Home Blog Page 209

ಅಮಿತ್ ಶಾ ದುಡ್ಡು ಕೊಟ್ಟು ಮ್ಯಾಚ್ ನೋಡ್ತಾರಾ?: ಐಪಿಎಲ್ ಫೈನಲ್ ಸ್ಥಳಾಂತರ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯವನ್ನು ಗುಜರಾತ್‌ಗೆ ಸ್ಥಳಾಂತರಿಸಿರುವ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಮಿತ್ ಶಾ ದುಡ್ಡು ಕೊಟ್ಟು ಮ್ಯಾಚ್ ನೋಡ್ತಾರಾ ಅಥವಾ ಉಚಿತವಾಗಿ ನೋಡ್ತಾರಾ?” ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ಐಪಿಎಲ್ ಟಿಕೆಟ್‌ಗಾಗಿ ರಾಜಕೀಯ ಒತ್ತಡ ಬಂದ ಹಿನ್ನೆಲೆ ಪಂದ್ಯ ಸ್ಥಳಾಂತರವಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರು ಅಥವಾ ಸಂಸದರು ಟಿಕೆಟ್ ಕೇಳಿದ್ದಾರೆ ಎನ್ನುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.

ಮೊದಲು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ವಿಷಯ ಪ್ರಸ್ತಾಪಿಸಿದ್ದರು. ಬಳಿಕ ಎಲ್ಲರೂ ಅದಕ್ಕೆ ಧ್ವನಿಗೂಡಿಸಿದ್ದರು. ಹೀಗಾಗಿ ಇದನ್ನು ರಾಜಕೀಯವಾಗಿ ತಿರುಗಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಟಿಕೆಟ್ ನೀಡುವುದು ತಪ್ಪು ಎಂದು ಕೆಲವರು ಹೇಳುತ್ತಿದ್ದಾರೆ. ಈಗಾಗಲೇ ಐದಾರು ಪಂದ್ಯಗಳು ನಡೆದಿವೆ. ಅವು ಹೇಗೆ ನಡೆದವು ಎಂಬುದನ್ನು ಪ್ರಶ್ನಿಸಬೇಕು. ಈಗ ಹೆಚ್ಚಿನ ಲಾಭಕ್ಕಾಗಿ ಪಂದ್ಯವನ್ನು ಗುಜರಾತ್‌ಗೆ ಕರೆದೊಯ್ಯಲಾಗಿದೆ ಎಂದು ಆರೋಪಿಸಿದರು.

ಸದನದಲ್ಲೇ ಬಿಜೆಪಿ ವಿರೋಧ ಪಕ್ಷದ ನಾಯಕರೇ ಐಪಿಎಲ್ ಟಿಕೆಟ್ ಕೇಳಿದ್ದರು. ಹಾಗಾದರೆ ಪಂದ್ಯ ಸ್ಥಳಾಂತರಕ್ಕೆ ಬಿಜೆಪಿಯೇ ಕಾರಣವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ರಾಜ್ಯಕ್ಕೆ ಬಂಡವಾಳ ಹೂಡಿಕೆ ವಿಚಾರದಲ್ಲಿ ಅನ್ಯಾಯ ಮಾಡಿದಂತೆಯೇ, ಈಗ ಕ್ರೀಡಾ ಕ್ಷೇತ್ರದಲ್ಲಿಯೂ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭದ್ರತೆ ವಿಷಯದಲ್ಲಿ ಶಾಸಕರು ಅಥವಾ ಸಂಸದರ ಯಾವುದೇ ಒತ್ತಡ ಇರಲಿಲ್ಲ. ಯಾರು ಇ-ಮೇಲ್ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಪಂದ್ಯವನ್ನು ಮುಂಬೈನಲ್ಲಿ ನಡೆಸಬಹುದಾಗಿತ್ತು. ಆದರೂ ಗುಜರಾತ್‌ಗೆ ಏಕೆ ಸ್ಥಳಾಂತರ ಮಾಡಲಾಗಿದೆ ಎಂಬುದನ್ನು ಪ್ರಶ್ನಿಸಬೇಕು ಎಂದರು.

ಎಲ್ಲ ಪ್ರಮುಖ ಪಂದ್ಯಗಳನ್ನೂ ಗುಜರಾತ್‌ಗೆ ಕರೆದೊಯ್ಯುತ್ತಿರುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೂ ಖಂಡಿಸಿದ್ದಾರೆ ಎಂದು ಹೇಳಿದರು.

4 ದಿನಗಳ ಬಳಿಕ ವಾಹನ ಸಂಚಾರಕ್ಕೆ ಮುಕ್ತವಾದ ಪೀಣ್ಯ ಫ್ಲೈಓವರ್: ಲೋಡ್ ಟೆಸ್ಟಿಂಗ್ ಯಶಸ್ವಿ

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿದ್ದ ಪೀಣ್ಯ ಫ್ಲೈಓವರ್ ಇದೀಗ ಮತ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಕೇಬಲ್ ಅಳವಡಿಕೆ ಹಾಗೂ ಲೋಡ್ ಟೆಸ್ಟಿಂಗ್ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆ ಇಂದಿನಿಂದ ಫ್ಲೈಓವರ್ ಮೇಲೆ ಸಂಚಾರ ಪುನರಾರಂಭಗೊಂಡಿದೆ.

ರಾಜ್ಯದ ಸುಮಾರು 22 ಜಿಲ್ಲೆಗಳ ಸಂಪರ್ಕಕ್ಕೆ ಪ್ರಮುಖ ಮಾರ್ಗವಾಗಿರುವ ಪೀಣ್ಯ ಫ್ಲೈಓವರ್‌ನಲ್ಲಿ ಮೇ 5ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿತ್ತು. ಸೇತುವೆಯ ಸುರಕ್ಷತೆ ಪರಿಶೀಲನೆಗಾಗಿ ಕೇಬಲ್ ಅಳವಡಿಕೆ ಮತ್ತು ಲೋಡ್ ಟೆಸ್ಟಿಂಗ್ ಕಾರ್ಯ ಕೈಗೊಳ್ಳಲಾಗಿತ್ತು.

ಈಗ ಕಾಮಗಾರಿ ಪೂರ್ಣಗೊಂಡಿದ್ದು, ಲೋಡ್ ಟೆಸ್ಟಿಂಗ್ ಕೂಡ ಯಶಸ್ವಿಯಾಗಿ ಮುಗಿದಿದೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆಯಿಂದಲೇ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಫ್ಲೈಓವರ್ ಬಂದ್ ಆಗಿದ್ದ ನಾಲ್ಕು ದಿನಗಳ ಅವಧಿಯಲ್ಲಿ ಪರ್ಯಾಯ ಮಾರ್ಗಗಳಲ್ಲಿ ಭಾರೀ ಟ್ರಾಫಿಕ್ ಉಂಟಾಗಿ ವಾಹನ ಸವಾರರು ತೀವ್ರ ಪರದಾಟ ಅನುಭವಿಸಿದ್ದರು. ಇದೀಗ ಫ್ಲೈಓವರ್ ತೆರೆಯಲ್ಪಟ್ಟ ಹಿನ್ನೆಲೆ ವಾಹನ ಸವಾರರು ನಿರಾಳರಾಗಿದ್ದಾರೆ. ಸದ್ಯ ಪೀಣ್ಯ ಫ್ಲೈಓವರ್‌ನಲ್ಲಿ ಎರಡೂ ದಿಕ್ಕಿನಲ್ಲೂ ಎಂದಿನಂತೆ ವಾಹನ ಸಂಚಾರ ಸುಗಮವಾಗಿ ಆರಂಭವಾಗಿದೆ.

ಮೇ ತಿಂಗಳಲ್ಲಿ ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆ: ದೆಹಲಿ ಭೇಟಿಯ ಬಳಿಕ ಅಂತಿಮ ನಿರ್ಧಾರ ಎಂದ ಸಲೀಂ ಅಹ್ಮದ್

ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಕುರಿತು ಮತ್ತೆ ಚರ್ಚೆಗಳು ಜೋರಾಗಿರುವ ನಡುವೆ, ಕಾಂಗ್ರೆಸ್ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಹತ್ವದ ಹೇಳಿಕೆ ನೀಡಿದ್ದಾರೆ. ಆದಷ್ಟು ಬೇಗ ಸಚಿವ ಸಂಪುಟ ಪುನರ್‌ರಚನೆ ನಡೆಯಲಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ದೆಹಲಿ ಭೇಟಿ ಬಳಿಕ ಈ ಕುರಿತು ಅಂತಿಮ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಬರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಂಪುಟ ಪುನರ್‌ರಚನೆ ಅಗತ್ಯವಿದೆ ಎಂದು ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ. ಅಂತಿಮವಾಗಿ ಈ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.

ಕ್ಯಾಬಿನೆಟ್ ವಿಸ್ತರಣೆ ಖಚಿತವಾಗಿಯೇ ನಡೆಯಲಿದೆ. ಮೇ ತಿಂಗಳಲ್ಲೇ ಈ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಲೀಂ ಅಹ್ಮದ್, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆ ಜಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತು ಮಾಡಿದೆ ಎಂದು ತಿಳಿಸಿದರು. ಉಪಚುನಾವಣೆಯಲ್ಲಿ ಮತಗಳ ಅಂತರ ಕಡಿಮೆಯಾಗಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.

ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಇದೇ ಕಾರಣಕ್ಕೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ ಎಂದು ಹೇಳಿದರು.

ಇನ್ನೂ ಶೃಂಗೇರಿ ಅಂಚೆ ಮತಗಳ ಮರು ಎಣಿಕೆ ವಿಚಾರವಾಗಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಸಲೀಂ ಅಹ್ಮದ್, ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ 201 ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಮತಪತ್ರಗಳಲ್ಲಿ ತಿರುಚಾಟ ನಡೆದಿದೆ. ಇದರಲ್ಲಿ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿರುವ ಅನುಮಾನವಿದೆ ಎಂದು ಆರೋಪಿಸಿದರು.

ರೈಲ್ವೆ ಪರೀಕ್ಷೆ ಕನ್ನಡದಲ್ಲೂ ನಡೆಸಿ ; ಕೇಂದ್ರಕ್ಕೆ ನಿಖಿಲ್ ಕುಮಾರಸ್ವಾಮಿ ಪತ್ರ

ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆಯ ಇಲಾಖಾ ಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.

ಪ್ರಸ್ತುತ ರೈಲ್ವೆ ಇಲಾಖೆಯ ಪರೀಕ್ಷೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ನಡೆಯುತ್ತಿದ್ದು, ಇದು ಕನ್ನಡಿಗ ಉದ್ಯೋಗಿಗಳಿಗೆ ಅನ್ಯಾಯವಾಗಿದೆ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 2024ರ ರೈಲ್ವೆ ಮಂಡಳಿ ಆದೇಶದ ಪ್ರಕಾರ ಕನ್ನಡವನ್ನು ಕೂಡ ಪರೀಕ್ಷಾ ಭಾಷೆಯಾಗಿ ಸೇರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಎಕ್ಸ್ ಖಾತೆಯಲ್ಲಿಯೂ ಈ ಪತ್ರವನ್ನು ಹಂಚಿಕೊಂಡಿದ್ದು, ರಾಜ್ಯದ ಉದ್ಯೋಗಿಗಳ ಹಿತಾಸಕ್ತಿ ರಕ್ಷಣೆ ತಮ್ಮ ಪ್ರಮುಖ ಗುರಿ ಎಂದು ತಿಳಿಸಿದ್ದಾರೆ. ಮುಂದಿನ ಎಲ್ಲ ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಮಾನ ಆದ್ಯತೆ ನೀಡಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.

ಗ್ರೇಟರ್ ಬೆಂಗಳೂರು ಚುನಾವಣೆಗೆ ಮುಹೂರ್ತ ಫಿಕ್ಸ್: ಜೂನ್ 14–24ರ ನಡುವೆ ದಿನಾಂಕ ಘೋಷಣೆ ಸಾಧ್ಯತೆ

ಬೆಂಗಳೂರು: ಕೊನೆಗೂ ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ಕಾಲಕಾಲಿಕ ಚಲನೆ ಸಿಕ್ಕಿದೆ. ಮುಂದಿನ ಜೂನ್ 14 ರಿಂದ 24ರ ಒಳಗೆ ಚುನಾವಣಾ ದಿನಾಂಕವನ್ನು ಘೋಷಿಸುವಂತೆ ರಾಜ್ಯ ಚುನಾವಣಾ ಆಯೋಗವು ಸ್ಪಷ್ಟ ಸೂಚನೆ ನೀಡಿದೆ.

ಇಂದು ನಡೆದ ಮಹತ್ವದ ಸಭೆಯಲ್ಲಿ ರಾಜ್ಯ ಚುನಾವಣಾ ಆಯುಕ್ತ ಜಿ.ಎ ಸಂಗ್ರೇಶಿ ಅವರು, ಚುನಾವಣಾ ಸಿದ್ಧತೆಗಳನ್ನು ಅಂತಿಮ ಹಂತಕ್ಕೆ ತರುವಂತೆ ನಿರ್ದೇಶನ ನೀಡಿದ್ದಾರೆ. GBA ವ್ಯಾಪ್ತಿಯ 5 ನಗರ ಪಾಲಿಕೆಗಳ ಚುನಾವಣೆ ಸಂಬಂಧ ನಡೆದ ಈ ಸಭೆಗೆ ಸಿಎಂ ಮತ್ತು ಡಿಸಿಎಂ ಗೈರಾಗಿದ್ದು ಗಮನ ಸೆಳೆದಿದೆ. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯ ನಂತರ ಮಾತನಾಡಿದ ಆಯುಕ್ತ ಸಂಗ್ರೇಶಿ ಅವರು, ಕಾನೂನು ಪ್ರಕಾರ ಜಿಬಿಎ ಜೊತೆ ಸಮಾಲೋಚನೆ ಮಾಡಿ ದಿನಾಂಕ ನಿಗದಿಪಡಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು. ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ ಹಾಗೂ ಮೀಸಲಾತಿ ಕಾರ್ಯಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಎಲ್ಲ ಸಿದ್ಧತೆಗಳು ಪೂರ್ಣವಾಗಿವೆ ಎಂದರು.

ಅವರು ಮುಂದುವರಿದು, ಜೂನ್ 30ರೊಳಗೆ ದಿನಾಂಕ ಘೋಷಣೆ ಕಡ್ಡಾಯವಾಗಿದೆ ಎಂದು ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಚುನಾವಣೆಯನ್ನು ಮುಂದೂಡುವ ಅಧಿಕಾರ ಆಯೋಗಕ್ಕೆ ಇಲ್ಲ, ಆದ್ದರಿಂದ ನಿಗದಿತ ಅವಧಿಯೊಳಗೆ ದಿನಾಂಕ ಅಂತಿಮಗೊಳಿಸಬೇಕು ಎಂದು ಜಿಬಿಎಗೆ ಕಟ್ಟುನಿಟ್ಟಿನ ಸಂದೇಶ ನೀಡಲಾಗಿದೆ.

ಕ್ರಿಕೆಟಿಗ ಸೂರ್ಯಕುಮಾರ್ ಯಾದವ್-ದೇವಿಷಾ ಶೆಟ್ಟಿ ಜೋಡಿಗೆ ಹೆಣ್ಣು ಮಗು ಜನನ!

ಮುಂಬೈ: ಟೀಂ ಇಂಡಿಯಾದ ಟಿ20 ನಾಯಕ ಹಾಗೂ ತುಳುನಾಡಿನ ಅಳಿಯ ಸೂರ್ಯಕುಮಾರ್ ಯಾದವ್ ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಅವರ ಪತ್ನಿ ದೇವಿಷಾ ಶೆಟ್ಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂತಸದ ಸುದ್ದಿಯನ್ನು ಸೂರ್ಯಕುಮಾರ್ ಯಾದವ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. “ನಗು ಮತ್ತು ಕನಸುಗಳೊಂದಿಗೆ ನಮ್ಮ ಹೆಣ್ಣು ಮಗುವನ್ನು ಸ್ವಾಗತಿಸಿದ್ದೇವೆ” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಕಾಲೇಜು ದಿನಗಳಲ್ಲೇ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದ ಸೂರ್ಯಕುಮಾರ್ ಯಾದವ್ ಹಾಗೂ ದೇವಿಷಾ ಶೆಟ್ಟಿ ಜೋಡಿ 2016ರಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಸುಮಾರು 10 ವರ್ಷಗಳ ಬಳಿಕ ಈ ದಂಪತಿ ತಮ್ಮ ಮೊದಲ ಮಗುವಿಗೆ ಸ್ವಾಗತ ಕೋರಿದ್ದಾರೆ.

ಈ ಸುದ್ದಿ ಹೊರಬಿದ್ದ ತಕ್ಷಣವೇ ಅಭಿಮಾನಿಗಳು, ಕ್ರಿಕೆಟಿಗರು ಹಾಗೂ ವಿವಿಧ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿರುವುದು ಅಭಿಮಾನಿಗಳಲ್ಲೂ ಸಂತಸ ಮೂಡಿಸಿದೆ.

ಫಸಲು ಸಮಯದಲ್ಲೇ ಕಾಫಿ ತೋಟಕ್ಕೆ ಕತ್ತರಿ; ಕೊಡಗಿನಲ್ಲಿ ಸಾವಿರಾರು ಗಿಡ ನಾಶ, ಬೆಳೆಗಾರರ ಕಣ್ಣೀರು

0

ಮಡಿಕೇರಿ: ಕೊಡಗಿನ ಕಾಫಿ ಬೆಳೆಗಾರರನ್ನು ಬೆಚ್ಚಿಬೀಳಿಸುವ ಘಟನೆ ಪೊನ್ನಂಪೇಟೆ ತಾಲೂಕಿನ ಕಳಕೂರು ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳು ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಸುಮಾರು 2000 ಕಾಫಿ ಗಿಡಗಳು ಮತ್ತು 250ಕ್ಕೂ ಹೆಚ್ಚು ಕರಿಮೆಣಸು ಬಳ್ಳಿಗಳನ್ನು ಕಡಿದು ಹಾಕಿ ಪರಾರಿಯಾಗಿದ್ದಾರೆ.

ಗೌತಮ್ ಎಂಬುವರಿಗೆ ಸೇರಿದ 3.5 ಎಕರೆ ತೋಟದಲ್ಲಿ ಬೆಳೆದು ನಿಂತಿದ್ದ ಏಳೆಂಟು ವರ್ಷದ ಕಾಫಿ ಗಿಡಗಳೇ ದುಷ್ಕರ್ಮಿಗಳ ಟಾರ್ಗೆಟ್ ಆಗಿವೆ. ಫಸಲು ಕೈಗೆ ಬರುವ ಹೊತ್ತಿನಲ್ಲಿ ನಡೆದ ಈ ಕೃತ್ಯ ಬೆಳೆಗಾರ ಕುಟುಂಬವನ್ನು ಕಂಗಾಲಾಗಿಸಿದೆ.

ಘಟನೆಯ ವೇಳೆ ತೋಟದ ಮಾಲೀಕರು ಮೈಸೂರಿನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರೆಂದು ತಿಳಿದುಬಂದಿದೆ. ಈ ಮಾಹಿತಿ ತಿಳಿದೇ ಕಿಡಿಗೇಡಿಗಳು ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ತೋಟದಲ್ಲಿದ್ದ ಎರಡು ಸಿಸಿ ಕ್ಯಾಮೆರಾಗಳನ್ನೂ ಕಿತ್ತುಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ.

ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಶ್ವಾನದಳದ ಸಹಾಯದಿಂದ ತನಿಖೆ ಮುಂದುವರಿಸಿದ್ದಾರೆ. “ಕಾಫಿ ಗಿಡಗಳನ್ನು ಮಕ್ಕಳಂತೆ ಸಾಕಿದ್ದೇವೆ. ಈ ರೀತಿ ನಾಶ ಮಾಡಿರುವುದು ಹೃದಯ ಕಲುಕುವ ಸಂಗತಿ” ಎಂದು ಸ್ಥಳೀಯ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊಸ ಸಿಸ್ಟಂ ಜಾರಿ; ಕೈದಿಗಳಿಗೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ಜೈಲಿನೊಳಗಿನ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ಕಾರಾಗೃಹ ಇಲಾಖೆ ಹೊಸ ತಂತ್ರಜ್ಞಾನ ಆಧಾರಿತ ನಿಗಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. “ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್‌ಮೆಂಟ್ ಸಿಸ್ಟಂ” ಹೆಸರಿನ ಈ ಯೋಜನೆಯಡಿ ಇನ್ಮುಂದೆ ಪ್ರತಿ ಬ್ಯಾರಕ್ ಪ್ರವೇಶಿಸುವಾಗ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.

ಈಗಾಗಲೇ ಜೈಲಿನಲ್ಲಿ ಎಐ ಆಧಾರಿತ ಕ್ಯಾಮೆರಾಗಳ ಮೂಲಕ ಕೈದಿಗಳು ಹಾಗೂ ಸಿಬ್ಬಂದಿಗಳ ಮೇಲೆ ನಿಗಾ ವಹಿಸಲಾಗುತ್ತಿತ್ತು. ಇದೀಗ ಅದರ ಜೊತೆಗೆ ಕೈದಿಗಳ ಫೋನ್ ಕರೆಗಳ ಡಿಜಿಟಲ್ ಟ್ರ್ಯಾಕಿಂಗ್, ಸಂದರ್ಶಕರ ಭೇಟಿಗೆ ಡಿಜಿಟಲ್ ಟೋಕನ್ ವ್ಯವಸ್ಥೆ ಸೇರಿದಂತೆ ಕೈದಿಗಳ ಪ್ರತಿಯೊಂದು ಚಲನವಲನದ ಮೇಲೂ ಸಂಪೂರ್ಣ ನಿಗಾ ಇಡುವ ವ್ಯವಸ್ಥೆ ಜಾರಿಯಾಗಿದೆ. ಈ ಯೋಜನೆಗೆ ಸುಮಾರು 2.25 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿಕ್ಷಾಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳು ಪ್ರತ್ಯೇಕ ಬ್ಯಾರಕ್‌ಗಳಲ್ಲಿ ಇದ್ದರೂ, ಊಟ ಮತ್ತು ಚಿಕಿತ್ಸೆ ನೆಪದಲ್ಲಿ ಒಂದೇ ಕಡೆ ಸೇರಿ ಪರಸ್ಪರ ಸಂಪರ್ಕ ಸಾಧಿಸುತ್ತಿದ್ದರು. ಇದರಿಂದ ಜೈಲಿನ ಒಳಗೆ ಹಾಗೂ ಹೊರಗೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಗುತ್ತಿತ್ತು ಎಂಬ ಮಾಹಿತಿ ಹಿನ್ನೆಲೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ವಿಚಾರಣಾಧೀನ ಕೈದಿಗಳು ಹಾಗೂ ಶಿಕ್ಷಾಬಂಧಿಗಳಿಗೆ ಪ್ರತ್ಯೇಕ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗುತ್ತಿದ್ದು, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಜೈಲಿನೊಳಗೇ ಹೊರರೋಗಿಗಳ ವಿಭಾಗ (ಒಪಿಡಿ) ತೆರೆಯಲಾಗುತ್ತಿದೆ. ಗಂಭೀರ ಅನಾರೋಗ್ಯದ ಸಂದರ್ಭಗಳಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಜಾರಿಯಾಗಲಿದೆ.

ಜೈಲಿನ ಪ್ರತಿ ಬ್ಯಾರಕ್, ಸಂದರ್ಶಕರ ಕೊಠಡಿ, ಆಸ್ಪತ್ರೆ, ಕ್ಯಾಂಟೀನ್, ಅಡುಗೆ ಕೋಣೆ, ಗ್ರಂಥಾಲಯ, ಮೈದಾನ, ಕರಕುಶಲ ಘಟಕಗಳು ಹಾಗೂ ಬೇಕರಿ ಸೇರಿದಂತೆ ಎಲ್ಲ ಪ್ರಮುಖ ಸ್ಥಳಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ. ಸಂದರ್ಶಕರನ್ನು ಭೇಟಿ ಮಾಡಲು ಹೋಗುವ ಕೈದಿಗಳು ಟೋಕನ್ ಪಡೆಯುವುದು ಕಡ್ಡಾಯವಾಗಿದ್ದು, ಆ ಟೋಕನ್‌ನಲ್ಲಿ ಕೈದಿಯ ಹೆಸರು, ಸಂಖ್ಯೆ, ಸಮಯ ಸೇರಿದಂತೆ ಎಲ್ಲ ಮಾಹಿತಿಯೂ ಸಾಫ್ಟ್‌ವೇರ್‌ನಲ್ಲಿ ದಾಖಲಾಗಲಿದೆ.

ಇದರ ಮೂಲಕ ಯಾವ ಕೈದಿ ಎಲ್ಲಿ ಹೋಗಿದ್ದಾನೆ, ಎಷ್ಟು ಸಮಯ ಕಳೆದಿದ್ದಾನೆ, ಯಾರನ್ನು ಭೇಟಿಯಾಗಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಟ್ರ್ಯಾಕ್ ಮಾಡಬಹುದಾಗಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಕೈದಿಗಳನ್ನು ಸುಲಭವಾಗಿ ಗುರುತಿಸಿ ಕ್ರಮ ಕೈಗೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಜೈಲಿನ ಕ್ಯಾಂಟೀನ್‌ಗಳಲ್ಲೂ “ಕ್ಯಾಂಟೀನ್ ಯೂಸೇಜ್ ಸಿಸ್ಟಂ” ಜಾರಿಗೆ ತರಲಾಗಿದೆ. ಕೈದಿಗಳು ನೇರ ಹಣ ಪಾವತಿ ಮಾಡದೆ ವಾಲೆಟ್ ಅಥವಾ ಕೂಪನ್ ಮೂಲಕ ಬನ್, ಬಿಸ್ಕತ್ ಸೇರಿದಂತೆ ಬೇಕರಿ ಪದಾರ್ಥಗಳನ್ನು ಖರೀದಿಸಬಹುದು. ಇದರಿಂದ ಯಾವ ಕೈದಿ ಯಾವ ವಸ್ತು ಖರೀದಿಸಿದ್ದಾನೆ, ಎಷ್ಟು ಹಣ ಖರ್ಚು ಮಾಡಿದ್ದಾನೆ, ಯಾವ ಸಮಯದಲ್ಲಿ ಖರೀದಿ ನಡೆದಿದೆ ಎಂಬ ಎಲ್ಲಾ ಮಾಹಿತಿ ಡಿಜಿಟಲ್ ರೂಪದಲ್ಲಿ ದಾಖಲಾಗಲಿದೆ.

ಜೈಲಿನ ಪ್ರತಿಯೊಂದು ಬ್ಯಾರಕ್ ಪ್ರವೇಶದ್ವಾರದಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಜೊತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಮೂಲಕ ಕೈದಿಗಳ ಮೇಲೆ ನಿರಂತರ ನಿಗಾ ಇಟ್ಟು, ಜೈಲಿನೊಳಗಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಡಬಲ್ ಟ್ರಾಜಿಡಿ ; ಬಸ್ ಪಲ್ಟಿಗೆ ವಿದ್ಯಾರ್ಥಿ ಬಲಿ, ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೆ ಇಬ್ಬರು ಸಾವು

ದಾವಣಗೆರೆ: ಜಿಲ್ಲೆಯಲ್ಲಿ ಒಂದೇ ದಿನ ಎರಡು ಭೀಕರ ರಸ್ತೆ ಅಪಘಾತಗಳು ಸಂಭವಿಸಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಚನ್ನಗಿರಿ ತಾಲೂಕಿನ ಮರಬನಹಳ್ಳಿ ಗ್ರಾಮದಲ್ಲಿ ಆ್ಯಕ್ಸಲ್ ತುಂಡಾದ ಪರಿಣಾಮ ಸಾರಿಗೆ ಬಸ್ ಪಲ್ಟಿಯಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ದರ್ಶನ್ (21) ಎಂದು ಗುರುತಿಸಲಾಗಿದೆ. ಬಸ್ ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಕನಿಷ್ಠ 20 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆ ಹಾಗೂ ಬಸವಾಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೊಂದೆಡೆ, ದಾವಣಗೆರೆ ನಗರದ ಶಾಮನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಗೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಗೌತಮ್ (29) ಹಾಗೂ ಮನೋಜ್ (29) ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ವೇಗದ ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ ಎನ್ನಲಾಗಿದೆ.

ಎರಡೂ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ದಾವಣಗೆರೆ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

ಬಹುಮತ ಸಾಬೀತಾದರೆ ನಾಳೆಯೇ ಪ್ರಮಾಣವಚನ: ವಿಜಯ್ ವಿಚಾರದಲ್ಲಿ ರಾಜ್ಯಪಾಲ ಅರ್ಲೇಕರ್ ಸ್ಪಷ್ಟನೆ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಕುರಿತ ರಾಜಕೀಯ ಚರ್ಚೆಗಳು ತೀವ್ರವಾಗಿರುವ ನಡುವೆಯೇ ರಾಜ್ಯಪಾಲ ಆರ್‌.ವಿ. ಅರ್ಲೇಕರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಬಹುಮತ ಹೊಂದಿರುವ ಯಾವುದೇ ಪಕ್ಷ ಅಥವಾ ಮೈತ್ರಿಗೆ ಸರ್ಕಾರ ರಚನೆಗೆ ಅವಕಾಶ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿದ್ದು, ಅಂತಿಮವಾಗಿ ಸಂಖ್ಯೆಯೇ ಮುಖ್ಯ ಎಂದು ಅವರು ಹೇಳಿದ್ದಾರೆ.

ದಳಪತಿ ವಿಜಯ್ ಎರಡು ಬಾರಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ, ಅಗತ್ಯ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆ ಅವರ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ರಾಜ್ಯಪಾಲರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಪಕ್ಷ ಸರ್ಕಾರ ರಚಿಸಲು ಮುಂದೆ ಬಂದರೂ, ತಮ್ಮ ಬಳಿ ಬಹುಮತವಿದೆ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಡಬೇಕು. ಇದಕ್ಕಿಂತ ಹೆಚ್ಚಾಗಿ ನಾನು ಏನನ್ನೂ ಕೇಳಿಲ್ಲ. ನಾನು ತಲೆ ಎಣಿಕೆ ಮಾಡಲು ಹೇಳುತ್ತಿಲ್ಲ. ಬಹುಮತವನ್ನು ವಿಧಾನಸಭೆಯಲ್ಲೇ ಸಾಬೀತುಪಡಿಸಬೇಕು ಎಂಬುದಷ್ಟೇ ನನ್ನ ಮಾತು ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಬಹುಮತದೊಂದಿಗೆ ಡಿಎಂಕೆ, ಎಐಎಡಿಎಂಕೆ ಅಥವಾ ಬೇರೆ ಯಾರೇ ಬಂದರೂ ಸರ್ಕಾರ ರಚನೆಗೆ ಅವಕಾಶ ನೀಡಲೇಬೇಕು. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಭಾಗ. ಅಗತ್ಯ ಸಂಖ್ಯಾಬಲ ಇದ್ದರೆ ನಾಳೆಯೇ ಪ್ರಮಾಣವಚನ ಬೋಧಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಟಿವಿಕೆ ಹೊರತುಪಡಿಸಿ 118 ಸದಸ್ಯರ ಬೆಂಬಲದೊಂದಿಗೆ ಇನ್ನಾವ ಪಕ್ಷವೂ ಮುಂದೆ ಬರದಿದ್ದರೆ ಸಂವಿಧಾನಾತ್ಮಕ ಆಯ್ಕೆಗಳ ಬಗ್ಗೆ ಯೋಚಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಎಸ್‌.ಆರ್‌. ಬೊಮ್ಮಾಯಿ ಪ್ರಕರಣವನ್ನು ಉಲ್ಲೇಖಿಸಿದ ರಾಜ್ಯಪಾಲರು, ಆ ತೀರ್ಪು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದುದಲ್ಲ. ಇಲ್ಲಿ ವಿಚಾರ ಹೊಸ ಸರ್ಕಾರ ರಚನೆಗೆ ಸಂಬಂಧಿಸಿದೆ. ನಾನು ಬಹುಮತದ ಸಂಖ್ಯೆ ಕೇಳುತ್ತಿದ್ದೇನೆ ಹೊರತು ನನ್ನ ಮುಂದೆ ಶಾಸಕರ ತಲೆ ಎಣಿಕೆ ಮಾಡಲು ಹೇಳುತ್ತಿಲ್ಲ. ಅದನ್ನು ವಿಧಾನಸಭೆಯಲ್ಲೇ ಮಾಡಬೇಕು ಎಂದು ಹೇಳಿದರು.

ರಾಜಕೀಯವಾಗಿ ಕುದುರೆ ವ್ಯಾಪಾರದ ಆರೋಪಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ನಾನು ಸಿದ್ಧನಿದ್ದೇನೆ. ಆದರೆ ಸರ್ಕಾರ ರಚನೆಗೆ ಸಂಖ್ಯಾಬಲ ಅನಿವಾರ್ಯ ಎಂದು ಹೇಳಿದ್ದಾರೆ.

ಸಂಖ್ಯೆಗಳಿಲ್ಲದೇ ಮೊದಲು ಪ್ರಮಾಣವಚನ ಬೋಧಿಸಿ ನಂತರ ಬಹುಮತ ಸಾಬೀತುಪಡಿಸಿ ಎಂದು ಹೇಳುವುದು ಸರಿಯಲ್ಲ. ಇದು ಕೇವಲ ಒಂದು ಪಕ್ಷದ ಸಮಸ್ಯೆಯಲ್ಲ, ರಾಜ್ಯದ ಆಡಳಿತಕ್ಕೆ ಸಂಬಂಧಿಸಿದ ವಿಷಯ. ಸಂಖ್ಯಾಬಲವಿಲ್ಲದೇ ಸರ್ಕಾರ ರಚನೆಗೆ ಅವಕಾಶ ನೀಡಿದರೆ ಜನರಿಗೆ ಸಮಸ್ಯೆಯಾಗುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

error: Content is protected !!