್ಲ

ಸಮಾನತೆ–ಸಹಬಾಳ್ವೆಯ ಸಂದೇಶ ಸಾರಿದ ಮೌನೇಶ್ವರರು: ಸಣ್ಣವೀರಪ್ಪ ಫ. ಹಳ್ಳೆಪ್ಪನವರ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಹಾಗೂ ಸಹಬಾಳ್ವೆ ಬೆಳೆಸುವಲ್ಲಿ ಜಾತ್ರಾಮಹೋತ್ಸವಗಳ ಪಾತ್ರ ಮಹತ್ವದ್ದಾಗಿದೆ. ಜಗತ್ತಿಗೆ ಸಮಾನತೆ, ಸಹಬಾಳ್ವೆ, ಭ್ರಾತೃತ್ವ ಹಾಗೂ ಸಾಮರಸ್ಯದ ಸಂದೇಶ ಸಾರಿದ ಶ್ರೀಕ್ಷೇತ್ರ ವರವಿ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಧನ್ಯತೆಯ ಸಂಗತಿ ಎಂದು ಹೊಳೆ ಇಟಗಿಯ ಹಿರಿಯ ಮುಖಂಡ ಸಣ್ಣವೀರಪ್ಪ ಫ. ಹಳ್ಳೆಪ್ಪನವರ ಹೇಳಿದರು.

ಶ್ರೀಕ್ಷೇತ್ರ ವರವಿಯ ಮೌನೇಶ್ವರ ದೇವಸ್ಥಾನದಲ್ಲಿ 2026ನೇ ಸಾಲಿನ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಜಾತ್ರೆಗೆ ಆಗಮಿಸಿ ಮೌನೇಶ್ವರರಿಗೆ ಭಕ್ತಿ ಸಮರ್ಪಿಸುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳೂ ಜಾತ್ರಾಮಹೋತ್ಸವದ ಆಹ್ವಾನಕ್ಕೆ ಗೌರವ ನೀಡಿ ಭಾಗವಹಿಸಬೇಕು. ಇದು ನಮ್ಮ ಮಠದ ಜಾತ್ರೆ ಎಂಬ ಭಾವನೆಯೊಂದಿಗೆ ಪಾಲ್ಗೊಂಡು ಮೌನೇಶ್ವರರ ಕೃಪೆಗೆ ಪಾತ್ರರಾಗಬೇಕು ಎಂದರು.

ಎಲ್ಲರೊಂದಿಗೆ ಅರಿತು ಬೆರೆತು ಬಾಳುವ ವಿಶ್ವಕರ್ಮ ಸಮಾಜ ಬಹುದೊಡ್ಡ ಸಮಾಜ. ಬೇರೆಯವರನ್ನು ತಿದ್ದಿ, ತೀಡಿ, ಬುದ್ಧಿಹೇಳಿ ಮೂರ್ತಿ ಮಾಡುವ ಬುದ್ಧಿವಂತಿಕೆ ಹೊಂದಿರುವ ಈ ಸಮಾಜದ ಬಗ್ಗೆ ಎಲ್ಲರೂ ಅಭಿಮಾನ ಹೊಂದಬೇಕು ಎಂದು ಹಳ್ಳೆಪ್ಪನವರ ಹೇಳಿದರು.

ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ಬಾಗಲಕೋಟೆಯ ವೈದ್ಯ ಡಾ. ವಿನೋದ ಅಕ್ಕಸಾಲಿ ಮಾತನಾಡಿ, ಸಮಾಜ ಹಾಗೂ ಸರ್ಕಾರದ ವ್ಯವಸ್ಥೆಯಲ್ಲಿ ಉತ್ತಮ ಸ್ಥಾನದಲ್ಲಿದ್ದು ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸದ ಸಂಗತಿ. ವಿಶ್ವಕರ್ಮ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಯುವಜನರು ಮಾದಕ ವ್ಯಸನಗಳಿಗೆ ಮಾರುಹೋಗಬಾರದು ಎಂದು ಕರೆ ನೀಡಿದರು.

ಪೊಲೀಸ್ ಇಲಾಖೆಯ ರಾಜ್ಯಮಟ್ಟದ ಪುರಸ್ಕಾರಕ್ಕೆ ಭಾಜನರಾದ ವಿಶ್ವನಾಥ ಬಡಿಗೇರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಲಾಖೆ ನೀಡಿದ ಗೌರವವನ್ನು ಸಮಾಜಕ್ಕೆ ಅರ್ಪಿಸುವೆ. ಸಾಧಕರನ್ನು ಗೌರವಿಸುವುದರಿಂದ ಇನ್ನಷ್ಟು ಸಾಧನೆಗೆ ಪ್ರೇರಣೆ ದೊರೆಯುತ್ತದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಆಶೀರ್ವಾದ ದೊರೆತಿರುವುದು ಧನ್ಯತಾ ಭಾವ ಮೂಡಿಸಿದೆ ಎಂದರು.

ವರವಿ ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ಸಿ. ನರಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಮಠಾಧಿಪತಿಗಳು, ಪೀಠಾಧಿಪತಿಗಳು ಹಾಗೂ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಸಮಸ್ತ ಭಕ್ತರ ಸಮ್ಮುಖದಲ್ಲಿ ಜಾತ್ರಾಮಹೋತ್ಸವ ಶ್ರದ್ಧೆ–ಭಕ್ತಿಯಿಂದ ವಿಜೃಂಭಣೆಯಿಂದ ನಡೆಯುತ್ತಿದೆ. ಸಹಕಾರ ನೀಡಿದ ಎಲ್ಲರಿಗೂ ಮೌನೇಶ್ವರರು ಸನ್ಮಂಗಲವನ್ನುಂಟು ಮಾಡಲಿ ಎಂದರು.

ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ, ಚಿಕ್ಕಮಗಳೂರಿನ ರೈತ ಸೇನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಗದಗ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಹ. ಬಡಿಗೇರ ಮಾತನಾಡಿದರು.

ವಿಜಯಪುರ ಮೂರು ಜಾವಧೀಶ್ವರ ಮಠದ ಶ್ರೀ ಮಹೇಂದ್ರ ಮಹಾಸ್ವಾಮೀಜಿ, ಲೇಬಗಿರಿ ಲಕ್ಷ್ಮೀಂದ್ರಸ್ವಾಮಿಗಳ ಮಠದ ಶ್ರೀ ನಾಗಮೂತೇಂದ್ರ ಮಹಾಸ್ವಾಮೀಜಿ ಹಾಗೂ ಹುಬ್ಬಳ್ಳಿ ವೇ.ಬ್ರ. ಶ್ರೀ ಶಂಕರಾಚಾರ್ಯ ಗು. ಕಡ್ಲಾಸ್ಕರ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿಶ್ವಕರ್ಮ ಸಮಾಜದ ಮುಖಂಡ ಮುತ್ತಣ್ಣ ಬಡಿಗೇರ ಸೇರಿದಂತೆ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಶಿಕ್ಷಕ ಸತೀಶ ಹೊರಪೇಟೆ ಪ್ರಾರ್ಥಿಸಿದರು. ಮೋಹನ ಸಿ. ನರಗುಂದ ಸ್ವಾಗತಿಸಿದರು. ಪ್ರಾಧ್ಯಾಪಕ ವಿಶ್ವನಾಥ ಯ. ಕಮ್ಮಾರ ನಿರೂಪಿಸಿದರು. ಚಂದ್ರಕಾಂತ ಸೋನಾರ ವಂದಿಸಿದರು.

ನಾವು ಎಷ್ಟೇ ಬುದ್ಧಿವಂತರಾಗಿದ್ದರೂ ಶಿಕ್ಷಣವಿಲ್ಲದಿದ್ದರೆ ಪ್ರಯೋಜನವಿಲ್ಲ. ಆದ್ದರಿಂದ ನಮ್ಮ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

— ಡಾ. ವಿನೋದ ಅಕ್ಕಸಾಲಿ, ವೈದ್ಯರು, ಬಾಗಲಕೋಟೆ

ಸಾವಿನಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ

0

xವಿಜಯಸಾಕ್ಷಿ ಸುದ್ದಿ, ಗದಗ: ಬದುಕಿನುದ್ದಕ್ಕೂ ಸೇವಾ ಮನೋಭಾವ ಮೆರೆದಿದ್ದ ಸಹಕಾರಿ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಗುರಪ್ಪ ಬಸವಣ್ಣೆಪ್ಪ ಅಂಗಡಿ (78) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸೆ. 2ರಂದು ನಿಧನರಾದ ಅವರ ಸ್ವಇಚ್ಛೆಯಂತೆ ಕುಟುಂಬದವರು ನೇತ್ರದಾನ ಹಾಗೂ ದೇಹದಾನ ಮಾಡುವ ಮೂಲಕ ಮಾನವೀಯ ಮೌಲ್ಯಕ್ಕೆ ಮಾದರಿಯಾಗಿದ್ದಾರೆ.

ಗದುಗಿನ ಹಾತಲಗೇರಿ ನಾಕಾ ಸಮೀಪದ ನಿವಾಸಿಯಾಗಿದ್ದ ಅಂಗಡಿ ಅವರ ನಿಧನದ ಬಳಿಕ ಕುಟುಂಬದವರ ಒಪ್ಪಿಗೆಯೊಂದಿಗೆ ತಜ್ಞ ವೈದ್ಯರ ತಂಡ ನೇತ್ರದಾನದ ಪ್ರಕ್ರಿಯೆ ನೆರವೇರಿಸಿತು. ಬಳಿಕ ಸೆ. 3ರಂದು ಅವರ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಂಗರಚನಾ ಶಾಸ್ತ್ರ ಅಧ್ಯಯನಕ್ಕಾಗಿ ಗದಗಿನ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನ ಮಾಡಲಾಯಿತು.

ನಮ್ಮ ಬದುಕು ಮುಗಿದರೂ ಮತ್ತೊಬ್ಬರ ಬದುಕಿಗೆ ನೆರವಾಗಲಿ ಎಂಬ ಮಾನವೀಯ ಸಂದೇಶ ಸಾರುವಂತೆ ಅಂಗಡಿ ಕುಟುಂಬದ ಈ ನಿರ್ಧಾರ ಗಮನ ಸೆಳೆದಿದೆ. ಮೃತರ ಕೊನೆಯ ಇಚ್ಛೆಯನ್ನು ಗೌರವಿಸಿ ಕುಟುಂಬದವರು ಕೈಗೊಂಡ ನೇತ್ರದಾನ ಹಾಗೂ ದೇಹದಾನವು ಸಮಾಜಕ್ಕೆ ಸೇವಾ ಮನೋಭಾವ, ದಾನಧರ್ಮ ಮತ್ತು ಮಾನವೀಯತೆಯ ಮಹತ್ವವನ್ನು ಸಾರಿದೆ.

ಮರಣದ ಬಳಿಕವೂ ಅಂಗಾಂಗಗಳು ಮತ್ತೊಬ್ಬರಿಗೆ ದೃಷ್ಟಿ ನೀಡಲು ಹಾಗೂ ದೇಹ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಉಪಯೋಗವಾಗುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ನೇತ್ರದಾನ ಮತ್ತು ದೇಹದಾನದ ಕುರಿತು ಜಾಗೃತಿ ಬೆಳೆಸಿಕೊಳ್ಳಬೇಕು ಎಂಬ ಸಂದೇಶವೂ ಮೂಡಿಬಂದಿದೆ.

ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರೊಂದಿಗೆ ಡಾ. ಪ್ರೀತ್ ಖೋನಾ, ಚೇತನ ಅಂಗಡಿ, ಗದಗ–ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ದತ್ತಣ್ಣ ಬೇವಿನಕಟ್ಟಿ, ಶ್ರೀನಿವಾಸ ಬಾಕಳೆ ಸೇರಿದಂತೆ ಬಂಧು–ಬಳಗದವರು ಉಪಸ್ಥಿತರಿದ್ದರು.

ಮಹಿಳಾ ಕಾರ್ಮಿಕರ ಮನವಿ ಸ್ವೀಕರಿಸಿದ ಕೃಷ್ಣಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ 133 ಮಹಿಳಾ ಕಾರ್ಮಿಕರಿಗೆ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಬೆಂಬಲ ವ್ಯಕ್ತಪಡಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಮಹಿಳಾ ಕಾರ್ಮಿಕರಿಂದ ಮನವಿ ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ, ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೆಟಗೇರಿ ನಗರಸಭೆ ಸದಸ್ಯ ಕೃಷ್ಣಾ ಪರಾಪೂರ, ಅಶೋಕ ಕುಡತಿನಿ, ಪೃಥ್ವಿ ಪರಾಪುರ, ಯುವರಾಜ ಬಳ್ಳಾರಿ, ಗೋವಿಂದರಾಜ ಬಳ್ಳಾರಿ, ವಿಜಯ ಕಲ್ಮನಿ, ಮಲಿಕ್ ಸಂಗಾಪುರ, ನಿಂಗಪ್ಪ ದೊಡ್ಡಮನಿ, ಮೈಲಾರಪ್ಪ ಚಳ್ಳಮರ, ಚಂದ್ರು ದೊಡ್ಡಮನಿ, ಉಡಚಪ್ಪ ಹಳ್ಳಿಕೇರಿ, ಪವನ ಬಳ್ಳಾರಿ ಸೇರಿದಂತೆ ಧರಣಿ ನಿರತ ಮಹಿಳಾ ಕಾರ್ಮಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಶಿಕ್ಷಕರ ಸಮ್ಮೇಳನಕ್ಕೆ ಡಾ. ನಿಂಗು ಸೊಲಗಿ ಸರ್ವಾಧ್ಯಕ್ಷ

0

ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತ್ತಗಿರಿ ಫೌಂಡೇಶನ್ (ರಿ), ಕಳಸಾಪೂರ–ಗದಗ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಶಿಕ್ಷಕರ ಸಮ್ಮೇಳನ ಆಯೋಜಿಸಲಾಗುತ್ತಿದೆ.

ಸಮ್ಮೇಳನದ ಅಂಗವಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ವರ್ಷದ ಶಿಕ್ಷಕರ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮುಂಡರಗಿಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಪ್ಪತ್ತಗಿರಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಎಂ. ಇಟಗಿಮಠ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ನಿಂಗು ಸೊಲಗಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು. ಈ ಸಂದರ್ಭದಲ್ಲಿ ಕಪ್ಪತ್ತಗಿರಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಎಂ. ಇಟಗಿಮಠ, ತೋಟಯ್ಯ ಗುಡ್ಡಿಮಠ, ಕಾವ್ಯಾ ಅಂಗಡಿ, ಮಂಜುನಾಥ ಮುಧೋಳ ಹಾಗೂ ಚಂದ್ರಶೇಖರ ಮಜ್ಜಗಿ ಉಪಸ್ಥಿತರಿದ್ದರು.

ತಾಮ್ರದ ದರದಲ್ಲಿ ಭರ್ಜರಿ ಏರಿಕೆ; LMEಯಲ್ಲಿ ಹೊಸ ಸಾರ್ವಕಾಲಿಕ ದಾಖಲೆ!

0

ಲಂಡನ್: ಜಾಗತಿಕ ಲೋಹ ಮಾರುಕಟ್ಟೆಯಲ್ಲಿ ತಾಮ್ರದ ಬೆಲೆ ಹೊಸ ದಾಖಲೆ ನಿರ್ಮಿಸಿದೆ.

ಲಂಡನ್ ಮೆಟಲ್ ಎಕ್ಸ್‌ಚೇಂಜ್‌ನಲ್ಲಿ (LME) ತಾಮ್ರದ ಬೆಲೆ ಪ್ರತಿ ಮೆಟ್ರಿಕ್ ಟನ್‌ಗೆ 14,533 ಡಾಲರ್ ತಲುಪಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ದಾಖಲಿಸಿದೆ.

ಕಳೆದ 12 ತಿಂಗಳಲ್ಲಿ ತಾಮ್ರದ ಬೆಲೆಯಲ್ಲಿ ಜಾಗತಿಕವಾಗಿ ಸುಮಾರು ಶೇ.47ರಷ್ಟು ಏರಿಕೆ ಕಂಡುಬಂದಿದೆ. ತಾಮ್ರದ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?

ಅಮೆರಿಕದ ಆಮದು ಸುಂಕದ ಭೀತಿ: ರೀಫೈನ್ಡ್ ಕಾಪರ್ ಆಮದಿನ ಮೇಲೆ ಅಮೆರಿಕ ಸರ್ಕಾರ ಹೆಚ್ಚುವರಿ ಸುಂಕ ವಿಧಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಾಗತಿಕ ಪೂರೈಕೆದಾರರು ಹೆಚ್ಚಿನ ಪ್ರಮಾಣದ ತಾಮ್ರವನ್ನು ಅಮೆರಿಕಕ್ಕೆ ರವಾನಿಸುತ್ತಿದ್ದಾರೆ. ಇದರಿಂದ ಇತರ ಮಾರುಕಟ್ಟೆಗಳಲ್ಲಿ ತಾಮ್ರದ ಲಭ್ಯತೆ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎಐ ಮತ್ತು ಡೇಟಾ ಸೆಂಟರ್‌ಗಳ ಬೇಡಿಕೆ: ಕೃತಕ ಬುದ್ಧಿಮತ್ತೆ (AI) ಆಧಾರಿತ ಡೇಟಾ ಸೆಂಟರ್‌ಗಳ ನಿರ್ಮಾಣ, ವಿದ್ಯುತ್ ಗ್ರಿಡ್‌ಗಳ ವಿಸ್ತರಣೆ, ಎಲೆಕ್ಟ್ರಿಕ್ ವಾಹನಗಳು (EV) ಹಾಗೂ ನವೀಕರಿಸಬಹುದಾದ ಇಂಧನ ಯೋಜನೆಗಳ ಹೆಚ್ಚಳದಿಂದ ತಾಮ್ರದ ಬೇಡಿಕೆ ಗಣನೀಯವಾಗಿ ಹೆಚ್ಚಿದೆ.

ಗಣಿ ಉತ್ಪಾದನೆಯಲ್ಲಿ ಕುಸಿತ: ಹೊಸ ತಾಮ್ರದ ಗಣಿಗಾರಿಕೆ ಯೋಜನೆಗಳು ವಿಳಂಬವಾಗಿರುವುದು ಮತ್ತು ಕೆಲವು ಪ್ರಮುಖ ಗಣಿಗಳಲ್ಲಿ ಉತ್ಪಾದನೆ ಕುಸಿದಿರುವುದರಿಂದ ಜಾಗತಿಕ ಪೂರೈಕೆ ಮೇಲೆ ಒತ್ತಡ ಉಂಟಾಗಿದೆ. ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಹೆಚ್ಚುತ್ತಿರುವುದು ಬೆಲೆ ಏರಿಕೆಗೆ ಮತ್ತಷ್ಟು ಕಾರಣವಾಗಿದೆ.

ಭಾರತದ ಮಾರುಕಟ್ಟೆ ಮೇಲೂ ಪರಿಣಾಮ:

ಜಾಗತಿಕ ಮಾರುಕಟ್ಟೆಯಲ್ಲಿ ತಾಮ್ರದ ಬೆಲೆ ಏರಿಕೆಯ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಕಂಡುಬಂದಿದೆ. ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಕಾಪರ್ ಕಂಪನಿಯ ಷೇರು ಮೌಲ್ಯ ಶೇ.5ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

ಇನ್ನು, ಭಾರತದ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ತಾಮ್ರದ ಫ್ಯೂಚರ್ಸ್ ಬೆಲೆ ಕೆಜಿಗೆ ₹1,400ರ ಸಮೀಪ ತಲುಪಿದೆ. ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ಇರುವುದರಿಂದ ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ದೇಶೀಯ ಬೆಲೆ ಏರಿಕೆಯ ಪ್ರಮಾಣ ಕೊಂಚ ನಿಯಂತ್ರಣದಲ್ಲಿದೆ ಎನ್ನಲಾಗಿದೆ.

ತಾಮ್ರವು ವಿದ್ಯುತ್ ಉಪಕರಣಗಳು, ಸೆಮಿಕಂಡಕ್ಟರ್‌ಗಳು, ವಾಹನ ತಯಾರಿಕೆ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮಗಳಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿದೆ. ಹೀಗಾಗಿ ತಾಮ್ರದ ಬೆಲೆ ಇದೇ ರೀತಿ ಏರಿಕೆಯಾಗುತ್ತಿದ್ದರೆ, ಮುಂದಿನ ದಿನಗಳಲ್ಲಿ ಈ ಕ್ಷೇತ್ರಗಳ ತಯಾರಿಕಾ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ 180 ನಕ್ಷತ್ರ ಆಮೆ ಸಾಗಾಟ; ಓರ್ವ ಅರೆಸ್ಟ್!

0

ಬೆಂಗಳೂರು: ಟ್ರಾಲಿ ಬ್ಯಾಗ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ನಗರದ ಗಾಂಧಿನಗರದಲ್ಲಿ ನಡೆದಿದೆ.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ಟ್ರಾಲಿ ಬ್ಯಾಗ್‌ನಲ್ಲಿ ನಕ್ಷತ್ರ ಆಮೆಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಯು ನಕ್ಷತ್ರ ಆಮೆಗಳನ್ನು ತಲಾ ₹10 ಸಾವಿರದಂತೆ ಮಾರಾಟ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಕಲಾಸಿಪಾಳ್ಯದಿಂದ ಮತ್ತೊಬ್ಬ ವ್ಯಕ್ತಿ ಈ ಆಮೆಗಳನ್ನು ಆರೋಪಿಗೆ ತಂದುಕೊಟ್ಟಿದ್ದ ಎಂಬ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.

ನಕ್ಷತ್ರ ಆಮೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಬರುತ್ತದೆ ಎಂದು ಜನರನ್ನು ನಂಬಿಸಿ ಮಾರಾಟ ಮಾಡಲು ಆರೋಪಿಗಳು ಯತ್ನಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ವನ್ಯಜೀವಿ ವ್ಯಾಪಾರದ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವಶಪಡಿಸಿಕೊಂಡಿರುವ 180 ನಕ್ಷತ್ರ ಆಮೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನಕ್ಷತ್ರ ಆಮೆಗಳ ಅಕ್ರಮ ಸಾಗಾಟ ಹಾಗೂ ಮಾರಾಟದ ಜಾಲದ ಕುರಿತು ತನಿಖೆ ಮುಂದುವರಿದಿದೆ.

ಬೈಕ್ ಸವಾರರೇ ಗಮನಿಸಿ: ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಹೊಸ ಸಂಚಾರ ನಿಯಮ!

0

ಬೆಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ನಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.

ಮೊದಲ ಹಂತದಲ್ಲಿ ನಿಗದಿತ ಸಮಯದಲ್ಲಿ ಸರಕು ವಾಹನಗಳ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಆದರೆ ಸದ್ಯ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳಿಗೆ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

ದ್ವಿಚಕ್ರ ವಾಹನ ಸವಾರರು ಸಾಧ್ಯವಾದಷ್ಟು ಎಡಭಾಗದ ಲೇನ್‌ನಲ್ಲಿ ಸಂಚರಿಸಬೇಕು. ಲೇನ್ ಶಿಸ್ತು ಪಾಲಿಸುವುದರ ಜೊತೆಗೆ ಅಪಾಯಕಾರಿ ರೀತಿಯಲ್ಲಿ ಓವರ್‌ಟೇಕ್ ಮಾಡುವುದನ್ನು ತಪ್ಪಿಸಬೇಕು. ಅಲ್ಲದೆ, ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದ ಮಿತಿಯೊಳಗೆ ಸುರಕ್ಷಿತವಾಗಿ ಸಂಚರಿಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ರಸ್ತೆ ಸುರಕ್ಷತೆ ಹೆಚ್ಚಿಸುವ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರದ ಐದು ಪ್ರಮುಖ ಮೇಲ್ಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ವಿವಿಧ ವಾಹನಗಳ ಸಂಚಾರಕ್ಕೆ ನಿರ್ಬಂಧಗಳನ್ನು ಬೆಂಗಳೂರು ಸಂಚಾರ ಪೊಲೀಸರು ಘೋಷಿಸಿದ್ದರು. ಈ ಪೈಕಿ ನಾಲ್ಕು ಕಾರಿಡಾರ್‌ಗಳಲ್ಲಿ ನಿರ್ಬಂಧ ಜಾರಿಗೊಳಿಸಿದ ಬಳಿಕ ಸ್ಥಳ ಪರಿಶೀಲನೆ ನಡೆಸಲಾಗಿದೆ.

ಬಿಜಿಎಸ್ ಮೇಲ್ಸೇತುವೆ, ಪೀಣ್ಯ ಮೇಲ್ಸೇತುವೆ ಹಾಗೂ ಡಬಲ್ ಡೆಕ್ಕರ್ ಮೇಲ್ಸೇತುವೆಗಳಲ್ಲಿ ಸಂಚಾರ ಸುಗಮವಾಗಿ ನಡೆಯುತ್ತಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.

ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ನ ಸಂಜೀವನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗಿನ ಮಾರ್ಗದಲ್ಲಿ ಸರಕು ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳನ್ನು ಪ್ರವೇಶ ಮಾರ್ಗಗಳಲ್ಲೇ ಏಕಕಾಲದಲ್ಲಿ ಬೇರೆಡೆಗೆ ತಿರುಗಿಸುತ್ತಿದ್ದರಿಂದ ಸಂಚಾರ ಗೊಂದಲ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ.

ಇದರಿಂದ ವಾಹನಗಳ ಸರದಿ ಹಾಗೂ ದಟ್ಟಣೆ ಹೆಚ್ಚಾಗಿ, ಪಕ್ಕದ ಸಾಮಾನ್ಯ ರಸ್ತೆಯ ಸಂಚಾರದ ಮೇಲೂ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸೆ.11ರಿಂದ ಎಲೆಕ್ಟ್ರಾನಿಕ್ ಸಿಟಿ ಕಾರಿಡಾರ್‌ನಲ್ಲೂ ನಿಯಮ:

ಇದೇ ರೀತಿಯ ಹಂತ ಹಂತದ ಸಂಚಾರ ನಿಯಮವನ್ನು ಸೆಪ್ಟೆಂಬರ್ 11, 2026ರಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲೂ ಜಾರಿಗೊಳಿಸಲಾಗುತ್ತದೆ.

ಮೊದಲ ಹಂತದಲ್ಲಿ ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು. ದ್ವಿಚಕ್ರ ವಾಹನಗಳಿಗೆ ಸದ್ಯ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಪರಿಶೀಲನೆಯ ಫಲಿತಾಂಶದ ಆಧಾರದ ಮೇಲೆ ಉಳಿದ ನಿಗದಿತ ನಿರ್ಬಂಧಗಳನ್ನು ಮುಂದಿನ ಹಂತಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರದೋಷ್ ಮಾಫಿ ಸಾಕ್ಷಿ ಕೇಸಲ್ಲಿ ನಟ ದರ್ಶನ್ʼಗೆ ರಿಲೀಫ್: ಒಂದು ವಾರದಲ್ಲಿ ಹೊಸ ಆದೇಶಕ್ಕೆ ಹೈಕೋರ್ಟ್ ಸೂಚನೆ!

ಬೆಂಗಳೂರು: ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಭಾಗಶಃ ಅಂಗೀಕರಿಸಿದೆ.

ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದ್ದು, ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಡಿಸಿ, ಯಾವುದೇ ವಾದ-ಪ್ರತಿವಾದಕ್ಕೆ ಅವಕಾಶ ನೀಡದೆ ಒಂದು ವಾರದೊಳಗೆ ಹೊಸ ಆದೇಶ ನೀಡುವಂತೆ ಸೂಚಿಸಿದೆ.

ಈ ಹಿಂದೆ ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೋಷ್ ಅವರ ಸನ್ನಡತೆ ಕುರಿತು ಪ್ರೊಬೇಷನರಿ ಅಧಿಕಾರಿಯೊಬ್ಬರು ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ ಮೊರೆ ಹೋಗಿದ್ದರು.

ಪ್ರೊಬೇಷನರಿ ಅಧಿಕಾರಿಯು ಸಜಾಬಂಧಿಯಲ್ಲಿರುವ ವ್ಯಕ್ತಿಯ ಕುರಿತು ವರದಿ ನೀಡಬೇಕಿತ್ತು. ಆದರೆ ಪ್ರದೋಷ್ ವಿಚಾರಣಾಧೀನ ಆರೋಪಿಯಾಗಿರುವುದರಿಂದ ಅವರ ನಡವಳಿಕೆ ಕುರಿತು ಪ್ರೊಬೇಷನರಿ ಅಧಿಕಾರಿಗೆ ವರದಿ ಸಲ್ಲಿಸುವ ಅವಕಾಶವಿಲ್ಲ ಎಂದು ದರ್ಶನ್ ಪರ ವಾದಿಸಲಾಗಿತ್ತು.

ಹೀಗಾಗಿ ಪ್ರೊಬೇಷನರಿ ಅಧಿಕಾರಿ ಸಲ್ಲಿಸಿರುವ ವರದಿಯನ್ನು ರದ್ದುಪಡಿಸಬೇಕು ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ಇದೀಗ ಹೈಕೋರ್ಟ್ ಅರ್ಜಿಯನ್ನು ಭಾಗಶಃ ಅಂಗೀಕರಿಸಿದ್ದು, ಈ ವಿಚಾರದಲ್ಲಿ ಸೆಷನ್ಸ್ ಕೋರ್ಟ್ ಹೊಸದಾಗಿ ಆದೇಶ ನೀಡಬೇಕಿದೆ.

108 ಆಂಬುಲೆನ್ಸ್ ಖಾಸಗೀಕರಣಕ್ಕೆ ಸರ್ಕಾರದ ನಿರ್ಧಾರ: ‘ಕ್ಯಾಬಿನೆಟ್ ಹಾಗೂ ಸಿಎಂ ಒಪ್ಪಿಗೆ ಇದೆ’ ಎಂದ ಯು.ಟಿ. ಖಾದರ್

0

ಬೆಂಗಳೂರು: 108 ಆಂಬುಲೆನ್ಸ್ ಸೇವೆಯ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಈ ಸಂಬಂಧ ಹೊಸ ನೀತಿ ರೂಪಿಸಲಾಗುತ್ತಿದ್ದು, ಆಂಬುಲೆನ್ಸ್‌ಗಳ ನಿರ್ವಹಣೆಯನ್ನು ಟೆಂಡರ್ ಮೂಲಕ ಖಾಸಗಿ ಸಂಸ್ಥೆಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಸಚಿವರು, 108 ಆಂಬುಲೆನ್ಸ್ ಸೇವೆಯ ನಿರ್ವಹಣೆಗೆ ಹೊಸ ಪಾಲಿಸಿ ರೂಪಿಸಲಾಗುತ್ತಿದೆ. ಈ ಹೊಸ ನೀತಿಯಡಿ 108 ಆಂಬುಲೆನ್ಸ್‌ಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರಕ್ಕೆ ಇಡೀ ರಾಜ್ಯ ಸಚಿವ ಸಂಪುಟ ಹಾಗೂ ಮುಖ್ಯಮಂತ್ರಿ ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಆರೋಗ್ಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರು 108 ಆಂಬುಲೆನ್ಸ್ ಸೇವೆಯನ್ನು ಸರ್ಕಾರವೇ ನಿರ್ವಹಿಸಲಿದೆ ಮತ್ತು ಜಿಕೆವಿಕೆಗೆ ವಹಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ಯು.ಟಿ. ಖಾದರ್ ಆರೋಗ್ಯ ಸಚಿವರಾದ ಬಳಿಕ 108 ಆಂಬುಲೆನ್ಸ್ ಸೇವೆಗೆ ಟೆಂಡರ್ ನೀಡಲು ಸರ್ಕಾರ ಮುಂದಾಗಿದೆ.

ಹೊಸ ವ್ಯವಸ್ಥೆಯಲ್ಲಿ ಆಂಬುಲೆನ್ಸ್‌ಗಳು ರೋಗಿಗಳನ್ನು ನಿಗದಿತ ಸಮಯದಲ್ಲಿ ಆಸ್ಪತ್ರೆಗೆ ತಲುಪಿಸುವಂತೆ ಸಮಯದ ಗಡುವು ನಿಗದಿಪಡಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ 10 ನಿಮಿಷದೊಳಗೆ ಹಾಗೂ ನಗರ ಪ್ರದೇಶಗಳಲ್ಲಿ 15ರಿಂದ 20 ನಿಮಿಷದೊಳಗೆ ಆಸ್ಪತ್ರೆಗೆ ತಲುಪಿಸುವ ಗುರಿ ಇರಲಿದೆ. ನಿಗದಿತ ಸಮಯ ಮೀರಿದರೆ ಟೆಂಡರ್ ಪಡೆದಿರುವ ಕಂಪನಿಗಳಿಗೆ ₹5 ಸಾವಿರದಿಂದ ₹10 ಸಾವಿರದವರೆಗೆ ದಂಡ ವಿಧಿಸುವ ವ್ಯವಸ್ಥೆ ಇರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದೇ ವೇಳೆ ವಿವಿಧ ಬೇಡಿಕೆಗಳ ಈಡೇರಿಕೆಗೆ 108 ಆಂಬುಲೆನ್ಸ್ ಸಿಬ್ಬಂದಿ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ನಡೆಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಪ್ರತಿಭಟನೆ ನಡೆಸಿ ರೋಗಿಗಳಿಗೆ ತೊಂದರೆಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 108 ಸಿಬ್ಬಂದಿಯ ಸಮಸ್ಯೆಗಳು ಸಂಬಂಧಪಟ್ಟ ಕಂಪನಿಗೆ ಸೇರಿದ್ದು, ಕಂಪನಿಯೊಂದಿಗೇ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾದರೆ ಸಂಬಂಧಪಟ್ಟ ಎಲ್ಲ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.