Home Blog Page 71

ಶಿರಹಟ್ಟಿಯಲ್ಲಿ ಮೊಳಗಿದ ಸೌಹಾರ್ದದ ಸಂದೇಶ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಮಜಹರಖಾನ್ ಪಠಾಣ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ವಿಶ್ವಕ್ಕೆ ಶಾಂತಿ, ಕರುಣೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಜನ್ಮದಿನ ಮುಸ್ಲಿಮರಿಗೆ ಅತ್ಯಂತ ಪವಿತ್ರವಾಗಿದ್ದು, ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕಬೇಕು ಎಂದರು.

ಹಬ್ಬದ ಅಂಗವಾಗಿ ಪಟ್ಟಣದ ಆಸಾರ ಓಣಿ, ಮಕಾನಗಲ್ಲಿ, ತಳಗೇರಿ, ಇಂಗಲಾಪುರ ಓಣಿ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಬಳಿಕ ಹಜರತ್ ಮಹಬೂಬ್ ಸುಬಾನಿ ದರ್ಗಾದಿಂದ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ವೃತ್ತ ಹಾಗೂ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಧಾರ್ಮಿಕ ಘೋಷಣೆಗಳು ಮೊಳಗಿದವು. ಈ ವೇಳೆ ಹಬ್ಬದ ಸಂಭ್ರಮ ಎಲ್ಲೆಡೆ ಕಂಡುಬಂತು.

ಹಗರಿಬೊಮ್ಮನಹಳ್ಳಿಯಲ್ಲಿ ಈದ್ ಮಿಲಾದ್ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪ್ರವಾದಿ ಹಜರತ್ ಮಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸುವ ಈದ್ ಮಿಲಾದ್-ಉನ್-ನಬಿ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಬುಧವಾರ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಅದ್ದೂರಿ ಧಾರ್ಮಿಕ ಮೆರವಣಿಗೆ ನಡೆಯಿತು. ರಾಮನಗರ, ಅರಳಿಹಳ್ಳಿ, ಬಸವೇಶ್ವರ ಬಜಾರ್, ಹಳೆ ಊರು, ಜಾಲೀನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಸ್ಲಿಂ ಸಮಾಜದ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು, ಯುವಕರು ಹಾಗೂ ಸಮಾಜದ ಮುಖಂಡರು ಪ್ರವಾದಿಯ ಸಂದೇಶ ಸಾರುವ ಘೋಷಣೆಗಳನ್ನು ಮೊಳಗಿಸುತ್ತ ಸಾಗಿದರು.

ಪ್ರವಾದಿ ಮಹಮ್ಮದ್ ಅವರು ಸಾರಿದ ಸಮಾನತೆ, ಶಾಂತಿ, ಸಹೋದರತ್ವ ಹಾಗೂ ಮಾನವೀಯತೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಜೀವನಾದರ್ಶಗಳನ್ನು ಸ್ಮರಿಸುತ್ತ ಈದ್ ಮಿಲಾದ್ ಆಚರಿಸುವುದು ವಿಶೇಷವಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದರು.

ಮೆರವಣಿಗೆಯಲ್ಲಿ ಮಾಜಿ ಶಾಸಕ ಎಸ್. ಭೀಮ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಡಾ. ಸಾಹಿರಾಬಾನು, ಪುರಸಭೆ ಸದಸ್ಯೆ ರೇಷ್ಮಾ ಶಿಖಂದರ್, ತೆಲಿಗಿ ನೆಲ ಇಸ್ಮಾಯಿಲ್ ಸಾಹೇಬ್, ಬಶೀರ್ ಸಾಹೇಬ್, ಎಣ್ಣಿ ಭಾಷಾ, ದಾದಾ ಕಲಂದರ್, ಜಂದಿ ಸಾಹೇಬ್, ನೂರು ಮಹಮ್ಮದ್ ಅಬ್ಬು, ನೂರಿ, ಗುಲ್ಜರ್, ದಾದಾಪೀರ್, ಕೆಜಿಎನ್ ಅಲ್ಲಾಭಕ್ಷಿ, ದಾದು ತತ್ತಿ ಕಾಶಿಂ, ಜಿನ್ನ ಸಾಹೇಬ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ನೂರಾರು ಮಂದಿ ಪಾಲ್ಗೊಂಡಿದ್ದರು.

ಸೌಹಾರ್ದದ ಸಂದೇಶ ಸಾರಿದ ಈದ್ ಮಿಲಾದ್

0

ವಿಜಯಸಾಕ್ಷಿ ಸುದ್ದಿ, ಗದಗ: ಎಲ್ಲ ಧರ್ಮಗಳ ಜನರು ಪರಸ್ಪರ ಗೌರವ ಹಾಗೂ ಸಹೋದರತ್ವದಿಂದ ಒಂದಾಗಿ ಸಾಗಿದಾಗ ಮಾತ್ರ ರಾಷ್ಟ್ರದ ಸಮಗ್ರ ಪ್ರಗತಿ ಸಾಧ್ಯ. ದೇಶಪ್ರೇಮ ಮತ್ತು ಸಂವಿಧಾನದ ರಕ್ಷಣೆ ಇಸ್ಲಾಂ ಧರ್ಮದ ಪ್ರಮುಖ ಆಶಯಗಳಾಗಿದ್ದು, ದ್ವೇಷ-ವೈಷಮ್ಯ ಬದಿಗೊತ್ತಿ ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ಬೆಳಗಾವಿಯ ಜಮಿಯತೆ ಉಲ್ಮಾ ಜಿಲ್ಲಾ ಕಾರ್ಯದರ್ಶಿ ಹಜರತ್ ಮೌಲಾನಾ ಮಹಮ್ಮದ್ ಆರೀಫ್ ಸಾಬ್ ಇನಾಮಿ ಹೇಳಿದರು.

ನಗರದ ಉರ್ದು ಸೆಂಟ್ರಲ್ ಶಾಲೆ ಆವರಣದಲ್ಲಿ ಗದಗ–ಬೆಟಗೇರಿ ಈದ್ ಮಿಲಾದ್ ಕಮಿಟಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಹಜರತ್ ಮಹಮ್ಮದ್ ಪೈಗಂಬರ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ಅವರು ಉಪನ್ಯಾಸ ನೀಡಿದರು.

ಮಾನವ ಕಲ್ಯಾಣಕ್ಕಾಗಿ ಬದುಕಿದ ಪೈಗಂಬರ್ ಮಹಮ್ಮದ ಅವರು ಪ್ರೀತಿ, ಕ್ಷಮೆ, ಸಹನೆ ಮತ್ತು ಕರುಣೆಯ ಹಾದಿ ತೋರಿಸಿದ್ದಾರೆ. ವಿರೋಧಿಗಳನ್ನೂ ದ್ವೇಷಿಸದೆ ಮಾನವೀಯತೆಯಿಂದ ಕಾಣಬೇಕು ಎಂಬ ಅವರ ಸಂದೇಶ ಸಾರ್ವಕಾಲಿಕವಾದದ್ದು. ಹೀಗಾಗಿ ಅವರ ಜನ್ಮದಿನದ ಆಚರಣೆ ಕೇವಲ ಸಂಪ್ರದಾಯವಾಗದೆ, ಆದರ್ಶಗಳ ಅನುಷ್ಠಾನಕ್ಕೆ ಪ್ರೇರಣೆಯಾಗಬೇಕು ಎಂದರು.

ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪೈಗಂಬರ್ ಅವರ ತತ್ವಗಳನ್ನು ಅಳವಡಿಸಿಕೊಂಡರೆ ವೈಯಕ್ತಿಕ ಬದುಕಿನಲ್ಲೂ ಶಾಂತಿ ನೆಲೆಸುವುದರ ಜತೆಗೆ ಸಮಾಜದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಲಿದೆ. ಜಗತ್ತಿನ ಶಾಂತಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಭಕ್ತಿ–ಸಡಗರದ ಮೆರವಣಿಗೆ

ಹಬ್ಬದ ಅಂಗವಾಗಿ ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಉತ್ಸಾಹದಿಂದ ಪಾಲ್ಗೊಂಡರು. ಬಾವುಟಗಳನ್ನು ಹಿಡಿದು ಸಾಗಿದ ಜನರು ಧಾರ್ಮಿಕ ಘೋಷಣೆಗಳನ್ನು ಮೊಳಗಿಸಿದರು.

ಮೆರವಣಿಗೆಯ ಮಾರ್ಗದಲ್ಲಿ ಸಾರ್ವಜನಿಕರಿಗೆ ಸಿಹಿತಿನಿಸು ಹಾಗೂ ತಂಪು ಪಾನೀಯ ವಿತರಿಸಲಾಯಿತು. ಉರ್ದು ಸೆಂಟ್ರಲ್ ಶಾಲೆ ಆವರಣದ ಕಾರ್ಯಕ್ರಮದ ವೇದಿಕೆಯವರೆಗೆ ಸಾಗಿದ ಮೆರವಣಿಗೆಯಲ್ಲಿ ನಿರ್ಮಿಸಿದ್ದ ಮೆಕ್ಕಾ ಮಾದರಿ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ರೋಣದ ಬಾಲಕಿ ಇಕ್ರಾನಾಜ್ ರಚಿಸಿರುವ ಆರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ನಗರದ ಮಸೀದಿಗಳ ಮುಖ್ಯಸ್ಥರನ್ನೂ ಗೌರವಿಸಲಾಯಿತು.

ಜಮಿಯತೆ ಉಲ್ಮಾ ಕಮಿಟಿ ಅಧ್ಯಕ್ಷ ಅಕ್ಬರ್‌ಸಾಬ್ ಪಿರಜಾದೆ, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಆಸೀಫ್ ಜಿ. ದಂಡಿನ, ಯೂಸುಫ್ ಡಂಬಳ, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಎಂ.ಎಂ. ಮಾಳೆಕೊಪ್ಪ, ಡಾ. ನಿಜಾಮುದ್ದೀನ್ ಅತ್ತಾರ್, ಜೀವನಸಾಬ್ ನಮಾಜಿ, ಡಾ. ಪ್ಯಾರಾ ಅಲಿ ನೂರಾನಿ, ವಿನಾಯಕ ಬಳ್ಳಾರಿ, ಬಸವರಾಜ ಕಡೇಮನಿ, ಎಂ.ಸಿ. ಶೇಖ್, ಅನ್ವರ್‌ಸಾಬ್ ಬಳ್ಳಾರಿ, ಪೀರ್‌ಸಾಬ್ ಕೌತಾಳ, ಖಾಜಿ, ಪೆಂಡಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಡಿ.ಜೆ.ಗೆ ಅವಕಾಶ ನೀಡದೆ ಈ ಬಾರಿ ಆಚರಣೆಯನ್ನು ಅರ್ಥಪೂರ್ಣಗೊಳಿಸಿರುವುದು ವಿಶೇಷ. 150 ಮಂದಿಯ ಕಣ್ಣು ತಪಾಸಣೆ ಹಾಗೂ 50 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿರುವುದು ಸಮಾಜಮುಖಿ ಕಾಳಜಿಗೆ ಸಾಕ್ಷಿಯಾಗಿದೆ.

— ಅಕ್ಬರ್‌ಸಾಬ್ ಬಬರ್ಚಿ, ಅಧ್ಯಕ್ಷ, ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ

ಆಚರಣೆಗೆ ಸಮಾಜಸೇವೆಯ ಸ್ಪರ್ಶ

ಧಾರ್ಮಿಕ ಕಾರ್ಯಕ್ರಮದ ಜತೆಗೆ ಆರೋಗ್ಯ, ಶಿಕ್ಷಣ ಮತ್ತು ಪ್ರತಿಭಾ ಪ್ರೋತ್ಸಾಹಕ್ಕೆ ಒತ್ತು ನೀಡಲಾಯಿತು. ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ, ಬಾಲಕಿ ಇಕ್ರಾನಾಜ್‌ಳ ಆರು ಕೃತಿಗಳ ಬಿಡುಗಡೆ, ವಿದ್ಯಾರ್ಥಿಗಳ ಅಭಿನಂದನೆ ಮತ್ತು ಮಸೀದಿ ಮುಖ್ಯಸ್ಥರ ಗೌರವ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.

ರಾತ್ರಿ ಫೋನ್ ನೋಡುವ ಅಭ್ಯಾಸ ಇದೆಯಾ? ಮಲಗುವ 1 ಗಂಟೆ ಮೊದಲು ಮೊಬೈಲ್ ದೂರವಿಡಿ

0

ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡುವುದು ಬಹುತೇಕ ಜನರ ದಿನನಿತ್ಯದ ಅಭ್ಯಾಸವಾಗಿದೆ. ರೀಲ್ಸ್, ಸಾಮಾಜಿಕ ಜಾಲತಾಣ, ಮೆಸೇಜ್, ಸುದ್ದಿ ಅಥವಾ ಕೆಲಸದ ವಿಚಾರಗಳನ್ನು ನೋಡುತ್ತಾ ಸಮಯ ಕಳೆಯುವುದರಿಂದ ನಿದ್ರೆಯ ಸಮಯ ಕಡಿಮೆಯಾಗುವ ಸಾಧ್ಯತೆಯಿದೆ.

ಇದರ ಪರಿಣಾಮವಾಗಿ ಬೆಳಗ್ಗೆ ದಣಿವು, ಕಣ್ಣುಗಳಲ್ಲಿ ಒಣತನ ಅಥವಾ ಅಸ್ವಸ್ಥತೆ ಹಾಗೂ ದಿನವಿಡೀ ಸುಸ್ತು ಕಾಣಿಸಿಕೊಳ್ಳಬಹುದು.

ತಜ್ಞರ ಪ್ರಕಾರ, ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್‌ ಸೇರಿದಂತೆ ಸ್ಕ್ರೀನ್‌ಗಳಿಂದ ದೂರವಿರುವುದು ನಿದ್ರೆಯ ಗುಣಮಟ್ಟಕ್ಕೆ ಸಹಾಯ ಮಾಡಬಹುದು. ರಾತ್ರಿ ಸ್ಕ್ರೀನ್‌ನಿಂದ ಬರುವ ಬೆಳಕು, ವಿಶೇಷವಾಗಿ ನೀಲಿ ಬೆಳಕು, ನಿದ್ರೆಗೆ ಸಂಬಂಧಿಸಿದ ಮೆಲಟೋನಿನ್ ಹಾರ್ಮೋನ್‌ನ ಸ್ರಾವಕ್ಕೆ ಅಡ್ಡಿಯಾಗಬಹುದು. ಇದರಿಂದ ನಿದ್ರೆ ಬರಲು ಹೆಚ್ಚು ಸಮಯ ಬೇಕಾಗುವ ಸಾಧ್ಯತೆಯಿದೆ.

ಒಂದು ಗಂಟೆ ಮೊಬೈಲ್ ದೂರವಿಟ್ಟರೆ ಏನೆಲ್ಲಾ ಪ್ರಯೋಜನ?

ಮಲಗುವ ಒಂದು ಗಂಟೆ ಮೊದಲು ಫೋನ್ ದೂರವಿಟ್ಟರೆ ಸ್ಕ್ರೀನ್ ಬೆಳಕಿನ ಪ್ರಭಾವ ಕಡಿಮೆಯಾಗುವುದರ ಜೊತೆಗೆ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಇದರಿಂದ:

  • ನಿದ್ರೆಗೆ ಮಾನಸಿಕವಾಗಿ ಸಿದ್ಧವಾಗಲು ಸಹಾಯವಾಗಬಹುದು.
  • ನಿದ್ರೆ ಬರುವ ಪ್ರಕ್ರಿಯೆ ಸುಲಭವಾಗಬಹುದು.
  • ರಾತ್ರಿ ತಡವಾಗಿ ಮಲಗುವ ಅಭ್ಯಾಸ ಕಡಿಮೆಯಾಗಬಹುದು.
  • ಒಟ್ಟು ನಿದ್ರೆಯ ಅವಧಿಯನ್ನು ಕಾಪಾಡಿಕೊಳ್ಳಲು ನೆರವಾಗಬಹುದು.
  • ಬೆಳಗ್ಗೆ ಎದ್ದಾಗ ದಣಿವು ಕಡಿಮೆಯಾಗಲು ಸಹಾಯವಾಗಬಹುದು.
  • ಫೋನ್ ಬದಲು ಏನು ಮಾಡಬಹುದು?

ಮಲಗುವ ಒಂದು ಗಂಟೆ ಮೊದಲು ಮೊಬೈಲ್ ದೂರವಿಟ್ಟು ಪುಸ್ತಕ ಓದುವುದು, ಲಘು ಸ್ಟ್ರೆಚಿಂಗ್ ಮಾಡುವುದು, ಧ್ಯಾನ ಅಥವಾ ಉಸಿರಾಟದ ವ್ಯಾಯಾಮ ಮಾಡುವುದು ಸೇರಿದಂತೆ ಹಲವು ಶಾಂತ ಚಟುವಟಿಕೆಗಳನ್ನು ಮಾಡಬಹುದು.

ಅಲ್ಲದೆ, ಕುಟುಂಬದವರೊಂದಿಗೆ ಶಾಂತವಾಗಿ ಮಾತನಾಡುವುದು, ಮಲಗುವ ಕೋಣೆಯ ಬೆಳಕನ್ನು ಕಡಿಮೆ ಮಾಡುವುದು ಹಾಗೂ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯಕ್ಕೆ ಏಳುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಫೋನ್ ಆಫ್ ಮಾಡಿದರೆ ಮಾತ್ರ ಸಾಕೇ?

ಒಳ್ಳೆಯ ನಿದ್ರೆಗಾಗಿ ಕೇವಲ ಮೊಬೈಲ್ ಬಳಕೆ ಕಡಿಮೆ ಮಾಡುವುದು ಮಾತ್ರ ಸಾಕಾಗುವುದಿಲ್ಲ. ನಿಯಮಿತ ನಿದ್ರೆ ಸಮಯ, ಸಾಕಷ್ಟು ನಿದ್ರೆ, ದೈಹಿಕ ಚಟುವಟಿಕೆ ಹಾಗೂ ಆರೋಗ್ಯಕರ ದಿನಚರಿಯೂ ಮುಖ್ಯ.

ದೀರ್ಘಕಾಲದಿಂದ ನಿದ್ರೆ ಬರದಿರುವುದು, ಪದೇಪದೇ ನಿದ್ರೆಯಿಂದ ಎಚ್ಚರವಾಗುವುದು ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿರಂತರ ನಿದ್ರೆಯ ಸಮಸ್ಯೆಗಳಿದ್ದರೆ ಅರ್ಹ ವೈದ್ಯರನ್ನು ಸಂಪರ್ಕಿಸಿ.

ಬಿಸಿಎ ನಾಲ್ಕನೇ ಸೆಮಿಸ್ಟರ್‌ನಲ್ಲಿ ಮನೋರಮಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಮಹಾವಿದ್ಯಾಲಯದ ಬಿಸಿಎ ಕೋರ್ಸ್‌ನ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದು, ಐವರು ವಿದ್ಯಾರ್ಥಿನಿಯರು ಮೊದಲ ಐದು ಸ್ಥಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕುಮಾರಿ ಮೆಹೆಕ ದುಕಾಂದಾರ 575 ಅಂಕ ಪಡೆದು ಪ್ರಥಮ ಸ್ಥಾನ, ಕುಮಾರಿ ಮೇಘಾ ಅಂಗಡಿ 559 ಅಂಕ ಪಡೆದು ದ್ವಿತೀಯ ಸ್ಥಾನ, ಕುಮಾರಿ ಮೆಹತಾಬಾನು ಕಾತರಕಿ 533 ಅಂಕ ಪಡೆದು ತೃತೀಯ ಸ್ಥಾನ, ಕುಮಾರಿ ಸ್ವಾತಿ ಚುದಗುಂಡ 525 ಅಂಕ ಪಡೆದು ನಾಲ್ಕನೇ ಸ್ಥಾನ ಹಾಗೂ ಕುಮಾರಿ ಸೌಮ್ಯ ಬಣ್ಣದಬಾವಿ 521 ಅಂಕ ಪಡೆದು ಐದನೇ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಚೇರ್ಮನ್ ಎನ್.ಎಂ. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಸಂಯೋಜಕಿ ಪ್ರೊ. ಸವಿತಾ ಪೂಜಾರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ, ಮುಂದಿನ ಶೈಕ್ಷಣಿಕ ಬದುಕಿಗೆ ಶುಭ ಹಾರೈಸಿದ್ದಾರೆ.

ವಿಡಿಎಸ್‌ಟಿಸಿ ಶಾಲೆಯಲ್ಲಿ ಸಾವರ್ಕರ್ ಸ್ಮರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಸ್ವಾತಂತ್ರ್ಯಕ್ಕಾಗಿ ಮನೆ, ಆಸ್ತಿ ಹಾಗೂ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರ ದೇಶಭಕ್ತಿ, ಧೈರ್ಯ, ತ್ಯಾಗ ಹಾಗೂ ದೃಢಸಂಕಲ್ಪ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು ಎಂದು ಪ್ರಾಚಾರ್ಯೆ ಡಾ. ಗಂಗೂಬಾಯಿ ಪವಾರ ಹೇಳಿದರು.

ನಗರದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣಾ ವಿಶೇಷ ಕಾರ್ಯಕ್ರಮದಲ್ಲಿ ದೇಶಪ್ರೇಮಿ ವಿನಾಯಕ ದಾಮೋದರ ಸಾವರ್ಕರ್ ಕುರಿತು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರದ ಭಗೂರಿನಲ್ಲಿ ಜನಿಸಿದ ಸಾವರ್ಕರ್ ಬಾಲ್ಯದಿಂದಲೇ ದೇಶಭಕ್ತಿ ಹಾಗೂ ಸ್ವಾತಂತ್ರ್ಯದ ತುಡಿತ ಬೆಳೆಸಿಕೊಂಡಿದ್ದರು. ಬ್ರಿಟಿಷರ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಬೇಕೆಂಬ ದೃಢ ಸಂಕಲ್ಪ ಹೊಂದಿದ್ದರು. ಶ್ರೇಷ್ಠ ಕ್ರಾಂತಿಕಾರಿ, ಕವಿ ಹಾಗೂ ರಾಜನೀತಿಜ್ಞರಾಗಿದ್ದ ಅವರು ‘ಅಭಿನವ ಭಾರತ’ ಸಂಸ್ಥೆ ಹಾಗೂ ನಾಸಿಕದಲ್ಲಿ ‘ಮಿತ್ರಮಂಡಳಿ’ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಘಟನಾ ಬಲ ನೀಡಿದ್ದರು ಎಂದರು.

1902ರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸ್ವರ್ಣ ಮಹೋತ್ಸವ ಆಚರಿಸಿದ ಸಾವರ್ಕರ್, ಬ್ರಿಟಿಷರಿಂದ ಕಠಿಣ ‘ಕಾಲಾಪಾನಿ’ ಶಿಕ್ಷೆ ಅನುಭವಿಸಿದರೂ ತಮ್ಮ ಬರಹ ಹಾಗೂ ಕಾವ್ಯದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ತುಂಬಿದರು. ಅವರ ಜೀವನದಲ್ಲಿ ದೇಶಭಕ್ತಿ, ಧೈರ್ಯ, ತ್ಯಾಗ ಹಾಗೂ ದೃಢಸಂಕಲ್ಪ ಪ್ರಮುಖ ಸ್ಥಾನ ಪಡೆದಿದ್ದವು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ಇಡ್. ಪ್ರಶಿಕ್ಷಣಾರ್ಥಿಗಳು ವೀರ ಸಾವರ್ಕರ್ ಅವರ ಜೀವನದ ಪ್ರಮುಖ ಘಟನೆಗಳ ಕುರಿತು ಮಾತನಾಡಿದರು. ಸಾವರ್ಕರ್ ಅವರ ಜೀವನಾಧಾರಿತ ಚಲನಚಿತ್ರ ಪ್ರದರ್ಶಿಸಲಾಯಿತು. ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರೇಣುಕಾ ಚಿಮ್ಮನಕಟ್ಟಿ ಪ್ರಾರ್ಥಿಸಿದರು. ರುದ್ರೇಶ ಸ್ವಾಗತಿಸಿದರು. ಸಂತೋಷ ಐಹೊಳಿ ನಿರೂಪಿಸಿದರು. ಮೇಘಾ ಮುದ್ದಿ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ: ನಾಗರಾಜ ದೇಶಪಾಂಡೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಗುಣ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ನಾಗರಾಜ ದೇಶಪಾಂಡೆ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ) ಆವರಣದಲ್ಲಿ ಜಿಪಂ, ತಾಪಂ ಗದಗ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ ಸೋಮವಾರ ನಡೆದ 2026-27ನೇ ಸಾಲಿನ ಪ್ರೌಢಶಾಲೆಗಳ ಮುಳಗುಂದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕ್ರೀಡೆ ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸ್ಥೈರ್ಯವನ್ನು ಬೆಳೆಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ವಿದ್ಯಾರ್ಥಿಗಳು ಗೆಲುವಿನಿಂದ ಅಹಂಕಾರಪಡದೆ, ಸೋಲಿನಿಂದ ನಿರಾಶರಾಗದೆ ಮುಂದಿನ ಅವಕಾಶಕ್ಕಾಗಿ ಸಿದ್ಧರಾಗಬೇಕು ಎಂದರು.

ಬಸವರಾಜ ಸುಂಕಾಪೂರ ಮಾತನಾಡಿ, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ದೊಡ್ಡ ಸಾಧನೆ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಿ, ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದರು.

ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿಯೂ ಕ್ರೀಡಾ ಪ್ರತಿಭೆ ಸಾಕಷ್ಟಿದ್ದು, ಸೂಕ್ತ ತರಬೇತಿ ಹಾಗೂ ಅವಕಾಶ ದೊರೆತರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಲ್ಲರು. ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಹಾಗೂ ಪರಿಶ್ರಮದೊಂದಿಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಚ್. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮುಳಗುಂದ ಪಟ್ಟಣದ ಮುಖಂಡರು ಕ್ರೀಡೆಗಳಿಗೆ ಸಾಕಷ್ಟು ಸಹಾಯ-ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಹಿರಿಯರಾದ ಎಂ.ಡಿ. ಬಟ್ಟೂರ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಸಾಧಕರು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಾದೇವಪ್ಪ ಮಾನೇಗರ ಅಧ್ಯಕ್ಷತೆ ವಹಿಸಿದ್ದರು.

ಹಿರಿಯರಾದ ಅಶೋಕ ಸೊನಗೋಜಿ, ಶಿವಶಿಂಪರ, ಎಸ್.ಸಿ. ಅಮರಶೆಟ್ಟರ, ವಿಜಯ ನೀಲಗುಂದ, ಸಂಜಯ ನೀಲಗುಂದ, ಅಶೋಕ ಹುಣಸಿಮರದ, ಬಸವರಾಜ ಹಾರೋಗೇರಿ, ಮಹಾದೇವಪ್ಪ ಗಡಾದ, ಇಮಾಮಸಾಬ ಶೇಖ, ಮಹಾಂತಪ್ಪ ನೀಲಗುಂದ, ದೈಹಿಕ ಶಿಕ್ಷಕ ವಿ.ಟಿ. ಅಂಗಡಿ, ನೂರಹ್ಮದ ನದಾಫ್ ಸೇರಿದಂತೆ ಮುಳಗುಂದ ವಲಯದ ಪ್ರೌಢಶಾಲೆಗಳ ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗೆಲುವಿನಿಂದ ಅಹಂಕಾರ ಪಡದೆ, ಸೋಲಿನಿಂದ ನಿರಾಶರಾಗದೆ ಮುಂದಿನ ಅವಕಾಶಕ್ಕಾಗಿ ಸಿದ್ಧರಾಗಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ ಕ್ರೀಡೆಗೆ ಹೆಚ್ಚಿನ ಸಮಯ ನೀಡಬೇಕು.

— ಬಸವರಾಜ ಸುಂಕಾಪೂರ

ಗದಗದ ಜಾನಪದ ವೈಭವಕ್ಕೆ ಮೆರವಣಿಗೆಯ ಮೆರುಗು

0

ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನ ಸಾಂಸ್ಕೃತಿಕ ಲೋಕಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಪಾರಂಪರಿಕ ಕಲೆಗಳನ್ನು ತಲೆಮಾರಿನಿಂದ ತಲೆಮಾರಿಗೆ ಪರಿಚಯಿಸಿ, ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಕಲಾವಿದರ ಪಾತ್ರ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಹೇಳಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು ಹಾಗೂ ಎ.ಎಸ್.ಎಸ್. ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಪಂಚಂ… ಪಗಡಂ…’ ಜಾನಪದ ಆಟ-ನೃತ್ಯ ಸಂಭ್ರಮದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾನಪದ ಕಲೆಗಳು ನಮ್ಮ ನೆಲದ ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಜನರ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಇಂತಹ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.

ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳು ತಮ್ಮ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಿ ಗಮನ ಸೆಳೆದವು. ಕಲಘಟಗಿಯ ಕುಬೇರಗೌಡ ಮುರಳಿ ಮತ್ತು ತಂಡದ ಕರಡಿ ಮಜಲು, ಉತ್ತರ ಕನ್ನಡ ಜಿಲ್ಲೆಯ ಜುಲಿಯಾ ಫೇದ್ರು ಫರ್ನಾಂಡಿಸ್ ಮತ್ತು ತಂಡದ ಸಿದ್ಧಿ ಡಮಾಮಿ ನೃತ್ಯ, ಹಾವೇರಿಯ ಬಸವಣ್ಣಿಪ್ಪ ಅಟವಳಗಿ ಮತ್ತು ತಂಡದ ಪುರವಂತಿಕೆ, ರಾಯಚೂರು ಜಿಲ್ಲೆಯ ಮಸ್ಕಿ ಅಮರೇಶ ಮತ್ತು ತಂಡದ ಹಗಲು ವೇಷ, ಕೊಪ್ಪಳ ಜಿಲ್ಲೆಯ ನಾಗರಾಜ ಹಿರೇಮಠ ಮತ್ತು ತಂಡದ ನಂದಿಧ್ವಜ ಕುಣಿತ ಹಾಗೂ ಧಾರವಾಡ ಜಿಲ್ಲೆಯ ದ್ಯಾಮಣ್ಣ ಲಮಾಣಿ ಮತ್ತು ತಂಡದ ವೀರಗಾಸೆ ಪ್ರದರ್ಶನ ಮೆರವಣಿಗೆಗೆ ಮೆರುಗು ತಂದವು.

ಸ್ಥಳೀಯ ಕಲಾವಿದರಿಂದಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೆರವಣಿಗೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಹಿರಿಯ ಸಾಂಸ್ಕೃತಿಕ ಚಿಂತಕ ಡಾ. ಜಿ.ಬಿ. ಪಾಟೀಲ, ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ, ಸಾಹಿತಿಗಳಾದ ಡಾ. ರಾಜೇಂದ್ರ ಗಡಾದ, ಡಾ. ನಿಂಗೂ ಸೊಲಗಿ, ಕಲಾವಿದರಾದ ವಿಜಯ ಕಿರೇಸೂರ, ಸೋಮಶೇಖರ ಚಿಕ್ಕಮಠ, ಶಿವು ಭಜಂತ್ರಿ, ಗೌಡಪ್ಪ ಬೊಮ್ಮಪ್ಪನವರ, ಬಸವರಾಜ ಈರಣ್ಣವರ, ನಿಂಗಪ್ಪ ಗುಡ್ಡದ, ಯಲ್ಲಪ್ಪ ಡಕ್ಕಣ್ಣವರ, ಅಜಿತ ಬಸಾಪೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಜಾನಪದ ಕಲೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಜೀವಂತ ಪ್ರತಿಬಿಂಬ. ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುವಲ್ಲಿ ಕಲಾವಿದರ ಪಾತ್ರ ಅತ್ಯಂತ ಮಹತ್ವದ್ದು.

— ಪ್ರೊ. ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ

ಈದ್ ಮಿಲಾದ್‌ ಹಿನ್ನೆಲೆ: 110 ಮಂದಿಗೆ ಉಚಿತ ಕಣ್ಣು ತಪಾಸಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಈದ್ ಮಿಲಾದ್ ಅಂಗವಾಗಿ ಇಲ್ಲಿಯ ಮುಸ್ಲಿಂ ಜಮಾತ್, ಅಂಜುಮನ್-ಎ-ಇಸ್ಲಾಂ ಕಮಿಟಿ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ವತಿಯಿಂದ ಜಯಪ್ರಿಯಾ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

ಹಿರೇಮಸೂತಿ ಆವರಣದಲ್ಲಿ ನಡೆದ ಶಿಬಿರವನ್ನು ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರ್‌ಅಹ್ಮದ್ ಕಿರೀಟಗೇರಿ ಉದ್ಘಾಟಿಸಿದರು. ಹುಬ್ಬಳ್ಳಿಯ ಡಾ. ಚಂದ್ರು ಶ್ರೀಗಿರಿ ನೇತೃತ್ವದ ವೈದ್ಯರ ತಂಡ 110 ಮಂದಿಯ ಕಣ್ಣುಗಳನ್ನು ತಪಾಸಣೆ ನಡೆಸಿತು. ಈ ಪೈಕಿ 30 ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಅವರನ್ನು ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.

ಕಮಿಟಿ ಉಪಾಧ್ಯಕ್ಷ ದಾದಾಪೀರ ಕೊರ್ಲಹಳ್ಳಿ, ಸದಸ್ಯರಾದ ಅಲ್ಲಿಸಾಬ ನದಾಫ್, ಖಾಜಿಸಾಬ ಮುಲ್ಲಾ, ಮಹ್ಮದಸಾಬ ನದಾಫ್, ಮಹಮ್ಮದಸಾಬ ಹಂದ್ರಾಳ, ದಾವೂದ್ ಹಂದ್ರಾಳ, ಗಫರಸಾಬ ಮೂಲಿಮನಿ, ಜಲಾನಸಾಬ ಡೋಣಿ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಹೈದರಲಿ ನದಾಫ್, ಉಪಾಧ್ಯಕ್ಷ ರೀಯಾಜ್ ಮಸೂತಿ, ಕಾರ್ಯದರ್ಶಿ ಆಸ್ಪಾಕ್ ಹಮಸಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರವಾದಿ ಮೊಹಮ್ಮದ್ ಪೈಗಂಬರ್ ಜೀವನ ಮಾನವಕುಲಕ್ಕೆ ಆದರ್ಶ: ಮೌಲಾನಾ ಫಾರೂಖ್ ಸಾಹೇಬ್

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಜೀವನ ಮಾನವಕುಲಕ್ಕೆ ಆದರ್ಶವಾಗಿದೆ. ಅವರ ಸುನ್ನತ್‌ಗಳನ್ನು ಅನುಸರಿಸುವ ಜತೆಗೆ ಪವಿತ್ರ ಕುರಾನ್‌ನ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೌಲಾನಾ ಫಾರೂಖ್ ಸಾಹೇಬ್ ಹೇಳಿದರು.

ತಾಲೂಕಿನ ಕೋಟುಮಚಗಿ ಗ್ರಾಮದ ಹಜರತ್ ಜಿಂದಾಶಾವಲಿ ಶಾದಿಮಹಲ್‌ನಲ್ಲಿ ಅಂಜುಮನ್-ಏ-ಇಸ್ಲಾಂ ಕಮಿಟಿ ಹಾಗೂ ನೌಜವಾನ್ ಕಮಿಟಿ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.

ಇಮಾನ್ ಎಂದರೆ ಅಲ್ಲಾಹನ ಮೇಲೆ ದೃಢವಾದ ವಿಶ್ವಾಸವಿಡುವುದರ ಜತೆಗೆ ಪವಿತ್ರ ಗ್ರಂಥಗಳು, ಪ್ರವಾದಿಗಳು ಹಾಗೂ ಧಾರ್ಮಿಕ ಬೋಧನೆಗಳ ಮೇಲೆ ನಂಬಿಕೆ ಹೊಂದುವುದಾಗಿದೆ. ಇಮಾನ್ ಮತ್ತು ಕಲ್ಮಾದ ಮಹತ್ವವನ್ನು ಅರಿತು ಜೀವನದುದ್ದಕ್ಕೂ ಪಾಲಿಸಬೇಕು ಎಂದರು.

ಸತ್ಯ, ಪ್ರಾಮಾಣಿಕತೆ, ಕರುಣೆ, ಸಹನೆ ಹಾಗೂ ಅಮಾನತ್‌ದಾರಿತನಕ್ಕೆ ಪ್ರವಾದಿಯವರು ವಿಶೇಷ ಮಹತ್ವ ನೀಡಿದ್ದರು. ಅವರನ್ನು ‘ಅಲ್-ಅಮೀನ್’ ಎಂದು ಕರೆಯಲಾಗುತ್ತಿತ್ತು. ಅವರ ಆದರ್ಶಗಳನ್ನು ಕೇವಲ ಸ್ಮರಿಸುವುದಲ್ಲದೆ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಹಾಜಿ ಅಬ್ದುಲ್ ಖಾದರ್ ಸನ್ನುಭಾಯಿ ಮಾತನಾಡಿ, ಇಸ್ಲಾಂ ಶಾಂತಿ, ಸೌಹಾರ್ದ ಹಾಗೂ ಮಾನವೀಯತೆಯನ್ನು ಸಾರುತ್ತದೆ. ಧರ್ಮದ ಹೆಸರಿನಲ್ಲಿ ದ್ವೇಷ ಹಾಗೂ ಅಶಾಂತಿಗೆ ಅವಕಾಶ ನೀಡದೆ ಎಲ್ಲ ಧರ್ಮಗಳ ಜನರು ಪರಸ್ಪರ ಗೌರವದಿಂದ ಬದುಕಬೇಕು ಎಂದರು.

ಮೌಲಾನಾ ಅಬುಬಕ್ಕರ್ ಮಾತನಾಡಿ, ಇಮಾನ್ ಮಾನವನಿಗೆ ದೊರೆತ ಅಮೂಲ್ಯ ಸಂಪತ್ತು. ದೊರೆತ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸತ್ಕಾರ್ಯಗಳಲ್ಲಿ ತೊಡಗಬೇಕು. ನಮಾಜ್ ಸೇರಿದಂತೆ ಧಾರ್ಮಿಕ ಕರ್ತವ್ಯಗಳನ್ನು ಶ್ರದ್ಧೆಯಿಂದ ಪಾಲಿಸಬೇಕು ಎಂದು ಕರೆ ನೀಡಿದರು.

ನಿವೃತ್ತ ಶಿಕ್ಷಕರಾದ ಜೆ.ಎಚ್. ಮುಲ್ಲಾ, ಕೆ.ಎಫ್. ಮೀರಾನಾಯ್ಕ, ಜೆ.ಜೆ. ಹಿರೇಹಾಳ, ಕನ್ನಡಪ್ರಭದ ಹಿರಿಯ ಉಪಸಂಪಾದಕ ಅಜೀಜ್ ಅಹ್ಮದ್ ಬಳಗಾನೂರ ಹಾಗೂ ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ಜೀವನಸಾಬ ಸರ್ಕಾವಸ್ ಅವರನ್ನು ಸನ್ಮಾನಿಸಲಾಯಿತು.

ಮಕ್ಕಳಿಂದ ಕುರಾನ್ ಪಠಣ, ಭಾಷಣ, ಕವ್ವಾಲಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೌಲಾನಾ ಇಮಾಮಹುಸೇನ ಸಾಹೇಬ್, ಮೌಲಾನಾ ಆರೀಫಸಾಬ ಹಾಳಕೇರಿ, ನೌಜವಾನ್ ಕಮಿಟಿ ಸದಸ್ಯರಾದ ರಶೀದ್ ಅಹ್ಮದ್ ಹಾಳಕೇರಿ, ಜೀವನಸಾಬ ಸರಕಾವಸ್, ಮಹ್ಮದ್ ರಫೀಕ ಕೊಚಲಾಪುರ, ಜೀವನಸಾಬ ಅತ್ತಾರ, ಮುನ್ನಾ ಮುಳಗುಂದ, ಜೀವನಸಾಬ ಬುಕ್ಕಿಟಗಾರ, ಅಶ್ಫಾಕ್ ಮುಲ್ಲಾ, ಜೀವನಸಾಬ ಹಾಳಕೇರಿ, ನಭಿಸಾಬ್ ಮೀರನಾಯ್ಕ, ಶಾಮೀದ ಮೀರನಾಯ್ಕ, ದಾದೇಸಾಬ್ ಮುಜಾವರ್, ರಜಾಕ್ ತಹಶೀಲ್ದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಹ್ಮದಗೌಸ್ ನಿರೂಪಿಸಿದರು.

ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದರ್ಶಗಳು ಸತ್ಯ, ಕರುಣೆ, ಸಹನೆ ಹಾಗೂ ಮಾನವೀಯತೆಯ ಬದುಕಿಗೆ ದಾರಿದೀಪ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ.

— ಮೌಲಾನಾ ಫಾರೂಖ್ ಸಾಹೇಬ್