Home Blog Page 31

ಗಣೇಶೋತ್ಸವಕ್ಕೆ ಏಕ ಗವಾಕ್ಷಿ ವ್ಯವಸ್ಥೆ; 24 ಗಂಟೆಯಲ್ಲೇ ಪರವಾನಗಿ!

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬವನ್ನು ಶಾಂತಿಯುತವಾಗಿ, ಸುವ್ಯವಸ್ಥಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸುವ ಉದ್ದೇಶದಿಂದ ಪ್ರತಿ ತಾಲೂಕಿನ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಏಕ ಗವಾಕ್ಷಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ಮೂಲಕ ವಿಸರ್ಜನೆ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಅಗ್ನಿಶಾಮಕ, ಲೋಕೋಪಯೋಗಿ, ವಿದ್ಯುತ್, ನಗರಾಭಿವೃದ್ಧಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಕಂದಾಯ ಇಲಾಖೆಗಳನ್ನು ಒಳಗೊಂಡ ಏಕ ಗವಾಕ್ಷಿ ಸಮಿತಿ ರಚಿಸಲಾಗಿದೆ.

ಸಂಬಂಧಪಟ್ಟ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಮಿತಿಯ ಅಧ್ಯಕ್ಷರಾಗಿದ್ದು, ತಾಲೂಕಿನ ತಹಶೀಲ್ದಾರರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಗಣೇಶೋತ್ಸವಕ್ಕೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿವೆ.

ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಸಲ್ಲಿಸುವ ಅರ್ಜಿಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ತಮ್ಮ ಅಭಿಪ್ರಾಯ ನೀಡಲಿದ್ದು, ಅರ್ಜಿ ಸ್ವೀಕರಿಸಿದ 24 ಗಂಟೆಗಳೊಳಗಾಗಿ ಅರ್ಜಿದಾರರಿಗೆ ಪರವಾನಗಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು.

ಸಮಿತಿಯ ಸದಸ್ಯ ಇಲಾಖೆಗಳು ಪರಸ್ಪರ ನಿರಂತರ ಸಂಪರ್ಕದಲ್ಲಿದ್ದು, ಹಬ್ಬದ ಸಂದರ್ಭದಲ್ಲಿ ತಮ್ಮ ಕೇಂದ್ರ ಸ್ಥಾನಗಳಲ್ಲಿ ಹಾಜರಿದ್ದು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಪರವಾನಗಿ ನೀಡುವ ಮುನ್ನ ಆಯೋಜಕರಿಂದ ನ್ಯಾಯಾಲಯದ ನಿರ್ದೇಶನಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸೂಚನೆಗಳನ್ನು ಪಾಲಿಸುವ ಕುರಿತು ಮುಚ್ಚಳಿಕೆ ಪಡೆಯಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆಯೂ ಆಯೋಜಕರಿಂದ ಖಾತರಿ ಪಡೆಯಬೇಕು.

ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಲಾಗುವುದು. ಅಗತ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು.

ಹೈ-ಟೆನ್ಶನ್ ವಿದ್ಯುತ್ ತಂತಿಗಳು ಹಾದುಹೋಗಿರುವ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ನೀಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ವಿಗ್ರಹ ಪ್ರತಿಷ್ಠಾಪಿಸುವ ಸಂಘ-ಸಂಸ್ಥೆಗಳು ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯ ಅನುಮತಿ ಪಡೆದ ನಂತರವೇ ಪ್ರತಿಷ್ಠಾಪಿಸಬೇಕು.

ಗಣೇಶೋತ್ಸವಕ್ಕೂ ಮುನ್ನ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರನ್ನು ಒಳಗೊಂಡ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಗಣೇಶೋತ್ಸವ ಆಯೋಜಕರು ಆಡಳಿತ ಮತ್ತು ಪೊಲೀಸ್ ಇಲಾಖೆ ನೀಡುವ ಎಲ್ಲ ಮಾರ್ಗಸೂಚಿ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಶಾಂತಿಯುತವಾಗಿ ಹಬ್ಬ ಆಚರಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಸ್ಮರಣೆ : ಬಿಜೆಪಿ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ 25 ವರ್ಷಗಳ ಸ್ಮರಣಾರ್ಥ ಬಿಜೆಪಿ ಗದಗ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿರುವ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳಿಗೆ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹಾಗೂ ಮಾಜಿ ಸಚಿವ ಸಿ.ಸಿ. ಪಾಟೀಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ದಿನವೂ ರಜೆ ಹಾಕದೆ ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ 25 ವರ್ಷಗಳ ಸ್ಮರಣಾರ್ಥ ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಚರಿಸುವುದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದ ಸಂಚಾಲಕ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಮೋದಿಯವರ ಸಾರ್ವಜನಿಕ ಸೇವೆಯ 25 ವರ್ಷಗಳ ಸ್ಮರಣಾರ್ಥ ಜಿಲ್ಲೆಯಲ್ಲಿ ಹಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

‘ಆಶೀರ್ವಾದ ದೀಪ’, ‘25 ಕೋಟಿ ಮಕ್ಕಳ ಕನಸಿನ ಭಾರತ’, ‘ನಮೋ ಸೇವಾ ಕಥನ’ ಬೀದಿ ನಾಟಕ, ಅಂಗಳದ ಉತ್ಸವ, ಬದಲಾವಣೆಯ ಕಥೆ, ವಿಕಸಿತ ಭಾರತ ಸಂಕಲ್ಪ ಯಾತ್ರೆ, ಸೇವಾ ಜ್ಯೋತಿ ಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ‘ಸೇವೆ ನನ್ನ ಯೋಗದಾನ’ದಡಿ ರಕ್ತದಾನ ಶಿಬಿರ, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಭೇಟಿ, ವೃಕ್ಷಾರೋಪಣ, ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕೇಂದ್ರ ಆಹಾರ ನಿಗಮದ ಸದಸ್ಯ ರವಿ ದಂಡಿನ, ನರಗುಂದ ಯುವ ಮುಖಂಡ ಉಮೇಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ, ಸೇವಾ ಸಂಕಲ್ಪ ಅಭಿಯಾನ ತಂಡದ ಜಿಲ್ಲಾ ಸದಸ್ಯರಾದ ಅನೀಲ ಅಬ್ಬಿಗೇರಿ, ಸಂತೋಷ ಅಕ್ಕಿ ಸೇರಿದಂತೆ ಬಿಜೆಪಿ 9 ಮಂಡಲಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮತ್ತು ಸೇವಾ ಸಂಕಲ್ಪ ಅಭಿಯಾನದ ಜಿಲ್ಲಾ ಹಾಗೂ ಮಂಡಲ ತಂಡದ ಸದಸ್ಯರು ಭಾಗವಹಿಸಿದ್ದರು.

ಮೋದಿಯವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ 25 ವರ್ಷಗಳ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿರುವ ವಿವಿಧ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಕಾರ್ಯಕರ್ತರು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.

— ತೋಟಪ್ಪ (ರಾಜು) ಕುರುಡಗಿ, ಬಿಜೆಪಿ ಗದಗ ಜಿಲ್ಲಾಧ್ಯಕ್ಷ

ನಂದಗೋಕುಲದಲ್ಲಿ ಸಂಭ್ರಮದ ಗೋಕುಲಾಷ್ಟಮಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಸೇವಿಕಾ ಸಮಿತಿ ಗದಗ ಶಹರ ಘಟಕದ ವತಿಯಿಂದ ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್‌ (ರಿ.)ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ‘ನಂದಗೋಕುಲ’ದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ–ಗೋಕುಲಾಷ್ಟಮಿಯನ್ನು ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ವಿಶೇಷ ಆಚರಣೆಯಲ್ಲಿ ಕೇಂದ್ರದ ಪುಟಾಣಿಗಳೊಂದಿಗೆ ಸೇವಿಕಾ ಸಮಿತಿ ಸದಸ್ಯರ ಮಕ್ಕಳು ಕೃಷ್ಣ–ರಾಧೆಯ ವೇಷದಲ್ಲಿ ಪಾಲ್ಗೊಂಡು ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಮಕ್ಕಳ ಮೊಗದಲ್ಲಿ ಮೂಡಿದ ಕೃಷ್ಣನ ನಗು ಹಾಗೂ ಭಕ್ತಿಗೀತೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದವು.

ಈ ಸಂದರ್ಭದಲ್ಲಿ ಪುಷ್ಪಾ ಕಾಮಾರ್ತಿ, ಅನಸೂಯಾ ಶೀಲವಂತರ, ಅಶ್ವಿನಿ ಶಿಗ್ಗಾಂವಿ, ರಜನಿ ಪಂಥರ, ವೈಷ್ಣವಿ ರಬ್ಬನಗೌಡರ, ಲಲಿತಾ ಮೇರವಾಡೆ, ಅನುಪಮಾ ಹೊಸಮನಿ, ಮೇಘಾ ಕುಲಕರ್ಣಿ, ನಾಗವೇಣಿ ಕಟ್ಟಿಮನಿ, ಡಾ. ಪ್ರಕಾಶ ಹೊಸಮನಿ, ವಿದಾರ್ಥ ಹೊಸಮನಿ, ಸಿಂಚನಾ ಸಜ್ಜನರ, ಸಮೃದ್ಧಿ ಸಜ್ಜನರ ಸೇರಿದಂತೆ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಂದಗೋಕುಲ ಕೇಂದ್ರದ ಆಯಾಗಳಿಗೆ ರಕ್ಷಾಬಂಧನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು ಎಂದು ವಿಶೇಷ ದತ್ತು ಸ್ವೀಕಾರ ಕೇಂದ್ರದ ಗುರುಸಿದ್ಧಪ್ಪ ಕೊಣ್ಣೂರ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಿವೇಶನ ರಹಿತರಿಗೆ ಗುಡ್ ನ್ಯೂಸ್; 15 ಲಕ್ಷ ಉಚಿತ ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರ

0

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ನಿವೇಶನ ರಹಿತರಿಗೆ ಉಚಿತ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ 50 ಸಾವಿರ ಉಚಿತ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

ರಾಜ್ಯಾದ್ಯಂತ ಒಟ್ಟು 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಈ ನಿವೇಶನಗಳನ್ನು ಒಟ್ಟು ಮೂರು ಹಂತಗಳಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.

ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಹಂಚಿನಮನಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಹಾವೇರಿ: ಮುಸ್ಲಿಂ ಎಂಪ್ಲಾಯಿಜ್ ವೇಲ್ಪೇರ್ ಅಸೋಸಿಯೇಶನ್‌ (ಮೇವಾ) ರಾಜ್ಯ ಉಪಾಧ್ಯಕ್ಷರೂ, ಹಾವೇರಿ ಜಿಲ್ಲೆಯ ತಡಸದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗದಗದ ನಿಯಾಜ್‌ಅಹ್ಮದ್ ಹಂಚಿನಮನಿ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ, ಹಾವೇರಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ಪ್ರಶಸ್ತಿ ಪ್ರದಾನ ಮಾಡಿ ನಿಯಾಜ್‌ಅಹ್ಮದ್ ಹಂಚಿನಮನಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಡಿಡಿಪಿಐ (ಅಭಿವೃದ್ಧಿ) ಮೋಹನ್ ದಂಡಿನ, ಡಯಟ್ ಪ್ರಾಂಶುಪಾಲ ಝಡ್.ಎಂ. ಖಾಜಿ, ತಾಲೂಕು ಶಿಕ್ಷಣಾಧಿಕಾರಿ ಶ್ರೀನಿವಾಸ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರಾದ ನೂರಅಹ್ಮದ್ ಕರಜಗಿ ಉಪಸ್ಥಿತರಿದ್ದರು.

ಬೋಧನಾ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆ, ಪರಿಶ್ರಮ, ಶ್ರದ್ಧೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನೀಡಿದ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ನಿಯಾಜ್‌ಅಹ್ಮದ್ ಹಂಚಿನಮನಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಸರ್ಕಾರಿ ಉರ್ದು ಪ್ರೌಢಶಾಲೆ, ತಡಸದಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹಂಚಿನಮನಿ ಅವರ ಸಾಧನೆಗೆ ಮುಸ್ಲಿಂ ಎಂಪ್ಲಾಯಿಜ್ ವೇಲ್ಪೇರ್ ಅಸೋಸಿಯೇಶನ್‌ (ಮೇವಾ) ಗದಗ ಜಿಲ್ಲಾ ಅಧ್ಯಕ್ಷ ಡಾ. ಸಿ.ಎಂ. ರಫಿ ಹಾಗೂ ಕಾರ್ಯದರ್ಶಿ ರಸೀದ್ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಗಣೇಶೋತ್ಸವ ಶಾಂತಿಯುತ ಆಚರಣೆಗೆ ಪೊಲೀಸರ ಕಟ್ಟುನಿಟ್ಟಿನ ಸೂಚನೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಆಚರಿಸುವ ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಗಣೇಶೋತ್ಸವ ಮಂಡಳಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಸೂಚಿಸಿದರು.

ಸಮೀಪದ ಜಕ್ಕಲಿ ಗ್ರಾಮದ ಗ್ರಾಮ ಚಾವಡಿಯಲ್ಲಿ ರವಿವಾರ ಸಂಜೆ ನರೇಗಲ್ಲ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಣೇಶೋತ್ಸವ ಎಲ್ಲರ ಹಬ್ಬ. ಹಬ್ಬಕ್ಕೆ ಅಡ್ಡಿಪಡಿಸುವುದು ಪೊಲೀಸರ ಉದ್ದೇಶವಲ್ಲ. ಎಲ್ಲರೂ ಸುರಕ್ಷಿತವಾಗಿ ಹಾಗೂ ನೆಮ್ಮದಿಯಿಂದ ಹಬ್ಬ ಆಚರಿಸುವಂತಾಗಬೇಕು. ಆದ್ದರಿಂದ ಗಣೇಶೋತ್ಸವ ಮಂಡಳಿಗಳು ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಡಿಜೆ ಬಳಕೆಗೆ ಸಂಪೂರ್ಣ ನಿಷೇಧವಿದ್ದು, ಈಗಾಗಲೇ ಡಿಜೆ ಕಾಯ್ದಿರಿಸಿದ್ದರೆ ಅದನ್ನು ರದ್ದುಪಡಿಸಿ ಹಣವನ್ನು ವಾಪಸ್ ಪಡೆಯುವಂತೆ ಸಲಹೆ ನೀಡಿದರು. ಡಿಜೆಗಾಗಿ ಖರ್ಚು ಮಾಡುವ ಹಣವನ್ನು ಭಜನಾ ತಂಡಗಳು, ಕಲಾವಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಿದರೆ ಸ್ಥಳೀಯ ಕಲಾವಿದರ ಕುಟುಂಬಗಳಿಗೆ ನೆರವಾಗಲಿದೆ ಎಂದು ಹೇಳಿದರು.

ಗಣಪತಿ ಪ್ರತಿಷ್ಠಾಪನೆಗೂ ಮುನ್ನ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ವಿದ್ಯುತ್ ವ್ಯವಸ್ಥೆಗೆ ಹೆಸ್ಕಾಂನಿಂದ ಅಗತ್ಯ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಇಲ್ಲದೆ ಗಣಪತಿ ಪ್ರತಿಷ್ಠಾಪಿಸಿದರೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

ಗಣಪತಿ ಮೂರ್ತಿಯನ್ನು ರಸ್ತೆ ಅಥವಾ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಪ್ರತಿಷ್ಠಾಪಿಸಬಾರದು. ಮಂಟಪಗಳಲ್ಲಿ ರಾತ್ರಿ ವೇಳೆ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಬೇಕು ಹಾಗೂ ಸಮಿತಿಯ ಸದಸ್ಯರು ಸ್ಥಳದಲ್ಲಿರುವಂತೆ ಸೂಚಿಸಿದರು.

ಮಂಟಪಗಳಲ್ಲಿ ಇಸ್ಪೀಟ್ ಸೇರಿದಂತೆ ಯಾವುದೇ ರೀತಿಯ ಜೂಜಾಟ, ಅಕ್ರಮ ಚಟುವಟಿಕೆ, ಮದ್ಯಪಾನ ಮಾಡಿ ಗಲಾಟೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಕೃತ್ಯಗಳಿಗೆ ಅವಕಾಶವಿಲ್ಲ. ಇಂತಹ ಘಟನೆಗಳು ನಡೆದರೆ ಮೊದಲು ಗಣೇಶೋತ್ಸವ ಸಮಿತಿಯ ಸದಸ್ಯರನ್ನೇ ಹೊಣೆಗಾರರನ್ನಾಗಿ ಮಾಡಿ, ನಂತರ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಯಾರೂ ಅಸಭ್ಯವಾಗಿ ಅಥವಾ ಅನುಚಿತವಾಗಿ ವರ್ತಿಸಬಾರದು. ಅಂತಹ ಪ್ರಕರಣಗಳಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಧ್ವನಿವರ್ಧಕ ಬಳಕೆಯಲ್ಲಿಯೂ ನಿಗದಿತ ನಿಯಮಗಳನ್ನು ಪಾಲಿಸಬೇಕು. ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಬೇಕು. ನಿಯಮ ಉಲ್ಲಂಘಿಸಿ ಡಿಜೆ ಅಥವಾ ಧ್ವನಿವರ್ಧಕ ಬಳಸಿದರೆ ಉಪಕರಣಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಸಿದರು.

ಹಬ್ಬ ಎಂದರೆ ಪೂಜೆ, ಭಕ್ತಿ, ಸಂಸ್ಕೃತಿ ಮತ್ತು ಸೌಹಾರ್ದತೆ. ಕುಡಿದು ಬಂದು ಗಲಾಟೆ ಮಾಡುವುದು ಅಥವಾ ರಾತ್ರಿ ತಡವರೆಗೆ ಅಶಿಸ್ತಿನಿಂದ ವರ್ತಿಸುವುದು ನಮ್ಮ ಸಂಸ್ಕೃತಿಯಲ್ಲ. ಎಲ್ಲರೂ ಪರಂಪರೆಯನ್ನು ಗೌರವಿಸಿ ಶಾಂತಿಯುತವಾಗಿ ಹಬ್ಬ ಆಚರಿಸೋಣ ಎಂದು ಕರೆ ನೀಡಿದರು.

ಸಭೆಯಲ್ಲಿ ಅಶೋಕಪ್ಪ ಯಾವಗಲ್ಲ, ವೀರಯ್ಯ ಹಿರೇಮಠ, ಶರಣಪ್ಪ ಕುರಡಗಿ, ಚನ್ನಬಸವ ಅರಹುಣಸಿ, ಸಂಗಮೇಶ ಮೆಣಸಗಿ, ಮುತ್ತು ಮೇಟಿ ಸೇರಿದಂತೆ ವಿವಿಧ ಗಣೇಶೋತ್ಸವ ಮಂಡಳಿಗಳ ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ನರೇಗಲ್ಲ ಠಾಣೆಯ ಹವಾಲ್ದಾರ ಪುಂಡಲೀಕಪ್ಪ ದಾಸರ, ಪೊಲೀಸ್ ಪೇದೆಗಳಾದ ಕಿರಣಕುಮಾರ ವಿ. ಹಿರೇಮಠ, ಸಂತೋಷ ಘಾಟಿಗೆ ಭಾಗವಹಿಸಿದ್ದರು. ಪೇದೆ ಚಂದ್ರು ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಶಿವರಾಜ ಮುಗಳಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಪೊಲೀಸ್ ಇಲಾಖೆ ಜನರ ರಕ್ಷಣೆಗೆ ಸದಾ ಸಿದ್ಧವಿದೆ. ಯಾವುದೇ ಸಮಸ್ಯೆ ಎದುರಾದರೆ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಸಂಪರ್ಕಿಸಿ. ನಾವು ನಿಮ್ಮ ವಿರುದ್ಧ ಇರುವವರಲ್ಲ; ನಿಮ್ಮ ಸಹಕಾರದಿಂದ ಹಬ್ಬ ಉತ್ತಮವಾಗಿ ನಡೆದರೆ ನಮಗೂ ಸಂತೋಷ.

— ಐಶ್ವರ್ಯ ನಾಗರಾಳ, ಪಿಎಸ್‌ಐ, ನರೇಗಲ್ಲ ಠಾಣೆ

ರೈತ, ದಲಿತ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು: ಐ.ಎಸ್. ಪೂಜಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹಾಗೂ ರೈತ ಮತ್ತು ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಹಮ್ಮಿಕೊಂಡಿರುವ 170 ಕಿ.ಮೀ. ಬಳ್ಳಾರಿ ಚಲೋ ಎರಡನೇ ಹಂತದ ಪಾದಯಾತ್ರೆಯಲ್ಲಿ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಹಿರಿಯ ಮುಖಂಡ ಐ.ಎಸ್. ಪೂಜಾರ ತಮ್ಮ ಬೆಂಬಲಿಗರೊಂದಿಗೆ ಭಾಗವಹಿಸಿದ್ದರು.

ಮಸ್ಕಿ ತಾಲೂಕಿನ ಸಂತೇಕೇಲೂರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅವರು, ರಾಜ್ಯ ಸರ್ಕಾರದ ವಿವಿಧ ವೈಫಲ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಶೇಷವಾಗಿ ರೈತರು ಹಾಗೂ ದಲಿತರ ಹಿತಾಸಕ್ತಿಗೆ ವಿರುದ್ಧವಾದ ನೀತಿಗಳನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿ, ಮುಂಬರುವ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಬರಗಾಲ ಘೋಷಣೆಯಲ್ಲಿಯೂ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಪೂಜಾರ, ಪಾದಯಾತ್ರೆ ಘೋಷಣೆಯಾದ ದಿನವೇ ಮುಖ್ಯಮಂತ್ರಿ ಗದಗ ಜಿಲ್ಲೆಗೆ ಬರಗಾಲ ಪೀಡಿತ ಪ್ರದೇಶಗಳ ವೀಕ್ಷಣೆಗೆ ಆಗಮಿಸಿರುವುದು ರೈತರು ಹಾಗೂ ಜನರಿಗೆ ಕೇವಲ ಆಶ್ವಾಸನೆ ನೀಡುವ ಕ್ರಮವಾಗಿದೆ. ಇದು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಜಿಲ್ಲೆಗಳಲ್ಲಿ ಕೆಲವು ತಾಲೂಕುಗಳನ್ನು ಹೊರತುಪಡಿಸಿ ಬರಗಾಲ ಘೋಷಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ರೈತರ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಬಿ. ಶ್ರೀರಾಮುಲು, ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಕ್ಷರ ಜ್ಞಾನದಿಂದ ಬದುಕಿನ ಪರಿವರ್ತನೆ: ಮುಕುಲ್ ಜೈನ್

0

ವಿಜಯಸಾಕ್ಷಿ ಸುದ್ದಿ, ಗದಗ: ಅಕ್ಷರವೆಂಬುದು ಕೇವಲ ಜ್ಞಾನವಲ್ಲ, ಅದು ಬದುಕನ್ನು ಬದಲಿಸುವ ಶಕ್ತಿ. ಒಬ್ಬ ವ್ಯಕ್ತಿಗೆ ಅಕ್ಷರ ಕಲಿಸಿದರೆ ಒಂದು ಕುಟುಂಬಕ್ಕೆ ಬೆಳಕು ನೀಡಿದಂತೆ, ಒಂದು ಸಮಾಜವನ್ನು ಸಾಕ್ಷರಗೊಳಿಸಿದರೆ ಇಡೀ ರಾಷ್ಟ್ರಕ್ಕೆ ಬೆಳಕು ನೀಡಿದಂತೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಹೇಳಿದರು.

ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ 60ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಾಕ್ಷರತೆಯು ವ್ಯಕ್ತಿಯ ವೈಯಕ್ತಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಜತೆಗೆ ಸಾಮಾಜಿಕ ಜಾಗೃತಿ, ಪ್ರಜಾಪ್ರಭುತ್ವದ ಬಲವರ್ಧನೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ. ಜಿಲ್ಲೆಯನ್ನು ಸಂಪೂರ್ಣ ಸಾಕ್ಷರಗೊಳಿಸಲು ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಸ್.ಎಸ್. ಕುರಿಯವರ ಅವರು ಗಣ್ಯರನ್ನು ಸ್ವಾಗತಿಸಿ, ದೇಶ, ರಾಜ್ಯ ಹಾಗೂ ಜಿಲ್ಲೆಯ ಸಾಕ್ಷರತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶದ ನಿಜವಾದ ಅಭಿವೃದ್ಧಿಯನ್ನು ಅಳೆಯಲು ಆರ್ಥಿಕ ಪ್ರಗತಿಯ ಜತೆಗೆ ಜನರ ಶಿಕ್ಷಣ ಮತ್ತು ಸಾಕ್ಷರತೆಯ ಮಟ್ಟವೂ ಪ್ರಮುಖ ಮಾನದಂಡವಾಗಿದೆ. ಸಾಕ್ಷರತೆ ಹೆಚ್ಚಾದಂತೆ ದೇಶದ ಅಭಿವೃದ್ಧಿಯೂ ವೇಗ ಪಡೆಯುತ್ತದೆ ಎಂದರು.

ಸಾಕ್ಷರ ವ್ಯಕ್ತಿ ಉತ್ತಮ ಉದ್ಯೋಗ ಪಡೆಯಲು ಪ್ರಯತ್ನಿಸುವುದರ ಜತೆಗೆ ಆರೋಗ್ಯದ ಬಗ್ಗೆ ಜಾಗೃತನಾಗುತ್ತಾನೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾನೆ ಹಾಗೂ ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಹೀಗಾಗಿ ಸಾಕ್ಷರತೆ ದೇಶದ ಮಾನವ ಸಂಪನ್ಮೂಲವನ್ನು ಬಲಪಡಿಸುತ್ತದೆ. ಜ್ಞಾನ ಹೊಂದಿರುವ ನಾಗರಿಕರೇ ದೇಶದ ದೊಡ್ಡ ಸಂಪತ್ತು. ಸಾಕ್ಷರತೆ ಕೇವಲ ಸರ್ಕಾರಿ ಯೋಜನೆಯಲ್ಲ, ಸಾಮಾಜಿಕ ಚಳವಳಿಯಾಗಿದೆ ಎಂದು ಹೇಳಿದರು.

ಕನಿಷ್ಠ ಒಬ್ಬ ಅನಕ್ಷರಸ್ಥ ವ್ಯಕ್ತಿಗೆ ಓದಲು ಮತ್ತು ಬರೆಯಲು ಕಲಿಸುವ ಸಂಕಲ್ಪ ಮಾಡಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಸಹಯೋಗದೊಂದಿಗೆ ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಾಕ್ಷರತಾ ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ಡಿ. ಬಡಿಗೇರ, ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಕ್ಷೇತ್ರ ಸಮನ್ವಯಾಧಿಕಾರಿ ಜೆ.ಎ. ಬಾವಿಕಟ್ಟಿ, ಎಸ್.ಆರ್. ನದಾಫ್, ಎಸ್.ಬಿ. ಬನ್ನಿಕಲ್, ಕೆ.ಎ. ಹುಲಗೇರಿ, ಜಿ.ಡಿ. ದಾಸರ, ಎಸ್.ವೈ. ವಿಬೂತಿ ಸೇರಿದಂತೆ ಗದಗ ಗ್ರಾಮೀಣ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ಶಾಸ್ತ್ರಿಜಿ ಬಿ.ಎಡ್. ಕಾಲೇಜಿನ ಉಪನ್ಯಾಸಕ ರಾಜು ಕೇರೂರ ಹಾಗೂ ಪ್ರಶಿಕ್ಷಣಾರ್ಥಿಗಳು, ಯುವ ಸಬಲೀಕರಣ ಇಲಾಖೆಯ ವಿದ್ಯಾರ್ಥಿಗಳು ಮತ್ತು ಸಾಕ್ಷರತಾ ಕಾರ್ಯಕ್ರಮಗಳ ಬೋಧಕರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರಗು ತಂದರು.

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ಸಾಕ್ಷರತಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬಿತ್ತಿಪತ್ರಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಇತರರು ಅನಾವರಣಗೊಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕ ಅಶೋಕ ಹಾದಿ ಮಾಡಿದರು. ದೈಹಿಕ ಶಿಕ್ಷಕ ಎಸ್. ಮುಳಗುಂದ ಅವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೆ.ವೈ. ವಿಬೂತಿ ವಂದನಾರ್ಪಣೆ ಮಾಡಿದರು.

ಸಾಕ್ಷರತೆ ಕೇವಲ ಸರ್ಕಾರಿ ಯೋಜನೆಯಲ್ಲ; ಅದು ಸಾಮಾಜಿಕ ಚಳವಳಿಯಾಗಿದೆ. ಕನಿಷ್ಠ ಒಬ್ಬ ಅನಕ್ಷರಸ್ಥ ವ್ಯಕ್ತಿಗೆ ಓದಲು ಮತ್ತು ಬರೆಯಲು ಕಲಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು.

— ಎಸ್.ಎಸ್. ಕುರಿಯವರ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಗದಗ

ಹುದ್ದೆ ಅಧಿಕಾರವಲ್ಲ, ಸಮಾಜ ಸೇವೆಗೆ ಅವಕಾಶ: ಕೆ.ಎ. ಬಳಿಗೇರ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮಾಜದ ಸಂಘಟನೆ ಬಲಗೊಳ್ಳಬೇಕಾದರೆ ಪರಸ್ಪರ ಸಹಕಾರ, ಒಗ್ಗಟ್ಟು ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘದ ಹುದ್ದೆಗಳನ್ನು ಅಧಿಕಾರವೆಂದು ಭಾವಿಸದೆ, ಸಮಾಜ ಸೇವೆಗೆ ದೊರೆತ ಅವಕಾಶವೆಂದು ಪರಿಗಣಿಸಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದಲ್ಲಿ ರವಿವಾರ ನಡೆದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಬಣಜಿಗ ಸಮಾಜದ ಇತಿಹಾಸ, ಪರಂಪರೆ ಹಾಗೂ ಹಿರಿಯರು ನೀಡಿರುವ ಕೊಡುಗೆಗಳನ್ನು ಅರಿತು, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಇಂದಿನ ಸಮಾಜದ ಮೇಲಿದೆ. ಕನ್ನಡ ನಾಡಿನ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಬಣಜಿಗ ಸಮಾಜದ ಅನೇಕ ಮಹನೀಯರು ಅಮೂಲ್ಯ ಕೊಡುಗೆ ನೀಡಿದ್ದಾರೆ. 12ನೇ ಶತಮಾನದ ಶರಣ ಚಳವಳಿಯಿಂದ ಇಂದಿನವರೆಗೂ ಸಮಾಜದ ಹಲವು ಸಾಧಕರು ತಮ್ಮ ಸೇವೆ ಮತ್ತು ಸಾಧನೆಯ ಮೂಲಕ ದಾರಿದೀಪವಾಗಿದ್ದಾರೆ ಎಂದರು.

ಅಕ್ಕಮಹಾದೇವಿಯವರ ವಚನಗಳು ಹಾಗೂ ಜೀವನಾದರ್ಶಗಳು ಇಡೀ ಮನುಕುಲಕ್ಕೆ ಸ್ಫೂರ್ತಿಯಾಗಿವೆ. ಮಕ್ಕಳಿಗೆ ಕೇವಲ ಅಕ್ಷರ ಜ್ಞಾನ ನೀಡಿದರೆ ಸಾಲದು, ಸಂಸ್ಕಾರ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಮೌಲ್ಯಗಳನ್ನು ಕಲಿಸುವುದು ಅಗತ್ಯ. ಮೊಬೈಲ್ ಹಾಗೂ ದೂರದರ್ಶನದ ವ್ಯಾಮೋಹದಿಂದ ಮಕ್ಕಳಿಗೆ ಪೋಷಕರು ಸಮಯ ನೀಡದಿರುವ ಪರಿಸ್ಥಿತಿ ಬದಲಾಗಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರು, ಹಿರಿಯರು ಹಾಗೂ ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಸಲಹೆ ನೀಡಿದರು.

ಸಮಾಜದ ಸಂಘಟನೆ ಬಲಗೊಳ್ಳಬೇಕಾದರೆ ಪರಸ್ಪರ ಕಾಲೆಳೆಯುವ ಮನೋಭಾವವನ್ನು ಬಿಟ್ಟು, ಒಬ್ಬರ ಬೆಳವಣಿಗೆಯನ್ನು ಮತ್ತೊಬ್ಬರು ಪ್ರೋತ್ಸಾಹಿಸುವ ಉದಾರ ಮನೋಭಾವ ಬೆಳೆಸಿಕೊಳ್ಳಬೇಕು. ತಂತಿ ಬಿಗಿಯಾಗಿದ್ದಾಗಲೇ ನಾದ ಮೂಡುವಂತೆ, ಸಮಾಜದ ಶಕ್ತಿ ಹೊರಹೊಮ್ಮಲು ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಗಜೇಂದ್ರಗಡ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮೇಶ ಮೆಣಸಗಿ, ಸಮಾಜವನ್ನು ಕಟ್ಟುವುದಷ್ಟೇ ಅಲ್ಲ, ಅದನ್ನು ಸಂಘಟಿಸಿ ಮುನ್ನಡೆಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.

ಸಮಾಜದ ಸಂಘಟನೆಗಳಲ್ಲಿ ರಾಜಕೀಯವನ್ನು ಬೆರೆಸಬಾರದು. ವೈಯಕ್ತಿಕ ರಾಜಕೀಯ ವಿಚಾರಗಳನ್ನು ಬದಿಗಿಟ್ಟು ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಸಾಗಬೇಕು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲು ಸಮಾಜದ ವತಿಯಿಂದ ವಿದ್ಯಾನಿಧಿ ಸ್ಥಾಪಿಸಿ, ಸದಸ್ಯರಿಂದ ಸಂಗ್ರಹಿಸುವ ಹಣವನ್ನು ಅಗತ್ಯವಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ಕಾಲಕಾಲಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ. ಜಕ್ಕಲಿಯಲ್ಲಿ ಆರೋಗ್ಯ ಶಿಬಿರ ಆಯೋಜಿಸಿದರೆ ತಮ್ಮಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು, ವಿವಿಧ ತಜ್ಞ ವೈದ್ಯರನ್ನು ಕರೆಸುವುದು ಹಾಗೂ ಅಗತ್ಯ ಔಷಧಗಳ ವ್ಯವಸ್ಥೆಗೂ ನೆರವಾಗುವುದಾಗಿ ಭರವಸೆ ನೀಡಿದರು.

ರೋಣ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುತ್ತಣ್ಣ ಸಂಗಳದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಯಾಗಿ ಮಾತನಾಡಿದ ಚನ್ನಮಲ್ಲಪ್ಪ ಗದುಗಿನ, ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸದಸ್ಯತ್ವ ಪಡೆದು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಮನವಿ ಮಾಡಿದರು.

ನೂತನ ಪದಾಧಿಕಾರಿಗಳಿಗೆ ನರೇಗಲ್ಲ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ, ಅಟ್ಯಾಪಟ್ಯಾ ಕ್ರೀಡಾಪಟು ಪ್ರೀತಿ ಬುಳ್ಳಾ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಅನ್ನದಾನೇಶ ಮೆಣಸಗಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಟಿ.ಎ. ಕಡಗದ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ವಾಲಿ ಪ್ರಾರ್ಥಿಸಿದರು. ಮುತ್ತಣ್ಣ ಕಡಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ವಾಲಿ ಸ್ವಾಗತಿಸಿದರು. ಪ್ರಕಾಶಪ್ಪ ಹೊಸಮನಿ ನಿರೂಪಿಸಿದರು.

ವೇದಿಕೆಯಲ್ಲಿ ಜಿ.ಎ. ಬೆಲ್ಲದ, ಅಶೋಕಪ್ಪ ಯಾವಗಲ್ಲ, ಡಾ. ಎ.ವಿ. ನರೇಗಲ್ಲ, ನೂತನ ಅಧ್ಯಕ್ಷ ಚನ್ನಬಸಪ್ಪ ಸೂಡಿ, ವೀರಪ್ಪ ಪಟ್ಟಣಶೆಟ್ಟಿ, ಅನಿಲಕುಮಾರ ಹೊಸಮನಿ, ವೀರಪ್ಪ ಅಕ್ಕಿಶೆಟ್ಟರ, ಶರಣಬಸಪ್ಪ ಪಟ್ಟಣಶೆಟ್ಟಿ, ಮಹಾದೇವಪ್ಪ ಮೆಣಸಗಿ, ಸುಭಾಷಚಂದ್ರ ಕುದರಿ, ವೀರಪ್ಪ ವಾಲಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ಹುದ್ದೆಗಳನ್ನು ಅಧಿಕಾರವೆಂದು ಭಾವಿಸದೆ, ಸಮಾಜ ಸೇವೆಗೆ ದೊರೆತ ಅವಕಾಶವೆಂದು ಪರಿಗಣಿಸಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಿಂದ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು.

— ಕೆ.ಎ. ಬಳಿಗೇರ, ಅಧ್ಯಕ್ಷರು, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್

ಬೆಂಗಳೂರಿನ ಸೌತ್ ರುಚೀಸ್ ಹೋಟೆಲ್ ಮೇಲೆ FDA ದಾಳಿ; ಅವಧಿ ಮೀರಿದ ಆಹಾರ ಪತ್ತೆ!

0

ಬೆಂಗಳೂರು: ಗ್ರಾಹಕರಿಂದ ಬಂದ ದೂರುಗಳ ಆಧಾರದ ಮೇಲೆ FDA ಅಧಿಕಾರಿಗಳು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸೌತ್ ರುಚೀಸ್ ಹೋಟೆಲ್‌ ಮೇಲೆ ದಾಳಿ ನಡೆಸಿದ್ದಾರೆ.

ಪರಿಶೀಲನೆ ವೇಳೆ ಹೋಟೆಲ್‌ನ ಅಡುಗೆಮನೆಯಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಒಳಭಾಗದಲ್ಲಿ ಜಿರಳೆಗಳು ಓಡಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಡುಗೆಮನೆಯ ಹಲವು ಭಾಗಗಳಲ್ಲಿ ಅಸ್ವಚ್ಛತೆ ಇರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.

ಇದಲ್ಲದೆ, ಕೊಬ್ಬರಿ ಪುಡಿ, ಸಾಂಬಾರ್ ಪುಡಿ, ರಸಂ ಪುಡಿ, ಮಶ್ರೂಮ್ ಹಾಗೂ ಸೌತ್ ರುಚೀಸ್ ಹೆಸರಿನ ಚಟ್ನಿ ಪುಡಿ ಸೇರಿದಂತೆ ಹಲವು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ತಪ್ಪಾಗಿ ಲೇಬಲ್ ಮಾಡಲಾಗಿದ್ದ ಆಹಾರ ಪದಾರ್ಥಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಅಡುಗೆಮನೆಯಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ, ಹೋಟೆಲ್‌ನ ಅಡುಗೆಮನೆಯನ್ನು ತಕ್ಷಣ ಸೀಜ್ ಮಾಡಲು FDA ಆಯುಕ್ತರು ಆದೇಶಿಸಿದ್ದಾರೆ.

ಅವಧಿ ಮೀರಿದ ಹಾಗೂ ನಿಯಮಾನುಸಾರ ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೋಟೆಲ್ ಮಾಲೀಕ ಪ್ರದೀಪ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.