Home Blog Page 48

ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ PIL ವಜಾ: ಅರ್ಜಿದಾರರಿಗೆ ₹10 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1965ರವರೆಗೆ ನ್ಯಾಯಾಂಗ ವಿಚಾರಣಾ ಆಯೋಗ ರಚನೆ ಮಾಡದಿರುವ ಕಾರಣಗಳ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಜೊತೆಗೆ ಅರ್ಜಿದಾರರಿಗೆ ₹10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಜಾಗೃತ ಕರ್ನಾಟಕ ಮತ್ತು ಜಾಗೃತ ಭಾರತ ಸಂಘಟನೆಯ ಪ್ರತಿನಿಧಿ ಕೆ.ಎನ್. ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠವು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಮತ್ತೆ ಅದೇ ರೀತಿಯ ಮನವಿಗಳೊಂದಿಗೆ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಗಮನ ಸೆಳೆಯಿತು. ಅರ್ಜಿಯಲ್ಲಿ ಯಾವುದೇ ನೈಜ ಸಾರ್ವಜನಿಕ ಹಿತಾಸಕ್ತಿ ಅಂಶ ಕಂಡುಬರುವುದಿಲ್ಲ. ಈ ರೀತಿಯ ಅರ್ಜಿಗಳು ನ್ಯಾಯಾಂಗ ವ್ಯವಸ್ಥೆಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವಂತಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರು, ವಿಷಯದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದ್ದು, ತಮ್ಮ ವಾದವನ್ನು ಆಲಿಸಬೇಕೆಂದು ಮನವಿ ಮಾಡಿದರು. ಆದರೆ ನ್ಯಾಯಪೀಠ ಈ ವಾದವನ್ನು ಒಪ್ಪದೇ ಅರ್ಜಿಯನ್ನು ವಜಾಗೊಳಿಸಿ ದಂಡ ವಿಧಿಸಿತು.

ಅಲ್ಲದೆ, ವಿಧಿಸಲಾದ ₹10 ಸಾವಿರ ದಂಡದ ಮೊತ್ತವನ್ನು ಮುಂದಿನ ಎರಡು ವಾರಗಳೊಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?

ಅರ್ಜಿಯಲ್ಲಿ, ಮಹಾತ್ಮ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1948ರಿಂದ 1965ರವರೆಗೆ ಸುಮಾರು 17 ವರ್ಷಗಳ ಕಾಲ ನ್ಯಾಯಾಂಗ ವಿಚಾರಣಾ ಆಯೋಗ ರಚನೆ ಮಾಡದಿರುವ ಕಾರಣಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಲಾಗಿತ್ತು. ಜೊತೆಗೆ 1965ರಲ್ಲಿ ವಿಚಾರಣಾ ಆಯೋಗ ರಚನೆಗೆ ಕಾರಣವಾದ ಅಂಶಗಳನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂದು ಮನವಿ ಮಾಡಲಾಗಿತ್ತು.

ಇದರ ಜೊತೆಗೆ, ಭಾರತದ ವಿಭಜನೆಗೆ ಸಂಬಂಧಿಸಿದಂತೆ ಗಾಂಧೀಜಿ ಬರೆದಿದ್ದಾರೆ ಎನ್ನಲಾದ ಪತ್ರಗಳ ಹಿನ್ನೆಲೆ, ಅವರ ಆತ್ಮಕಥೆಯ ಕರಡು ದಾಖಲೆಗಳ ಸ್ಥಳಾಂತರ, ನೆಹರೂ ಸ್ಮಾರಕ ವಸ್ತುಸಂಗ್ರಹಾಲಯದಿಂದ ಕಾಣೆಯಾಗಿವೆ ಎನ್ನಲಾದ ದಾಖಲೆಗಳು ಹಾಗೂ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದ ಪತ್ರವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

2025ರ ನವೆಂಬರ್ 13 ಹಾಗೂ 2026ರ ಮಾರ್ಚ್ 13 ಮತ್ತು 25ರಂದು ವಿವಿಧ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದ ಮನವಿಗಳಿಗೆ ಎರಡು ವಾರಗಳೊಳಗೆ ಉತ್ತರ ನೀಡುವಂತೆ ನಿರ್ದೇಶನ ನೀಡಬೇಕು ಎಂಬ ಮಧ್ಯಂತರ ಮನವಿಯನ್ನೂ ಅರ್ಜಿದಾರರು ಸಲ್ಲಿಸಿದ್ದರು.

ಆದರೆ ಅರ್ಜಿಯಲ್ಲಿನ ಮನವಿಗಳು ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ರಾಜ್ಯಸಭೆ, ವಿಧಾನ ಪರಿಷತ್‍ʼಗೆ ಸಮರ್ಥ ಅಭ್ಯರ್ಥಿಗಳ ಆಯ್ಕೆ: ವಿಜಯೇಂದ್ರ

ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನೇ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ. ಈ ಆಯ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಂತಸ ತಂದಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಗೆ ನಾಗರಾಜ್ ಅವರನ್ನು ಹಾಗೂ ವಿಧಾನ ಪರಿಷತ್‍ಗೆ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಎಲ್ಲಾ ಮುಖಂಡರು ಪಕ್ಷದ ಸಂಘಟನೆಗೆ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿದ್ದವರು ಎಂದು ಹೇಳಿದರು.

ರಾಜ್ಯಸಭೆ ಅಭ್ಯರ್ಥಿ ಎಂ.ನಾಗರಾಜ್ ಅವರು, ಅತ್ಯಂತ ಹಿಂದುಳಿದ ಕುರುಬ ಸಮಾಜಕ್ಕೆ ಸೇರಿದವರು. ಆರ್‍ಎಸ್‍ಎಸ್ ಮತ್ತು ಎಬಿವಿಪಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಕ್ಷದ ಸಂಘಟನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದರು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ ಕೆಪಿಎಸ್‍ಸಿಯಲ್ಲೂ ಉತ್ತಮ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.

ವಿಧಾನ ಪರಿಷತ್ ಅಭ್ಯರ್ಥಿ ಲಿಂಗರಾಜ ಪಾಟೀಲ್ ಅವರು 37-38 ವರ್ಷಗಳಿಂದ ಸತತವಾಗಿ ಸಂಘಟನೆಯ ವಿವಿಧ ಜವಾಬ್ದಾರಿಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಿರ್ವಹಿಸಿದ್ದಾರೆ. ಸಂಘಟನೆಗೆ ಹಗಲು ರಾತ್ರಿ ದುಡಿದಿದ್ದಾರೆ. ಎಬಿವಿಪಿಯಲ್ಲೂ ಸೇವೆ ಸಲ್ಲಿಸಿದ್ದಾರೆ ಎಂದರು.

ರಘು ಕೌಟಿಲ್ಯ ಅವರು ಅತ್ಯಂತ ಹಿಂದುಳಿದ ಮಡಿವಾಳ ಸಮಾಜಕ್ಕೆ ಸೇರಿದವರು. ಶಿಕ್ಷಣ ಮತ್ತು ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ಈ ಎಲ್ಲರ ಆಯ್ಕೆ ಸಂತೋಷ ತಂದಿದೆ ಎಂದು ವಿವರಿಸಿದರು.

ಸರ್ಕಾರಿ ವೈದ್ಯರಿಗೆ ಗುಡ್ ನ್ಯೂಸ್: ವೇತನ ಹೆಚ್ಚಳ, ಗುತ್ತಿಗೆ ವೈದ್ಯರ ಖಾಯಂಗೆ ಆರೋಗ್ಯ ಸಚಿವ ಖಾದರ್ ಸುಳಿವು

0

ಮಂಗಳೂರು: ರಾಜ್ಯದಲ್ಲಿ ಸರ್ಕಾರಿ ವೈದ್ಯರ ಕೊರತೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರನ್ನು ಸರ್ಕಾರಿ ಸೇವೆಯಲ್ಲಿ ಉಳಿಸಿಕೊಳ್ಳಲು ಹಾಗೂ ಗ್ರಾಮೀಣ ಆರೋಗ್ಯ ವ್ಯವಸ್ಥೆ ಬಲಪಡಿಸಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಸುಳಿವು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯರ ವೇತನ ಹೆಚ್ಚಳದ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನಿವಾರಣೆಗಾಗಿ ಹೊಸ ನೀತಿ ರೂಪಿಸಲಾಗುತ್ತಿದ್ದು, ವೈದ್ಯರನ್ನು ಸರ್ಕಾರಿ ಸೇವೆಯತ್ತ ಆಕರ್ಷಿಸುವ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯರ ಭವಿಷ್ಯದ ಕುರಿತೂ ಮಹತ್ವದ ಚರ್ಚೆ ನಡೆಯುತ್ತಿದೆ. ಹಿಂದೆ ಮೂರು ವರ್ಷ ಸೇವೆ ಪೂರ್ಣಗೊಳಿಸಿದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. ಅದನ್ನು ಮತ್ತೆ ಜಾರಿಗೆ ತರಲು ಸರ್ಕಾರ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಖಾದರ್ ಹೇಳಿದರು.

ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ವೈದ್ಯರಿಗೆ ಉದ್ಯೋಗ ಭದ್ರತೆ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಶೀಘ್ರದಲ್ಲೇ ಈ ಸಂಬಂಧ ಮಹತ್ವದ ನಿರ್ಧಾರಗಳು ಹೊರಬೀಳುವ ಸಾಧ್ಯತೆ ಇದೆ ಎಂದು ಸಚಿವರು ಸೂಚನೆ ನೀಡಿದರು.

ಪೋಕ್ಸೋ ಪ್ರಕರಣ: ಬಿಎಸ್ ಯಡಿಯೂರಪ್ಪಗೆ ಬಿಗ್‌ ರಿಲೀಫ್‌ ನೀಡಿದ ಹೈಕೋರ್ಟ್ 

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಜಾಮೀನು ಮಂಜೂರು ಮಾಡುವ ವೇಳೆ ವಿಧಿಸಲಾಗಿದ್ದ ‘ನ್ಯಾಯಾಲಯದ ವ್ಯಾಪ್ತಿಯನ್ನು ಅನುಮತಿ ಇಲ್ಲದೆ ಬಿಟ್ಟು ಹೋಗಬಾರದು’ ಎಂಬ ಷರತ್ತನ್ನು ಹೈಕೋರ್ಟ್ ಸಡಿಲಗೊಳಿಸಿ ಆದೇಶ ಹೊರಡಿಸಿದೆ.

ಈ ಮೂಲಕ ಬಿ.ಎಸ್. ಯಡಿಯೂರಪ್ಪ ಅವರು ಇನ್ನು ಮುಂದೆ ಪ್ರತಿ ಬಾರಿ ನ್ಯಾಯಾಲಯದ ಅನುಮತಿ ಪಡೆಯದೇ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಳ್ಳಲು ಅವಕಾಶ ದೊರೆತಂತಾಗಿದೆ.

ಜಾಮೀನು ಷರತ್ತುಗಳಲ್ಲಿ ವಿಧಿಸಲಾಗಿದ್ದ ಸಂಚಾರ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅವರ ಮನವಿಯನ್ನು ಪರಿಗಣಿಸಿ ನಿರ್ಬಂಧಿತ ಷರತ್ತನ್ನು ಸಡಿಲಗೊಳಿಸಿದೆ.

ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ 2024ರ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಳೆಯ ಪ್ರಕರಣವೊಂದಕ್ಕೆ ನ್ಯಾಯ ದೊರಕಿಸುವಂತೆ ಮನವಿ ಮಾಡಲು ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ಆರೋಪಿಸಿದ್ದರು.

ಬಳಿಕ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದ್ದು, ಯಡಿಯೂರಪ್ಪ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದಿರುವ ಯಡಿಯೂರಪ್ಪ ಅವರಿಗೆ ಇದೀಗ ಹೈಕೋರ್ಟ್ ಸಂಚಾರ ಸಂಬಂಧದ ಷರತ್ತು ಸಡಿಲಗೊಳಿಸಿರುವುದು ಗಮನಾರ್ಹವಾಗಿದೆ.

ಅಂದು ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಜಿ. ಪರಮೇಶ್ವರ್

0

ತುಮಕೂರು: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ನೋವು ಹಂಚಿಕೊಂಡಿದ್ದಾರೆ. ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗುವುದು ತಮ್ಮ ರಾಜಕೀಯ ಜೀವನದ ಬಹುದೊಡ್ಡ ಕನಸಾಗಿತ್ತು. ಆದರೆ ಮೂರು ವಿಭಿನ್ನ ಸಂದರ್ಭಗಳಲ್ಲಿ ಆ ಅವಕಾಶ ತಮ್ಮ ಕೈತಪ್ಪಿದೆ ಎಂದು ಭಾವುಕರಾದರು.

2013ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದ ಪರಮೇಶ್ವರ್, ಆ ಚುನಾವಣೆಯಲ್ಲಿ ತಾವು ಸೋತಿದ್ದರಿಂದ ಮುಖ್ಯಮಂತ್ರಿ ಹುದ್ದೆಯ ಅವಕಾಶ ಕಳೆದುಕೊಂಡೆ. ಅಂದು ಗೆದ್ದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದರು.

2018ರ ಚುನಾವಣೆಯ ಬಳಿಕ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿದ್ದರೂ ಮೈತ್ರಿ ಸರ್ಕಾರ ರಚನೆಯಾದ ಕಾರಣ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಆ ಸಂದರ್ಭದಲ್ಲಿ ತಮಗೂ ಅವಕಾಶ ಸಿಗಬಹುದಿತ್ತು. ಆದರೆ ರಾಜಕೀಯ ಪರಿಸ್ಥಿತಿಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲೂ ಸಿಎಂ ಹುದ್ದೆಯ ನಿರೀಕ್ಷೆ ಇತ್ತು. ಆದರೆ ಹೈಕಮಾಂಡ್ ತೆಗೆದುಕೊಂಡ ನಿರ್ಧಾರದಂತೆ ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿ ಆ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಪಕ್ಷದ ನಾಯಕತ್ವದೊಂದಿಗೆ ನಡೆದ ಮಾತುಕತೆಯನ್ನು ನೆನಪಿಸಿಕೊಂಡ ಪರಮೇಶ್ವರ್, ಹುದ್ದೆಗಿಂತ ಪಕ್ಷದ ಹಿತ ಮುಖ್ಯ ಎಂದು ಸ್ಪಷ್ಟಪಡಿಸಿದ್ದೇನೆ. ಸಿಕ್ಕಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಜನರ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಗುರಿ ಎಂದು ತಿಳಿಸಿದರು.

ಆಟವಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ 14 ವರ್ಷದ ಬಾಲಕಿ ಸಾವು! ಹೃದಯಾಘಾತ ಶಂಕೆ

ಗಾಂಧಿನಗರ: ಹೋಟೆಲ್‌ನಲ್ಲಿ ಕುಟುಂಬದವರೊಂದಿಗೆ ಊಟ ಮುಗಿಸಿ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ 14 ವರ್ಷದ ಬಾಲಕಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ದುರ್ಘಟನೆ ಗುಜರಾತ್‌ನ ರಾಜ್ಕೋಟ್‌ನಲ್ಲಿ ನಡೆದಿದೆ.

ಜಾಮ್ನಗರ ಮೂಲದ ಆನಂದಿ ಮೋದಿ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ನಿಮಿತ್ತ ಆನಂದಿ ರಾಜ್ಕೋಟ್‌ನಲ್ಲಿರುವ ತನ್ನ ಮಾವನ ಮನೆಗೆ ಬಂದಿದ್ದಳು.

ಭಾನುವಾರ ಸಂಜೆ ಕುಟುಂಬ ಸದಸ್ಯರು ಹೋಟೆಲ್‌ಗೆ ತೆರಳಿ ಊಟ ಮಾಡಿದ್ದರು. ಊಟದ ಬಳಿಕ ಆನಂದಿ ಇತರೆ ಮಕ್ಕಳೊಂದಿಗೆ ಹೋಟೆಲ್ ಆವರಣದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಆಕೆ ಏಕಾಏಕಿ ಕುಸಿದು ಬಿದ್ದಿದ್ದಾಳೆ.

ಘಟನೆಯನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಹೃದಯಾಘಾತದಿಂದ ಬಾಲಕಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಆದರೆ ನಿಖರ ಸಾವಿನ ಕಾರಣ ವೈದ್ಯಕೀಯ ವರದಿ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕವೇ ಸ್ಪಷ್ಟವಾಗಲಿದೆ.

ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ನಿಖರ ಕಾರಣ ತಿಳಿದುಕೊಳ್ಳಲು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್-ಕಂಟೇನರ್ ಲಾರಿ ಭೀಕರ ಡಿಕ್ಕಿ: ತಪ್ಪಿದ ಭಾರೀ ದುರಂತ

ಆನೇಕಲ್‌: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಂಟೇನರ್ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ ಹೊಸಕೋಟೆ ಸಮೀಪದ ಅತ್ತಿವಾಟ ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ವೇಗವಾಗಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಂಟೇನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಬಸ್‌ನ ಮುಂಭಾಗ ಸಂಪೂರ್ಣ ಛಿದ್ರಗೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅಪಘಾತದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ತಕ್ಷಣ ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಸಮಯಪ್ರಜ್ಞೆ ಮತ್ತು ನಿಯಂತ್ರಿತ ಚಾಲನೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಹೊಸಕೋಟೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಚಿಂದಿ ಆಯುವ ಯುವಕ ಬಂಧನ

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂದಿ ಆಯುವ ವ್ಯಕ್ತಿಯ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಜೂನ್ 2ರಂದು ಪಟ್ಟಂದೂರು ಅಗ್ರಹಾರದಲ್ಲಿ ಘಟನೆ ನಡೆದಿತ್ತು. ಕೋ-ಲಿವಿಂಗ್ ಪಿಜಿಯಲ್ಲಿ ವಾಸವಿದ್ದ ವಿದ್ಯಾರ್ಥಿನಿ ರಾತ್ರಿ ಓದುತ್ತಿದ್ದ ವೇಳೆ ನಿದ್ದೆ ಬರುತ್ತಿದೆ ಎಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಟೀ ಕುಡಿಯಲು ಹೊರಗಡೆ ಹೋಗಿದ್ದರು.

ಟೀ ಕುಡಿದು ವಾಪಸ್ ಪಿಜಿಯತ್ತ ತೆರಳುತ್ತಿದ್ದ ವೇಳೆ ಆರೋಪಿ ಸೈಬುಲ್ ಮಂಡಲ್ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ್ದಾನೆ. ಅಪಾಯವನ್ನು ಅರಿತ ವಿದ್ಯಾರ್ಥಿನಿ ಪಿಜಿಯತ್ತ ಓಡಲು ಯತ್ನಿಸಿದರೂ, ಗೇಟ್ ಸಮೀಪವೇ ಆಕೆಯ ಕುತ್ತಿಗೆ ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಬಳಿಕ ವಿದ್ಯಾರ್ಥಿನಿಯನ್ನು ಸಮೀಪದ ಶೆಡ್‌ಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಯುವತಿಯನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ತಕ್ಷಣ ಪಿಜಿ ಮಾಲೀಕರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ನೇಹಿತರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ವರದಿ ಹಾಗೂ ಸಂತ್ರಸ್ತೆಯ ಹೇಳಿಕೆ ಆಧರಿಸಿ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಬಂಧಿತನಾಗಿರುವ ಸೈಬುಲ್ ಮಂಡಲ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹5.87 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಮತ್ತು ಭದ್ರತಾ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ₹5.87 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಬೆಳ್ಳಂಬೆಳಿಗ್ಗೆ ನಡೆದ ತಪಾಸಣೆ ವೇಳೆ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕರ ಚಲನವಲನ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಅವರ ಬಳಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮಾದಕ ವಸ್ತು ಪತ್ತೆಯಾಗಿದೆ.

ಕಾರ್ಯಾಚರಣೆಯಲ್ಲಿ ಒಟ್ಟು 16 ಕೆಜಿ 880 ಗ್ರಾಂ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು ₹5.87 ಕೋಟಿ ಎಂದು ಅಂದಾಜಿಸಲಾಗಿದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ಮಾದಕ ವಸ್ತು ಜಪ್ತಿಯಾಗಿದ್ದು, ಸಂಬಂಧಿತ ಇಬ್ಬರು ಪ್ರಯಾಣಿಕರ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಪ್ತಿ ಮಾಡಲಾದ ಮಾದಕ ವಸ್ತುವಿನ ಮೂಲ, ಸಾಗಣೆ ಜಾಲ ಹಾಗೂ ಇದರ ಹಿಂದೆ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳ ಕುರಿತು ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಟಿಎಂಸಿಗೆ ಮತ್ತೊಂದು ಶಾಕ್: ರಾಜ್ಯಸಭೆಗೆ ಸುಖೇಂದು ಶೇಖರ್ ರಾಯ್ ರಾಜೀನಾಮೆ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಮತ್ತೊಂದು ರಾಜಕೀಯ ಹಿನ್ನಡೆಯಾಗಿದ್ದು, ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವೇಳೆ ಮತ್ತೋರ್ವ ರಾಜ್ಯಸಭಾ ಸದಸ್ಯೆ ಕೋಯೆಲ್ ಮಲ್ಲಿಕ್ ಕೂಡ ಶೀಘ್ರದಲ್ಲೇ ಸದಸ್ಯತ್ವ ತ್ಯಜಿಸಲಿದ್ದಾರೆ ಎನ್ನುವ ಮಾಹಿತಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ರಾಜ್ಯಸಭೆಯಲ್ಲಿ ಟಿಎಂಸಿಯ ಪ್ರಮುಖ ಧ್ವನಿಗಳಲ್ಲಿ ಒಬ್ಬರಾಗಿದ್ದ ಸುಖೇಂದು ಶೇಖರ್ ರಾಯ್ ಅವರ ನಿರ್ಗಮನವು ಪಕ್ಷಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಪಕ್ಷದೊಳಗಿನ ಅಸಮಾಧಾನ ಮತ್ತು ಬಂಡಾಯ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪ್ರಸ್ತುತ ರಾಜ್ಯಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಟಿಎಂಸಿ, ರಾಯ್ ಹಾಗೂ ಕೋಯೆಲ್ ಮಲ್ಲಿಕ್ ರಾಜೀನಾಮೆ ನೀಡಿದರೆ ತನ್ನ ಸದಸ್ಯ ಬಲವನ್ನು 11ಕ್ಕೆ ಕಳೆದುಕೊಳ್ಳಲಿದೆ.

ರಾಜೀನಾಮೆ ಪತ್ರದಲ್ಲಿ ಸುಖೇಂದು ಶೇಖರ್ ರಾಯ್, ಭ್ರಷ್ಟಾಚಾರ, ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಹೆಚ್ಚಳ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಉದ್ಯೋಗ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸರ್ಕಾರ ವಿಫಲವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೆ, ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಸಾಧನೆಯನ್ನು ಐತಿಹಾಸಿಕ ಜನಾದೇಶ ಎಂದು ಬಣ್ಣಿಸಿರುವ ಅವರು, ಜನರ ತೀರ್ಪಿಗೆ ಗೌರವ ಸೂಚಿಸುವ ಉದ್ದೇಶದಿಂದ ತೃಣಮೂಲ ಕಾಂಗ್ರೆಸ್ ಹಾಗೂ ರಾಜ್ಯಸಭೆ ಎರಡಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

error: Content is protected !!