Home Blog Page 4

ಮದುವೆಯಾಗಿ ಒಂದೂವರೆ ತಿಂಗಳಲ್ಲೇ ದುರಂತ: ಹಿಟ್ ಅಂಡ್ ರನ್‌ಗೆ ನವದಂಪತಿ ಬಲಿ

0

ತುಮಕೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಮೃತರನ್ನು ಶಿರಾ ತಾಲೂಕಿನ ಹುಣಸೇಕಟ್ಟೆ ಗ್ರಾಮದ ದರ್ಶನ್ (25) ಹಾಗೂ ಉಷಾರಾಣಿ (21) ಎಂದು ಗುರುತಿಸಲಾಗಿದೆ. ದಂಪತಿ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

ಮಂಗಳವಾರ ಬೈಕ್‌ನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಉಷಾರಾಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಡಿಮೆ ಬೆಲೆಗೆ ಸಿಗುತ್ತೆ ಅಂತ ಆನ್ ಲೈನ್ʼನಲ್ಲಿ ಔಷಧಿ ಖರೀದಿಸ್ತೀರಾ? ಈ ತಪ್ಪುಗಳು ಆರೋಗ್ಯಕ್ಕೆ ಅಪಾಯ ತರಬಹುದು

0

ತರಕಾರಿ ಅಥವಾ ಹಣ್ಣು ಖರೀದಿಸುವಾಗ ಗುಣಮಟ್ಟ ನೋಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇವೆ. ಆದರೆ ನಮ್ಮ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದ ಔಷಧಿ ಖರೀದಿಸುವಾಗ ಮಾತ್ರ ಕೆಲವೊಮ್ಮೆ ಗಡಿಬಿಡಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಎಕ್ಸ್‌ಪೈರಿ ದಿನಾಂಕ ಪರಿಶೀಲಿಸದೇ ಇರುವುದು, ವೈದ್ಯರ ಸಲಹೆಯಿಲ್ಲದೆ ಔಷಧಿ ತೆಗೆದುಕೊಳ್ಳುವುದು ಅಥವಾ ಅಪರಿಚಿತ ಆನ್‌ಲೈನ್‌ ತಾಣಗಳಿಂದ ಮಾತ್ರೆ ಖರೀದಿಸುವುದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಔಷಧಿ ಖರೀದಿಸುವಾಗ ಪ್ರತಿಯೊಬ್ಬರೂ ತಪ್ಪದೇ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

1. ಎಕ್ಸ್‌ಪೈರಿ ದಿನಾಂಕ ನೋಡದೆ ಮಾತ್ರೆ ಖರೀದಿಸಬೇಡಿ

ಔಷಧಿ ತೆಗೆದುಕೊಳ್ಳುವ ಮೊದಲು ಅದರ ಪ್ಯಾಕೆಟ್‌ನಲ್ಲಿರುವ ತಯಾರಿಕಾ ದಿನಾಂಕ ಮತ್ತು ಎಕ್ಸ್‌ಪೈರಿ ದಿನಾಂಕ ಪರಿಶೀಲಿಸಿ. ಅವಧಿ ಮೀರಿದ ಔಷಧಿಯನ್ನು ಬಳಸುವುದರಿಂದ ಅದರ ಪರಿಣಾಮಕಾರಿತ್ವ ಕಡಿಮೆಯಾಗಬಹುದು ಅಥವಾ ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು.

ಹೀಗಾಗಿ ಔಷಧಿಯ ಪ್ಯಾಕೆಟ್ ಕೈಗೆ ಸಿಕ್ಕ ತಕ್ಷಣ ದಿನಾಂಕ ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ.

2. ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್ ಬೇಡ

ಜ್ವರ, ಶೀತ, ಗಂಟಲು ನೋವು ಅಥವಾ ಇತರ ಸಾಮಾನ್ಯ ಸಮಸ್ಯೆಗಳಿಗೆ ಸ್ವಯಂ ನಿರ್ಧಾರದಿಂದ ಆ್ಯಂಟಿಬಯೋಟಿಕ್‌ ತೆಗೆದುಕೊಳ್ಳುವುದು ಸರಿಯಲ್ಲ. ಅಗತ್ಯವಿಲ್ಲದೆ ಅಥವಾ ತಪ್ಪಾದ ರೀತಿಯಲ್ಲಿ ಆ್ಯಂಟಿಬಯೋಟಿಕ್‌ ಬಳಸಿದರೆ ಆ್ಯಂಟಿಮೈಕ್ರೋಬಿಯಲ್‌ ರೆಸಿಸ್ಟೆನ್ಸ್‌ (AMR) ಉಂಟಾಗುವ ಅಪಾಯವಿದೆ.

ಅದೇ ರೀತಿ ನಿದ್ದೆ ಮಾತ್ರೆಗಳು ಸೇರಿದಂತೆ ವೈದ್ಯರ ಪ್ರಿಸ್ಕ್ರಿಪ್ಷನ್‌ ಅಗತ್ಯವಿರುವ ಔಷಧಿಗಳನ್ನು ಸ್ವಂತ ನಿರ್ಧಾರದಿಂದ ಖರೀದಿಸಿ ಸೇವಿಸಬಾರದು.

3. ಔಷಧಿ ಖರೀದಿಸಿದರೆ ಬಿಲ್‌ ಪಡೆಯಿರಿ

ಮೆಡಿಕಲ್‌ ಶಾಪ್‌ನಲ್ಲಿ ಔಷಧಿ ಖರೀದಿಸುವಾಗ ಬಿಲ್‌ ಪಡೆಯುವುದನ್ನು ಮರೆಯಬೇಡಿ. ಬಿಲ್‌ನಲ್ಲಿ ಔಷಧಿಯ ಹೆಸರು, ಬೆಲೆ ಹಾಗೂ ಮಾರಾಟದ ವಿವರಗಳಂತಹ ಮಾಹಿತಿಗಳು ಇರುತ್ತವೆ.

ಮುಂದೆ ಔಷಧಿಯಿಂದ ಯಾವುದೇ ಸಮಸ್ಯೆ ಉಂಟಾದರೆ ಅಥವಾ ಉತ್ಪನ್ನದ ಬಗ್ಗೆ ದೂರು ನೀಡಬೇಕಾದ ಪರಿಸ್ಥಿತಿ ಬಂದರೆ ಬಿಲ್‌ ಪ್ರಮುಖ ದಾಖಲೆ ಆಗಬಹುದು. ಆನ್‌ಲೈನ್‌ನಲ್ಲಿ ಖರೀದಿಸಿದರೆ ಡಿಜಿಟಲ್‌ ಇನ್ವಾಯ್ಸ್‌ ಅನ್ನು ಉಳಿಸಿಕೊಳ್ಳಿ.

4. ಕಡಿಮೆ ಬೆಲೆಯ ಆಸೆಗೆ ಅಪರಿಚಿತ ವೆಬ್‌ಸೈಟ್‌ಗಳಿಂದ ಔಷಧಿ ಬೇಡ

ಆನ್‌ಲೈನ್‌ನಲ್ಲಿ ಭಾರಿ ರಿಯಾಯಿತಿ ಸಿಗುತ್ತಿದೆ ಎಂಬ ಕಾರಣಕ್ಕೆ ಅಪರಿಚಿತ ವೆಬ್‌ಸೈಟ್‌, ಸಾಮಾಜಿಕ ಜಾಲತಾಣ ಅಥವಾ ವಾಟ್ಸ್‌ಆ್ಯಪ್‌ ಲಿಂಕ್‌ ಮೂಲಕ ಔಷಧಿ ಖರೀದಿಸುವುದು ಅಪಾಯಕಾರಿ.

ಆನ್‌ಲೈನ್‌ ಮೂಲಕ ಔಷಧಿ ಪಡೆಯುವಾಗ ವಿಶ್ವಾಸಾರ್ಹ ಮತ್ತು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಸೇವೆಯನ್ನು ಬಳಸುವುದರ ಜೊತೆಗೆ, ಪ್ಯಾಕೆಟ್‌ನ ಸೀಲ್‌, ಪ್ಯಾಕಿಂಗ್‌, ಲೇಬಲ್‌ ಮತ್ತು ಔಷಧಿಯ ವಿವರಗಳನ್ನು ಪರಿಶೀಲಿಸಿ. ಪ್ಯಾಕೆಟ್‌ ಹಾನಿಗೊಳಗಾಗಿದ್ದರೆ ಅಥವಾ ಅನುಮಾನಾಸ್ಪದವಾಗಿ ಕಂಡರೆ ಬಳಸಬೇಡಿ.

5. ವೈದ್ಯರು ಬರೆದಿರುವ ಡೋಸ್‌ ಬದಲಿಸಬೇಡಿ

ವೈದ್ಯರು ಸೂಚಿಸಿರುವ ಔಷಧಿಯ ಬದಲಿಗೆ ಬೇರೆ ಬ್ರ್ಯಾಂಡ್‌, ಬೇರೆ ಸಾಮರ್ಥ್ಯ ಅಥವಾ ಬೇರೆ ಡೋಸ್‌ನ ಮಾತ್ರೆಯನ್ನು ಸ್ವತಃ ತೆಗೆದುಕೊಳ್ಳುವುದು ಸರಿಯಲ್ಲ.

ಉದಾಹರಣೆಗೆ, ವೈದ್ಯರು ನಿರ್ದಿಷ್ಟ ಪ್ರಮಾಣದ ಔಷಧಿ ಸೂಚಿಸಿದ್ದರೆ ಅದೇ ಪ್ರಮಾಣವನ್ನು ಪಡೆಯಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ಪರ್ಯಾಯ ಬ್ರ್ಯಾಂಡ್‌ ಅಥವಾ ಡೋಸ್‌ ಬಗ್ಗೆ ಅನುಮಾನವಿದ್ದರೆ ವೈದ್ಯರು ಅಥವಾ ಫಾರ್ಮಸಿಸ್ಟ್‌ ಬಳಿ ಖಚಿತಪಡಿಸಿಕೊಳ್ಳಿ.

6. ಔಷಧಿಯನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನೂ ತಿಳಿಯಿರಿ

ಎಲ್ಲಾ ಔಷಧಿಗಳನ್ನೂ ಒಂದೇ ರೀತಿಯಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ. ಕೆಲವು ಔಷಧಿಗಳಿಗೆ ತಂಪಾದ ವಾತಾವರಣ ಬೇಕಾಗಬಹುದು, ಇನ್ನು ಕೆಲವು ಔಷಧಿಗಳನ್ನು ನೇರ ಸೂರ್ಯನ ಬೆಳಕು ಮತ್ತು ಹೆಚ್ಚಿನ ಉಷ್ಣತೆಯಿಂದ ದೂರವಿಡಬೇಕಾಗುತ್ತದೆ.

ಹೀಗಾಗಿ ಔಷಧಿಯ ಪ್ಯಾಕೆಟ್‌ನಲ್ಲಿ ನೀಡಿರುವ ಸಂಗ್ರಹಣೆ ಸೂಚನೆಗಳನ್ನು ಓದಿ. ಅಗತ್ಯವಿದ್ದರೆ ಫಾರ್ಮಸಿಸ್ಟ್‌ ಅಥವಾ ವೈದ್ಯರಲ್ಲಿ ಔಷಧಿಯನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂದು ಕೇಳಿ.

ಆರೋಗ್ಯದ ವಿಚಾರದಲ್ಲಿ ಸಣ್ಣ ನಿರ್ಲಕ್ಷ್ಯವೂ ಬೇಡ!

ಔಷಧಿ ಎನ್ನುವುದು ಸಾಮಾನ್ಯ ವಸ್ತುವಲ್ಲ. ಸರಿಯಾದ ಔಷಧಿಯನ್ನು, ಸರಿಯಾದ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ಬಳಸುವುದು ಬಹಳ ಮುಖ್ಯ. ಖರೀದಿಸುವಾಗಲೇ ಎಕ್ಸ್‌ಪೈರಿ ದಿನಾಂಕ, ಪ್ಯಾಕಿಂಗ್‌, ಡೋಸ್‌ ಮತ್ತು ಸಂಗ್ರಹಣೆ ಸೂಚನೆಗಳನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ವೈದ್ಯರ ಸಲಹೆ ಅಗತ್ಯವಿರುವ ಔಷಧಿಗಳನ್ನು ಸ್ವಯಂ ನಿರ್ಧಾರದಿಂದ ಸೇವಿಸದೆ, ತಜ್ಞರ ಮಾರ್ಗದರ್ಶನ ಪಡೆಯುವುದು ಉತ್ತಮ.

ಪದವಿ, ಸ್ನಾತಕೋತ್ತರ ಪದವಿ ಪಡೆದರೂ ಉದ್ಯೋಗ ಸಿಗುತ್ತಿಲ್ಲ! ರಾಜ್ಯದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಎಷ್ಟು ಗೊತ್ತಾ?

0

ಬೆಂಗಳೂರು: ನಿರುದ್ಯೋಗ ರಾಜ್ಯದ ಪ್ರಮುಖ ಸಮಸ್ಯೆಗಳಲ್ಲೊಂದಾಗಿದೆ. ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆದಿದ್ದರೂ ಸೂಕ್ತ ಉದ್ಯೋಗ ಸಿಗದೆ ಹಲವು ಯುವಕರು ಪರದಾಡುತ್ತಿದ್ದಾರೆ. ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರುವ ಅಂಕಿ-ಅಂಶಗಳು ಕೂಡ ನಿರುದ್ಯೋಗದ ಪ್ರಮಾಣವನ್ನು ತೋರಿಸುತ್ತಿವೆ.

ಪ್ರಸ್ತುತ ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 33,038 ಪದವೀಧರರು ಹಾಗೂ 1,579 ಸ್ನಾತಕೋತ್ತರ ಪದವೀಧರರು ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಇದಲ್ಲದೆ ಕಡಿಮೆ ಶಿಕ್ಷಣ ಪಡೆದವರೂ ಸೂಕ್ತ ಉದ್ಯೋಗಕ್ಕಾಗಿ ಅವಕಾಶಗಳನ್ನು ಹುಡುಕುತ್ತಿದ್ದಾರೆ.

ಉದ್ಯೋಗಕ್ಕಾಗಿ ನೋಂದಾಯಿಸಿದವರ ಜಿಲ್ಲಾವಾರು ವಿವರ

  • ಬಾಗಲಕೋಟೆ: 488
  • ಬಳ್ಳಾರಿ: 1,937
  • ಬೆಳಗಾವಿ: 846
  • ಬೆಂಗಳೂರು ಗ್ರಾಮಾಂತರ ಮತ್ತು ನಗರ: 9,273
  • ಬೀದರ್: 2,444
  • ಚಾಮರಾಜನಗರ: 739
  • ಚಿಕ್ಕಬಳ್ಳಾಪುರ: 169
  • ಚಿಕ್ಕಮಗಳೂರು: 370
  • ಚಿತ್ರದುರ್ಗ: 293
  • ದಕ್ಷಿಣ ಕನ್ನಡ: 2,592
  • ದಾವಣಗೆರೆ: 707
  • ಧಾರವಾಡ: 442
  • ಗದಗ: 934
  • ಹಾಸನ: 454
  • ಹಾವೇರಿ: 865
  • ಕಲಬುರಗಿ: 1,487
  • ಕೊಡಗು: 247
  • ಕೋಲಾರ: 506
  • ಕೊಪ್ಪಳ: 724
  • ಮಂಡ್ಯ: 608
  • ಮೈಸೂರು: 1,041
  • ರಾಯಚೂರು: 310
  • ರಾಮನಗರ: 473
  • ತುಮಕೂರು: 1,524
  • ಉಡುಪಿ: 1,000
  • ಉತ್ತರ ಕನ್ನಡ: 1,192
  • ವಿಜಯಪುರ: 644
  • ಯಾದಗಿರಿ: 469

ನಿರುದ್ಯೋಗ ನಿವಾರಣೆಗೆ ಸರ್ಕಾರದ ಕ್ರಮವೇನು?

ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. 2025-26ನೇ ಸಾಲಿನಲ್ಲಿ ರಾಜ್ಯದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ 583 ಮಿನಿ ಉದ್ಯೋಗ ಮೇಳಗಳು ಹಾಗೂ ನೇರ ಸಂದರ್ಶನ ಕಾರ್ಯಕ್ರಮಗಳನ್ನು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.

ಈ ಉದ್ಯೋಗ ಮೇಳಗಳು ಮತ್ತು ನೇರ ಸಂದರ್ಶನಗಳ ಮೂಲಕ 10,616 ಅಭ್ಯರ್ಥಿಗಳಿಗೆ ಉದ್ಯೋಗದ ಆಹ್ವಾನ ನೀಡಲಾಗಿದೆ. ಇನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ನೇರ ನೇಮಕಾತಿಗೆ ಒಳಪಡುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯೂ ಮುಂದುವರಿದಿದೆ. ಉಳಿಕೆ ಅನುಮತಿ ಹಾಗೂ ನೇರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಸಹಮತಿ ಪಡೆಯಲು ಕ್ರಮವಹಿಸಲಾಗುತ್ತಿದೆ.

ಯುವನಿಧಿಯಿಂದ ಏನು ಲಾಭ?

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. 2026ರ ಆಗಸ್ಟ್ 18ರ ಅಂತ್ಯಕ್ಕೆ 4,46,779 ಪದವೀಧರ ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಅವರಲ್ಲಿ ಅರ್ಹರಾದ 3,91,354 ಪದವೀಧರ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ.

2026-27ನೇ ಸಾಲಿನಲ್ಲಿ ಯುವನಿಧಿ ಯೋಜನೆಗೆ ₹372.40 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ‘ಯುವನಿಧಿ ಪ್ಲಸ್’ ಉಪಕ್ರಮದಡಿ ಯುವನಿಧಿ ಯೋಜನೆಯಡಿ ಭತ್ಯೆ ಪಡೆಯುತ್ತಿರುವ ಪದವೀಧರರಿಗೆ ಉದ್ಯೋಗ ಮಾರುಕಟ್ಟೆಗೆ ಪೂರಕವಾಗುವಂತೆ ಕೌಶಲ್ಯ ಆಧಾರಿತ ತರಬೇತಿಯನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ನೀಡಲಾಗುತ್ತಿದೆ. ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ಮೂಲಕ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ.

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ!

0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಏರಿಳಿತದ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲೂ ವ್ಯತ್ಯಾಸ ಕಂಡುಬರುತ್ತಿದೆ.

ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದರೆ, ದಕ್ಷಿಣ ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್ ಹಾಗೂ ಕಬಿನಿಯಲ್ಲಿ ನೀರಿನ ಸಂಗ್ರಹ ಇಳಿಕೆಯಾಗಿದೆ.

ಕೆಆರ್‌ಎಸ್ ಜಲಾಶಯ: ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಇಂದು 105.62 ಅಡಿ ನೀರು ದಾಖಲಾಗಿದೆ. ಜಲಾಶಯಕ್ಕೆ 4,934 ಕ್ಯೂಸೆಕ್ ಒಳಹರಿವು ಇದ್ದರೆ, 5,215 ಕ್ಯೂಸೆಕ್ ಹೊರಹರಿವು ಇದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 27.581 ಟಿಎಂಸಿ ನೀರು ಸಂಗ್ರಹವಾಗಿದೆ.

ಕಬಿನಿ ಜಲಾಶಯ: ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಪ್ರಸ್ತುತ 68.47 ಅಡಿ ನೀರಿದೆ. ಒಟ್ಟು 19.52 ಟಿಎಂಸಿ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 10.94 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 1,091 ಕ್ಯೂಸೆಕ್ ಇದ್ದು, ಒಟ್ಟು 1,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯ: ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. 519.60 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಇಂದು 519.51 ಮೀಟರ್ ನೀರಿನ ಮಟ್ಟ ದಾಖಲಾಗಿದೆ. 14,212 ಕ್ಯೂಸೆಕ್ ಹೊರಹರಿವು ಇದ್ದು, ಜಲಾಶಯ ಉತ್ತಮ ನೀರಿನ ಮಟ್ಟ ಕಾಯ್ದುಕೊಂಡಿದೆ.

ಒಟ್ಟಾರೆ, ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಉತ್ತಮವಾಗಿದ್ದರೆ, ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಒಳಹರಿವಿಗಿಂತ ಹೊರಹರಿವು ಹೆಚ್ಚಿರುವುದು ಗಮನಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹಾಗೂ ಒಳಹರಿವಿನ ಆಧಾರದ ಮೇಲೆ ಜಲಾಶಯಗಳ ನೀರಿನ ಮಟ್ಟದಲ್ಲಿ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ.

ಬಾಗಲಗುಂಟೆಯಲ್ಲಿ ಮಳೆ ಅವಾಂತರ; ಹಲವು ಮನೆಗಳಿಗೆ ನುಗ್ಗಿದ ನೀರು, ಬೈಕ್‌ಗಳು ಮುಳುಗಡೆ

0

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಬಾಗಲಗುಂಟೆಯ ಭೈರವೇಶ್ವರ ಬಡಾವಣೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.

ಸಂಜೆ 5 ಗಂಟೆ ಸುಮಾರಿಗೆ ಸುರಿದ ಮಳೆಯಿಂದ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ನೀರು ಬಡಾವಣೆಯ ಮನೆಗಳಿಗೆ ನುಗ್ಗಿದೆ. ರಾಜಕಾಲುವೆ ಕಾಮಗಾರಿ ವೇಳೆ ನಡೆದಿರುವ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೂಳೆತ್ತುವ ಕಾಮಗಾರಿ ಹಾಗೂ ರಿಟೈನಿಂಗ್ ವಾಲ್ ನಿರ್ಮಾಣದ ವೇಳೆ ಮಣ್ಣನ್ನು ಅಡ್ಡಲಾಗಿ ಹಾಕಲಾಗಿತ್ತು. ಇದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗದೆ, ಏಕಾಏಕಿ ಬಡಾವಣೆಯತ್ತ ನುಗ್ಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಮನೆಗಳ ಒಳಭಾಗ ಹಾಗೂ ನೆಲಮಾಳಿಗೆಯಲ್ಲಿ ನೀರು ತುಂಬಿಕೊಂಡಿದ್ದು, ಐದರಿಂದ ಆರು ಬೈಕ್‌ಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಕೆಲ ಮನೆಗಳ ನೆಲಮಾಳಿಗೆಯಲ್ಲಿ ಸುಮಾರು ಎಂಟು ಅಡಿಗಳಷ್ಟು ನೀರು ನಿಂತಿದೆ.

ನೀರಿನಿಂದಾಗಿ ಹಲವು ವಸ್ತುಗಳು ಹಾನಿಯಾಗಿದ್ದು, ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಸ್ಥಳೀಯರೇ ಸ್ವತಃ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದು, ಮಳೆ ಅವಾಂತರದಿಂದ ಬಡಾವಣೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

10 ಟನ್ ರಾಸಾಯನಿಕ ಮಿಶ್ರಿತ ಅಡಿಕೆ ಪತ್ತೆ; ಬ್ರಾಂಡೆಡ್ ಆಹಾರಗಳ ಮೇಲೂ ಆರೋಗ್ಯ ಇಲಾಖೆ ನಿಗಾ

0

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಆತಂಕ ಹೆಚ್ಚಾಗಿದೆ.

ಕಲಬೆರಕೆ ಆಹಾರ ಪದಾರ್ಥಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪರಿಶೀಲನೆಗೆ ಮುಂದಾಗಿದೆ.

ಇತ್ತೀಚೆಗೆ ಕೋಲಾರದಲ್ಲಿ 10 ಟನ್ ರಾಸಾಯನಿಕ ಮಿಶ್ರಿತ ಅಡಿಕೆಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಅಡಿಕೆಯನ್ನು ಮುಳಬಾಗಿಲು ಟಿಎಚ್‌ಒ ಡಾ. ಸುಗುಣ ನೇತೃತ್ವದ ಆರೋಗ್ಯ ಸುರಕ್ಷತಾ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ.

ಅಡಿಕೆಯಲ್ಲಿ ಕಲರಿಂಗ್ ಏಜೆಂಟ್‌ಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಲ್ಯಾಬ್ ವರದಿ ಬಂದ ಬಳಿಕ ಅಡಿಕೆಯಲ್ಲಿ ಯಾವ ರೀತಿಯ ರಾಸಾಯನಿಕ ಬಳಸಲಾಗಿದೆ ಎಂಬುದು ಸ್ಪಷ್ಟವಾಗಲಿದೆ.

ಬ್ರಾಂಡೆಡ್ ಆಹಾರಗಳ ಮೇಲೂ ನಿಗಾ:

ಅಡಿಕೆಯ ಜೊತೆಗೆ ಮಕ್ಕಳಲ್ಲಿ ಜನಪ್ರಿಯವಾಗಿರುವ ಟೆಟ್ರಾಪ್ಯಾಕ್ ಜ್ಯೂಸ್, ಬಿಸ್ಕತ್, ಚಿಪ್ಸ್, ಚಾಕೋಲೇಟ್ ಹಾಗೂ ಕೇಕ್ ಸೇರಿದಂತೆ ವಿವಿಧ ಪ್ಯಾಕೇಜ್ಡ್ ಆಹಾರಗಳ ಗುಣಮಟ್ಟದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.

ಆಹಾರ ಪದಾರ್ಥಗಳು ಮಾರುಕಟ್ಟೆಗೆ ಬರುವ ಮುನ್ನ ಅಗತ್ಯ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಬೇಕಿದ್ದರೂ, ಕೆಲವು ಖಾಸಗಿ ಲ್ಯಾಬ್‌ಗಳು ಹಾಗೂ ಕಂಪನಿಗಳ ವಿರುದ್ಧ ಅಕ್ರಮದ ಆರೋಪಗಳು ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವಿವಿಧ ಬ್ರಾಂಡೆಡ್ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಪ್ರಯೋಗಾಲಯಗಳಲ್ಲಿ ಮರುಪರಿಶೀಲನೆ ನಡೆಸಲು ಮುಂದಾಗಿದೆ.

ಆರೋಗ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಎಫ್‌ಡಿಎ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಆಹಾರ ಕಲಬೆರಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ನಕ್ಸಲ್ ಹೆಸರಿನಲ್ಲಿ ಬೆದರಿಕೆ; ಬೆಟ್ಟದಲ್ಲಿ ಅಡಗಿದ್ದ ಕನಕಲಬಂಡೆ ವೆಂಕಟೇಶ್ ಬಂಧನ!

0

ತುಮಕೂರು: ಕಳೆದ ಹಲವು ತಿಂಗಳಿಂದ ಪಾವಗಡ ತಾಲೂಕಿನ ಕನಕಲಬಂಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನಕ್ಸಲ್ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದ್ದ ಕನಕಲಬಂಡೆ ವೆಂಕಟೇಶ್ ಅಲಿಯಾಸ್ ‘ಸುಡೋ ನಕ್ಸಲ್’ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪಾವಗಡ ಸಮೀಪದ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ವೆಂಕಟೇಶ್ ಅರೆಬೆತ್ತಲೆಯಾಗಿ ಮದ್ಯ ಸೇವಿಸುತ್ತಾ ಚಿಕನ್ ತಿನ್ನುತ್ತಿದ್ದ ಎನ್ನಲಾಗಿದೆ.

ಕಳೆದ ಕೆಲ ತಿಂಗಳಿಂದ ಕನಕಲಬಂಡೆ ಗ್ರಾಮದಲ್ಲಿ ದೌರ್ಜನ್ಯ ಹಾಗೂ ಬೆದರಿಕೆ ಹಾಕುತ್ತಿದ್ದ ಆರೋಪ ವೆಂಕಟೇಶ್ ವಿರುದ್ಧ ಕೇಳಿಬಂದಿತ್ತು. ಆ.29ರಂದು ರೈತ ಕರಿಯಣ್ಣ ಅವರ ಪಂಪ್‌ಸೆಟ್‌ಗೆ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು.

ಇತ್ತೀಚೆಗೆ ಗಂಗಸಾಗರ ಗ್ರಾಮದ ರೈತರೊಬ್ಬರಿಗೆ ‘ಪೀಪಲ್ಸ್ ವಾರ್ ದಳಂ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಪತ್ರ ಅಂಟಿಸಿದ ಪ್ರಕರಣದಲ್ಲೂ ವೆಂಕಟೇಶ್ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

ಅಡಿಷನಲ್ ಎಸ್‌ಪಿ ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಇನ್ಸ್‌ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್ಸ್‌ಪೆಕ್ಟರ್ ಕೊಟ್ರೇಶ್, ಎಸ್‌ಐ ಸುನಿಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ವೆಂಕಟೇಶ್ ಬಂಧನದಿಂದ ಕನಕಲಬಂಡೆ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಫ್ರಿಡ್ಜ್ ಬ್ಲಾಸ್ಟ್‌: ಗದಗ ಮಾರ್ಟ್‌ನಲ್ಲಿ ಭಾರೀ ಬೆಂಕಿ

0

ಗದಗ: ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿರುವ ಗದಗ ಮಾರ್ಟ್‌ನಲ್ಲಿ ಬುಧವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ. ಮಾರ್ಟ್‌ನಲ್ಲಿದ್ದ ಫ್ರಿಡ್ಜ್‌ ಬ್ಲಾಸ್ಟ್‌ ಆಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಅಂಗಡಿಯಲ್ಲಿದ್ದ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ.

ಅಗ್ನಿ ಅವಘಡದಿಂದ ಮಾರ್ಟ್‌ನಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದ್ದು, ನಿಖರವಾಗಿ ಎಷ್ಟು ಪ್ರಮಾಣದ ನಷ್ಟವಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಘಟನೆ ಗದಗ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲಾ ಬ್ಯಾಗ್‌ನಲ್ಲಿ 38 ಕೆಜಿ ಗಾಂಜಾ ಸಾಗಾಟ; ಮೂವರು ಅಪ್ರಾಪ್ತರು ಸೇರಿ ಐವರ ಬಂಧನ

0

ಪಾಟ್ನಾ: ವಿದ್ಯಾರ್ಥಿಯೊಬ್ಬನ ಶಾಲಾ ಬ್ಯಾಗ್‌ನಲ್ಲಿ ಗಾಂಜಾವನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದ ಹಾಜಿಪುರದಲ್ಲಿ ನಡೆದಿದೆ.

ಖಚಿತ ಮಾಹಿತಿ ಆಧರಿಸಿ ಪೊಲೀಸರು ಮುಜಫರ್‌ಪುರದಿಂದ ಪಾಟ್ನಾಕ್ಕೆ ತೆರಳುತ್ತಿದ್ದ ಬಸ್ಸನ್ನು ಭಗವಾನ್‌ಪುರ ಅಡ್ಡಾ ಚೌಕ್‌ನಲ್ಲಿ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನುಮಾನಾಸ್ಪದ ಪ್ರಯಾಣಿಕರನ್ನು ತಪಾಸಣೆ ಮಾಡಿದಾಗ, ಅಪ್ರಾಪ್ತರ ಶಾಲಾ ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಗಾಂಜಾ ಪತ್ತೆಯಾಗಿದೆ.

ಭಗವಾನ್‌ಪುರ ಪೊಲೀಸರು ಹಾಗೂ ಮದ್ಯಪಾನ ನಿಷೇಧ ಇಲಾಖೆಯ ಜಂಟಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 38 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

‘ಆಪರೇಷನ್ ನೀಲಕಂಠ’ದ ಅಡಿಯಲ್ಲಿ ಐವರನ್ನೂ ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ. ಬಂಧಿತರು ಮಾದಕ ವಸ್ತುಗಳನ್ನು ಪೂರೈಸುವ ಉದ್ದೇಶದಿಂದ ಪಾಟ್ನಾಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬಂಧಿತರಲ್ಲಿ ಮೂವರು ಅಪ್ರಾಪ್ತರಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಹಾಸನದಲ್ಲಿ ದುರಂತ; ಕೆರೆಯಲ್ಲಿ ಜಾನುವಾರು ಮೈತೊಳೆಯಲು ಹೋದ ಇಬ್ಬರು ದಾರುಣ ಸಾವು!

0

ಹಾಸನ: ಜಾನುವಾರು ಮೈತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಹೊಳೆನರಸೀಪುರ ತಾಲೂಕಿನ ಬಂಡಿಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಕೆಂಗೇಗೌಡ (60) ಹಾಗೂ ಕುಮಾರ (30) ಎಂದು ಗುರುತಿಸಲಾಗಿದೆ. ಕೆಂಗೇಗೌಡ ಅವರು ಕೆರೆಯಲ್ಲಿ ಮುಳುಗುತ್ತಿದ್ದ ವೇಳೆ ಅವರನ್ನು ರಕ್ಷಿಸಲು ಕುಮಾರ ತೆರಳಿದ್ದರು ಎನ್ನಲಾಗಿದೆ. ಆದರೆ ಇಬ್ಬರೂ ಕೆರೆಯಿಂದ ಹೊರಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇಬ್ಬರೂ ಬೆಳಗ್ಗೆ 11 ಗಂಟೆ ಸುಮಾರಿಗೆ ಕೆರೆ ಬಳಿ ತೆರಳಿದ್ದರು ಎನ್ನಲಾಗಿದೆ. ಘಟನೆ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಶವಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.