Home Blog Page 81

ಇಸ್ರೇಲ್-ಇರಾನ್ ಯುದ್ಧ ನಿಲ್ಲಿಸಲು ಭಾರತ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು: ಶ್ರೀಶೈಲ ಶ್ರೀ

ಚಿಕ್ಕೋಡಿ: ಇಸ್ರೇಲ್ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಭಾರತ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮನವಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರದ ವೀರಭದ್ರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಖರ್ ಉಪಸ್ಥಿತರಿದ್ದರು.

ಪ್ರಸ್ತುತ ಗಲ್ಫ್ ದೇಶಗಳಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆ. ಭಾರತವು ಪ್ರಾಚೀನ ಕಾಲದಿಂದಲೂ ವಿಶ್ವಶಾಂತಿಯನ್ನು ಪ್ರತಿಪಾದಿಸುತ್ತ ಬಂದಿರುವ ನಾಡಾಗಿದ್ದು, ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಬೇಕು. ಯುದ್ಧ ನಿಲ್ಲಿಸುವ ದಿಕ್ಕಿನಲ್ಲಿ ಭಾರತ ಮಧ್ಯಸ್ಥಿಕೆ ವಹಿಸಿದರೆ ದೇಶದ ಗೌರವ ಮತ್ತು ಘನತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ದೇಶದ ಆಂತರಿಕ ವಿಚಾರಗಳ ಕುರಿತು ಮಾತನಾಡಿದ ಶ್ರೀಗಳು, ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಅತ್ಯಗತ್ಯವಾಗಿದೆ. ಕಾನೂನು ಜಾರಿಗೆ ಉಪರಾಷ್ಟ್ರಪತಿಗಳು ಮುತುವರ್ಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಡ್ರಗ್ಸ್ ಪ್ರಕರಣ: ನೈಜೀರಿಯಾ ಪ್ರಜೆಗಳ ಬಿಡುಗಡೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಮಾದಕವಸ್ತು ಸಂಗ್ರಹ ಮತ್ತು ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನೈಜೀರಿಯಾ ಮೂಲದ ಇಬ್ಬರು ಆರೋಪಿಗಳ ಬಿಡುಗಡೆಗೆ ಹೈಕೋರ್ಟ್ ಆದೇಶ ನೀಡಿದ್ದು, ಅನಧಿಕೃತವಾಗಿ ಕಳೆದ ಒಂದು ದಶಕದಿಂದ ಭಾರತದಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಅವರನ್ನು ದೇಶದಿಂದ ಗಡಿಪಾರು ಮಾಡುವ ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಗೆ ಹಸ್ತಾಂತರಿಸಲು ನಿರ್ದೇಶಿಸಿದೆ.

ಕೋಗಿಲು ಲೇಔಟ್ ವಿಳಾಸ ಹೊಂದಿರುವ ನೈಜೀರಿಯಾ ಪ್ರಜೆಗಳಾದ ಇಮೆಕಾ ಜೇಮ್ಸ್ ಐವೊಬಾ ಹಾಗೂ ವುಡೆರಿಕ್ ಫಿಡೆಲಿಸ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ನಡೆಸಿ ಈ ಆದೇಶ ಹೊರಡಿಸಿದೆ.

ಅರ್ಜಿದಾರರಿಗೆ ನೀಡಲಾದ ಬಂಧನದ ಕಾರಣಗಳು ದೋಷಪೂರಿತವಾಗಿದ್ದು, ಬಂಧನದ ಕಾರಣಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಉಲ್ಲಂಘನೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಬಿಡುಗಡೆಯಾಗಲು ಅರ್ಹರಾಗಿದ್ದಾರೆ ಎಂದು ಹೇಳಿದೆ.

ಬಿಡುಗಡೆಯಾದ ತಕ್ಷಣವೇ ಅವರ ವಿರುದ್ಧದ ಮುಂದಿನ ಕಾನೂನು ಪ್ರಕ್ರಿಯೆ ಹಿಂಪಡೆಯುವುದು ಹಾಗೂ ಗಡಿಪಾರು ಮಾಡುವ ಸಂಬಂಧ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಪ್ರಕಾರ ಕ್ರಮ ಕೈಗೊಳ್ಳಲು FRROಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಇದಲ್ಲದೆ, ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ SOP ಪ್ರಕಾರ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸಬೇಕು. ಈ ಸಂಬಂಧ ನಾಲ್ಕು ತಿಂಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಭಾರತದ ಸಂವಿಧಾನದ ವಿಧಿ 22(1) ಪ್ರಕಾರ ಬಂಧಿತ ವ್ಯಕ್ತಿಗೆ ಬಂಧನದ ಕಾರಣಗಳನ್ನು ತಿಳಿಸುವುದು ಕಡ್ಡಾಯ ಸಾಂವಿಧಾನಿಕ ಹಕ್ಕು. ಇದು ಕೇವಲ ಔಪಚಾರಿಕ ಕ್ರಮವಲ್ಲ, ಮೂಲಭೂತ ರಕ್ಷಣೆಯಾಗಿದೆ. ವಿಧಿ 22 ವ್ಯಕ್ತಿ ಕೇಂದ್ರಿತವಾಗಿದ್ದು, ಅದು ಭಾರತದಲ್ಲಿ ಇರುವ ವಿದೇಶಿಗರಿಗೂ ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಕಡಿಮೆ ಬೆಲೆಗೆ ಚಿನ್ನದ ಆಮಿಷ: ಹೈದರಾಬಾದ್ ಉದ್ಯಮಿಯಿಂದ ₹20 ಲಕ್ಷ ದೋಚಿದ ಖತರ್ನಾಕ್ ಗ್ಯಾಂಗ್

ಚಿಕ್ಕಬಳ್ಳಾಪುರ/ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಆಮಿಷ ಒಡ್ಡಿ ಹೈದರಾಬಾದ್ ಮೂಲದ ಉದ್ಯಮಿಯನ್ನು ದೇವನಹಳ್ಳಿಗೆ ಕರೆಸಿಕೊಂಡು ₹20 ಲಕ್ಷ ಹಣ ದೋಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹೈದರಾಬಾದ್ ನಿವಾಸಿ ವಿಶ್ವಪ್ರಸಾದ್ ರೆಡ್ಡಿ ಅವರು ಕುಮಾರ್ ಎಂಬ ವ್ಯಕ್ತಿಯೊಂದಿಗೆ ಚಿನ್ನದ ವ್ಯವಹಾರ ಕುರಿತು ಸಂಪರ್ಕ ಹೊಂದಿದ್ದರು. ಕುಮಾರ್ ತನ್ನ ಬಳಿ ನಾಲ್ಕು ಕೆಜಿ ಚಿನ್ನದ ನಾಣ್ಯಗಳಿದ್ದು, ಕೇವಲ ₹20 ಲಕ್ಷಕ್ಕೆ ಒಂದು ಕೆಜಿ ಚಿನ್ನ ನೀಡುವುದಾಗಿ ಹೇಳಿ ಅವರನ್ನು ದೇವನಹಳ್ಳಿಗೆ ಬರಲು ಸೂಚಿಸಿದ್ದಾನೆ.

ಈ ಮಾತನ್ನು ನಂಬಿದ ವಿಶ್ವಪ್ರಸಾದ್ ರೆಡ್ಡಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಆಗಮಿಸಿ ಅಲ್ಲಿಂದ ಟ್ಯಾಕ್ಸಿ ಮೂಲಕ ವೆಂಕಟಗಿರಿ ಕೋಟೆ ಗ್ರಾಮದ ಸಮೀಪದ ಖಾಸಗಿ ಬಡಾವಣೆಗೆ ತೆರಳಿದ್ದರು.

ಅವರು ಸ್ಥಳಕ್ಕೆ ತಲುಪುತ್ತಿದ್ದಂತೆ ಆರು ಮಂದಿ ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿ ಇದ್ದ ₹20 ಲಕ್ಷ ನಗದು ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ವಿಜಯಪುರ ಪೊಲೀಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತನಿಖೆ ಆರಂಭಿಸಲಾಗಿದೆ.

ಕಾರನ್ನೇ ಬಾರ್ ಮಾಡಿಕೊಂಡವರಿಗೆ ಬೆಳಗಾವಿ ಪೊಲೀಸರ ಶಾಕ್: 1 ವಾರದಲ್ಲಿ 24 ಪ್ರಕರಣ, 36 ಮಂದಿ ವಿರುದ್ಧ ಕೇಸ್

0

ಬೆಳಗಾವಿ: ನಗರದಲ್ಲಿ ರಸ್ತೆ ಪಕ್ಕ ಕಾರು ನಿಲ್ಲಿಸಿ ಮದ್ಯ ಸೇವನೆ ಮಾಡಿ ಪಾರ್ಟಿ ಮಾಡುತ್ತಿದ್ದವರ ವಿರುದ್ಧ ಬೆಳಗಾವಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಳೆದ ಒಂದು ವಾರದಲ್ಲಿ 24 ಪ್ರಕರಣಗಳನ್ನು ದಾಖಲಿಸಲಾಗಿದೆ.

ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಕಾರುಗಳಲ್ಲಿ, ಜಮೀನು ಹಾಗೂ ಮೈದಾನಗಳಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 36 ಜನರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ.

ನಗರದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳು ಇದ್ದರೂ, ಕಾರುಗಳನ್ನು ನಿಲ್ಲಿಸಿ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಎಚ್ಚರಿಕೆ ನೀಡಿದ್ದಾರೆ.

ರಾತ್ರಿ ವೇಳೆ ರಸ್ತೆ ಅಕ್ಕಪಕ್ಕ ನಿಲುಗಡೆ ಆಗುವ ಕಾರುಗಳ ಮೇಲೆ ಪೊಲೀಸರು ತಪಾಸಣೆ ನಡೆಸುತ್ತಿದ್ದು, ಈ ಕ್ರಮದ ಮೂಲಕ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ತಪಾಸಣೆ ವೇಳೆ ಕಾರುಗಳಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದವರ ವಿರುದ್ಧವೇ ಈ ಪ್ರಕರಣಗಳು ದಾಖಲಾಗಿವೆ.

ಕೇಂದ್ರ ಸಚಿವ ವಿ. ಸೋಮಣ್ಣ ಸಹೋದರಿ ಮಹಾದೇವಮ್ಮ ನಿಧನ: ಇಂದು ಚಿಕ್ಕಮುದುವಾಡಿಯಲ್ಲಿ ಅಂತ್ಯಕ್ರಿಯೆ

0

ರಾಮನಗರ: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಸಹೋದರಿ ಮಹಾದೇವಮ್ಮ (96) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಮೂಲತಃ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಗ್ರಾಮದ ನಿವಾಸಿಯಾಗಿದ್ದ ಮಹಾದೇವಮ್ಮ ಅವರು ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ 1 ಗಂಟೆಗೆ ಚಿಕ್ಕಮುದುವಾಡಿ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಕುಟುಂಬಸ್ಥರು ಹಾಗೂ ಆತ್ಮೀಯರು ಭಾಗವಹಿಸಲಿದ್ದಾರೆ.

22 ಕೋಟಿ ಲೀಟರ್‌ ತೈಲ ಪೂರೈಕೆ: ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಆಪತ್ಭಾಂದವ

0

ಮಾಸ್ಕೋ: ಮಧ್ಯಪ್ರಾಚ್ಯದ ಯುದ್ಧದ ವಾತಾವರಣದಿಂದ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಇದರ ಪರಿಣಾಮ ಭಾರತೀಯ ತೈಲ ಪೂರೈಕೆ ವಲಯದಲ್ಲಿ ಆರ್ಥಿಕ ಅಪಾಯವನ್ನು ಉಂಟುಮಾಡಿದೆ.

ಈ ಪ್ರದೇಶದಲ್ಲಿ 27 ಭಾರತೀಯ ಹಡಗುಗಳು ಸಿಲುಕಿಕೊಂಡಿದ್ದು, 10,000 ಕೋಟಿಗೂ ಹೆಚ್ಚು ಮೌಲ್ಯದ ಸರಕು ಅಪಾಯದಲ್ಲಿದೆ. ಇದರಿಂದ ತೈಲ ಕೊರತೆಯ ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ತೈಲ ಪೂರೈಕೆಯಲ್ಲಿ ನೆರವಾಗಲು ಸಿದ್ಧವಾಗಿದೆ ಎಂಬ ವರದಿಗಳು ಬಂದಿದೆ.

ಸುಮಾರು 95 ಮಿಲಿಯನ್ ಬ್ಯಾರೆಲ್ ರಷ್ಯನ್ ಕಚ್ಚಾ ತೈಲ ಈಗಾಗಲೇ ಭಾರತೀಯ ಸಮುದ್ರ ಗಡಿಯ ಹಡಗುಗಳಲ್ಲಿ ಲಭ್ಯವಿದ್ದು, ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದೆ. ಮೊದಲ ಹಂತವಾಗಿ 14 ಲಕ್ಷ ಬ್ಯಾರೆಲ್ (22.25 ಕೋಟಿ ಲೀಟರ್) ಹೊತ್ತ 2 ತೈಲ ಟ್ಯಾಂಕರ್‌ಗಳು ಭಾರತ ಕಡೆ ಹೊರಟಿದ್ದು, ಈ ವಾರದಲ್ಲೇ ತಲುಪುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರದ ಕ್ರಮಗಳಿಂದ ಮಧ್ಯಪ್ರಾಚ್ಯದ ಪೂರೈಕೆ ವ್ಯತ್ಯಯವನ್ನು ಭಾಗಶಃ ಸಮತೋಲನಗೊಳಿಸಲು ಭಾರತಕ್ಕೆ ಅವಕಾಶ ಸಿಗಲಿದೆ. ಇದೇ ಸಂದರ್ಭ, ಇಂಡಿಯನ್ ನ್ಯಾಷನಲ್ ಶಿಪ್ ಓನರ್ಸ್ ಅಸೋಸಿಯೇಷನ್ ಪತ್ರ ಮೂಲಕ 27 ಹಡಗುಗಳು ಸಿಲುಕಿರುವುದು ಮತ್ತು 10,000 ಕೋಟಿ ಮೌಲ್ಯದ ಸರಕು ಅಪಾಯದಲ್ಲಿ ಇರುವ ಕುರಿತು ಸರ್ಕಾರಕ್ಕೆ ತಿಳಿಸಲಾಗಿದೆ.

ಒಳಮೀಸಲಾತಿ ಗೊಂದಲ: ಇಂದು ಸಚಿವ ಸಂಪುಟದಲ್ಲಿ ಚರ್ಚೆ – ಪರಮೇಶ್ವರ್!

ಬೆಂಗಳೂರು: ನೇಮಕಾತಿಯಲ್ಲಿ ಒಳಮೀಸಲಾತಿ ಹಂಚಿಕೆ ಕುರಿತು ಉಂಟಾಗಿರುವ ಗೊಂದಲದ ಬಗ್ಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೋಸ್ಟರ್ ವ್ಯವಸ್ಥೆ ರೂಪಿಸುವ ಸಂದರ್ಭದಲ್ಲಿ ಕೆಲವು ವರ್ಗಗಳಿಗೆ ಹೆಚ್ಚು ಮೀಸಲಾತಿ ಸಿಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದ್ದು, ಈ ಕುರಿತು ಸಂಪುಟದಲ್ಲಿ ಸಮಗ್ರ ಚರ್ಚೆ ನಡೆಯಲಿದೆ ಎಂದರು. ಪರಿಶಿಷ್ಟ ಜಾತಿ ಸಮುದಾಯಕ್ಕೆ 17 ಶೇಕಡಾ ಒಳಮೀಸಲಾತಿ ನೀಡುವ ತೀರ್ಮಾನ ಈಗಾಗಲೇ ಕೈಗೊಳ್ಳಲಾಗಿದ್ದು, ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ  ಶೇಕಡಾ 1% ಮೀಸಲಾತಿ ನೀಡುವ ಬೇಡಿಕೆಯೂ ಇದೆ ಎಂದು ಹೇಳಿದರು.

ಇನ್ನು 56 ಶೇಕಡಾ ಮೀಸಲಾತಿ ವಿಷಯಕ್ಕೆ ನ್ಯಾಯಾಲಯದಿಂದ ತಡೆ ಇರುವುದರಿಂದ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. 56%  ಶೇಕಡಾ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೂ ಗೊತ್ತಿದ್ದರೂ ರಾಜಕೀಯ ಉದ್ದೇಶದಿಂದ ಜನರನ್ನು ಪ್ರಚೋದಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನೊಂದೆಡೆ ಫೋನ್ ಟ್ಯಾಪ್ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ಯಾರ ಫೋನನ್ನೂ ಟ್ಯಾಪ್ ಮಾಡುತ್ತಿಲ್ಲ. ಈ ಬಗ್ಗೆ ದಾಖಲೆಗಳಿದ್ದರೆ ನೀಡಲಿ ಎಂದು ಹೆಚ್‌ಡಿಕೆ ಹಾಗೂ ಆರ್ ಅಶೋಕ್ ಅವರಿಗೆ ಸವಾಲ್ ಹಾಕಿದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ  ಅವರನ್ನು ಭೇಟಿ ಮಾಡಿ ಒಳಮೀಸಲಾತಿ ಗೊಂದಲ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆ ಇಂದು ಇಳಿಕೆ; ಇಲ್ಲಿದೆ ದರಪಟ್ಟಿ!

ಗೋಲ್ಡ್ ಪ್ರಿಯರಿಗೆ ನೆಮ್ಮದಿ ಸುದ್ದಿ ಸಿಕ್ಕಿದ್ದು, ಇಂದು ಚಿನ್ನದ ಬೆಲೆ ಇಳಿಕೆ ಕಂಡಿದೆ.

ನಿನ್ನೆ ಬುಧವಾರ ಗ್ರಾಮ್​ಗೆ 500 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ ಇವತ್ತು ಗುರುವಾರ 90 ರೂ ತಗ್ಗಿದೆ. 15,000 ರೂ ಮಟ್ಟಕ್ಕಿಂತ ಕೆಳಗೆ ಬಂದಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,49,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,63,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,49,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 5ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,353 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,990 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,265 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,353 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,990 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ.

ಡ್ರೋನ್ ಪ್ರಿಯರ ಗಮನಕ್ಕೆ! ಸಾಂಬ್ರಾ ಏರ್ ಪೋರ್ಟ್ ಸುತ್ತ 8 ಕಿಮೀ ಡ್ರೋನ್ ಹಾರಾಟ ನಿಷೇಧ

ಬೆಳಗಾವಿ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ‘ರೆಡ್ ಝೋನ್’ ಎಂದು ಘೋಷಿಸಲಾಗಿದೆ. ಈ ಕ್ರಮವನ್ನು DGCA ಮಾರ್ಗಸೂಚಿಯಂತೆ ಕೈಗೊಳ್ಳಲಾಗಿದೆ.

ವಿಮಾನ ನಿಲ್ದಾಣದ ಸುತ್ತಮುತ್ತ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್ ಹಾಗೂ ಅನ್‌ಮ್ಯಾನ್ಡ್ ಏರಿಯಲ್ ವಾಹನಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರೆಡ್ ಝೋನ್ ಹಾಗೂ ಯೆಲ್ಲೋ ಝೋನ್ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸುವುದು ಕಾನೂನುಬಾಹಿರ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಕುರಿತು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದ ಈ ಕ್ರಮ ಅತ್ಯಾವಶ್ಯಕವಾಗಿದ್ದು, ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಹಾಲಿನೊಂದಿಗೆ ತೆಗೆದುಕೊಳ್ಳಬೇಕಾ? ನೀರಿನೊಂದಿಗೆ ತೆಗೆದುಕೊಳ್ಳಬೇಕಾ? ವಿಟಮಿನ್ ಡಿ ಬಗ್ಗೆ ವೈದ್ಯರ ಸಲಹೆ!

0

ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಪ್ಲಿಮೆಂಟ್ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಬದಲಾಗುತ್ತಿರುವ ಜೀವನಶೈಲಿ, ಬಿಸಿಲಿಗೆ ಕಡಿಮೆ ಹೋಗುವುದು ಹಾಗೂ ದೀರ್ಘಕಾಲ ಮನೆ ಅಥವಾ ಕಚೇರಿಯೊಳಗೆ ಇರುವುದರಿಂದ ಈ ಕೊರತೆ ಉಂಟಾಗುತ್ತಿದೆ ಎನ್ನಲಾಗಿದೆ. ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುವ ವಿಟಮಿನ್ ಡಿ ಮೂಳೆ ಮತ್ತು ಹಲ್ಲುಗಳನ್ನು ಬಲವಾಗಿಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯಿಂದ ಮೂಳೆ ನೋವು, ಆಯಾಸ, ದೌರ್ಬಲ್ಯ, ಆಗಾಗ ಅನಾರೋಗ್ಯ ಹಾಗೂ ಮನಸ್ಥಿತಿಯಲ್ಲಿ ಬದಲಾವಣೆಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.

ವೈದ್ಯರ ಪ್ರಕಾರ, ವಿಟಮಿನ್ ಡಿ ಸಪ್ಲಿಮೆಂಟ್ ಅನ್ನು ಹಾಲಿನೊಂದಿಗೆ ತೆಗೆದುಕೊಳ್ಳುವುದರಿಂದ ಅದರಲ್ಲಿರುವ ಕೊಬ್ಬು ಮತ್ತು ಕ್ಯಾಲ್ಸಿಯಂ ಕಾರಣದಿಂದ ಹೀರಿಕೊಳ್ಳುವಿಕೆ ಉತ್ತಮವಾಗುತ್ತದೆ. ಆದರೆ ಹಾಲು ಕುಡಿಯಲು ಇಷ್ಟವಿಲ್ಲದವರು ಅಥವಾ ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ನೀರಿನೊಂದಿಗೆ ಕೂಡ ತೆಗೆದುಕೊಳ್ಳಬಹುದು. ಆದರೆ ಊಟದಲ್ಲಿ ಸ್ವಲ್ಪ ಕೊಬ್ಬಿನಾಂಶ ಇರುವ ಆಹಾರ ಸೇವಿಸುವುದು ಅಗತ್ಯವೆಂದು ವೈದ್ಯರು ಸಲಹೆ ನೀಡಿದ್ದಾರೆ.

ಸಾಮಾನ್ಯವಾಗಿ ಬೆಳಿಗ್ಗೆ ಅಥವಾ ಊಟದ ಸಮಯದಲ್ಲಿ ಸಪ್ಲಿಮೆಂಟ್ ಸೇವಿಸುವುದು ಉತ್ತಮವಾಗಿದ್ದು, ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಕೆಲವರಿಗೆ ಅಸ್ವಸ್ಥತೆ ಉಂಟಾಗಬಹುದು. ಜೊತೆಗೆ ದಿನಕ್ಕೆ 15ರಿಂದ 20 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಸಹ ಅಗತ್ಯವೆಂದು ತಜ್ಞರು ಹೇಳಿದ್ದಾರೆ. ಯಾವುದೇ ಪರೀಕ್ಷೆ ಮಾಡದೆ ದೀರ್ಘಕಾಲ ಸಪ್ಲಿಮೆಂಟ್ ಸೇವಿಸುವುದು ತಪ್ಪಾಗಿದ್ದು, ಅತಿಯಾಗಿ ಸೇವಿಸಿದರೆ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಮೂತ್ರಪಿಂಡ ಮತ್ತು ಹೃದಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

error: Content is protected !!