ಬೆಂಗಳೂರು/ಕಾರವಾರ, ಮೇ 21: ರಾಜ್ಯದಲ್ಲಿ ವನ್ಯಜೀವಿ ದಾಳಿ ಪ್ರಕರಣಗಳು ಸರಣಿ ರೂಪದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದ್ದು, ಇನ್ನುಮುಂದೆ ಓಪನ್ ಜೀಪ್ ಸಫಾರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ರವಾಸಿಗರಿಗೆ ಕೇವಲ ಬಸ್ ಸಫಾರಿಗೆ ಮಾತ್ರ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.
ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ಭೀಕರ ದುರಂತ, ನಾಗಮಲೆ ಭಾಗದಲ್ಲಿ ಚಿರತೆ ದಾಳಿಗೆ 10 ವರ್ಷದ ಬಾಲಕ ಬಲಿಯಾದ ಘಟನೆ ಹಾಗೂ ಬಂಡೀಪುರ-ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಹುಲಿ ದಾಳಿಗಳ ಸರಣಿ ಪ್ರಕರಣಗಳು ಸರ್ಕಾರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿವೆ.
ದುಬಾರೆ ಶಿಬಿರದಲ್ಲಿ ಮೇ 18ರಂದು ಮದವೇರಿದ್ದ ಕಂಜನ್ ಆನೆ ಮಾರ್ತಾಂಡ ಆನೆ ಮೇಲೆ ದಾಳಿ ನಡೆಸಿದ ಪರಿಣಾಮ ನಿಯಂತ್ರಣ ತಪ್ಪಿದ ಮಾರ್ತಾಂಡ ಪ್ರವಾಸಿಗರ ಮೇಲೆ ಬಿದ್ದಿತ್ತು. ಘಟನೆಯಲ್ಲಿ ಚೆನ್ನೈ ಮೂಲದ ಮಹಿಳೆ ತುಳಸಿ ಸಾವನ್ನಪ್ಪಿದ್ದರೆ, ಮಾರ್ತಾಂಡ ಆನೆಯೂ ಗಂಭೀರ ಗಾಯಗಳಿಂದ ಬಳಿಕ ಮೃತಪಟ್ಟಿತ್ತು. ಈ ಘಟನೆ ರಾಜ್ಯಾದ್ಯಂತ ಭಾರೀ ಆತಂಕ ಸೃಷ್ಟಿಸಿತ್ತು.
ಇದರ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರಕ್ಕೂ ಸಾರ್ವಜನಿಕರ ಪ್ರವೇಶ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ರಾಜ್ಯದ ವಿವಿಧ ಆನೆ ಶಿಬಿರಗಳು ಹಾಗೂ ಸಫಾರಿ ಕೇಂದ್ರಗಳಲ್ಲಿ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅರಣ್ಯ ಇಲಾಖೆ ಮುಂದಾಗಿದೆ.
ಹೊಸ ಎಸ್ಒಪಿ ಪ್ರಕಾರ, ಈಗಾಗಲೇ ಬಳಕೆಯಲ್ಲಿರುವ ಓಪನ್ ಜೀಪ್ಗಳಲ್ಲಿ ಸಫಾರಿ ನಡೆಸಬೇಕಾದರೆ ಕಡ್ಡಾಯವಾಗಿ ಒಡೆಯದ ಗ್ಲಾಸ್ ಅಥವಾ ಕಬ್ಬಿಣದ ಮೆಶ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಪ್ರವಾಸಿಗರು ಮತ್ತು ವನ್ಯಜೀವಿಗಳ ನಡುವೆ ಸುರಕ್ಷಿತ ಅಂತರ ಕಾಪಾಡುವುದು, ನಿಯಂತ್ರಿತ ಪ್ರವಾಸ ವ್ಯವಸ್ಥೆ ರೂಪಿಸುವುದು ಹಾಗೂ ಅಪಾಯದ ಪ್ರದೇಶಗಳಲ್ಲಿ ಮಾನವ ಚಟುವಟಿಕೆ ಕಡಿಮೆ ಮಾಡುವುದು ಸರ್ಕಾರದ ಮುಂದಿನ ಗುರಿಯಾಗಿದೆ.
ರಾಜ್ಯದ ಎಲ್ಲಾ ವನ್ಯಜೀವಿ ಪ್ರವಾಸಿ ತಾಣಗಳಲ್ಲಿ ಹೆಚ್ಚುವರಿ ಭದ್ರತಾ ಮಾನದಂಡ ಜಾರಿಗೆ ತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಸಮಗ್ರ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ.



