Home Blog Page 4

ಹೆಲ್ಮೆಟ್ ಧರಿಸದಿದ್ದನ್ನು ಪ್ರಶ್ನಿಸಿದ್ದಕ್ಕೆ ನ್ಯಾಯಾಧೀಶರ ಕಾರು ತಡೆದು ಗಲಾಟೆ: ಮಾಲೂರಿನಲ್ಲಿ ಮೂವರ ಬಂಧನ

0

ಕೋಲಾರ: ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾಲೂರು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಕಾರನ್ನು ತಡೆದು ಗಲಾಟೆ ನಡೆಸಿದ ಆರೋಪದ ಮೇಲೆ ಮೂವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಾಲೂರು ನಗರದ ಕೆ.ಎಂ. ವಿನಯ್ (24), ಅವರ ತಾಯಿ ಕವಿತಾ (47) ಹಾಗೂ ತಾತ ವೆಂಕಟೇಶ್ (69) ಎಂದು ಗುರುತಿಸಲಾಗಿದೆ.

ಜುಲೈ 19ರಂದು ವಿನಯ್ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಮಾಲೂರು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಗಾಯತ್ರಿ ಅವರ ಕಾರಿಗೆ ಅಡ್ಡ ಬಂದಿದ್ದರು. ಅಲ್ಲದೆ, ಬೈಕ್ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ನ್ಯಾಯಾಧೀಶರು ಸಂಚಾರ ನಿಯಮ ಪಾಲಿಸುವಂತೆ ಪ್ರಶ್ನಿಸಿದ್ದರು.

ಈ ವೇಳೆ ಆಕ್ರೋಶಗೊಂಡ ವಿನಯ್ ನ್ಯಾಯಾಧೀಶರ ಕಾರನ್ನು ತಡೆದು ಗಲಾಟೆ ನಡೆಸಿದ್ದ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ನ್ಯಾಯಾಧೀಶರು ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ಪೊಲೀಸರು ನ್ಯಾಯಾಧೀಶರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ, ಸಂಚಾರ ನಿಯಮ ಉಲ್ಲಂಘನೆ, ವಾಹನಕ್ಕೆ ಹಾನಿ ಉಂಟುಮಾಡಿದ ಆರೋಪ, ಅಸಭ್ಯ ವರ್ತನೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.

ಬಂಧಿತ ಮೂವರನ್ನೂ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಕ್ಕಾಗಿ ದ್ವಿಚಕ್ರ ವಾಹನ ಸವಾರನಿಗೆ 6 ಸಾವಿರ ರೂ. ದಂಡ ವಿಧಿಸಲಾಗಿದೆ.

ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಪ್ರಜ್ವಲ್ ರೇವಣ್ಣಗೆ ಪೆರೋಲ್ ಸಾಧ್ಯವಿಲ್ಲ; ಕಾರಾಗೃಹ ಇಲಾಖೆಯಿಂದ ಸ್ಪಷ್ಟನೆ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಕಾರಾಗೃಹ ಇಲಾಖೆ ಸ್ಪಷ್ಟಪಡಿಸಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಪೆರೋಲ್ ಮಂಜೂರು ಮಾಡುವ ಅಧಿಕಾರ ಕಾರಾಗೃಹ ಇಲಾಖೆಗೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಟುಂಬಸ್ಥರು ಪುಣ್ಯತಿಥಿಯ ಅಂಗವಾಗಿ ಪೂಜೆ ನೆರವೇರಿಸಲು ಪ್ರಜ್ವಲ್ ರೇವಣ್ಣ ಅವರನ್ನು ಜೈಲಿನಿಂದ ಹೊರತರುವ ಪ್ರಯತ್ನ ನಡೆಸಿದ್ದರು. ಆದರೆ, ಕಾರಾಗೃಹ ಇಲಾಖೆ ಅಧಿಕಾರ ವ್ಯಾಪ್ತಿಯ ಮಿತಿಯನ್ನು ಉಲ್ಲೇಖಿಸಿ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಪೆರೋಲ್ ಮಂಜೂರು ಮಾಡುವಂತೆ ನ್ಯಾಯಾಲಯದ ಮೊರೆ ಹೋಗುವ ಕುರಿತು ಕುಟುಂಬಸ್ಥರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 15 ದಿನಗಳ ಪೆರೋಲ್ ದೊರೆತರೆ, 30ರಂದು ನಡೆಯಲಿರುವ ಪುಣ್ಯತಿಥಿ ಅಥವಾ ಅದಕ್ಕೂ ಮುನ್ನದ ದಿನ ಸಮಾಧಿ ಬಳಿ ಕರೆದುಕೊಂಡು ಹೋಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ಉದ್ದೇಶ ಕುಟುಂಬದದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ, ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಭೇಟಿ ಮಾಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿತ್ತು.

ನ್ಯಾಯಾಲಯದ ಆದೇಶದಂತೆ, ಜೈಲು ಮುಖ್ಯ ಅಧೀಕ್ಷಕರು ಕಾರಾಗೃಹ ನಿಯಮಾವಳಿಗೆ ಅನುಗುಣವಾಗಿ ಭೇಟಿಗೆ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಭೇಟಿ ವೇಳೆ ಜೈಲು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯಾವುದೇ ಕಾರಣಕ್ಕೆ ಭೇಟಿಗೆ ಅವಕಾಶ ನಿರಾಕರಿಸಿದರೆ, ಅದರ ಕಾರಣವನ್ನು ಸಂಬಂಧಿತ ಕೈದಿಗೆ ಲಿಖಿತ ರೂಪದಲ್ಲಿ ತಿಳಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ನಿರ್ದೇಶನ ನೀಡಿದೆ.

ನೀಟ್ ಅಕ್ರಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ; ರಾಜೀನಾಮೆ ಅಲ್ಲ, ಶಾಶ್ವತ ಪರಿಹಾರವೇ ಗುರಿ – ಪ್ರಲ್ಹಾದ್ ಜೋಶಿ

ಬೆಂಗಳೂರು: ನೀಟ್ ಪರೀಕ್ಷೆ ಅಕ್ರಮ ಹಾಗೂ ಅದನ್ನು ಸುತ್ತುವರಿದಿರುವ ರಾಜಕೀಯ ಬೆಳವಣಿಗೆಗಳ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, 2024ರ ಸಾರ್ವಜನಿಕ ಪರೀಕ್ಷೆಗಳು (ಅನುಚಿತ ವಿಧಾನಗಳ ತಡೆ) ಕಾಯ್ದೆಯನ್ನು ಉಲ್ಲೇಖಿಸಿ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹1 ಕೋಟಿ ದಂಡ ವಿಧಿಸುವ ಕಠಿಣ ಕಾನೂನು ಈಗ ಜಾರಿಯಲ್ಲಿದೆ ಎಂದು ತಿಳಿಸಿದರು.

ವಿರೋಧ ಪಕ್ಷಗಳು, ವಿಶೇಷವಾಗಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆಗಳು ನಡೆದಾಗ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ಆರೋಪಿಸಿದರು.

ಯುಪಿಎ ಆಡಳಿತದ ಅವಧಿಯಲ್ಲಿ 58 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ರಾಜಸ್ಥಾನದಲ್ಲಿ ಕಳೆದ ಐದು ವರ್ಷಗಳಲ್ಲಿ 19 ಬಾರಿ ಇಂತಹ ಘಟನೆಗಳು ನಡೆದಿವೆ ಎಂದು ಉದಾಹರಣೆ ನೀಡಿದ ಅವರು, ಮೋದಿ ಸರ್ಕಾರ ಮಾತ್ರ ಕಠಿಣ ಕಾನೂನು ಜಾರಿಗೆ ತಂದು, ಫಾಸ್ಟ್‌ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ ಸೇರಿದಂತೆ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತರಲು ಕ್ರಮ ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು.

ಮರು ಪರೀಕ್ಷೆಗಳನ್ನು 38 ದಿನಗಳೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಹಾಗೂ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಮೊದಲ ಆದ್ಯತೆ ಪರೀಕ್ಷೆಗಳನ್ನು ಪಾರದರ್ಶಕ ಮತ್ತು ವ್ಯವಸ್ಥಿತವಾಗಿ ನಡೆಸುವುದಾಗಿದೆ. ಇದು ಒಬ್ಬರ ರಾಜೀನಾಮೆಯಿಂದ ಪರಿಹಾರವಾಗುವ ಸಮಸ್ಯೆಯಲ್ಲ; ಪರೀಕ್ಷಾ ವ್ಯವಸ್ಥೆಯಲ್ಲಿ ದೀರ್ಘಕಾಲೀನ ಸುಧಾರಣೆಗಳನ್ನು ಜಾರಿಗೆ ತರುವುದೇ ಸರ್ಕಾರದ ಉದ್ದೇಶ ಎಂದು ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಪ್ರವಾಸೋದ್ಯಮ ಹೂಡಿಕೆಗೆ ಮುಕ್ತ ಆಹ್ವಾನ; ನಿಯಮ ಸರಳೀಕರಣ, ಉದ್ಯೋಗ ಸೃಷ್ಟಿಗೆ ಒತ್ತು – ಕೆ.ಜೆ. ಜಾರ್ಜ್

ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಖಾಸಗಿ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರ ಪ್ರವಾಸೋದ್ಯಮ ನೀತಿಗಳನ್ನು ಮತ್ತಷ್ಟು ಸರಳೀಕರಿಸುತ್ತಿದೆ ಎಂದು ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಮೂರು ದಿನಗಳ ‘ಇಂಡಿಯನ್ ಇಂಟರ್‌ನ್ಯಾಷನಲ್ ಟ್ರಾವೆಲ್ ಮಾರ್ಟ್’ ಪ್ರದರ್ಶನದಲ್ಲಿ ಮಾತನಾಡಿದ ಅವರು, ಹೂಡಿಕೆದಾರರಿಗೆ ಆಡಳಿತಾತ್ಮಕ ತೊಡಕುಗಳು ಎದುರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಅನಗತ್ಯ ನೌಕರಶಾಹಿ ನಿಯಮಗಳನ್ನು ಸಡಿಲಗೊಳಿಸಿ, ಏಕಗವಾಕ್ಷಿ (Single Window) ಮಂಜೂರಾತಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಜೊತೆಗೆ, ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ಆರಂಭಿಸುವ ಖಾಸಗಿ ಹೂಡಿಕೆದಾರರಿಗೆ ಆಕರ್ಷಕ ಸಬ್ಸಿಡಿ ಹಾಗೂ ವಿವಿಧ ಪ್ರೋತ್ಸಾಹಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ರಾಜ್ಯದಲ್ಲಿ ಸಾಹಸ ಪ್ರವಾಸೋದ್ಯಮ, ಕರಾವಳಿ ಕ್ರೂಸ್ (ಹಡಗು) ಪ್ರವಾಸೋದ್ಯಮ, ಪರಿಸರ ಸ್ನೇಹಿ ಪ್ರವಾಸೋದ್ಯಮ ಹಾಗೂ ವಿಶ್ವದರ್ಜೆಯ ರೆಸಾರ್ಟ್‌ಗಳ ನಿರ್ಮಾಣಕ್ಕೆ ಖಾಸಗಿ ವಲಯಕ್ಕೆ ಸರ್ಕಾರ ಮುಕ್ತ ಆಹ್ವಾನ ನೀಡಿದೆ. ಈ ಯೋಜನೆಗಳಿಂದ ರಾಜ್ಯಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಉದ್ಯಮಿಗಳಿಗೆ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಆಡಳಿತಾತ್ಮಕ ಸಹಕಾರ ಮತ್ತು ಬೆಂಬಲ ನೀಡಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ಪುನರುಚ್ಚರಿಸಿದರು.

ಅಡ್ಡದಾರಿ ಅಲ್ಲ, ಪ್ರಾಮಾಣಿಕತೆಯೇ ಯಶಸ್ಸಿನ ದಾರಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ ಮೌನ ಮುರಿದ ಸಚಿನ್!

0

ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಚರ್ಚೆ ಮುಂದುವರಿದಿರುವ ನಡುವೆ, ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಈ ವಿಚಾರವಾಗಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗಳ ಆತಂಕ ಮತ್ತು ನಿರಾಶೆಯನ್ನು ಅರ್ಥಮಾಡಿಕೊಳ್ಳುವುದಾಗಿ ಹೇಳಿರುವ ಅವರು, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮವೇ ಯಶಸ್ಸಿನ ನಿಜವಾದ ಮಾರ್ಗ ಎಂದು ಸಂದೇಶ ನೀಡಿದ್ದಾರೆ.

ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿನ್, ತಮ್ಮ ತಂದೆ ನೀಡಿದ ಜೀವನ ಪಾಠವನ್ನು ನೆನಪಿಸಿಕೊಂಡಿದ್ದಾರೆ.

“ನನ್ನ ತಂದೆ ಪ್ರಾಧ್ಯಾಪಕರಾಗಿದ್ದರು. ಬಾಲ್ಯದಲ್ಲಿಯೇ ಅವರು ನನಗೆ ಒಂದು ಅಮೂಲ್ಯ ಪಾಠ ಕಲಿಸಿದ್ದರು. ವಿಫಲತೆ ತಪ್ಪಲ್ಲ, ಆದರೆ ಮೋಸ ಮಾಡುವುದು ದೊಡ್ಡ ತಪ್ಪು. ಯಾವತ್ತೂ ಅಡ್ಡದಾರಿ ಹಿಡಿಯಬೇಡ ಎಂದು ಅವರು ಹೇಳುತ್ತಿದ್ದರು,” ಎಂದು ಸಚಿನ್ ಬರೆದುಕೊಂಡಿದ್ದಾರೆ.

ಸಮಾಜದಲ್ಲಿ ಕಠಿಣ ಪರಿಶ್ರಮಕ್ಕೆ ಗೌರವ ಸಿಗುವ ಸಂಸ್ಕೃತಿ ನಿರ್ಮಾಣವಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಫಲಿತಾಂಶಕ್ಕಿಂತ ಶ್ರಮ ಮತ್ತು ಅರ್ಹತೆಗೆ ಹೆಚ್ಚಿನ ಮೌಲ್ಯ ನೀಡುವ ವ್ಯವಸ್ಥೆ ನಿರ್ಮಿಸುವುದು ಎಲ್ಲರ ಜವಾಬ್ದಾರಿ ಎಂದಿದ್ದಾರೆ.

ವಿದ್ಯಾರ್ಥಿಗಳ ನಿರಾಶೆ ಸಹಜ. ಕಠಿಣ ಪರಿಶ್ರಮದ ಬಳಿಕವೂ ನಿರೀಕ್ಷಿತ ಫಲಿತಾಂಶ ಸಿಗದಿದ್ದಾಗ ಉಂಟಾಗುವ ನೋವನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಇಂತಹ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಚಿನ್ ಕರೆ ನೀಡಿದ್ದಾರೆ.

ಯುವ ಭಾರತ ಅಪಾರ ಕನಸುಗಳು ಮತ್ತು ಸಾಮರ್ಥ್ಯ ಹೊಂದಿದೆ. ದೇಶದ ಭವಿಷ್ಯ ಯುವಕರ ಕೈಯಲ್ಲಿದ್ದು, ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಪೋಷಕರು, ಶಿಕ್ಷಕರು, ಸ್ನೇಹಿತರು ಹಾಗೂ ಬಂಧುಗಳು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಯುವಕರು ಸದಾ ಉತ್ಸಾಹದಿಂದ ಮುನ್ನಡೆಯಲು ಸಹಕಾರ ನೀಡಬೇಕು. ಕಠಿಣ ಪರಿಶ್ರಮಕ್ಕೆ ಯೋಗ್ಯ ಗೌರವ ದೊರೆಯುವ ಹಾಗೂ ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುವ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದು ಅವರು ಒತ್ತಿಹೇಳಿದ್ದಾರೆ.

“ಅಂತಿಮವಾಗಿ ಅರ್ಹತೆಯೇ ಗೆಲ್ಲುವಂತಹ ವ್ಯವಸ್ಥೆ ರೂಪಿಸಬೇಕು. ಮಕ್ಕಳ ಕನಸುಗಳು ಮತ್ತು ಭವಿಷ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಾಶ್ವತ ಪರಿಹಾರಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡೋಣ. ಜೈ ಹಿಂದ್,” ಎಂದು ಸಚಿನ್ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.

₹5 ಸಾವಿರ ಕೇಳಿದ್ದಕ್ಕೆ ಪತ್ನಿಗೆ ಹಲ್ಲೆ; ವೃದ್ಧ ಪತಿಗೆ ಹೈಕೋರ್ಟ್ʼನಿಂದ ತಿಂಗಳಿಗೆ ₹10 ಸಾವಿರ ನೀಡುವಂತೆ ಆದೇಶ

ಬೆಂಗಳೂರು: ಮನೆ ಖರ್ಚಿಗೆ ₹5 ಸಾವಿರ ಕೇಳಿದ್ದ ವಿಚಾರಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ 73 ವರ್ಷದ ವೃದ್ಧ ಪತಿಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ, ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅರ್ಜಿಯ ಮುಂದಿನ ವಿಚಾರಣೆವರೆಗೆ ಪತ್ನಿಗೆ ಪ್ರತಿ ತಿಂಗಳು ₹10 ಸಾವಿರ ಪಾವತಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಬಸವೇಶ್ವರನಗರ ನಿವಾಸಿಯಾಗಿರುವ 73 ವರ್ಷದ ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿ ಈ ಮಧ್ಯಂತರ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು, ಪತಿ (73) ಮತ್ತು ಪತ್ನಿ (65) ವಯೋವೃದ್ಧ ದಂಪತಿಯಾಗಿದ್ದು, ಅವರಿಗೆ ವಯಸ್ಕ ಪುತ್ರ ಹಾಗೂ ಪುತ್ರಿಯಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಮನೆ ಖರ್ಚಿಗೆ ಹಣ ಕೇಳಿದ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪ್ರಕರಣ ಸಂಧಾನದ ಮೂಲಕ ಬಗೆಹರಿಯುವ ಸಾಧ್ಯತೆ ಇದೆ ಎಂದು ವಾದ ಮಂಡಿಸಿದರು.

ಈ ವೇಳೆ ನ್ಯಾಯಪೀಠ, “ಮನೆ ಖರ್ಚಿಗೆ ಹಣ ಕೇಳಿದರೆ 73 ವರ್ಷದವರಾಗಿದ್ದರೂ ಪತ್ನಿಗೆ ಬೈದು, ಹಲ್ಲೆ ಮಾಡುತ್ತಾರೆಯೇ? ಹೊಡೆಯುವುದಕ್ಕೂ ಬೈಯುವುದಕ್ಕೂ ವಯಸ್ಸಿನ ಮಿತಿ ಇಲ್ಲವೇ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.

65 ವರ್ಷದ ಪತ್ನಿ ಹಲ್ಲೆ ಮತ್ತು ಕಿರುಕುಳದ ಆರೋಪ ಮಾಡಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯ, “ಈ ವಯಸ್ಸಿನಲ್ಲೇ ಪತಿ ಈ ರೀತಿಯಾಗಿ ವರ್ತಿಸುತ್ತಿದ್ದರೆ, ಹಿಂದೆ ಹೇಗೆ ನಡೆದುಕೊಂಡಿರಬಹುದು?” ಎಂದು ಕೂಡ ಪ್ರಶ್ನಿಸಿತು.

ವಿಚಾರಣೆ ವೇಳೆ ಪತ್ನಿ ಮನೆ ಖರ್ಚಿಗೆ ಎಷ್ಟು ಹಣ ಕೇಳಿದ್ದರು ಎಂದು ನ್ಯಾಯಪೀಠ ಪ್ರಶ್ನಿಸಿದಾಗ, ಅರ್ಜಿದಾರರ ಪರ ವಕೀಲರು ₹5 ಸಾವಿರ ಕೇಳಿದ್ದರು ಎಂದು ಉತ್ತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ತನಿಖೆಗೆ ತಡೆಯಾಜ್ಞೆ ನೀಡಬೇಕಾದರೆ, ಪತ್ನಿ ಕೇಳಿದ್ದಕ್ಕಿಂತ ಹೆಚ್ಚು ಹಣ ಕೊಡುತ್ತೀರಾ?” ಎಂದು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಒಪ್ಪಿಗೆ ಸೂಚಿಸಿದರು.

ಇದಾದ ಬಳಿಕ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ನಡೆಯುವವರೆಗೆ ಅರ್ಜಿದಾರರು ತಮ್ಮ ಪತ್ನಿಗೆ ಪ್ರತಿ ತಿಂಗಳು ₹10 ಸಾವಿರ ಪಾವತಿಸಬೇಕು ಎಂದು ನಿರ್ದೇಶಿಸಿತು. ಜೊತೆಗೆ, ಪತಿಯ ವಿರುದ್ಧ ನಡೆಯುತ್ತಿರುವ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

ಖೋಟಾ ನೋಟು ಚಲಾವಣೆಗೆ ಯತ್ನ: ₹18 ಸಾವಿರ ನಕಲಿ ಕರೆನ್ಸಿಯೊಂದಿಗೆ ಇಬ್ಬರ ಬಂಧನ

ಚಿಕ್ಕಮಗಳೂರು: ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಬಂಧಿಸಿದ್ದು, ಅವರಿಂದ ₹18 ಸಾವಿರ ಮುಖಬೆಲೆಯ ನಕಲಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಮಂಗಳೂರಿನ ಮಹಮದ್ ಅಲಿ ಹಾಗೂ ಮೂಡಿಗೆರೆಯ ಮಹೇಶ್ ಎಂದು ಗುರುತಿಸಲಾಗಿದೆ. ಮೂಡಿಗೆರೆ ಪಟ್ಟಣದ ನೂತನ ಲೇಔಟ್ ಪ್ರದೇಶದಲ್ಲಿ ಖೋಟಾ ನೋಟುಗಳನ್ನು ಚಲಾವಣೆಗೆ ತರಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ₹200 ಮುಖಬೆಲೆಯ ಒಟ್ಟು 90 ಖೋಟಾ ನೋಟುಗಳು, ಅಂದರೆ ₹18 ಸಾವಿರ ಮೌಲ್ಯದ ನಕಲಿ ಕರೆನ್ಸಿ ಪತ್ತೆಯಾಗಿದೆ. ವಿಶೇಷವೆಂದರೆ, ನೋಟುಗಳ ಮೇಲೆ “Reserve Bank of India” ಬದಲಾಗಿ “Bisarv Bank of India” ಎಂದು ಮುದ್ರಿಸಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖೋಟಾ ನೋಟುಗಳ ಮೂಲ ಹಾಗೂ ಜಾಲದ ಹಿಂದೆ ಇರುವವರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಟೈಯರ್ ಬ್ಲಾಸ್ಟ್‌ಗೆ ಬಿಯರ್ ಲಾರಿ ಪಲ್ಟಿ; ₹15 ಲಕ್ಷ ಮೌಲ್ಯದ ಮದ್ಯ ರಸ್ತೆಪಾಲು, ಸಂಚಾರ ಅಸ್ತವ್ಯಸ್ತ

0

ಹಾಸನ: ಹಾಸನದ ದೊಡ್ಡಪುರ ಗ್ರಾಮದ ಸಮೀಪ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಟೈಯರ್ ಸಿಡಿದು ಪಲ್ಟಿಯಾಗಿದ್ದು, ಸುಮಾರು ₹15 ಲಕ್ಷ ಮೌಲ್ಯದ ಬಿಯರ್ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಘಟನೆಯಿಂದ ಒಂದು ಬದಿಯ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ ಸುಮಾರು 1,100 ಬಿಯರ್ ಬಾಟಲ್‌ಗಳನ್ನು ಸಾಗಿಸುತ್ತಿದ್ದ ಲಾರಿ ದೊಡ್ಡಪುರ ಗ್ರಾಮದ ಬಳಿ ತಲುಪುತ್ತಿದ್ದಂತೆ ಟೈಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಏರಿ ಪಲ್ಟಿಯಾಗಿದೆ.

ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಲೆಜೆಂಡ್, ರಾಯಲ್, ಪವರ್ ಕೂಲ್ ಹಾಗೂ ಸನ್ನಿ ಬೀಚಸ್ ಬ್ರ್ಯಾಂಡ್‌ನ ಬಿಯರ್ ಬಾಟಲ್‌ಗಳು ಮತ್ತು ಟಿನ್‌ಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿದ್ದು, ಬಹುತೇಕ ಮದ್ಯ ನಷ್ಟವಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ತೆರವು ಹಾಗೂ ಸಂಚಾರ ಪುನಃಸ್ಥಾಪನೆಗೆ ಕ್ರಮ ಕೈಗೊಂಡಿದ್ದಾರೆ.

ಸಿಜೆಪಿ ಪ್ರತಿಭಟನಾಕಾರರ ಪಾಸ್ ಪೋರ್ಟ್ ರದ್ದು ಎಂಬ ವೈರಲ್ ಸುದ್ದಿ ಸುಳ್ಳು: ದೆಹಲಿ ಪೊಲೀಸರಿಂದ ಸ್ಪಷ್ಟನೆ

0

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದರೂ, ಈ ಕುರಿತು ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ, ಪ್ರತಿಭಟನೆ ವೇಳೆ ಹಿಂಸಾಚಾರ, ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವವರನ್ನು ಗುರುತಿಸಿ ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ದೆಹಲಿ ಪೊಲೀಸರು ಆರಂಭಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ, ವಿಡಿಯೊ ದಾಖಲೆಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂಬ ಮಾಹಿತಿಯೂ ಹರಿದಾಡಿತ್ತು.

ಆದರೆ ಈ ಎಲ್ಲ ಸುದ್ದಿಗಳನ್ನು ದೆಹಲಿ ಪೊಲೀಸರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಸಿಜೆಪಿ ಪ್ರತಿಭಟನಾಕಾರರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಕುರಿತು ಯಾವುದೇ ಅಧಿಕೃತ ಆದೇಶ ಅಥವಾ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಆಧಾರರಹಿತ ಹಾಗೂ ದಾರಿತಪ್ಪಿಸುವ ಮಾಹಿತಿಯನ್ನು ನಂಬಬಾರದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಯಾವುದೇ ಮಹತ್ವದ ಮಾಹಿತಿ ಅಥವಾ ಕ್ರಮಗಳ ಕುರಿತು ಅಧಿಕೃತ ಮೂಲಗಳಿಂದ ಪ್ರಕಟವಾಗುವ ಮಾಹಿತಿಯನ್ನೇ ನಂಬುವಂತೆ ದೆಹಲಿ ಪೊಲೀಸರು ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕೇಂದ್ರದ ಬಿಗ್ ಸ್ಟೆಪ್: 10 ವರ್ಷ ಜೈಲು, ₹1 ಕೋಟಿ ದಂಡಕ್ಕೆ ಕಠಿಣ ಕಾನೂನು!

0

ನವದೆಹಲಿ: ದೇಶಾದ್ಯಂತ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ–2024ಕ್ಕೆ ತಿದ್ದುಪಡಿ ತರಲು ಸರ್ಕಾರ ಸಿದ್ಧತೆ ನಡೆಸಿದ್ದು, ತಪ್ಪಿತಸ್ಥರಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ ₹1 ಕೋಟಿ ದಂಡ ವಿಧಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಶೀಘ್ರವೇ ಅನುಮೋದನೆ ನೀಡುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಡಿಯೋ ಸಂದೇಶದಲ್ಲಿ ಘೋಷಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಮೂಲಗಳ ಪ್ರಕಾರ, ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ–2024ಕ್ಕೆ ತಿದ್ದುಪಡಿ ತರುವ ಪ್ರಸ್ತಾವವನ್ನು ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ತಿದ್ದುಪಡಿ ಜಾರಿಯಾದರೆ ಪರೀಕ್ಷಾ ಅಕ್ರಮಗಳ ತನಿಖೆ ಮತ್ತು ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆಗೂ ಕಾನೂನು ಮಾನ್ಯತೆ ಸಿಗಲಿದೆ.

ಪ್ರಸ್ತುತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ. ಆದರೆ ಹೊಸ ತಿದ್ದುಪಡಿಯಡಿ ಶಿಕ್ಷೆಯನ್ನು 5 ರಿಂದ 10 ವರ್ಷಗಳಿಗೆ ಹೆಚ್ಚಿಸುವ ಜೊತೆಗೆ, ದಂಡವನ್ನು ₹1 ಕೋಟಿವರೆಗೆ ಏರಿಸಲು ಸರ್ಕಾರ ಮುಂದಾಗಿದೆ.