Home Blog Page 6

ರಾಹುಲ್ ಗಾಂಧಿ ಡ್ರಗ್ಸ್ ಅಡಿಕ್ಟ್ ಎಂದಿದ್ದ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ವಿರುದ್ಧ ಎಫ್‌ಐಆರ್

0

ಉಡುಪಿ: ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಮತ್ತು ದ್ವೇಷ ಪ್ರಚೋದಿಸುವ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಜುಲೈ 28ರಂದು ಉಡುಪಿಯ ಜೋಡುಕಟ್ಟೆ ಸಮೀಪ ನಡೆದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಯಶ್‌ಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ವೇಳೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಪ್ರಸ್ತಾಪಿಸಿ ಸಮುದಾಯಗಳ ನಡುವೆ ದ್ವೇಷ ಮತ್ತು ಉದ್ವಿಗ್ನತೆ ಉಂಟುಮಾಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎನ್ನಲಾಗಿದೆ.

ದೂರಿನ ಪ್ರಕಾರ, ನೀಟ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧವೂ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಲಾಗಿದೆ. ವಿವಿಧ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ ಉಡುಪಿ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 57, 192, 196(2), 352, 353(2) ಹಾಗೂ 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಪಾನ್‌ಗೆ ಮತ್ತೆ ಪ್ರಕೃತಿ ಆಘಾತ : ಪ್ರಬಲ ಭೂಕಂಪಕ್ಕೆ 13 ಬಲಿ; ಹಲವೆಡೆ ಕಟ್ಟಡಗಳು ಕುಸಿತ

0

ಜಪಾನ್‌: ಇಲ್ಲಿನ ದಕ್ಷಿಣ ಭಾಗದ ಕ್ಯುಶು ದ್ವೀಪದಲ್ಲಿರುವ ಕುಮಾಮೊಟೊ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಭಾರೀ ಅನಾಹುತ ಸೃಷ್ಟಿಸಿದೆ. ಆರಂಭಿಕ ಮಾಹಿತಿಯ ಪ್ರಕಾರ 7.1 ತೀವ್ರತೆಯ ಭೂಕಂಪದಿಂದ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪ್ರಧಾನಿ ಸನಾಯೆ ತಕೈಚಿ ತಿಳಿಸಿದ್ದಾರೆ.

ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ ಭೂಕಂಪದ ತೀವ್ರತೆ 6.8 ಆಗಿದ್ದು, 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಆದರೆ ಆರಂಭಿಕ ವರದಿಗಳಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ. ಮಂಗಳವಾರ ಮಧ್ಯಾಹ್ನ 4:27ಕ್ಕೆ ಸಂಭವಿಸಿದ ಭೂಕಂಪದಿಂದ ಹಲವೆಡೆ ಕಟ್ಟಡಗಳು ಕುಸಿದಿವೆ, ಬೆಂಕಿ ಅವಘಡಗಳು ಸಂಭವಿಸಿವೆ, ಸೇತುವೆಗಳು ಹಾನಿಗೊಳಗಾಗಿವೆ ಹಾಗೂ ಸರಕು ಸಾಗಣೆ ರೈಲುಗಳು ಹಳಿ ತಪ್ಪಿವೆ.

ಭೂಕಂಪದ ಬೆನ್ನಲ್ಲೇ ಜಪಾನ್ ಸರ್ಕಾರ ಸುನಾಮಿ ಎಚ್ಚರಿಕೆ ಜಾರಿಗೊಳಿಸಿದ್ದು, ಒಂದು ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಭಾಗದ ನಿವಾಸಿಗಳಿಗೆ ತಕ್ಷಣ ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಪರಮಾಣು ನಿಯಂತ್ರಣ ಪ್ರಾಧಿಕಾರವು ದೇಶದ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ತಕ್ಷಣದ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಎಲ್ಲಾ ಸ್ಥಾವರಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ.

ಕುಮಾಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ, ಓಯಿಟಾ ಹಾಗೂ ಮಿಯಾಜಾಕಿ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಎರಡನೇ ಪ್ರಬಲ ಭೂಕಂಪ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.

ದೋಸೆ ಮಾಡಿ, ರಾಗಿ ಮುದ್ದೆ ತಯಾರಿಸಿ’ ಎಂದರೆ ಅದು ಕೌಟುಂಬಿಕ ದೌರ್ಜನ್ಯವಾಗುತ್ತದೆಯೇ? ಹೈಕೋರ್ಟ್ ಪ್ರಶ್ನೆ

ಬೆಂಗಳೂರು: ದೋಸೆ ಮತ್ತು ರಾಗಿ ಮುದ್ದೆ ಮಾಡುವಂತೆ ಅತ್ತೆ ಹೇಳುವುದು ಹಾಗೂ ತಲೆಕೂದಲು ಉದುರುವುದು ಕೌಟುಂಬಿಕ ದೌರ್ಜನ್ಯಕ್ಕೆ ಸೇರುತ್ತದೆಯೇ ಎಂದು ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಪ್ರಶ್ನಿಸಿದೆ.

ಸೊಸೆ ನೀಡಿದ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅತ್ತೆ ಹಾಗೂ ಆಕೆಯ ಸಂಬಂಧಿಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, ಪತಿಯು ಊಟ ಮಾಡಿದ ಬಳಿಕವೇ ತಮಗೆ ಊಟ ಮಾಡಲು ಅವಕಾಶ ನೀಡಲಾಗುತ್ತಿತ್ತು, ಪತಿಗೆ ಬಿಸಿ ದೋಸೆ ಹಾಗೂ ರಾಗಿ ಮುದ್ದೆ ಮಾಡಿಕೊಡುವಂತೆ ಅತ್ತೆ ಹೇಳುತ್ತಿದ್ದರು ಎಂಬ ಆರೋಪಗಳನ್ನು ಉಲ್ಲೇಖಿಸಿ, ಇಂತಹ ಆರೋಪಗಳಿಗೆ ಐಪಿಸಿ ಸೆಕ್ಷನ್‌ 498ಎ ಅನ್ವಯವಾಗುತ್ತದೆಯೇ ಎಂದು ಪ್ರಶ್ನಿಸಿತು.

ಕುಟುಂಬದಲ್ಲಿ ಸಾಮಾನ್ಯವಾಗಿ ನಡೆಯುವ ಜಗಳಗಳನ್ನು ಕಾನೂನಿನ ಅಡಿ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪತಿಗೆ ದೋಸೆ ಅಥವಾ ರಾಗಿ ಮುದ್ದೆ ಮಾಡಿಕೊಡಿ ಎಂದು ಹೇಳುವುದು, ತಲೆಕೂದಲು ಉದುರುವುದು ಅಥವಾ ಪೌಷ್ಟಿಕ ಆಹಾರ ನೀಡಿಲ್ಲ ಎಂಬ ಆರೋಪಗಳನ್ನು ವರದಕ್ಷಿಣೆ ಕಿರುಕುಳ ಎಂದು ಕರೆಯಲು ಸಾಧ್ಯವಿಲ್ಲ.

ಇಂತಹ ವಿಚಾರಗಳನ್ನು ವಿಚ್ಛೇದನ ಅರ್ಜಿಯ ವಿಚಾರಣೆಯಲ್ಲಿ ಪ್ರಸ್ತಾಪಿಸಬಹುದು. ಆದರೆ ಪ್ರತಿಯೊಂದು ಅಹವಾಲನ್ನೂ ಕ್ರೌರ್ಯಕ್ಕೆ ಸಮನಾಗಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಪ್ರತಿವಾದಿಯಾಗಿರುವ ಪತ್ನಿ ಸ್ವತಃ ನ್ಯಾಯಾಲಯದಲ್ಲಿ ಹಾಜರಾಗಿ, ಪತಿಯ ಮನೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ವಾದಿಸಿದರು. ತಮಗೆ ಪೌಷ್ಟಿಕ ಆಹಾರ ನೀಡುತ್ತಿರಲಿಲ್ಲ. ಪ್ರತಿದಿನ ದೋಸೆ, ಅನ್ನ, ಸೊಪ್ಪು ಹಾಗೂ ಬೇಳೆಸಾರು ಮಾತ್ರ ನೀಡುತ್ತಿದ್ದರು. ಮನೆಯ ಇತರರು ಮಾತ್ರ ಉತ್ತಮ ಆಹಾರ ಸೇವಿಸುತ್ತಿದ್ದರು ಎಂದು ಆರೋಪಿಸಿದರು.

ನಿರಂತರ ಕಿರುಕುಳದಿಂದ ತಲೆಕೂದಲು ಉದುರಲು ಆರಂಭವಾಯಿತು. ಅತ್ತೆ ಅಡುಗೆಮನೆಗೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ತಾನು ಸಂಪಾದಿಸಿದ ಸಂಬಳವನ್ನೆಲ್ಲ ಪತಿಗೆ ನೀಡುತ್ತಿದ್ದ ಕಾರಣ ವೈಯಕ್ತಿಕ ಖರ್ಚಿಗೆ ಹಣ ಉಳಿಯುತ್ತಿರಲಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅಲ್ಲದೆ, ಪತಿಯನ್ನು ತನ್ನ ತಾಯಿಯ ಕೊಠಡಿಯಲ್ಲೇ ಮಲಗುವಂತೆ ಮಾಡಲಾಗುತ್ತಿತ್ತು. ತಾನು ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುತ್ತಿದ್ದೆ. ಸುಮಾರು ಐದೂವರೆ ತಿಂಗಳು ಈ ಪರಿಸ್ಥಿತಿಯನ್ನು ಅನುಭವಿಸಿದ ಬಳಿಕ ಪತಿಯ ಮನೆಯಿಂದ ಹೊರಬಂದೆ ಎಂದು ಹೇಳಿದರು.

ಇದೇ ವೇಳೆ, ತಮ್ಮ ತಾಯಿ ಮನೆಯ ಬಳಿ ಬಂದು ಅರ್ಜಿದಾರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಹಾನಿ ಮಾಡಿದ್ದಾರೆ. ಈ ಸಂಬಂಧ ಪ್ರತ್ಯೇಕ ಮಾನಹಾನಿ ಪ್ರಕರಣವನ್ನೂ ದಾಖಲಿಸಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಅರ್ಜಿದಾರರ ಪರ ವಕೀಲರು, ಅತ್ತೆ, ಆಕೆಯ ಇಬ್ಬರು ಸಹೋದರರು ಹಾಗೂ ಪತಿಯ ಸ್ನೇಹಿತನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಮನವಿ ಮಾಡಿದರು. ಪ್ರಕರಣ ಇನ್ನೂ ಎಫ್‌ಐಆರ್‌ ಹಂತದಲ್ಲಿದ್ದು, ಪತಿ ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಹಿಂಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.ಎರಡೂ ಪಕ್ಷಗಳ ವಾದ ಆಲಿಸಿದ ಹೈಕೋರ್ಟ್‌, ಪ್ರಕರಣದ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದೆ.

ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು: ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ!

ಮಂಡ್ಯ: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು. ಒಂದು ವೇಳೆ ನೀರು ಹರಿಸಿದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲೇ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ CWRC ಯಾವ ಮಾನದಂಡದ ಆಧಾರದ ಮೇಲೆ ನೀರು ಬಿಡುವಂತೆ ಆದೇಶ ನೀಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

“ನಮ್ಮ ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ಆದರೆ ತಮಿಳುನಾಡಿನವರು ಬೆಳೆಗಳಿಗೆ ನೀರು ಕೇಳುತ್ತಿದ್ದಾರೆ. ಸ್ಥಳೀಯ ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಪ್ರಾಧಿಕಾರ ನಿರ್ಧಾರ ಕೈಗೊಳ್ಳಬೇಕಿತ್ತು” ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.

15 ದಿನಗಳ ಕಾಲ ನೀರು ಹರಿಸುವಂತೆ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಬಾರದು. ಕಾನೂನು ಹೋರಾಟದ ಮೂಲಕ ರಾಜ್ಯದ ಪರಿಸ್ಥಿತಿಯನ್ನು ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿ ವರ್ಷವೂ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸಮಸ್ಯೆ ಎದುರಾಗುತ್ತಿದೆ. ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಪ್ರತಿಯೊಬ್ಬರೂ ಜನ-ಜಾನುವಾರುಗಳ ರಕ್ಷಣೆಗೆ ಹೋರಾಟಕ್ಕೆ ಸಜ್ಜಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದ್ದಾರೆ.

 

ಕಾಮನ್‌ವೆಲ್ತ್ ಗೇಮ್ಸ್ : ಗುಲ್ವೀರ್‌ಗೆ ಐತಿಹಾಸಿಕ ಬೆಳ್ಳಿ; ಹರ್ಜಿಂದರ್ ಕೌರ್‌ಗೂ ರಜತ ಪದಕ

0

ಗ್ಲಾಸ್ಗೊ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ 10,000 ಮೀಟರ್ ಓಟದಲ್ಲಿ ಗುಲ್ವೀರ್ ಸಿಂಗ್ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ಬರೆದರೆ, ಮಹಿಳೆಯರ 69 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಹರ್ಜಿಂದರ್ ಕೌರ್ ರಜತ ಪದಕ ಗೆದ್ದು ಭಾರತದ ಪದಕ ಪಟ್ಟಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ.

ಸ್ಕಾಟ್‌ನ್ ಕ್ರೀಡಾಂಗಣದಲ್ಲಿ ಭಾರೀ ಮಳೆ ಹಾಗೂ ನೀರು ತುಂಬಿದ ಟ್ರ್ಯಾಕ್ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಗುಲ್ವೀರ್ ಸಿಂಗ್, ಆರಂಭದಿಂದ ಅಂತ್ಯದವರೆಗೆ ಪದಕದ ಪೈಪೋಟಿಯಲ್ಲಿ ಉಳಿದರು. 27 ನಿಮಿಷ 49.78 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. 27 ನಿಮಿಷ 48.93 ಸೆಕೆಂಡುಗಳಲ್ಲಿ ಗುರಿ ತಲುಪಿದ ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಚಿನ್ನ ಗೆದ್ದರೆ, ಡೇವಿಡ್ ಮುಲ್ಲಾರ್ಕಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಈ ಸಾಧನೆಯೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 10,000 ಮೀಟರ್ ಓಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಐತಿಹಾಸಿಕ ಹೆಗ್ಗಳಿಕೆ ಗುಲ್ವೀರ್ ಸಿಂಗ್ ಪಾಲಾಯಿತು.

ಇನ್ನೊಂದೆಡೆ ಮಹಿಳೆಯರ 69 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಹರ್ಜಿಂದರ್ ಕೌರ್ ಬೆಳ್ಳಿ ಪದಕ ಗೆದ್ದು ಮಿಂಚಿದರು. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 71 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಕೌರ್, ಈ ಬಾರಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ರಜತ ಪದಕ ಜಯಿಸಿದರು. ಕೆನಡಾದ ಶಾರ್ಲೆಟ್ ಸಿಮೋನ್ಯು ಚಿನ್ನದ ಪದಕ ಗೆದ್ದರು.

ಹರ್ಜಿಂದರ್ ಕೌರ್ ಅವರ ಸಾಧನೆಯೊಂದಿಗೆ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮತ್ತಷ್ಟು ವೇಗ ಪಡೆದಿದೆ.

ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆ: ಕೊಲೆಯೋ, ಆತ್ಮಹತ್ಯೆಯೋ? ಪೊಲೀಸರಿಂದ ತನಿಖೆ!

ಬೆಂಗಳೂರು: ನಗರದ ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯೊಬ್ಬರ ರುಂಡ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾಗಿರುವ ರುಂಡ ಯಾರದ್ದು ಎಂಬುದು ಇನ್ನೂ ಖಚಿತವಾಗಿಲ್ಲ. ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆ ಮಾಡಿ ರುಂಡವನ್ನು ತಂದು ಇಲ್ಲಿ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ, ರುಂಡ ಪತ್ತೆಯಾದ ಸ್ಥಳದ ಸಮೀಪದಲ್ಲೇ ರೈಲ್ವೆ ಹಳಿ ಇರುವುದರಿಂದ, ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ದೇಹದ ಭಾಗವನ್ನು ನಾಯಿಗಳು ಎಳೆದು ತಂದಿರಬಹುದೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಘಟನೆ ಕೊಲೆಯೇ ಅಥವಾ ಆತ್ಮಹತ್ಯೆ ಪ್ರಕರಣವೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಸದ್ಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸುತ್ತಮುತ್ತಲಿನ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದ್ದಾರೆ.

ಈ ಕುರಿತು ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಬೆಂಗಳೂರಿನ ಐಪಿಎಸ್ ಲೇಔಟ್ ವಿಲ್ಲಾದಲ್ಲಿ ಭರ್ಜರಿ ರೇವ್ ಪಾರ್ಟಿ: ಸಿಸಿಬಿ ದಾಳಿ ವೇಳೆ ಮೂವರು ಅರೆಸ್ಟ್!

ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಪ್ರತಿಷ್ಠಿತ ಐಪಿಎಸ್ ಲೇಔಟ್‌ನ ‘ಸಿ-9’ ಸರ್ವಿಸ್ ವಿಲ್ಲಾದಲ್ಲಿ ನಡೆಯುತ್ತಿದ್ದ ಭರ್ಜರಿ ರೇವ್ ಪಾರ್ಟಿ ಮೇಲೆ ಸಿಸಿಬಿ ಮಹಿಳಾ ಘಟಕದ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಡೀ ರಾತ್ರಿ ನಡೆಯುತ್ತಿದ್ದ ಪಾರ್ಟಿಯನ್ನು ಪತ್ತೆಹಚ್ಚಿದ್ದಾರೆ. ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಐಪಿಎಸ್ ಲೇಔಟ್ ಸುರಕ್ಷಿತ ಸ್ಥಳ ಎಂದು ಭಾವಿಸಿದ್ದ ಆಯೋಜಕರು, ‘ಅಮಿಗೋಸ್’ ಆ್ಯಪ್ ಮೂಲಕ ಯುವಕ-ಯುವತಿಯರನ್ನು ಪಾರ್ಟಿಗೆ ಆಹ್ವಾನಿಸಿದ್ದರು ಎನ್ನಲಾಗಿದೆ.

ಪ್ರವೇಶ ಶುಲ್ಕ ಪಡೆದು ಪಾರ್ಟಿ ಆಯೋಜನೆ:

ಪಾರ್ಟಿಗೆ ಆಗಮಿಸುವ ಯುವಕರಿಂದ ₹1,099 ಹಾಗೂ ಯುವತಿಯರಿಂದ ₹499 ಪ್ರವೇಶ ಶುಲ್ಕ ವಸೂಲಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ದಿನಕ್ಕೆ ₹20 ಸಾವಿರ ಬಾಡಿಗೆ ನೀಡಿ ‘ರೆವ್ ಕೀ ಹಾಸ್ಪಿಟಾಲಿಟಿ’ ವಿಲ್ಲಾವನ್ನು ಬುಕ್ ಮಾಡಲಾಗಿತ್ತು ಎನ್ನಲಾಗಿದೆ.

ವಿಲ್ಲಾದಲ್ಲಿ ಇಡೀ ರಾತ್ರಿ ಮದ್ಯ, ನಿಷೇಧಿತ ಹುಕ್ಕಾ ಹಾಗೂ ಇ-ಸಿಗರೇಟ್‌ಗಳೊಂದಿಗೆ ಮೋಜು-ಮಸ್ತಿ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ದಾಳಿ: ಮೂವರು ಬಂಧನ:

ದಾಳಿ ವೇಳೆ ಸ್ಥಳದಲ್ಲಿದ್ದ ಯುವತಿಯರನ್ನು ಪೊಲೀಸರು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಅಲ್ಲದೇ ನಿಷೇಧಿತ ಹುಕ್ಕಾ, ಇ-ಸಿಗರೇಟ್‌ಗಳು ಹಾಗೂ ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.

ರೇವ್ ಪಾರ್ಟಿ ಆಯೋಜನೆ ಮಾಡಿದ್ದ ಆರೋಪದಡಿ ದೀಕ್ಷಿತ್, ವೇದಾಂತ್ ಪಂಡಿತ್ ಹಾಗೂ ಶಂಕರ್ ಎಂಬ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇನ್ನು, ನಿಯಮ ಉಲ್ಲಂಘಿಸಿ ವಿಲ್ಲಾವನ್ನು ಪಾರ್ಟಿಗೆ ನೀಡಿದ ಆರೋಪದಡಿ ಮನೆ ಮಾಲೀಕರ ವಿರುದ್ಧವೂ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

 

ರಾಜಾನುಕುಂಟೆಯಲ್ಲಿ ಆಘಾತಕಾರಿ ಘಟನೆ: ಕಾಲೇಜಿಗೆ ನುಗ್ಗಿ ಮಗಳಿಗೆ ಚಾಕು ಇರಿದ ತಂದೆ!

ಬೆಂಗಳೂರು: ಖಾಸಗಿ ಕಾಲೇಜಿಗೆ ನುಗ್ಗಿದ ತಂದೆಯೊಬ್ಬರು ತಮ್ಮ ಮಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಗರದ ರಾಜಾನುಕುಂಟೆಯಲ್ಲಿ ನಡೆದಿದೆ.

ಚಾಕು ಇರಿತಕ್ಕೊಳಗಾದ ಯುವತಿಯನ್ನು ಲಕ್ಷ್ಮಿ ದುರ್ಗ ಎಂದು ಗುರುತಿಸಲಾಗಿದೆ. ಅವರು ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ತಂದೆ ನಾಗೇಂದ್ರ ಹಲ್ಲೆ ನಡೆಸಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಜುಲೈ 25ರಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ನಡೆದಿದೆ ಎನ್ನಲಾಗಿದೆ. ಆರೋಪಿ ಕಾಲೇಜಿಗೆ ಆಗಮಿಸಿ ಮಗಳನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದಾನೆ. ಬಳಿಕ ಪ್ರಾಂಶುಪಾಲರ ಕೊಠಡಿಗೆ ತೆರಳಿ ಮಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಹಲ್ಲೆಯಲ್ಲಿ ಯುವತಿಯ ಹೊಟ್ಟೆ, ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು, ಕೃತ್ಯದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸರ್ವ ರೋಗಕ್ಕೂ ರಾಮಬಾಣ ಮುಟ್ಟಿದರೆ ಮುನಿಯುವ ಗಿಡ: ಆರೋಗ್ಯಕ್ಕೆ ನೀಡುವ ಪ್ರಯೋಜನಗಳ ಮಾಹಿತಿ ಇಲ್ಲಿದೆ

0

ನಿಸರ್ಗದಲ್ಲಿ ಕಂಡುಬರುವ ಅತ್ಯಂತ ಕುತೂಹಲಕಾರಿ ಸಸ್ಯಗಳಲ್ಲಿ ‘ಮುಟ್ಟಿದರೆ ಮುನಿಯುವ ಗಿಡ’ ಅಥವಾ ಮೈಮೋಸಾ ಪುಡಿಕಾ (Mimosa pudica) ಪ್ರಮುಖವಾಗಿದೆ.

ಮುಟ್ಟಿದ ತಕ್ಷಣ ತನ್ನ ಎಲೆಗಳನ್ನು ಮುಚ್ಚಿಕೊಳ್ಳುವ ಈ ಸಸ್ಯವು ಕೇವಲ ಮಕ್ಕಳ ಆಟದ ವಸ್ತುವಲ್ಲ. ಆಯುರ್ವೇದದಲ್ಲಿ ‘ಲಜ್ಜಾಳು’ ಅಥವಾ ‘ನಮಸ್ಕಾರಿ’ ಎಂದು ಕರೆಯಲಾಗುವ ಈ ಗಿಡವು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಯಲ್ಲಿ ಸಹಕಾರಿಯಾಗುತ್ತದೆ ಎಂದು ಆಯುರ್ವೇದ ಗ್ರಂಥಗಳು ಹಾಗೂ ಕೆಲವು ವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ.

ಆಯುರ್ವೇದದ ಪ್ರಕಾರ, ಲಜ್ಜಾಳು ಗಿಡವು ಕಷಾಯ ಮತ್ತು ತಿಕ್ತ ರಸವನ್ನು ಹೊಂದಿದ್ದು, ಶೀತಲ ಸ್ವಭಾವದ ಸಸ್ಯವಾಗಿದೆ. ದೇಹದಲ್ಲಿನ ಕಫ ಮತ್ತು ಪಿತ್ತ ದೋಷಗಳನ್ನು ಸಮತೋಲನಗೊಳಿಸುವುದರ ಜೊತೆಗೆ ಉರಿಯೂತ ಹಾಗೂ ರಕ್ತಸ್ರಾವದ ಸಮಸ್ಯೆಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.

ಗಾಯಗಳು ಮತ್ತು ಅಲ್ಸರ್‌ಗಳಿಗೆ ನೆರವು

ಲಜ್ಜಾಳು ಗಿಡದ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಹಾಗೂ ರಕ್ತಸ್ರಾವ ನಿಯಂತ್ರಿಸುವ ಗುಣಗಳಿವೆ ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಇದರ ಎಲೆಗಳ ಪೇಸ್ಟ್ ಅನ್ನು ಗಾಯದ ಮೇಲೆ ಹಚ್ಚುವುದರಿಂದ ರಕ್ತಸ್ರಾವ ಕಡಿಮೆಯಾಗಲು ಹಾಗೂ ಗಾಯ ಶೀಘ್ರವಾಗಿ ಒಣಗಲು ನೆರವಾಗಬಹುದು.

ಮೂಲವ್ಯಾಧಿ ಸಮಸ್ಯೆಗೆ ಸಹಕಾರಿ

ಮೂಲವ್ಯಾಧಿಯಿಂದ ಬಳಲುವವರಿಗೆ ಈ ಗಿಡದ ಎಲೆ ಮತ್ತು ಬೇರುಗಳನ್ನು ಬಳಸಲಾಗುತ್ತದೆ. ಇದರಲ್ಲಿರುವ ‘ಮಿಮೋಸಿನ್’ (Mimosine) ಎಂಬ ಅಂಶವು ಉರಿಯೂತ ಮತ್ತು ನೋವನ್ನು ತಗ್ಗಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸುವುದು ಸೂಕ್ತ.

ಜೀರ್ಣಕ್ರಿಯೆ ಸುಧಾರಣೆಗೆ

ಭೇದಿ, ರಕ್ತಭೇದಿ ಹಾಗೂ ಅಲ್ಸರೇಟಿವ್ ಕೊಲೈಟಿಸ್‌ನಂತಹ ಕರುಳಿನ ಸಮಸ್ಯೆಗಳಲ್ಲಿ ಲಜ್ಜಾಳು ಗಿಡದಿಂದ ತಯಾರಿಸಿದ ಕಷಾಯವನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಇದು ಜೀರ್ಣಾಂಗವನ್ನು ತಂಪಾಗಿಸಿ, ಕರುಳಿನ ಆರೋಗ್ಯ ಕಾಪಾಡಲು ನೆರವಾಗುತ್ತದೆ ಎಂದು ನಂಬಲಾಗಿದೆ.

ಮಹಿಳೆಯರ ಆರೋಗ್ಯಕ್ಕೂ ಉಪಯುಕ್ತ

ಅತಿಯಾದ ಮುಟ್ಟಿನ ರಕ್ತಸ್ರಾವ ಹಾಗೂ ಬಿಳಿ ಸೆರಗಿನಂತಹ ಸಮಸ್ಯೆಗಳಿಗೆ ಈ ಗಿಡದ ತಾಜಾ ರಸ ಅಥವಾ ಬೇರಿನಿಂದ ತಯಾರಿಸಿದ ಕಷಾಯವನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ಗರ್ಭಾಶಯದ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.

ಚರ್ಮದ ಸಮಸ್ಯೆಗಳ ನಿವಾರಣೆ

ದದ್ದು, ತುರಿಕೆ, ಸೋರಿಯಾಸಿಸ್, ಹರಕು ಗಾಯಗಳು ಸೇರಿದಂತೆ ವಿವಿಧ ಚರ್ಮದ ಸಮಸ್ಯೆಗಳಿಗೆ ಲಜ್ಜಾಳು ಗಿಡದ ಎಲೆಗಳ ರಸವನ್ನು ಲೇಪನವಾಗಿ ಬಳಸಲಾಗುತ್ತದೆ. ಇದು ಸೋಂಕು ತಗ್ಗಿಸಿ ಚರ್ಮಕ್ಕೆ ಶಮನ ನೀಡುತ್ತದೆ ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ.

ಮೈಗ್ರೇನ್ ಮತ್ತು ಒತ್ತಡ ಕಡಿಮೆ ಮಾಡಲು

ಮೈಗ್ರೇನ್ ಅಥವಾ ತಲೆನೋವಿನ ಸಂದರ್ಭದಲ್ಲಿ ಎಲೆಗಳ ಪೇಸ್ಟ್ ಅನ್ನು ಹಣೆಯ ಮೇಲೆ ಹಚ್ಚುವುದರಿಂದ ತಂಪಿನ ಅನುಭವ ದೊರೆಯಬಹುದು. ಜೊತೆಗೆ ನರಮಂಡಲವನ್ನು ಶಾಂತಗೊಳಿಸಿ ಮಾನಸಿಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.

ಬಳಸುವಾಗ ಇರಲಿ ಎಚ್ಚರ

ಲಜ್ಜಾಳು ಗಿಡದ ಎಲೆ, ಬೇರು ಮತ್ತು ಬೀಜಗಳನ್ನು ಔಷಧೀಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಆದರೆ ಈ ಸಸ್ಯವು ಗರ್ಭನಿರೋಧಕ ಗುಣಗಳನ್ನು ಹೊಂದಿರಬಹುದು ಎಂಬ ಉಲ್ಲೇಖಗಳಿರುವುದರಿಂದ, ಗರ್ಭಿಣಿಯರು ಹಾಗೂ ಮಗುವಿಗಾಗಿ ಪ್ರಯತ್ನಿಸುತ್ತಿರುವ ದಂಪತಿಗಳು ಇದನ್ನು ಸೇವಿಸಬಾರದು. ಯಾವುದೇ ಆಯುರ್ವೇದ ಔಷಧೀಯ ಸಸ್ಯವನ್ನು ಸ್ವಯಂ ಸೇವಿಸುವ ಬದಲು, ಅರ್ಹ ಆಯುರ್ವೇದ ವೈದ್ಯರ ಸಲಹೆ ಪಡೆದು ಬಳಸುವುದು ಸುರಕ್ಷಿತ.

ಪೊಲೀಸ್ ಎಂದರೂ ಬಿಡಲಿಲ್ಲ: ಗಂಗಮ್ಮನ ಗುಡಿ ಸರ್ಕಲ್ ಬಳಿ ಹೆಡ್ ಕಾನ್ಸ್‌ಟೇಬಲ್‌ಗೆ ಥಳಿತ

ಬೆಂಗಳೂರು: ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಗರದ ಗಂಗಮ್ಮನ ಗುಡಿ ಸರ್ಕಲ್ ಬಳಿ ನಡೆದಿದೆ.

ಸಂಜಯನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ ಮಂಜುನಾಥ್ ಹಲ್ಲೆಗೊಳಗಾದವರು. ಅವರು ಜಾಲಹಳ್ಳಿ ಕಡೆಗೆ ತೆರಳಲು ಬಸ್ ಹತ್ತಿದ್ದ ವೇಳೆ ಬಸ್‌ನಲ್ಲಿ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಚಾರವಾಗಿ ಬಸ್‌ನಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಬಳಿಕ ಮಹಿಳೆ ತನ್ನ ಸಂಬಂಧಿಕರಿಗೆ ಕರೆ ಮಾಡಿ ಗಂಗಮ್ಮನ ಗುಡಿ ಸರ್ಕಲ್ ಬಳಿ ಬರುವಂತೆ ತಿಳಿಸಿದ್ದಾಳೆ ಎನ್ನಲಾಗಿದೆ.

ಬಸ್ ಗಂಗಮ್ಮನ ಗುಡಿ ಸರ್ಕಲ್ ಬಳಿ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಯುವಕರ ಗುಂಪು ಹೆಡ್ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ತಾನು ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡರೂ ಬಿಡದೆ ಹಲ್ಲೆ ನಡೆಸಿದ್ದು, ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದ ಮಂಜುನಾಥ್ ಅವರ ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಮಹಿಳೆ ಹಾಗೂ ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ ಇಬ್ಬರೂ ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ.