Home Blog Page 123

ಭಾರತಕ್ಕೆ ಸೆಮಿಫೈನಲ್ ಕಾದಾಟ – ಎದುರಾಳಿ ತಂಡಗಳ ಫಲಿತಾಂಶವೂ ನಿರ್ಧಾರಕ!

0

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪ್ರಸ್ತುತ ನಿರ್ಣಾಯಕ ಹಂತದಲ್ಲಿದ್ದು, ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಸೋತ ನಂತರ ಮುಂದಿನ ಪಂದ್ಯಗಳು ಅತ್ಯಂತ ಮುಖ್ಯವಾಗಿವೆ.

ಭಾರತ ತಂಡಕ್ಕೆ ಸೆಮಿಫೈನಲ್‌ ಪ್ರವೇಶಕ್ಕಾಗಿ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಅನಿವಾರ್ಯವಾಗಿದೆ. ಈ ಗೆಲುವುಗಳ ಹೊರತಾಗಿಯೇ ಭಾರತ ತಂಡ ನೇರವಾಗಿ ಸೆಮಿಫೈನಲ್‌ಗೆ ಹೋಗುತ್ತೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಸೆಮಿಫೈನಲ್ ಹಾದಿಯಲ್ಲಿ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳ ಫಲಿತಾಂಶಗಳು ಪ್ರಮುಖವಾಗಿವೆ. ನೆಟ್ ರನ್ ರೇಟ್‌ನಲ್ಲಿ ಹಿಂದಿನ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಎದುರಾಳಿ ತಂಡಗಳ ಫಲಿತಾಂಶಗಳ ಮೇಲೂ ಅವಲಂಬಿತವಾಗಿದೆ. ಮುಂದಿನ ಪಂದ್ಯಗಳಲ್ಲಿ.

  • ಝಿಂಬಾಬ್ವೆ ತಂಡ ಸೋಲು ಬಯಸಬೇಕು.
  • ವೆಸ್ಟ್ ಇಂಡೀಸ್ ತಂಡ ಸೌತ್ ಆಫ್ರಿಕಾ ವಿರುದ್ಧ ಸೋತರೆ ಭಾರತಕ್ಕೆ ಸಹಾಯಕ.
  • ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ವಿರುದ್ಧ ಗೆಲ್ಲಬೇಕು.

ಇದರಿಂದ, ಸೌತ್ ಆಫ್ರಿಕಾ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೆ ಟೀಮ್ ಇಂಡಿಯಾದ ಗೆಲುವು 4 ಅಂಕಗಳೊಂದಿಗೆ ಸೆಮಿಫೈನಲ್ ಹಾದಿ ಸುಗಮವಾಗುತ್ತದೆ. ಆದರೆ, ವೆಸ್ಟ್ ಇಂಡೀಸ್ ತಂಡ ಸೌತ್ ಆಫ್ರಿಕಾ ವಿರುದ್ಧ ಗೆದ್ದರೆ, ಭಾರತ ತಂಡವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಬೇಕಾಗುತ್ತದೆ, ಏಕೆಂದರೆ ಆ ಸಮಯದಲ್ಲಿ ಸೌತ್ ಆಫ್ರಿಕಾ 6 ಅಂಕೆಗಳೊಂದಿಗೆ ಸೆಮಿಫೈನಲ್ ಪ್ರವೇಶ ಪಡೆಯಲಿದೆ.

ಹೀಗಾಗಿ, ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ತೀವ್ರವಾಗಿ ನಿರ್ಣಾಯಕವಾಗಿದೆ. ಭಾರತ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವುದರ ಜೊತೆಗೆ ಎದುರಾಳಿ ತಂಡಗಳ ಫಲಿತಾಂಶಗಳ ಮೇಲೆ ಕೂಡ ಅವಲಂಬಿತವಾಗಿದೆ. ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯಗಳು ಭಾರತೀಯ ಅಭಿಮಾನಿಗಳಿಗೆ ಕಣ್ಣಿನ ಮುಂಭಾಗದಲ್ಲಿ ನಡೆಯುವ ಅತಿ ಮುಖ್ಯ ಘಟನೆಗಳಾಗಿವೆ.

ಕೊಪ್ಪಳ ವಸತಿ ಶಾಲೆಯಲ್ಲಿ ಅಪ್ರಾಪ್ತೆ ಗರ್ಭಿಣಿ: ಮದುವೆಯ ಆಮಿಷ, ಪೋಕ್ಸೋ ಅಡಿ ಪ್ರಕರಣ

0

ಕೊಪ್ಪಳ: ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯು ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿರುವುದು ಬಹಿರಂಗವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಆರೋಪಿಯು ಮದುವೆಯ ಆಮಿಷವೊಡ್ಡಿ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆಂದು ತಿಳಿಸಲಾಗಿದೆ. ಫೆಬ್ರವರಿ 19ರಂದು ಬಾಲಕಿಗೆ ರಕ್ತಸ್ರಾವವಾಗಿದ್ದ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆ ಬಹಿರಂಗವಾದ ಬಳಿಕ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯವನ್ನು ಮುಚ್ಚಿಡಲು ಯತ್ನಿಸಿದ್ದರೆಂಬ ಆರೋಪದ ಹಿನ್ನೆಲೆ ವಸತಿಶಾಲೆಯ ಪ್ರಾಂಶುಪಾಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಪ್ರಾಂಶುಪಾಲರ ಅಮಾನತಿಗೆ ಒತ್ತಾಯಿಸಿ ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ. ವಸತಿಶಾಲೆಗಳ ಮೇಲ್ವಿಚಾರಣೆ ಹಾಗೂ ಅಪ್ರಾಪ್ತೆಯರ ಸುರಕ್ಷತೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಸಾರ್ವಜನಿಕ ಒತ್ತಾಯವೂ ಕೇಳಿಬರುತ್ತಿದೆ.

ಗಮನಾರ್ಹವಾಗಿ, ಕಳೆದ ನವೆಂಬರ್‌ನಲ್ಲಿ ಕೂಡ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿನಿಲಯದಲ್ಲಿ ಅಪ್ರಾಪ್ತ ಬಾಲಕಿಗೆ ಹೆರಿಗೆಯಾದ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅದನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿತ್ತು. ಇದೀಗ ಮತ್ತೆ ಅಂಥದ್ದೇ ಘಟನೆ ಮರುಕಳಿಸಿರುವುದು ಆತಂಕ ಮೂಡಿಸಿದೆ.

ಗುಂಡ್ಲುಪೇಟೆ: ಮದುವೆ ಮಂಟಪದಲ್ಲಿ ಫೋಟೋಗ್ರಾಫರ್ ಹೃದಯಾಘಾತದಿಂದ ನಿಧನ!

0

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ದುರಂತ ಸಂಭವಿಸಿದೆ.

ಮದುವೆ ಮಂಟಪದಲ್ಲಿ ಆರತಕ್ಷತೆ ಫೋಟೋಗಳನ್ನು ತೆಗೆಯುತ್ತಿದ್ದ ಯುವ ಫೋಟೋಗ್ರಾಫರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೊಮ್ಮನಹಳ್ಳಿ ಗ್ರಾಮದ ಮೂರ್ತಿ ಎಂಬ ಫೋಟೋಗ್ರಾಫರ್, ಕಾರ್ಯನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳವು ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ಘಟನೆ ಕುರಿತು ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫೋಟೋಗ್ರಾಫರ್ ಸಾವಿನಿಂದ ಮದುವೆ ಮನೆಯಲ್ಲಿ ಶೋಕದ ಛಾಯೆ ಆವರಿಸಿದೆ.

ಗೆಳೆಯನ ಮುಂದೆಯೇ ಮಹಿಳೆ ಮೇಲೆ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರ: ಇಬ್ಬರ ಬಂಧನ

0

ಗುವಾಹಟಿ: ಅಸ್ಸಾಂ ರಾಜ್ಯದ ಸಿಲ್ಚಾರ್ ಪಟ್ಟಣದಲ್ಲಿ 28 ವರ್ಷದ ಮಹಿಳೆಯೊಬ್ಬರ ಮೇಲೆ 7 ಮಂದಿ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಫೆಬ್ರವರಿ 19ರಂದು ಘಟನೆ ನಡೆದಿದ್ದು, ಸಂತ್ರಸ್ತೆ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಮಹಿಳೆ ತನ್ನ ಗೆಳೆಯನೊಂದಿಗೆ ಬೈಪಾಸ್ ರಸ್ತೆಯಲ್ಲಿ ಡಿನ್ನರ್‌ಗೆ ತೆರಳಿದ್ದಾಗ, ಮಹೀಂದ್ರಾ ಥಾರ್ ವಾಹನದಲ್ಲಿ ಬಂದ ಗುಂಪೊಂದು ಕಾರು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಬಳಿಕ ಇಬ್ಬರನ್ನೂ ಕಾರಿನಿಂದ ಎಳೆದಾಡಿ ಮಹಿಳೆಯ ಮೇಲೆ ಗೆಳೆಯನ ಮುಂದೆಯೇ ಕ್ರಮವಾಗಿ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತೆಯ ದೂರಿನ ಪ್ರಕಾರ, ಆರೋಪಿಗಳು ತಮ್ಮ ಖಾತೆಗೆ ₹10,000 ಹಣ ವರ್ಗಾಯಿಸಿಕೊಳ್ಳುವಂತೆ ಒತ್ತಾಯಿಸಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ಸಿಲ್ಚಾರ್ ಸದರ್ ಪೊಲೀಸ್ ಠಾಣೆನಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. 7 ಮಂದಿಯಲ್ಲಿ ಇಬ್ಬರನ್ನು ಸಂತ್ರಸ್ತೆ ಗುರುತಿಸಿದ್ದು, ಅವರು ನೀಲೋತ್ಪಾಲ್ ದಾಸ್ (25) ಮತ್ತು ಸುಬೋಲ್ ದಾಸ್ (27) ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಆಡಳಿತದ ವಿರುದ್ಧ ಟೀಕೆ ವ್ಯಕ್ತಪಡಿಸಿವೆ. ತನಿಖೆ ಮುಂದುವರಿದಿದೆ.

ಹಾಸನ ಹಿಮ್ಸ್‌ನಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಆಕ್ರೋಶ

0

ಹಾಸನ: ಹೆರಿಗೆ ಬಳಿಕ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ (30) ಎಂಬ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯ ಹಠಾತ್ ಬಿಗಡಾಯಿಸಿ ಮೃತಪಟ್ಟಿದ್ದಾರೆ.

ಶನಿವಾರ ಮಧ್ಯರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಶೃತಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದಿದ್ದರು. ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಹೆರಿಗೆ ಯಶಸ್ವಿಯಾಗಿ ನಡೆದಿತ್ತು. ಆದರೆ ನಂತರ ಶೃತಿ ಕೋಮಾಗೆ ಜಾರಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ವೈದ್ಯರು ತಿಳಿಸಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಪತಿ ಪುನೀತ್ ಅವರು ತಕ್ಷಣ ಕರೆದೊಯ್ದರೂ, ಮಾರ್ಗ ಮಧ್ಯೆ ಶೃತಿ ಕೊನೆಯುಸಿರೆಳೆದಿದ್ದಾರೆ.

ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಶೃತಿಗೆ ಈಗಾಗಲೇ ಐದು ವರ್ಷದ ಗಂಡು ಮಗು ಇದೆ. ಹೆಣ್ಣು ಮಗು ಜನಿಸಿದ್ದ ಸಂತಸ ಕ್ಷಣದಲ್ಲೇ ದುಃಖವಾಗಿ ಬದಲಾಗಿದೆ. ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿ, “ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ, ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ” ಎಂದು ಆರೋಪಿಸಿದ್ದಾರೆ. ವೈದ್ಯರಾದ ಸುಮಾ ಹೆರಿಗೆ ಮಾಡಿಸಿ, ದಿಢೀರ್ ರಕ್ತ ಬೇಕೆಂದು ತಿಳಿಸಿದರು. ಎಲ್ಲ ವ್ಯವಸ್ಥೆ ಮಾಡಿದರೂ ತಡವಾಗಿ ಕ್ರಮ ಕೈಗೊಂಡರು ಎಂದು ಪತಿ ದೂರಿದ್ದಾರೆ.

ಆದರೆ ಆಸ್ಪತ್ರೆ ಆಡಳಿತ ಮಂಡಳಿ ಆರೋಪವನ್ನು ತಳ್ಳಿಹಾಕಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹಿಮ್ಸ್ ಶಸ್ತ್ರ ಚಿಕಿತ್ಸಕರು, “ರಾತ್ರಿ ವೇಳೆ ಬಂದರೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಯಾವುದೇ ನಿರ್ಲಕ್ಷ್ಯ ನಡೆದಿಲ್ಲ. ಮಹಿಳೆಗೆ ಹಠಾತ್ ಹೃದಯ ಸ್ಥಂಭನ ಉಂಟಾಗಿ ಕೋಮಾಗೆ ಜಾರಿದ್ದಾರೆ. ಮಗು ನಮ್ಮ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ, ಕರುಳ ಬಳ್ಳಿಯನ್ನು ಕಣ್ತುಂಬಿಕೊಳ್ಳುವ ಮೊದಲೇ ತಾಯಿ ಸಾವನ್ನಪ್ಪಿರುವುದು ಕುಟುಂಬಕ್ಕೂ, ಗ್ರಾಮಕ್ಕೂ ದುಃಖದ ಸಂಗತಿಯಾಗಿದೆ.

ಕೌಟುಂಬಿಕ ಸಂಕಷ್ಟದ ಬೆನ್ನಲ್ಲೇ ಯುವಕ ನೇಣಿಗೆ ಶರಣು: ಮಗನ ಸಾವಿನ ಸುದ್ದಿ ಕೇಳಿ ತಾಯಿ ಆತ್ಮಹತ್ಯೆ ಯತ್ನ

0

ಹಾರೋಹಳ್ಳಿ: ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಸಮೀಪದ ಮರಿಗೌಡನದೊಡ್ಡಿ ಗ್ರಾಮದಲ್ಲಿ ಕೌಟುಂಬಿಕ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆಯಿಂದ ನೊಂದು ಯುವಕನೊಬ್ಬ ನೇಣಿಗೆ ಶರಣಾಗಿರುವ ದುಃಖದ ಘಟನೆ ನಡೆದಿದೆ.

ಗ್ರಾಮದ ನಿವಾಸಿ ವಿಶಾಲ್ (25) ಜಕ್ಕಸಂದ್ರ ಗ್ರಾಮದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದ ಬಳಿಕ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದಕ್ಕೆ ಜೊತೆಗೆ ಕೌಟುಂಬಿಕ ಸಮಸ್ಯೆಗಳೂ ಅವರನ್ನು ಕಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ತಾಯಿ ಗೌರಮ್ಮ ತೀವ್ರ ಆಘಾತಕ್ಕೆ ಒಳಗಾಗಿ, ತಾವೂ ಜೀವನ ಅಂತ್ಯಗೊಳಿಸಲು ಯತ್ನಿಸಿದ್ದಾರೆ. ಸ್ಥಳೀಯರು ತಕ್ಷಣ ಗಮನಿಸಿ ಅವರನ್ನು ರಕ್ಷಿಸಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುಟುಂಬಕ್ಕೆ ದುಃಖ ಹೊಸತಲ್ಲ. ಸುಮಾರು ನಾಲ್ಕು ವರ್ಷಗಳ ಹಿಂದೆ ವಿಶಾಲ್ ಅವರ ತಂದೆಯೂ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ. ಈಗ ಮಗನೂ ತಂದೆಯ ಹಾದಿಯನ್ನೇ ಹಿಡಿದಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.

ಘಟನೆಗೆ ಸಂಬಂಧಿಸಿದಂತೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರೇಬಿಸ್ ಭಯಕ್ಕೆ ಯುವಕ ಬಲಿ? ಕಲ್ಯಾಣ್‌ನಲ್ಲಿ ಬ್ಯಾಂಕ್ ನೌಕರ ಆತ್ಮಹತ್ಯೆ

0

ಕಲ್ಯಾಣ್: ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ನಾಯಿ ಕಚ್ಚಿದ ಬಳಿಕ ರೇಬಿಸ್ ಭೀತಿ ಮನಸ್ಸಿಗೆ ಹೊತ್ತುಕೊಂಡ ಬ್ಯಾಂಕ್ ನೌಕರನೊಬ್ಬ ಆತ್ಮಹತ್ಯೆಗೆ ಶರಣಾದ ದುಃಖದ ಘಟನೆ ನಡೆದಿದೆ. ಮೃತರನ್ನು 30 ವರ್ಷದ ಆಯುಷ್ ವಿಶ್ವನಾಥ್ ಅಮೀನ್ ಎಂದು ಗುರುತಿಸಲಾಗಿದೆ.

ಕಲ್ಯಾಣ್ ಪೂರ್ವದ ಟಿಸ್ಗಾಂವ್ ನಾಕಾ ಪ್ರದೇಶದ ಸಹಜೀವನ್ ಸೊಸೈಟಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಅಮೀನ್, ಕಳೆದ ಎಂಟು ವರ್ಷಗಳಿಂದ ಭಾರತ್ ಬ್ಯಾಂಕ್ ಥಾಣೆ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಬೀದಿ ನಾಯಿ ಅವರ ಕಾಲಿಗೆ ಕಚ್ಚಿತ್ತು. ಘಟನೆಯ ಬಳಿಕ ಅವರು ಕೇವಲ ಒಂದು ರೇಬಿಸ್ ನಿರೋಧಕ ಇಂಜೆಕ್ಷನ್ ಮಾತ್ರ ಪಡೆದಿದ್ದರು.

ಕಳೆದ ನಾಲ್ಕು ದಿನಗಳಿಂದ ಅವರ ನಡವಳಿಕೆಯಲ್ಲಿ ಅಸಾಮಾನ್ಯ ಬದಲಾವಣೆ ಕಂಡುಬಂದಿದ್ದವು ಎಂದು ಕುಟುಂಬದವರು ತಿಳಿಸಿದ್ದಾರೆ. ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳದಿಂದ ಆತ್ಮಹತ್ಯಾ ಪತ್ರ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ರೇಬಿಸ್ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ಆತಂಕವನ್ನು ಉಲ್ಲೇಖಿಸಿದ್ದಾರೆ.

ಈ ಕುರಿತು ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಎಡಿಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗುರವ್ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ರೇಬಿಸ್ ಬಗ್ಗೆ ತಿಳಿದುಕೊಳ್ಳಿ

ರೇಬಿಸ್ ಸೋಂಕು ಮಾರಕವಾದರೂ, ಸಮಯಕ್ಕೆ ಸರಿಯಾಗಿ ಪಿಇಪಿ (ಪೋಸ್ಟ್ ಎಕ್ಸ್‌ಪೋಜರ್ ಪ್ರೊಫೈಲಾಕ್ಸಿಸ್) ಲಸಿಕೆ ಪಡೆದರೆ ಸಂಪೂರ್ಣವಾಗಿ ತಡೆಯಬಹುದು. ಸೋಂಕಿನ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳಲು ಸಾಮಾನ್ಯವಾಗಿ 1ರಿಂದ 3 ತಿಂಗಳುಗಳವರೆಗೆ ಸಮಯ ಹಿಡಿಯಬಹುದು. ಒಮ್ಮೆ ಲಕ್ಷಣಗಳು ಆರಂಭವಾದರೆ, ರೋಗವು ಮೆದುಳು ಮತ್ತು ಬೆನ್ನುಹುರಿಯನ್ನು ಹಾನಿಗೊಳಿಸುತ್ತದೆ.

ಪ್ರಾರಂಭಿಕ ಲಕ್ಷಣಗಳಲ್ಲಿ: ಕಚ್ಚಿದ ಸ್ಥಳದಲ್ಲಿ ತುರಿಕೆ, ಸುಡುವಿಕೆ ಅಥವಾ ಮರಗಟ್ಟುವಿಕೆ, ಸೌಮ್ಯ ಜ್ವರ, ತಲೆನೋವು, ಹಸಿವು ಕಡಿಮೆ, ಗಂಟಲು ನೋವು, ಆಯಾಸ, ಸ್ನಾಯು ನೋವು

ವೈದ್ಯರ ಸಲಹೆ ಮತ್ತು ಪೂರ್ಣ ಲಸಿಕೆ ಚಿಕಿತ್ಸೆಯೇ ರೇಬಿಸ್ ವಿರುದ್ಧದ ಸುರಕ್ಷಿತ ಮಾರ್ಗ. ಮಾನಸಿಕ ಭಯವು ಕೆಲವೊಮ್ಮೆ ರೋಗಕ್ಕಿಂತ ಅಪಾಯಕಾರಿಯಾಗಬಹುದು.

ಹೊಸ ದ್ರಾವಿಡ ಪಕ್ಷ ಘೋಷಿಸಿದ ಶಶಿಕಲಾ! ಎಐಎಡಿಎಂಕೆ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ

0

ಚೆನ್ನೈ: ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ಮಂಗಳವಾರ ಹೊಸ ದ್ರಾವಿಡ ಪಕ್ಷವನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಇದೇ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಈ ಘೋಷಣೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 78ನೇ ಜನ್ಮ ದಿನಾಚರಣೆಯಂದು ಶಶಿಕಲಾ ಹೊಸ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು. ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಸಂಯೋಜನೆಯ ಈ ಧ್ವಜದಲ್ಲಿ ಸಿ ಎನ್ ಅಣ್ಣಾದೊರೈ, ಎಂ ಜಿ ರಾಮಚಂದ್ರನ್ ಮತ್ತು ಜಯಲಲಿತಾ ಅವರ ಚಿತ್ರಗಳಿವೆ.

ಪಕ್ಷದ ಹೆಸರು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದ ಶಶಿಕಲಾ, ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. “ನನಗೆ ದ್ರೋಹ ಮಾಡಲಾಗಿದೆ. ಅವರ ನಾಯಕತ್ವದಲ್ಲಿ ಪಕ್ಷ ಅವನತಿ ಕಂಡಿದೆ” ಎಂದು ಆರೋಪಿಸಿದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಬಳಿಕ ಪಕ್ಷದಿಂದ ಹೊರಹಾಕಲ್ಪಟ್ಟಿದ್ದ ಶಶಿಕಲಾ, “ನಾನು ಕಳೆದ 9 ವರ್ಷ ಮೌನವಾಗಿದ್ದರೆ ಅದು ತಮಿಳುನಾಡಿನ ಜನರಿಗೆ ದ್ರೋಹವಾಗುತ್ತಿತ್ತು. ಕಾರ್ಯಕರ್ತರು ಮತ್ತು ಜನರಿಗಾಗಿ ಹೊಸ ಪಯಣ ಆರಂಭಿಸುತ್ತಿದ್ದೇವೆ” ಎಂದು ಹೇಳಿದರು.

2026ರ ಮೊದಲಾರ್ಧದಲ್ಲಿ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿವೆ. ಜೈಲು ಅವಧಿಯಲ್ಲಿ ಪೆರೋಲ್ ಕಡಿತ ಮಾಡಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. “ನಾನು ಮುಖ್ಯಮಂತ್ರಿಯನ್ನಾಗಿ ಮಾಡಿದ ವ್ಯಕ್ತಿಯೇ ನನ್ನ ಬೆನ್ನಿಗೆ ಇರಿದಿದ್ದ” ಎಂದು ಕಿಡಿಕಾರಿದರು.

ವಾರದೊಳಗೆ ಸಿಎಂ ವಿಚಾರದ ಗೊಂದಲ ಸರಿಪಡಿಸದಿದ್ದರೆ ನಾವೇ ಹೈಕಮಾಂಡ್ ಭೇಟಿ ಮಾಡುತ್ತೇವೆ: ಕೆ.ಎಂ. ಉದಯ್

0

ಮಂಡ್ಯ: ವಾರದೊಳಗೆ ಮುಖ್ಯಮಂತ್ರಿ ಬದಲಾವಣೆಯ ನಿರ್ಧಾರ ತೆಗೆದುಕೊಳ್ಳುವಂತೆ ಹೈಕಮಾಂಡ್‌ಗೆ ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ. ಉದಯ್ ಗಡುವು ನೀಡಿದರು.

ಮದ್ದೂರಿನಲ್ಲಿ ಮಾತನಾಡಿ, “ಸಿಎಂ ಕುರಿತು ಗೊಂದಲವನ್ನು ಸರಿಪಡಿಸದಿದ್ದರೆ ನಾವು ಸ್ವತಃ ಹೈಕಮಾಂಡ್ ಭೇಟಿ ಮಾಡುತ್ತೇವೆ. ನಂತರ ಅವರ ತೀರ್ಮಾನ ಯಾವುದು ಆಗಲಿ, ನಾವು ಅದಕ್ಕೆ ಬದಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಅವರು ಸಂಘಟನೆಯೊಳಗಿನ ಹೊಸ ಶಾಸಕರ ಸೇರ್ಪಡೆ ಹಾಗೂ ಸಂಪುಟ ಬದಲಾವಣೆ ಕುರಿತು ಹೈಕಮಾಂಡ್ ದಿನಾಂಕ ತಿಳಿಸುತ್ತದೆ. ನಾವು ಅದನ್ನು ನೀಡುವುದಿಲ್ಲ ಎಂದು ಸೂಚಿಸಿದರು.

ಹೈಕಮಾಂಡ್ ಸಿಎಂ ಬದಲಾವಣೆ ಮತ್ತು ಸಂಪುಟ ಪುನರ್‌ರಚನೆ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು. ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ನೀಡುವ ವಿಚಾರದಲ್ಲಿ ವಿರೋಧವಿಲ್ಲ, ಆದರೆ ಸಮರ್ಥ ನಾಯಕನನ್ನೇ ಆಯ್ಕೆ ಮಾಡಬೇಕು ಎಂದು ಹೇಳಿದರು.

`ಮಿಷನ್ ಪ್ರಕೃತಿ’ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿದ ಜೋಡಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಭೂಮಿಯ ನೈಸರ್ಗಿಕ ಅವನತಿಯನ್ನು ನಿಲ್ಲಿಸುವುದು ಮತ್ತು ಮಾನವರು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಭವಿಷ್ಯವನ್ನು ನಿರ್ಮಿಸುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಮತ್ತು ವರ್ಲ್ಡವೈಲ್ಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್-ಇಂಡಿಯಾ) ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದ 5 ಸಾವಿರ ಸರ್ಕಾರಿ ಶಾಲೆಗಳಲ್ಲಿ 2025-26ನೇ ಸಾಲಿನಲ್ಲಿ ಮಿಷನ್ ಪ್ರಕೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಆಯೋಜಿಸಲಾಗಿತ್ತು.

ಮಿಷನ್ ಪ್ರಕೃತಿ ಕಾರ್ಯಕ್ರಮವು ಶಿಕ್ಷಕರ ಸಹಕಾರದೊಂದಿಗೆ ವಿದ್ಯಾರ್ಥಿಗಳೇ ನಡೆಸುವ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಶಾಲೆ, ಮನೆ ಮತ್ತು ಸಮುದಾಯಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜವಾಬ್ದಾರಿಯುತ ಅಭ್ಯಾಸಗಳನ್ನು ಪ್ರಾಯೋಗಿಕವಾಗಿ ಮಾಡಿ ತಿಳಿದುಕೊಂಡು ಅನುಷ್ಠಾನ ಮಾಡುವುದಾಗಿದೆ. ಈ ಕಾರ್ಯಕ್ರಮವು ಐದು ಪ್ರಮುಖ ಕ್ಷೇತ್ರಗಳಾದ ಜೀವ ವೈವಿಧ್ಯ, ನೀರು, ತ್ಯಾಜ್ಯ, ಆಹಾರ ಮತ್ತು ಶಕ್ತಿ ಎಂಬ ವಿಷಯಗಳ ಅಡಿಯಲ್ಲಿ ಮಕ್ಕಳು ಪ್ರಾಯೋಗಿಕವಾಗಿ ಶಾಲೆ ಹಾಗೂ ಸಮುದಾಯದ ಆಡಿಟ್ ಕೈಗೊಂಡು ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಗುರುತಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುವುದು ಮತ್ತು ಪರಿಹಾರೋಪಾಯಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಸಂರಕ್ಷಣೆ ಕುರಿತು ಜವಾಬ್ದಾರಿ ಮೂಡಿಸುವುದಾಗಿದೆ.

ಮಕ್ಕಳು ಕೈಗೊಂಡ ಎಲ್ಲಾ ಕಾರ್ಯಗಳ ಮಾಹಿತಿಯನ್ನು ಸ್ಯಾಟ್ಸ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಪ್ಲೋಡ್ ಮಾಡಲಾದ ಎಲ್ಲಾ ಶಾಲೆಗಳ ಮಾಹಿತಿಯನ್ನು ಮೌಲ್ಯಮಾಪನ ಕೈಗೊಂಡ ನಂತರ 5 ಸಾವಿರ ಶಾಲೆಗಳ ಪೈಕಿ 10 ಉತ್ತಮ ಕಾರ್ಯ ನಿರ್ವಹಣೆ ಮಾಡಿದ ಶಾಲೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಯಿತು. ಈ ಪೈಕಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಡಳ್ಳಿ ಕೂಡ ಪ್ರಶಸ್ತಿ ಪಡೆದುಕೊಂಡಿದ್ದು, ಬೆಂಗಳೂರಿನ ವಿಕಾಸ ಸೌಧದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.

ಡಯಟ್‌ನ ಪ್ರಾಚಾರ್ಯ ಬಸವರಾಜ ನಾಲತವಾಡ, ಮಿಷನ್ ಪ್ರಕೃತಿ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಡಯಟ್‌ನ ಉಪನ್ಯಾಸಕರಾದ ಪ್ರಕಾಶ ಅಂಗಡಿ, ಡಯಟ್‌ನ ಎಲ್ಲಾ ಹಿರಿಯ ಉಪನ್ಯಾಸಕರು, ಕಲಘಟಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ ದೇವಿ ಸಜ್ಜನ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪಾಂಡುರಂಗ ಪೂಜೇರಿ, ದುಮ್ಮವಾಡ ಕ್ಲಸ್ಟರ್ ಸಿಆರ್‌ಪಿ ಪ್ರಶಾಂತ್ ರೆಡ್ಡೇರ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸರ್ವ ಸದಸ್ಯರು, ದುಮ್ಮವಾಡ ಗ್ರಾಮದ ಸಮಸ್ತ ನಾಗರಿಕರು, ಹಿರಿಯರು ಮಿಷನ್ ಪ್ರಕೃತಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಪ್ರಶಸ್ತಿಯನ್ನು ಶಾಲೆಯ ಹಸಿರುಪಡೆಯ ಮಕ್ಕಳು, ಶಾಲಾ ನೋಡಲ್ ಶಿಕ್ಷಕಿಯರಾದ ಪ್ರತಿಭಾ ದೊಡ್ಡಮನಿ, ಮುಖ್ಯೋಪಾಧ್ಯಾಯ ಎಮ್.ಎ. ಸುಂಕದ, ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು, ಮಿಷನ್ ಪ್ರಕೃತಿ ಕಾರ್ಯಕ್ರಮದ ತಾಲೂಕಾ ನೋಡಲ್ ಅಧಿಕಾರಿ ಸುಜಾತ ಚವ್ಹಾಣ ಸ್ವೀಕರಿಸಿದರು. ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು, ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಗುಣಮಟ್ಟ ಹಾಗೂ ಡಬ್ಲ್ಯುಡಬ್ಲ್ಯುಎಫ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!