ವಿಜಯಸಾಕ್ಷಿ ಸುದ್ದಿ, ಗದಗ: ಎರಡು ತಿಂಗಳ ಬೇಸಿಗೆ ರಜೆಯ ನಂತರ ಸೋಮವಾರ ಜಿಲ್ಲೆಯಾದ್ಯಂತ ಶಾಲೆಗಳು ಪುನಃ ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಆಗಮನದಿಂದ ಶಾಲಾ ಆವರಣಗಳು ಮತ್ತೆ ಕಲರವದಿಂದ ಜೀವಂತಗೊಂಡವು. ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವಾದ ಶಾಲಾ ಪ್ರಾರಂಭೋತ್ಸವವನ್ನು ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಂಭ್ರಮ, ಸಡಗರ ಮತ್ತು ವಿಶೇಷ ಸ್ವಾಗತದೊಂದಿಗೆ ಆಚರಿಸಲಾಯಿತು.
ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಸಿಬ್ಬಂದಿ ಗುಲಾಬಿ ಹೂವು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಕೆಲವೆಡೆ ಸಿಹಿ ಹಂಚುವ ಮೂಲಕ ಮಕ್ಕಳಿಗೆ ಸ್ವಾಗತ ಕೋರಲಾಯಿತು. ಮೊದಲ ದಿನವೇ ಶಾಲಾ ವಾತಾವರಣ ಹಬ್ಬದ ಸಂಭ್ರಮದಂತೆ ಕಂಗೊಳಿಸಿತು.
ಹೊಸ ಪುಸ್ತಕ, ಹೊಸ ತರಗತಿ… ಮಕ್ಕಳ ಮುಖದಲ್ಲಿ ಸಂಭ್ರಮ
ಎಪ್ರಿಲ್ ಹಾಗೂ ಮೇ ತಿಂಗಳ ಬೇಸಿಗೆ ರಜೆಯನ್ನು ಖುಷಿಯಿಂದ ಕಳೆದ ವಿದ್ಯಾರ್ಥಿಗಳು ಹೊಸ ಉತ್ಸಾಹದೊಂದಿಗೆ ಶಾಲೆಯತ್ತ ಮುಖ ಮಾಡಿದರು. ಹೊಸ ಪುಸ್ತಕಗಳು, ಹೊಸ ತರಗತಿ ಕೊಠಡಿಗಳು ಹಾಗೂ ಸ್ನೇಹಿತರೊಂದಿಗೆ ಮತ್ತೆ ಕಲಿಕೆ ಆರಂಭಿಸುವ ಸಂತಸ ಮಕ್ಕಳ ಮುಖದಲ್ಲಿ ಎದ್ದು ಕಾಣುತ್ತಿತ್ತು.
ವಿಶೇಷವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ತರಗತಿಗೆ ಕಾಲಿಟ್ಟ ಖುಷಿ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡುಬಂತು.
ನಗರದ ಗಂಗಾಪುರ ಪೇಟೆ, ಶಹಾಪುರ ಪೇಟೆ, ಗಂಗಿಮಡಿ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು. ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಿ ವರ್ಣರಂಜಿತವಾಗಿ ಅಲಂಕರಿಸಲಾಗಿತ್ತು.
ಪುಟ್ಟ ಮಕ್ಕಳಿಗೆ ಶಿಕ್ಷಕರ ಆತ್ಮೀಯ ಸ್ಪರ್ಶ
ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲು ಶಾಲೆಗಳು ವಿಶೇಷ ಗಮನ ಹರಿಸಿದ್ದವು. ಶಾಲೆಗೆ ಮೊದಲ ದಿನ ಬಂದ ಪುಟ್ಟ ಮಕ್ಕಳ ಆತಂಕ ದೂರವಾಗುವಂತೆ ಶಿಕ್ಷಕರು ಪ್ರೀತಿಯಿಂದ ಮಾತನಾಡಿ ಆತ್ಮವಿಶ್ವಾಸ ತುಂಬಿದರು.
ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ವಿವಿಧ ಸ್ವಾಗತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಿಕ್ಷಕರ ಆತ್ಮೀಯತೆ ಹಾಗೂ ಮಕ್ಕಳ ಉತ್ಸಾಹದಿಂದ ಈ ಬಾರಿಯ ಶಾಲಾ ಪ್ರಾರಂಭೋತ್ಸವ ಗದಗ ಜಿಲ್ಲೆಯಲ್ಲಿ ವಿಶೇಷ ಮೆರುಗು ಪಡೆದಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಭರವಸೆಯ ಆರಂಭ ದೊರೆತಂತಾಗಿದೆ.
ಮಾವಿನ ಶಿಕರಣಿ ಸವಿದು ಖುಷಿಯಾದ ಮಕ್ಕಳು
ನಗರದ ಸರ್ಕಾರಿ ಪ್ರಾಥಮಿಕ ಶಾಲೆ ನಂ. ೨ರಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದೊಂದಿಗೆ ವಿಶೇಷವಾಗಿ ಮಾವಿನ ಹಣ್ಣಿನ ಶಿಕರಣಿ ತಯಾರಿಸಿ ಬಡಿಸಲಾಯಿತು. ಈ ವಿಶೇಷ ಉಪಹಾರ ಮಕ್ಕಳ ಮನ ಗೆದ್ದಿತು.



