Home Blog Page 12

ಸಿಎ ಸೈಟ್‌ಗಳೇ ಕಾಂಗ್ರೆಸ್ ಕಚೇರಿಗಳಿಗಾ? 40 ಕೋಟಿ ಭೂಮಿ 2 ಕೋಟಿಗೆ — ಸರ್ಕಾರದ ವಿರುದ್ಧ ಗಂಭೀರ ಆರೋಪ

0

ಬೆಂಗಳೂರು: ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾದ ಸಿಎ ಸೈಟ್ ಹಂಚಿಕೆ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಖಲೆಗಳೊಂದಿಗೆ ಗಂಭೀರ ಆರೋಪ ಹೊರಿಸಿದ್ದಾರೆ.

ರಾಜ್ಯದ ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪಕ್ಷದ ಕಚೇರಿಗಳಿಗೆ ಭೂಮಿ ನೀಡಲಾಗುತ್ತಿದೆ. ತುಮಕೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆಗಳಲ್ಲಿ ಸಿಎ ಸೈಟ್ ಹಂಚಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಲಕ್ಷಾಂತರ ಮೌಲ್ಯದ ಸೈಟ್ 22 ಲಕ್ಷಕ್ಕೆ, ಬಾದಾಮಿಯಲ್ಲಿ 1.22 ಲಕ್ಷಕ್ಕೆ ನೀಡಲಾಗಿದೆ. ಎಸ್‌ಆರ್ ಮೌಲ್ಯದ ಕೇವಲ 5 ಶೇಕಡಾ ಹಣಕ್ಕೆ ಭೂಮಿ ನೀಡಿರುವುದು ಸರ್ಕಾರದ ನೇರ ಭೂಕಬಳಿಕೆ ಎಂದು ಆರೋಪಿಸಿದರು. ಒಟ್ಟು 40 ಕೋಟಿ ಮೌಲ್ಯದ ಭೂಮಿಯನ್ನು 2 ಕೋಟಿ ರೂಪಾಯಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ನಗರ ಯೋಜನಾ ನಿಯಮ ಪ್ರಕಾರ ಸಿಎ ಸೈಟ್‌ಗಳು ಶಾಲೆ, ಆಸ್ಪತ್ರೆ ಮತ್ತು ಸಾರ್ವಜನಿಕ ಸೇವೆಗಳಿಗಷ್ಟೇ ಬಳಕೆಯಾಗಬೇಕು. ಆದರೆ ರಾಜಕೀಯ ಬಳಕೆ ನಿಯಮ ಉಲ್ಲಂಘನೆ. ದೇವನಹಳ್ಳಿಯಲ್ಲಿ 17 ಕೋಟಿ ಮೌಲ್ಯದ ನಿವೇಶನ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೀಡುವ ಪ್ರಸ್ತಾವವೂ ಪ್ರಶ್ನೆಗೆ ಒಳಪಟ್ಟಿದೆ.

ಗ್ರಾಮ ಪಂಚಾಯತ್ ಭೂಮಿಯನ್ನು ಲೀಸ್ ನೀಡಲು ಅವಕಾಶವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿರಸ್ಕರಿಸಿರುವುದನ್ನೂ ಅವರು ಉಲ್ಲೇಖಿಸಿದರು. ಉಡುಪಿಯ ಅಂಜಾರು, ಕಾರ್ಕಳದ ಕುಕ್ಕುಂದೂರು ಮತ್ತು ಕುಂದಾಪುರದಲ್ಲಿ ಸರ್ಕಾರವೇ ಭೂಮಿ ನೀಡಿರುವುದನ್ನು ವಿಧಾನ ಪರಿಷತ್ ಮಾಹಿತಿ ಬಹಿರಂಗಪಡಿಸಿದೆ ಎಂದರು.

ಈ ಎಲ್ಲವನ್ನು ಉಲ್ಲೇಖಿಸಿದ ಅವರು ತಕ್ಷಣ ಭೂಮಿ ವಾಪಸ್ ಪಡೆಯಬೇಕು; ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಫೆ.28 ರಿಂದ ದ್ವಿತೀಯ ಪಿಯುಸಿ, ಮಾ.18 ರಿಂದ SSLC ಪರೀಕ್ಷೆ: ಸಚಿವ ಮಧು ಬಂಗಾರಪ್ಪ

0

ಬೆಂಗಳೂರು: ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಹಾಗೂ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1:15ರವರೆಗೆ ನಡೆಯಲಿವೆ ಎಂದು ಮಾಹಿತಿ ನೀಡಿದರು.

ದ್ವಿತೀಯ ಪಿಯುಸಿ ಪರೀಕ್ಷೆ – ವೇಳಾಪಟ್ಟಿ

  • ಫೆಬ್ರವರಿ 28 – ಕನ್ನಡ, ಅರೇಬಿಕ್
  • ಮಾರ್ಚ್ 2 – ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
  • ಮಾರ್ಚ್ 3 – ಇಂಗ್ಲಿಷ್
  • ಮಾರ್ಚ್ 4 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ಮಾರ್ಚ್ 5 – ಇತಿಹಾಸ
  • ಮಾರ್ಚ್ 6 – ಭೌತಶಾಸ್ತ್ರ
  • ಮಾರ್ಚ್ 7 – ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
  • ಮಾರ್ಚ್ 9 – ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
  • ಮಾರ್ಚ್ 10 – ಅರ್ಥಶಾಸ್ತ್ರ
  • ಮಾರ್ಚ್ 11 – ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
  • ಮಾರ್ಚ್ 12 – ಹಿಂದಿ
  • ಮಾರ್ಚ್ 13 – ರಾಜ್ಯಶಾಸ್ತ್ರ
  • ಮಾರ್ಚ್ 14 – ಲೆಕ್ಕಶಾಸ್ತ್ರ, ಗಣಿತ
  • ಮಾರ್ಚ್ 16 – ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
  • ಮಾರ್ಚ್ 17 – ಹಿಂದುಸ್ತಾನಿ ಸಂಗೀತ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ – ವೇಳಾಪಟ್ಟಿ (ಪರೀಕ್ಷೆ 1)

  • ಮಾರ್ಚ್ 18 – ಪ್ರಥಮ ಭಾಷೆ
  • ಮಾರ್ಚ್ 23 – ವಿಜ್ಞಾನ
  • ಮಾರ್ಚ್ 25 – ದ್ವಿತೀಯ ಭಾಷೆ
  • ಮಾರ್ಚ್ 28 – ಗಣಿತ
  • ಮಾರ್ಚ್ 30 – ತೃತೀಯ ಭಾಷೆ
  • ಏಪ್ರಿಲ್ 2 – ಸಮಾಜ ವಿಜ್ಞಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆ – ವೇಳಾಪಟ್ಟಿ (ಪರೀಕ್ಷೆ 2)

  • ಮೇ 18 – ಪ್ರಥಮ ಭಾಷೆ
  • ಮೇ 19 – ವಿಜ್ಞಾನ
  • ಮೇ 20 – ದ್ವಿತೀಯ ಭಾಷೆ
  • ಮೇ 21 – ಗಣಿತ
  • ಮೇ 22 – ತೃತೀಯ ಭಾಷೆ
  • ಮೇ 23 – ಸಮಾಜ ವಿಜ್ಞಾನ

ವಿದ್ಯಾರ್ಥಿಗಳು ವೇಳಾಪಟ್ಟಿಯಂತೆ ಸಿದ್ಧತೆ ನಡೆಸುವಂತೆ ಸಚಿವರು ಕರೆ ನೀಡಿದ್ದಾರೆ.

ಸ್ಕೂಟಿ–ಬೈಕ್ ಮುಖಾಮುಖಿ ಡಿಕ್ಕಿ: ಇಬ್ಬರು ಯುವಕರು ಸಾವು! ಓರ್ವನ ಸ್ಥಿತಿ ಗಂಭೀರ

0

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದೊಡ್ಡರಿ ಕಾವಲು ಗೇಟ್ ಬಳಿ ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ರಮೇಶ್ (23) ಮತ್ತು ಪುರುಷೋತ್ತಮ್ (26) ಎಂದು ಗುರುತಿಸಲಾಗಿದೆ.

ರಮೇಶ್ ಹಾಗೂ ಕಿರಣ್ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬರುತ್ತಿದ್ದ ಪುರುಷೋತ್ತಮ್ ಅವರ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿಯ ತೀವ್ರತೆಯಿಂದ ರಮೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಪುರುಷೋತ್ತಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸ್ಕೂಟಿಯಲ್ಲಿ ಇದ್ದ ಕಿರಣ್ ಗಂಭೀರ ಗಾಯಗಳೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಲ್ಯದಲ್ಲೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ರಮೇಶ್ ಹೆಲ್ಮೆಟ್ ಧರಿಸಿಕೊಂಡಿದ್ದರೂ, ಅಪಘಾತದ ರಭಸಕ್ಕೆ ಬೈಕ್ ಹ್ಯಾಂಡಲ್ ಎದೆಗೆ ಒತ್ತಿಕೊಂಡ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ಕಣ್ಣೀರಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಸಾವೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

. ಮಗನ ಸಾವಿನ ಶೋಕ ತಾಳಲಾರದೆ ದಂಪತಿ ನೇಣಿಗೆ: 4 ಪುಟದ ಡೆತ್‌ನೋಟ್ ಬರೆದಿಟ್ಟು ದಾರುಣ ಅಂತ್ಯ

0

ರಾಯ್ಪುರ: ಛತ್ತೀಸ್‌ಗಢದಲ್ಲಿ ಮನಕಲುಕುವ ಘಟನೆ ನಡೆದಿದೆ. ಪುತ್ರನ ಅಪಘಾತ ಮರಣದ ನೋವಿನಿಂದ ಬಳಲುತ್ತಿದ್ದ ದಂಪತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಛತ್ತೀಸ್‌ಗಢ ರಾಜ್ಯದ ರಾಯ್ಪುರ ಪ್ರದೇಶದಲ್ಲಿ ಕೃಷ್ಣ ಪಟೇಲ್ (48) ಮತ್ತು ಅವರ ಪತ್ನಿ ರಮಾ ಬಾಯಿ (47) ತಮ್ಮ ಮನೆಯ ಅಂಗಳದಲ್ಲಿದ್ದ ಬೇವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ 4 ಪುಟಗಳ ಡೆತ್‌ನೋಟ್ ಹಾಗೂ ವೀಡಿಯೊ ಸಂದೇಶ ಪತ್ತೆಯಾಗಿದೆ.

ದಂಪತಿಯ ಏಕೈಕ ಪುತ್ರ ಆದಿತ್ಯ ಪಟೇಲ್ (21) 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಕೃಷ್ಣ ಮತ್ತು ಗೃಹಿಣಿ ರಮಾ ಬಾಯಿಗೆ ಪುತ್ರನೇ ಜೀವನವಾಗಿದ್ದರಿಂದ ಅವನ ಸಾವಿನ ಬಳಿಕ ಮನನೊಂದು ಬದುಕುತ್ತಿದ್ದರು.

ಆದಿತ್ಯ ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋಗಿದ್ದ. ಪುತ್ರ ಮೊದಲು ಹೋಗಲು ಹಿಂಜರಿದಿದ್ದ. ಆದರೆ, ಆತನ ತಂದೆ, ‘ಇದು ದೇವರ ಕೆಲಸ.. ಹೋಗಿ ಬಾ’ ಎಂದು ಒತ್ತಾಯಿಸಿದ್ದರು. ಈ ವಿಚಾರವನ್ನು ನೆನೆದು, ನಾನು ತಪ್ಪು ಮಾಡಿದೆ ಅಂತ ತಂದೆ ಕಣ್ಣೀರಿಟ್ಟಿದ್ದಾರೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಖಾಕಿ ಕುರ್ಚಿಯಲ್ಲಿ ಪುಟ್ಟ ಹೀರೋ: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಬಾಲಕನ ಕನಸು ನೆರವೇರಿಸಿದ ಎಸ್‌ಪಿ

0

ದಾವಣಗೆರೆ: ಜಿಲ್ಲೆಯಲ್ಲಿ ಮನಮುಟ್ಟುವ ಘಟನೆ ನಡೆದಿದೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ 3.5 ವರ್ಷದ ಬಾಲಕ ಹಿತಾರ್ಥ್ ಕನಸನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಾಕಾರಗೊಳಿಸಲಾಯಿತು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪ್ರಭು–ಅನುಷಾ ದಂಪತಿಯ ಪುತ್ರ ಹಿತಾರ್ಥ್‌ಗೆ 1.5 ವರ್ಷದಾಗಿಯೇ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಕಳೆದ 2 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಮಣಿಪಾಲ್ ಆಸ್ಪತ್ರೆ ನಲ್ಲಿ 8 ತಿಂಗಳು ನಿರಂತರ ಚಿಕಿತ್ಸೆ ಪಡೆದಿದ್ದಾನೆ. ಈಗಾಗಲೇ 80% ಚೇತರಿಕೆ ಕಂಡಿದ್ದರೂ ಕುಟುಂಬದ ಆತಂಕ ಕಡಿಮೆಯಾಗಿಲ್ಲ.

ಮಗ ಪೊಲೀಸ್ ಅಧಿಕಾರಿಯಾಗಬೇಕು ಎಂಬ ತಂದೆಯ ಕನಸಿಗೆ ಸ್ಪಂದಿಸಿದ ಎಸ್‌ಪಿ ಶೇಖರ್ ಹೆಚ್ ಟಿ, ಖಾಕಿ ಉಡುಪಿನಲ್ಲಿ ಬಂದ ಮಗುವನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಹೂಗುಚ್ಛ ನೀಡಿ ಸ್ವಾಗತಿಸಿ ತಮ್ಮ ಕುರ್ಚಿಯಲ್ಲಿ ಕೂರಿಸಿ ಕೆಲಕಾಲ “ಎಸ್‌ಪಿ” ಆಗುವ ಅವಕಾಶ ನೀಡಿದರು.

ಮಗು ನಗುಮುಖದಿಂದ ಕುರ್ಚಿಯಲ್ಲಿ ಕುಳಿತ ದೃಶ್ಯ ಕಂಡು ಸಿಬ್ಬಂದಿ ಭಾವುಕರಾದರು. ಎಸ್‌ಪಿ ಅವರ ಮಾನವೀಯ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ – ಎಷ್ಟಿದೆ ಇಂದಿನ ದರ..?

0

ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಫೆಬ್ರವರಿ 17, 2026 ಮಂಗಳವಾರದಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ದರ ₹153 ಇಳಿಕೆಯಾಗಿದ್ದು ₹15,491ಕ್ಕೆ ತಲುಪಿದೆ. 10 ಗ್ರಾಂ ದರದಲ್ಲಿ ₹1,530 ಇಳಿಕೆಯಾಗಿದ್ದು ₹1,54,910 ಆಗಿದೆ.

22 ಕ್ಯಾರೆಟ್ ಚಿನ್ನದ 1 ಗ್ರಾಂ ದರ ₹140 ಇಳಿಕೆಯಾಗಿದ್ದು ₹14,200ಕ್ಕೆ ಲಭ್ಯವಾಗಿದೆ. 10 ಗ್ರಾಂ ದರದಲ್ಲಿ ₹1,400 ಇಳಿಕೆಯಾಗಿದ್ದು ₹1,42,000ಕ್ಕೆ ತಲುಪಿದೆ.

ಬೆಳ್ಳಿ ದರದಲ್ಲೂ ಭಾರಿ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂಗೆ ₹8 ಇಳಿಕೆಯಾಗಿದ್ದು, ಕೆಜಿಗೆ ₹8,000 ಕಡಿಮೆಯಾಗಿ ₹2,60,000ಕ್ಕೆ ದಾಖಲಾಗಿದೆ.

ಚಿನ್ನದ ಬೆಲೆ ಫೆಬ್ರವರಿ 7ರಿಂದ ಏರಿಕೆ ಹಾದಿ ಹಿಡಿದಿತ್ತು. ಫೆಬ್ರವರಿ 1ರಂದು ₹16,058 ಇದ್ದ ದರ ಫೆ.9ರಂದು ₹15,884ಕ್ಕೆ ಇಳಿಕೆಯಾಗಿತ್ತು. ಈ ತಿಂಗಳ ಕನಿಷ್ಠ ದರ ಫೆ.2ರಂದು ₹15,317 ದಾಖಲಾಗಿದ್ದರೆ, ಗರಿಷ್ಠ ದರ ₹16,058 ಆಗಿತ್ತು. ಇತ್ತೀಚೆಗೆ ₹15,371ಕ್ಕೆ ಇಳಿದಿದ್ದ ದರ ಇದೀಗ ₹15,491ಕ್ಕೆ ಏರಿಕೆಯಾಗಿದೆ.

ಲಾಭಾಂಶ ಬುಕ್ಕಿಂಗ್ ಮಾಡುವ ಉದ್ದೇಶದಿಂದ ಹೂಡಿಕೆದಾರರು ಚಿನ್ನ ಮಾರಾಟದಲ್ಲಿ ತೊಡಗಿರುವುದರಿಂದ ದರದಲ್ಲಿ ಇಳಿಕೆ ಕಂಡುಬರುತ್ತಿದೆ. ಜೊತೆಗೆ ಜಾಗತಿಕ ರಾಜಕೀಯ ಪರಿಸ್ಥಿತಿಗಳು ಸ್ಥಿರವಾಗಿರುವುದೂ ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು!

0

ದೊಡ್ಡಬಳ್ಳಾಪುರ: ಹಾಸ್ಟೆಲ್ ಕಟ್ಟಡದಿಂದ ಬಿದ್ದು 20 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ನಯನ (20) ಎಂದು ಗುರುತಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿರುವ ಗೀತಂ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದಳು.

ಹಾಸ್ಟೆಲ್ ಕಟ್ಟಡದ ಲಿಫ್ಟ್ ಮಾಡಲು ಬಿಡಲಾಗಿದ್ದ ಜಾಗದಲ್ಲಿ ಬಿದ್ದು ಸಾವನ್ನಪ್ಪಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮೃತದೇಹವನ್ನು ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

ಬೆಂಗಳೂರಿನಲ್ಲಿ ಆಸ್ತಿಗಾಗಿ ತಂದೆಯನ್ನೇ ಇರಿದು ಕೊಂದ ಪಾಪಿ ಪುತ್ರ!

0

ಬೆಂಗಳೂರು: ಆಸ್ತಿ ವಿಚಾರವಾಗಿ ವೃದ್ಧ ತಂದೆಯನ್ನು ಮಗನೇ ಇರಿದು ಕೊಂದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಮುನಿಕೃಷ್ಣ (70) ಎಂದು ಗುರುತಿಸಲಾಗಿದೆ.

ಹತ್ಯೆಗೈದ ಆರೋಪಿ ಮೋಹನ್ ಕುಮಾರ್ ಎಂದು ತಿಳಿದುಬಂದಿದೆ. ಆಸ್ತಿ ವಿಚಾರವಾಗಿ ಈ ಹಿಂದೆ ಹಲವು ಬಾರಿ ತಂದೆ-ಮಗನ ನಡುವೆ ಗಲಾಟೆಗಳು ನಡೆದಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎರಡು ದಿನಗಳ ಹಿಂದೆ ಆರೋಪಿ ಮೋಹನ್ ಕುಮಾರ್ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮುನಿಕೃಷ್ಣರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಮೃತ ಮುನಿಕೃಷ್ಣ ಅವರು ಬಿಎಂಟಿಸಿ ನಿವೃತ್ತ ಕಂಡಕ್ಟರ್ ಆಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು. ಕೆಲ ಆಸ್ತಿಗಳನ್ನು ಮೊಮ್ಮಕ್ಕಳ ಹೆಸರಿಗೆ ವಿಲ್ ಮಾಡಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಈ ಸಂಬಂಧ ಇಂದಿರಾನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌: ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌!

0

ಬೆಂಗಳೂರು: ಕನ್ನಡದ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯೊಬ್ಬರ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಇತ್ತೀಚೆಗೆ ನಡೆದ ಮಹಿಳಾ ಕ್ರಿಕೆಟ್ ಟೂರ್ನಿಯ ವೇಳೆ ಈ ಘಟನೆ ನಡೆದಿದ್ದು, ಸಂತ್ರಸ್ತೆ ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಟೂರ್ನಿಯ ಎರಡನೇ ದಿನ ವಾಶ್ ರೂಂಗೆ ತೆರಳಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಫೋಟೋ ತೆಗೆದಿದ್ದಾನೆ ಎನ್ನಲಾಗಿದೆ. ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ವಿಡಿಯೋವನ್ನು ನೇರವಾಗಿ ಸಂತ್ರಸ್ತೆಗೆ ಕಳುಹಿಸಿ ಹಣದ ಬೇಡಿಕೆ ಇಡುವುದು ಕಾಣಸಿಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿ ‘Swan.3704722’ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ನಟಿಯ ಆಪ್ತ ಸ್ನೇಹಿತೆಗೆ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

‘ವಿಡಿಯೋ ವೈರಲ್ ಮಾಡಬಾರದೆಂದರೆ ಹಣ ನೀಡಬೇಕು’ ಎಂದು ಆರೋಪಿಯು ಬೆದರಿಕೆ ಹಾಕಿದ್ದು, ವೀಡಿಯೋ ಕಾಲ್ ಮೂಲಕವೂ ಹಲವು ಬಾರಿ ಹಣದ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.

ಸದ್ಯ ಆರೋಪಿಯು ಕಳುಹಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಸಾಕ್ಷಿಯಾಗಿ ನೀಡಿ ನಟಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಡಿವೈಡರ್‌ʼಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

0

ಕೋಲಾರ: ಡಿವೈಡರ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಹೊರವಲಯದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75ರ ಪವನ್ ಕಾಲೇಜು ಸಮೀಪ ಈ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ನಲ್ಲೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 40 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್‌ನ ಗಾಜುಗಳನ್ನು ಒಡೆದು ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದರು.

ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕೋಲಾರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

error: Content is protected !!