HomePolitics Newsಮತ ಚಲಾಯಿಸಿ ಸೌಲಭ್ಯ ಕೇಳಿ : ಡಾ. ಹಂಪಣ್ಣ ಸಜ್ಜನ

ಮತ ಚಲಾಯಿಸಿ ಸೌಲಭ್ಯ ಕೇಳಿ : ಡಾ. ಹಂಪಣ್ಣ ಸಜ್ಜನ

Spread the love

ವಿಜಯಸಾಕ್ಷಿ ಸುದ್ದಿ, ನರಗುಂದ : ಯುವ ಮತದಾರರಲ್ಲಿ ಕಡ್ಡಾಯ ಮತದಾನ ಜಾಗೃತಿ ಮೂಡಿಸಲು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಹಿ ಸಂಗ್ರಹ ಅಭಿಯಾನ ಆಯೋಜಿಸಲಾಗಿತ್ತು. ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗಿಯಾದ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಸಂಕಲ್ಪ ಮಾಡಿ ಸಹಿ ಸಂಗ್ರಹ ಅಭಿಯಾನದಲ್ಲಿ ರುಜು ಹಾಕಿದರು.

ಅಭಿಯಾನದಲ್ಲಿ ನರಗುಂದ ವಿಧಾನಸಭೆ ಸಹಾಯಕ ಚುನಾವಣಾ ಅಧಿಕಾರಿ ಡಾ. ಹಂಪಣ್ಣ ಸಜ್ಜನ ಮಾತನಾಡಿ, ಸಂವಿಧಾನ ನೀಡಿರುವ ಮತದಾನ ಹಕ್ಕನ್ನು ಚಲಾಯಿಸದೆ ಜನಪ್ರತಿನಿಧಿಗಳನ್ನು ಸೌಲಭ್ಯ ಒದಗಿಸಿ ಎಂದು ಕೇಳುವುದಕ್ಕಿಂತ, ಮತ ಚಲಾಯಿಸಿ ಸೌಲಭ್ಯ ಕೇಳುವುದು ಉತ್ತಮ ಮತದಾರನ ನಡೆಯಾಗಿದೆ. ಸಮಾಜದಲ್ಲಿ ವಿವಿಧ ಸೌಲಭ್ಯಗಳಿಗಾಗಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮತದಾರರ ಸಂಖ್ಯೆ ದೊಡ್ಡದಿದೆ. ಹಲವು ಮತದಾರರು ಮತದಾನದ ದಿನ ಮತ ಚಲಾಯಿಸದೇ ಚುನಾವಣೆ ಬಳಿಕ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಸಂಪ್ರದಾಯ ಹೊಂದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ ಮಾತನಾಡಿ, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸ್ವೀಪ್ ಸಮಿತಿ ವತಿಯಿಂದ ಕಡ್ಡಾಯ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಸಹಿ ಸಂಗ್ರಹ ಅಭಿಯಾನದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಮೊದಲ ಬಾರಿಗೆ ಮತದಾನ ಮಾಡುತ್ತಿರುವ ವಿದ್ಯಾರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗದೇ ದೇಶಕ್ಕೆ ಕೀರ್ತಿ ತರುವ ಸಂಸದರನ್ನು ಆಯ್ಕೆಗೊಳಿಸಲು ಮುಂದಾಗಿ ಎಂದರು.

ಅಭಿಯಾನದಲ್ಲಿ ಭಾಗವಹಿಸಿದ್ದ 250ಕ್ಕೂ ಅಧಿಕ ಯುವ ಮತದಾರರಿಗೆ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕ ಬಸವರಾಜ ಹೊಸಕೋಟಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಯುವ ಮತದಾರರ ಸಹಿ ಸಂಗ್ರಹ ಅಭಿಯಾನದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಸಿದ್ದನಗೌಡ ಪಾಟೀಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ತಾಲೂಕು ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು. ತಾ.ಪಂ ಸಿಬ್ಬಂದಿ ಪ್ರದೀಪ್ ಕದಮ್ ನಿರೂಪಿಸಿ ವಂದಿಸಿದರು.

ನರಗುಂದ ತಹಸೀಲ್ದಾರ ಶ್ರೀಶೈಲ ತಳವಾರ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡಿರಬೇಕು. ಮತ ಯಂತ್ರಗಳ ಕಾರ್ಯಕ್ಷಮತೆ, ಗೌಪ್ಯತೆ ಹಾಗೂ ಚುನಾವಣೆ ನಡೆಯುವ ಪ್ರತಿ ಹಂತಗಳನ್ನು ತಿಳಿದಿರಬೇಕು. ಜೊತೆಗೆ ಕೇವಲ ಮಾಹಿತಿಯನ್ನು ತಿಳಿದುಕೊಳ್ಳದೇ ಸುತ್ತಮುತ್ತಲಿನ ಜನರಿಗೂ ಪಾರದರ್ಶಕ ಚುನಾವಣೆ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳು ತಿಳಿಸುವ ಕಾರ್ಯ ಮಾಡಬೇಕು ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!