ಮುಂಬೈ: ರಾಷ್ಟ್ರಗೀತೆ ‘ಜನ ಗಣ ಮನ’ ಕುರಿತು ಬಾಲಿವುಡ್ ನಟ ಮುಖೇಶ್ ಖನ್ನಾ ನೀಡಿರುವ ಹೇಳಿಕೆ ಇದೀಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ‘ಜನ ಗಣ ಮನ’ ಬದಲಿಗೆ ‘ವಂದೇ ಮಾತರಂ’ ಅನ್ನು ಭಾರತದ ಅಧಿಕೃತ ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎಂದು ‘ಶಕ್ತಿಮಾನ್’ ಖ್ಯಾತಿಯ ನಟ ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸ ದೇಶಭಕ್ತಿ ಗೀತೆ ‘ಆವೋ ಬಚ್ಚೋಂ’ ಬಿಡುಗಡೆ ಮಾಡಿದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಮುಖೇಶ್ ಖನ್ನಾ ಈ ಹೇಳಿಕೆ ನೀಡಿದ್ದಾರೆ.
‘ಜನ ಗಣ ಮನ’ ಭಾರತದ ನಿಜವಾದ ರಾಷ್ಟ್ರಗೀತೆಯಲ್ಲ ಎಂದು ಪ್ರತಿಪಾದಿಸಿರುವ ಅವರು, ಈ ಗೀತೆಯನ್ನು ರವೀಂದ್ರನಾಥ ಠಾಗೋರ್ ಅವರು ಬ್ರಿಟಿಷ್ ರಾಜಮನೆತನವನ್ನು ಹೊಗಳಲು ಬರೆದಿದ್ದರು ಎಂಬ ವಾದವನ್ನು ಮುಂದಿಟ್ಟಿದ್ದಾರೆ.
‘ವಂದೇ ಮಾತರಂ’ ಮಾತ್ರವೇ ಭಾರತದ ನಿಜವಾದ ರಾಷ್ಟ್ರಗೀತೆ ಆಗಬೇಕು ಎಂದು ಮುಖೇಶ್ ಖನ್ನಾ ಹೇಳಿದ್ದಾರೆ. ಲತಾ ಮಂಗೇಷ್ಕರ್ ಅವರ ಗಾಯನವನ್ನು ಉಲ್ಲೇಖಿಸಿ, ‘ವಂದೇ ಮಾತರಂ’ ಅತ್ಯಂತ ಸುಂದರವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಜನ ಗಣ ಮನ’ವನ್ನು ದೇಶದಿಂದ ತೆಗೆದುಹಾಕಿ ‘ವಂದೇ ಮಾತರಂ’ ಅನ್ನು ಅಧಿಕೃತವಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಶಾಲೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಹಾಡಲಾಗುತ್ತಿದೆ ಎಂಬುದನ್ನೂ ಮುಖೇಶ್ ಖನ್ನಾ ಉಲ್ಲೇಖಿಸಿದ್ದಾರೆ.
ತಮ್ಮ ಹೇಳಿಕೆಗೆ ಮತ್ತಷ್ಟು ಬಲ ನೀಡುವಂತೆ ಮುಖೇಶ್ ಖನ್ನಾ, ತಾವು ಸುಮಾರು 7 ನಿಮಿಷಗಳ ಅವಧಿಯ ‘ವಂದೇ ಮಾತರಂ’ ಗೀತೆಯನ್ನು ಸ್ವತಃ ರೆಕಾರ್ಡ್ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಗೀತೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ನಟನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರಗೀತೆ ಕುರಿತ ಅವರ ನಿಲುವಿನ ಬಗ್ಗೆ ವ್ಯಾಪಕ ಪರ-ವಿರೋಧದ ಚರ್ಚೆ ನಡೆಯುತ್ತಿದೆ.



