Home Blog Page 215

ಜು.13ಕ್ಕೆ ಎಸ್‌ಡಿಪಿಐ ನಾಯಕರ ಸಮಾವೇಶ

0

ವಿಜಯಸಾಕ್ಷಿ ಸುದ್ದಿ, ಗದಗ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಜುಲೈ 13ರಂದು ಬೆಳಿಗ್ಗೆ 11.30ಕ್ಕೆ ನಗರದ ಕನಕ ಭವನದಲ್ಲಿ ಮಧ್ಯ ಕರ್ನಾಟಕ ಭಾಗದ ನಾಯಕರ ಮಹತ್ವದ ಸಮಾವೇಶ ನಡೆಯಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರಿಗೆ ಅಂದು ಮುಳುಗುಂದ ನಾಕಾ ವೃತ್ತದಲ್ಲಿ ಅದ್ದೂರಿ ಸ್ವಾಗತ ಕೋರಲಾಗುವುದು. ಸಮಾವೇಶದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫಿ, ರಾಷ್ಟ್ರೀಯ ಕಾರ್ಯದರ್ಶಿ ಯು. ಮೊಹಿದ್ದೀನ್, ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಹನ್ನಾನ್, ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ರಾಜ್ಯ ಕಾರ್ಯದರ್ಶಿ ಅಪ್ಸರ್ ಕೆ.ಆರ್. ನಗರ ಹಾಗೂ ರಾಜ್ಯ ಸಮಿತಿ ಸದಸ್ಯ ಫಯಾಜ್ ಅರಿಹಂತ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 1.30ಕ್ಕೆ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ನೇತೃತ್ವದಲ್ಲಿ ಸುದ್ದಿಗೋಷ್ಠಿಯೂ ನಡೆಯಲಿದೆ ಎಂದು ತಿಳಿಸಿದರು.

ಈ ವೇಳೆ ಎಸ್‌ಐಆರ್ (Special Intensive Revision) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ ಅಪ್ಸರ್ ಕೊಡ್ಲಿಪೇಟೆ, ಇದು ಮತದಾರರ ಹಕ್ಕಿಗೆ ಧಕ್ಕೆ ತರುವ ಕ್ರಮವಾಗಿದ್ದು, ಸರ್ಕಾರ ಕೂಡಲೇ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಅಗತ್ಯವಿದ್ದರೂ ನೈಜ ಮತದಾರರ ಹೆಸರುಗಳನ್ನು ಕೈಬಿಡಬಾರದು ಎಂದು ಒತ್ತಾಯಿಸಿದರು.

ಬಿಎಲ್‌ಒಗಳ ಮೇಲಿನ ಹೆಚ್ಚುವರಿ ಕೆಲಸದ ಒತ್ತಡದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಜನರು ಜನವಿರೋಧಿ ನೀತಿಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೆ.ಆರ್. ನಗರ, ಜಿಲ್ಲಾ ಅಧ್ಯಕ್ಷ ಬಿಲಾಲ್ ಗೋಕಾವಿ, ಜಿಲ್ಲಾ ಉಪಾಧ್ಯಕ್ಷ ಹಿದಾಯತುಲ್ಲಾ ಕಾಗದಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಫಾನ್ ತರಫ್ದರ್, ಗದಗ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮುಸ್ತಾಕ್ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾರೂ ಆತಂಕ ಪಡುವ ಅಗತ್ಯವಿಲ್ಲ; ರಾಚೋಟೇಶ್ವರ ಶ್ರೀಗಳ ಸಂದೇಶ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಅಂತೂರು-ಬೆಂತೂರು ಗ್ರಾಮದಲ್ಲಿ ಲೋಕಕಲ್ಯಾಣಕ್ಕಾಗಿ 33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನ ನಡೆಸಿದ ಪೂಜ್ಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಆರೋಗ್ಯ ವಿಚಾರಿಸಿ ಭಕ್ತರು ಆಶೀರ್ವಾದ ಪಡೆದರು.

ಈ ವೇಳೆ ತಮ್ಮ ಆರೋಗ್ಯದ ಕುರಿತು ಭಕ್ತರಿಗೆ ಸಂದೇಶ ನೀಡಿದ ಶ್ರೀಗಳು, “ನನ್ನ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದ ಮತ್ತು ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ” ಎಂದು ತಿಳಿಸಿದರು.

ಇನ್ನೂ ಕೆಲವು ದಿನಗಳಲ್ಲಿ ಸಂಪೂರ್ಣ ಚೇತರಿಸಿಕೊಂಡು ಅಂತೂರು-ಬೆಂತೂರು ಮಠಕ್ಕೆ ಮರಳಿ ಭಕ್ತರ ದರ್ಶನಕ್ಕೆ ಲಭ್ಯವಾಗುತ್ತೇನೆ ಎಂದು ಶ್ರೀಗಳು ಭರವಸೆ ನೀಡಿದರು.

ಅಲ್ಲದೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಲೋಕಕಲ್ಯಾಣಕ್ಕಾಗಿ ಎಲ್ಲರೂ ಪ್ರಾರ್ಥನೆಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಗೌರವಾಧ್ಯಕ್ಷ ನಿಂಗನಗೌಡ ಎಸ್. ಮಾಲಿಪಾಟೀಲ, ಜಿಲ್ಲಾ ಉಪಾಧ್ಯಕ್ಷ ಮಾರುತಿ ಈಳಗೇರ, ಕರವೇ ಯುವ ಮುಖಂಡರಾದ ರಾಹುಲ್ ತೆರದಾಳ, ಹುಲಿಗೇಶ ಚೌಡಣ್ಣವರ, ಮಲ್ಲಿಕಾರ್ಜುನ ಈಳಗೇರ, ಶ್ರೀನಿವಾಸ ಶೇಖರ ಇಳಗೇರ ಸೇರಿದಂತೆ ಹಲವಾರು ಯುವ ಮುಖಂಡರು ಉಪಸ್ಥಿತರಿದ್ದರು.

ನಕಲಿ ಮತದಾರರ ಸೇರ್ಪಡೆಗೆ ಕಾಂಗ್ರೆಸ್ ಕುಮ್ಮಕ್ಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡು ನುಸುಳುಕೋರರು ಹಾಗೂ ನಕಲಿ ಮತದಾರರನ್ನು ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ನಿಯಮಗಳನ್ನು ಸಡಿಲಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಯಾವುದೇ ಕಾನೂನಾತ್ಮಕ ದಾಖಲೆಗಳಿಲ್ಲದೆ ಮೌಖಿಕ ಸಾಕ್ಷ್ಯದ ಆಧಾರದ ಮೇಲೆ ಪ್ರಮಾಣಪತ್ರ ನೀಡಲು ಅವಕಾಶ ಕಲ್ಪಿಸಿರುವುದು ನಕಲಿ ಮತದಾರರ ಸೇರ್ಪಡೆಗೆ ದಾರಿ ಮಾಡಿಕೊಡಲಿದೆ ಎಂದು ದೂರಿದರು.

ರಾಜ್ಯದ ಶೇ.80ರಿಂದ 90ರಷ್ಟು ಮನೆಗಳಿಗೆ ಎಸ್‌ಐಆರ್ ನಮೂನೆಗಳು ತಲುಪಿವೆ ಎಂಬ ಅಧಿಕಾರಿಗಳ ಹೇಳಿಕೆ ವಾಸ್ತವಕ್ಕೆ ದೂರವಾಗಿದೆ. ಅನೇಕ ಕಡೆಗಳಲ್ಲಿ ಬಿಎಲ್‌ಒಗಳು ಮನೆಮನೆಗೆ ತೆರಳಿ ನಮೂನೆ ವಿತರಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗುತ್ತವೆ ಎಂದು ಆರೋಪಿಸಿದ ಜೋಶಿ, ಹಾನಗಲ್ ಘಟನೆ ಹಾಗೂ ಮಾದಕ ವಸ್ತುಗಳ ಜಾಲದ ಬಗ್ಗೆ ಸರ್ಕಾರದ ಮೌನವನ್ನು ಪ್ರಶ್ನಿಸಿದರು.

ಕೆಪಿಎಸ್‌ಸಿ ಸಂವಿಧಾನಬದ್ಧ ಸಂಸ್ಥೆಯಾಗಿದ್ದು, ಅದರಲ್ಲಿರುವ ಲೋಪಗಳನ್ನು ಸರಿಪಡಿಸಬೇಕೇ ಹೊರತು ಸಂಸ್ಥೆಯನ್ನೇ ದುರ್ಬಲಗೊಳಿಸುವುದು ಸರಿಯಲ್ಲ ಎಂದು ಹೇಳಿದರು. ಆರ್‌ಎಸ್‌ಎಸ್ ಕುರಿತು ಕೇಳಿದ ಪ್ರಶ್ನೆಗೆ, ಶತಮಾನದ ಇತಿಹಾಸವಿರುವ ಸಂಘಟನೆ ತನ್ನ ಬಗ್ಗೆ ತಾನೇ ಉತ್ತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಮುರಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಇದ್ದರು.

ಮಂತ್ರಿಮಂಡಲ ವಿಳಂಬಕ್ಕೆ ಟೀಕೆ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 40 ದಿನಗಳಾದರೂ ಸಚಿವ ಸಂಪುಟ ವಿಸ್ತರಣೆ ಆಗದಿರುವುದನ್ನು ಟೀಕಿಸಿದ ಜೋಶಿ, ಕಾಂಗ್ರೆಸ್ ಆಡಳಿತದಲ್ಲಿ ಸಮನ್ವಯದ ಕೊರತೆ ಸ್ಪಷ್ಟವಾಗಿದೆ. ಆಡಳಿತದ ಜವಾಬ್ದಾರಿಗಿಂತ ರಾಜಕೀಯ ಗೊಂದಲವೇ ಹೆಚ್ಚಾಗಿದೆ ಎಂದು ಲೇವಡಿ ಮಾಡಿದರು.

“ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಕಾಂಗ್ರೆಸ್ ನುಸುಳುಕೋರರು ಹಾಗೂ ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಸುತ್ತಿದೆ.”

– ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ಬೇರ್ಪಟ್ಟ ಬದುಕು ಮತ್ತೆ ಬೆಸೆದ ನ್ಯಾಯಾಲಯ!

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ವರ್ಷಗಳ ಕಾಲ ದೂರವಾಗಿದ್ದ ದಂಪತಿಗಳನ್ನು ಮತ್ತೆ ಒಂದಾಗಿಸುವಲ್ಲಿ ಧಾರವಾಡ ಕುಟುಂಬ ನ್ಯಾಯಾಲಯ ಮಹತ್ವದ ಯಶಸ್ಸು ಸಾಧಿಸಿದೆ. ರಾಜಿ ಸಂಧಾನ ಪ್ರಕ್ರಿಯೆಯಲ್ಲಿ 55 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅವುಗಳಲ್ಲಿ 15 ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಹೊಸ ಬದುಕು ಆರಂಭಿಸಲು ನಿರ್ಧರಿಸಿದ್ದಾರೆ.

ಪುನರ್ಮಿಲನಗೊಂಡ ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟರು. ಕುಟುಂಬ ಸದಸ್ಯರು, ನ್ಯಾಯಾಧೀಶರು ಹಾಗೂ ನ್ಯಾಯಾಲಯದ ಸಿಬ್ಬಂದಿ ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ್ ಮಾತನಾಡಿ, ರಾಜಿ ಸಂಧಾನದ ಮೂಲಕ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ಮುಂದುವರಿಸಲು ಒಪ್ಪಿಕೊಂಡಿದ್ದು, ಸಂತೋಷದಿಂದ ಮನೆಗಳಿಗೆ ತೆರಳಿದ್ದಾರೆ ಎಂದು ತಿಳಿಸಿದರು.

ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ನಾಗರಾಜಪ್ಪ ಎ.ಕೆ. ಅವರ ಮಾಹಿತಿ ಪ್ರಕಾರ, ಪುನರ್ಮಿಲನಗೊಂಡ ದಂಪತಿಗಳಲ್ಲಿ ಕೆಲವರು 5, 10 ಹಾಗೂ 16 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೇವಲ ಮೂರು ತಿಂಗಳ ಸಂಸಾರದ ಬಳಿಕ ದೂರವಾಗಿದ್ದ ದಂಪತಿಯೂ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿರುವುದು ವಿಶೇಷವಾಗಿದೆ.

ದಾಂಪತ್ಯದಲ್ಲಿ ಸಂವಾದ, ಹೊಂದಾಣಿಕೆ ಮತ್ತು ಪರಸ್ಪರ ವಿಶ್ವಾಸದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟ ಪರಿಣಾಮ ಈ ಯಶಸ್ಸು ಸಾಧ್ಯವಾಗಿದೆ. ವಕೀಲರು ಹಾಗೂ ನ್ಯಾಯಾಂಗದ ಸಹಕಾರದಿಂದ ರಾಜಿ ಸಂಧಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು, ಹಲವು ಕುಟುಂಬಗಳಲ್ಲಿ ಮತ್ತೆ ಸಂತಸ ಮೂಡಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅಲ್ಲಪ್ಪ ಎಂ. ಬಡಿಗೇರ ಸೇರಿದಂತೆ ವಕೀಲರು ಉಪಸ್ಥಿತರಿದ್ದರು.

“ಕೌಟುಂಬಿಕ ಸಮಸ್ಯೆಗಳು ಎಲ್ಲರ ಬದುಕಿನಲ್ಲೂ ಬರುತ್ತವೆ. ಆದರೆ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಇದ್ದರೆ ಯಾವುದೇ ಭಿನ್ನಾಭಿಪ್ರಾಯವನ್ನು ನಿವಾರಿಸಿಕೊಂಡು ಸುಖೀ ಜೀವನ ನಡೆಸಬಹುದು.”

– ನಾಗರಾಜಪ್ಪ ಎ.ಕೆ., ನ್ಯಾಯಾಧೀಶರು, ಕುಟುಂಬ ನ್ಯಾಯಾಲಯ

ಕನಸು ದೊಡ್ಡದಿರಲಿ… ಸಾಧನೆ ಅದಕ್ಕಿಂತ ದೊಡ್ಡದಿರಲಿ: ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿಯನ್ನು ಹೊಂದಿ ಕಠಿಣ ಪರಿಶ್ರಮ ಹಾಗೂ ನಿರಂತರ ಅಧ್ಯಯನದ ಮೂಲಕ ಯಶಸ್ಸಿನ ಶಿಖರ ತಲುಪಬೇಕು ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಕರೆ ನೀಡಿದರು.

ಪಟ್ಟಣದ ಹರಹರ ದೇವಸ್ಥಾನದಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿ ಹಾಗೂ ಶಾಸಕ ಕೆ. ನೇಮರಾಜ ನಾಯ್ಕ ಅವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ 10 ದಿನಗಳ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ನಿರಂತರ ಶ್ರಮ ಮತ್ತು ಗುರಿ ಸ್ಪಷ್ಟವಾಗಿರಬೇಕು. ದೊಡ್ಡ ಕನಸು ಕಂಡು ಅದನ್ನು ಸಾಕಾರಗೊಳಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಕಾಡೆಮಿ ಮುಖ್ಯಸ್ಥ ಪ್ರದೀಪ್ ಗುಡ್ಡದ ಪ್ರಾಸ್ತಾವಿಕವಾಗಿ ಮಾತನಾಡಿ, 2017ರಲ್ಲಿ ಆರಂಭವಾದ ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಇದುವರೆಗೆ 6 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ತರಬೇತಿ ಪಡೆದು ವಿವಿಧ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಐಎಎಸ್, ಐಪಿಎಸ್, ಕೆಎಎಸ್, ಕೆಪಿಎಸ್ ಹಾಗೂ ಪಿಎಸ್‌ಐ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದರು. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿರುವ ಶಾಸಕ ಕೆ. ನೇಮರಾಜ ನಾಯ್ಕ ಹಾಗೂ ಹರಹರ ದೇವಸ್ಥಾನ ಸಮಿತಿಯನ್ನು ಅಭಿನಂದಿಸಿದರು.

ಹರಹರ ದೇವಸ್ಥಾನ ಸಮಿತಿ ಅಧ್ಯಕ್ಷ ಅಕ್ಕಿಶಿವಣ್ಣ ಮಾತನಾಡಿ, ಏಕಾಗ್ರತೆ ಮತ್ತು ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂದರು.

ನಂದೀಪುರ ಸುಕ್ಷೇತ್ರದ ಡಾ. ಮಹೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ನವಲಿ ಮಠದ ರುದ್ರಮುನಿ ಸ್ವಾಮೀಜಿ ಹಾಗೂ ಕಡಲಬಾಳು ಗವಿಮಠದ ಮರಿ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ದೇವಿಪ್ರಸಾದ್, ಕಿನ್ನಾಳ್ ಸುಭಾಷ್, ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗವಿಸಿದ್ದೇಶ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 1,000ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

ಒಳಮೀಸಲಾತಿ ಜಾರಿಗೊಳಿಸಿ ಅಂಗನವಾಡಿ ನೇಮಕಾತಿ ನಡೆಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಯಲ್ಲಿ ಸರ್ಕಾರದ ಆದೇಶದಂತೆ ಒಳಮೀಸಲಾತಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಭೀಮ ಶಕ್ತಿ ಸಂಘಟನೆ ವತಿಯಿಂದ ಗದಗ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಭೀಮ ಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ ಮುಗುಳಿ, ರಾಜ್ಯ ಸರ್ಕಾರವು 2026ರ ಮೇ 8ರಂದು ಹೊರಡಿಸಿರುವ ಆದೇಶದ ಪ್ರಕಾರ ಪರಿಶಿಷ್ಟ ಜಾತಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ಹುದ್ದೆಗಳು ಇದ್ದರೆ ಒಳಮೀಸಲಾತಿ ಅನ್ವಯ ನೇಮಕಾತಿ ನಡೆಸುವುದು ಕಡ್ಡಾಯವಾಗಿದೆ. ಆದರೆ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಶಿಶು ಅಭಿವೃದ್ಧಿ ಯೋಜನೆಯಡಿ ಜೂನ್ 22ರಂದು ಪ್ರಕಟಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಈ ನಿಯಮ ಪಾಲನೆಯಾಗಿಲ್ಲ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿಗೆ ಮೂರುಕ್ಕಿಂತ ಹೆಚ್ಚು ಹುದ್ದೆಗಳಿದ್ದರೂ ಒಳಮೀಸಲಾತಿ ಅನ್ವಯಿಸದೇ ನೇಮಕಾತಿ ಪ್ರಕ್ರಿಯೆ ಮುಂದುವರಿಸಿರುವುದು ಸರ್ಕಾರದ ಆದೇಶ ಹಾಗೂ ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ. ಈಗಾಗಲೇ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಿ, ಒಳಮೀಸಲಾತಿ ಅನ್ವಯ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಜುಲೈ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅದಕ್ಕೂ ಮುನ್ನ ಸರ್ಕಾರದ ಆದೇಶದಂತೆ ನೇಮಕಾತಿ ಪ್ರಕ್ರಿಯೆ ತಿದ್ದುಪಡಿ ಮಾಡಬೇಕು. ಇಲ್ಲವಾದರೆ ಕಾನೂನು ಹೋರಾಟದ ಜೊತೆಗೆ ಸಂಬಂಧಿಸಿದ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯ ಕಾನೂನು ಸಲಹೆಗಾರ ಮೈಲಾರಪ್ಪ ಡಿ.ಎಚ್., ಅಣ್ಣಪ್ಪ ಗುತ್ತೇಮ್ಮನವರ, ಅನಿಲ ಸಣ್ಣತಂಗಿಯವರ, ಪ್ರವೀಣ ಅದರಗುಂಚಿ, ಶ್ಯಾಮಸುಂದರ, ಮನು ತುರಾಡಿ, ಸೋಮಣ್ಣ, ಶಿವು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಮಿಥುನ್ ಜಿ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಾಲಕೆರೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಿರ್ಮಿಸಲಾಗುತ್ತಿರುವ ಜಲಸಂಗ್ರಹಾಗಾರದ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಿ ಗ್ರಾಮಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಹೇಳಿದರು.

ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಜಲಸಂಗ್ರಹಾಗಾರಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ಶಾಸಕ ಜಿ.ಎಸ್. ಪಾಟೀಲ ಅವರು ತಮ್ಮ ಶಾಸಕರ ಅನುದಾನದಿಂದ ₹20 ಲಕ್ಷ ಮಂಜೂರು ಮಾಡಿದ್ದು, ಗ್ರಾಮ ಪಂಚಾಯಿತಿಯಿಂದ ₹20 ಲಕ್ಷ ನೀಡಲಾಗುತ್ತಿದೆ. ಒಟ್ಟು ₹40 ಲಕ್ಷ ವೆಚ್ಚದಲ್ಲಿ ಜಲಸಂಗ್ರಹಾಗಾರ ನಿರ್ಮಾಣವಾಗಲಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಲಕೆರೆ ಗ್ರಾಮಕ್ಕೆ ಜಲಸಂಗ್ರಹಾಗಾರದ ಅವಶ್ಯಕತೆ ಬಹಳಷ್ಟಿದ್ದು, ಶಾಸಕ ಜಿ.ಎಸ್. ಪಾಟೀಲ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದರು. ಗ್ರಾಮದಲ್ಲಿ ನೆಡುವ ಸಸಿಗಳನ್ನು ಮರಗಳಾಗುವವರೆಗೆ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಾಲಕೆರೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಂದನಗೌಡ ಪಾಟೀಲ, ರೋಣ ಎಇ ರಶ್ಮಿ, ಗಜೇಂದ್ರಗಡ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶರಣಪ್ಪ ಬೆಟಗೇರಿ ಮಾತನಾಡಿದರು.

ಈ ಸಂದರ್ಭದಲ್ಲಿ ಗಿರೀಶಗೌಡ ಮುಲ್ಕಿಪಾಟೀಲ, ಸಿದ್ದನಗೌಡರ ಇನಾಮತಿ, ಸೊಪ್ಪಯ್ಯ ಸ್ವಾಮಿ ಸೊಪ್ಪಿಹಿರೇಮಠ, ಹೊನ್ನಪ್ಪಗೌಡ ಪಾಟೀಲ, ಪಿಡಿಒ ಶರಣಪ್ಪ ನರೇಗಲ್ಲ, ಶಿವಕುಮಾರ ನಂದಿ, ಅಂದನಗೌಡ ಪಾಟೀಲ, ವೀರಣ್ಣ ಹಳ್ಳಿ, ಅಶೋಕ ಮಾಳಗೌಡರ, ಮಹೇಶ್ ಕುರಿ, ಆನಂದ ಹಳ್ಳಿ, ಪರಶುರಾಮ ತೆಲೆಖಾನ, ರಾಮಪ್ಪ ಪೂಜಾರ, ಶರಣಪ್ಪ ಪೂಜಾರ, ನವೀನ್ ಮಾದಿನೂರ, ಪ್ರವೀಣ ಭೈರಗೊಂಡ, ಬಾಳಪ್ಪ ಕುರಿ, ಮಾಂತೇಶ್ ಪ್ರಭಣ್ಣವರ, ಸಿದ್ದಪ್ಪ ಗೆದಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೇವೆಯಲ್ಲೇ ಸಾರ್ಥಕತೆ ಕಂಡ ಇನ್ನರ್ ವೀಲ್!

0

ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಂಗವಾಗಿ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಆರ್ಥಿಕವಾಗಿ ಹಿಂದುಳಿದ ಶ್ರವಣ ದೋಷವುಳ್ಳ ವಿದ್ಯಾರ್ಥಿನಿ ಪಲ್ಲವಿ ಭಾನಾಪುರ ಅವರಿಗೆ ಶಿಕ್ಷಣ ಮುಂದುವರಿಸಲು ಅಗತ್ಯ ಪಠ್ಯಪೂರಕ ಸಾಮಗ್ರಿಗಳನ್ನು ವಿತರಿಸಲಾಯಿತು. ಬಡ ರೈತ ಮಹಿಳೆ ಪದ್ಮಾವತಿ ಡೊಂಗಡೆ ಅವರಿಗೆ ಕೃಷಿಗೆ ನೆರವಾಗುವಂತೆ ಬೀಜಗಳನ್ನು ವಿತರಿಸಿದರೆ, ಮತ್ತೊಬ್ಬ ಮಹಿಳೆ ಶೈಲಾ ಅಂಗಡಿ ಅವರಿಗೆ ದೈನಂದಿನ ಜೀವನಕ್ಕೆ ನೆರವಾಗುವ ಉದ್ದೇಶದಿಂದ ಮಿಕ್ಸರ್ ಗ್ರೈಂಡರ್ ನೀಡಲಾಯಿತು.

ಈ ಸಂದರ್ಭದಲ್ಲಿ ಡಿಇಎಸ್‌ಒ ವಿರಾಜ ಕೋಟಕ್ ಅವರು ಕ್ಲಬ್‌ನ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪಿಡಿಸಿ ಪ್ರೇಮಾ ಗುಳಗೌಡರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ಜಗತಾಪ್ ಸ್ವಾಗತಿಸಿದರು. ರೇಣುಕಾ ಅಮಾತ್ಯ ಪ್ರಾರ್ಥನೆ ನಡೆಸಿದರೆ, ಸುವರ್ಣ ಮದರಿಮಠ ಇನ್ನರ್ ವೀಲ್ ಪ್ರಾರ್ಥನೆ ನೆರವೇರಿಸಿದರು.

ಪ್ರಸಕ್ತ ಸಾಲಿನ ಅಧ್ಯಕ್ಷೆ ಮಂಜುಳಾ ಅಕ್ಕಿ ವಾರ್ಷಿಕ ಸೇವಾ ಯೋಜನೆಗಳನ್ನು ವಿವರಿಸಿದರು. ಕಾರ್ಯದರ್ಶಿ ಪೂಜಾ ಭೂಮಾ ವಂದಿಸಿದರು. ಜ್ಯೋತಿ ದಾನಪ್ಪಗೌಡರ ಹಾಗೂ ಸ್ಮಿತಾ ಹೊಸೂರ್ ಕಾರ್ಯಕ್ರಮ ನಿರ್ವಹಿಸಿದರು.

ಮೊಸಳೆಯೋ… ಆನೆಯೋ? ಪ್ರಕೃತಿಯ ಈ ಕಲಾಕೃತಿ ನೋಡಿ ಜನ ಅಚ್ಚರಿ!

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರಕೃತಿಯ ಸೃಷ್ಟಿಯ ಮುಂದೆ ಮನುಷ್ಯನ ಕಲ್ಪನೆಯೂ ಕೆಲವೊಮ್ಮೆ ಮಂಕಾಗುತ್ತದೆ. ಅಂತಹ ಅಪರೂಪದ ಪ್ರಕೃತಿ ವೈಚಿತ್ರ್ಯವೊಂದು ನರೇಗಲ್ಲ–ಗದಗ ರಸ್ತೆಯ ಪೆಟ್ರೋಲ್ ಬಂಕ್ ಸಮೀಪದ ಪ್ರಶಾಂತ ಮೇಸ್ತ್ರಿ ಅವರ ಕಾರ್ ಗ್ಯಾರೇಜ್ ಎದುರು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಗಿಡ ಮತ್ತು ಜಾಲಿಗಿಡಗಳ ಸಹಜ ಬೆಳವಣಿಗೆಯಿಂದ ರೂಪುಗೊಂಡಿರುವ ಈ ಆಕಾರ ನೋಡಿದವರಿಗೆ ಒಂದೇ ರೀತಿಯಾಗಿ ಕಾಣುವುದಿಲ್ಲ. ಕೆಲವರಿಗೆ ಅದು ಬಾಯಿ ತೆರೆದು ಬೇಟೆಗೆ ಹೊಂಚು ಹಾಕಿರುವ ಮೊಸಳೆಯಂತೆ ಭಾಸವಾದರೆ, ಮತ್ತೂ ಕೆಲವರಿಗೆ ಸೊಂಡಿಲೆತ್ತಿ ಘೀಳಿಡುತ್ತಿರುವ ಆನೆಯಂತೆ ಕಾಣುತ್ತಿದೆ. ಅದರ ತಲೆ, ಬಾಯಿ ಮತ್ತು ಕೋರೆ ಹಲ್ಲುಗಳಂತಿರುವ ಆಕಾರ ಪ್ರಕೃತಿಯ ಅದ್ಭುತ ಕಲಾಕೃತಿಯಂತೆ ಗೋಚರಿಸುತ್ತಿದೆ.

ವಿಶೇಷವೆಂದರೆ, ಈ ರಚನೆಯನ್ನು ಯಾರೂ ಕೃತಕವಾಗಿ ಸೃಷ್ಟಿಸಿಲ್ಲ. ಯಾವುದೇ ಕೊಂಬೆಗಳನ್ನು ಕತ್ತರಿಸಿ ಅಥವಾ ರೂಪಿಸಿ ಮಾಡದೇ, ಗಿಡಗಳ ಸಹಜ ಬೆಳವಣಿಗೆಯಿಂದಲೇ ಈ ವಿಶಿಷ್ಟ ಆಕಾರ ಮೂಡಿದೆ. ಇದೇ ಕಾರಣಕ್ಕೆ ಈ ಮಾರ್ಗದಲ್ಲಿ ಸಂಚರಿಸುವ ಅನೇಕರು ವಾಹನಗಳನ್ನು ನಿಲ್ಲಿಸಿ ಕೆಲ ಹೊತ್ತು ಈ ಪ್ರಕೃತಿ ವೈಚಿತ್ರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಸ್ಥಳೀಯ ನಿವಾಸಿ ಈರಪ್ಪ ಮಣ್ಣೊಡ್ಡರ ಮಾತನಾಡಿ, “ನಾವು ಇಲ್ಲಿಯೇ ಕೆಲಸ ಮಾಡುತ್ತಿದ್ದರೂ ಈ ರಚನೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ದಾರಿಹೋಕರು ಪದೇಪದೇ ವಾಹನ ನಿಲ್ಲಿಸಿ ನೋಡುತ್ತಿರುವುದನ್ನು ಕಂಡು ಕುತೂಹಲದಿಂದ ಗಮನಿಸಿದಾಗ ಈ ಅಪರೂಪದ ಆಕಾರ ಕಾಣಿಸಿತು. ಇದು ಪ್ರಕೃತಿಯೇ ಮೂಡಿಸಿರುವ ಅದ್ಭುತ ಶಿಲ್ಪ,” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಸೃಷ್ಟಿಯ ರಹಸ್ಯಗಳನ್ನು ಅರಿಯಲು ದೊಡ್ಡ ಕಣ್ಣಲ್ಲ, ಗಮನಿಸುವ ಕಣ್ಣು ಸಾಕು ಎನ್ನುವುದನ್ನು ಈ ಪ್ರಕೃತಿ ಕಲಾಕೃತಿಯೇ ಸಾಬೀತುಪಡಿಸುತ್ತಿದೆ.

ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ! ಸಂಗೀತ ಲೋಕಕ್ಕೆ ಆಘಾತ

0

ಮೈಸೂರು: ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ನಿಧನರಾಗಿದ್ದಾರೆ.

ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಎಸ್. ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು. 1938ರ ಏಪ್ರಿಲ್ 23ರಂದು ಜನಿಸಿದ್ದ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಧ್ವನಿಯ ಮೂಲಕ ಅಚ್ಚಳಿಯದ ಛಾಪು ಮೂಡಿಸಿದ್ದರು.

ಹಳ್ಳಿಯ ಸೊಗಡಿನ ಜನಪದ ಗೀತೆಗಳಿಂದ ಹಿಡಿದು ಶಾಸ್ತ್ರೀಯ, ಭಾವಗೀತೆ ಹಾಗೂ ವಿವಿಧ ಪ್ರಕಾರದ ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದ ಎಸ್. ಜಾನಕಿ ಅವರು ಹಲವು ಭಾಷೆಗಳ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ.

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರರಂಗದಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನದಿಂದ ಸಂಗೀತ ಕ್ಷೇತ್ರದಲ್ಲಿ ತುಂಬಲಾರದ ನಷ್ಟ ಉಂಟಾಗಿದೆ.

ಎಸ್. ಜಾನಕಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಂಗೀತ ಪ್ರೇಮಿಗಳು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.