Home Blog Page 4

ರಿಲೀಸ್ ದಿನ ಶೋ ಕ್ಯಾನ್ಸಲ್… ಈಗ 120 ಕೋಟಿ ಕಲೆಕ್ಷನ್: ‘ಕರುಪ್ಪು’ ಮೂಲಕ ಸೂರ್ಯ ಕಂಬ್ಯಾಕ್

ಚೆನ್ನೈ: ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಅಭಿನಯದ ‘ಕರುಪ್ಪು’ ಸಿನಿಮಾ ಭಾರೀ ಯಶಸ್ಸಿನತ್ತ ದೌಡಾಯಿಸುತ್ತಿದೆ. ಬಿಡುಗಡೆಯ ದಿನವೇ ಹಣಕಾಸು ಮತ್ತು ವಿತರಣಾ ಸಮಸ್ಯೆ ಎದುರಿಸಿದ್ದ ಈ ಚಿತ್ರ, ಇದೀಗ ಕೇವಲ ಮೂರು ದಿನಗಳಲ್ಲಿ 120 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ.

ಆರ್.ಜೆ. ಬಾಲಾಜಿ ನಿರ್ದೇಶನದ ಈ ಫ್ಯಾಂಟಸಿ ಆಕ್ಷನ್ ಡ್ರಾಮಾ ಚಿತ್ರ ಹಲವು ವರ್ಷಗಳ ಬಳಿಕ ಸೂರ್ಯ ಅವರಿಗೆ ದೊಡ್ಡ ಹಿಟ್ ನೀಡಿದೆ. ಮೂಲತಃ ತ್ರಿಷಾ ಅವರನ್ನು ಗಮನದಲ್ಲಿಟ್ಟುಕೊಂಡು ಕಥೆ ಸಿದ್ಧಪಡಿಸಲಾಗಿತ್ತು. ನಂತರ ಕಥೆಗೆ ಮಾಸ್ ಅಂಶಗಳನ್ನು ಸೇರಿಸಿ ಸೂರ್ಯ ಅವರಿಗೆ ಹೇಳಲಾಗಿದ್ದು, ಅವರು ಸಿನಿಮಾ ಒಪ್ಪಿಕೊಂಡಿದ್ದರು.

ಮೊದಲ ದಿನ 15.50 ಕೋಟಿ, ಎರಡನೇ ದಿನ 24.15 ಕೋಟಿ ಹಾಗೂ ಮೂರನೇ ದಿನ 28.35 ಕೋಟಿ ರೂಪಾಯಿ ಗಳಿಕೆಯೊಂದಿಗೆ ಸಿನಿಮಾ ಭಾರತದಲ್ಲಿ 68 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಗ್ರಾಸ್ ಕಲೆಕ್ಷನ್ 78 ಕೋಟಿ ರೂಪಾಯಿ ಆಗಿದ್ದು, ವಿದೇಶಗಳಲ್ಲಿ 42 ಕೋಟಿ ರೂಪಾಯಿ ಗಳಿಕೆಯಾಗಿದೆ. ಇದರೊಂದಿಗೆ ಚಿತ್ರದ ಒಟ್ಟು ಕಲೆಕ್ಷನ್ 120 ಕೋಟಿ ರೂಪಾಯಿ ದಾಟಿದೆ.

ಸಿನಿಮಾ ಶೂಟಿಂಗ್ ಹಂತದಲ್ಲಿಯೇ ಅನುಮತಿ ಸಮಸ್ಯೆಯಿಂದ ತೊಂದರೆ ಎದುರಿಸಿತ್ತು. ಚೆನ್ನೈ ಬಳಿ ಪೊಲೀಸರು ಚಿತ್ರೀಕರಣ ತಡೆದಿದ್ದರು. ಬಿಡುಗಡೆಯ ದಿನವೂ ಹಣಕಾಸಿನ ಸಮಸ್ಯೆಯಿಂದ ಮೊದಲ ಶೋಗಳು ರದ್ದಾದವು. ಆದರೆ ಬಳಿಕ ಎಲ್ಲಾ ಸಮಸ್ಯೆಗಳು ಬಗೆಹರಿದು ಸಿನಿಮಾ ಮೇ 15ರಂದು ಯಶಸ್ವಿಯಾಗಿ ಬಿಡುಗಡೆಯಾಯಿತು.

ವಿವಾದಗಳು, ಅಡೆತಡೆಗಳು ಮತ್ತು ವಿಳಂಬಗಳ ನಡುವೆಯೂ ‘ಕರುಪ್ಪು’ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಸೂರ್ಯ-ತ್ರಿಷಾ ಜೋಡಿ ಮತ್ತೆ ಮ್ಯಾಜಿಕ್ ಮಾಡಿದೆ.

ಸಾಂಗ್-ಟ್ರೇಲರ್ ವಿವಾದಗಳ ಮಧ್ಯೆಯೂ ‘ಕೆಡಿ’ ಸಕ್ಸಸ್: ಧ್ರುವ ಸರ್ಜಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್

ಬೆಂಗಳೂರು: ಪ್ರೇಮ್ ನಿರ್ದೇಶನ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆಡಿ: ದಿ ಡೆವಿಲ್’ ಸಿನಿಮಾ ವಿವಾದಗಳ ನಡುವೆಯೇ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಮೂರು ವಾರಗಳ ಪ್ರದರ್ಶನದಲ್ಲಿ ಸಿನಿಮಾ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ.

ಬೆಂಗಳೂರು ಅಂಡರ್‌ವರ್ಡ್ ಹಿನ್ನೆಲೆಯ ಈ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಇದುವರೆಗೆ 10,795 ಶೋಗಳು ಸಿಕ್ಕಿದ್ದು, ಆರಂಭಿಕ ದಿನಗಳಲ್ಲೇ ಉತ್ತಮ ಓಪನಿಂಗ್ ಪಡೆದಿತ್ತು. ಮೂರನೇ ಭಾನುವಾರವೂ ಸಿನಿಮಾ 39 ಲಕ್ಷ ರೂಪಾಯಿ ಗಳಿಕೆ ಮಾಡಿದ್ದು, ಕಲೆಕ್ಷನ್ ಸ್ಥಿರವಾಗಿಯೇ ಇದೆ. ಉಪಗ್ರಹ ಹಾಗೂ ಒಟಿಟಿ ಹಕ್ಕುಗಳ ಮಾರಾಟದಿಂದ ಸಿನಿಮಾ ಲಾಭದ ಹಾದಿಯಲ್ಲಿದೆ ಎನ್ನಲಾಗುತ್ತಿದೆ.

ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಹಲವು ವಿವಾದಗಳು ಸದ್ದು ಮಾಡಿದ್ದವು. ‘ಸೆರಗ ಸರ್ಸೆ’ ಹಾಡಿನ ಸಾಹಿತ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ನೋರಾ ಫತೇಹಿ ಕಾಣಿಸಿಕೊಂಡಿದ್ದ ಈ ಹಾಡು ಅಶ್ಲೀಲವಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಲಾಗಿತ್ತು. ಬಳಿಕ ಚಿತ್ರತಂಡ ಹಾಡನ್ನು ಯೂಟ್ಯೂಬ್ ಮತ್ತು ಸಿನಿಮಾದಿಂದ ತೆಗೆದುಹಾಕಿತ್ತು.

ಟ್ರೇಲರ್‌ನಲ್ಲಿದ್ದ ಕೆಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ವಿರೋಧ ವ್ಯಕ್ತಪಡಿಸಿದ್ದರಿಂದ ಮೊದಲ ಟ್ರೇಲರ್ ಡಿಲೀಟ್ ಆಗಿ, ನಂತರ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಲಾಗಿತ್ತು. ಈ ವಿವಾದಗಳ ಪರಿಣಾಮವಾಗಿ ಸಿನಿಮಾ ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ, ಇತರ ಭಾಷೆಗಳ ಡಬ್ಬಿಂಗ್ ಆವೃತ್ತಿಗಳು ತಡವಾಗಿ ಬಂದವು.

ವಿವಾದಗಳ ನಡುವೆಯೂ ಧ್ರುವ ಸರ್ಜಾ ಅಭಿಮಾನಿಗಳು ಸಿನಿಮಾವನ್ನು ಬೆಂಬಲಿಸಿದ್ದು, ‘ಕೆಡಿ’ಗೆ ಉತ್ತಮ ಮೈಲೇಜ್ ಸಿಕ್ಕಿದೆ.

ಗದಗದಲ್ಲಿ ಗುಡುಗು-ಸಿಡಿಲಿನ ಆರ್ಭಟ! ಧರೆಗುರುಳಿದ ಮರಗಳು: ಗಾಳಿಗೆ ಹಾರಿ ಬಂದ ತಗಡು, ಮಹಿಳೆ ಜಸ್ಟ್ ಮಿಸ್!

ಗದಗ: ಭಾನುವಾರ ಸಂಜೆ ಗದಗ ಜಿಲ್ಲೆಯಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.

ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯ ರೌದ್ರಾವತಾರ ಕಂಡುಬಂದಿದೆ.

ಭಾರೀ ಗಾಳಿ–ಮಳೆಯ ಪರಿಣಾಮ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಇದರಿಂದ ಹಲವು ವಾಹನಗಳು ಜಖಂಗೊಂಡಿದ್ದು, ಕೆಲವೆಡೆ ಸಂಚಾರವೂ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.

ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದ ವಾಹನ ಸವಾರರು ಪರದಾಡಿದರೆ, ರಸ್ತೆಗಳಲ್ಲಿ ನೀರು ನಿಂತು ಸಂಚಾರ ವ್ಯತ್ಯಯ ಉಂಟಾಗಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪು ನೀಡಿದರೂ, ಬಿರುಗಾಳಿಯ ಆರ್ಭಟ ಆತಂಕ ಹೆಚ್ಚಿಸಿದೆ.

ಜಿಮ್ಸ್ ಬಳಿ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು:

ಗದಗ ಜಿಮ್ಸ್ ಆಸ್ಪತ್ರೆ ಸಮೀಪ ಬಿರುಗಾಳಿಯ ರಭಸಕ್ಕೆ ಕಟ್ಟಡದ ತಗಡೊಂದು ಹಾರಿ ಬಂದು ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಮಹಿಳಾ ಹೋಮ್ ಗಾರ್ಡ್ ಒಬ್ಬರ ಸಮೀಪ ಬಿದ್ದ ಘಟನೆ ಆತಂಕ ಸೃಷ್ಟಿಸಿದೆ. ಕ್ಷಣಾರ್ಧದಲ್ಲಿ ಎಚ್ಚೆತ್ತುಕೊಂಡ ಹೋಮ್ ಗಾರ್ಡ್ ಬದಿಗೆ ಸರಿದ ಪರಿಣಾಮ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಡ್ಯೂಟಿ ಮುಗಿಸಿಕೊಂಡು ಮನೆ ಕಡೆ ಬರಲು ಬಸ್ ಹತ್ತಲು ಹೋಗುವಾಗ ಈ ಘಟನೆ ನಡೆದಿದೆ.

ಮಕಾನ ಗಲ್ಲಿಯಲ್ಲಿ ತಪ್ಪಿದ ಭಾರೀ ದುರಂತ:

ನಗರದ ಮಕಾನ ಗಲ್ಲಿಯಲ್ಲಿ ಬೃಹತ್ ಮರವೊಂದು ಧರೆಗುರುಳಿದ ಪರಿಣಾಮ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಲ್ಲೇ ನಿಲ್ಲಿಸಿದ್ದ ಮೋಟಾರ್ ಸೈಕಲ್ ಸಂಪೂರ್ಣ ಜಖಂಗೊಂಡಿದೆ. ಭಾನುವಾರ ಮಾರುಕಟ್ಟೆ ಬಂದ್ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿದ್ಯುತ್ ಕಂಬಗಳು ಬಿದ್ದ ಕಾರಣ ಎರಡು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಹೆಸ್ಕಾಂ ಹಾಗೂ ನಗರಸಭೆ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಬಂದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ:

ಬಸವೇಶ್ವರ ಸರ್ಕಲ್ ಬಳಿ ಸಿಡಿಲು ಬಡಿದ ಪರಿಣಾಮ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಮನೆಯ ಮೇಲೆ ಮರ ಬಿದ್ದು ಹಾನಿ:

ಗಂಗಾಪೂರ ಪೇಟೆಯ ದುರ್ಗಾದೇವಿ ಗುಡಿ ಸಮೀಪ ಶ್ರೀಕಾಂತ್ ಹಬೀಬ ಅವರ ಮನೆಯ ಮೇಲೆ ಭಾರೀ ತೆಂಗಿನ ಮರ ಬಿದ್ದ ಪರಿಣಾಮ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನಾಗಾವಿಯಲ್ಲಿ ಕಾರು ಜಖಂ:

ನಾಗಾವಿ ಗ್ರಾಮದಲ್ಲಿ ಮರಗಳು ಧರೆಗುರುಳಿದ ಪರಿಣಾಮ ಬೃಹತ್ ಮರೊಂದು ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ.

ಎಪಿಎಂಸಿ ಹಾಗೂ ಕ್ರೀಡಾಂಗಣಕ್ಕೂ ಹಾನಿ:

ಗದಗ ಎಪಿಎಂಸಿ ಆವರಣದಲ್ಲೂ ಮರಗಳು ಉರುಳಿಬಿದ್ದಿದ್ದು, ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಬಳಿ ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಮುಳಗುಂದ ರಸ್ತೆಯ ಕನಕ ಭವನ ಸಮೀಪದ ಇಂಡೋರ್ ಸ್ಟೇಡಿಯಂ ಭಾಗಕ್ಕೂ ಹಾನಿ ಸಂಭವಿಸಿದೆ.

ಭಾರೀ ಮಳೆಯ ಅಬ್ಬರದಿಂದ ಅವಳಿ ನಗರ ಜನತೆ ತತ್ತರಿಸಿದರೆ, ಮತ್ತೊಂದೆಡೆ ಈ ಮಳೆ ಮುಂಗಾರು ಬಿತ್ತನೆಗೆ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಆರ್‌ಸಿಬಿಗೆ 23 ರನ್‌ಗಳ ಭರ್ಜರಿ ಜಯ: ಪ್ಲೇಆಫ್‌ಗೆ ಭರ್ಜರಿ ಎಂಟ್ರಿ, ಪಂಜಾಬ್ ಗೆ ಹ್ಯಾಟ್ರಿಕ್ ಸೋಲು!

ಐಪಿಎಲ್ 2026ರ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂ ಕಿಂಗ್ಸ್ ವಿರುದ್ಧ 23 ರನ್‌ಗಳ ಅಮೋಘ ಜಯ ಸಾಧಿಸಿ ಪ್ಲೇಆಫ್‌ಗೆ ಭರ್ಜರಿ ಪ್ರವೇಶ ಪಡೆದಿದೆ.

ಜೋಶ್ ಹೇಜಲ್ವುಡ್ ಅವರ ಮಾರಕ ಬೌಲಿಂಗ್ ದಾಳಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಸೋಲು ಕಂಡಿತು.

ಪಂಜಾಬ್ ಪರ ಶಶಾಂಕ್ ಸಿಂಗ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಉತ್ತಮ ಜೊತೆಯಾಟ ನೀಡಿದ್ದರು. ಇಬ್ಬರೂ ಸೇರಿ 32 ಎಸೆತಗಳಲ್ಲಿ 67 ರನ್ ಗಳಿಸಿ ತಂಡಕ್ಕೆ ಹೋರಾಟದ ಆಸೆ ನೀಡಿದ್ದರು. ಆದರೆ 19ನೇ ಓವರ್‌ನಲ್ಲಿ ಜೋಶ್ ಹೇಜಲ್ವುಡ್ ಪಂದ್ಯವನ್ನು ಸಂಪೂರ್ಣವಾಗಿ ಆರ್‌ಸಿಬಿ ಕಡೆ ತಿರುಗಿಸಿದರು. ಆ ಓವರ್‌ನಲ್ಲಿ ಸ್ಟೋಯ್ನಿಸ್ ವಿಕೆಟ್ ಪಡೆಯುವ ಮೂಲಕ ಪಂಜಾಬ್‌ಗೆ ದೊಡ್ಡ ಹೊಡೆತ ನೀಡಿದರು.

ಪಂಜಾಬ್ 16 ಓವರ್‌ಗಳಲ್ಲಿ 160 ರನ್ ಗಳಿಸಿದ್ದಾಗ ಗೆಲುವಿಗೆ 24 ಎಸೆತಗಳಲ್ಲಿ 63 ರನ್ ಅಗತ್ಯವಿತ್ತು. ಈ ಹಂತದಲ್ಲಿ ಹೇಜಲ್ವುಡ್ ನೀಡಿದ ಬಿಗಿ ಬೌಲಿಂಗ್ ಪಂದ್ಯವನ್ನು ಸಂಪೂರ್ಣವಾಗಿ ಆರ್‌ಸಿಬಿ ಹಿಡಿತಕ್ಕೆ ತಂದಿತು.

ಚೇಸಿಂಗ್ ಆರಂಭದಲ್ಲಿ ಪಂಜಾಬ್ ಕಿಂಗ್ಸ್ 3.2 ಓವರ್‌ಗಳಲ್ಲಿ 19 ರನ್ ಗಳಿಸಿದ್ದಾಗಲೇ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಸೂರ್ಯಾಂಶ್ ಶೆಡ್ಜ್ (35), ಸ್ಟೋಯ್ನಿಸ್ (37) ಹಾಗೂ ಶಶಾಂಕ್ ಸಿಂಗ್ (56 ರನ್, 27 ಎಸೆತ) ಹೋರಾಟ ನೀಡಿದರೂ ಗೆಲುವಿಗೆ ಸಾಕಾಗಲಿಲ್ಲ.

ಆರ್‌ಸಿಬಿ ಪರ ವೆಂಕಟೇಶ್ ಅಯ್ಯರ್ ಅಜೇಯ 73 ರನ್ (40 ಎಸೆತ) ಹಾಗೂ ವಿರಾಟ್ ಕೊಹ್ಲಿ 58 ರನ್ (37 ಎಸೆತ) ಸಿಡಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ದೇವದತ್ ಪಡಿಕ್ಕಲ್ 45 ರನ್ ಗಳಿಸಿದರು. ಟಿಮ್ ಡೇವಿಡ್ ಕೂಡ 28 ರನ್‌ಗಳ ವೇಗದ ಕೊಡುಗೆ ನೀಡಿದರು.

ಬೌಲಿಂಗ್‌ನಲ್ಲಿ ಹೇಜಲ್ವುಡ್ ಜೊತೆಗೆ ರಸಿಕ್ ಸಲೀಮ್ 3 ವಿಕೆಟ್ ಪಡೆದು ಮಿಂಚಿದರು. ಭುವನೇಶ್ವರ್ ಕುಮಾರ್ ಕೂಡ ಆರಂಭಿಕ ಹೊಡೆತ ನೀಡಿದರು.

ಈ ಜಯದೊಂದಿಗೆ ಆರ್‌ಸಿಬಿ ಐಪಿಎಲ್ 2026ರ ಪ್ಲೇಆಫ್‌ಗೆ ಅಧಿಕೃತವಾಗಿ ಪ್ರವೇಶ ಪಡೆದಿದ್ದು, ಪಂಜಾಬ್ ಕಿಂಗ್ಸ್‌ಗೆ ಪ್ಲೇಆಫ್ ಹಾದಿ ಇನ್ನಷ್ಟು ಕಠಿಣವಾಗಿದೆ.

 

ಕೋಲಾರದಲ್ಲಿ ಭೀಕರ ಅಪಘಾತ: ಸರ್ವೀಸ್ ರಸ್ತೆಯಿಂದ ಕಾರು ಪತನ, ನಾಲ್ವರಿಗೆ ಗಂಭೀರ ಗಾಯ!

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ನರಸಿಂಹತೀರ್ಥ ಅಂಡರ್ ಪಾಸ್ ಬಳಿ ನಿರ್ಮಾಣ ಹಂತದ ಸರ್ವೀಸ್ ರಸ್ತೆ ಮೇಲಿಂದ ಕಾರೊಂದು ಬಿದ್ದ ಪರಿಣಾಮ 11 ತಿಂಗಳ ಮಗು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿ 75ರ ಅಂಡರ್ ಪಾಸ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬ ಇಂದು ಬೆಳಗ್ಗೆ ಸುಮಾರು 3 ಗಂಟೆಗೆ ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸರ್ವೀಸ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಏಕಾಏಕಿ ಕೆಳಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಘಟನೆಯಿಂದ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಸ್ಥಳೀಯರು ಅವೈಜ್ಞಾನಿಕವಾಗಿ ನಿರ್ಮಿಸಿರುವ ಸರ್ವೀಸ್ ರಸ್ತೆಯ ಕಾರಣದಿಂದಲೇ ಈ ರೀತಿಯ ಅಪಘಾತಗಳು ಮರುಕಳಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಘಟನೆ ಕುರಿತು ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ಮಕ್ಕಳ ವರ್ತನೆ ಮೂಲಕ ಹಸಿವು ಗುರುತಿಸುವುದು ಹೇಗೆ? ತಜ್ಞರ ಮಹತ್ವದ ಸಲಹೆ!

ಸಣ್ಣ ಮಕ್ಕಳು, ವಿಶೇಷವಾಗಿ 5 ವರ್ಷದೊಳಗಿನವರು, ತಮ್ಮ ಹಸಿವು ಅಥವಾ ಅಸಹಜತೆಯನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ.

ಅವರು ಸಾಮಾನ್ಯವಾಗಿ ಅಳುವುದು, ಕೋಪಗೊಳ್ಳುವುದು ಅಥವಾ ವರ್ತನೆಯಲ್ಲಿ ಬದಲಾವಣೆ ತೋರಿಸುವ ಮೂಲಕ ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸುತ್ತಾರೆ.

ಆದ್ದರಿಂದ ಪೋಷಕರು ಮಕ್ಕಳ ದಿನನಿತ್ಯದ ವರ್ತನೆ ಮತ್ತು ಸೂಚನೆಗಳ ಮೇಲೆ ವಿಶೇಷ ಗಮನ ಹರಿಸುವುದು ಅತ್ಯಂತ ಮುಖ್ಯ ಎಂದು ತಜ್ಞರು ಹೇಳಿದ್ದಾರೆ. ವೈದ್ಯರ ಪ್ರಕಾರ, ಹಸಿವಾದಾಗ ಮಕ್ಕಳು ಸಾಮಾನ್ಯಕ್ಕಿಂತ ಹೆಚ್ಚು ಚಿಡಿಚಿಡಿಯಾಗಿ ವರ್ತಿಸಬಹುದು ಅಥವಾ ಪದೇಪದೇ ಅಳಬಹುದು. ಕೆಲ ಮಕ್ಕಳು ಅಡುಗೆಮನೆಯ ಕಡೆಗೆ ಹೋಗುವುದು, ಆಹಾರದ ಡಬ್ಬಿ ಅಥವಾ ಚಮಚವನ್ನು ನೋಡಿದಾಗ ಆಸಕ್ತಿ ತೋರಿಸುವುದು ಕೂಡ ಹಸಿವಿನ ಪ್ರಮುಖ ಸೂಚನೆಗಳಾಗಿವೆ.

ಇದಲ್ಲದೆ, ಆಟದಲ್ಲಿ ಆಸಕ್ತಿ ಕಡಿಮೆಯಾಗುವುದು, ದಣಿವು ಕಾಣಿಸಿಕೊಳ್ಳುವುದು ಮತ್ತು ಗಮನ ಕೇಂದ್ರೀಕರಿಸಲು ಕಷ್ಟಪಡುವುದು ಕೂಡ ಮಕ್ಕಳಲ್ಲಿ ಹಸಿವಿನ ಲಕ್ಷಣಗಳಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.

ತಜ್ಞರ ಅಭಿಪ್ರಾಯದಂತೆ, ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಹಾರ ನೀಡುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್ ಹಾಗೂ ಇತರ ಪೋಷಕಾಂಶಗಳು ದೊರೆಯುತ್ತವೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ನಿಯಮಿತ ಆಹಾರ ಸೇವನೆಯಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗಿ, ಅವರು ದಿನಪೂರ್ತಿ ಚುರುಕಾಗಿ ಇರುತ್ತಾರೆ. ಜೊತೆಗೆ ತೂಕ ಮತ್ತು ಎತ್ತರ ಸಮತೋಲನವಾಗಿ ಬೆಳೆಯಲು ಸಹಾಯವಾಗುತ್ತದೆ ಹಾಗೂ ಪೌಷ್ಟಿಕಾಂಶ ಕೊರತೆಯ ಅಪಾಯವೂ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಕೋಲಾರ ಜಿಲ್ಲೆದಲ್ಲಿ ದಾರುಣ ದುರಂತ: ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಮತ್ತು ಇಬ್ಬರು ಮಕ್ಕಳು ಸಾವು!

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ನಕ್ಕನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಮೃತರನ್ನು ಶ್ರೀನಿವಾಸ್ (40), ಅವರ ಮಕ್ಕಳಾದ ಚೇತನ್ (13) ಹಾಗೂ ರಾಜೇಶ್ (8) ಎಂದು ಗುರುತಿಸಲಾಗಿದೆ. ಈ ಘಟನೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ಭಾನುವಾರ ರಜಾದಿನವಾಗಿದ್ದ ಕಾರಣ ಶ್ರೀನಿವಾಸ್ ಅವರು ತಮ್ಮ ಮಕ್ಕಳಿಗೆ ಈಜು ಕಲಿಸಲು ಕೃಷಿ ಹೊಂಡದ ಬಳಿ ಕರೆದೊಯ್ದಿದ್ದರು. ಗ್ರಾಮದ ಭೈರಪ್ಪ ಎಂಬುವರಿಗೆ ಸೇರಿದ ಕೃಷಿ ಹೊಂಡದ ಬಳಿ ತೆರಳಿದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಕ್ಷಣಾರ್ಧದಲ್ಲಿ ಮೂವರೂ ನೀರಿನಲ್ಲಿ ಮುಳುಗಿ ಹೊರಬರಲಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಘಟನೆ ಗ್ರಾಮದಲ್ಲಿ ಆಘಾತ ಹಾಗೂ ಶೋಕದ ವಾತಾವರಣವನ್ನು ಉಂಟುಮಾಡಿದೆ.

ಘಟನೆ ಕುರಿತು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂಧನ ದರ ಏರಿಕೆ ಎಫೆಕ್ಟ್; ಬೆಂಗಳೂರಿನಲ್ಲಿ ಕ್ಯಾಬ್, ಟ್ಯಾಕ್ಸಿ ದರ ಹೆಚ್ಚಳಕ್ಕೆ ಚಾಲಕರ ಒತ್ತಾಯ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರ ಏರಿಕೆಯ ಪರಿಣಾಮವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿ ದರ ಹೆಚ್ಚಳದ ಸಾಧ್ಯತೆ ಎದುರಾಗಿದೆ. ಓಲಾ, ಉಬರ್ ಚಾಲಕರ ಸಂಘಟನೆಗಳು ಪ್ರತಿ ಕಿಲೋಮೀಟರ್‌ಗೆ ₹5ರಿಂದ ₹10ರವರೆಗೆ ದರ ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ.

ಈ ಕುರಿತು ಅಗ್ರಿಗೇಟರ್ ಕಂಪನಿಗಳು ಹಾಗೂ ಸಾರಿಗೆ ಇಲಾಖೆಯ ಮೇಲೆ ಒತ್ತಡ ಹೇರಲು ಚಾಲಕರ ಸಂಘಟನೆಗಳು ಮುಂದಾಗಿವೆ. ಒಂದು ವೇಳೆ ಸಾರಿಗೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದರೆ, ಬೆಂಗಳೂರಿನ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆ ಬೀಳುವುದು ಖಚಿತವಾಗಿದೆ.

ಪ್ರಸ್ತುತ ಓಲಾ, ಉಬರ್ ಸೇರಿದಂತೆ ಅಗ್ರಿಗೇಟರ್ ಕಂಪನಿಗಳು ಸಾಮಾನ್ಯ ಅವಧಿಯಲ್ಲಿ ಪ್ರತಿ ಕಿಲೋಮೀಟರ್‌ಗೆ ವಾಹನ ಮಾಲೀಕರಿಗೆ ₹10ರಿಂದ ₹12ರವರೆಗೆ ಮಾತ್ರ ನೀಡುತ್ತಿವೆ. ಪೀಕ್ ಅವರ್ ಸಂದರ್ಭದಲ್ಲೂ ಗರಿಷ್ಠ ₹20ರವರೆಗೆ ಮಾತ್ರ ಪಾವತಿಸುತ್ತಿವೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಧನ ದರ ನಿರಂತರ ಏರಿಕೆಯಿಂದ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿದ್ದು, ಪ್ರಸ್ತುತ ದರದಲ್ಲಿ ಸೇವೆ ನೀಡುವುದು ಕಷ್ಟಕರವಾಗಿದೆ ಎಂದು ಚಾಲಕರ ಸಂಘಟನೆಗಳು ಹೇಳಿವೆ.

ಹೀಗಾಗಿ ಡೀಸೆಲ್ ಮತ್ತು ಇತರೆ ಇಂಧನ ವೆಚ್ಚದ ಏರಿಕೆಯನ್ನು ಪರಿಗಣಿಸಿ ಪ್ರತಿ ಕಿಲೋಮೀಟರ್‌ಗೆ ಕನಿಷ್ಠ ₹5ರಿಂದ ₹10ರವರೆಗೆ ಹೆಚ್ಚಳ ಮಾಡಲೇಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.

ಇತ್ತೀಚೆಗೆ ಖಾಸಗಿ ಬಸ್ ಹಾಗೂ ಖಾಸಗಿ ಶಾಲಾ ವಾಹನ ದರ ಏರಿಕೆಯ ಬಳಿಕ ಇದೀಗ ಕ್ಯಾಬ್ ಮತ್ತು ಟ್ಯಾಕ್ಸಿ ದರ ಏರಿಕೆಯ ಮಾತು ಕೇಳಿಬರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಶಾಲಾ ಹಾಜರಾತಿ ವೇಳೆ ‘Yes Sir’ ಬದಲು ‘ಜೈ ಶ್ರೀರಾಮ್’ ಹೇಳಲು ವಿದ್ಯಾರ್ಥಿಗಳಿಗೆ ಯತ್ನಾಳ್ ಕರೆ

ವಿಜಯಪುರ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಿ ಶಾಲೆಗೆ ತೆರಳುವಂತೆ ಕರೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಜೂನ್‌ನಲ್ಲಿ ಶಾಲೆಗಳು ಆರಂಭವಾದ ಬಳಿಕ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೇಸರಿ ಶಾಲು ವಿತರಿಸುವುದಾಗಿ ಘೋಷಿಸಿದರು.

ಇನ್ನು ಮುಂದೆ ಶಾಲೆಗಳಲ್ಲಿ ಹಾಜರಾತಿ ವೇಳೆ ‘ಎಸ್ ಸರ್’ ಎನ್ನುವ ಬದಲು ‘ಜೈ ಶ್ರೀರಾಮ್’ ಎಂದು ಹೇಳಬೇಕು. ಶಿಕ್ಷಕರಿಗೆ ನಮಸ್ಕರಿಸುವಾಗಲೂ ‘ಜೈ ಶ್ರೀರಾಮ್’ ಎನ್ನಬೇಕು ಎಂದು ಅವರು ಕರೆ ನೀಡಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಕೇಸರಿ ಶಾಲು ಧರಿಸುವುದಕ್ಕೆ ನಿಷೇಧ ಹೇರಲು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟವರು ಯಾರು? ಕೇಸರಿ ಶಾಲು ಹಾಕುವುದು ನಮ್ಮ ಹಕ್ಕು ಎಂದು ಹೇಳಿದರು.

ರಾಜ್ಯದ ಎಲ್ಲಾ ಹಿಂದೂ ಪೋಷಕರಿಗೆ ಕರೆ ನೀಡಿದ ಅವರು, ತಮ್ಮ ಮಕ್ಕಳಿಗೆ ತಿಲಕ ಇಟ್ಟು, ಕೇಸರಿ ಶಾಲು ಹಾಕಿಸಿ ಶಾಲೆಗೆ ಕಳುಹಿಸಿ. ಇದನ್ನು ಹೇಗೆ ತಡೆಯುತ್ತಾರೆ ಎಂಬುದನ್ನು ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು.

ಇದೇ ವೇಳೆ ಮಧ್ಯಪ್ರಾಚ್ಯದಲ್ಲಿನ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಇದ್ದಾಗ ತಮಿಳುನಾಡಿನಲ್ಲಿ ಸ್ಟಾಲಿನ್ ಇಂಧನ ದರ ಇಳಿಕೆ ಮಾಡಿದ್ದರು. ಅದೇ ರೀತಿ ಬಿಜೆಪಿ ಸರ್ಕಾರವೂ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದರು. ಈಗ ದಮ್ ಇದ್ದರೆ ರಾಜ್ಯದಲ್ಲಿ ದರ ಇಳಿಕೆ ಮಾಡಿ ತೋರಿಸಲಿ”ಎಂದು ಸವಾಲು ಹಾಕಿದರು.

ರಷ್ಯಾದ ಮೇಲೆ 550ಕ್ಕೂ ಹೆಚ್ಚು ಡ್ರೋನ್ʼಗಳಿಂದ ದಾಳಿ: 4 ಮಂದಿ ಸಾವು

ಮಾಸ್ಕೋ: ಉಕ್ರೇನ್ ಶನಿವಾರ ತಡರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭಾರೀ ಪ್ರಮಾಣದ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 500ಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಉಕ್ರೇನ್ ರಷ್ಯಾದ ಮೇಲೆ ನಡೆಸಿದ ಅತಿದೊಡ್ಡ ಡ್ರೋನ್ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ.

ರಷ್ಯಾ ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ರಾತ್ರಿ ನಡೆದ ದಾಳಿಯಲ್ಲಿ ಉಕ್ರೇನ್‌ನ 556 ಡ್ರೋನ್‌ಗಳು ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದು, ರಷ್ಯಾದ ವಾಯು ರಕ್ಷಣಾ ಪಡೆಗಳು ಅವುಗಳಲ್ಲಿ ಅನೇಕವನ್ನು ಹೊಡೆದುರುಳಿಸಿವೆ.

ಈ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪಶ್ಚಿಮ ರಷ್ಯಾದ ವಿವಿಧ ಭಾಗಗಳಲ್ಲಿನ ವಸತಿ ಕಟ್ಟಡಗಳು ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ತಿಳಿಸಲಾಗಿದೆ.

ಮಾಸ್ಕೋ ಪ್ರಾದೇಶಿಕ ಗವರ್ನರ್ ತಮ್ಮ ಟೆಲಿಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು, ಖಾಸಗಿ ಮನೆವೊಂದಕ್ಕೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೊಬ್ಬ ವ್ಯಕ್ತಿ ಅವಶೇಷಗಳಡಿ ಸಿಲುಕಿರುವ ಬಗ್ಗೆ ವರದಿಯಾಗಿದೆ.

“ಮುಂಜಾನೆ 3 ಗಂಟೆಯಿಂದಲೇ ನಮ್ಮ ವಾಯು ರಕ್ಷಣಾ ಪಡೆಗಳು ಉಕ್ರೇನ್ ಡ್ರೋನ್‌ಗಳನ್ನು ಹಿಮ್ಮೆಟ್ಟಿಸುತ್ತಿವೆ. ದಾಳಿಯ ವೇಳೆ ಹಲವು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಮಾಸ್ಕೋದಲ್ಲೇ ಕನಿಷ್ಠ 74 ಡ್ರೋನ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆಗಳು ತಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಡೆಹಿಡಿದ ಡ್ರೋನ್‌ಗಳ ಅವಶೇಷಗಳು ನೆಲಕ್ಕೆ ಬಿದ್ದ ಪರಿಣಾಮ 12 ಮಂದಿ ಗಾಯಗೊಂಡಿದ್ದಾರೆ. ವಿವಿಧ ಪ್ರದೇಶಗಳಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದೆ ಎಂದು ಮಾಸ್ಕೋ ಮೇಯರ್ ಸೆರ್ಗೇ ಸೊಬ್ಯಾನಿನ್ ತಿಳಿಸಿದ್ದಾರೆ. ಉಕ್ರೇನ್ ತನ್ನ ಡ್ರೋನ್ ಕಾರ್ಯಾಚರಣೆಗಳನ್ನು ಸಮರ್ಥಿಸಿಕೊಂಡಿದ್ದು, ರಷ್ಯಾದ ಮಿಲಿಟರಿ ಸೌಕರ್ಯಗಳು, ಲಾಜಿಸ್ಟಿಕ್ ಕೇಂದ್ರಗಳು ಹಾಗೂ ಯುದ್ಧಕ್ಕೆ ನೆರವಾಗುವ ಇಂಧನ ಮೂಲಸೌಕರ್ಯಗಳನ್ನೇ ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದೆ.

error: Content is protected !!