Home Blog Page 35

ಹಕ್ಕು–ಸೌಲಭ್ಯಗಳಿಗಾಗಿ ಸಂಘಟಿತ ಹೋರಾಟ ಅಗತ್ಯ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಹುಬ್ಬಳ್ಳಿಯಲ್ಲಿ ಅ. 9ರಂದು ನಡೆಯಲಿರುವ 32ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯದ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘಟನೆಯ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಆದಿವಾಸಿ ಹಿರಿಯ ನಾರಾಯಣ ಹರಣಶಿಕಾರಿ ಕರೆ ನೀಡಿದರು.

ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಮದಲ್ಲಿ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಹಕ್ಕಿಪಿಕ್ಕಿ, ಹರಣಶಿಕಾರಿ, ಪಾರದಿ ಶಿಕಾರಿ ಸೇರಿದಂತೆ ವಿವಿಧ ಸಮುದಾಯಗಳ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹರಣಶಿಕಾರಿ ಹಾಗೂ ಪಾರದಿ ಸಮುದಾಯಗಳ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ 49 ಆದಿವಾಸಿ ಬುಡಕಟ್ಟು ಸಮುದಾಯಗಳು ಹಾಗೂ 32 ಅಂತರ ಸಮುದಾಯಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಮತ್ತು ಸೆಟ್ಲ್‌ಮೆಂಟ್ ಪ್ರದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಆದಿವಾಸಿ ಸಮುದಾಯಗಳಿಗೆ ಸರ್ಕಾರದಿಂದ ದೊರೆಯಬೇಕಾದ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟ ಅಗತ್ಯ. ಜೊತೆಗೆ ಸಮುದಾಯಗಳ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾರುತಿ ಪಗಲೆಪ್ಪ ಹರಣಶಿಕಾರಿ, ಮಾರುತಿ ಗಂಗಪ್ಪ ಹರಣಶಿಕಾರಿ, ರಾಮಣ್ಣ ಗೋವಿಂದಪ್ಪ ಹರಣಶಿಕಾರಿ, ಅರ್ಜುನ್ ಅಪ್ಪನ ಕಟ್ಟಿಮನಿ, ಶೇಖಪ್ಪ ರಾಮಪ್ಪ ಚವಾಣ್, ಅಣ್ಣಪ್ಪ ಗೋಪಾಲ್ ಹರಣಶಿಕಾರಿ, ಚಂದ್ರು ಬಸಪ್ಪ ಹರಣಶಿಕಾರಿ, ನಾಗಪ್ಪ ಜಾರಪ್ಪ ಹರಣಶಿಕಾರಿ, ಮಲ್ಲೇಶ್ ಬಸಪ್ಪ ಲಕ್ಕುಂಡಿ, ಬಸವರಾಜ ಬಾಲಪ್ಪ ಚವಾಣ, ಬಸವರಾಜ ಮಾರುತಿ ಚವಾಣ, ಮಲ್ಲಪ್ಪ ಬಸಪ್ಪ ಹರಣಶಿಕಾರಿ, ಚೆನ್ನಪ್ಪ ಬಸಪ್ಪ ಹರಣಶಿಕಾರಿ, ಬಸವರಾಜ ಗಂಗಪ್ಪ ಹರಣಶಿಕಾರಿ, ದಲ್ಲಪ್ಪ ಅಪ್ಪಣ್ಣ ಕಟ್ಟಿಮನಿ ಸೇರಿದಂತೆ ಸಮುದಾಯದ ಹಿರಿಯರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ಗದಗ ಜಿಲ್ಲೆ ಬರಪೀಡಿತವೆಂದು ಘೋಷಿಸಲು ಆಗ್ರಹಿಸಿ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಅಗತ್ಯ ನೆರವು ನೀಡಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ.

ಗದಗ ಜಿಲ್ಲೆಗೆ ಬರ ಅಧ್ಯಯನಕ್ಕಾಗಿ ಪ್ರಪ್ರಥಮ ಬಾರಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರನ್ನು ವೇದಿಕೆ ವತಿಯಿಂದ ಸ್ವಾಗತಿಸಿ ಮನವಿ ಸಲ್ಲಿಸಲಾಯಿತು.

ಮಳೆ ಕೊರತೆಯಿಂದ ಪ್ರಸಕ್ತ ಸಾಲಿನ ಬೆಳೆಗಳು ಹಾನಿಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಚಿವರು ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಸಮಗ್ರವಾಗಿ ಪರಿಶೀಲಿಸಿ, ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಲಪ್ಪ ವರವಿ ಮನವಿ ಮಾಡಿದರು.

ಇದರೊಂದಿಗೆ 2025-26ನೇ ಸಾಲಿನ ಬೆಳೆ ಪರಿಹಾರ ಇನ್ನೂ ರೈತರ ಕೈ ಸೇರಿಲ್ಲ. ಬಾಕಿ ಇರುವ ಪರಿಹಾರವನ್ನು ಅರ್ಹ ರೈತರಿಗೆ ಶೀಘ್ರವಾಗಿ ವಿತರಿಸಬೇಕು. 2026-27ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ಹಾನಿಯನ್ನೂ ನಿಖರವಾಗಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬರ ಘೋಷಣೆ ಸೇರಿದಂತೆ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಗದಗ ಜಿಲ್ಲಾಧ್ಯಕ್ಷ ಸಣ್ಣೆಲಪ್ಪ ರಾಮಣ್ಣ ವಳಗೇರಿ, ಜಗದೀಶ ಕರಡಿಗುಡ್ಡ, ಕುಮಾರ ಲಮಾಣಿ, ಸಂತೋಷ ರಾಥೋಡ, ಚಂದ್ರು ಈಟಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿದ್ಯಾರ್ಥಿ, ಪೌರಕಾರ್ಮಿಕರ ಸಮಸ್ಯೆ ಪರಿಹರಿಸಲು ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು, ಪೌರಕಾರ್ಮಿಕರು ಹಾಗೂ ಎಸ್‌ಸಿ–ಎಸ್‌ಟಿ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ಜೈ ಭೀಮ್ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಜೈ ಭೀಮ್ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗಣೇಶ ವಾಯ್. ಹುಬ್ಬಳ್ಳಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಪ್ರೈಜ್‌ ಮನಿ ಹಾಗೂ ವಿದ್ಯಾರ್ಥಿವೇತನದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಅಸ್ಪೃಶ್ಯತೆ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಎಸ್‌ಸಿ–ಎಸ್‌ಟಿ ಸಮುದಾಯದ ಹಕ್ಕುಗಳು ಹಾಗೂ ಸೌಲಭ್ಯಗಳು ಅರ್ಹರಿಗೆ ತಲುಪುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಪೌರಕಾರ್ಮಿಕರ ಸಮಸ್ಯೆಗಳಿಗೂ ಆದ್ಯತೆ ನೀಡಬೇಕು. ಹೊರಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಕೈಗೊಳ್ಳಬೇಕು. ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿದ್ದ ಗೃಹಭಾಗ್ಯ ಯೋಜನೆ ಸ್ಥಗಿತಗೊಂಡಿದ್ದು, ಮತ್ತೆ ಅನುದಾನ ಕಲ್ಪಿಸಬೇಕು. ಸ್ವಂತ ಮನೆ ಇಲ್ಲದ ಪೌರಕಾರ್ಮಿಕರಿಗೆ ಪ್ರತ್ಯೇಕ ನಿವೇಶನ ಅಥವಾ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಇದರೊಂದಿಗೆ ದೇವದಾಸಿಯರ ಸಮಸ್ಯೆ, ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರು, ರಸ್ತೆ ಹಾಗೂ ಒಳಚರಂಡಿ ಸಮಸ್ಯೆಗಳನ್ನು ಪರಿಹರಿಸುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಎಫ್. ತೌಜಲ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ. ದಾದಾಪೀರ ಕಲೆಗಾರ, ರೋಣ ತಾಲೂಕು ಅಧ್ಯಕ್ಷ ಬಸವರಾಜ ಬದಾಮಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಾಷ್ಟ್ರೀನ್ ಜೋಸೆಫ್, ಉಪಾಧ್ಯಕ್ಷ ರಾಜೇಶ ವಿ. ಶೆಟ್ಟರ್, ಯುವ ಘಟಕದ ಜಿಲ್ಲಾಧ್ಯಕ್ಷ ಇಮಾಮಹುಸೇನ ಕುನ್ನಿಬಾವಿ, ಕಾರ್ಯದರ್ಶಿ ಸಮೀರಅಹ್ಮದ ಕುನ್ನಿಬಾವಿ, ಬಾಬು ಬಳ್ಳಾರಿ, ಮಂಜುನಾಥ ಸಂದಿಮನಿ, ಪ್ರೇಮಕುಮಾರ ಹುಬ್ಬಳ್ಳಿ, ಮಂಜುನಾಥ ಸುಂಕದ, ಶ್ರೀಕಾಂತ ಹಲವಾಗಲಿ, ಹೇಮಂತ ಹುಬ್ಬಳ್ಳಿ, ವಿರುಪಾಕ್ಷ ಗೌಡರ, ಗಿರೀಶ ಚಳಗೇರಿ, ರಫೀಕ ನವಲಗುಂದ, ಫರದೀನ ಕಾಟಾಪುರ, ಮಲ್ಲೇಶ ಮೇಳದಾಳಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ವಿದ್ಯಾರ್ಥಿಗಳು, ಪೌರಕಾರ್ಮಿಕರು ಹಾಗೂ ಎಸ್‌ಸಿ–ಎಸ್‌ಟಿ ಸಮುದಾಯದ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅರ್ಹರಿಗೆ ಸಿಗಬೇಕಾದ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು.”
— ಗಣೇಶ ವಾಯ್. ಹುಬ್ಬಳ್ಳಿ, ಜಿಲ್ಲಾಧ್ಯಕ್ಷರು, ಜೈ ಭೀಮ್ ಸಂಘರ್ಷ ಸಮಿತಿ

೯೩ ಸಸಿ ನೆಟ್ಟು ಹಸಿರು ಸಂದೇಶ ಸಾರಲಿರುವ ಎಸ್.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಪ್ರೇಮಕ್ಕೆ ಹೆಸರಾಗಿರುವ ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರ ೯೩ನೇ ಜನ್ಮದಿನವನ್ನು ಈ ಬಾರಿ ಪರಿಸರ ಕಾಳಜಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆದಿದೆ.

ಎಸ್.ಎಸ್. ಪಾಟೀಲ ಅವರ ೯೩ನೇ ಹುಟ್ಟುಹಬ್ಬದ ಪ್ರಯುಕ್ತ ೯೩ ಸಸಿಗಳನ್ನು ನೆಡುವ ಮೂಲಕ ಹಸಿರು ಸಂದೇಶ ಸಾರಲು ಗದಗ-ಬೆಟಗೇರಿ ರೋಟರಿ ಕ್ಲಬ್, ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಹಾಗೂ ರೋಟ್ರಾಕ್ಟ್ ಕ್ಲಬ್ ಜೆ.ಟಿ. ಕಾಲೇಜು ಘಟಕಗಳು ಮುಂದಾಗಿವೆ.

ಆ. ೧೩ರಂದು ಎಸ್.ಎಸ್. ಪಾಟೀಲ ಅವರ ಜನ್ಮದಿನದ ಹಿನ್ನೆಲೆಯಲ್ಲಿ, ಆ. ೧೧ರಂದು ಬೆಳಿಗ್ಗೆ ೧೦ ಗಂಟೆಗೆ ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಬಳಗಾನೂರ ರಸ್ತೆಯಲ್ಲಿರುವ ಡಾ. ಪ್ರದೀಪ ಉಗಲಾಟ ಅವರ ‘ಶಿವಶಾಂತ ಜೀವ ವೈವಿಧ್ಯ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ.

ಈ ಹಿಂದೆ ಮೃಗಾಲಯದ ಪ್ರಾಣಿಗಳನ್ನು ವಾರ್ಷಿಕ ಪೋಷಕತ್ವದಲ್ಲಿ ದತ್ತು ಪಡೆದು ಪರಿಸರ ಕಾಳಜಿ ಮೆರೆದಿದ್ದ ಎಸ್.ಎಸ್. ಪಾಟೀಲರು, ಈ ಬಾರಿ ‘ಕಾಡು ಬೆಳೆಸಿ, ನಾಡು ಉಳಿಸಿ’ ಎಂಬ ಸಂದೇಶದೊಂದಿಗೆ ಜನ್ಮದಿನವನ್ನು ಹಸಿರುಮಯಗೊಳಿಸಲು ಮುಂದಾಗಿದ್ದಾರೆ. ಅವರ ಪರಿಸರ ಕಾಳಜಿಗೆ ರೋಟರಿ ಕ್ಲಬ್‌ಗಳು ಕೈಜೋಡಿಸಿವೆ.

ಕಾರ್ಯಕ್ರಮದಲ್ಲಿ ಎಸ್.ಎಸ್. ಪಾಟೀಲ ಅವರು ಭಾಗವಹಿಸಿ ೯೩ ಸಸಿ ನೆಡುವ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ರೋಟರಿ ಕ್ಲಬ್ ಉಪಾಧ್ಯಕ್ಷ ಸುರೇಶ ಕುಂಬಾರ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ, ರೋಟರಿ ಕ್ಲಬ್ ವೃತ್ತಿಪರ ನಿರ್ದೇಶಕ ವಿನಯ ಟಿಕಾರೆ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ, ರೋಟ್ರಾಕ್ಟ್ ಕ್ಲಬ್ ಅಧ್ಯಕ್ಷೆ ಸನ್ಮತಿ ತಾಂಬೆ ಹಾಗೂ ರೋಟರಿ ಕ್ಲಬ್ ಖಜಾಂಚಿ ಮಹೇಶ ಹಿಂಡಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ವಹಿಸಿಕೊಂಡಿದ್ದು, ಕಾರ್ಯದರ್ಶಿ ಅಕ್ಷಯ್ ಶೆಟ್ಟಿ ಸ್ವಾಗತಿಸಲಿದ್ದಾರೆ.

ಬೈಪಾಸ್‌ನಲ್ಲಿ ಜಮೀರ್‌ಗೆ ಜನರ ಮನವಿ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರು ಬರ ಪರಿಸ್ಥಿತಿ ಪರಿಶೀಲನೆಗಾಗಿ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ, ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಾರ್ವಜನಿಕರು ಸಚಿವರನ್ನು ಭೇಟಿಯಾಗಿ ವಿವಿಧ ಸಮಸ್ಯೆಗಳ ಕುರಿತು ಮನವಿ ಮಾಡಿದರು.

ಇಟ್ಟಿಗಿ ಗ್ರಾಮದಿಂದ ವರದಾಪುರಕ್ಕೆ ತೆರಳುತ್ತಿದ್ದ ಸಚಿವರ ವಾಹನಕ್ಕಾಗಿ ಸಾರ್ವಜನಿಕರು ಬೈಪಾಸ್ ರಸ್ತೆಯಲ್ಲಿ ಕೆಲಕಾಲ ಕಾಯುತ್ತಿದ್ದರು. ಸಂಜೆ ಸುಮಾರು 5 ಗಂಟೆಗೆ ಸಚಿವರ ಕಾರು ಸ್ಥಳಕ್ಕೆ ಆಗಮಿಸಿದಾಗ ಜನರು ತಮ್ಮ ಸಮಸ್ಯೆಗಳನ್ನು ತಿಳಿಸಲು ಮುಂದಾದರು.

ಸಚಿವರು ಕಾರಿನ ಬಾಗಿಲ ಬಳಿ ನಿಂತು ಜನರತ್ತ ಕೈ ಬೀಸಿ, ಸಮೀಪದಲ್ಲಿದ್ದ ಕೆಲವರೊಂದಿಗೆ ಕೈಕುಲುಕಿದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ಕ್ಷೇತ್ರದ ಮಾಜಿ ಸಚಿವ ಎನ್.ಎಂ. ನಬಿ ಅವರ ಪುತ್ರ ನೂರ್ ಅಹ್ಮದ್ ಖಾನ್ ಅವರು ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಕಟ್ಟಡ ಕಾರ್ಮಿಕ ಖಲೀಲ್ ಅವರ ಕುಟುಂಬದ ಪರಿಸ್ಥಿತಿಯನ್ನು ಸಚಿವರ ಗಮನಕ್ಕೆ ತಂದರು.

ಬರ ಪರಿಸ್ಥಿತಿ ಪರಿಶೀಲನೆಗಾಗಿ ಬಂದಿರುವ ಹಿನ್ನೆಲೆಯಲ್ಲಿ ಸದ್ಯ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಆಗಸ್ಟ್ 15ರಂದು ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಂತ್ರಸ್ತೆ ಶೈನಾಜ್ ಬೇಗಂ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವುದಾಗಿ ಹಾಗೂ ಸರ್ಕಾರದಿಂದ ಸಾಧ್ಯವಿರುವ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಇದೇ ವೇಳೆ ಸಾರ್ವಜನಿಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನೂ ಸಚಿವರ ಗಮನಕ್ಕೆ ತಂದರು. ಯುವಕನೊಬ್ಬ ಸಬ್ಸಿಡಿ ದರದಲ್ಲಿ ಹೊಸ ಕಾರು ಒದಗಿಸುವಂತೆ ಮನವಿ ಮಾಡಿದರು. ಸಚಿವರು ಆತನಿಗೆ ಎಸ್‌ಸಿ ಅಥವಾ ಎಸ್‌ಟಿ ವರ್ಗಕ್ಕೆ ಸೇರಿದವರೇ ಎಂದು ಪ್ರಶ್ನಿಸಿದರು. ತಾನು ಸಾಮಾನ್ಯ ವರ್ಗಕ್ಕೆ ಸೇರಿದವನು ಎಂದು ಯುವಕ ತಿಳಿಸಿದ ಬಳಿಕ ಸಚಿವರು ಮುಂದಿನ ಕಾರ್ಯಕ್ರಮದತ್ತ ಗಮನ ಹರಿಸಿದರು.

ಸಚಿವರ ಭೇಟಿಯ ಸಂದರ್ಭದಲ್ಲಿ ಅಭಿಮಾನಿಗಳು ಘೋಷಣೆ ಕೂಗಿ ಸಂಭ್ರಮಿಸಿದರು. ಪುರಸಭೆ ಸದಸ್ಯ ಇಸ್ಮಾಯಿಲ್ ಸಾಬ್ ಅವರು ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು. ಬಳಿಕ ಸಚಿವರು ವರದಾಪುರದತ್ತ ತೆರಳಿದರು.

ಸ್ಥಳದಲ್ಲಿ ಕೆಲಕಾಲ ಜನದಟ್ಟಣೆ ಉಂಟಾಗಿದ್ದು, ಸಚಿವರ ವಾಹನ ತೆರಳಿದ ಬಳಿಕ ಜನಸಮೂಹವೂ ಚದುರಿತು. ಖಲೀಲ್ ಕುಟುಂಬದ ವಿಚಾರ ಸಚಿವರ ಗಮನಕ್ಕೆ ಬಂದಿದ್ದು, ಆ.15ರಂದು ಸಂತ್ರಸ್ತೆ ಮನೆಗೆ ಭೇಟಿ ನೀಡುವ ಭರವಸೆ ನೀಡಿರುವುದು ಇದೀಗ ಗಮನ ಸೆಳೆದಿದೆ.

“ಆಗಸ್ಟ್ 15ರಂದು ಧ್ವಜಾರೋಹಣದ ಬಳಿಕ ಸಂತ್ರಸ್ತೆ ಶೈನಾಜ್ ಬೇಗಂ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ. ಸರ್ಕಾರದಿಂದ ಸಾಧ್ಯವಿರುವ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ.”
— ಬಿ.ಝೆಡ್. ಜಮೀರ್ ಅಹ್ಮದ್ ಖಾನ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ

ಪ್ಲಾಸ್ಟಿಕ್ ಧ್ವಜ ಮಾರಾಟಕ್ಕೆ ಕಡಿವಾಣ ಹಾಕಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಿ, ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದುತ್ವನಿಷ್ಠರು ಗದಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ರಾಷ್ಟ್ರಧ್ವಜವನ್ನು ಗೌರವದಿಂದ ಹಾರಿಸಿದ ಬಳಿಕ ಅದನ್ನು ರಸ್ತೆ, ಚರಂಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವ ಘಟನೆಗಳು ನಡೆಯುತ್ತಿವೆ. ಕಾಗದದ ಧ್ವಜಗಳು ಶೀಘ್ರ ಮಣ್ಣಿನಲ್ಲಿ ಸೇರಿಕೊಂಡರೆ, ಪ್ಲಾಸ್ಟಿಕ್ ಧ್ವಜಗಳು ಸುಲಭವಾಗಿ ನಾಶವಾಗದೆ ಪರಿಸರಕ್ಕೂ ಹಾನಿ ಉಂಟುಮಾಡುವುದರ ಜತೆಗೆ ರಾಷ್ಟ್ರಧ್ವಜದ ಗೌರವಕ್ಕೂ ಧಕ್ಕೆ ತರುತ್ತವೆ ಎಂದು ಸಮಿತಿ ತಿಳಿಸಿದೆ.

ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ತಯಾರಿಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಸರ್ಕಾರಿ ಮಾರ್ಗಸೂಚಿ ಮತ್ತು ಕಾನೂನುಗಳಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಂಗಡಿಗಳು, ಶಾಲಾ-ಕಾಲೇಜುಗಳ ಸುತ್ತಮುತ್ತ ಹಾಗೂ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಧ್ವಜಗಳ ಮಾರಾಟ ನಡೆಯದಂತೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತ್ರಿವರ್ಣ ವಿನ್ಯಾಸದ ಮಾಸ್ಕ್‌ಗಳ ಮಾರಾಟ ಹಾಗೂ ಬಳಕೆಯ ಬಗ್ಗೆಯೂ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ರಾಷ್ಟ್ರಧ್ವಜದ ಬಣ್ಣಗಳು ಅಥವಾ ಧ್ವಜದ ವಿನ್ಯಾಸವನ್ನು ಅಗೌರವವಾಗುವ ರೀತಿಯಲ್ಲಿ ಬಳಸುವುದನ್ನು ತಡೆಯಲು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಧ್ವಜದ ಗೌರವ ಮತ್ತು ಸೂಕ್ತ ನಿರ್ವಹಣೆ ಕುರಿತು ಅರಿವು ಮೂಡಿಸಬೇಕು ಎಂದು ಆಗ್ರಹಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರಕಾಶ ಕೋಟಿ, ವಿನಾಯಕ ಕೆ., ಭೀಮರಾಜ ದೊಡ್ಡಮನಿ, ಡಾ. ರವೀಂದ್ರ ನಂದಿ, ಲಕ್ಷ್ಮೀ ನಂದಿ, ಪ್ರವೀಣ ಬೆನ್ನೂರ, ವಸಂತ ಕುಲಕರ್ಣಿ, ಕರಿಸೋಮನಗೌಡ್ರು, ನಿರಂಜನ ನಾರಾಯಣಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ರಾಷ್ಟ್ರಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಪ್ಲಾಸ್ಟಿಕ್ ಧ್ವಜಗಳ ಮಾರಾಟವನ್ನು ತಡೆದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.”
— ವೆಂಕಟರಮಣ ನಾಯಕ್, ಜಿಲ್ಲಾ ಸಮನ್ವಯಕ, ಹಿಂದೂ ಜನಜಾಗೃತಿ ಸಮಿತಿ, ಗದಗ

ಎಸ್‌ಐಆರ್‌ ಗೊಂದಲ: ಸರ್ಕಾರ ಸ್ಪಷ್ಟನೆ ನೀಡಲಿ: ಎಚ್.ವೈ. ಮಿಶನ್ನವರ

0

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರದ ಎಸ್‌ಐಆರ್‌ (ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅರ್ಜಿ ನಮೂನೆ ಭರ್ತಿ ಸೇರಿದಂತೆ ವಿವಿಧ ಹಂತಗಳಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸ್ಪಷ್ಟ ಮಾರ್ಗಸೂಚಿ ನೀಡಬೇಕು ಎಂದು ಅಂಬೇಡ್ಕರ್ ವಿಚಾರಧಾರಾ ಜಿಲ್ಲಾ ಅಧ್ಯಕ್ಷ ಎಚ್.ವೈ. ಮಿಶನ್ನವರ ಆಗ್ರಹಿಸಿದ್ದಾರೆ.

ಎಸ್‌ಐಆರ್‌ ಅರ್ಜಿಯ ವಿವಿಧ ಕಾಲಂಗಳನ್ನು ಹೇಗೆ ಭರ್ತಿ ಮಾಡಬೇಕು ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ಸ್ಪಷ್ಟ ಮಾಹಿತಿ ಇಲ್ಲ. ಸುಶಿಕ್ಷಿತರಿಗೆ ಕೂಡ ಕೆಲವು ಅಂಶಗಳು ಗೊಂದಲ ಉಂಟುಮಾಡುತ್ತಿದ್ದು, ಓದು-ಬರಹ ಬಾರದವರು ಅರ್ಜಿ ಭರ್ತಿ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಹೀಗಾಗಿ ಕೇವಲ ಸೂಚನೆ ನೀಡುವುದಕ್ಕಿಂತ, ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅದೇ ರೀತಿ ಶಾಲಾ ದಾಖಲೆ, ಆಧಾರ್‌ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಜನ್ಮ ದಿನಾಂಕ ಅಥವಾ ಇತರೆ ವಿವರಗಳಲ್ಲಿ ವ್ಯತ್ಯಾಸವಿದ್ದರೆ ಎಸ್‌ಐಆರ್‌ ಅರ್ಜಿಯಲ್ಲಿ ಯಾವ ದಾಖಲೆಯನ್ನು ಆಧಾರವಾಗಿಟ್ಟುಕೊಳ್ಳಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು. 2002ರ ನಂತರ ಜಿಲ್ಲೆ, ತಾಲೂಕು, ವಾರ್ಡ್‌ ಸೇರಿದಂತೆ ಆಡಳಿತಾತ್ಮಕ ವ್ಯಾಪ್ತಿಗಳಲ್ಲಿ ಬದಲಾವಣೆಗಳಾಗಿರುವುದರಿಂದ ಹಳೆಯ ವಿವರಗಳನ್ನು ಹೊಂದಿರುವವರು ಅರ್ಜಿಯಲ್ಲಿ ಯಾವ ಮಾಹಿತಿಯನ್ನು ನಮೂದಿಸಬೇಕು ಎಂಬುದಕ್ಕೂ ಸ್ಪಷ್ಟ ಮಾರ್ಗಸೂಚಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಫೋಟೋಗೆ ಸಂಬಂಧಿಸಿದಂತೆ ಕೂಡ ಸಾರ್ವಜನಿಕರಲ್ಲಿ ಗೊಂದಲವಿದ್ದು, ಕೆಲವರಿಗೆ ನಿರ್ದಿಷ್ಟ ರೀತಿಯ ಫೋಟೋ ತೆಗೆಸುವಂತೆ ಸೂಚಿಸಲಾಗುತ್ತಿದೆ. ಆದರೆ ಮತ್ತೊಂದೆಡೆ ವಿಭಿನ್ನ ರೀತಿಯ ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ ಫೋಟೋಗೆ ಸಂಬಂಧಿಸಿದ ನಿಯಮಗಳನ್ನೂ ಅಧಿಕೃತವಾಗಿ ಸ್ಪಷ್ಟಪಡಿಸಬೇಕು. ವಿಶೇಷವಾಗಿ ನಿಗದಿತ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಏನು ಎಂಬುದನ್ನು ತಿಳಿಸಬೇಕು ಎಂದು ಮಿಶನ್ನವರ ಮನವಿ ಮಾಡಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ವ್ಯಕ್ತಿಯ ಹೆಸರು ಅಥವಾ ವಿವರ ತಪ್ಪಿಹೋಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಗ್ರಾಮ, ವಾರ್ಡ್‌ ಹಾಗೂ ಬೂತ್‌ ಮಟ್ಟದಲ್ಲಿ ಅರ್ಜಿ ಭರ್ತಿ ಮಾಡಲು ನೆರವಾಗುವಂತೆ ಸರ್ಕಾರದಿಂದಲೇ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಬೇಕು. ಅನಕ್ಷರಸ್ಥರು, ಹಿರಿಯ ನಾಗರಿಕರು ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ಸ್ಥಳದಲ್ಲೇ ಮಾರ್ಗದರ್ಶನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜನರು ಪ್ರತಿದಿನ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸರ್ಕಾರ ಈ ವಿಷಯವನ್ನು ನಿರ್ಲಕ್ಷಿಸದೆ, ತಕ್ಷಣವೇ ಸ್ಪಷ್ಟ ಮಾಹಿತಿ ಬಿಡುಗಡೆ ಮಾಡಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಜನಸ್ನೇಹಿಯಾಗಿಸಬೇಕು ಎಂದು ಎಚ್.ವೈ. ಮಿಶನ್ನವರ ಒತ್ತಾಯಿಸಿದ್ದಾರೆ.

ಬೆಳೆ ಹಾನಿಗೆ ಪರಿಹಾರ: ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮುಖ್ಯಮಂತ್ರಿ ಸೂಚನೆ ಮೇರೆಗೆ ಧಾರವಾಡ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿಯ ವಸ್ತುಸ್ಥಿತಿ ಪರಿಶೀಲಿಸಲಾಗುತ್ತಿದ್ದು, ಮಳೆಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಪುಟ ದರ್ಜೆ ಸಚಿವ ಸಂತೋಷ ಲಾಡ್ ಹೇಳಿದರು.

ಅಳ್ನಾವರ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಕಲಘಟಗಿ, ಧಾರವಾಡ, ನವಲಗುಂದ, ಹುಬ್ಬಳ್ಳಿ, ಅಣ್ಣಿಗೇರಿ ಹಾಗೂ ಕುಂದಗೋಳ ತಾಲೂಕುಗಳಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆಯಲಾಗಿದೆ. ಅಳ್ನಾವರ ತಾಲೂಕಿಗೂ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿವೆ. ಅದರಲ್ಲೂ ಹೆಸರು ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿರುವುದು ಕಂಡುಬಂದಿದೆ. ರೈತರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೆಳೆ ಹಾನಿಯ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ಬೆಳೆ ನಷ್ಟದಿಂದ ಮೂಲಸೌಕರ್ಯ ಹಾನಿವರೆಗೆ ಪರಿಶೀಲನೆ

ಸಭೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಪರಿಹಾರ, ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟ, ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯಗಳಿಗೆ ಉಂಟಾದ ಹಾನಿ ಹಾಗೂ ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

2025-26ನೇ ಸಾಲಿನಲ್ಲಿ ಶೇ.100ರಷ್ಟು ತೆರಿಗೆ ವಸೂಲಿ ಸಾಧನೆ ಮಾಡಿದ ಅಳ್ನಾವರ ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಬೆಣಚಿ ಗ್ರಾಮದ ರಮೇಶಗೌಡ ಬಾಬುಗೌಡ ಪಾಟೀಲ ಅವರ ಮನೆ ಹಾನಿಯಿಂದ ಜಾನುವಾರು ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರದಿಂದ ಮಂಜೂರಾದ ₹37,500 ಪರಿಹಾರಧನ ಹಾಗೂ ಹೊನ್ನಾಪುರ ಗ್ರಾಮದ ಲಗಮಣ್ಣ ನಾಯ್ಕ ಅವರ ಮನೆ ಹಾನಿಗೆ ಮಂಜೂರಾದ ₹6,500 ಪರಿಹಾರಧನವನ್ನು ಸಚಿವ ಸಂತೋಷ ಲಾಡ್ ವಿತರಿಸಿದರು.

ಜಮೀನುಗಳಿಗೆ ತೆರಳಿ ಬೆಳೆ ಪರಿಶೀಲನೆ

ಸಭೆಯ ಬಳಿಕ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳೊಂದಿಗೆ ಅಳ್ನಾವರ ತಾಲೂಕಿನ ಬೆಣಚಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಬೆಳೆ ಹಾನಿಯ ಸ್ಥಿತಿಗತಿಯನ್ನು ಪರಿಶೀಲಿಸಿದರು. ಮಳೆ ಕೊರತೆಯಿಂದ ಬೆಳೆಗಳ ಮೇಲೆ ಉಂಟಾಗಿರುವ ಪರಿಣಾಮ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸ್ಥಳದಲ್ಲೇ ಮಾಹಿತಿ ಪಡೆದುಕೊಂಡರು.

ರೈತರ ಬೆಳೆ ನಷ್ಟದ ವಾಸ್ತವ ಸ್ಥಿತಿಯನ್ನು ಅಧಿಕಾರಿಗಳು ಸಮರ್ಪಕವಾಗಿ ದಾಖಲಿಸಿ, ಅರ್ಹ ರೈತರಿಗೆ ಸರ್ಕಾರದ ಪರಿಹಾರ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಅಳ್ನಾವರ ತಹಶೀಲ್ದಾರ್ ಡಿ.ಎಚ್. ಹೂಗಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರ್ಕಾಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

“ರೈತರ ಬೆಳೆ ಹಾನಿಗೆ ಸರ್ಕಾರದಿಂದ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು.”
— ಸಂತೋಷ ಲಾಡ್, ಸಂಪುಟ ದರ್ಜೆ ಸಚಿವ

ವಿದ್ಯುತ್ ಗೋಪುರಕ್ಕೆ ಜಮೀನು ಕೊಟ್ಟ ರೈತರಿಗೆ ಅನ್ಯಾಯ!

0

ವಿಜಯಸಾಕ್ಷಿ ಸುದ್ದಿ, ಡಂಬಳ: ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಕೃಷಿ ಜಮೀನುಗಳಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ವಿದ್ಯುತ್ ಗೋಪುರಗಳಿಂದ ರೈತರಿಗೆ ಆಗುತ್ತಿರುವ ನಷ್ಟವನ್ನು ಪರಿಗಣಿಸಿ, ವೈಜ್ಞಾನಿಕ ಹಾಗೂ ನ್ಯಾಯಯುತ ಪರಿಹಾರ ನಿಗದಿಪಡಿಸಬೇಕು ಎಂದು ಡಂಬಳ ಗ್ರಾಮದ ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ 2×500 ಎಂವಿಎ 400/220 ಕೆ.ವಿ. ವಿದ್ಯುತ್ ಉಪಕೇಂದ್ರ ಹಾಗೂ ಅದಕ್ಕೆ ಸಂಬಂಧಿಸಿದ 400 ಕೆ.ವಿ. ಮತ್ತು 220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗಗಳ ಕಾಮಗಾರಿಗೆ ಸಂಬಂಧಿಸಿದಂತೆ ಸಂತ್ರಸ್ತ ರೈತರಿಗೆ ಭೂ ಪರಿಹಾರ ನಿಗದಿಪಡಿಸುವ ಕುರಿತು 2024ರ ಆಗಸ್ಟ್ 16ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಈ ಹಿಂದೆ ವಿದ್ಯುತ್ ಗೋಪುರ ನಿರ್ಮಾಣದಿಂದ ಬಾಧಿತವಾಗುವ ಜಮೀನಿನ ಪ್ರದೇಶಕ್ಕೆ ಪ್ರತಿ ಚದರ ಮೀಟರ್‌ಗೆ ₹2,500 ಹಾಗೂ ವಿದ್ಯುತ್ ತಂತಿ ಹಾದುಹೋಗುವ ಜಾಗಕ್ಕೆ ಪ್ರತಿ ಮೀಟರ್‌ಗೆ ₹20 ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಈ ಮೊತ್ತ ಅವೈಜ್ಞಾನಿಕವಾಗಿದ್ದು, ಡಂಬಳ ಭಾಗದಲ್ಲಿ ಹೆಚ್ಚಿನ ಪ್ರಮಾಣದ ನೀರಾವರಿ ಜಮೀನುಗಳಿರುವುದರಿಂದ ರೈತರಿಗೆ ಆಗುವ ನೈಜ ನಷ್ಟವನ್ನು ಪರಿಗಣಿಸಿ ಪರಿಹಾರ ಪರಿಷ್ಕರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಹರಿಹರ ಮಾದರಿಯಲ್ಲಿ ಪರಿಹಾರಕ್ಕೆ ಒತ್ತಾಯ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ರೈತರಿಗೆ ವಿದ್ಯುತ್ ಗೋಪುರಗಳ ಅಡಿಪಾಯಕ್ಕೆ ಬಳಸುವ ಜಾಗಕ್ಕೆ ಪ್ರತಿ ಚದರ ಮೀಟರ್‌ಗೆ ₹5 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಅಲ್ಲದೆ ವಿದ್ಯುತ್ ಮಾರ್ಗದ ರಹದಾರಿ ಹಾದುಹೋಗುವ ಜಮೀನಿಗೂ ಪರಿಹಾರ ನೀಡಲಾಗಿದೆ. ಇದೇ ಮಾದರಿಯಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಭಾಗದ ರೈತರಿಗೂ ಪರಿಹಾರ ನಿಗದಿಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಕೃಷಿ ಚಟುವಟಿಕೆಗೂ ಅಡ್ಡಿ

ವಿದ್ಯುತ್ ಗೋಪುರಗಳು ಜಮೀನಿನಲ್ಲಿ ನಿರ್ಮಾಣವಾಗುವುದರಿಂದ ಕೃಷಿ ಚಟುವಟಿಕೆಗಳಿಗೆ ಹಲವು ರೀತಿಯಲ್ಲಿ ಅಡಚಣೆಯಾಗಲಿದೆ ಎಂದು ರೈತರು ತಿಳಿಸಿದ್ದಾರೆ. ಮರ-ಗಿಡಗಳನ್ನು ಬೆಳೆಸುವುದು, ಕೊಳವೆಬಾವಿ ಕೊರೆಸುವುದು, ಕೃಷಿ ಯಂತ್ರೋಪಕರಣಗಳನ್ನು ಬಳಸುವುದು ಹಾಗೂ ಜಾನುವಾರುಗಳ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ.

ಇದಲ್ಲದೆ ವಿದ್ಯುತ್ ಗೋಪುರ ಹಾಗೂ ಪ್ರಸರಣ ಮಾರ್ಗ ಜಮೀನಿನಲ್ಲಿ ಹಾದುಹೋಗುವುದರಿಂದ ಭವಿಷ್ಯದಲ್ಲಿ ಜಮೀನು ಮಾರಾಟ ಮಾಡುವ ಸಂದರ್ಭದಲ್ಲಿಯೂ ಸಮಸ್ಯೆ ಎದುರಾಗುವ ಆತಂಕವಿದೆ ಎಂದು ರೈತರು ಹೇಳಿದ್ದಾರೆ.

ಪ್ರತಿ ಚದರ ಮೀಟರ್‌ಗೆ ₹5 ಸಾವಿರ ಹಾಗೂ ವಿದ್ಯುತ್ ತಂತಿಗೆ ಪ್ರತಿ ಮೀಟರ್‌ಗೆ ₹50ರಂತೆ ಪರಿಹಾರ ನಿಗದಿಪಡಿಸಬೇಕು. ಬೆಳೆಹಾನಿ ಹಾಗೂ ವಿದ್ಯುತ್ ಗೋಪುರ ನಿರ್ಮಾಣದಿಂದ ಉಂಟಾಗುವ ಇತರೆ ನಷ್ಟಗಳಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ರೈತರ ಜೀವನಾಧಾರವಾಗಿರುವ ಕೃಷಿ ಜಮೀನುಗಳನ್ನು ವಿದ್ಯುತ್ ಯೋಜನೆಗಾಗಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರೈತರಿಗೆ ಆಗುವ ವಾಸ್ತವಿಕ ನಷ್ಟವನ್ನು ವೈಜ್ಞಾನಿಕವಾಗಿ ಅಂದಾಜಿಸಿ ನ್ಯಾಯಸಮ್ಮತ ಪರಿಹಾರ ನಿಗದಿಪಡಿಸಬೇಕು. ಪರಿಷ್ಕೃತ ಪರಿಹಾರ ಮೊತ್ತಕ್ಕೆ ಶೀಘ್ರ ಆದೇಶ ಹೊರಡಿಸಿ ಸಂತ್ರಸ್ತ ರೈತರಿಗೆ ಸಕಾಲದಲ್ಲಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

“ದಾವಣಗೆರೆ ಜಿಲ್ಲೆಯಲ್ಲಿ ರೈತರಿಗೆ ಪ್ರತಿ ಚದರ ಮೀಟರ್‌ಗೆ ₹5 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಡಂಬಳ ಭಾಗದ ರೈತರಿಗೆ ಕಡಿಮೆ ಪರಿಹಾರ ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ಮರುಪರಿಶೀಲಿಸಿ ಪ್ರತಿ ಚದರ ಮೀಟರ್‌ಗೆ ₹5 ಸಾವಿರ ಹಾಗೂ ವಿದ್ಯುತ್ ತಂತಿಗೆ ಪ್ರತಿ ಮೀಟರ್‌ಗೆ ₹50 ಪರಿಹಾರ ನಿಗದಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು.”
— ಮಂಜಯ್ಯಸ್ವಾಮಿ ಅರವಠಗಿಮಠ, ಸಾಮಾಜಿಕ ಹೋರಾಟಗಾರ, ಡಂಬಳ

ದಶಕದ ಸೇವೆಗೆ ‘ಬಿವಿವಿ ಶ್ರೀ’ ಪ್ರಶಸ್ತಿ ಪ್ರದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ (ಬಿವಿವಿ) ಶಾಲೆಯ 41ನೇ ಸಂಸ್ಥಾಪನಾ ದಿನಾಚರಣೆಯನ್ನು ಕೃತಜ್ಞತಾ ದಿನವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಲೆಯ ಸಂಸ್ಥಾಪಕರಾದ ದಿವಂಗತ ಎಂ. ಸೆಲ್ವರಾಜ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಾಲೆಯಲ್ಲಿ ಸತತ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀಮತಿ ಸರಸ್ವತಿ ರಾಥೋಡ್, ಶ್ರೀಮತಿ ಸಿಂಧೂ ಸಾಂಬ್ರಾಣಿ ಹಾಗೂ ಶ್ರೀ ಮೆಹತಾಬ್ ಮುಲ್ಲಾ ಅವರಿಗೆ ‘ಬಿವಿವಿ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲಾ ವಾಹನ ಚಾಲಕ ಮುಕ್ತಾರಾಲಿ ಗಡಾದ ಅವರು 10 ವರ್ಷಗಳ ಸತತ ಸೇವೆ ಸಲ್ಲಿಸಿದ್ದಕ್ಕಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಸರಸ್ವತಿ ರಾಥೋಡ್ ಹಾಗೂ ಸಿಂಧೂ ಸಾಂಬ್ರಾಣಿ, ಬಿವಿವಿಯಲ್ಲಿ ಕಳೆದ ಒಂದು ದಶಕದ ಸೇವಾ ಅವಧಿಯನ್ನು ಮೆಲುಕು ಹಾಕಿ, ಆಡಳಿತ ಮಂಡಳಿ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕುಟುಂಬದವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸಹೋದ್ಯೋಗಿಗಳು ಒಂದೇ ಕುಟುಂಬದ ಸದಸ್ಯರಂತೆ ಪ್ರೀತಿ, ವಾತ್ಸಲ್ಯದಿಂದ ಬೆಂಬಲಿಸಿದ್ದರಿಂದಲೇ ಈ ಹಂತ ತಲುಪಲು ಸಾಧ್ಯವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.

ಶಾಲೆಯ ಚೇರ್‌ಮನ್ ಎಸ್. ರವಿ ಹಾಗೂ ನಿರ್ದೇಶಕ ವಿನಾಯಕ ಆರ್. ಅವರು ದಶಕದಿಂದ ಸಂಸ್ಥೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಅಭಿನಂದಿಸಿದರು.

ಇನ್ಮುಂದೆ ‘ಕೃತಜ್ಞತಾ ದಿನ’

ಶಾಲೆಯ ಸಂಸ್ಥಾಪನಾ ದಿನವನ್ನು ಇನ್ನು ಮುಂದೆ ಪ್ರತಿವರ್ಷ ‘ಕೃತಜ್ಞತಾ ದಿನ’ವಾಗಿ ಆಚರಿಸಲಾಗುವುದು ಎಂದು ನಿರ್ದೇಶಕ ವಿನಾಯಕ ಆರ್. ಘೋಷಿಸಿದರು. ಪ್ರಾಚಾರ್ಯರಿಂದ ಹಿಡಿದು ಸಹಾಯಕ ಸಿಬ್ಬಂದಿವರೆಗೆ ಶಾಲೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರ ಸೇವೆಯನ್ನು ಸ್ಮರಿಸಿ ಚೇರ್‌ಮನ್ ಎಸ್. ರವಿ ಕೃತಜ್ಞತೆ ಸಲ್ಲಿಸಿದರು.

ವಿದ್ಯಾರ್ಥಿಗಳೂ ತಮ್ಮ ಕುಟುಂಬದವರು, ಶಿಕ್ಷಕರು, ಸಹಾಯಕ ಸಿಬ್ಬಂದಿ ಹಾಗೂ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಇ.ಎಲ್.ಸಿ. ಮುಖ್ಯಸ್ಥೆ ಮಲ್ಲಿಕಾ ಆರ್., ಪ್ಲೇ ಹೋಮ್ ಮುಖ್ಯಸ್ಥೆ ಗಂಗಾ, ಪ್ರಾಚಾರ್ಯ ವಿ.ಎಂ. ಅಡ್ನೂರ, ಉಪಪ್ರಾಚಾರ್ಯ ಪಿ.ಜಿ. ಬ್ಯಾಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಸನ್ಮಾನಿತರ ಕುಟುಂಬಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕುಮಾರಿ ಆಧ್ಯಾ ಮಸಗಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಜಿಯಾ ನಮಾಜಿ ಹಾಗೂ ಅತ್ತೀರಾ ಸವದತ್ತಿ ನಿರೂಪಿಸಿದರು. ಶಿಕ್ಷಕಿ ಶೈಲಜಾ ಬಾದಾಮಿ ಸನ್ಮಾನಿತರ ಪರಿಚಯ ಮಾಡಿದರು. ಐಂದ್ರಿತಾ ಹುಲಗೂರು ಸ್ವಾಗತಿಸಿದರು. ಸಿಂಧು ಪವಾರ್ ವಂದಿಸಿದರು. ಅಭಿನವ ಕುಂದಗೋಳ ಹಾಗೂ ಸಂಗಡಿಗರು ನೃತ್ಯ ಪ್ರದರ್ಶಿಸಿದರು.