Home Blog Page 8

ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ! ಮನೆಯಲ್ಲಿ ಈ ಗಿಡಗಳಿದ್ದರೆ ತಕ್ಷಣ ಹೊರಗೆ ಹಾಕಿ!

0

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತು ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ.

ಗಿಡಗಳು ಪ್ರಕೃತಿಯ ಸಂಕೇತವಾಗಿದ್ದರೂ, ಕೆಲವು ನಿರ್ದಿಷ್ಟ ಗಿಡಗಳನ್ನು ಮನೆಯೊಳಗೆ ಅಥವಾ ಆವರಣದಲ್ಲಿ ಬೆಳೆಸುವುದು ಅಶುಭವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಮುಳ್ಳಿನ ಗಿಡಗಳು:
ಮುಳ್ಳಿನ ಗಿಡಗಳನ್ನು ಮನೆಯ ಒಳಗೆ ಇಡಬಾರದು. ಕಳ್ಳಿ ಗಿಡ ಅಥವಾ ಕ್ಯಾಕ್ಟಸ್‌ನಂತಹ ಮುಳ್ಳಿನ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ ಎಂದು ನಂಬಲಾಗಿದೆ. ಇವು ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ, ಜಗಳ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಆದರೆ, ಗುಲಾಬಿ ಗಿಡವನ್ನು ಇದಕ್ಕೆ ಹೊರತಾಗಿ ನೋಡಲಾಗುತ್ತದೆ; ಇದನ್ನು ಮನೆಯ ಹೊರಗಿನ ಅಂಗಳದಲ್ಲಿ ಬೆಳೆಸಬಹುದು.

ಬೋನ್ಸಾಯ್ ಗಿಡಗಳು:
ಬೋನ್ಸಾಯ್ ಗಿಡಗಳು “ಕುಂಠಿತ ಬೆಳವಣಿಗೆ” ಪ್ರತಿನಿಧಿಸುತ್ತವೆ. ದೊಡ್ಡ ಮರವನ್ನು ಕೃತಕವಾಗಿ ಚಿಕ್ಕದಾಗಿಸುವುದರಿಂದ, ಮನೆಯ ಸದಸ್ಯರ ವೃತ್ತಿಜೀವನ ಮತ್ತು ವೈಯಕ್ತಿಕ ಪ್ರಗತಿಗೆ ಅಡ್ಡಪರಿಣಾಮ ಬೀರಬಹುದು.

ಹಾಲಿನಂತಹ ದ್ರವ ಹೊಡೆಯುವ ಗಿಡಗಳು:
ಎಲೆ ಅಥವಾ ಕೊಂಬೆಯನ್ನು ಮುರಿದಾಗ ಹಾಲಿನಂತಹ ಬಿಳಿ ದ್ರವ ಹೊರಬರುವ ಗಿಡಗಳನ್ನು ಮನೆಯಲ್ಲಿ ಇಡಬಾರದು. ಇವು ಶಾಂತಿ, ನೆಮ್ಮದಿ ಹಾಗೂ ಆರ್ಥಿಕ ಸ್ಥಿತಿಗೆ ಹಾನಿ ಮಾಡಬಹುದು.

ರಬ್ಬರ್ ಮತ್ತು ಇತರ ಗಿಡಗಳು:
ರಬ್ಬರ್ ಗಿಡವನ್ನು ಮನೆಯ ಹೊರಗೆ ಇಡುವುದು ಉತ್ತಮ, ಆದರೆ ಪ್ರವೇಶ ದ್ವಾರ ಅಥವಾ ಬೆಡ್‌ರೂಮ್‌ನಲ್ಲಿ ಬೇಡ. ಒಣಗಿದ ಅಥವಾ ಬಾಡಿಹೋದ ಗಿಡಗಳು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ.

ಮನೆಯ ಹತ್ತಿರ ಬೆಳೆದಾಗ ಹಾನಿ ಮಾಡುವ ಗಿಡಗಳು:
ಹುಣಸೆ ಮರ ಮತ್ತು ಖರ್ಜೂರದ ಮರಗಳನ್ನು ಮನೆಯ ತೀರ ಹತ್ತಿರದಲ್ಲಿ ಬೆಳೆಸಬಾರದು. ಹುಣಸೆ ಮರವು ನಕಾರಾತ್ಮಕ ಶಕ್ತಿಗಳನ್ನು ಸೆಳೆಯುತ್ತದೆಯೆಂದು, ಖರ್ಜೂರ ಮರವು ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡಿದ್ದಾರೆ.

ಗ್ಯಾಸ್ ಅಭಾವದ ನಡುವೆಯೇ ವಾಣಿಜ್ಯ LPG ಸಿಲಿಂಡರ್ ದರ ಏರಿಕೆ| ಈಗ ಎಷ್ಟಿದೆ?

0

ನವದೆಹಲಿ: ಗ್ಯಾಸ್ ಅಭಾವದ ನಡುವೆಯೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಹಣಕಾಸು ವರ್ಷದ ಮೊದಲ ದಿನವೇ ದೇಶದ ಜನತೆಗೆ ಶಾಕ್‌ ಕೊಟ್ಟಿದೆ.

ಹಣಕಾಸು ವರ್ಷ ಪ್ರಾರಂಭವಾಗಿದೆ. ಈಗಾಗಲೇ ಏಪ್ರಿಲ್ ತಿಂಗಳನ್ನ ದುಬಾರಿ ತಿಂಗಳು ಎಂದೇ ಕರೆಯಲಾಗುತ್ತಿದೆ. ಇದರ ಬೆನ್ನಲ್ಲಿಯೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರವು ದೇಶದ ಜನತೆಗೆ ಶಾಕ್‌ ಕೊಟ್ಟಿದೆ. ಇದಕ್ಕೂ ಮೊದಲು, ಮಾರ್ಚ್ 1 ರಂದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನ 114.5 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಇದು ಕಳೆದ ಒಂದು ತಿಂಗಳಲ್ಲಿ 2ನೇ ಬಾರಿಗೆ ಮಾಡಿದ ಬೆಲೆ ಏರಿಕೆಯಾಗಿದೆ. ಸದ್ಯ ಗೃಹಬಳಕೆ ಸಿಲಿಂಡರ್‌ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. 14.2 ಕೆಜಿ ಸಿಲಿಂಡರ್‌ ಬೆಲೆ ಮಾ.7 ರಂದು ಕೊನೆಯದ್ದಾಗಿ 60 ರೂ.ಗಳಿಗೆ ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ 913 ರೂ. ಬೆಲೆಗೆ ಮಾರಾಟವಾಗುತ್ತಿದೆ.

ಮೊದಲೇ ಸಿಲಿಂಡರ್ ಸಿಗ್ತಿಲ್ಲ ಎಂದು ಹೋಟೆಲ್ ಉದ್ಯಮಿಗಳು ಪರದಾಡುತ್ತಿರುವ ಸಂದರ್ಭದಲ್ಲಿ ಈ ಬೆಲೆ ಏರಿಕೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ. ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದಾಗಿ ಭಾರತದಲ್ಲಿ ತೈಲ ಅಭಾವ ಉಂಟಾಗಿದ್ದು, ಇದರಿಂದ ಹೋಟೆಲ್ ಮಾಲೀಕರು ಸೇರಿ ಜನತೆ ಕಂಗಾಲಾಗಿದ್ದಾರೆ.

ಟೋಲ್ ದರ ಹೆಚ್ಚಳ: ಮೈಸೂರು–ಬೆಂಗಳೂರು ಪ್ರಯಾಣ ಇನ್ನಷ್ಟು ದುಬಾರಿ!

ಮಂಡ್ಯ: ಹಣಕಾಸು ವರ್ಷದ ಮೊದಲ ದಿನವೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್ ದರ ಏರಿಕೆಯಾಗಿದ್ದು, ವಾಹನ ಸವಾರರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ.

ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ನಡುವೆಯೇ ಇದೀಗ ಟೋಲ್ ದರ ಹೆಚ್ಚಳ ಮತ್ತಷ್ಟು ಸಂಕಷ್ಟ ತಂದಿದೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಹಾಗೂ ರಾಮನಗರದ ಗಣಮಿಣಕಿ ಬಳಿ ಇರುವ ಎರಡು ಟೋಲ್ ಪ್ಲಾಜಾಗಳಲ್ಲಿ ಒಂದೇ ಮಾದರಿಯಲ್ಲಿ ದರ ಹೆಚ್ಚಿಸಲಾಗಿದೆ. ಪ್ರತಿ ಟೋಲ್‌ನಲ್ಲಿ 5 ರೂ.ರಿಂದ 25 ರೂ.ವರೆಗೆ ಹೆಚ್ಚಳ ಮಾಡಲಾಗಿದೆ.

118 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಕಾರಿನಲ್ಲಿ ಸಂಚರಿಸುವವರಿಗೆ ಪ್ರತಿ ಟೋಲ್‌ಗೆ 5 ರೂ. ಹೆಚ್ಚಳವಾಗಿದ್ದು, ಎರಡು ಟೋಲ್‌ಗಳಿಂದ ಒಟ್ಟು 10 ರೂ. ಹೆಚ್ಚುವರಿ ಪಾವತಿಸಬೇಕಾಗಿದೆ. ಮೊದಲು ಮೈಸೂರು–ಬೆಂಗಳೂರು ಪ್ರಯಾಣಕ್ಕೆ 345 ರೂ. ಟೋಲ್ ಕಟ್ಟಬೇಕಾಗಿದ್ದರೆ, ಈಗ ಅದು 355 ರೂ.ಗೆ ಏರಿಕೆಯಾಗಿದೆ.

ವಾಹನವಾರು ಹೊಸ ಟೋಲ್ ದರಗಳು:

  • ಕಾರು/ವ್ಯಾನ್/ಜೀಪ್: 170 ರೂ. → 175 ರೂ. (ಏರಿಕೆ 5 ರೂ.)
  • ಲಘು ವಾಹನ/ಮಿನಿ ಬಸ್: 275 ರೂ. → 280 ರೂ. (ಏರಿಕೆ 5 ರೂ.)
  • ಟ್ರಕ್/ಬಸ್ (2 ಆಕ್ಸ್‌ಲ್): 570 ರೂ. → 585 ರೂ. (ಏರಿಕೆ 15 ರೂ.)
  • 3 ಆಕ್ಸ್‌ಲ್ ವಾಣಿಜ್ಯ ವಾಹನ: 625 ರೂ. → 640 ರೂ. (ಏರಿಕೆ 15 ರೂ.)
  • 4–6 ಆಕ್ಸ್‌ಲ್ ವಾಹನ: 900 ರೂ. → 920 ರೂ. (ಏರಿಕೆ 20 ರೂ.)
  • 7ಕ್ಕಿಂತ ಹೆಚ್ಚು ಆಕ್ಸ್‌ಲ್ ವಾಹನ: 1,095 ರೂ. → 1,120 ರೂ. (ಏರಿಕೆ 25 ರೂ.)

ಟೋಲ್ ದರ ಈಗಾಗಲೇ ಹೆಚ್ಚಿದ್ದ ಹಿನ್ನೆಲೆ ಮತ್ತಷ್ಟು ಏರಿಕೆ ಮಾಡಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ರೀತಿಯಾಗಿ ದರ ಹೆಚ್ಚಿಸುತ್ತ ಹೋದರೆ ಕಾರು ಓಡಿಸುವುದೇ ಕಷ್ಟ” ಎಂದು ಕೆಲ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಶೀಘ್ರವೇ ಇರಾನ್ ವಿರುದ್ಧದ ಯುದ್ಧ ಅಂತ್ಯವಾಗಲಿದೆ: ಡೊನಾಲ್ಡ್ ಟ್ರಂಪ್

0

ವಾಷಿಂಗ್ಟನ್: ಮುಂದಿನ 2-3 ವಾರಗಳಲ್ಲಿ ಇರಾನ್ ವಿರುದ್ಧದ ಯುದ್ಧ ಅಂತ್ಯವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇಂಧನ ಬೆಲೆ ಏರಿಕೆ ಪರಿಣಾಮ ಕುರಿತು ಮಾತನಾಡಿದ ಟ್ರಂಪ್, ಇರಾನ್ ವಿರುದ್ಧದ ಯುದ್ಧ ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯಗೊಳ್ಳಲಿದೆ. ನಾವು ನಮ್ಮ ಕೆಲಸವನ್ನು ಮುಗಿಸುತ್ತಿದ್ದೇವೆ. ಬಹುಶಃ ಎರಡು ಅಥವಾ ಮೂರು ವಾರಗಳಲ್ಲಿ ನಾವು ಮುಗಿಸಲಿದ್ದೇವೆ. ನಾವು ಬೇಗನೇ ಇರಾನ್ ಬಿಟ್ಟು ಹೋಗಬೇಕಿದೆ. ಇರಾನ್‌ನಲ್ಲಿ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಕೊನೆಗೊಳಿಸಲಾಗುವುದು. ಇರಾನ್ ಸೋಲಿನ ಸನಿಹದಲ್ಲಿದೆ ಎಂದು ಹೇಳಿದ್ದಾರೆ.

ಅಮೆರಿಕದ ಕಾರ್ಯಾಚರಣೆಯ ಅಂತ್ಯವು ಇರಾನ್‌ನ ಜೊತೆ ಯಾವುದೇ ಒಪ್ಪಂದ ಅವಲಂಬಿಸಿಲ್ಲ. ಅವರು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಿಲ್ಲ. ಇರಾನ್‌ಗೆ ಅಣ್ವಸ್ತ್ರ ತಯಾರಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದಾಗ ನಾವು ಹೊರಡುತ್ತೇವೆ. ಒಂದು ವೇಳೆ ರಾಜತಾಂತ್ರಿಕವಾಗಿ ಪರಿಹಾರ ದೊರಕಿದರೆ ಯುದ್ಧ ಇನ್ನೂ ಬೇಗನೇ ಕೊನೆಗೊಳ್ಳಬಹುದು. ಅವರು ಸಹ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ನಮಗಿಂತಲೂ ಹೆಚ್ಚಾಗಿ ಅವರೇ ಬಯಸುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರಿಗರಿಗೆ ಬಿಗ್ ಶಾಕ್: ಇಂದಿನಿಂದ ನೀರಿನ ಶುಲ್ಕ ಶೇ.3% ಹೆಚ್ಚಳ

ಬೆಂಗಳೂರು: ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಶುಲ್ಕ ಶೇ.3% ರಷ್ಟು ಹೆಚ್ಚಳವಾಗಲಿದ್ದು, ಸಿಟಿ ಮಂದಿಗೆ ಮತ್ತಷ್ಟು ಹೊರೆಯಾಗಲಿದೆ.

ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು ಈ ನಿರ್ಧಾರ ಕೈಗೊಂಡಿದೆ. ಪ್ರತಿ ವರ್ಷದಂತೆ ಆರ್ಥಿಕ ಸಮತೋಲನವನ್ನ ಸರಿದೂಗಿಸಲು ಶೇ.3 ರಷ್ಟು ನೀರಿನ ಶುಲ್ಕ ಹೆಚ್ಚಿಸಿದೆ. ಈ ತಿಂಗಳ ಬಿಲ್‌ನಿಂದಲೇ ದರ ಅನ್ವಯವಾಗಲಿದೆ. ಪರಿಣಾಮ ಏಪ್ರಿಲ್‌ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20 ರಿಂದ 30 ರೂ. ಹೆಚ್ಚುವರಿ ನೀರಿನ ಬಿಲ್‌ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಪರಿಷ್ಕೃತ ದರ ಹಿನ್ನೆಲೆ ಗೃಹ ಬಳಕೆದಾರರಿಗೆ ಸ್ಲ್ಯಾಬ್ ಗಳ ಆಧಾರದಡಿ ಸುಮಾರು ಪ್ರತಿ ಲೀಟರ್ ಗೆ 0.15 ಪೈಸೆಯಿಂದ 1 ಪೈಸೆವರೆಗೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್‌ಗೆ 1.90 ಪೈಸೆ ಏರಿಕೆ ಆಗಲಿದೆ. ಕಳೆದ ವರ್ಷವೂ ಇದೇ ಮಾದರಿಯಲ್ಲಿ ನೀರು ಬಳಕೆ ಶುಲ್ಕ ಹೆಚ್ಚಿಸಲಾಗಿತ್ತು. ಇದೀಗ ಏಪ್ರಿಲ್‌ ತಿಂಗಳಿನಿಂದ ಅನ್ವಯವಾಗುವಂತೆ ಮತ್ತೆ ಶೇ.3ರಷ್ಟು ನೀರಿನ ಬಿಲ್‌ ಹೆಚ್ಚಳ ಮಾಡಲಾಗುತ್ತಿದೆ.

ಗೃಹ ಬಳಕೆದಾರರ ದರಸಂಶೋಧನೆ:

  • 8,000 ಲೀಟರ್ ಒಳಗಿನ ಬಳಕೆ: ಲೀಟರ್ ಗೆ 0.15 ಪೈಸೆ
  • 8,000–25,000 ಲೀಟರ್ ಬಳಕೆ: ಲೀಟರ್ ಗೆ 0.30 ಪೈಸೆ
  • 25,000–50,000 ಲೀಟರ್ ಬಳಕೆ: ಲೀಟರ್ ಗೆ 0.80 ಪೈಸೆ
  • 50,000–1 ಲಕ್ಷ ಲೀಟರ್ ಬಳಕೆ: ಲೀಟರ್ ಗೆ 1 ಪೈಸೆ

ವಾಣಿಜ್ಯ ಬಳಕೆದಾರರ ದರಸಂಶೋಧನೆ:

  • 10,000 ಲೀಟರ್ ಒಳಗಿನ ಬಳಕೆ: ಲೀಟರ್ ಗೆ 1 ಪೈಸೆ
  • 10,000–25,000 ಲೀಟರ್ ಬಳಕೆ: ಲೀಟರ್ ಗೆ 1.30 ಪೈಸೆ
  • 25,000–50,000 ಲೀಟರ್ ಬಳಕೆ: ಲೀಟರ್ ಗೆ 1.50 ಪೈಸೆ
  • 50,000–75,000 ಲೀಟರ್ ಬಳಕೆ: ಲೀಟರ್ ಗೆ 1.90 ಪೈಸೆ

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ! ಇಂದಿನ ಹವಾಮಾನ ವರದಿ ಹೀಗಿದೆ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಮಳೆಯ ತೀವ್ರತೆ ಹೆಚ್ಚುತ್ತಿದೆ.

ಅದರಂತೆ ಇಂದು ಕೂಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ.

ಇದರ ಜೊತೆಗೆ, ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಯಾದಗಿರಿ, ಕಲಬುರ್ಗಿ, ಬೀದರ್, ಗದಗ, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಹ ಮಳೆಯ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ನಗರ-ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗಾಳಿ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ.

 

 

ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ! ನಾಳೆಯ ಹವಾಮಾನ ಹೀಗಿದೆ

ಬೆಂಗಳೂರು: ತೀವ್ರ ಬಿಸಿಲಿನ ನಡುವೆಯೇ ನಾಳೆ ರಾಜ್ಯದ ಹಲವೆಡೆ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಸಿಲು–ಮಳೆಯ ಮಿಶ್ರ ವಾತಾವರಣ ಮುಂದುವರಿಯಲಿದ್ದು, ಸುಮಾರು 12 ಜಿಲ್ಲೆಗಳಲ್ಲಿ ವರುಣನ ಆಗಮನ ನಿರೀಕ್ಷಿಸಲಾಗಿದೆ. ದಕ್ಷಿಣ ಒಳನಾಡಿನ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 30-40 ಕಿಮೀ ಇರಬಹುದು ಎಂದು ಅಂದಾಜಿಸಲಾಗಿದೆ.

ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿದರೂ, ಬಳ್ಳಾರಿ, ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದೆ. ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿಯೂ ಸಾಧಾರಣ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ ತಾಪಮಾನ 34-36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21-22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮುಂದಿನ ಕೆಲ ದಿನಗಳವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಮಳೆಯ ಸಾಧ್ಯತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ನಟ-ರಾಜಕಾರಣಿ ವಿಜಯ್ ವಿರುದ್ಧ ದಾಖಲಾಯ್ತು ಕೇಸ್! ಮಾಡಿದ ತಪ್ಪೇನು?

0

ಚೆನ್ನೈ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ನಟ ಹಾಗೂ ರಾಜಕಾರಣಿ ವಿಜಯ್ ಹಾಗೂ ಟಿವಿಕೆ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಟಿವಿಕೆ ಮುಖ್ಯಸ್ಥ ವಿಜಯ್ ಸೋಮವಾರ ಚೆನ್ನೈನ ಪೆರಂಬೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಾವಿರಾರು ಅಭಿಮಾನಿಗಳು ಹಾಗೂ ಬೆಂಬಲಿಗರು ಸೇರಿಕೊಂಡು ಅವರ ವಾಹನವನ್ನು ಹಿಂಬಾಲಿಸಿದ ಪರಿಣಾಮ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರಿಗೆ ಅಸೌಕರ್ಯ ಉಂಟಾಯಿತು.

ಚುನಾವಣಾ ಪ್ರಚಾರಕ್ಕಾಗಿ ಅಧಿಕಾರಿಗಳು ನಿಗದಿಪಡಿಸಿದ್ದ ಸಮಯಕ್ಕಿಂತ ಮುಂಚೆಯೇ ಕಾರ್ಯಕರ್ತರು ಗುಂಪುಗೂಡಿದ್ದು, ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ಮಾದರಿ ನೀತಿ ಸಂಹಿತೆ 2023 ಅಡಿಯಲ್ಲಿ ವಿವಿಧ ಕಲಂಗಳನ್ನು ಬಳಸಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಕ್ಸ್‌ಪ್ರೆಸ್‌ವೇನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಪಕ್ಕದ ರಸ್ತೆಗೆ ಉರುಳಿಬಿದ್ದ ವಾಹನ!

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿಯಾದ ಪರಿಣಾಮ, ಕಾರು ಪಕ್ಕದ ರಸ್ತೆಗೆ ಉರುಳಿಬಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಬಳಿ ನಡೆದಿದೆ.

ಮೈಸೂರಿನಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ವೇಳೆ, ಮುಂದೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ನಿಯಂತ್ರಣ ತಪ್ಪಿ ಪಕ್ಕದ ರಸ್ತೆಗೆ ಉರುಳಿಬಿದ್ದಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಗೃಹಸಚಿವ ಡಾ. ಜಿ.ಪರಮೇಶ್ವರ್ ಕುರಿತು ಅವಹೇಳನಕಾರಿ ಪೋಸ್ಟ್‌: ಸೈಬರ್ ಕ್ರೈಂ ಪೊಲೀಸರಿಂದ ಸುಮೋಟೋ ಕೇಸ್ ದಾಖಲು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೃಹಸಚಿವ ಡಾ. ಜಿ.ಪರಮೇಶ್ವರ್ ಕುರಿತು ಅವಹೇಳನಕಾರಿ ಪೋಸ್ಟ್‌ ಮಾಡಿದ ಆರೋಪದಡಿ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

‘ಹಿಂದೂ ಜಾಗೃತನಾಗು’ ಎಂಬ ಎಕ್ಸ್ ಖಾತೆಯಿಂದ ಗೃಹಸಚಿವರನ್ನು ಉದ್ದೇಶಿಸಿ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ. ಪೋಸ್ಟ್ ಗೃಹಸಚಿವರ ಕುರಿತು ಮಾತ್ರವಲ್ಲದೆ, ಎರಡು ಧರ್ಮದವರ ನಡುವೆ ನಾಗರಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಮತ್ತು ದ್ವೇಷಪೂರಿತವಾಗಿ ಆಘಾತವನ್ನುಂಟುಮಾಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರ ಅನ್ವಯ IT Act ಹಾಗೂ BNS ಸೆಕ್ಷನ್ 299 ಅಡಿಯಲ್ಲಿ ಈ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

error: Content is protected !!