Home Blog Page 37

ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಿಸಿ: ಗಜಾನನೋತ್ಸವ ಮಹಾಮಂಡಳಿ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಪ್ರತಿವರ್ಷ ತಾತ್ಕಾಲಿಕ ಹೊಂಡ ನಿರ್ಮಿಸುವ ಬದಲು ಪಟ್ಟಣದಲ್ಲಿ 2ರಿಂದ 3 ಕಡೆ ಶಾಶ್ವತ, ಬೃಹತ್ ಹಾಗೂ ವೈಜ್ಞಾನಿಕ ವಿಸರ್ಜನಾ ಹೊಂಡಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ಹಾಗೂ ಹಿಂದೂ ಮುಖಂಡರಾದ ಮಂಜುನಾಥ ಮಾಗಡಿ, ಗಂಗಾಧರ ಮೆಣಸಿನಕಾಯಿ ಒತ್ತಾಯಿಸಿದರು.

ಮಂಗಳವಾರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು.

ಪ್ರತಿವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಮಣ್ಣಿನ ಹೊಂಡ ನಿರ್ಮಿಸಿ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಉತ್ಸವ ಮುಗಿದ ಬಳಿಕ ಹೊಂಡ ಮುಚ್ಚಲಾಗುತ್ತಿದ್ದು, ಮುಂದಿನ ವರ್ಷ ಮತ್ತೆ ಹೊಸದಾಗಿ ಹೊಂಡ ನಿರ್ಮಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೂ ನೋವುಂಟಾಗುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸಲು ಸೂಕ್ತ ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ವಿಸರ್ಜನಾ ಹೊಂಡ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ 18ರಿಂದ 20 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಹೆಚ್ಚಿನ ಜನಸಂದಣಿ ಉಂಟಾಗುವುದರಿಂದ ಅಗತ್ಯ ಸುರಕ್ಷತಾ ಕ್ರಮ ಹಾಗೂ ಮೂಲಸೌಲಭ್ಯ ಕಲ್ಪಿಸಬೇಕು. ವಿಸರ್ಜನಾ ಹೊಂಡಗಳ ಸುತ್ತಮುತ್ತ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಮತ್ತು ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಮೆರವಣಿಗೆ ಮಾರ್ಗ ಸರಿಪಡಿಸಿ

ಗಣೇಶ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ಮಾರ್ಗದಲ್ಲಿರುವ ವಿದ್ಯುತ್ ತಂತಿ, ಕೇಬಲ್‌ಗಳು ಹಾಗೂ ಇತರ ಅಡೆತಡೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತೆರವುಗೊಳಿಸಬೇಕು. ಉತ್ಸವದ ವೇಳೆ ಯಾವುದೇ ತೊಂದರೆಯಾಗದಂತೆ ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಜಯ ಕುಂಬಾರ, ಪ್ರವೀಣ ಬೋಮಲೆ, ನವೀನ ಹಿರೇಮಠ, ಅಮಿತ ಗುಡಗೇರಿ, ಅಭಿಷೇಕ ಉಮಚಗಿ, ಪ್ರಶಾಂತ ಗಾಂಜಿ, ಶರಣು ಗಾಂಜಿ, ಗಂಗಾಧರ ಸವಣೂರ, ಹನುಮಂತಪ್ಪ ಶೆರಸೂರಿ, ಸಂತೋಷ ಅಳಗುಂಡಿ, ಆದೇಶ ಸವಣೂರ, ವಿನಾಯಕ ಸಪಡ್ಲ, ಸಾಗರ ಮೆಹರವಾಡೆ, ಅಕ್ಷಯ ಅಚಲಕರ, ಯಶವಂತ ಶಿರಹಟ್ಟಿ, ಗುದ್ನೇಪ್ಪ ಸೊಪ್ಪಿನ ಸೇರಿದಂತೆ ವಿವಿಧ ಗಣೇಶ ಮಂಡಳಿಗಳ ಪದಾಧಿಕಾರಿಗಳು ಹಾಗೂ ಹಿಂದೂ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

ಜನವನದಲ್ಲಿ ಗುರುವಂದನಾ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಗ್ರಾಮೀಣ ವಿಶ್ವವಿದ್ಯಾಲಯದ ಜನವನದಲ್ಲಿ ಎಲ್‌ಐಸಿ ವಿಮಾ ಪ್ರತಿನಿಧಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ವಿಶೇಷವೆಂದರೆ, ಎಲ್‌ಐಸಿ ವಿಮಾ ಪ್ರತಿನಿಧಿಗಳು ತಮ್ಮ ಗುರು ಹಾಗೂ ಮಾರ್ಗದರ್ಶಕರಾದ ಬಿ.ಬಿ. ದೇಶಪಾಂಡೆ ಅವರಿಗೆ ಪ್ರಕೃತಿಯ ಮಡಿಲಿನಲ್ಲಿ ಸರಳವಾಗಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಿದರು.

ಬಿ.ಬಿ. ದೇಶಪಾಂಡೆ ಅವರು ಸುಮಾರು ನಾಲ್ಕು ದಶಕಗಳ ಕಾಲ ಎಲ್‌ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಹಲವು ವಿಮಾ ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಶಿಷ್ಯ ಬಳಗವೇ ಒಗ್ಗೂಡಿ ಈ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಬಿ. ದೇಶಪಾಂಡೆ ಹಾಗೂ ಅವರ ಪತ್ನಿ ಭಾರತಿ ದೇಶಪಾಂಡೆ, ಪ್ರತಿಯೊಬ್ಬರೂ ತಮ್ಮ ತಾಯಿ ಹೆಸರಿನಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಜನವನವು ಉತ್ತಮ ಪರಿಸರ ತಾಣವಾಗಿದ್ದು, ಇಲ್ಲಿ ಸಾರ್ವಜನಿಕರು ಹುಟ್ಟುಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರಕೃತಿಯ ನಡುವೆ ಆಚರಿಸಬಹುದು ಎಂದು ಅಭಿಪ್ರಾಯಪಟ್ಟರು. ತಾವು ಕೂಡ ಶೀಘ್ರದಲ್ಲೇ ಜನವನಕ್ಕೆ ಹಲವು ಹಣ್ಣಿನ ಸಸಿಗಳನ್ನು ನೀಡುವುದಾಗಿ ತಿಳಿಸಿದರು.

ಮೌನೇಶ ಭಜಂತ್ರಿ ಮಾತನಾಡಿ, ದೇಶಪಾಂಡೆ ಅವರ ಬಳಿ ಹಲವು ಜನರು ಕಲಿತು ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಅವರು ಪ್ರಕೃತಿ ಪ್ರಿಯರಾಗಿರುವುದರಿಂದ ಈ ಗುರುವಂದನಾ ಕಾರ್ಯಕ್ರಮವನ್ನು ಜನವನದಲ್ಲಿ ಆಯೋಜಿಸಲಾಗಿದೆ. ದುಂದು ವೆಚ್ಚ ಮಾಡುವುದು ಬೇಡ ಎಂಬುದು ದೇಶಪಾಂಡೆ ಅವರ ಆಶಯ. ಹೀಗಾಗಿ ಕೇಕ್, ಉಡುಗೊರೆ ಸೇರಿದಂತೆ ದುಂದು ವೆಚ್ಚದ ಆಚರಣೆಗಳನ್ನು ಬದಿಗಿಟ್ಟು, ಪ್ರಕೃತಿಯ ಮಧ್ಯೆ ಸರಳ ರೀತಿಯಲ್ಲಿ ಅವರಿಗೆ ಸನ್ಮಾನ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಮೇಶ ಅಣ್ಣಿಗೇರಿ, ವಿನಯ ಶಲವಡಿ, ಸಿದ್ದು ಬಣಗಾರ, ಮಂಜುನಾಥ ಸೊಪ್ಪಿಮಠ, ಶರೀಫಸಾಬ್ ನದಾಫ್, ನಾಮದೇವ ಲಮಾಣಿ, ವಿರೂಪಾಕ್ಷ ಮಳ್ಳಿ, ಪ್ರದೀಪ ಅಂಗಡಿ, ನಿರ್ಮಲಾ ಕದಡಿ, ಕವಿತಾ ಉಪವಾಸಿ, ರೇಖಾ ಕುರಿ, ರೇಖಾ ಸಾತಣ್ಣವರ, ಲಕ್ಷ್ಮೀ ಸೋಮಣ್ಣವರ, ಶ್ರೀದೇವಿ ಕಮ್ಮಾರ, ಸಿಂಧು ಹಡಪದ, ಶೀಲಾ ಚಳ್ಳಮರದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಾಸಾಬಿ ಮಿರ್ಜಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಣವಿ ಗ್ರಾಮದ ಸರ್ಕಾರಿ ಹಿರಿಯ ಉರ್ದು ಗಂಡು ಮಕ್ಕಳ ಶಾಲೆಯ ಶಿಕ್ಷಕಿ ಶ್ರೀಮತಿ ಮಾಸಾಬಿ ಗುಡುಸಾಬ ಮಿರ್ಜಿಯವರಿಗೆ 2026ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸೆಪ್ಟೆಂಬರ್ 5ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾಸಾಬಿ ಮಿರ್ಜಿಯವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಕರ್ತವ್ಯನಿಷ್ಠೆಯನ್ನು ಪರಿಗಣಿಸಿ ಅವರಿಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಡಿಡಿಪಿಐ ಬುರಡಿ, ಬಿಇಒ ನಡುವಿನಮನಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗದಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ವನ್ಯಜೀವಿಗಳ ಸುರಕ್ಷತೆಗೆ ಅರಣ್ಯ ಇಲಾಖೆ ಕ್ರಮ; ಬಂಡೀಪುರ ಸಫಾರಿ ವಾಹನಗಳಿಗೆ GPS ಕಣ್ಗಾವಲು!

ಚಾಮರಾಜನಗರ: ವನ್ಯಜೀವಿಗಳ ಸಹಜ ಚಲನವಲನಕ್ಕೆ ತೊಂದರೆಯಾಗದಂತೆ ಹಾಗೂ ಪ್ರವಾಸಿಗರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ವಾಹನಗಳಿಗೆ ಜಿಪಿಎಸ್ ಹಾಗೂ ಡ್ಯಾಶ್‌ ಕ್ಯಾಮೆರಾ ಅಳವಡಿಸಲಾಗಿದೆ.

ಬಂಡೀಪುರ ಸಫಾರಿ ವಲಯದಲ್ಲಿ ಸಂಚರಿಸುವ 18 ವಾಹನಗಳಿಗೆ ಜಿಪಿಎಸ್ ಮತ್ತು ಡ್ಯಾಶ್‌ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಸಫಾರಿ ವೇಳೆ ವಾಹನಗಳ ಚಲನವಲನದ ಮೇಲೆ ನಿಗಾ ಇಡಲು ಇದರಿಂದ ಸಾಧ್ಯವಾಗಲಿದೆ.

ಸಫಾರಿ ವೇಳೆ ಹುಲಿ, ಚಿರತೆ ಸೇರಿದಂತೆ ವನ್ಯಜೀವಿಗಳು ಕಾಣಿಸಿಕೊಂಡಾಗ ಚಾಲಕರು ಇತರೆ ಸಫಾರಿ ವಾಹನಗಳಿಗೆ ಮಾಹಿತಿ ನೀಡುತ್ತಿದ್ದರು. ಇದರಿಂದ ಒಂದೇ ಸಮಯದಲ್ಲಿ ಹಲವು ವಾಹನಗಳು ಪ್ರಾಣಿಗಳು ಇರುವ ಸ್ಥಳಕ್ಕೆ ತೆರಳಿ ಜಮಾಯಿಸುತ್ತಿದ್ದವು.

ಹಲವು ವಾಹನಗಳು ಒಂದೇ ಕಡೆ ಸೇರುವುದರಿಂದ ವನ್ಯಜೀವಿಗಳ ಸಹಜ ಸಂಚಾರ ಹಾಗೂ ಬೇಟೆ ಚಟುವಟಿಕೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇತ್ತು. ಇದನ್ನು ತಡೆಯಲು ಜಿಪಿಎಸ್ ಹಾಗೂ ಡ್ಯಾಶ್‌ ಕ್ಯಾಮೆರಾ ವ್ಯವಸ್ಥೆ ಅಳವಡಿಸಲಾಗಿದೆ.

ಸಫಾರಿ ವಲಯದ ಹೊರಗಿನ ನಿರ್ಬಂಧಿತ ಪ್ರದೇಶಗಳಿಗೂ ಕೆಲವರು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೂರುಗಳು ಕೇಳಿಬಂದಿದ್ದವು. ಇಂತಹ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವುದನ್ನು ತಡೆಯಲು ಹಾಗೂ ವಾಹನಗಳ ಸಂಚಾರದ ಮೇಲೆ ನಿಗಾ ವಹಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ.

ಈ ಹಿಂದೆ ನಿರ್ಬಂಧಿತ ಪ್ರದೇಶಗಳಲ್ಲಿ ಪ್ರವಾಸಿಗರು ತೆರಳಿದ ಸಂದರ್ಭದಲ್ಲಿ ವನ್ಯಜೀವಿಗಳಿಂದ ದಾಳಿಗೆ ಒಳಗಾದ ಘಟನೆಗಳೂ ನಡೆದಿದ್ದವು. ಹೀಗಾಗಿ ಪ್ರವಾಸಿಗರು ಹಾಗೂ ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ಈ ಕುರಿತು ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯಾಧಿಕಾರಿ ಕೆ.ಪಿ. ಸತೀಶ್ ಕುಮಾರ್ ಮಾತನಾಡಿ, ಜಿಪಿಎಸ್ ಹಾಗೂ ಡ್ಯಾಶ್‌ ಕ್ಯಾಮೆರಾ ಅಳವಡಿಕೆಯಿಂದ ಸಫಾರಿ ವಾಹನಗಳು ಸಂಚರಿಸುವ ಮಾರ್ಗ, ವೇಗ ಹಾಗೂ ಸಫಾರಿ ವೇಳೆ ನಡೆಯುವ ಚಟುವಟಿಕೆಗಳ ಕುರಿತು ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಸಫಾರಿ ವೇಳೆ ನಡೆಯುವ ಘಟನೆಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಲಿದ್ದು, ವನ್ಯಜೀವಿಗಳು ಹಾಗೂ ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ತಂತ್ರಜ್ಞಾನ ಅಳವಡಿಕೆ ಹೆಚ್ಚು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಅಮರೇಶ್ ಮಲ್ಲಣ್ಣವರಿಗೆ ಗೌರವ ಡಾಕ್ಟರೇಟ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಶಿಕ್ಷಣ ತಜ್ಞ, ಸಾಹಿತಿ ಹಾಗೂ ಸಮಾಜ ಸೇವಕ ಅಮರೇಶ್ ಮಲ್ಲಣ್ಣವರ ಅವರಿಗೆ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಸುಧಾರಣೆಗೆ ಒತ್ತು ನೀಡುವುದರ ಜತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಅಮರೇಶ್ ಮಲ್ಲಣ್ಣವರ ಅವರ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಅವರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಕಾರ್ಯಗಳು ಪ್ರಶಸ್ತಿಗೆ ಪ್ರಮುಖ ಕಾರಣವಾಗಿವೆ.

ಇದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿರುವ ಅವರು, ಸಾಮಾಜಿಕ ಕಾಳಜಿ ಹಾಗೂ ಶಿಕ್ಷಣದ ಮಹತ್ವವನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಗ್ರಾಮೀಣ ಹಿನ್ನೆಲೆಯಿಂದ ಬೆಳೆದು ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ಅಮರೇಶ್ ಮಲ್ಲಣ್ಣವರಿಗೆ ಗೌರವ ಡಾಕ್ಟರೇಟ್ ಲಭಿಸಿರುವುದು ಸವಡಿ ಗ್ರಾಮ ಸೇರಿದಂತೆ ರೋಣ ತಾಲೂಕಿನ ಜನರಲ್ಲಿ ಸಂತಸ ಮೂಡಿಸಿದೆ.

ಅವರ ಸಾಧನೆಗೆ ವಿವಿಧ ಗಣ್ಯರು, ಶಿಕ್ಷಣ ಪ್ರೇಮಿಗಳು, ಸಾಹಿತಿಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿಯೂ ಶಿಕ್ಷಣ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ಇನ್ನಷ್ಟು ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದ್ದಾರೆ.

ಜಿಲ್ಲಾ ಉತ್ತಮ ಶಿಕ್ಷಕಿ ಭಾರತಿ ಕುಲಕರ್ಣಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಸದಾ ಅಧ್ಯಯನಶೀಲರಾಗಿರಬೇಕು. ಮುಗ್ಧ ಮಕ್ಕಳ ಮನಸ್ಸಿನಲ್ಲಿ ಅಕ್ಷರದ ಬೀಜ ಬಿತ್ತುವ ಕಾರ್ಯದಲ್ಲಿ ನಿರಂತರ ತೊಡಗಿ, ಅವರ ಭವ್ಯ ಭವಿಷ್ಯಕ್ಕೆ ಸಕಲ ರೀತಿಯಲ್ಲಿ ಸಿದ್ಧಗೊಳಿಸುವ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ಗದುಗಿನ ಸರ್ಕಾರಿ ಮಾದರಿ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶ್ರೀಮತಿ ಭಾರತಿ ಕುಲಕರ್ಣಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ವ್ಯಕ್ತಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರಲ್ಲಿ ಅಕ್ಷರದ ಅರಿವು ಮೂಡಿಸಿ, ಅವರನ್ನು ಉನ್ನತ ವ್ಯಕ್ತಿಗಳನ್ನಾಗಿ ರೂಪಿಸಲು ಅಗತ್ಯವಾದ ಅಡಿಪಾಯವನ್ನು ಪ್ರಾಥಮಿಕ ಹಂತದಲ್ಲಿಯೇ ಗಟ್ಟಿಗೊಳಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳ ಭವಿಷ್ಯದ ನಿಜವಾದ ರೂವಾರಿಗಳು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಬಿ.ವಿ. ಕುಲಕರ್ಣಿ, ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ‘ನನ್ನತನ’ದ ಜತೆಗೆ ಸಾಮಾಜಿಕ ಅರಿವನ್ನೂ ಮೂಡಿಸುತ್ತವೆ. ಶಿಕ್ಷಕರು ಪರಿಶ್ರಮದಿಂದ ಕಲಿಸುವಿಕೆಯಲ್ಲಿ ತೊಡಗಿಸಿಕೊಂಡಾಗ ಮಕ್ಕಳು ಕಲಿಕೆಯಲ್ಲಿ ಯಶಸ್ಸು ಸಾಧಿಸುತ್ತಾರೆ. ತಮ್ಮ ಪರಿಶ್ರಮವನ್ನು ಸಮುದಾಯ ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.

ಅಕ್ಕಮಹಾದೇವಿಯ ಕದಳಿಶ್ರೀ ಮಹಿಳಾ ವೇದಿಕೆ ವತಿಯಿಂದ ಭಾರತಿ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಿ, ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿಯರಾದ ವಿ.ಎಸ್. ಜಕರಡ್ಡಿ ಹಾಗೂ ಎಚ್.ಎಲ್. ಆಸಂಗಿ, ಶಿಕ್ಷಕಿಯರಾದ ವಿ.ಎ. ಕುಂಟೋಜಿ, ಸರ್ವಮಂಗಳಾ ಗುಜಮಾಗಡಿ, ಮಂಜುಳಾ ಕೊಳ್ಳಿ, ರೇಣುಕಾ ಹೊಸಮನಿ, ಎಫ್.ಎಸ್. ಹಿರೇಮಠ, ಶೋಭಾ ವಗ್ಗಿ, ಶ್ರೇಯಾ ಬಾರಾಟಕ್ಕೆ ಸೇರಿದಂತೆ ಶಾಲಾ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.

ಉತ್ತಮ ಯೋಚನೆಗಳೇ ಬದುಕಿನ ಯಶಸ್ಸಿನ ಬೀಜಗಳು : ಸುಮಂತ ಕುಮುಚಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಮನಸ್ಸು ಒಂದು ಉದ್ಯಾನವನವಿದ್ದಂತೆ. ಉತ್ತಮ ಯೋಚನೆಗಳೇ ಅದರಲ್ಲಿನ ಬೀಜಗಳು. ಹೂವು ಬೆಳೆಯಬೇಕೋ, ಕಳೆ ಬೆಳೆಯಬೇಕೋ ಎಂಬುದನ್ನು ನಿರ್ಧರಿಸುವವರು ನಾವೇ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಯೋಚನೆಗಳನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಚಿಂತಕ ಸುಮಂತ ಕುಮುಚಗಿ ಹೇಳಿದರು.

ಗದುಗಿನ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ. ೧ ಹಾಗೂ ಹೆಣ್ಣು ಮಕ್ಕಳ ಶಾಲೆ ನಂ. ೧ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಆಯೋಜಿಸಿದ್ದ ಶ್ರಾವಣ ಮಾಸದ ‘ಅಮೃತ ಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಕರು ನಮ್ಮ ಬದುಕಿನ ದಾರಿದೀಪ. ಬಾಲ್ಯದಲ್ಲಿಯೇ ಬದುಕಿನ ಸುಂದರ ಕಲ್ಪನೆಗಳನ್ನು ಮಕ್ಕಳಲ್ಲಿ ಮೂಡಿಸಿ, ಅವುಗಳಿಗೆ ರೆಕ್ಕೆ ಕಟ್ಟಿ ಪ್ರಗತಿಯತ್ತ ಕೊಂಡೊಯ್ಯುವವರು ಶಿಕ್ಷಕರು. ಇಂದು ನಾವು ಸಾಧನೆ ಮಾಡಿದ್ದರೆ ಅದರ ಹಿಂದೆ ಶಿಕ್ಷಕರ ಅಭಯ ಹಸ್ತವಿದೆ. ಹೀಗಾಗಿ ಮಕ್ಕಳು ಶಿಕ್ಷಕರನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.

ಮಕ್ಕಳಿಗೆ ಸಿಹಿಭೋಜನ ವಿತರಿಸಿ ಮಾತನಾಡಿದ ಚಿಂತಕಿ ರೇಣುಕಾ ಅಮಾತ್ಯ, ನಮ್ಮ ಹೆಸರುಗಳು ಕೇವಲ ಗುರುತಿನ ಚೀಟಿಗಳಲ್ಲ. ಅವು ನಮ್ಮ ಮನೋಭಾವ, ಸಮಾಜದ ದೃಷ್ಟಿಕೋನ ಹಾಗೂ ಮೌಲ್ಯಗಳನ್ನು ರೂಪಿಸುವ ಶಕ್ತಿ ಹೊಂದಿವೆ. ಹೆಸರನ್ನು ಹಸಿರಾಗಿಸಿಕೊಳ್ಳಲು ಮಕ್ಕಳು ಸಜ್ಜನರ ಸಂಗ ಮಾಡಬೇಕು. ಶಿಕ್ಷಕರು, ತಂದೆ-ತಾಯಿ ಹಾಗೂ ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಚಿಂತಕಿ ಶಿವಲೀಲಾ ಅಕ್ಕಿ, ನಮ್ಮಲ್ಲಿ ಸಮರಸತೆಯ ಭಾವನೆ ನನಸಾಗಬೇಕು. ಇಷ್ಟಪ್ರೇಮ ಹಾಗೂ ಗುರುಭಕ್ತಿ ಸದೃಢವಾಗಬೇಕು. ಆಪ್ತತೆ ಮತ್ತು ವಿನಮ್ರತೆ ಸದಾ ಇರಲಿ. ದುಶ್ಚಟಗಳಿಂದ ದೂರವಿದ್ದು, ಗುರುವಿನ ಆದೇಶಗಳನ್ನು ಪಾಲಿಸುತ್ತ ಏಕಾಗ್ರತೆಯಿಂದ ಶಿಕ್ಷಣ ಪಡೆದು ಉತ್ತಮ ಮಕ್ಕಳಾಗಬೇಕು ಎಂದು ಸಲಹೆ ನೀಡಿದರು.

ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯವು ಸರ್ಕಾರಿ ಶಾಲೆಗಳಿಗೆ ಆಗಮಿಸಿ ಅಗತ್ಯ ಸೌಲಭ್ಯಗಳ ಬಗ್ಗೆ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಸಿಹಿಭೋಜನದ ಜತೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳು ಹಾಗೂ ಶಿಕ್ಷಕ ಬಳಗಕ್ಕೆ ಸ್ಫೂರ್ತಿ ತುಂಬುತ್ತಿರುವ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಎಂ.ಕೆ.ಬಿ.ಎಸ್. ನಂ. ೧ ಹಾಗೂ ಕೆ.ಜಿ.ಎಸ್. ನಂ. ೧ ಶಾಲೆಗಳ ಮಕ್ಕಳಿಗೆ ಸಿಹಿಭೋಜನ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಸಂಜನಾ ಸಾಳುಂಕೆ, ದಿವ್ಯ ದೊಡ್ಡಮನಿ, ಪಲ್ಲವಿ ಪತ್ತಾರ ಹಾಗೂ ವೈಷ್ಣವಿ ಶಿಗ್ಲಿ ವಚನ ಪ್ರಾರ್ಥನೆ ನೆರವೇರಿಸಿದರು.

ಮುಖ್ಯೋಪಾಧ್ಯಾಯಿನಿ ವಿ.ಎಸ್. ಜಕರಡ್ಡಿ ಸ್ವಾಗತಿಸಿದರು. ಎಚ್.ಎಲ್. ಆಸಂಗಿ ಪರಿಚಯಿಸಿದರು. ವಿ.ಎ. ಕುಂಟೋಜಿ ನಿರೂಪಿಸಿದರು. ಸರ್ವಮಂಗಳಾ ಗುಜಮಾಗಡಿ ನಿರ್ವಹಿಸಿದರು. ಎಫ್.ಎಸ್. ಹಿರೇಮಠ ವಂದಿಸಿದರು.

ಶೋಭಾ ವಗ್ಗಿ, ಶ್ರೇಯಾ ಬಾರಾಟಕ್ಕೆ ಸೇರಿದಂತೆ ಶಾಲಾ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.

‘ಸಾಕ್ಷಿ’ ಕಿರುಚಿತ್ರ ಚಿತ್ರೀಕರಣ ಮುಕ್ತಾಯ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಕಲಾಪೋಷಕರ ಮಠ, ಸುಕ್ಷೇತ್ರ ಸಿದ್ಧನಕೊಳ್ಳದ ಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕೀರ್ತನ ಮೂವಿ ಮೇಕರ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಸಾಕ್ಷಿ’ ಕಿರುಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಕಲನ ಕಾರ್ಯ ಆರಂಭವಾಗಿದೆ.

ಕೊಲೆ ರಹಸ್ಯವನ್ನು ಭೇದಿಸುವ ರೋಚಕ ಕಥಾಹಂದರ ಹೊಂದಿರುವ ಈ ಕಿರುಚಿತ್ರದ ಚಿತ್ರೀಕರಣ ಬೆಂಗಳೂರಿನ ವಿವಿಧೆಡೆ ಐದು ದಿನಗಳ ಕಾಲ ನಡೆದಿದೆ.

ಈ ಹಿಂದೆ ‘ಒಬ್ಬಟ್ಟು’ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಹಾಸ್ಯ ಕಥಾಹಂದರದ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿ ಬಿಡುಗಡೆ ಮಾಡಿರುವ ನಿರ್ದೇಶಕ ಲೋಕೇಶ್ ವಿದ್ಯಾಧರ, ಇದೀಗ ತಮ್ಮ ನಿರ್ದೇಶನದ ಎರಡನೇ ಸಿನಿಮಾ ‘ಹೂಗಾರ’ ಚಲನಚಿತ್ರವನ್ನು ಸೆನ್ಸಾರ್‌ಗೆ ಕಳುಹಿಸಲು ಅಂತಿಮ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮೂರನೇ ಸಸ್ಪೆನ್ಸ್, ಥ್ರಿಲ್ಲರ್ ಹಿನ್ನೆಲೆಯ ಸಿನಿಮಾದ ಸ್ಕ್ರಿಪ್ಟ್ ಸಿದ್ಧಪಡಿಸಲಾಗುತ್ತಿದ್ದು, ಕಲಾವಿದರ ಆಯ್ಕೆಯೂ ನಡೆದಿದೆ.

ತಂಡದ ಸದಸ್ಯರು ಬಿಡುವಿನ ಅವಧಿಯಲ್ಲೂ ಸಕ್ರಿಯವಾಗಿರಲು ಕಿರುಚಿತ್ರ ನಿರ್ಮಿಸುವ ನಿರ್ಧಾರ ಕೈಗೊಂಡು ‘ಸಾಕ್ಷಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಮುಂದಿನ ತಿಂಗಳು ಒಟಿಟಿ ಹಾಗೂ ಯೂಟ್ಯೂಬ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಚಿತ್ರಪ್ರೇಮಿಗಳು ತಂಡವನ್ನು ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಲೋಕೇಶ್ ವಿದ್ಯಾಧರ ತಿಳಿಸಿದ್ದಾರೆ.

ಕಿರುಚಿತ್ರದಲ್ಲಿ ಲೋಕೇಶ್ ವಿದ್ಯಾಧರ, ವಿದ್ಯಾಶ್ರೀ, ಹುನಗುಂದದ ಮಹಾಂತೇಶ್ ಹಳ್ಳೂರ, ಸತೀಶ್ ಶೆಟ್ಟಿ, ಮುತ್ತುರಾಜ್ ಬುದ್ನಿ, ಜೀವನ ಗೌಡ, ಗೀತಾ, ರೋಹಿತ್, ಪಲ್ಲವಿ, ಸುರೇಶ್ ಗ್ಲೋರಿ, ಕಿಟ್ಟಿ ತಾಳಿಕೋಟೆ ಮೊದಲಾದವರು ಅಭಿನಯಿಸಿದ್ದಾರೆ.

ಕ್ಯಾಮೆರಾ-ಬೆಟ್ಟೆಗೌಡ ಕಿಲಾರ, ಮೇಕಪ್-ಗೋವರ್ಧನ್, ಹೇರ್‌ಸ್ಟೈಲ್-ಶಿವು, ಸಂಕಲನ-ಶಿವರಾಜ್, ಡಿಐ-ಜೀವನ್, ನೃತ್ಯ-ರಾಜು ಮಾಸ್ಟರ್. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪತ್ರಿಕಾ ಸಂಪರ್ಕದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ಲೋಕೇಶ್ ವಿದ್ಯಾಧರ ವಹಿಸಿಕೊಂಡಿದ್ದಾರೆ. ಕೀರ್ತನ ಮೂವಿ ಮೇಕರ್ಸ್ ಹಾಗೂ ಚಿತ್ರತಂಡದ ಬಳಗದ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗಿದೆ.

ಲಿಂಗಾಯತ ಮಠಗಳಿಂದ ಶೈಕ್ಷಣಿಕ ಕ್ರಾಂತಿ: .ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಆಗಿದ್ದರೆ ಅದಕ್ಕೆ ಲಿಂಗಾಯತ ಮಠಗಳ ಕೊಡುಗೆ ಅಪಾರ. ಸ್ವಾತಂತ್ರ್ಯಪೂರ್ವದಲ್ಲೇ ಜಾತಿ–ಮತ ಭೇದವಿಲ್ಲದೆ ಪ್ರಸಾದ ನಿಲಯಗಳನ್ನು ತೆರೆದು ಬಡ ಮಕ್ಕಳಿಗೆ ಅನ್ನದಾಸೋಹದ ಜತೆಗೆ ಜ್ಞಾನದಾಸೋಹ ನೀಡಿದ ಪರಂಪರೆ ನಮ್ಮದು ಎಂದು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಗದುಗಿನ ಹಾಲಕೆರೆ ಮಠದ ಆನಂದಾಶ್ರಮದಲ್ಲಿ ಭಾನುವಾರ ನಡೆದ ಪೂಜ್ಯ ಅನ್ನದಾನ ಮಹಾಶಿವಯೋಗಿಗಳ 49ನೇ ಪುಣ್ಯಾರಾಧನೆ ಹಾಗೂ ನರೇಗಲ್ಲಿನ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅನ್ನದಾನೇಶ್ವರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದೇ ಮಠಗಳ ವೈಶಿಷ್ಟ್ಯ. ಮಕ್ಕಳು ವಿದ್ಯಾವಂತರಾಗಿ, ಜ್ಞಾನವಂತರಾಗಿ, ಶ್ರೇಷ್ಠ ವಿಜ್ಞಾನಿಗಳಾಗಬೇಕು ಎಂಬ ಉದ್ದೇಶದಿಂದ ಈ ಮಹಾವಿದ್ಯಾಲಯ ಆರಂಭಿಸಲಾಗಿದೆ. ಆನಂದಾಶ್ರಮದಲ್ಲಿ ಕಲಿತವರು ಜೀವನದುದ್ದಕ್ಕೂ ಆನಂದ ಪಡೆಯಲಿ ಎಂದರು.

ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಅನ್ನದಾಸೋಹ–ಜ್ಞಾನದಾಸೋಹದ ಸೇವೆಯನ್ನು ಶ್ಲಾಘಿಸಿದ ಅವರು, ವಯಸ್ಸಿನಲ್ಲಿ ಚಿಕ್ಕವರಾದರೂ ಜ್ಞಾನದಲ್ಲಿ ಹಿರಿಯರು ಎಂದು ಬಣ್ಣಿಸಿದರು.

90 ವರ್ಷ ಚೈತನ್ಯದಿಂದ ಬದುಕಿದ ಅನ್ನದಾನ ಶಿವಯೋಗಿಗಳು (ಬೆತ್ತದ ಅಜ್ಜ) 87ನೇ ವಯಸ್ಸಿನಲ್ಲೂ ಹಳ್ಳಿ–ಹಳ್ಳಿಗೆ ತೆರಳಿ ಭಿಕ್ಷೆ ಬೇಡಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 13 ಬೋರ್ಡಿಂಗ್‌ಗಳನ್ನು ಮುನ್ನಡೆಸಿದ ಮಹಾನ್ ಸಾಧಕರು. ಅವರ ಜೀವನಾಧಾರಿತ ಸಿನಿಮಾ ಆರು ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ತೋಂಟದ ಶ್ರೀಗಳು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಪೂಜ್ಯ ಜ.ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಿಕ್ಷಣವೇ ಬದುಕಿನ ಪೋಷಕಾಂಶ ಎಂದರು. ಕಾರು, ಬಂಗಲೆಗಳ ಕನಸಿಗಿಂತ ಆದರ್ಶವಾಗಿ ಬದುಕುವ ಕನಸು ಕಾಣಬೇಕು. ಸಮಯವನ್ನು ವ್ಯರ್ಥ ಮಾಡದೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಪ್ರಾ. ಎಂ.ಸಿ. ಕಟ್ಟಿಮನಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ಪಿ. ಸಂಶಿಮಠ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಹೇಶ್ವರ ಸ್ವಾಮಿಗಳು, ಡಾ.ಜಿ.ಕೆ. ಕಾಳೆ, ಆರ್.ಬಿ. ಪಾಟೀಲ, ಜಿ.ಎನ್. ಪಾಟೀಲ, ಡಿಡಿಪಿಐ ಆರ್.ಎಸ್. ಬುರಡಿ, ಡಾ.ಬಿ.ಎನ್. ಪಾಟೀಲ, ವ್ಹಿ.ಆರ್. ಪಾಟೀಲ, ಶರಣಬಸಪ್ಪ ಗುಡಿಮನಿ, ಗಿರೀಶಗೌಡ ಪಾಟೀಲ, ಈಶಣ್ಣ ಮುನವಳ್ಳಿ, ಸದು ಮದರಿಮಠ ಮತ್ತಿತರರು ಉಪಸ್ಥಿತರಿದ್ದರು. ಗಣ್ಯರು, ಭಕ್ತರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪರಿಶ್ರಮಕ್ಕೆ ಶಾರ್ಟ್‌ಕಟ್ ಇಲ್ಲ. ಗಿಡ ಹತ್ತಿದರೆ ಹಣ್ಣು ಸಿಗುತ್ತದೆ; ಕೆಳಗೆ ಮಲಗಿದರೆ ಸಿಗುವುದಿಲ್ಲ. ವಿದ್ಯಾರ್ಥಿಗಳು ಪ್ರಯತ್ನದಿಂದ ಜ್ಞಾನ ಸಂಪಾದಿಸಿ, ತಂದೆ–ತಾಯಿ ಹಾಗೂ ಗುರುಹಿರಿಯರನ್ನು ಗೌರವಿಸಿ, ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.

— ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ತೋಂಟದಾರ್ಯ ಮಠ, ಗದಗ

ಬರಹದಂತೆ ಬದುಕುವ ಸಾಹಿತಿಗಳಿಂದ ಸಮಾಜಕ್ಕೆ ಪರಿಣಾಮಕಾರಿ ಸಂದೇಶ: ನೀಲಕಂಠ ಮರಡಿ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಬರಹದಂತೆ ಬದುಕುವ ಸಾಹಿತಿಗಳು ಮಾತ್ರ ಸಮಾಜಕ್ಕೆ ಪರಿಣಾಮಕಾರಿ ಸಂದೇಶ ನೀಡಲು ಸಾಧ್ಯ. ನಡೆ–ನುಡಿಗಳಲ್ಲಿನ ಏಕತೆಯಿಂದ ಸಮಾಜದಲ್ಲಿ ಮನ್ನಣೆ ಗಳಿಸಲು ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ನೀಲಕಂಠ ಮರಡಿ ಹೇಳಿದರು.

ಪಟ್ಟಣದ ಜ. ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಅವರ ‘ಬದುಕು–ಬರಹ’ ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಹಿರೇವಡ್ಡಟ್ಟಿಯಿಂದ ಗದಗಕ್ಕೆ ಬಂದು ಕಡುಬಡತನದ ನಡುವೆಯೇ ಟ್ಯೂಷನ್, ಪತ್ರಿಕಾರಂಗ ಹಾಗೂ ಬರಹದ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಐ.ಕೆ. ಕಮ್ಮಾರ ಅವರು ಹಿಂದೂ–ಮುಸ್ಲಿಂ ಭಾವೈಕ್ಯತೆ ಸಾರುವ ಹಲವು ಕೃತಿಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅವರ 22 ಕೃತಿಗಳು ಮೌಲ್ಯಯುತವಾಗಿದ್ದು, ಯಾವುದೇ ಹಮ್ಮು–ಬಿಮ್ಮು, ಪ್ರಚಾರ ಬಯಸದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವ್ಯ, ನಾಟಕ, ಸಂವಾದ, ಕಾದಂಬರಿ ಹಾಗೂ ಅಧ್ಯಾತ್ಮಕ ಬರಹ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರ ಸಾಹಿತ್ಯ ಸೇವೆ ನಿರಂತರವಾಗಿದೆ. ಇಂತಹ ಸಾಹಿತಿಯ ಬದುಕು–ಬರಹದ ಕುರಿತು ಕಸಾಪ ಕಾರ್ಯಕ್ರಮ ಆಯೋಜಿಸಿರುವುದು ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಎನ್.ಡಿ. ಕೆಲೂರ ಮಾತನಾಡಿ, ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕಿನ ಸಾಹಿತಿಗಳ ಸಮಗ್ರ ಪರಿಚಯ ಹಾಗೂ ಅವರ ಬದುಕು–ಬರಹದ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ತೆರೆಮರೆಯಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿರುವ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕು ಎಂದರು.

ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಮಾತನಾಡಿ, ತಮ್ಮ ತವರು ನೆಲದಲ್ಲಿಯೇ ಕೃತಿ ಪರಿಚಯ ಹಾಗೂ ಅವಲೋಕನ ನಡೆಯುತ್ತಿರುವುದು ಅತೀವ ಸಂತಸ ತಂದಿದೆ. ಜೀವನಾನುಭವವೇ ಸಾಹಿತ್ಯದ ಮೂಲವಾಗಿದ್ದು, ಸಮಾಜದ ನೈಜ ಬದುಕು ಹಾಗೂ ಆಗುಹೋಗುಗಳು ಕಾವ್ಯ–ಕಥೆಗಳಿಗೆ ಪ್ರೇರಣೆಯಾಗುತ್ತವೆ. ತಮ್ಮ ಕೃತಿಗಳ ರಚನೆಗೆ ಮಣಕವಾಡ ಶ್ರೀಗಳು ಹಾಗೂ ಪುಟ್ಟರಾಜ ಗವಾಯಿಗಳಂತಹ ಪುಣ್ಯಪುರುಷರ ಪ್ರೇರಣೆ ಮತ್ತು ಶಕ್ತಿ ಕಾರಣವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಎಸ್.ಬಿ. ಹಿರೇಮಠ, ಉಪಾಧ್ಯಕ್ಷ ಶಂಕರ ಕುಕನೂರ, ಕಾರ್ಯಕಾರಿಣಿ ಸದಸ್ಯರಾದ ರಮೇಶ ಪಾಟೀಲ, ಸಿ.ಕೆ. ಗಣಪ್ಪನವರ, ಗುಡ್ಲಾನೂರ, ಮಧುಮತಿ ಇಳಕಲ್, ಎಸ್.ಬಿ.ಕೆ. ಗೌಡರ, ಆರ್.ಎಲ್. ಪೋಲಿಸಪಾಟೀಲ, ನಿಂಗು ಸೊಲಗಿ, ನಾಗೇಶ ಹುಬ್ಬಳ್ಳಿ, ಸಿ.ಎಸ್. ಅರಸನಾಳ, ಮಹೇಶ ಮೇಟಿ, ಲಿಂಗರಾಜ ದಾವಣಗೆರೆ, ಜಯಶ್ರೀ ಅಳವಂಡಿ, ಜ್ಯೋತಿ ಕುರಿಯವರ, ಕೊಟ್ರೇಶ ಜವಳಿ, ಕಳಕಪ್ಪ ಜಲ್ಲಿಗೇರಿ ಮತ್ತಿತರರು ಪಾಲ್ಗೊಂಡಿದ್ದರು.

ನಿಂಗಪ್ಪ ಕುರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಸಾಪ ಗೌರವ ಕಾರ್ಯದರ್ಶಿ ವೀಣಾ ಪಾಟೀಲ ಸ್ವಾಗತಿಸಿದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಎಂ. ಮುಲ್ಲಾ ನಿರೂಪಿಸಿದರು.

ಸಾಹಿತ್ಯ ಮತ್ತು ಕಾವ್ಯ ಉಳ್ಳವರ ಮನೆಯಲ್ಲಿ ಹುಟ್ಟುವುದಿಲ್ಲ; ನೊಂದ–ಬೆಂದ ಸಮಾಜದ ಆಗುಹೋಗುಗಳು ಹಾಗೂ ನೈಜ ಬದುಕಿನ ಅನುಭವದಿಂದ ಹುಟ್ಟುತ್ತವೆ. ಸಾಹಿತ್ಯ ಸಮಾಜಕ್ಕೆ ಉಪಯುಕ್ತವಾದಾಗ ಸಾಹಿತಿಯ ಕೆಲಸ ಸಾರ್ಥಕವಾಗುತ್ತದೆ.

— ಐ.ಕೆ. ಕಮ್ಮಾರ, ಹಿರಿಯ ಸಾಹಿತಿ