Home Blog Page 19

ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ! ಕೊಟ್ಟ ಮಾತು ತಪ್ಪಿದ್ರಾ ಡಿಕೆ ಶಿವಕುಮಾರ್!?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ.

ನೂತನ ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಘೋಷಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಕಾರಣ ಅಸಮಾಧಾನಗೊಂಡಿರುವ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಇಂದು ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಕೋರಮಂಗಲದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ, ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ.

ನನಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ವೈಯಕ್ತಿಕ ಅಸಮಾಧಾನವಿಲ್ಲ. ಆದರೆ ಹಿಂದೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ ಎಂಬುದು ನೋವಾಗಿದೆ. ನಾನು 53 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ವೀರಪ್ಪ ಮೊಯ್ಲಿ ಹಾಗೂ ಸಿದ್ದರಾಮಯ್ಯ ಅವರ ಸಂಪುಟಗಳಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ. “ಡಿಕೆ ಶಿವಕುಮಾರ್ ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿಯಾದಾಗ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಹೇಳಿದ್ದರು. ಆದರೆ ಅದು ನೆರವೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅವರು ತಮ್ಮ ರಾಜೀನಾಮೆ ಕಾಂಗ್ರೆಸ್ ಪಕ್ಷಕ್ಕಲ್ಲ, ಕೇವಲ ಸಚಿವ ಸ್ಥಾನಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಸರ್ಕಾರದಲ್ಲಿ ಅಸಮಾಧಾನದ ವಾತಾವರಣ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.

ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಲಿಸ್ಟ್‌

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದ್ದು, ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದ 13 ಸಚಿವರಿಗೆ ಗುರುವಾರ ಇಲಾಖೆಗಳನ್ನು ವಿತರಿಸಲಾಗಿದೆ.

ಹಣಕಾಸು, ಗೃಹ, ಕಂದಾಯ, ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳ ಹಂಚಿಕೆಗೆ ಸಂಬಂಧಿಸಿದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಸಿಎಂ ಡಿಕೆ ಶಿವಕುಮಾರ್ ಅವರು ಹಣಕಾಸು ಇಲಾಖೆಯ ಜೊತೆಗೆ ಗುಪ್ತಚರ, ಸಹಕಾರ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗಳನ್ನೂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಕಂದಾಯ ಹಾಗೂ ಯುವ ಸಬಲೀಕರಣ ಇಲಾಖೆ ಹಂಚಿಕೆಯಾಗಿದೆ.

ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಹಾಗೂ ಐಟಿಬಿಟಿ ಇಲಾಖೆ ನೀಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಕೃಷ್ಣ ಬೈರೇಗೌಡರಿಗೆ ಒಲಿದಿದೆ.

ಸತೀಶ್ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಇಲಾಖೆ ನೀಡಲಾಗಿದ್ದು, ಕೆ.ಜೆ. ಜಾರ್ಜ್ ಅವರಿಗೆ ಇಂಧನ ಹಾಗೂ ಪ್ರವಾಸೋದ್ಯಮ ಇಲಾಖೆ ಹಂಚಿಕೆಯಾಗಿದೆ.

ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡಲಾಗಿದೆ.

ಬೈರತಿ ಸುರೇಶ್ ಅವರಿಗೆ ಸಾರಿಗೆ ಇಲಾಖೆ, ಯು.ಟಿ. ಖಾದರ್ ಅವರಿಗೆ ಆರೋಗ್ಯ ಇಲಾಖೆ, ಎಂ.ಬಿ. ಪಾಟೀಲ್ ಅವರಿಗೆ ಬೃಹತ್ ಕೈಗಾರಿಕೆ ಇಲಾಖೆ ನೀಡಲಾಗಿದೆ.

ರಾಮಲಿಂಗಾ ರೆಡ್ಡಿಗೆ ಜಲಸಂಪನ್ಮೂಲ ಇಲಾಖೆ ಹಂಚಿಕೆಯಾಗಿದೆ. ಈಶ್ವರ್ ಖಂಡ್ರೆ ಅವರಿಗೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಲಾಗಿದೆ.

ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ, ಕೆ.ಎಚ್. ಮುನಿಯಪ್ಪ ಅವರಿಗೆ ಆಹಾರ ಇಲಾಖೆ ಹಂಚಿಕೆಯಾಗಿದೆ.

ಈ ಮೂಲಕ ರಾಜ್ಯ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆ ಅಂತಿಮಗೊಂಡಿದ್ದು, ರಾಜಕೀಯ ವಲಯದಲ್ಲಿ ಇದಕ್ಕೆ ಸಂಬಂಧಿಸಿದ ಚರ್ಚೆಗಳು ಮುಂದುವರಿದಿವೆ.

ಅವೈಜ್ಞಾನಿಕ ಕಾಮಗಾರಿ: ರಸ್ತೆ ಗುಂಡಿಗೆ ಬಿದ್ದು ನರ್ಸ್ ದುರ್ಮರಣ, ಪತಿ ಗಂಭೀರ!

ಬಳ್ಳಾರಿ: ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನಡೆದ ಅವೈಜ್ಞಾನಿಕ ರಸ್ತೆ ಕಾಮಗಾರಿಯ ದುರ್ಘಟನೆಗೆ ಮತ್ತೊಂದು ಅಮಾಯಕ ಜೀವ ಬಲಿಯಾಗಿರುವ ಘಟನೆ ಚಾಣಕನೂರು ಕ್ರಾಸ್ ಬಳಿ ನಡೆದಿದೆ.

ರಾವಿಹಾಳ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳ (36) ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತಿ ಚಂದ್ರಶೇಖರ್ (46) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಜುಳ ಹಾಗೂ ಚಂದ್ರಶೇಖರ್ ಅವರು ರಾತ್ರಿ ಕರ್ತವ್ಯ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ, ರಾಜ್ಯ ಹೆದ್ದಾರಿ 63ರ ಚಾಣಕನೂರು ಕ್ರಾಸ್ ಬಳಿ ರಸ್ತೆ ಕಾಮಗಾರಿಗಾಗಿ ತೆರೆದಿದ್ದ ಗುಂಡಿಗೆ ಬೈಕ್ ಬಿದ್ದಿದೆ. ಯಾವುದೇ ಮುನ್ನೆಚ್ಚರಿಕೆ ಫಲಕ ಅಥವಾ ಬ್ಯಾರಿಕೇಡ್ ಹಾಕದೆ ಗುಂಡಿಯನ್ನು ಹಾಗೇ ಬಿಟ್ಟಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ರಾತ್ರಿಯ ಕತ್ತಲಲ್ಲಿ ಗುಂಡಿ ಕಾಣಿಸದ ಕಾರಣ ಬೈಕ್ ನೇರವಾಗಿ ಅದರಲ್ಲಿ ಬಿದ್ದು ದುರ್ಘಟನೆ ನಡೆದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮಂಜುಳ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೆದ್ದಾರಿ ಕಾಮಗಾರಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಎಕ್ಸ್ ಮೂಲಕ ವಿದೇಶಿ ಉಗ್ರನ ಜೊತೆ ನಂಟು: ತುಮಕೂರು ಯುವಕ ಅರೆಸ್ಟ್!

ತುಮಕೂರು: ವಿದೇಶಿ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇಲೆ ತುಮಕೂರಿನಲ್ಲಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ರಹಸ್ಯ ಮಾಹಿತಿಯ ಆಧಾರದ ಮೇಲೆ ತುಮಕೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ತುಮಕೂರಿನ ಶ್ರೀರಾಮನಗರ ನಿವಾಸಿ ಅಲ್ಲಾಬಕ್ಷು (24) ಎಂದು ಗುರುತಿಸಲಾಗಿದೆ.

ಆರೋಪಿಯು ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ವಿದೇಶಿ ಶಂಕಿತ ಉಗ್ರನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದೇಶದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದ ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದನೆಂದು ಆರೋಪಿಸಲಾಗಿದೆ. ದೇಶ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಚಾಟಿಂಗ್ ಕೂಡ ನಡೆಸುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಕೇಂದ್ರ ಸಂಸ್ಥೆಗಳು ಆತನ ಆನ್‌ಲೈನ್ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಮಾಹಿತಿಯನ್ನು ರಾಜ್ಯ ಪೊಲೀಸರಿಗೆ ಹಂಚಿಕೊಂಡಿದ್ದವು. ಇದರ ಆಧಾರದ ಮೇಲೆ ಗುರುವಾರ ರಾತ್ರಿ ಕ್ಯಾತಸಂದ್ರ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತನ ಬಗ್ಗೆಯೂ ಮಾಹಿತಿ ದೊರೆತಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಕರಣವನ್ನು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಟ್ರಾಫಿಕ್ ಫೈನ್ ಕ್ಲಿಯರ್ ಮಾಡಲು ಮತ್ತೆ ಅವಕಾಶ: 20 ದಿನ ವಿಶೇಷ ರಿಯಾಯಿತಿ ಘೋಷಣೆ!

ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಸರ್ಕಾರದಿಂದ ಮಹತ್ವದ ಸಿಹಿ ಸುದ್ದಿ ದೊರೆತಿದೆ.

ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ದಂಡ ಪಾವತಿಗೆ ರಾಜ್ಯ ಸರ್ಕಾರ ಶೇ.50ರಷ್ಟು ರಿಯಾಯಿತಿ ಘೋಷಿಸಿದ್ದು, ದೀರ್ಘಕಾಲದಿಂದ ಬಾಕಿ ಉಳಿದಿರುವ ಇ-ಚಲನ್ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ಅವಕಾಶ ಕಲ್ಪಿಸಿದೆ.

ಸರ್ಕಾರದ ಅಧಿಕೃತ ಆದೇಶದ ಪ್ರಕಾರ, ಈ ರಿಯಾಯಿತಿ ಯೋಜನೆ ಜೂನ್ 21ರಿಂದ ಜುಲೈ 10ರವರೆಗೆ ಜಾರಿಯಲ್ಲಿರಲಿದೆ. ಈ 20 ದಿನಗಳ ಅವಧಿಯಲ್ಲಿ ವಾಹನ ಸವಾರರು ತಮ್ಮ ಬಾಕಿ ಸಂಚಾರ ದಂಡವನ್ನು ಶೇ.50ರಷ್ಟು ಕಡಿತದೊಂದಿಗೆ ಪಾವತಿಸಬಹುದು ಎಂದು ತಿಳಿಸಲಾಗಿದೆ.

ಈ ಸೌಲಭ್ಯವು ಮೇ 2026ರ ಮೊದಲು ದಾಖಲಾಗಿರುವ ಇ-ಚಲನ್ ಪ್ರಕರಣಗಳು ಹಾಗೂ 1991ರಿಂದ 2021ರವರೆಗೆ ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಅನ್ವಯವಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಒಂದೇ ಹಂತದಲ್ಲಿ ಇತ್ಯರ್ಥಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸಾರಿಗೆ ಇಲಾಖೆ ಪ್ರಕಾರ, ಹಲವು ಪ್ರಕರಣಗಳಲ್ಲಿ ದಂಡ ಮೊತ್ತ ಹೆಚ್ಚಾಗಿ ಪಾವತಿ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಈ ರಿಯಾಯಿತಿ ನೀಡಲಾಗಿದೆ. ಈ ಯೋಜನೆಯಿಂದ ಸಾವಿರಾರು ಪ್ರಕರಣಗಳು ಒಂದೇ ಬಾರಿ ಇತ್ಯರ್ಥವಾಗುವ ನಿರೀಕ್ಷೆಯಿದೆ.

ಹಿಂದೆಯೂ ಸರ್ಕಾರ ಇಂತಹ ರಿಯಾಯಿತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಆಗಲೂ ಲಕ್ಷಾಂತರ ಪ್ರಕರಣಗಳು ಪರಿಹಾರವಾಗಿದ್ದವು. ಈ ಬಾರಿಯೂ ಹೆಚ್ಚಿನ ಸಂಖ್ಯೆಯ ವಾಹನ ಸವಾರರು ಈ ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, ನಿಗದಿತ ಅವಧಿಯೊಳಗೆ ಬಾಕಿ ದಂಡ ಪಾವತಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ನಿಗದಿತ ಅವಧಿ ಮುಗಿದ ಬಳಿಕ ಪೂರ್ಣ ದಂಡ ಮೊತ್ತವೇ ಅನ್ವಯವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಒಟ್ಟಾರೆ, ಸರ್ಕಾರದ ಈ ನಿರ್ಧಾರದಿಂದ ದೀರ್ಘಕಾಲದಿಂದ ಬಾಕಿ ಉಳಿದಿರುವ ಸಂಚಾರ ದಂಡ ಪ್ರಕರಣಗಳಿಗೆ ಪರಿಹಾರ ದೊರಕುವ ನಿರೀಕ್ಷೆ ವ್ಯಕ್ತವಾಗಿದ್ದು, ವಾಹನ ಸವಾರರಿಗೆ ಇದು ದೊಡ್ಡ ರಿಲೀಫ್ ಆಗಿದೆ.

ಮರಗಳೇ ನನ್ನ ಮಠ- ಪರಿಸರಕ್ಕಾಗಿ ಬದುಕನ್ನೇ ಅರ್ಪಿಸಿದ ಗೋಣಿಬಸಪ್ಪ ಕೊರ್ಲಹಳ್ಳಿ

ಜೂನ್ 5ರಂದು ವಿಶ್ವದಾದ್ಯಂತ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಆಧುನೀಕರಣ, ಜಾಗತೀಕರಣ ಹಾಗೂ ಔದ್ಯೋಗೀಕರಣದ ಭರಾಟೆಯಲ್ಲಿ ಅರಣ್ಯ ನಾಶ, ಪರಿಸರ ಹಾನಿ ಮತ್ತು ಹವಾಮಾನ ವೈಪರೀತ್ಯ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ತಮ್ಮ ಸಂಪೂರ್ಣ ಜೀವನವನ್ನೇ ಪರಿಸರ ಸಂರಕ್ಷಣೆಗೆ ಅರ್ಪಿಸಿದ ಅಪರೂಪದ ವ್ಯಕ್ತಿತ್ವವಾಗಿ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಹಾಗೂ ಪರಿಸರ ಪ್ರೇಮಿ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಗಮನ ಸೆಳೆಯುತ್ತಾರೆ.

ಪರಿಸರ ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ದಶಕಗಳ ಕಾಲ ಹಸಿರು ಅಭಿಯಾನ ನಡೆಸುತ್ತಿರುವ ಗೋಣಿಬಸಪ್ಪ ಕೊರ್ಲಹಳ್ಳಿ ಅವರು, ಲಿಂ. ಪ.ಪೂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಆಶಯದಂತೆ ಸಾವಿರಾರು ಗಿಡಗಳನ್ನು ನೆಟ್ಟು, ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆ, ಕಾಲೇಜುಗಳಲ್ಲಿ ಉಪನ್ಯಾಸಗಳ ಮೂಲಕ ಪರಿಸರ ಪ್ರಜ್ಞೆ ಬೆಳೆಸುತ್ತಿರುವ ಅವರು, ಗ್ರಾಮೀಣ ಭಾಗದಲ್ಲೇ ಪರಿಸರ ಚಳವಳಿಗೆ ಹೊಸ ದಿಕ್ಕು ನೀಡಿದ್ದಾರೆ.

ಹಲವಾರು ದಶಕಗಳ ಹಿಂದೆ ಡಂಬಳ ಗ್ರಾಮದಲ್ಲಿಯೇ “ತೋಂಟದಾರ್ಯ ಪರಿಸರ ಸಂರಕ್ಷಣಾ ವೇದಿಕೆ” ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಗೋಣಿಬಸಪ್ಪ ಕೊರ್ಲಹಳ್ಳಿ, ಲಿಂ. ಪ.ಪೂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಪರಿಸರ ಸಂರಕ್ಷಣೆಯ ದೊಡ್ಡ ಅಭಿಯಾನ ರೂಪಿಸಿದರು.

ಡಂಬಳ ಬಸ್ ನಿಲ್ದಾಣ, ಆರೋಗ್ಯ ಕೇಂದ್ರ, ಶಾಲೆ-ಕಾಲೇಜು ಮೈದಾನಗಳು ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯ ಬೆಳೆಸುವ ಗುರಿಯೊಂದಿಗೆ ಸಾವಿರಾರು ಗಿಡಗಳನ್ನು ನೆಟ್ಟು, ಗ್ರಾಮಕ್ಕೆ ಹಸಿರು ಹೊನ್ನು ತುಂಬಿದರು. ಪರಿಸರ ಪ್ರೇಮ ಕೇವಲ ಮಾತಿನಲ್ಲಿ ಉಳಿಯದೆ, ತಮ್ಮ ಸ್ವಂತ ಜಮೀನಲ್ಲಿಯೂ ಸಾವಿರಾರು ಸಾಗುವಾನಿ, ಮಾವು, ಪೇರಲ, ನೀರಲೆ ಸೇರಿದಂತೆ ವಿವಿಧ ಮರಗಳನ್ನು ಬೆಳೆಸಿ ಮಾದರಿಯಾಗಿದ್ದಾರೆ.

ಗದಗ ಜಿಲ್ಲೆಯ ಹಳ್ಳಿಗುಡಿ ಗ್ರಾಮದಲ್ಲಿ ನಡೆದ ಪೋಸ್ಕೋ ವಿರೋಧಿ ಪರಿಸರ ಹೋರಾಟದಲ್ಲಿ ಗೋಣಿಬಸಪ್ಪ ಕೊರ್ಲಹಳ್ಳಿ ಅವರು ಎಲೆಮರೆ ಕಾಯಿಯಂತೆ ಸಕ್ರಿಯ ಪಾತ್ರವಹಿಸಿದ್ದನ್ನು ಪರಿಸರ ಹೋರಾಟಗಾರರು ಇಂದು ಸ್ಮರಿಸುತ್ತಾರೆ.

ಈ ಹೋರಾಟದಲ್ಲಿ ಮೇಧಾ ಪಾಟ್ಕರ್, ಲಿಂ. ಪ.ಪೂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ನಂದಿವೇರಿ ಶಿವಕುಮಾರ ಸ್ವಾಮೀಜಿಗಳು, ಹೋರಾಟಗಾರ ವಾಯ್.ಎನ್. ಗೌಡರ ಸೇರಿದಂತೆ ಹಲವಾರು ಪರಿಸರ ಹೋರಾಟಗಾರರು ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. ಪರಿಸರದ ಪರ ನಡೆದ ಆ ಹೋರಾಟದಲ್ಲಿ ಗೋಣಿಬಸಪ್ಪ ಅವರ ಹಸಿರು ಬದ್ಧತೆ ಸ್ಪಷ್ಟವಾಗಿ ವ್ಯಕ್ತವಾಗಿತ್ತು.

ಪರಿಸರ ಜಾಗೃತಿಗಾಗಿ ಡಂಬಳದಲ್ಲಿ ಆರಂಭವಾದ ತೋಂಟದಾರ್ಯ ಪರಿಸರ ಸಂಘಟನೆಯ ಮೂಲಕ ಅನೇಕರು ಹಸಿರು ಚಳವಳಿಗೆ ಕೈಜೋಡಿಸಿದರು. ತೋಂಟದಾರ್ಯ ಮಠದ ವ್ಯವಸ್ಥಾಪಕರಾಗಿರುವ ಹಾಗೂ ಸಂಘಟನೆಯ ಗೌರವಾಧ್ಯಕ್ಷರಾದ ಜಿ.ವಿ. ಹಿರೇಮಠ, ಪತ್ರಕರ್ತ ಸಿ.ಕೆ. ಗಣಪ್ಪನವರ, ಪರಿಸರವಾದಿ ಸಿ.ಎಸ್. ಅರಸನಾಳ, ವಿ.ಎಫ್. ಅಂಗಡಿ, ಮರಿತೆಮ್ಮಪ್ಪ ಆದಮ್ಮನವರ, ಮಂಜುನಾಥ ಸಂಜೀವಣ್ಣನವರ, ಆರ್.ಆರ್. ಕೊರ್ಲಗಟ್ಟಿ, ರಂಗಪ್ಪ ಜೊಂಡಿ, ವೀರಣ್ಣ ನಂಜಪ್ಪನವರ ಸೇರಿದಂತೆ ಹಲವಾರು ಜನರು ಪರಿಸರ ಅಭಿಯಾನದಲ್ಲಿ ಕೈಜೋಡಿಸಿದರು.

ಇದಲ್ಲದೇ ದಿವಂಗತ ಕೊಟ್ರಪ್ಪ ಕೊಟ್ಟೂರಶೆಟ್ಟರ ಹಾಗೂ ಚಂದ್ರಶೇಖಪ್ಪ ಗಡಗಿ ಸೇರಿದಂತೆ ಅನೇಕರು ಸಂಘಟನೆಯ ಮೂಲಕ ಪರಿಸರ ಸೇವೆ ಸಲ್ಲಿಸಿರುವುದನ್ನು ಗೋಣಿಬಸಪ್ಪ ಕೊರ್ಲಹಳ್ಳಿ ಸ್ಮರಿಸುತ್ತಾರೆ.

ಈ ಭಾಗದ ಮಾಜಿ ಶಾಸಕ ಹಾಗೂ ಸಚಿವರಾಗಿದ್ದ ಎಸ್.ಎಸ್. ಪಾಟೀಲರು, ಪ್ರಸ್ತುತ ಶಾಸಕ ಜಿ.ಎಸ್. ಪಾಟೀಲರು ಹಾಗೂ ಹೋರಾಟಗಾರ ವಾಯ್.ಎನ್. ಗೌಡರವರು ಪರಿಸರ ಜಾಗೃತಿಯಲ್ಲಿ ಭಾಗವಹಿಸಿ ಕಪ್ಪತ್ತಗುಡ್ಡ ರಕ್ಷಣೆಗೆ ಬೆಂಬಲ ನೀಡಿದ್ದಾರೆ.

ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಲಾಗಿದೆ. ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಕೆರೆ-ಕಟ್ಟೆಗಳಲ್ಲಿ ನೀರು ತುಂಬಿಸುವ ಕಾರ್ಯ ನಡೆದಿರುವುದು ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಗೋಣಿಬಸಪ್ಪ ಕೊರ್ಲಹಳ್ಳಿ ಅವರು ಶಾಲೆ-ಕಾಲೇಜುಗಳಲ್ಲಿ ಪರಿಸರ ಉಪನ್ಯಾಸಗಳನ್ನು ನೀಡಿ, ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚುವುದು, ಅರಣ್ಯ ನಾಶ ಮಾಡುವುದು ಹಾಗೂ ವನ್ಯಜೀವಿಗಳ ಜೀವಕ್ಕೆ ಅಪಾಯ ತರುವ ಚಟುವಟಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ.

ಪರಿಸರವೇ ಬದುಕು ಎನ್ನುವ ಹಸಿರು ಹೋರಾಟಗಾರ

ಪರಿಸರ ಜಾಗೃತಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟಿರುವ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಅವರು, ದಶಕಗಳ ಕಾಲ ಪರಿಸರ ಸಂಘಟನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಚಲಿತ ಪತ್ರಿಕೆಯ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿರುವ ಅವರು, ಸಾಮಾಜಿಕ ಹೋರಾಟಗಾರ ಹಾಗೂ ಪರಿಸರ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.

ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾಗಿರುವ ಗೋಣಿಬಸಪ್ಪ ಅವರು, ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದು, ಪರಿಸರ ಕಾಳಜಿ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.

ಶ್ರೀಕಾಂತ ಬಡಕಣ್ಣವರ, ಡಂಬಳ

ಜೂ.7ರಂದು ಬಿವಿಜಿ ಚಿಕಿತ್ಸಾ ಕೇಂದ್ರಕ್ಕೆ ಚಾಲನೆ

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಅತಿದೊಡ್ಡ ಸಮಗ್ರ ಸೇವಾ ಹಾಗೂ ಸೌಲಭ್ಯ ನಿರ್ವಹಣಾ ಸಂಸ್ಥೆಗಳಲ್ಲಿ ಒಂದಾದ ಭಾರತ ವಿಕಾಸ್ ಗ್ರೂಪ್ (ಬಿವಿಜಿ) ಇದೀಗ ಗದಗ ಜಿಲ್ಲೆಯಲ್ಲಿ ತನ್ನ ಪ್ರಪ್ರಥಮ ಚಿಕಿತ್ಸಾ ಕೇಂದ್ರ ಆರಂಭಿಸುತ್ತಿದ್ದು, ಜೂನ್ 7ರಂದು ನರಗುಂದ ತಾಲೂಕಿನ ವಾಸನ ಗ್ರಾಮದ ಸ್ವಯಂ ಸಂಜೀವಿನಿ ಆಶ್ರಮದಲ್ಲಿ ಬಿವಿಜಿ ಚಿಕಿತ್ಸಾ ಕೇಂದ್ರ ಲೋಕಾರ್ಪಣೆಗೊಳ್ಳಲಿದೆ ಎಂದು ಬಿವಿಜಿ ಲೈಫ್ ಸೈನ್ಸ್ ಸಂಯೋಜಕ ಸಂಜಯ ಡೋಂಗರೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2002ರಲ್ಲಿ ಸ್ಥಾಪನೆಯಾದ ಬಿವಿಜಿ ಸಂಸ್ಥೆ ಇಂದು ದೇಶದಾದ್ಯಂತ ಉದ್ಯೋಗ ಸೃಷ್ಟಿ, ಗುಣಮಟ್ಟದ ಸೇವೆ, ಆರೋಗ್ಯ, ಕೃಷಿ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರು.

ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹನುಮಂತರಾವ್ ಗಾಯ್ಕವಾಡ ಅವರು ಕೇವಲ 19ನೇ ವಯಸ್ಸಿನಲ್ಲಿ ಗ್ರಾಮೀಣ ಯುವಕರ ಸಬಲೀಕರಣಕ್ಕಾಗಿ “ಭಾರತ ವಿಕಾಸ್ ಪ್ರತಿಷ್ಠಾನ” ಆರಂಭಿಸಿದ್ದರು. 1997ರಲ್ಲಿ ಕೇವಲ 8 ಉದ್ಯೋಗಿಗಳು ಮತ್ತು ಒಂದು ಹೌಸ್‌ಕೀಪಿಂಗ್ ಒಪ್ಪಂದದೊಂದಿಗೆ ಆರಂಭವಾದ ಸಂಸ್ಥೆ ಇಂದು ದೇಶದ 20ಕ್ಕೂ ಹೆಚ್ಚು ರಾಜ್ಯಗಳ 70ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 1 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿದೆ ಎಂದು ಹೇಳಿದರು.

ಬಿವಿಜಿ ಸಂಸ್ಥೆ ಜೀವ ವಿಜ್ಞಾನ ಹಾಗೂ ಆಯುರ್ವೇದ ಕ್ಷೇತ್ರದಲ್ಲೂ ಮಹತ್ವದ ಸಂಶೋಧನೆ ನಡೆಸುತ್ತಿದ್ದು, ಕ್ಯಾನ್ಸರ್, ಲಿವರ್, ಹೃದಯ ರೋಗ, ಸೋರಿಯಾಸಿಸ್ ಸೇರಿದಂತೆ 200ಕ್ಕೂ ಹೆಚ್ಚು ಔಷಧಿಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮೊದಲ ಬಾರಿಗೆ ಪಾರಂಪರಿಕ ವೈದ್ಯ ಹನುಮಂತ ಮಳಲಿ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದ ಸ್ವಯಂ ಸಂಜೀವಿನಿ ಆಶ್ರಮದಲ್ಲಿ ಚಿಕಿತ್ಸಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.

ಜೂನ್ 7ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಕೇರಳದ ದಿವ್ಯಶ್ರೀ ಸಹಸ್ರಾರಯೋಗೀಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ, ಶಾಸಕರಾದ ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ನಿವೃತ್ತ ಡಿಜಿಪಿ ಶಂಕರ ಬಿದರಿ, ಮಾಜಿ ಶಾಸಕ ಬಿ.ಆರ್. ಯಾವಗಲ್, ಬಿವಿಜಿ ಸಂಸ್ಥಾಪಕ ಹನುಮಂತರಾವ್ ಗಾಯ್ಕವಾಡ ಹಾಗೂ ಪಾರಂಪರಿಕ ವೈದ್ಯ ಹನುಮಂತ ಮಳಲಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಾರಂಪರಿಕ ವೈದ್ಯ ಹನುಮಂತ ಮಳಲಿ, ಡಾ. ರವಿಕುಮಾರ ಹಾಗೂ ಡಾ. ವಿದ್ಯಾ ಉಪಸ್ಥಿತರಿದ್ದರು.

ಕೋಟ್

“ಪಾರಂಪರಿಕ ವೈದ್ಯಕೀಯ ಮತ್ತು ಆಧುನಿಕ ಆಯುರ್ವೇದ ಸಂಶೋಧನೆಯನ್ನು ಒಟ್ಟುಗೂಡಿಸುವ ಮಹತ್ವದ ಪ್ರಯತ್ನವೇ ಬಿವಿಜಿ ಚಿಕಿತ್ಸಾ ಕೇಂದ್ರ”

— ಸಂಜಯ ಡೋಂಗರೆ, ಬಿವಿಜಿ ಲೈಫ್ ಸೈನ್ಸ್ ಸಂಯೋಜಕರು

ಜಿ.ಎಸ್. ಪಾಟೀಲರ ಕನಸಿನ ಯೋಜನೆಗೆ ಚಾಲನೆ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ನೂತನ ಸಾರಿಗೆ ಬಸ್ ಸೇವೆಗೆ ಬುಧವಾರ ಅಧಿಕೃತ ಚಾಲನೆ ನೀಡಲಾಗಿದ್ದು, ರೋಣ ವಿಧಾನಸಭಾ ಕ್ಷೇತ್ರದ ಜನರಿಗೆ ಬಹುಕಾಲದ ಕನಸಾಗಿದ್ದ ನೇರ ಸಾರಿಗೆ ಸಂಪರ್ಕ ಇದೀಗ ಸಾಕಾರಗೊಂಡಿದೆ.

ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರ ವಿಶೇಷ ಪ್ರಯತ್ನ ಹಾಗೂ ದೂರದೃಷ್ಟಿಯ ಫಲವಾಗಿ ಆರಂಭಗೊಂಡ ಈ ಬಸ್ ಸೇವೆ, ಗ್ರಾಮೀಣ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ, ವೈದ್ಯಕೀಯ ಹಾಗೂ ವ್ಯಾಪಾರ ಉದ್ದೇಶಗಳಿಗೆ ಬೆಂಗಳೂರಿಗೆ ಸುಲಭವಾಗಿ ಪ್ರಯಾಣಿಸಲು ನೆರವಾಗಲಿದೆ.

ನೂತನ ಬಸ್‌ಗೆ ಪೂಜೆ ಸಲ್ಲಿಸುವ ಮೂಲಕ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಚಾಲನೆ ನೀಡಿ, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಕ್ಷೇತ್ರದ ಜನರಿಗೆ ಈ ಬಸ್ ಸೇವೆ ಬಹಳ ಅನುಕೂಲಕರವಾಗಲಿದೆ. ಇನ್ನು ಮುಂದೆ ಗ್ರಾಮೀಣ ಭಾಗದ ಜನರು ಸುಗಮವಾಗಿ ಬೆಂಗಳೂರಿಗೆ ತೆರಳಬಹುದು ಎಂದು ಹೇಳಿದರು.

ಗಜೇಂದ್ರಗಡದಿಂದ ಹೊರಡುವ ಈ ನೂತನ ಬಸ್ ಮುಧೋಳ, ಕರಮುಡಿ, ತಿಮ್ಮಾಪುರ ಮಾರ್ಗವಾಗಿ ಮುಂಡರಗಿ, ಹಡಗಲಿ, ಹರಿಹರ, ದಾವಣಗೆರೆ ಹಾಗೂ ಚಿತ್ರದುರ್ಗ ಮೂಲಕ ಬೆಂಗಳೂರನ್ನು ತಲುಪಲಿದೆ.

ಈ ಸೇವೆಯಿಂದ ರೋಣ ಕ್ಷೇತ್ರದ ನೂರಾರು ಗ್ರಾಮಗಳ ಜನರಿಗೆ ನೇರವಾಗಿ ಬೆಂಗಳೂರು ಸಂಪರ್ಕ ದೊರೆತಂತಾಗಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು ಹಾಗೂ ಚಿಕಿತ್ಸೆಗಾಗಿ ರಾಜಧಾನಿಗೆ ತೆರಳುವವರಿಗೆ ದೊಡ್ಡ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ, ಮಲ್ಲಿಕಾರ್ಜುನ ಇದ್ಲಿ, ಭೀಮಪ್ಪ ರಾಮಜಿ, ಅಲ್ಲಿಸಾಬ ನದಾಫ, ಗಾಳೆಪ್ಪ ಹಳ್ಳಮನವರ, ಹನುಮಪ್ಪ ಪೂಜಾರ, ಸೀತಾ ಜೋಗಿನ, ಭೀಮವ್ವ ಬನಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೋಟ್

“ಇದು ಶಾಸಕ ಜಿ.ಎಸ್. ಪಾಟೀಲರ ಕನಸಿನ ಕೂಸು. ಹಳ್ಳಿಗಳ ಜನರಿಗೆ ಬೆಂಗಳೂರು ಸಂಪರ್ಕ ಕಲ್ಪಿಸುವ ಮಹತ್ವದ ಸೇವೆಯಿದು.”

— ಯಲ್ಲಪ್ಪ ಎಚ್. ಬಾಬರಿ, ರೈತ ಸಂಘ ಜಿಲ್ಲಾಧ್ಯಕ್ಷ

ಅಕ್ರಮ ಸಂಬಂಧ ಶಂಕೆ: ಜೆಜೆ ನಗರದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ!

ಬೆಂಗಳೂರು: ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ನಗರದ ಜೆಜೆ ನಗರದಲ್ಲಿ ನಡೆದಿದೆ.

ಮೃತರನ್ನು ಅಕ್ರಂ ಪಾಷಾ (43) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಉಮರ್ ಖಾಲೀದ್ ಎಂಬ ವ್ಯಕ್ತಿಯ ಪತ್ನಿಯೊಂದಿಗೆ ಅಕ್ರಂ ಪಾಷಾ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬುಧವಾರ ರಾತ್ರಿ ಸುಮಾರು 12:30ರ ವೇಳೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಅಕ್ರಂ ಪಾಷಾ ಉಮರ್ ಖಾಲೀದ್ ಅವರ ಮನೆ ಬಳಿ ಬಂದಿದ್ದ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಉಮರ್ ಖಾಲೀದ್ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಅಕ್ರಂ ಪಾಷಾ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಉಮರ್ ಖಾಲೀದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್, ರಾತ್ರಿ ಸುಮಾರು 12:30ರ ವೇಳೆಗೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದನು ಎಂದು ತಿಳಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸಿದರೂ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ರಮ ಸಂಬಂಧವೇ ಕೊಲೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಕ್ರಂ ಪಾಷಾ ಮತ್ತು ಆರೋಪಿ ಇಬ್ಬರೂ ಕಾರು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ ಸಂಪೂರ್ಣ ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೀದಿ ನಾಯಿಯ ಕಾಟಕ್ಕೆ ಬ್ರೇಕ್

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಪಟ್ಟಣದ ಶ್ರೀ ಅನ್ನದಾನೇಶ್ವರ ಕಾಲೊನಿಯ ನಿವಾಸಿಗಳಿಗೆ ತಲೆನೋವಾಗಿದ್ದ ಬೀದಿ ನಾಯಿ ಹಾಗೂ ಅದರ ಮರಿಯನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಸೆರೆ ಹಿಡಿದು ಕೊಂಡೊಯ್ದ ಹಿನ್ನೆಲೆಯಲ್ಲಿ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಶ್ರೀ ಅನ್ನದಾನೇಶ್ವರ ಕಾಲೊನಿಯ ಎರಡನೇ ಅಡ್ಡರಸ್ತೆಯಲ್ಲಿ ಅಲೆದಾಡುತ್ತಿದ್ದ ಬೀದಿ ನಾಯಿ ಮತ್ತು ಅದರ ಮರಿ ಹಗಲು-ರಾತ್ರಿ ಎನ್ನದೆ ಬೊಗಳುತ್ತಿದ್ದು, ಸ್ಥಳೀಯರ ನಿದ್ದೆ ಮತ್ತು ನೆಮ್ಮದಿಯನ್ನು ಕದಡಿತ್ತು. ರಾತ್ರಿ ಪೂರ್ತಿ ಎಚ್ಚರದಿಂದ ಕಾಲ ಕಳೆಯಬೇಕಾದ ಪರಿಸ್ಥಿತಿ ನಿವಾಸಿಗಳದ್ದಾಗಿತ್ತು. ಇದರಿಂದ ನಿವಾಸಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗಿತ್ತು ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದರು.

ಇದಲ್ಲದೆ ಮರಿ ನಾಯಿ ಮನೆಗಳಿಗೆ ನುಗ್ಗಿ ಎಲ್ಲೆಂದರಲ್ಲಿ ಹೊಲಸು ಮಾಡುತ್ತಿದ್ದು, ಅದನ್ನು ಸ್ವಚ್ಛಗೊಳಿಸುವುದೇ ನಿವಾಸಿಗಳಿಗೆ ದೊಡ್ಡ ತೊಂದರೆಯಾಗಿತ್ತು.

ಈ ಕುರಿತು ನಿವಾಸಿಗಳು ಕಳೆದ ತಿಂಗಳೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಗಮನಕ್ಕೆ ತಂದಿದ್ದು, ಬುಧವಾರ ಪಪಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೀದಿ ನಾಯಿ ಮತ್ತು ಅದರ ಮರಿಯನ್ನು ಸೆರೆ ಹಿಡಿದರು.

ಈ ಹಿನ್ನೆಲೆಯಲ್ಲಿ ನಿವಾಸಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

error: Content is protected !!