Home Blog Page 3

UPI ವಹಿವಾಟಿಗೂ ತೆರಿಗೆ ವಿಧಿಸಲು ಕಾಂಗ್ರೆಸ್ ವಿರೋಧ: ‘ಇದು ದೇಶದ ಜನರಿಗೆ ಮಾಡಿದ ಮೋಸ’ – ಸುರ್ಜೇವಾಲಾ ಕಿಡಿ!

0

ಬೆಂಗಳೂರು: ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕೇಂದ್ರದ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ನಾಯಕ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಕ್ರಮ ದೇಶದ ಜನರಿಗೆ ಮಾಡಿದ ಮೋಸ ಎಂದು ಆರೋಪಿಸಿದ್ದಾರೆ.

ಬಡವರು, ಮಧ್ಯಮ ವರ್ಗ ಸೇರಿದಂತೆ ಎಲ್ಲರ ಮೇಲೂ ಇದರ ಪರಿಣಾಮ ಬೀರಲಿದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಅಮೆರಿಕದ ಕಂಪನಿಗಳಿಗೆ ಶರಣಾಗಿದೆ ಎಂದು ಆರೋಪಿಸಿದ ಅವರು, ಯುಪಿಐ ವಹಿವಾಟಿನ ಮೇಲಿನ ಶುಲ್ಕದಿಂದ ಜನರಿಗೆ ಹೊರೆಯಾಗಲಿದೆ ಎಂದಿದ್ದಾರೆ.

ಇತ್ತೀಚಿನ ನಿಯಮದ ಪ್ರಕಾರ, ₹2,000ಕ್ಕಿಂತ ಹೆಚ್ಚಿನ ಮೊತ್ತದ ವ್ಯಕ್ತಿಯಿಂದ-ವ್ಯಾಪಾರಿಗೆ (P2M) ಯುಪಿಐ ವಹಿವಾಟುಗಳಿಗೆ ಅಕ್ಟೋಬರ್ 15ರಿಂದ ಶೇ.0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ವಯವಾಗಲಿದೆ. ₹75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಪ್ರತಿ ವಹಿವಾಟಿಗೆ ಗರಿಷ್ಠ ₹300 ಮಿತಿ ಇದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಯುಪಿಐ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ. ಸರ್ಕಾರದ ಸ್ಪಷ್ಟನೆಯ ಪ್ರಕಾರ, ಈ MDR ಅನ್ನು ಗ್ರಾಹಕರಿಂದ ವಸೂಲಿ ಮಾಡಬಾರದು.

ಈ ಶುಲ್ಕ ವ್ಯವಸ್ಥೆಯನ್ನು ಟೀಕಿಸಿರುವ ಸುರ್ಜೇವಾಲ, ಯುಪಿಐ ಅನ್ನು ಮೋದಿ ಸರ್ಕಾರ ‘ಕಲೆಕ್ಷನ್ ಮಷಿನ್’ ಆಗಿ ಪರಿವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ವಹಿವಾಟು ಶುಲ್ಕವನ್ನು ಎಲ್ಲರಿಗೂ ವಿಸ್ತರಿಸುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.

ಇನ್ನು ರಾಜ್ಯ ಸರ್ಕಾರ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಹಾಡುವಂತೆ ನೀಡಿರುವ ಆದೇಶದ ಬಗ್ಗೆಯೂ ಸುರ್ಜೇವಾಲ ಪ್ರತಿಕ್ರಿಯಿಸಿದ್ದಾರೆ. ಕೇಂದ್ರದ ಮಾರ್ಗಸೂಚಿಗಳಿಗೆ ಬದ್ಧವಾಗಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರ ವಂದೇ ಮಾತರಂಗೆ ಗೌರವ ನೀಡುವ ಕೆಲಸ ಮಾಡಿದೆ. ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಪ್ರಧಾನಮಂತ್ರಿ ಆಗಮಿಸುವ ಸಂದರ್ಭದಲ್ಲಿ ಪೂರ್ಣ ಗೀತೆಯನ್ನು ಹಾಡಲಾಗುತ್ತದೆ. ವಂದೇ ಮಾತರಂ ಹಾಡುವುದಿಲ್ಲ ಎಂದು ಯಾರೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ನಡೆಯುತ್ತಿರುವ ವಿಚಾರವಾಗಿ ಸುರ್ಜೇವಾಲ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಎಸ್‌ಟಿ ಸಮುದಾಯದ ನಾಯಕ ಎಂಬ ಕಾರಣಕ್ಕೆ ಅವರನ್ನು ಎರಡು ಬಾರಿ ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಡಿಕೆ ಸಹೋದರರು, ಸಿದ್ದರಾಮಯ್ಯ, ಭೈರತಿ ಸುರೇಶ್, ಜಮೀರ್ ಅಹ್ಮದ್ ಖಾನ್, ಕೆ.ವಿ. ವೀರೇಂದ್ರ ಪಪ್ಪಿ, ಡಾ. ಜಿ. ಪರಮೇಶ್ವರ್, ನಾರಾ ಭರತ್ ರೆಡ್ಡಿ, ನಾಗೇಂದ್ರ ಹಾಗೂ ದದ್ದಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮೇಲೆ ತನಿಖಾ ಸಂಸ್ಥೆಗಳ ದಾಳಿ ನಡೆದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಎಲ್ಲ ದಾಳಿಗಳಿಗೆ ಪ್ರಮುಖ ಕಾರಣ ಕಾಂಗ್ರೆಸ್‌ನಲ್ಲಿರುವ ಎಸ್‌ಸಿ, ಎಸ್‌ಟಿ ಸಮುದಾಯದ ನಾಯಕರು ಎಂಬುದು ಎಂದು ಸುರ್ಜೇವಾಲ ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರದ ಮುಂದೆ ಕಾಂಗ್ರೆಸ್ ನಾಯಕರು ತಲೆಬಾಗುವುದಿಲ್ಲ. ನಾವೆಲ್ಲರೂ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಇದ್ದೇವೆ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಜನಾರ್ದನ ರೆಡ್ಡಿ ಹಾಗೂ ರೇಣುಕಾಚಾರ್ಯ ಅವರ ವಿರುದ್ಧದ ಪ್ರಕರಣಗಳ ಕುರಿತು ಪ್ರಶ್ನಿಸಿದ ಸುರ್ಜೇವಾಲ, ಅವರ ಮೇಲಿನ ಪ್ರಾಸಿಕ್ಯೂಷನ್ ವಿಚಾರಗಳು ಬಾಕಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

 

ಮತದಾನವೇ ಪ್ರಜಾಪ್ರಭುತ್ವದ ಶಕ್ತಿ: ಶಾಸಕ ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪ್ರಭುತ್ವದ ರಕ್ಷಣೆಗೆ ಮತದಾನದ ಹಕ್ಕು ಪ್ರಬಲ ಅಸ್ತ್ರವಾಗಿದೆ. ಮತದಾನದ ಹಕ್ಕು ಉಳಿದರೆ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ. ಸಂವಿಧಾನದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸಂವಿಧಾನದ ಪೀಠಿಕೆಯ ಆಶಯದಂತೆ ಪ್ರತಿಯೊಬ್ಬರೂ ಬದುಕಬೇಕು. ಎಲ್ಲರಿಗೂ ಸಮಾನ ಅವಕಾಶ ಹಾಗೂ ಸ್ಥಾನಮಾನ ದೊರೆಯಬೇಕು. ಪ್ರಜಾಪ್ರಭುತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ದೇಶದಲ್ಲಿ ಬಡತನ ನಿರ್ಮೂಲನೆಗೆ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಾಮಾಜಿಕ ಸಮಾನತೆಗಾಗಿ ಇನ್ನಷ್ಟು ಪರಿಣಾಮಕಾರಿ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.

ಸರ್ಕಾರ ಜಗಜ್ಯೋತಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಬಸವಣ್ಣನವರ ಅನುಭವ ಮಂಟಪವನ್ನು ಮೊದಲ ಸಂಸತ್ತು ಎಂದು ಪರಿಗಣಿಸಬಹುದು. ಅನುಭವ ಮಂಟಪದ ಆಶಯಗಳು ಹಾಗೂ ಸಂವಿಧಾನದ ಮೌಲ್ಯಗಳಲ್ಲಿ ಸಾಮ್ಯತೆ ಕಾಣಬಹುದು. ಸಂವಿಧಾನದ ಆಶಯಗಳನ್ನು ಗೌರವಿಸಿ ಪಾಲಿಸುವುದರಿಂದಲೇ ದೇಶ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.

ಸಹಾಯಕ ಕಾನೂನು ನೆರವು ಅಭಿರಕ್ಷಕ ಗುರುರಾಜ ಗೌರಿ ಉಪನ್ಯಾಸ ನೀಡಿ, ಪ್ರಜಾಪ್ರಭುತ್ವ ಕೇವಲ ಆಡಳಿತ ವ್ಯವಸ್ಥೆಯಲ್ಲ; ಅದೊಂದು ಜೀವನ ವಿಧಾನವಾಗಿದೆ. ಪ್ರಜಾಪ್ರಭುತ್ವವನ್ನು ಕೇವಲ ಮೇಲ್ನೋಟಕ್ಕೆ ನೋಡುವುದಲ್ಲ, ಅದರ ಮೌಲ್ಯಗಳನ್ನು ಜೀವನದಲ್ಲಿ ಅನುಭವಿಸಿ ಅನುಸರಿಸಬೇಕು ಎಂದರು.

ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆಯಲ್ಲಿ ನೆಲ್ಸನ್ ಮಂಡೇಲಾ ಅವರ ಕೊಡುಗೆಯನ್ನು ಸ್ಮರಿಸಬೇಕು. ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಅದ್ಭುತ ಪ್ರತಿಭೆ ಹಾಗೂ ದೂರದೃಷ್ಟಿಯನ್ನು ಪ್ರತಿಯೊಬ್ಬರೂ ಅರಿಯಬೇಕು. ಸಂವಿಧಾನ ರಚನಾ ಚರ್ಚೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು. ಕಾನೂನುಗಳ ಸಮರ್ಪಕ ಅನುಷ್ಠಾನವಾಗಬೇಕು; ಅವುಗಳ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಷರೀಫ್ ಬಿಳಿಯಲಿ ಹಾಗೂ ಸಂಗಡಿಗರು ಸಂವಿಧಾನದ ಕುರಿತು ಗೀತೆಗಳನ್ನು ಪ್ರಸ್ತುತಪಡಿಸಿದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಆರ್‌ಡಿಪಿಆರ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ, ಎಸ್.ಎನ್. ಬಳ್ಳಾರಿ, ಆದಪ್ಪನವರ, ಬಸವರಾಜ ಕಡೆಮನಿ, ಆನಂದ ಸಿಂಗಾಡೆ, ಮಾರ್ತಾಂಡ ಹಾದಿಮನಿ, ಪ್ರೊ. ಕೆ.ಎಚ್. ಬೇಲೂರ ಸೇರಿದಂತೆ ಜಿಲ್ಲಾ ಜಾಗೃತ ಸಮಿತಿಯ ನಾಮನಿರ್ದೇಶಿತ ಸದಸ್ಯರು, ನಗರಸಭೆ ಸದಸ್ಯರು, ಸಫಾಯಿ ಕರ್ಮಚಾರಿ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ಹಾಗೂ ನಂದಿತಾ ಹಂಪಿಹೊಳಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ಬಿಡಿಸಲಾಗಿದ್ದ ರಂಗೋಲಿ ಗಮನ ಸೆಳೆಯಿತು.

ಮತದಾನದ ಹಕ್ಕು ಉಳಿದರೆ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ. ಸಂವಿಧಾನವನ್ನು ಗೌರವಿಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.

— ಡಾ. ಎಚ್.ಕೆ. ಪಾಟೀಲ, ಶಾಸಕ

ಗಣೇಶೋತ್ಸವಕ್ಕೆ ಮಾತ್ರ ‘ಪೊಲೀಸ್ ಗಿರಿ’ ಏಕೆ? ಶಾಸಕ ಸಿ.ಸಿ. ಪಾಟೀಲ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ: ಗಣೇಶೋತ್ಸವ ಸೇರಿದಂತೆ ಹಿಂದೂಗಳ ಹಬ್ಬಗಳ ಆಚರಣೆಗೆ ಅನಗತ್ಯ ನಿರ್ಬಂಧ ವಿಧಿಸುವುದು, ಧ್ವನಿವರ್ಧಕ, ಪಟಾಕಿ ಹಾಗೂ ಮೆರವಣಿಗೆ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಬಂದಾಗ ಮಾತ್ರ ಪೊಲೀಸರು ವಿವಿಧ ಷರತ್ತುಗಳನ್ನು ವಿಧಿಸುತ್ತಾರೆ. ಇತರ ಸಮುದಾಯಗಳ ಹಬ್ಬಗಳಲ್ಲಿ ಡಿಜೆ, ಬೆಳಕು ಹಾಗೂ ಪೆಂಡಾಲ್‌ಗಳಿಗೆ ಅನುಮತಿ ನೀಡಲಾಗುತ್ತದೆ. ಹೀಗಿರುವಾಗ ಹಿಂದೂಗಳ ಹಬ್ಬಗಳಿಗೆ ಮಾತ್ರ ಹೆಚ್ಚಿನ ನಿಯಮ ಏಕೆ? ಎಲ್ಲ ಧರ್ಮಗಳ ಹಬ್ಬಗಳಿಗೂ ಒಂದೇ ರೀತಿಯ ನಿಯಮ ಅನ್ವಯಿಸಬೇಕು ಎಂದು ಒತ್ತಾಯಿಸಿದರು.

ಪರಿಸರ ಮಾಲಿನ್ಯದ ಹೆಸರಿನಲ್ಲಿ ಗಣೇಶೋತ್ಸವದ ವೇಳೆ ಪಟಾಕಿ ಸಿಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತದೆ. ಆದರೆ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ವಿಚಾರದಲ್ಲಿ ಇದೇ ರೀತಿಯ ಕಾಳಜಿ ಏಕೆ ತೋರುವುದಿಲ್ಲ ಎಂದು ಪ್ರಶ್ನಿಸಿದರು. ಗದಗ ಜಿಲ್ಲೆಯಲ್ಲಿ ಎಲ್ಲ ಧರ್ಮಗಳ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸುವ ಪರಂಪರೆಯಿದ್ದು, ಅದನ್ನು ಮುಂದುವರಿಸಬೇಕು ಎಂದರು.

ಟಿ. ನರಸೀಪುರದ ಹಿಂದೂ ಕಾರ್ಯಕರ್ತರ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಹಾಗೂ ನಡೆ ಖಂಡನೀಯ. ಇಂತಹ ನಡೆ ಸಮಾಜದಲ್ಲಿ ವಿಭಜನೆಯ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದರು. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಅಂಗವಾಗಿ ಸೆ.17ರಿಂದ ಅ.17ರವರೆಗೆ ಬಿಜೆಪಿ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಸ್ವಚ್ಛತಾ ಅಭಿಯಾನ, ಗಿಡ ನೆಡುವುದು, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಭೇಟಿ, ಬೀದಿ ನಾಟಕ, ಸೇವಾ ಜ್ಯೋತಿ ಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ನಿರ್ಮಲಾ ಕೊಳ್ಳಿ, ಉಷಾ ದಾಸರ, ಲಿಂಗರಾಜ ಪಾಟೀಲ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಬರ ಘೋಷಣೆಗೆ ಸೆ.23ರ ನಿರೀಕ್ಷೆ

ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ವಿಚಾರದಲ್ಲಿ ಆಶಾಭಾವನೆ ಹೊಂದಿದ್ದೇವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರೂ ಎಲ್ಲ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ವಿಧಾನಮಂಡಲ ಅಧಿವೇಶನದಲ್ಲಿ ಬರ ಪರಿಸ್ಥಿತಿ ಕುರಿತು ಚರ್ಚೆಯಾಗಲಿದ್ದು, ಸೆ.23ರಂದು ಬರ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.

ಸಚಿವ ಬಾಲಕೃಷ್ಣ ಹೇಳಿಕೆಗೆ ಮುತ್ತು ರಾಯರಡ್ಡಿ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ನರಗುಂದ: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೋಲಿಕೆ ಮಾಡಿ ಸಚಿವ ಎಚ್.ಸಿ. ಬಾಲಕೃಷ್ಣ ಅವರು ನೀಡಿರುವ ಹೇಳಿಕೆಯನ್ನು ತಾಲೂಕಿನ ಚಿಕ್ಕ ನರಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.

ಕುಮಾರಸ್ವಾಮಿ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ಹಾಗೂ ಪ್ರಸ್ತುತ ಕೇಂದ್ರ ಸಚಿವರಾಗಿ ಸಾರ್ವಜನಿಕ ಜೀವನದಲ್ಲಿ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಅಂತಹ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೋಲಿಕೆ ಮಾಡುವುದು ಅವರ ಸ್ಥಾನಮಾನಕ್ಕೆ ಅಗೌರವ ತೋರಿದಂತಾಗಿದೆ ಎಂದು ಮುತ್ತು ರಾಯರಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು, ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ ಟೀಕಿಸುವ ಭರದಲ್ಲಿ ವ್ಯಕ್ತಿಯ ಸ್ಥಾನಮಾನವನ್ನು ಹಗುರವಾಗಿ ಕಾಣುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಸಚಿವ ಬಾಲಕೃಷ್ಣ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ಕುಮಾರಸ್ವಾಮಿ ಅವರ ಬಗ್ಗೆ ಗೌರವಯುತವಾಗಿ ಮಾತನಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕುಮಾರಸ್ವಾಮಿ ಅವರು ಗ್ರಾಮ ಪಂಚಾಯಿತಿ ಸದಸ್ಯರಲ್ಲ, ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು. ಅವರನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೋಲಿಕೆ ಮಾಡಿರುವುದು ಖಂಡನೀಯ. ರಾಜಕೀಯ ಟೀಕೆಗಳಿಗೆ ಮಿತಿಯಿರಬೇಕು. ವೈಯಕ್ತಿಕವಾಗಿ ಅಥವಾ ಸ್ಥಾನಮಾನವನ್ನು ಹಗುರಗೊಳಿಸುವ ರೀತಿಯಲ್ಲಿ ಮಾತನಾಡುವುದು ರಾಜಕೀಯ ಸಂಸ್ಕೃತಿಯಲ್ಲ ಎಂದು ಮುತ್ತು ರಾಯರಡ್ಡಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರ ರಾಜಕೀಯ ಹೇಳಿಕೆಗಳಿಗೆ ಸಚಿವ ಬಾಲಕೃಷ್ಣ ಅವರು ವಿಚಾರಾಧಾರಿತವಾಗಿ ಉತ್ತರಿಸಲಿ. ಆದರೆ ಕೇಂದ್ರ ಸಚಿವರ ಸ್ಥಾನಮಾನವನ್ನು ಕಡೆಗಣಿಸಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೋಲಿಕೆ ಮಾಡಿರುವುದು ಸರಿಯಾದ ನಡೆಯಲ್ಲ. ಸಾರ್ವಜನಿಕ ಜೀವನದಲ್ಲಿರುವವರು ಪರಸ್ಪರರ ಸ್ಥಾನಮಾನಕ್ಕೆ ಗೌರವ ನೀಡುವ ಮೂಲಕ ಆರೋಗ್ಯಕರ ರಾಜಕೀಯ ಸಂಸ್ಕೃತಿ ಬೆಳೆಸಬೇಕು ಎಂದು ಮುತ್ತು ರಾಯರಡ್ಡಿ ಹೇಳಿದ್ದಾರೆ.

ಕ್ರೀಡೆಯಲ್ಲಿ ನಿರಂತರ ಪ್ರಯತ್ನವೇ ಮುಖ್ಯ: ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ, ಕ್ರೀಡಾಸ್ಫೂರ್ತಿ ಹಾಗೂ ನಿರಂತರ ಪ್ರಯತ್ನವೇ ಮುಖ್ಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಸಮೀಪದ ಒಡೆಯರ ಮಲ್ಲಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ನಡೆದ ಶಿಗ್ಲಿ ಗ್ರೂಪ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸುವುದರ ಜತೆಗೆ ನಾಯಕತ್ವ ಗುಣ, ಆತ್ಮವಿಶ್ವಾಸ, ಶಿಸ್ತು ಹಾಗೂ ತಂಡಭಾವ ಬೆಳೆಸುತ್ತವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ನೆಲೆಸಲು ಸಾಧ್ಯ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸ್ಥೈರ್ಯವೂ ವೃದ್ಧಿಯಾಗುತ್ತದೆ ಎಂದರು.

ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದಾಗ ಅಹಂಕಾರಪಡದೆ, ಸೋಲು ಎದುರಾದಾಗ ಕುಗ್ಗದೆ, ತಮ್ಮ ತಪ್ಪುಗಳನ್ನು ವಿಶ್ಲೇಷಿಸಿಕೊಂಡು ಮುಂದಿನ ಸಾಧನೆಗೆ ಸಿದ್ಧರಾಗಬೇಕು. ಕ್ರೀಡೆಯಿಂದ ಶಿಸ್ತು, ಸಮಯಪ್ರಜ್ಞೆ, ಸಹಕಾರ ಮನೋಭಾವ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಶಾಲೆಗಳು ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು ಎಂದು ಲಮಾಣಿ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗರಾಜ ಕಳಸಾಪುರ ಮಾತನಾಡಿ, ಕ್ರೀಡೆಯು ದೈಹಿಕ ಆರೋಗ್ಯದ ಜತೆಗೆ ಆತ್ಮವಿಶ್ವಾಸ, ಶಿಸ್ತು, ಸಮಯಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮೊಬೈಲ್, ಟಿವಿಯಂತಹ ಸಾಧನಗಳಿಗೆ ಹೆಚ್ಚು ಸಮಯ ಮೀಸಲಿಡುವ ಬದಲು ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.

ಬಿಆರ್‌ಸಿ ಎಸ್.ಕೆ. ಹವಾಲ್ದಾರ್, ಬಿ.ಎಂ. ಯರಗುಪ್ಪಿ, ಸಿಆರ್‌ಪಿ ಜ್ಯೋತಿ ಗಾಯಕವಾಡ, ಕೆ.ಆರ್. ಲಮಾಣಿ, ಎಚ್‌ಎಂ ಸಪ್ಪಿನ, ಗಂಗಾಧರ ಮೆಣಸಿನಕಾಯಿ, ಅಶೋಕ ಮೆಣಸಿನಕಾಯಿ, ಭೀಮಣ್ಣ ಯಂಗಾಡಿ ಉಪಸ್ಥಿತರಿದ್ದರು.

ಪ್ರವೀಣ ಗಾಯಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸಿದ್ದಣ್ಣ ಬೆಟಗೇರಿ ಪ್ರತಿಜ್ಞಾವಿಧಿ ಬೋಧಿಸಿದರು. ಅರ್ಜುನ ವಠಾರ ವಂದಿಸಿದರು. ರೂಪಾ ಮನ್ನಂಗಿ ನಿರೂಪಿಸಿದರು. ಒಡೆಯರ ಮಲ್ಲಾಪುರ, ಶಿಗ್ಲಿ ಹಾಗೂ ರಾಮಗೇರಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕ್ರೀಡೆಯಲ್ಲಿ ಗೆಲುವು ಸಾಧಿಸಿದಾಗ ಅಹಂಕಾರಪಡದೆ, ಸೋಲಿನಿಂದ ಕುಗ್ಗದೆ ತಪ್ಪುಗಳನ್ನು ವಿಶ್ಲೇಷಿಸಿಕೊಂಡು ಮುಂದಿನ ಸಾಧನೆಗೆ ಸಿದ್ಧರಾಗಬೇಕು.

— ಡಾ. ಚಂದ್ರು ಲಮಾಣಿ, ಶಾಸಕ

ರಿಂಕು ಸಿಂಗ್-ಪ್ರಿಯಾ ಸರೋಜ್ ಮದುವೆಗೆ ದಿನಾಂಕ ಫಿಕ್ಸ್: ಡಿಸೆಂಬರ್ 4ರಂದು ಲಕ್ನೋದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಜೋಡಿ

0

ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ವಿವಾಹದ ದಿನಾಂಕ ನಿಗದಿಯಾಗಿದೆ ಎನ್ನಲಾಗಿದೆ. ಡಿಸೆಂಬರ್ 4ರಂದು ಲಕ್ನೋದ ರಾಮದಾ ಹೋಟೆಲ್‌ನಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ವಿವಾಹ ಸಮಾರಂಭದ ಸಿದ್ಧತೆಗಳು ಆರಂಭವಾಗಿದ್ದು, ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು ಸೇರಿದಂತೆ ಕ್ರಿಕೆಟ್ ಹಾಗೂ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರು 2025ರ ಜೂನ್ 8ರಂದು ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ಬಳಿಕ 2025ರ ನವೆಂಬರ್‌ನಲ್ಲಿ ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ವಿವಾಹ ನಡೆಯಲಿದೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ರಿಂಕು ಸಿಂಗ್ ಅವರ ಕ್ರಿಕೆಟ್ ಬದ್ಧತೆಗಳ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿತ್ತು.

ಬಳಿಕ 2026ರ ಫೆಬ್ರವರಿಯಲ್ಲಿ ಮದುವೆ ನಡೆಸಲು ಯೋಜಿಸಲಾಗಿತ್ತು ಎನ್ನಲಾಗಿತ್ತು. ಆದರೆ ಟಿ20 ವಿಶ್ವಕಪ್ ಸೇರಿದಂತೆ ಹಲವು ಪ್ರಮುಖ ಕ್ರಿಕೆಟ್ ಪಂದ್ಯಗಳು ಇದೇ ಅವಧಿಯಲ್ಲಿ ಇದ್ದ ಕಾರಣ ವಿವಾಹವನ್ನು ಮತ್ತೊಮ್ಮೆ ಮುಂದೂಡಲಾಗಿತ್ತು. ಇದೀಗ ಡಿಸೆಂಬರ್ 4ರಂದು ವಿವಾಹ ನೆರವೇರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಪ್ರಿಯಾ ಸರೋಜ್ ಅವರಿಗೆ ತಮ್ಮ ಸ್ವಗ್ರಾಮದ ವಾತಾವರಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಬೇಕೆಂಬ ಆಸೆ ಇತ್ತು ಎನ್ನಲಾಗಿದೆ. ಅವರ ಕುಟುಂಬದಲ್ಲಿ ಹಲವು ವಿವಾಹಗಳು ಗ್ರಾಮೀಣ ಶೈಲಿಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ, ಬಾಲ್ಯದಿಂದಲೂ ಮಂಟಪ, ಸಂಬಂಧಿಕರು ಹಾಗೂ ಇಡೀ ಕುಟುಂಬದ ಸಮ್ಮುಖದಲ್ಲಿ ಹಳ್ಳಿಯ ವಾತಾವರಣದಲ್ಲಿ ಮದುವೆಯಾಗುವ ಕಲ್ಪನೆ ಹೊಂದಿದ್ದರು ಎಂದು ವರದಿಯಾಗಿದೆ.

ಆದರೆ ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಇಬ್ಬರೂ ಸಾರ್ವಜನಿಕವಾಗಿ ಹೆಚ್ಚು ಪರಿಚಿತರಾಗಿರುವುದರಿಂದ, ಹೆಚ್ಚಿನ ಅತಿಥಿಗಳಿಗೆ ಅನುಕೂಲವಾಗುವಂತೆ ವಿವಾಹ ಸಮಾರಂಭವನ್ನು ಲಕ್ನೋದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ಸಮಾರಂಭವೂ ಲಕ್ನೋದಲ್ಲಿಯೇ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಕ್ರಿಕೆಟ್ ಹಾಗೂ ರಾಜಕೀಯ ಕ್ಷೇತ್ರದ ಹಲವು ಪ್ರಮುಖರು ಭಾಗವಹಿಸಿದ್ದರು. ಹೀಗಾಗಿ ವಿವಾಹಕ್ಕೂ ಲಕ್ನೋವನ್ನೇ ಆಯ್ಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದರ ಜೊತೆಗೆ ಪ್ರಿಯಾ ಸರೋಜ್ ಉತ್ತರ ಪ್ರದೇಶದ ರಾಜಕೀಯದಲ್ಲಿ ಸಕ್ರಿಯರಾಗಿರುವ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ವಿವಾಹ ಆಯೋಜಿಸಿರುವುದು ಮತ್ತೊಂದು ಕಾರಣವಾಗಿರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ವಿವಾಹ ಸಮಾರಂಭದತ್ತ ರಾಜಕೀಯ ವಲಯದ ಗಮನವೂ ಹರಿಯುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಹಲವು ಬಾರಿ ಮುಂದೂಡಿಕೆಯಾಗಿದ್ದ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರ ವಿವಾಹ ಇದೀಗ ಡಿಸೆಂಬರ್ 4ರಂದು ಲಕ್ನೋದಲ್ಲಿ ನಡೆಯಲಿದೆ ಎಂಬ ವರದಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.

Crime News: ಇಬ್ಬರು ಯುವಕರ ಜೊತೆ ಟ್ರಿಪ್‌ಗೆ ಬಂದಿದ್ದ ಯುವತಿ ಲಾಡ್ಜ್‌ನಲ್ಲಿ ಅನುಮಾನಾಸ್ಪದ ಸಾವು!

0

ಹಾಸನ: ಲಾಡ್ಜ್‌ನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಬೆಂಗಳೂರಿನ ನಾಗಸಂದ್ರ ನಿವಾಸಿ ವರ್ಷ (23) ಎಂದು ಗುರುತಿಸಲಾಗಿದೆ. ವರ್ಷ ತನ್ನ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಜೊತೆ ಶುಕ್ರವಾರ ಟ್ರಿಪ್‌ಗೆಂದು ಸಕಲೇಶಪುರಕ್ಕೆ ಬಂದಿದ್ದಳು.

ಮೂವರು ಶನಿವಾರ, ಭಾನುವಾರ ಹಾಗೂ ಸೋಮವಾರ ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಫಾಲ್ಸ್ ಸೇರಿದಂತೆ ಸಕಲೇಶಪುರದ ಹಲವು ಪ್ರವಾಸಿ ತಾಣಗಳಿಗೆ ತೆರಳಿ ಸುತ್ತಾಡಿದ್ದರು. ಬಳಿಕ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್‌ನಲ್ಲಿ ಒಂದೇ ಕೊಠಡಿಯಲ್ಲಿ ತಂಗಿದ್ದರು.

ಮಂಗಳವಾರ ಲಾಡ್ಜ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. ಕೂಡಲೇ ರಘು ಹಾಗೂ ದರ್ಶನ್ ಯುವತಿಯನ್ನು ಸಕಲೇಶಪುರ ತಾಲೂಕು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಯುವತಿ ಸಾವನ್ನಪ್ಪಿರುವ ಕುರಿತು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಸ್ಕಾಂ ಗ್ರಾಹಕರೇ ಗಮನಿಸಿ; 20 ಪಟ್ಟಣಗಳಲ್ಲಿ ಆನ್‌ಲೈನ್ ಸೇವೆ ತಾತ್ಕಾಲಿಕ ಸ್ಥಗಿತ

0

ಬೆಂಗಳೂರು: ಸಾಫ್ಟ್‌ವೇರ್ ಅಪ್‌ಗ್ರೇಡ್ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ.

ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿವರೆಗೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್ ಸ್ಕೀಮ್ (IPDS) ಐಟಿ ಹಂತ-2 ಯೋಜನೆಯಡಿ 20 ಪಟ್ಟಣಗಳಲ್ಲಿ ಹೊಸ ಸಾಫ್ಟ್‌ವೇರ್ ಅಪ್ಲಿಕೇಶನ್ ಅಳವಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ TRM (Total Revenue Management) ಸಾಫ್ಟ್‌ವೇರ್ ಬದಲಾಯಿಸಿ, ಗ್ರಾಹಕರ ದತ್ತಾಂಶವನ್ನು ಹೊಸ ವ್ಯವಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ.

ಈ ಅವಧಿಯಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ, ಹೆಸರು ಬದಲಾವಣೆ, ಲೋಡ್ ಹೆಚ್ಚಳಕ್ಕೆ ಮನವಿ ಹಾಗೂ ಆನ್‌ಲೈನ್ ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಪ್ರಮುಖ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ.

ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆ ಪಟ್ಟಣಗಳಲ್ಲಿ ಈ ವ್ಯತ್ಯಯ ಇರಲಿದೆ.

ಆದರೆ ವಿದ್ಯುತ್‌ಗೆ ಸಂಬಂಧಿಸಿದ ತುರ್ತು ಸಮಸ್ಯೆಗಳಿಗಾಗಿ ಬೆಸ್ಕಾಂನ 24×7 ಸಹಾಯವಾಣಿ 1912ಕ್ಕೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

ಚೌಡೇಶ್ವರಿ ಪೂಜೆ ಹೆಸರಿನಲ್ಲಿ ಚಿನ್ನ ಪಡೆದುಕೊಂಡ ಜ್ಯೋತಿಷಿ; AI ವಿಡಿಯೋದಿಂದ ಕಳ್ಳಾಟ ಬಯಲು

0

ಬೆಂಗಳೂರು: ಜ್ಯೋತಿಷ್ಯ ಹಾಗೂ ಚೌಡೇಶ್ವರಿ ಪೂಜೆ ಮಾಡುವ ನೆಪದಲ್ಲಿ ವೃದ್ಧೆಯೊಬ್ಬರಿಂದ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬ್ಯಾಟರಾಯನಪುರದ 62 ವರ್ಷದ ಶಾಂತಮ್ಮ ವಂಚನೆಗೊಳಗಾದ ಮಹಿಳೆ. ವೆಂಕಟೇಶ್ ಎಂಬಾತ ವಂಚನೆ ನಡೆಸಿದ್ದಾನೆ. ಮೂಲತಃ ವಿಕ್ಟೋರಿಯಾ ಆಸ್ಪತ್ರೆಯ ಫುಟ್‌ಪಾತ್‌ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್‌ಗೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದ ಶಾಂತಮ್ಮ ಅವರ ಪರಿಚಯವಾಗಿತ್ತು.

ಶಾಂತಮ್ಮ ಅವರ ಕೌಟುಂಬಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ತಿಳಿದುಕೊಂಡ ವೆಂಕಟೇಶ್, ಮನೆಗೆ ಬಂದು ಚೌಡೇಶ್ವರಿ ಪೂಜೆ ಮಾಡಿದ್ದ. ಪೂಜೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಬಳಿಕ ಮಗನ ಕುಡಿತ ಹಾಗೂ ಮಗಳ ಮದುವೆಯ ವಿಚಾರವಾಗಿಯೂ ಮಾತನಾಡಿದ್ದ.

ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ಹೇಳಿ, ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಒಡವೆಗಳನ್ನು ಪಡೆದುಕೊಂಡಿದ್ದ. ಹೀಗೆ ಕಳೆದ ಒಂದು ವರ್ಷದಲ್ಲಿ ಹಂತ ಹಂತವಾಗಿ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ.

AI ವಿಡಿಯೋ ಮೂಲಕ ಅಪಘಾತದ ನಾಟಕ:

ಆಗಸ್ಟ್ 19ರಂದು ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಶಾಂತಮ್ಮ ಕೇಳಿದ್ದರು. ಈ ವೇಳೆ ವೆಂಕಟೇಶ್ ತನಗೆ ಭೀಕರ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವುದಾಗಿ ಬೇರೊಬ್ಬರಿಂದ ಕರೆ ಮಾಡಿಸಿದ್ದ.

ಜೊತೆಗೆ ತಲೆಗೆ ಗಂಭೀರ ಗಾಯವಾಗಿರುವಂತೆ ತೋರಿಸುವ AI ಮೂಲಕ ಸೃಷ್ಟಿಸಿದ ನಕಲಿ ವಿಡಿಯೋವನ್ನು ಶಾಂತಮ್ಮ ಅವರಿಗೆ ಕಳುಹಿಸಿ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.

ವಿಡಿಯೋ ಬಗ್ಗೆ ಅನುಮಾನಗೊಂಡ ಶಾಂತಮ್ಮ, ಅದನ್ನು ತಮ್ಮ ಮಕ್ಕಳಿಗೆ ತೋರಿಸಿದ್ದಾರೆ. ಪರಿಶೀಲಿಸಿದಾಗ ಅದು AI ಮೂಲಕ ಸೃಷ್ಟಿಸಿದ ನಕಲಿ ವಿಡಿಯೋ ಎಂಬುದು ಗೊತ್ತಾಗಿದೆ.

ಬಳಿಕ ಶಾಂತಮ್ಮ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೆಂಕಟೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮದುವೆಯಾಗಿ ಒಂದೂವರೆ ತಿಂಗಳಲ್ಲೇ ದುರಂತ: ಹಿಟ್ ಅಂಡ್ ರನ್‌ಗೆ ನವದಂಪತಿ ಬಲಿ

0

ತುಮಕೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಮೃತರನ್ನು ಶಿರಾ ತಾಲೂಕಿನ ಹುಣಸೇಕಟ್ಟೆ ಗ್ರಾಮದ ದರ್ಶನ್ (25) ಹಾಗೂ ಉಷಾರಾಣಿ (21) ಎಂದು ಗುರುತಿಸಲಾಗಿದೆ. ದಂಪತಿ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

ಮಂಗಳವಾರ ಬೈಕ್‌ನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಉಷಾರಾಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.