Home Blog Page 3225

ಮೊಹರಂ ಮೆರವಣಿಗೆ; ಶ್ರೀರಾಮ ಸೇನಾ ಕಾರ್ಯಕರ್ತನಿಂದ ಇಬ್ಬರಿಗೆ ಚಾಕು ಇರಿತ; ಒಬ್ಬ ಗಂಭೀರ

ವಿಜಯಸಾಕ್ಷಿ ಸುದ್ದಿ, ಗದಗ

ಮೊಹರಂ ಹಬ್ಬದ ಕೊನೆಯ ದಿನವಾದ ಮಂಗಳವಾರ ನಡೆದ ಮೆರವಣಿಗೆಯಲ್ಲಿ ಕಾಲು ತುಳಿದ‌ ಕ್ಷುಲ್ಲಕ ಕಾರಣಕ್ಕೆ ಇಬ್ಬರನ್ನು ಚಾಕುವಿನಿಂದ ಇರಿದ ಘಟನೆ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ ಚಾಕು‌ ಇರಿತ ಪ್ರಕರಣಕ್ಕೆ ಟ್ವಿಸ್ಟ್; ಶ್ರೀರಾಮ ಸೇನಾ ಕಾರ್ಯಕರ್ತ ಸೇರಿ ಮೂವರ ಬಂಧನ, ಪೊಲೀಸರ ಸರ್ಪಗಾವಲು

ಇರಿತಕ್ಕೊಳಗಾದವರನ್ನು ತೌಸೀಫ್ ಹೊಸಮನಿ (23) ಹಾಗೂ ಮುಷ್ತಾಕ್ ಹೊಸಮನಿ (24) ಎಂದು ಗುರುತಿಸಲಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮೆರವಣಿಗೆಯಲ್ಲಿ ಕಾಲು ತುಳಿದ ಕ್ಷುಲ್ಲಕ ಕಾರಣಕ್ಕೆ ಶ್ರೀರಾಮಸೇನೆಯ ಕಾರ್ಯಕರ್ತ ಸೋಮು ಗುಡಿ ಎಂಬಾತ ಹೊಸಮನಿ ಸಹೋದರರೊಂದಿಗೆ ತಗಾದೆ ತೆಗೆದಿದ್ದರಿಂದ ಗಲಾಟೆ ನಡೆದಿದೆ. ಗ್ರಾಮಸ್ಥರು ಜಗಳ ಬಿಡಿಸಿದ್ದಾರೆ. ಮೆರವಣಿಗೆ ಬಿಟ್ಟು ಮತ್ತೊಂದು ಸ್ಥಳದಲ್ಲಿ ಕಾಯ್ದು ಇಬ್ಬರಿಗೂ ಚಾಕುವಿನಿಂದ ಇರಿದ ಸೋಮು ಗುಡಿ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಗಾಯಗೊಂಡವರ ಸಹೋದರ ಹೇಳುವ ಪ್ರಕಾರ, ಆರ್ ಎಸ್ ಎಸ್ ಗೆ ಸೇರಿದ ಸೋಮು ಗುಡಿ ಹಾಗೂ ಎಳೆಂಟು ಜನ ಚಾಕು ಇರಿದಿದ್ದಾರೆ ಎಂದು ಆರೋಪಿಸಿದ್ದಾನೆ.

ಗಾಯಾಳುಗಳಿಗೆ ಜಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ತೌಸೀಫ್ ಎಂಬಾತನ ಸ್ಥಿತಿ ಗಂಭೀರವಾಗಿದೆ. ಜಿಮ್ಸ್‌ಗೆ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಎಪಿಎಮ್ ಸಿಯಲ್ಲಿ ಅಂದರ್-ಬಾಹರ್ ಜೂಜಾಟ; ಏಳು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಏಳು ಜನರ ತಂಡವೊಂದು ಎಪಿಎಮ್ ಸಿ ಯಲ್ಲಿ‌ ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಪ್ರಕಾಶ್ ಡಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತರಿಂದ ಎಂಟು ಸಾವಿರ ರೂ.ಗಳನ್ನು ಜಪ್ತಿ ಮಾಡಲಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಎಪಿಎಮ್ ಸಿ ಆವರಣದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮಂಜುನಾಥ್ ಬಸಪ್ಪ ಜಾಬದಿ, ರವಿ ಗದಿಗೆಪ್ಪ ಸೊಪ್ಪಿನ, ನಿಂಗಪ್ಪ ಮಲ್ಲಪ್ಪ ಗೌಡನಾಯ್ಕರ್, ಅಮರೇಶ್ ಬಸವರಾಜ್ ಮಳ್ಳೆಪ್ಪನವರ್, ಅಭಿಷೇಕ ಪರಶುರಾಮ ಸಾತಪುತೆ, ಸಂಜೀವ್ ವೀರಭದ್ರಪ್ಪ ರಾಗಿ ಹಾಗೂ ಗೂಳಪ್ಪ ಚನ್ನಪ್ಪ ಕಳಾಸೂರು ಎಂಬುವರನ್ನು ಪೊಲೀಸರು ದಾಳಿ ಬಂಧಿಸಿದ್ದಾರೆ.

ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಲಗಿಯಲ್ಲಿ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರಕ್ಕೆ ಮುಹೂರ್ತ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಸೆಂಚುರಿ ಡೈರೆಕ್ಟರ್ ಓಂ ಸಾಯಿಪ್ರಕಾಶ್ ಮತ್ತೇ ಡೈರೆಕ್ಷನ್ ಕ್ಯಾಪ್ ಹಾಕಿದ್ದಾರೆ. ಈ ಸಲ ಮತ್ತೇ ಭಕ್ತಿಪ್ರಧಾನ‌ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ದಕ್ಷಿಣ ಭಾರತದಲ್ಲೇ ಪವರ್ ಫುಲ್, ಫೇಮಸ್ ಆಗಿರೊ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮದೇವಿ ಕುರಿತ ಚಿತ್ರಕ್ಕೆ ಮಂಗಳವಾರ ಹುಲಗಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು.

ಸಾಯಿಪ್ರಕಾಶ್ ನಿರ್ದೇಶನದ 105ನೇ ಚಿತ್ರವಾದ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದ ಚಿತ್ರೀಕರಣದ ಮೊದಲ ದೃಶ್ಯಕ್ಕೆ ಸಿನಿಮಾ ನೂರು ದಿನ ಕಾಣಲಿ, ಯಶಸ್ಸು ಗಳಿಸಲಿ ಎಂದು ಶುಭ ಕೋರಿ ಸಚಿವ ಆನಂದ್ ಸಿಂಗ್ ಅವರ ಸಂಬಂಧಿ ಬಿಜೆಪಿ ನಾಯಕಿ ಕವಿತಾ ಸಿಂಗ್ ಅವರು ಕ್ಲಾಪ್ ಮಾಡಿದರು.

ಶ್ರೀಮತಿ ಲಕ್ಷ್ಮಮ್ಮ ರಾಮೇಗೌಡರ ಆಶೀರ್ವಾದದೊಂದಿಗೆ ಭಾವನಾ ಪ್ರೊಡಕ್ಷನ್ ಅವರ ಗೌರಮ್ಮ ಪಿ.ಅವರು ನಿರ್ಮಿಸುತ್ತಿರುವ ವಿಶ್ವರೂಪಿಣಿ ಹುಲಿಗೆಮ್ಮ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಕೊಪ್ಪಳ, ಹುಲಗಿ, ಬುಕ್ಕಸಾಗರ ಸುತ್ತಮುತ್ತಲಿನ ಸ್ಥಳಗಳಲ್ಲಿ ಸುಮಾರು 15 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ಶೂಟಿಂಗ್ ನಡೆಯಲಿದ್ದು ಹೊಸ ವರ್ಷಕ್ಕೆ ಹುಲಿಗೆಮ್ಮ ದರ್ಶನ ಪಡೆಯಬಹುದು. ಸಿನಿಮಾ ಕನ್ನಡದಲ್ಲೇ ಚಿತ್ರೀಕರಣಗೊಂಡು ತೆಲುಗು, ತಮಿಳು, ಮರಾಠಿ ಮತ್ತಿತರ ಭಾಷೆಗಳಿಗೆ ಡಬ್ ಆಗಲಿದೆ ಎಂಬುದು ಸದ್ಯದ ಅಪ್ಡೇಟ್ಸ್.

ಚಿತ್ರದ ಮುಹೂರ್ತ ಸಮಾರಂಭದ ಸಾನಿಧ್ಯ ಸಿದ್ದನಕೊಳ್ಳದ ಶ್ರೀ ಶಿವಕುಮಾರ್ ಸ್ವಾಮೀಜಿ ವಹಿಸಿದ್ದರು.

ಚಿತ್ರಗಳು: ನಾಗರಾಜ ಹಿರೇಹಡಗಲಿ.

ಮುಳಗುಂದದಲ್ಲಿ ಮೊಹರಂ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ

ತ್ಯಾಗ, ಬಲಿದಾನದ ಸಂಕೇತವಾದ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಸೌಹಾರ್ದತೆಯಿಂದ ಹಿಂದೂ ಮುಸ್ಲಿಂ ಬಾಂಧವರು ಆಚರಣೆ ಮಾಡಿದರು.

ಹಬ್ಬದ ನಿಮಿತ್ತ ಇಂದು (ಪಾಂಜಾಗಳು) ದೇವರನ್ನು ನೋಡಿ ಸಾವಿರಾರು ಭಕ್ತರು ಕಣ್ಣು ತುಂಬಿಕೊಂಡು ಪುನಿತರಾದರು.

ಪ್ರತಿ ವರ್ಷವೂ ಬೆಳಿಗ್ಗೆ 11.45ಕ್ಕೆ ಹಾಗೂ ಸಂಜೆ 5.45ಕ್ಕೆ ದೇವರು ಭೇಟಿ ನೀಡುವ ಸಾಂಪ್ರದಾಯ ಇರುತ್ತದೆ.

ಮನೆಯಬೀಗ ಮುರಿದು 2.65 ಲಕ್ಷ ರೂ. ಮೌಲ್ಯದ ಚಿನ್ನ, ನಗದು ಕಳ್ಳತನ

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ತಿಜೋರಿಯಲ್ಲಿದ್ದ 2.65 ಲಕ್ಷ ರೂ. ಮೌಲ್ಯದ ಸ್ವತ್ತು ಕಳ್ಳತನವಾಗಿದೆ.

ಪೋಸ್ಟಲ್ ನಲ್ಲಿ ಕಾರ್ಯನಿರ್ವಹಿಸುವ ಪ್ರಿಯದರ್ಶಿನಿ ಡ್ಯಾನಿಯಲ್ ಕುಮಾರ್ ಎಂಬುವರ ವಿವೇಕಾನಂದ ರಸ್ತೆಯ ಬಳಿಯಿರುವ ಮನೆಯ ಬಾಗಿಲಿಗೆ ಹಾಕಿದ್ದ ಬೀಗ, ಚಿಲಕವನ್ನು ಯಾವುದೋ ವಸ್ತುವಿನಿಂದ ಮೀಟಿ ಮುರಿದು, ಮನೆಯೊಳಗೆ ಹೊಕ್ಕು ಅಲ್ಲಿದ್ದ ತಿಜೋರಿಯ ಬಾಗಿಲನ್ನು ಮೀಟಿ ತೆರೆದು ಒಳಗೆ ಇಟ್ಟಿದ್ದ 60 ಸಾವಿರ ರೂ. ಬೆಲೆಯ 36 ಗ್ರಾಂ. ತೂಕದ ಹಳೆಯ ಬಂಗಾರದ ಲಾಂಗ್ ಚೈನ್, 60 ಸಾವಿರ ರೂ. ಬೆಲೆಬಾಳುವ 40 ಗ್ರಾಂ. ತೂಕದ ಪಾಟ್ಲಿ ಬಳೆ, 42 ಗ್ರಾಂ. ತೂಕವಿರುವ 1.25 ಲಕ್ಷ ರೂ. ಬೆಲೆಬಾಳುವ ಚಿನ್ನದ ನೆಕ್ಲೆಸ್ ಹೀಗೆ ಒಟ್ಟೂ 2.45 ಲಕ್ಷ ರೂ. ಬೆಲೆಬಾಳುವ 118 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 20 ಸಾವಿರ ರೂ. ನಗದು ಹಣ ಕಳ್ಳತನವಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನರೇಗಾ ಹಣ ದುರ್ಬಳಕೆ ಆರೋಪ ಸಾಬೀತು; ಗ್ರಾ.ಪಂ. ಅಧ್ಯಕ್ಷ, ಪಿಡಿಓಗೆ ಹಣ ಭರಿಸಲು ಆದೇಶ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಶಿಗ್ಲಿ ಗ್ರಾಮ ಪಂಚಾಯತಿಯ ನರೇಗಾ ಕಾಮಗಾರಿಯಲ್ಲಿನ ಅವ್ಯವಹಾರದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಗ್ರಾಪಂ ಅಧ್ಯಕ್ಷ ಅಶೋಕಯ್ಯ ಮುಳಗುಂದಮಠ ಮತ್ತು ಪಿಡಿಓ ಬಿ.ಟಿ. ಅಮ್ಮನವರ ಅವರಿಗೆ ದುರುಪಯೋಗ ಆಗಿರುವ 6,73,000 ರೂ ಹಣ ಮರುಪಾವತಿಸುವಂತೆ ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಜಿಪಂ ನರೇಗಾ ಯೋಜನೆಯ ಓಂಬುಡ್ಸ್ಮನ್ ಸಿ.ಪಿ. ಹಿರೇಮಠ ಆದೇಶಿಸಿದ್ದಾರೆ.

ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿಯಲ್ಲಿ ಸನ್ 2021-22ನೇ ಸಾಲಿನ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ಮತ್ತು ಹಣ ದುರುಪಯೋಗ ನಡೆದಿದೆ ಎಂದು ಗ್ರಾಪಂ ಅಧ್ಯಕ್ಷರು, ಪಿಡಿಓ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಗ್ರಾಪಂ ನೌಕರ ಮತ್ತು ನರೇಗಾ ಇಂಜಿನಿಯರ ವಿರುದ್ಧ ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಲಾಗಿತ್ತು.

ಗ್ರಾಮದ ಅಮಾತಪ್ಪ ಹರವಿ, ಸುರೇಶ ಸ್ವಾದಿ, ಸಂತೋಷ ಮಾದನಹಳ್ಳಿ ಅವರು ದಾಖಲೆಗಳ ಸಮೇತ ದೂರು ಸಲ್ಲಿಸಿದರು. ದೂರಿನಲ್ಲಿ 2021-22ನೇ ಸಾಲಿನಲ್ಲಿ ಕೈಗೊಂಡ ಬದು ನಿರ್ಮಾಣ ಕಾರ್ಯದಲ್ಲಿ ಎನ್‌ಆರ್‌ಇಜಿ ಜಾಬ್ ಕಾರ್ಡ್ ಇದ್ದರೂ ಇಲ್ಲದವರ ಹೆಸರಿನಲ್ಲಿ ಎನ್‌ಎಂಆರ್ ಹಾಕಿ ಲಕ್ಷಾಂತರ ರೂ ಅವ್ಯವಹಾರ ಮಾಡಿದ್ದಾರೆ. ಇದರಲ್ಲಿ ಪಿಡಿಓ, ಅಧ್ಯಕ್ಷರು, ಪಂಚಾಯತಿ ಸಿಬ್ಬಂದಿ ಹಾಗೂ ಕೃಷಿ ಇಲಾಖೆ ಅಧಿಕಾರಿ ಸೇರಿ ಒಟ್ಟು 253 ಕೂಲಿಕಾರರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಣ ದುರುಪಯೋಗ ಮತ್ತು ಅವ್ಯವಾರ ಮಾಡಲಾಗಿದೆ.

ಇದರಲ್ಲಿ ಪಿಡಿಓ ಬಿ.ಟಿ. ಅಮ್ಮನವರ ಮತ್ತು ಗ್ರಾಪಂ ಅಧ್ಯಕ್ಷ ಅಶೋಕಯ್ಯ ಮುಳುಗುಂದಮಠ ಸೇರಿಕೊಂಡು ಕೆಲಸಕ್ಕೆ ಹೋಗಲಾರದವರ ಹೆಸರಿನಲ್ಲಿ ಹಣ ತೆಗೆದಿದ್ದಾರೆ ಎಂದು ಜಿಲ್ಲಾ ಪಂಚಾಯಿತಿಗೆ 2022ರ ಫೆಬ್ರವರಿ 16ರಂದು ದೂರು ಸಲ್ಲಿಸಲಾಗಿತ್ತು.

ಆದಾಗ್ಯೂ ಸಹಿತ ಹಾರಿಕೆ ಉತ್ತರ ಕೊಟ್ಟು ಸಂಬಂಧಪಟ್ಟ ದಾಖಲೆಗಳನ್ನು ಸಹ ಸರಿಯಾಗಿ ನೀಡಲು ಹಿಂದೇಟು ಹಾಕಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರು ಎಂದು ಹೇಳಲಾಗುತ್ತದೆ.

ಆದರೆ ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಇಲಾಖೆಯು ದೂರಿನ ಹಿನ್ನೆಲೆಯಲ್ಲಿ ಓಂಬಡ್ಸಮನ್ ನೇಮಕವಾಗಿ ಅವ್ಯವಹಾರದ ತನಿಖೆಯನ್ನು ಬೆನ್ನು ಹತ್ತಿದಾಗ ಒಟ್ಟು 6,73,000 ರೂ ದುರುಪಯೋಗವಾಗಿರುವ ಸತ್ಯ ಹೊರಬಿದ್ದಿದೆ.

ಅದಕ್ಕೆ ಪಿಡಿಒ ಬಿ.ಟಿ.ಅಮ್ಮನವರ ಮತ್ತು ಗ್ರಾಪಂ ಅಧ್ಯಕ್ಷ ಅಶೋಕಯ್ಯ ಮುಳುಗುಂದಮಠ ಮೇಲೆ ಕರ್ತವ್ಯ ಲೋಪ ಮತ್ತು ಹಣ ದುರುಪಯೋಗ ಹೊಣೆಗಾರನಾಗಿಸಲಾಗಿದೆ. ಗ್ರಾಪಂ ಸಿಬ್ಬಂದಿ ಶಂಕರ ನಡುವಿನಮನಿ ಅವರ ಮೇಲೆ ಕೆಸಿಎಸ್‌ಆರ್ ಮತ್ತು ಸಿಸಿಎ ಕಾನೂನಿನಡಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ.

ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಬಾಬು ಮತ್ತು ಗ್ರಾಪಂ ಸಿಬ್ಬಂದಿ ತಿರಕಪ್ಪ ಬಾಲೆಹೊಸೂರ ಇವರಿಗೆ ಎಚ್ಚರಿಕೆ ನೀಡಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕಯ್ಯ ಮುಳಗುಂದಮಠಗೆ ಹಣ ಮರುಪಾವತಿ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಕೆರೆ ನಿರ್ಮಾಣ, ಸಾಮೂಹಿಕ ಬದು ನಿರ್ಮಾಣದಲ್ಲಿ ಮಾಡಿದ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಇವರಿಬ್ಬರ ಮೇಲೆ ಲೋಕಾಯುಕ್ತ ತನಿಖೆಯೂ ನಡೆದಿದೆ ಎನ್ನಲಾಗಿದೆ.

ನಮ್ಮ ಪಕ್ಷಕ್ಕೆ ಸಿದ್ಧರಾಮೋತ್ಸವದಿಂದ ಹೊಸದೊಂದು ಶಕ್ತಿ ಬಂದಂತಾಗಿದೆ: ಎಚ್.ಕೆ. ಪಾಟೀಲ

ಯಾರೂ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ

ವಿಜಯಸಾಕ್ಷಿ ಸುದ್ದಿ, ಗದಗ

ಸಿದ್ಧರಾಮಯ್ಯನವರಿಗೆ ವಯಸ್ಸು ಎಷ್ಟಾದರೂ ಆಗಿರಲಿ ಬಿಡಿ. ಅದರ ಬಗ್ಗೆ ತಕರಾರು ಯಾಕೆ? ಸ್ವತಃ ಸಿದ್ಧರಾಮಯ್ಯನವರೇ ತನಗೆ 75 ವರ್ಷ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹುಟ್ಟಿದ ತಾರೀಖು ನನ್ನ ಅಪ್ಪ-ಅಮ್ಮನಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ. ಟೀಚರ್ ದಾಖಲಿಸಿದ್ದು ಎಂದು ಅವರೇ ಹೇಳಿಕೊಂಡಿದ್ದಾರೆ. ಅವರ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ. ನಾವೂ ಒಪ್ಪಿಕೊಂಡಿದ್ದೇವೆ. ಅವರ ಅಭಿಮಾನಿಗಳೂ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಯಾರೂ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಶಾಸಕ ಎಚ್.ಕೆ. ಪಾಟೀಲ ಪ್ರತಿಕ್ರಿಯಿಸಿದರು.

ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಸಿದ್ದರಾಮಯ್ಯನವರ ವಯಸ್ಸಿನ ವಿಚಾರವಾಗಿ ಹೇಳಿದರು.

ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವವಾದ ಕಾರ್ಯಕ್ರಮ ಅದಾಗಿತ್ತು. ನಮ್ಮ ಪಕ್ಷಕ್ಕೆ ಸಿದ್ಧರಾಮೋತ್ಸವದಿಂದ ಹೊಸದೊಂದು ಶಕ್ತಿ ಬಂದಂತಾಗಿದೆ. ಈ ಕಾರಣಕ್ಕಾಗಿಯೇ ಬಹಳ ಜನ ಕಸಿವಿಸಿಗೊಂಡಿದ್ದಾರೆ, ಗಾಬರಿಯಾಗಿದ್ದಾರೆ. ಅದಕ್ಕೇನೂ ಮಾಡಲಾಗುವುದಿಲ್ಲ. ಜನರ ಪ್ರೀತಿಯಿಂದಾಗಿ ಅಷ್ಟು ದೊಡ್ಡ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಅವರಿಗೆ 75 ವರ್ಷ ಪೂರ್ಣಗೊಂಡಿಲ್ಲ ಎಂದು ಹುಡುಕಿ ತಗಾದೆ ತೆಗೆಯುವದರಿಂದ ಏನೂ ಲಾಭವಿಲ್ಲ ಎಂದರು.

ಮಳೆಯಿಂದ ಉಂಟಾಗುತ್ತಿರುವ ಹಾನಿಗಳ ಬಗ್ಗೆ ಮಾತನಾಡಿದ ಶಾಸಕರು, ಅತಿಯಾದ ಮಳೆಯಿಂದ ತೀವ್ರ ಸಂಕಷ್ಟ ಎದುರಾಗಿದೆ. ಪರಿಹಾರ ಕೊಡಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಬೆಳೆದು ನಿಂತ ಹೆಸರು ಬೆಳೆ ನೆಲಕಚ್ಚಿದೆ, ಫಸಲು ಕೈಸೇರುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಮಳೆ ನಿಲ್ಲುವ ಲಕ್ಷಣವೂ ಇಲ್ಲ. ಇದರಿಂದ ಕೃಷಿಕ ಮತ್ತೊಮ್ಮೆ ಬಹಳ ತೊಂದರೆ ಅನುಭವಿಸುತ್ತಿದ್ದಾನೆ.

ದುರ್ದೈವವೆಂದರೆ, ರಾಜ್ಯ ಸರ್ಕಾರ ಬೆಳೆಹಾನಿ ಪರಿಹಾರ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿಯೇ ಇಲ್ಲ. ಬೆಳೆ ಪರಿಹಾರವನ್ನ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಎಂದ ಅವರು, ಮನೆ ಬಿದ್ದು ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕಾದ ಸರ್ಕಾರ ಗಪ್ಚುಪ್ ಕುಳಿತುಬಿಟ್ಟಿದೆ. ಹತ್ತು ದಿನದ ಹಿಂದೆ ಮಳೆಯಿಂದಾಗಿ ಹಾನಿಗೊಳಗಾದವರಿಗೆ ಇನ್ನೂ ಹಣ ತಲುಪಿಲ್ಲ. ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಾಳಾಗಿರುವ ರಸ್ತೆಗಳನ್ನು ರಿಪೇರಿ ಮಾಡಿಸುವಂತೆ ಮುಖ್ಯಮಂತ್ರಿಗಳನ್ನು ವಿನಂತಿಸುತ್ತೇನೆ ಎಂದ ಶಾಸಕ ಪಾಟೀಲ, ಗುಂಡಿಯಿಂದಾಗಿ ರಸ್ತೆ ಮೇಲೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ರಸ್ತೆ ರಿಪೇರಿ ಕೆಲಸವನ್ನ ಎಲ್ಲ ಕಡೆಗಳಲ್ಲೂ ಮಾಡಿಸಬೇಕಿದೆ. ಹದಗೆಟ್ಟ ರಸ್ತೆಗಳ ಬಗ್ಗೆ ಜನ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಗದಗ ನಗರದಲ್ಲೂ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಕಾರ್ಯಪ್ಪ ಸರ್ಕಲ್ ನಿಂದ ಮುಂದೆ ಬೆಟಗೇರಿಯವರೆಗೂ ಸಮಸ್ಯೆ ಉಂಟಾಗಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ಈಗಾಗಲೇ ಹಣ ಮಂಜೂರಿಯಾಗಿರಬಹುದು. ಸೋಮವಾರದಿಂದಲೇ ಕೆಲಸ ಆರಂಭಿಸುವಂತೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಸರ್ಕಾರದ ಆಡಳಿತ ಕುಸಿದು ಬೀಳುತ್ತಿದೆ. ಇದಕ್ಕೆ ಕಾರಣ ತಿಳಿಯುತ್ತಿಲ್ಲ. ಸರ್ಕಾರದ ವಿರುದ್ಧ ಕಾರ್ಯಕರ್ತರು ಬಂಡೆದ್ದಿರುವದೇ ಕಾರಣವಾ ಎಂಬುದು ತಿಳಿಯುತ್ತಿಲ್ಲ. ರಾಜಕೀಯವಾಗಿ ಬಡದಾಡಿಕೊಳ್ಳಿ. ಆದರೆ, ಜನರ ಕಷ್ಟಕಾಲದಲ್ಲಿ ತಕ್ಷಣ ಸ್ಪಂದಿಸಿ ಎಂದು ಶಾಸಕರು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಸಿದ್ಧಲಿಂಗೇಶ್ವರ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಮಂದಾಲಿ, ಕಿಸಾನ್ ಸೆಲ್ ನ ಮಾಜಿ ಅಧ್ಯಕ್ಷ ಪರಮೇಶ್ವರ ಜಂತ್ಲಿ ಇದ್ದರು.

ಸಿದ್ಧರಾಮೋತ್ಸವ ಸ್ಟಿರಾಯ್ಡ್ ಇದ್ದಂತೆ, ಬಹಳ ಕಾಲ ಪರಿಣಾಮ ಬೀರುವದಿಲ್ಲ: ಸಿ.ಸಿ. ಪಾಟೀಲ ವ್ಯಂಗ್ಯ

ಸಿದ್ಧರಾಮೋತ್ಸವದಿಂದ ಬಿಜೆಪಿಯ ಮೇಲೆ ಯಾವ ಪರಿಣಾಮವೂ ಇಲ್ಲ

ವಿಜಯಸಾಕ್ಷಿ ಸುದ್ದಿ, ಗದಗ

ಕಾಂಗ್ರೆಸ್ ನವರು ಇಂಥದೊಂದು ಸಮಾವೇಶ ಮಾಡಿ ಸಂತಸಪಟ್ಟಿರಬಹುದು. ಇಂತಹ ಸಮಾವೇಶಗಳನ್ನು ಬಿಜೆಪಿಯಲ್ಲಿ ದಿನಕ್ಕೊಂದು ಬೇಕಿದ್ದರೂ ಮಾಡ್ತೇವೆ. ಅವರ ಅಸ್ತಿತ್ವ ಉಳಿಸಿಕೊಳ್ಳಲು ವಿರೋಧ ಪಕ್ಷದವರು ಇಂಥವುಗಳನ್ನ ಮಾಡ್ತಾರೆ. ನಾನಾ-ನೀನಾ ಎಂದು ಬಲ ಪ್ರದರ್ಶಿಸುವ ಉದ್ದೇಶಕ್ಕೆ ಸಮಾವೇಶ ಮಾಡುತ್ತಾರೆ. ಆದರೆ, ಇವರು ಸಂಘಟನೆ ಮಾಡಿ ಸಮಾವೇಶ ಆಯೋಜಿಸಿದ ಮಾತ್ರಕ್ಕೆ ಕಾಂಗ್ರೆಸ್ ನಲ್ಲಿ ಶಾಸಕರಿದ್ದವರು ಸಿ.ಎಂ ಆಗಿಬಿಡೋದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಲೇವಡಿ ಮಾಡಿದರು.

ಅವರು, ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸಿದ್ಧರಾಮೋತ್ಸವದಲ್ಲಿ ಸಿದ್ದು-ಡಿಕೆಶಿ ಆಲಿಂಗನ ಮಾಡಿದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ಧರಾಮಯ್ಯ ಹಾಗೂ ಡಿಕೆಶಿಯವರಿಗೆ ಆಲಿಂಗನ ಮಾಡಿಸಿದ್ದು ರಾಹುಲ್ ಗಾಂಧಿ. ಕೇವಲ ಕೈಸನ್ನೆ ಮಾಡಿಯೇ ಹೀಗೆ ಕೂಡಿಸಿಬಿಟ್ರಲ್ಲ! ಎಂದು ಚಟಾಕಿ ಹಾರಿಸಿದರು.

ಸಿದ್ಧರಾಮೋತ್ಸವ ಸ್ಟಿರಾಯ್ಡ್ ಇದ್ದಂತೆ. ಸ್ಟಿರಾಯ್ಡ್ನ ಶಕ್ತಿ ಬಹಳ ಹೊತ್ತು ಇರುವದಿಲ್ಲ. ಇನ್ನೂ 8 ತಿಂಗಳವರೆಗೆ ಈ ಸ್ಟಿರಾಯ್ಡ್ ಶಕ್ತಿ ನಿಲ್ಲುವದಿಲ್ಲ. ಹಾಗೆಯೇ ಸಿದ್ಧರಾಮೋತ್ಸವವೂ ಕೂಡ ಬಹಳ ಕಾಲ ಪರಿಣಾಮ ಬೀರುವದಿಲ್ಲ. ಇವರ ಸಿದ್ಧರಾಮೋತ್ಸವ ಕಾರ್ಯಕ್ರಮ ಬಿಜೆಪಿಯ ಮೇಲೆ ಯಾವ ಪರಿಣಾಮವನ್ನೂ ಬೀರುವದಿಲ್ಲ. ಇಂಥಹ ಆಯೋಜನೆಗಳಿಂದ ಬಿಜೆಪಿ ಹೆದರುವದೂ ಇಲ್ಲ ಬಿಡಿ. ಹುಟ್ಟುಹಬ್ಬದ ಸಂಭ್ರಮವನ್ನು ನೋಡಿ ಜನ ಓಟು ಹಾಕುವುದಿಲ್ಲ ಎಂದು ಹೇಳಿದರು.

ರಾಷ್ಟ್ರಧ್ವಜದ ಬಗ್ಗೆ ಹಗುರವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವ ವಿಚಾರವಲ್ಲ. ರಾಷ್ಟ್ರಧ್ವಜ ಬಿಜೆಪಿಯ ಸ್ವತ್ತಲ್ಲ. ಆರ್.ಎಸ್.ಎಸ್, ಪ್ರಧಾನಿ ಮೋದಿಯವರನ್ನು ತೆಗಳಿ ಬೈಯದೇ ಇದ್ದರೆ, ಇವರಿಗೆ ತಿಂದ ಊಟ ಜೀರ್ಣವಾಗುವದಿಲ್ಲವೇನೋ. ನಮ್ಮ ಗುರಿ 150+ ಸೀಟುಗಳೆಂದು ನಾವೇನೂ ಡಂಗೂರ ಬಾರಿಸುವ ಅವಶ್ಯಕತೆ ಇಲ್ಲ ಎಂದರು.

ರಾಜ್ಯಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂಭವಿಸುತ್ತಿರುವ ಹಾನಿಯ ಬಗ್ಗೆ ಪ್ರತಿಕ್ರಿಯಿಸಿದ ಸಿ.ಸಿ. ಪಾಟೀಲ, ಕಳೆದ ಎರಡು-ಮೂರು ತಿಂಗಳುಗಳಿಂದ ಅತ್ಯಂತ ಭೀಕರವಾದ ಮಳೆಯನ್ನು ರಾಜ್ಯ ಎದುರಿಸುತ್ತಿದೆ. ಮಡಿಕೇರಿ, ಮೈಸೂರು, ಉಡುಪಿ, ಮಂಗಳೂರು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದೆ. ಆ ಭೀಕರ ದೃಶ್ಯಗಳನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಗದಗ ಜಲ್ಲೆಯ ಹಲವು ಪ್ರದೇಶಗಳಲ್ಲಿಯೂ ವಿಪರೀತ ಮಳೆ ಸುರಿದಿದೆ. ಬೆಳೆ, ವಾಸದ ಮನೆಗಳಿಗೂ ಸಾಕಷ್ಟು ಹಾನಿಯಾಗಿದೆ.

ಮುಖ್ಯಮಂತ್ರಿಗಳು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರೂ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸುಮಾರು 200 ಕೋಟಿ.ರೂಗಳ ಮಧ್ಯಂತರ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ.

ಗದಗ ಜಿಲ್ಲೆಗೆ ಐದು ಕೋಟಿ.ರೂಗಳ ಬೆಳೆ ಪರಿಹಾರ ಮಂಜೂರಾಗಿದೆ. ಮುಖ ನೋಡಿ ಮಣೆ ಹಾಕದೇ ಯಾವ ಬೆಳೆ ಹಾನಿಯಾಗಿದೆಯೆಂದು ನಿಖರವಾಗಿ ಸಮೀಕ್ಷೆ ನಡೆಸಿ ಹಾನಿ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಷ್ಟು ಶೀಘ್ರವಾಗಿ ಸರ್ಕಾರ ಬೆಳೆ ಹಾನಿ ಪರಿಹಾರವನ್ನು ತಲುಪಿಸಲಿದೆ ಎಂದರು.

ಗದಗ ನಗರದಲ್ಲಿ ಸಾಕಷ್ಟು ಕಡೆ ರಸ್ತೆಗಳೂ ಹಾನಿಗೊಳಗಾಗಿವೆ. ಇವುಗಳ ದುರಸ್ತಿ ಕಾರ್ಯಕ್ಕೆ 12-13 ಕೋಟಿ ರೂ. ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಟೆಂಡರ್ ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಕೆಲಸ ಪ್ರಾರಂಭಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮುಖಂಡ‌ ಅನಿಲ‌ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಮುಖಂಡರಾದ ಭೀಮಸಿಂಗ್ ರಾಠೋಡ, ಬಾಬು ಯಲಿಗಾರ, ಪರಮೇಶ್ ನಾಯಕ್, ಶರಣಪ್ಪ ಕಮಡೊಳ್ಳಿ ಸೇರಿದಂತೆ ಅನೇಕರಿದ್ದರು.

ಮುಂಡರಗಿ ಪೊಲೀಸರ ಕಾರ್ಯಾಚರಣೆ; 6 ಜನ ಹನಿ ನೀರಾವರಿ ಪೈಪ್ ಕಳ್ಳರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮುಂಡರಗಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ರೈತರ ಜಮೀನುಗಳಲ್ಲಿನ ನಡೆದಿದ್ದ ಹನಿ ನೀರಾವರಿ ಪೈಪ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮುಂಡರಗಿ ಪೊಲೀಸರು ಆರು ಜನರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಪೈಪ್ ಜಪ್ತಿ ಮಾಡಿದ್ದಾರೆ.

ಆಗಸ್ಟ್ ಮೂರರಂದು ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರು ಗ್ರಾಮದಲ್ಲಿ ಹನಿ ನೀರಾವರಿ ಪೈಪ್ ಗಳನ್ನು ಕಳ್ಳತನ ಮಾಡಿ ಟ್ರ್ಯಾಕ್ಟರ್ ಮೂಲಕ ಸಾಗಾಟ ಮಾಡುತ್ತಿದ್ದಾಗ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದ ಖದೀಮರು, ಗ್ರಾಮಸ್ಥರು ಬೆನ್ನಟ್ಟಿದಾಗ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿ ಪರಾರಿಯಾಗಿದ್ದರು.

ಇದನ್ನೂ ಓದಿ ಗ್ರಾಮಸ್ಥರ ಕಣ್ಣಿಗೆ ಬಿದ್ದ ನೀರಿನ ಪೈಪ್ ಕಳ್ಳರು! ಬೆನ್ನಟ್ಟಿದಾಗ ಟ್ರ್ಯಾಕ್ಟರ್ ಬಿಟ್ಟು ಪರಾರಿ

ಇದರಿಂದ ಆಕ್ರೋಶಗೊಂಡ‌ ಗ್ರಾಮಸ್ಥರು, ಕಳ್ಳರನ್ನು ಹಿಡಿದು ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದರು.

ಪ್ರಕರಣ ದಾಖಲು ಮಾಡಿಕೊಂಡ ಮುಂಡರಗಿ ಪೊಲೀಸರು ಹಿರೇವಡ್ಡಟ್ಟಿಯ ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೊಟೇಶ್ ನಿಂಗಪ್ಪ ಹಂಚಿನಾಳ, ಹನಮಂತ ಕನಕಪ್ಪ ನಿಟ್ಟಾಲಿ, ವಿಜಯಕುಮಾರ್ ಶರಣಯ್ಯ ಹಾಲಗಿಮಠ ಹಾಗೂ ದೇವೇಂದ್ರ ಅಲಿಯಾಸ್ ದೇವರಾಜ ಬಸವಣ್ಣೆಪ್ಪ ಲಕ್ಕುಂಡಿ ಎಂದು ಪೊಲೀಸ ಮೂಲಗಳು ತಿಳಿಸಿವೆ.

ಇನ್ನೊಂದು ಪ್ರಕರಣ ಆಗಸ್ಟ್ 7 ರ ಅಂದರೆ ಭಾನುವಾರ ಬೆಳಗಿನ ಜಾವ ಮುಂಡರಗಿ ಪಟ್ಟಣದಲ್ಲಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಹನಿ ನೀರಾವರಿ ಪೈಪ್ ಸಾಗಾಟ ಮಾಡುತ್ತಿದ್ದಾಗ, ಪೊಲೀಸರ ಕೈಗೆ ಇಬ್ಬರು ಸಿಕ್ಕಿ‌ ಬಿದ್ದಿದ್ದಾರೆ.

ಬಂಧಿತರನ್ನು ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಶರಣಪ್ಪ ರಮೇಶ್ ಉಪ್ಪಾರ ಹಾಗೂ ಹಾಲೇಶ್‌ ನಿಂಗಪ್ಪ ಸಿಂದೋಗಿ ಎಂದು ಗುರುತಿಸಲಾಗಿದೆ. ಇನ್ಸ್‌ಪೆಕ್ಟರ್ ಸುನಿಲ್ ಸವದಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಕಸಗೂಡಿಸಿದ ನಗರಸಭೆ ಅಧ್ಯಕ್ಷೆ ಉಷಾ ದಾಸರ

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸ್ವಚ್ಚತಾ ಅಭಿಯಾನ, ಅವಳಿ ನಗರದ ಸ್ವಚ್ಚತೆಗೆ ಕೈಜೋಡಿಸಿ; ಉಷಾ ದಾಸರ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಅವಳಿ‌ ನಗರದ ಸೌಂದರ್ಯೀಕರಣ ಕೇವಲ ಪೌರ ಕಾರ್ಮಿಕರಿಂದಷ್ಟೇ ಸಾಧ್ಯವಿಲ್ಲ. ಅವರ ಜೊತೆಗೆ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಕೈಜೋಡಿಸಿದಾಗಷ್ಟೇ ಅವಳಿ ನಗರ ಸ್ವಚ್ಚತೆಯಲ್ಲಿ ಮಾದರಿ ನಗರವಾಗಿ ಹೊರಹೊಮ್ಮಲಿದೆ ಎಂದು ನಗರಸಭೆ ಅಧ್ಯಕ್ಷೆ ಉಷ ದಾಸರ ಹೇಳಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಚ್ಚತೆ ಕಾಪಾಡುವುದರಿಂದ ಕೊಳಚೆಯಿಂದ ಹರಡಬಹುದಾದ ಅರ್ಧದಷ್ಟು ಕಾಯಿಲೆಗಳನ್ನು ನಿಯಂತ್ರಿಸಬಹುದು. ಇಂತಹ ಮಹಾತ್ಕಾರ್ಯಕ್ಕೆ ಅವಳಿ ನಗರದ ಸ್ವಚ್ಚತೆಗೆ ಪೌರ ಕಾರ್ಮಿಕರು ಪ್ರತಿನಿತ್ಯ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ ಸ್ವಚ್ಚತೆಗೆ ಸಹಕರಿಸಬೇಕು. ಕಸದ ತೊಟ್ಟಿಗಳಲ್ಲಿ ಕಸ ಹಾಕಬೇಕು. ರಾತ್ರಿ ಹೊತ್ತು ತ್ಯಾಜ್ಯವನ್ನು ರಸ್ತೆ ಬದಿ ಎಸೆದು ಹೋಗುತ್ತಿರುವುದರಿಂದ ಅವಳಿ ನಗರ ಅಂದಗೆಡುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಕಸ ಎಸೆಯುವ ರೂಢಿಯನ್ನ ಕೈಬಿಟ್ಟು
ಸ್ವಚ್ಚತೆಯ ವಿಚಾರದಲ್ಲಿ ಅವಳಿ ನಗರವನ್ನು ಸುಂದರ ನಗರವನ್ನಾಗಿಸಬೇಕು ಎಂದರು.

ಮಹಾತ್ಮಾ ಗಾಂಧಿಜಿ ಅವರು ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದರಲ್ಲದೇ, ಸ್ವಚ್ಚತೆಯಲ್ಲಷ್ಟೇ ದೇವರು ಕಾಣುತ್ತಾನೆ ಎಂದು ಹೇಳುತ್ತಿದ್ದರು. ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಆಸ್ತಿಗಳು, ರಸ್ತೆಗಳನ್ನು ಸ್ವಚ್ಚವಾಗಿಡುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಜಿ ಅವರು 2014ರಲ್ಲಿ ಸ್ವಚ್ಚ ಭಾರತ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಅಭಿಯಾನದಿಂದಾಗಿ ದೇಶದ ಬಹುತೇಕ ನಗರಗಳಿಂದು ಸುಂದರವಾಗಿ ಕಾಣುತ್ತಿದ್ದು, ಅಂತಹ ನಗರಗಳ ಪಟ್ಟಿಯಲ್ಲಿ ಗದಗ-ಬೆಟಗೇರಿಯೂ ಸೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಉಷಾ ದಾಸರ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅನಿಲ್ ಅಬ್ಬಿಗೇರಿ, ಅನಿತಾ ಗಡ್ಡಿ, ಮುಖಂಡರಾದ ವಿಜಯಕುಮಾರ್ ಗಡ್ಡಿ, ಮಹೇಶ ದಾಸರ, ಶಶಿಧರ ದಿಂಡೂರ, ಅಮರನಾಥ್ ಗಡಗಿ, ವಿಜಯಲಕ್ಷ್ಮಿ ಮಾನ್ವಿ, ಪ್ರಶಾಂತ್ ದಾಸರ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರು ಇದ್ದರು.

error: Content is protected !!