Home Blog Page 11

ದಸರಾ ಉತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಎಸ್.ಎಸ್.ಕೆ. ತರುಣ ಸಂಘ ಹಾಗೂ ಶ್ರೀ ಅಂಬಾಭವಾನಿ ದೇವಸ್ಥಾನ, ಬೆಟಗೇರಿ ಇವರ ಆಶ್ರಯದಲ್ಲಿ ನಡೆದ ಸಭೆಯಲ್ಲಿ 2026ನೇ ಸಾಲಿನ ಎಸ್.ಎಸ್.ಕೆ. ದಸರಾ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಮಿತಿಯ ಚೇರಮನ್ನರಾಗಿ ಸುರೇಶ ಎಸ್. ಮೇರವಾಡೆ, ವೈಸ್ ಚೇರಮನ್ನರಾಗಿ ಶ್ರೀರಾಮ ಎಸ್. ಹಬೀಬ, ಗೌರವ ಕಾರ್ಯದರ್ಶಿಯಾಗಿ ಹನುಮಂತಸಾ ಎಂ. ರಾಯಬಾಗಿ, ಸಹಕಾರ್ಯದರ್ಶಿಯಾಗಿ ಪ್ರಶಾಂತ ಟಿ. ಸೋಳಂಕಿ, ಖಜಾಂಚಿಯಾಗಿ ಸೋಮಶೇಖರ ಆರ್. ಮೇರವಾಡೆ ಹಾಗೂ ಲೆಕ್ಕ ತಪಾಸಿಗರಾಗಿ ನರಸಿಂಗಸಾ ವೈ. ಮೇರವಾಡೆ ಅವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ, ಮಹಿಳಾ ಮಂಡಳದ ಸದಸ್ಯರು, ಪದಾಧಿಕಾರಿಗಳು ಹಾಗೂ ಸಮಾಜದ ಎಲ್ಲ ಬಾಂಧವರು ಅಭಿನಂದನೆ ಸಲ್ಲಿಸಿದ್ದಾರೆ.

ಇನ್‌ಫ್ಲೂಯೆಂಜಾ ಭಯ ಬೇಡ; ಎಚ್ಚರಿಕೆ ಇರಲಿ!

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಇತ್ತೀಚೆಗೆ ಇನ್‌ಫ್ಲೂಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದು, ಗದಗ ಜಿಲ್ಲೆಯಲ್ಲಿ ಮಾತ್ರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನವರಿ-2026ರಿಂದ ಇದುವರೆಗೆ ಜಿಲ್ಲೆಯಲ್ಲಿ 10 ಪ್ರಯೋಗಾಲಯ ದೃಢೀಕೃತ ಇನ್‌ಫ್ಲೂಯೆಂಜಾ ಪ್ರಕರಣಗಳು ವರದಿಯಾಗಿದ್ದು, ಎಲ್ಲ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಇನ್‌ಫ್ಲೂಯೆಂಜಾ ಹಾಗೂ ಉಸಿರಾಟದ ತೊಂದರೆ ಇರುವ ಪ್ರಕರಣಗಳ ಮೇಲೆ ಆರೋಗ್ಯ ಇಲಾಖೆ ನಿರಂತರ ಕಣ್ಗಾವಲು ವಹಿಸಿದೆ. ಅಗತ್ಯವಿರುವ ಪ್ರಕರಣಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸಾ ವ್ಯವಸ್ಥೆ ಲಭ್ಯವಿದ್ದು, ಜಿಲ್ಲೆಯ ಪರಿಸ್ಥಿತಿಯ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.

ಮಳೆಗಾಲ ಹಾಗೂ ಹವಾಮಾನ ಬದಲಾವಣೆಯ ಅವಧಿಯಲ್ಲಿ ಉಸಿರಾಟ ಸಂಬಂಧಿ ತೊಂದರೆಗಳು ಸಾಮಾನ್ಯವಾಗಿ ಹೆಚ್ಚಾಗುತ್ತವೆ. ಮಳೆಯಿಂದ ತಪ್ಪಿಸಿಕೊಳ್ಳಲು ಜನರು ಮನೆ, ಕಚೇರಿ, ಬಸ್ ಹಾಗೂ ಕಾಯುವ ಕೊಠಡಿಗಳಂತಹ ಗಾಳಿ ಸಂಚಾರ ಕಡಿಮೆ ಇರುವ ಒಳಾಂಗಣ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಸೋಂಕಿತ ವ್ಯಕ್ತಿಯ ಕೆಮ್ಮು ಮತ್ತು ಸೀನುವಿಕೆಯಿಂದ ಹೊರಬರುವ ಹನಿಗಳ ಮೂಲಕ ಸೋಂಕು ಇತರರಿಗೆ ತಗುಲುವ ಸಾಧ್ಯತೆ ಇರುತ್ತದೆ.

ಇನ್‌ಫ್ಲೂಯೆಂಜಾ ಹೊಸ ಕಾಯಿಲೆಯಲ್ಲ. ಹೆಚ್ಚಿನ ಜನರಲ್ಲಿ ಇದು ಸೌಮ್ಯದಿಂದ ಮಧ್ಯಮ ಪ್ರಮಾಣದಲ್ಲಿ ಕಂಡುಬರುವ ಕಾಯಿಲೆಯಾಗಿದ್ದು, ಸೂಕ್ತ ವಿಶ್ರಾಂತಿ ಹಾಗೂ ವೈದ್ಯಕೀಯ ಸಲಹೆ ಪಡೆದಲ್ಲಿ ಚೇತರಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜ್ವರ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು, ಗಂಟಲು ನೋವು, ತಲೆನೋವು, ಮೈ-ಕೈ ನೋವು, ಸುಸ್ತು, ದೌರ್ಬಲ್ಯ, ಉಸಿರಾಟದ ತೊಂದರೆ ಹಾಗೂ ಎದೆನೋವು ಸೇರಿದಂತೆ ಹಲವು ಲಕ್ಷಣಗಳು ಕಂಡುಬರಬಹುದು. ಮಕ್ಕಳು, ವಯೋವೃದ್ಧರು, ಗರ್ಭಿಣಿಯರು ಹಾಗೂ ಮಧುಮೇಹ, ಹೃದಯ ಮತ್ತು ಶ್ವಾಸಕೋಶ ಸೇರಿದಂತೆ ದೀರ್ಘಕಾಲಿನ ಕಾಯಿಲೆ ಹೊಂದಿರುವವರು ಜ್ವರ ಮತ್ತು ಉಸಿರಾಟದ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಎಂದು ಸೂಚಿಸಲಾಗಿದೆ.

ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಟಿಶ್ಯು, ಕರವಸ್ತ್ರ ಅಥವಾ ಮೊಣಕೈಯಿಂದ ಮುಚ್ಚಿಕೊಳ್ಳಬೇಕು. ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯಬೇಕು. ಜ್ವರ ಮತ್ತು ಕೆಮ್ಮು ಇದ್ದಾಗ ಶಾಲೆ, ಕಚೇರಿ ಹಾಗೂ ಜನಸಂದಣಿ ಇರುವ ಸ್ಥಳಗಳಿಗೆ ತೆರಳುವುದನ್ನು ತಪ್ಪಿಸಬೇಕು.

ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸ್ವಚ್ಛವಲ್ಲದ ಕೈಗಳಿಂದ ಕಣ್ಣು, ಮೂಗು ಹಾಗೂ ಬಾಯಿಯನ್ನು ಮುಟ್ಟದಿರುವುದು ಅಗತ್ಯವಾಗಿದೆ. ಸಾಕಷ್ಟು ದ್ರವ ಹಾಗೂ ಪೌಷ್ಟಿಕ ಆಹಾರ ಸೇವಿಸುವುದರ ಜತೆಗೆ ಸಮರ್ಪಕ ವಿಶ್ರಾಂತಿ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ ಆ್ಯಂಟಿಬಯೋಟಿಕ್ ಅಥವಾ ಇತರೆ ಔಷಧಿಗಳನ್ನು ಸೇವಿಸಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಗದಗ ಜಿಲ್ಲೆಯಲ್ಲಿ ಇನ್‌ಫ್ಲೂಯೆಂಜಾ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗಬಾರದು. ಆದರೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ನಿರ್ಲಕ್ಷಿಸದೆ ಸಮೀಪದ ಸರ್ಕಾರಿ ಆರೋಗ್ಯ ಸಂಸ್ಥೆಯನ್ನು ಸಂಪರ್ಕಿಸಿ ವೈದ್ಯಕೀಯ ಸಲಹೆ ಪಡೆಯಬೇಕು.

– ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ

ಸರ್ಕಾರಿ ನೌಕರರ ಆರೋಗ್ಯಕ್ಕೆ ಸಂಜೀವಿನಿ ಸ್ಪರ್ಶ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವ ನಿಟ್ಟಿನಲ್ಲಿ ಅರ್ಹ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನೋಂದಣಿಯಾಗಿ ಯೋಜನೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಜಿಲ್ಲಾಧಿಕಾರಿ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 24 ಆಸ್ಪತ್ರೆಗಳು ಎಬಿ-ಆರ್‌ಕೆ ಯೋಜನೆಯಡಿ ನೋಂದಣಿಯಾಗಿದ್ದು, ಅವುಗಳಲ್ಲಿ 20 ಆಸ್ಪತ್ರೆಗಳು ಆರೋಗ್ಯ ಸಂಜೀವಿನಿ ಯೋಜನೆಯಲ್ಲಿಯೂ ಸೇರ್ಪಡೆಯಾಗಿವೆ. ಉಳಿದ ಆಸ್ಪತ್ರೆಗಳ ಜತೆಗೆ ಅರ್ಹತೆ ಹೊಂದಿರುವ ಇತರೆ ಆಸ್ಪತ್ರೆಗಳೂ ಯೋಜನೆಗೆ ಸೇರಬೇಕು ಎಂದು ಹೇಳಿದರು.

ಹಿಂದೆ ನಿಗದಿತ ದರ ಹಾಗೂ ಪಾವತಿ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಆಸ್ಪತ್ರೆಗಳು ಯೋಜನೆಗೆ ನೋಂದಣಿಯಾಗಲು ಹಿಂದೇಟು ಹಾಕುತ್ತಿದ್ದವು. ಇದೀಗ ಪಾವತಿ ಪ್ರಕ್ರಿಯೆ ಸುಧಾರಿಸಲಾಗಿದ್ದು, ಸಿಜಿಎಚ್‌ಎಸ್ ದರಗಳಿಗೆ ಅನುಗುಣವಾಗಿ ಚಿಕಿತ್ಸಾ ದರ ನಿಗದಿಪಡಿಸಿರುವುದರಿಂದ ಹೆಚ್ಚಿನ ಆಸ್ಪತ್ರೆಗಳು ಯೋಜನೆಯಡಿ ನೋಂದಣಿಯಾಗುವ ನಿರೀಕ್ಷೆಯಿದೆ ಎಂದರು.

ಧಾರವಾಡ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದು, ನೆರೆಯ ಜಿಲ್ಲೆಗಳ ನೌಕರರೂ ಚಿಕಿತ್ಸೆಗೆ ಇಲ್ಲಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಯೋಜನೆಯಡಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಆಸ್ಪತ್ರೆಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

ಹುಬ್ಬಳ್ಳಿ ಐಎಂಎ ಪ್ರತಿನಿಧಿ ಡಾ. ಬಸವರಾಜ ಸರ್ಜನ ಮಾತನಾಡಿ, ಆರೋಗ್ಯ ಸಂಜೀವಿನಿ ಯೋಜನೆಯಡಿ ಪರಿಷ್ಕೃತ ಚಿಕಿತ್ಸಾ ದರ ಹಾಗೂ ಸುಧಾರಿತ ಮರುಪಾವತಿ ವ್ಯವಸ್ಥೆ ಜಾರಿಯಾಗಿರುವುದರಿಂದ ಹೆಚ್ಚಿನ ನರ್ಸಿಂಗ್ ಹೋಮ್ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ನೋಂದಣಿಗೆ ಒಳಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಆರೋಗ್ಯ ಸಂಜೀವಿನಿ ಯೋಜನೆಯ ನೋಡಲ್ ಅಧಿಕಾರಿ ಡಾ. ಶಶಿಧರ ಕಳಸನೂರಮಠ ಯೋಜನೆಯ ಪ್ರಮುಖ ಅಂಶಗಳ ಕುರಿತು ವಿವರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ. ಮಾತನಾಡಿದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಸೊಲಗಿ ನಿರೂಪಿಸಿದರು. ರಮೇಶ ಲಿಂಗದಾಳ ವಂದಿಸಿದರು.

ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. ಈ ನಿಟ್ಟಿನಲ್ಲಿ ಅರ್ಹ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯೊಂದಿಗೆ ಕೈಜೋಡಿಸಬೇಕು.

— ಸ್ನೇಹಲ್ ಆರ್., ಜಿಲ್ಲಾಧಿಕಾರಿ, ಧಾರವಾಡ

ನಮ್ಮೂರ ಜಾತ್ರೆಗೆ ಬನ್ನಿ… ನಾಗಾವಿ ತಾಂಡಾದಲ್ಲಿ ಭಕ್ತಿಯ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನಾಗಾವಿ-ತಾಂಡಾದಲ್ಲಿ ಶ್ರೀ ನಾಗದೇವತೆಯ 26ನೇ ವರ್ಷದ ಜಾತ್ರಾಮಹೋತ್ಸವವು ಆ.29ರಂದು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಜರುಗಲಿದೆ.

ಶ್ರೀ ಛತ್ರಪ್ಪ ವಾಗಪ್ಪ ರಾಠೋಡ ಅವರ ತೋಟದಲ್ಲಿರುವ ಶ್ರೀ ನಾಗದೇವತೆಯ ಸನ್ನಿಧಿಯಲ್ಲಿ ಜಾತ್ರಾಮಹೋತ್ಸವವನ್ನು ಆಯೋಜಿಸಲಾಗಿದೆ. ಜಾತ್ರೆಯ ಅಂಗವಾಗಿ ರುದ್ರಾಭಿಷೇಕ, 108 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಕುಂಭಮೇಳ, ಧರ್ಮ ಚಿಂತನಗೋಷ್ಠಿ, ಸನ್ಮಾನ ಸಮಾರಂಭ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಭಕ್ತಿಭಾವದಿಂದ ರಥೋತ್ಸವ ಜರುಗಲಿದ್ದು, ಡೊಳ್ಳು, ಭಜನಾ ಮಂಡಳಿಗಳು, ಜಾಂಜ್ ಮೇಳ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ಜಾತ್ರೆಯ ಮೆರುಗು ಹೆಚ್ಚಿಸಲಿವೆ. ರಾತ್ರಿ ಡ್ಯಾನ್ಸ್ ಸ್ಪರ್ಧೆ ಹಾಗೂ ನೃತ್ಯ ಕಾರ್ಯಕ್ರಮವೂ ನಡೆಯಲಿದೆ.

ಇದಕ್ಕೂ ಮುನ್ನ ಆ.28ರಂದು ಸಂಜೆ ವಿವಿಧ ಬಂಜಾರ ಭಜನಾ ತಂಡಗಳು ಹಾಗೂ ಗಾಯಕರಿಂದ ಭಜನಾ ಜಾಗರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಆ.29ರಂದು ನಡೆಯುವ ಧರ್ಮ ಚಿಂತನಗೋಷ್ಠಿಯಲ್ಲಿ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು, ಹರ್ಲಾಪೂರ-ಹಳ್ಳಿಗುಡಿಯ ಡಾ. ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಕೇಸರಟ್ಟಿಯ ಬಾಲತಪಸ್ವಿ ಸೋಮಲಿಂಗ ಸ್ವಾಮಿಗಳು ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

ಗ್ರಾಮೀಣ ಸಂಸ್ಕೃತಿ, ಪರಂಪರೆ, ಭಕ್ತಿ ಹಾಗೂ ಸಹೋದರತ್ವವನ್ನು ಬೆಸೆಯುವ ಈ ಜಾತ್ರಾಮಹೋತ್ಸವದಲ್ಲಿ ನಾಡಿನ ಭಕ್ತರು, ಬಂಧು-ಬಳಗ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ನಾಗದೇವತೆ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ಹಾಗೂ ಜಾತ್ರಾ ಸಮಿತಿ ಮನವಿ ಮಾಡಿದೆ.

ಮಾದರಿ ಉದ್ಯಾನವನ ನಿರ್ಮಾಣ ಹೆಮ್ಮೆಯ ಸಂಗತಿ: ಕೆ.ಎಚ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ನಂದೀಶ್ವರ ನಗರದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮಾದರಿ ಉದ್ಯಾನವನ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಗರದ ಶೋಭೆ ಹೆಚ್ಚಿಸುವ ಜತೆಗೆ ಬಡಾವಣೆಯ ನಾಗರಿಕರಿಗೆ ಉತ್ತಮ ವಾತಾವರಣ ಕಲ್ಪಿಸಲಿದೆ ಎಂದು ಯುವ ಮುಖಂಡ ಕೆ.ಎಚ್. ಪಾಟೀಲ ಹೇಳಿದರು.

ಕಳಸಾಪೂರ ರಸ್ತೆಯ ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಹಕಾರಿ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಪಂಚವಟಿ ನಾಗದೇವತಾ ರುದ್ರಾಭಿಷೇಕ, ಪಂಚವಟಿ ನಾಗರಕಟ್ಟೆ ಉದ್ಯಾನವನದ ಕಾಂಪೌಂಡ್ ಹಾಗೂ ಹೈಮಾಸ್ಟ್ ಉದ್ಘಾಟನೆ, ವನಮಹೋತ್ಸವ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡಾವಣೆಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಮಾಜಿ ನಗರಸಭೆ ಸದಸ್ಯ ಅನಿಲ ಗರಗ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಗದ್ದಿಕೇರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಜಿ.ಎಸ್. ಹಿರೇಮಠ ಉಪಸ್ಥಿತರಿದ್ದರು.

ಈ ವೇಳೆ ಪಂಚವಟಿ ನಾಗದೇವತಾ ರುದ್ರಾಭಿಷೇಕ ನೆರವೇರಿಸಿ, ಉದ್ಯಾನವನದ ಕಾಂಪೌಂಡ್ ಹಾಗೂ ಹೈಮಾಸ್ಟ್ ಉದ್ಘಾಟಿಸಲಾಯಿತು. ವನಮಹೋತ್ಸವದ ಅಂಗವಾಗಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.

ನಂದೀಶ್ವರ ನಗರದಲ್ಲಿ ನಿರ್ಮಾಣವಾಗುತ್ತಿರುವ ಮಾದರಿ ಉದ್ಯಾನವನ ಬಡಾವಣೆಯ ಅಭಿವೃದ್ಧಿಗೆ ಹೊಸ ಮೆರುಗು ನೀಡಲಿದೆ. ಸಾರ್ವಜನಿಕರ ಸಹಭಾಗಿತ್ವದಿಂದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ.

— ಕೆ.ಎಚ್. ಪಾಟೀಲ, ಯುವ ಮುಖಂಡ

ಈದ್ ಮಿಲಾದ್ ಅಂಗವಾಗಿ ರಕ್ತದಾನ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಗದಗ: ಈದ್ ಮಿಲಾದ್-ಉನ್-ನಬಿ ಅಂಗವಾಗಿ ನಗರದ ಐಎಂಎ ರಕ್ತನಿಧಿಯ ಸಹಯೋಗದಲ್ಲಿ ಈದ್ ಮಿಲಾದ್-ಉನ್-ನಬಿ ಸಮಿತಿಯಿಂದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಪ್ರವಾದಿ ಮುಹಮ್ಮದ್ (ಸ.ಅ.ಸ.) ಅವರ ಜನ್ಮದಿನಾಚರಣೆಯ ಅಂಗವಾಗಿ ನಡೆದ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ ನಡೆಸಲಾಯಿತು.

ಸಮುದಾಯದಲ್ಲಿ ಹೆಚ್ಚುತ್ತಿರುವ ಮಧುಮೇಹ ಸಮಸ್ಯೆಯ ಹಿನ್ನೆಲೆಯಲ್ಲಿ ರೋಗನಿರ್ಣಯವಾಗದ ಪ್ರಕರಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಉದ್ದೇಶದಿಂದ ಸಕ್ಕರೆ ಪರೀಕ್ಷೆ ನಡೆಸಲಾಯಿತು.

ಶಿಬಿರವನ್ನು ಡಾ. ಪ್ಯಾರಾಲಿ ನೂರಾನಿ, ಐಎಂಎ ರಕ್ತನಿಧಿಯ ಅಧ್ಯಕ್ಷ ಡಾ. ಅಜಯ್ ರಾಜು, ಕಾರ್ಯದರ್ಶಿ ಡಾ. ಅರವಿಂದ್ ಕೆ. ಹಾಗೂ ಡಾ. ಪವಾಡಶೆಟ್ಟರ್ ಸಂಯೋಜಿಸಿದರು.

ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದ ವೈದ್ಯರು, ಸ್ವಯಂಸೇವಕರು ಹಾಗೂ ಸಿಬ್ಬಂದಿಗೆ ಈದ್ ಮಿಲಾದ್-ಉನ್-ನಬಿ ಸಮಿತಿ ಮತ್ತು ಸಂಘಟಕರು ಕೃತಜ್ಞತೆ ಸಲ್ಲಿಸಿದರು.

ಯಜ್ಞೋಪವೀತ ಧಾರಣೆಯಿಂದ ಶಾರೀರಿಕ–ಮಾನಸಿಕ ಆರೋಗ್ಯಕ್ಕೆ ಬಲ: ಪ್ರಜ್ವಲ್ ಜೋಶಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯಜ್ಞೋಪವೀತ ಧಾರಣ ಸಂಸ್ಕಾರವು ಪರಮ ಪವಿತ್ರವಾಗಿದ್ದು, ಧಾರ್ಮಿಕ ಮಹತ್ವದ ಜತೆಗೆ ವೈಜ್ಞಾನಿಕ ಹಿನ್ನೆಲೆಯನ್ನೂ ಹೊಂದಿದೆ. ಇದು ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ದೃಢವಾಗಲು ಸಹಕಾರಿಯಾಗಿದೆ ಎಂದು ಯುವ ಧಾರ್ಮಿಕ ಚಿಂತಕ ಪ್ರಜ್ವಲ್ ಜೋಶಿ ಹೇಳಿದರು.

ಪಟ್ಟಣದ ಶಂಕರಭಾರತಿಮಠದಲ್ಲಿ ಮಂಗಳವಾರ ಹಸ್ತಾಯುಕ್ತ ಷಷ್ಠಿ ತಿಥಿಯಂದು ಬ್ರಾಹ್ಮಣ ಸಮಾಜದ ವತಿಯಿಂದ ಆಯೋಜಿಸಿದ್ದ ಯಜ್ಞೋಪವೀತ ಧಾರಣಾ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಹಿಂದೂ ಧರ್ಮದ 16 ಪ್ರಮುಖ ಸಂಸ್ಕಾರಗಳಲ್ಲಿ ಉಪನಯನ ಅಥವಾ ಯಜ್ಞೋಪವೀತ ಧಾರಣೆಯೂ ಒಂದಾಗಿದೆ. ವೇದಾಧ್ಯಯನ, ಗಾಯತ್ರಿ ಮಂತ್ರ ಜಪ ಹಾಗೂ ಧಾರ್ಮಿಕ ಅನುಷ್ಠಾನಗಳಿಗೆ ದೀಕ್ಷೆ ನೀಡುವ ಸಂಕೇತವಾಗಿ ಯಜ್ಞೋಪವೀತವನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್ ಮಾತನಾಡಿ, ವೇದ, ಪುರಾಣ ಹಾಗೂ ಪೂಜೆ-ಪುನಸ್ಕಾರಗಳ ಹಿಂದೆ ಧಾರ್ಮಿಕತೆಯ ಜತೆಗೆ ವೈಜ್ಞಾನಿಕ ಅಂಶಗಳೂ ಅಡಗಿವೆ. ಬ್ರಾಹ್ಮಣರು ನಿತ್ಯ ಗಾಯತ್ರಿ ಮಂತ್ರ ಜಪಿಸುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನೂರಾರು ವಿಪ್ರಬಾಂಧವರು ಋಷಿ ಹೋಮ ಹಾಗೂ ಉಪಾಕರ್ಮ ಹೋಮ ನೆರವೇರಿಸಿದರು. ಬಳಿಕ ‘ಯಜ್ಞೋಪವೀತಂ ಪರಮಂ ಪವಿತ್ರಂ’ ಮಂತ್ರ ಪಠಣದೊಂದಿಗೆ ಹೊಸ ಯಜ್ಞೋಪವೀತ ಧರಿಸಿ, ಹಳೆಯ ಯಜ್ಞೋಪವೀತವನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಿದರು.

ಕಾರ್ಯದರ್ಶಿ ಅರವಿಂದ ದೇಶಪಾಂಡೆ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ವಿಪ್ರಬಾಂಧವರು ಪಾಲ್ಗೊಂಡಿದ್ದರು.

ಯಜ್ಞೋಪವೀತ ಧಾರಣೆಯು ಕೇವಲ ಧಾರ್ಮಿಕ ಆಚರಣೆಯಲ್ಲ. ಜ್ಞಾನ, ಶಿಸ್ತು ಮತ್ತು ಆಧ್ಯಾತ್ಮಿಕ ಸಾಧನೆಯತ್ತ ವ್ಯಕ್ತಿಯನ್ನು ಮುನ್ನಡೆಸುವ ಮಹತ್ವದ ಸಂಸ್ಕಾರವಾಗಿದೆ.

— ಪ್ರಜ್ವಲ್ ಜೋಶಿ, ಯುವ ಧಾರ್ಮಿಕ ಚಿಂತಕ

ಲಕ್ಕುಂಡಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಜಯಂತಿಯ ಅಂಗವಾಗಿ ಲಕ್ಕುಂಡಿಯಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್ ಮಿಲಾದ್ ಆಚರಿಸಿದರು.

ಅಂಜುಮನ್-ಎ-ಇಸ್ಲಾಂ ಕಮಿಟಿ ಹಾಗೂ ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ಸಹಯೋಗದಲ್ಲಿ ಪಾಪನಾಶಿ ರಸ್ತೆಯ ಮಾಬು ಸುಬಾನಿ ದರ್ಗಾದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಹಾಫೀಜ್ ಸಲೀಂ ಅಹ್ಮದ್ ಮಂಗಳೂರು ಅವರ ನೇತೃತ್ವದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಸಂದೇಶ ಸಾರುವ ಹಾಡುಗಳನ್ನು ಹಾಡಿ ಜಯಘೋಷ ಮೊಳಗಿಸಲಾಯಿತು.

ಮೆರವಣಿಗೆ ಹಿರೇಮಸೂತಿಗೆ ತಲುಪಿದ ಬಳಿಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನ ಹಾಗೂ ಸಂದೇಶಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರ ಅಹ್ಮದ್ ಕಿರೀಟಗೇರಿ, ಉಪಾಧ್ಯಕ್ಷ ದಾದಸಾಬ ಕೊರ್ಲಹಳ್ಳಿ, ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಹೈದರಾಲಿ ನದಾಫ್, ಉಪಾಧ್ಯಕ್ಷ ರಿಯಾಜ್ ಮಸೂತಿ ಸೇರಿದಂತೆ ಮುಸ್ಲಿಂ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

ವಿದ್ಯಾರ್ಥಿ ಸಂಘಟನೆ ನಿಷೇಧ ಚಿಂತನೆ ಕೈಬಿಡಿ: ಎಂ. ಶಾಂತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ಕ್ಯಾಂಪಸ್‌ನಿಂದ ದೂರವಿಡಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮವನ್ನು ಎಐಡಿಎಸ್‌ಒ ಗದಗ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

ಶಿಕ್ಷಣ ವ್ಯವಸ್ಥೆ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗುವ ಮತ್ತು ಅವುಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ನಡೆಸುವಲ್ಲಿ ವಿದ್ಯಾರ್ಥಿ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜಕೀಯ ಪಕ್ಷಗಳಿಗೆ ಕಡಿವಾಣ ಹಾಕುವ ನೆಪದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಿಂದ ದೂರವಿಡುವುದು ಸರಿಯಲ್ಲ. ವಿದ್ಯಾರ್ಥಿ ಸಂಘಟನೆಗಳನ್ನೇ ನಿಷೇಧಿಸಿದರೆ ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಹಿನ್ನಡೆಯಾಗಲಿದೆ ಎಂದು ಎಐಡಿಎಸ್‌ಒ ಆತಂಕ ವ್ಯಕ್ತಪಡಿಸಿದೆ.

ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಸರ್ಕಾರದ ನಿರ್ಧಾರವನ್ನು ಎಐಡಿಎಸ್‌ಒ ಬೆಂಬಲಿಸಿತ್ತು. ಆದರೆ, ಈಗ ವಿದ್ಯಾರ್ಥಿ ಸಂಘಟನೆಗಳನ್ನು ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸದಂತೆ ತಡೆಯುವ ಚಿಂತನೆ ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ ಎಂದು ಸಂಘಟನೆ ಆರೋಪಿಸಿದೆ.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಹೋರಾಟ ನಡೆಸುವ ಸಂಘಟನೆಗಳನ್ನು ನಿಷೇಧಿಸುವುದು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ದಾಳಿಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ನಿಲುವನ್ನು ಹಿಂಪಡೆದು ವಿದ್ಯಾರ್ಥಿ ಸಂಘಟನೆಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು.

— ಎಂ. ಶಾಂತಿ, ಜಿಲ್ಲಾ ಸಂಚಾಲಕಿ, ಎಐಡಿಎಸ್‌ಒ ಗದಗ

ಕಾರ್ಮಿಕರ ಹಕ್ಕುಗಳ ಅರಿವಿಗೆ ರೋಜ್‌ಗಾರ್ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಉದ್ಯೋಗದ ಜೊತೆಗೆ ಅವರ ಹಕ್ಕುಗಳು, ಕೂಲಿ ಪಾವತಿ, ಕೆಲಸದ ಸ್ಥಳದಲ್ಲಿನ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ್ರಳ್ಳಿ ತಾಂಡಾದಲ್ಲಿ ಗುರುವಾರ ರೋಜ್‌ಗಾರ್ ದಿನಾಚರಣೆ ನಡೆಯಿತು.

ವಿಬಿಜಿ ರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಮಗಾರಿ ಸ್ಥಳಕ್ಕೆ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಧರ್ಮರ ಕೃಷ್ಣಪ್ಪ ಭೇಟಿ ನೀಡಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು.

ಕಾರ್ಮಿಕರು ನಿಗದಿಪಡಿಸಿದ ಅಳತೆಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಕೆಲಸಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಯಡಿ ಕಾರ್ಮಿಕರಿಗೆ ಯೋಜನೆಯ ಉದ್ದೇಶ, ಉದ್ಯೋಗದ ದಿನಗಳು, ಕೂಲಿ ದರ ಹಾಗೂ ಕಾರ್ಮಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು.

ದಿನಗೂಲಿ ಮೊತ್ತವನ್ನು ₹370ರಿಂದ ₹382ಕ್ಕೆ ಹೆಚ್ಚಿಸಿರುವುದು ಹಾಗೂ ವಾರ್ಷಿಕ ಮಾನವ ದಿನಗಳ ಮಿತಿಯನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಿರುವುದನ್ನು ತಿಳಿಸಲಾಯಿತು. ಒಂದು ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ಮೂಲಕ ವಾರ್ಷಿಕ ₹47,750ರವರೆಗೆ ಕೂಲಿ ಪಡೆಯಲು ಅವಕಾಶವಿದ್ದು, ಕಾರ್ಮಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಲಾಯಿತು.

ನೂತನ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 318 ಬಗೆಯ ಕಾಮಗಾರಿಗಳಿಗೆ ಅವಕಾಶವಿದ್ದು, ಗ್ರಾಮಗಳ ಅಭಿವೃದ್ಧಿಯ ಜತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಾರ್ಮಿಕರಿಗೆ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಈ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿರುವ ಕುರಿತು ಕಾಯಕ ಬಂಧುಗಳು ನಿಗಾ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.

ಕೆರೆ ಹೂಳೆತ್ತುವಂತಹ ಸಮುದಾಯ ಕಾಮಗಾರಿಗಳಿಂದ ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವುದರ ಜತೆಗೆ ಜಲಸಂರಕ್ಷಣೆಗೂ ಉತ್ತೇಜನ ದೊರೆಯಲಿದೆ. ಮಳೆ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಮೂಲಕ ಕೃಷಿ ಹಾಗೂ ಗ್ರಾಮೀಣ ಬದುಕಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇಂತಹ ಕಾಮಗಾರಿಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಡಿಒ ಹನುಮಂತಪ್ಪ ಲಮಾಣಿ, ತಾಂತ್ರಿಕ ಸಂಯೋಜಕ ಹರೀಶ್ ಸೋಬರದ, ಟಿಐಇಸಿ ಮಂಜುನಾಥ ಸ್ವಾಮಿ ಹಂಜಿಗಿಮಠ, ಟಿಎಇ ಶ್ರೀನಿವಾಸ್ ಕಲಾಲ್, ಕಾರ್ಯದರ್ಶಿ ಸುರೇಶ್ ಹಡಪದ, ಎಸ್‌ಡಿಎ ಯಲ್ಲಪ್ಪ ನಡುವಿನಕೇರಿ, ಬಿಎಫ್‌ಟಿ ಶಿಲ್ಪಾ ಲಮಾಣಿ, ಜಿಕೆಎಂ ಗಂಗಮ್ಮ ಹರಿಜನ, ಟಿಆರ್‌ಎಂ ಭೀಮಪ್ಪ ರಾಥೋಡ್, ಕಾಯಕ ಬಂಧುಗಳು ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 325 ಕೂಲಿಕಾರರು ಭಾಗವಹಿಸಿದ್ದರು.

ಕಾರ್ಮಿಕರು ನಿಗದಿಪಡಿಸಿದ ಅಳತೆಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು.

— ಧರ್ಮರ ಕೃಷ್ಣಪ್ಪ, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ)